ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಚೈತ್ರರಥ ಪರ್ವ
ಅಧ್ಯಾಯ 165
ಸಾರ
ಬೇಟೆಯಾಡಿ ಬಳಲಿ ಬಂದಿದ್ದ ರಾಜಾ ವಿಶ್ವಾಮಿತ್ರ ಮತ್ತು ಅವನ ಸೇನೆಯನ್ನು ವಸಿಷ್ಠನು ತನ್ನ ಆಶ್ರಮದಲ್ಲಿದ್ದ ಸುರಧೇನು ನಂದಿನಿಯ ಸಹಾಯದಿಂದ ತೃಪ್ತಿಗೊಳಿಸಿದುದು (1-12). ನಂದಿನಿಯನ್ನು ಬಯಸಿದ ವಿಶ್ವಾಮಿತ್ರನಿಗೆ ವಸಿಷ್ಠನು ನಿರಾಕರಿಸಲು, ವಿಶ್ವಾಮಿತ್ರನು ಅವಳನ್ನು ಬಲಾತ್ಕಾರವಾಗಿ ಕೊಂಡೊಯ್ಯಲು ಪ್ರಯತ್ನಿಸಿದುದು (13-21). ವಸಿಷ್ಠನು ಕ್ಷಮಾಗುಣವನ್ನು ತನ್ನದಾಗಿಸಿಕೊಂಡು, ತನ್ನ ಅಸಹಾಯಕತೆಯನ್ನು ತೋರಿಸಲು ನಂದಿನಿಯು ತನ್ನಿಂದಲೇ ಸೇನೆಯನ್ನು ಸೃಷ್ಟಿಸಿ ವಿಶ್ವಾಮಿತ್ರನ ಸೇನೆಯನ್ನು ಧ್ವಂಸಗೊಳಿಸಿದುದು (22-40). ಕ್ಷತ್ರಿಯ ಬಲಕ್ಕಿಂತ ಬ್ರಹ್ಮಬಲವೇ ಮೇಲೆಂದು ತಿಳಿದು ವಿಶ್ವಾಮಿತ್ರನು ಘೋರ ತಪಸ್ಸನ್ನು ತಪಿಸಿ ಬ್ರಾಹ್ಮಣತ್ವವನ್ನು ಪಡೆದುದು (41-44).
01165001 ಅರ್ಜುನ ಉವಾಚ।
01165001a ಕಿಂನಿಮಿತ್ತಮಭೂದ್ವೈರಂ ವಿಶ್ವಾಮಿತ್ರವಸಿಷ್ಠಯೋಃ।
01165001c ವಸತೋರಾಶ್ರಮೇ ಪುಣ್ಯೇ ಶಂಸ ನಃ ಸರ್ವಮೇವ ತತ್।।
ಅರ್ಜುನನು ಹೇಳಿದನು: “ಪುಣ್ಯಾಶ್ರಮಗಳಲ್ಲಿ ವಾಸಿಸುವ ವಸಿಷ್ಠ ಮತ್ತು ವಿಶ್ವಾಮಿತ್ರರಲ್ಲಿ ಯಾವ ಕಾರಣಕ್ಕಾಗಿ ವಿರಸವುಂಟಾಯಿತು? ಸರ್ವವನ್ನೂ ಹೇಳು!”
01165002 ಗಂಧರ್ವ ಉವಾಚ।
01165002a ಇದಂ ವಾಸಿಷ್ಠಮಾಖ್ಯಾನಂ ಪುರಾಣಂ ಪರಿಚಕ್ಷತೇ।
01165002c ಪಾರ್ಥ ಸರ್ವೇಷು ಲೋಕೇಷು ಯಥಾವತ್ತನ್ನಿಬೋಧ ಮೇ।।
ಗಂಧರ್ವನು ಹೇಳಿದನು: “ಪಾರ್ಥ! ವಸಿಷ್ಠನ ಈ ಆಖ್ಯಾನವು ಮೂರೂ ಲೋಕಗಳ ಪುರಾಣಗಳಲ್ಲಿ ಹೇಳಲ್ಪಟ್ಟಿದೆ. ಅದನ್ನು ಯಥಾವತ್ತಾಗಿ ನಾನು ಹೇಳುತ್ತೇನೆ. ಕೇಳು.
01165003a ಕನ್ಯಕುಬ್ಜೇ ಮಹಾನಾಸೀತ್ಪಾರ್ಥಿವೋ ಭರತರ್ಷಭ।
01165003c ಗಾಧೀತಿ ವಿಶ್ರುತೋ ಲೋಕೇ ಸತ್ಯಧರ್ಮಪರಾಯಣಃ।।
ಭರತರ್ಷಭ! ಕನ್ಯಕುಬ್ಜದಲ್ಲಿ ಮಹಾ ಪಾರ್ಥಿವನಿರುತ್ತಿದ್ದನು. ಸತ್ಯಧರ್ಮಪರಾಯಣನಾದ ಅವನು ಲೋಕಗಳಲ್ಲಿ ಗಾಧೀ ಎಂದು ವಿಶ್ರುತನಾಗಿದ್ದನು.
01165004a ತಸ್ಯ ಧರ್ಮಾತ್ಮನಃ ಪುತ್ರಃ ಸಮೃದ್ಧಬಲವಾಹನಃ।
01165004c ವಿಶ್ವಾಮಿತ್ರ ಇತಿ ಖ್ಯಾತೋ ಬಭೂವ ರಿಪುಮರ್ದನಃ।।
ಈ ಧರ್ಮಾತ್ಮನಿಗೆ ಸಮೃದ್ಧಬಲವಾಹನ ರಿಪುಮರ್ದನ ವಿಶ್ವಾಮಿತ್ರ ಎಂಬ ಖ್ಯಾತ ಮಗನೊಬ್ಬನಿದ್ದನು.
01165005a ಸ ಚಚಾರ ಸಹಾಮಾತ್ಯೋ ಮೃಗಯಾಂ ಗಹನೇ ವನೇ।
01165005c ಮೃಗಾನ್ವಿಧ್ಯನ್ವರಾಹಾಂಶ್ಚ ರಮ್ಯೇಷು ಮರುಧನ್ವಸು।।
ಅವನು ಅಮಾತ್ಯರೊಂದಿಗೆ ಬೇಟೆಯಾಡುತ್ತಾ ರಮ್ಯ ಮರುಭೂಮಿ ಮತ್ತು ಹುಲ್ಲುಗಾವಲುಗಳಲ್ಲಿ ಜಿಂಕೆ ವರಾಹಗಳನ್ನು ಕೊಲ್ಲುತ್ತಾ ಗಹನ ವನಕ್ಕೆ ಹೋದನು.
01165006a ವ್ಯಾಯಾಮಕರ್ಶಿತಃ ಸೋಽಥ ಮೃಗಲಿಪ್ಸುಃ ಪಿಪಾಸಿತಃ।
01165006c ಆಜಗಾಮ ನರಶ್ರೇಷ್ಠ ವಸಿಷ್ಠಸ್ಯಾಶ್ರಮಂ ಪ್ರತಿ।।
ಒಮ್ಮೆ ಜಿಂಕೆಯೊಂದನ್ನು ಅರಸುತ್ತಾ ಬರುತ್ತಿರುವಾಗ ಬಾಯಾರಿಕೆಯಿಂದ ಬಳಲಿದ ಆ ನರಶ್ರೇಷ್ಠನು ವಸಿಷ್ಠನ ಆಶ್ರಮದ ಬಳಿ ಬಂದನು.
01165007a ತಮಾಗತಮಭಿಪ್ರೇಕ್ಷ್ಯ ವಸಿಷ್ಠಃ ಶ್ರೇಷ್ಠಭಾಗೃಷಿಃ।
01165007c ವಿಶ್ವಾಮಿತ್ರಂ ನರಶ್ರೇಷ್ಠಂ ಪ್ರತಿಜಗ್ರಾಹ ಪೂಜಯಾ।।
ಅವನ ಆಗಮನವನ್ನು ಕಂಡ ಶ್ರೇಷ್ಠ ಮಹಾಋಷಿ ವಸಿಷ್ಠನು ನರಶ್ರೇಷ್ಠ ವಿಶ್ವಾಮಿತ್ರನನ್ನು ಆದರದಿಂದ ಸ್ವಾಗತಿಸಿದನು.
01165008a ಪಾದ್ಯಾರ್ಘ್ಯಾಚಮನೀಯೇನ ಸ್ವಾಗತೇನ ಚ ಭಾರತ।
01165008c ತಥೈವ ಪ್ರತಿಜಗ್ರಾಹ ವನ್ಯೇನ ಹವಿಷಾ ತಥಾ।।
ಭಾರತ! ಅವನನ್ನು ಪಾದ್ಯಾರ್ಘ್ಯ, ಆಚಮನೀಯಗಳಿಂದ ಸ್ವಾಗತಿಸಿ, ವನಗಳಲ್ಲಿ ದೊರೆಯುವ ಸಂಗ್ರಹಗಳನ್ನು ಅರ್ಪಿಸಿದನು.
01165009a ತಸ್ಯಾಥ ಕಾಮಧುಗ್ಧೇನುರ್ವಸಿಷ್ಠಸ್ಯ ಮಹಾತ್ಮನಃ।
01165009c ಉಕ್ತಾ ಕಾಮಾನ್ಪ್ರಯಚ್ಛೇತಿ ಸಾ ಕಾಮಾನ್ದುದುಹೇ ತತಃ।।
ಮಹಾತ್ಮ ವಸಿಷ್ಠನಲ್ಲಿ ಕಾಮಧುಗ್ಧೇನುವೊಂದಿತ್ತು: ಅದು ಅವನು ಇಷ್ಟಪಟ್ಟು ಕೊಡಲು ಹೇಳಿದ ಯಾವುದನ್ನೂ ಕೊಡುತ್ತಿತ್ತು.
01165010a ಗ್ರಾಮ್ಯಾರಣ್ಯಾ ಓಷಧೀಶ್ಚ ದುದುಹೇ ಪಯ ಏವ ಚ।
01165010c ಷಡ್ರಸಂ ಚಾಮೃತರಸಂ ರಸಾಯನಮನುತ್ತಮಂ।।
01165011a ಭೋಜನೀಯಾನಿ ಪೇಯಾನಿ ಭಕ್ಷ್ಯಾಣಿ ವಿವಿಧಾನಿ ಚ।
01165011c ಲೇಹ್ಯಾನ್ಯಮೃತಕಲ್ಪಾನಿ ಚೋಷ್ಯಾಣಿ ಚ ತಥಾರ್ಜುನ।।
ಅರ್ಜುನ! ಗ್ರಾಮ ಮತ್ತು ಅರಣ್ಯಗಳ ಔಷಧಿಗಳು, ಹಾಲು, ಷಡ್ರಸ, ಅಮೃತರಸ, ಉತ್ತಮ ರಸಾಯನ, ಭೋಜನ, ಪಾನೀಯಗಳು, ವಿವಿಧ ಭಕ್ಷ್ಯಗಳು, ಲೇಹ, ಮತ್ತು ಇತರ ಅಮೃತಕಲ್ಪಗಳನ್ನು, ರುಚಿಯಾಗಿ ಅವಳು ನೀಡುತ್ತಿದ್ದಳು.
01165012a ತೈಃ ಕಾಮೈಃ ಸರ್ವಸಂಪೂರ್ಣೈಃ ಪೂಜಿತಃ ಸ ಮಹೀಪತಿಃ।
01165012c ಸಾಮಾತ್ಯಃ ಸಬಲಶ್ಚೈವ ತುತೋಷ ಸ ಭೃಶಂ ನೃಪಃ।।
ಮಹೀಪತಿಯು ಬಯಸಿದ ಎಲ್ಲವುಗಳನ್ನು ಸಂಪೂರ್ಣವಾಗಿ ಪಡೆದನು. ಸೇನೆ ಮತ್ತು ಅಮಾತ್ಯರ ಸಹಿತ ನೃಪನು ಅತ್ಯಂತ ತೃಪ್ತಿಹೊಂದಿದನು.
01165013a ಷಡಾಯತಾಂ ಸುಪಾರ್ಶ್ವೋರುಂ ತ್ರಿಪೃಥುಂ ಪಂಚ ಸಂವೃತಾಂ।
01165013c ಮಂಡೂಕನೇತ್ರಾಂ ಸ್ವಾಕಾರಾಂ ಪೀನೋಧಸಮನಿಂದಿತಾಂ।।
01165014a ಸುವಾಲಧಿಂ ಶಂಕುಕರ್ಣಾಂ ಚಾರುಶೃಂಗಾಂ ಮನೋರಮಾಂ।
01165014c ಪುಷ್ಟಾಯತಶಿರೋಗ್ರೀವಾಂ ವಿಸ್ಮಿತಃ ಸೋಽಭಿವೀಕ್ಷ್ಯ ತಾಂ।।
ಆರು ಅಳತೆ ಉದ್ದ, ಮೂರು ಅಳತೆ ಅಗಲ, ಮತ್ತು ಐದು ಅಳತೆ ಸುತ್ತಳತೆಯನ್ನು ಹೊಂದಿದ್ದ, ಸುಂದರ ಕಾಲು-ತೊಡೆಗಳ, ಕಪ್ಪೆಯಂಥ ಕಣ್ಣುಗಳ, ಒಳ್ಳೆಯ ನಡುಗೆಯ, ತುಂಬಿದ ಮೊಲೆಗಳ, ಸುಂದರ ಬಾಲವುಳ್ಳ, ಶಂಖದಂತಹ ಕಿವಿಗಳನ್ನು ಹೊಂದಿದ್ದ, ಸುಂದರ ಕೊಂಬಿನ, ಉದ್ದ ಮತ್ತು ದಪ್ಪನಾಗಿರುವ ತಲೆ ಮತ್ತು ಕುತ್ತಿಗೆಯನ್ನು ಹೊಂದಿದ್ದ ಆ ಮನೋರಮೆ ಹಸುವನ್ನು ವಿಶ್ವಾಮಿತ್ರನು ವಿಸ್ಮಿತನಾಗಿ ನೋಡಿದನು.
01165015a ಅಭಿನಂದತಿ ತಾಂ ನಂದೀಂ ವಸಿಷ್ಠಸ್ಯ ಪಯಸ್ವಿನೀಂ।
01165015c ಅಬ್ರವೀಚ್ಚ ಭೃಶಂ ತುಷ್ಟೋ ವಿಶ್ವಾಮಿತ್ರೋ ಮುನಿಂ ತದಾ।।
01165016a ಅರ್ಬುದೇನ ಗವಾಂ ಬ್ರಹ್ಮನ್ಮಮ ರಾಜ್ಯೇನ ವಾ ಪುನಃ।
01165016c ನಂದಿನೀಂ ಸಂಪ್ರಯಚ್ಛಸ್ವ ಭುಂಕ್ಷ್ವ ರಾಜ್ಯಂ ಮಹಾಮುನೇ।।
ವಸಿಷ್ಠನ ಆ ಪಯಸ್ವಿನೀ ನಂದಿನಿಯನ್ನು ಅಭಿನಂದಿಸಿ ಅತೀವ ತೃಪ್ತನಾದ ವಿಶ್ವಾಮಿತ್ರನು ಮುನಿಯನ್ನುದ್ದೇಶಿಸಿ ಹೇಳಿದನು: “ಬ್ರಹ್ಮನ್! ಮಹಾಮುನಿ! ಲೆಕ್ಕವಿಲ್ಲದಷ್ಟು ಗೋವುಗಳು ಅಥವಾ ನನ್ನ ರಾಜ್ಯಕ್ಕೆ ಬದಲಾಗಿ ಈ ನಂದಿನಿಯನ್ನು ನನಗಿತ್ತು ನನ್ನ ರಾಜ್ಯವನ್ನು ಆಳು.”
01165017 ವಸಿಷ್ಠ ಉವಾಚ।
01165017a ದೇವತಾತಿಥಿಪಿತ್ರರ್ಥಮಾಜ್ಯಾರ್ಥಂ ಚ ಪಯಸ್ವಿನೀ।
01165017c ಅದೇಯಾ ನಂದಿನೀಯಂ ಮೇ ರಾಜ್ಯೇನಾಪಿ ತವಾನಘ।।
ವಸಿಷ್ಠನು ಹೇಳಿದನು: “ದೇವತೆ, ಅತಿಥಿ, ಮತ್ತು ಪಿತೃಗಳಿಗೆ ಊಟಕ್ಕೆ ನೀಡಲು ಮತ್ತು ತುಪ್ಪಕ್ಕಾಗಿ ಈ ಯಶಸ್ವಿನಿ ನಂದಿನಿಯು ನನ್ನಲ್ಲಿದ್ದಾಳೆ. ಅನಘ! ರಾಜ್ಯವನ್ನಿತ್ತರೂ ಇದನ್ನು ನಿನಗೆ ಕೊಡಲಾರೆ.”
01165018 ವಿಶ್ವಾಮಿತ್ರ ಉವಾಚ।
01165018a ಕ್ಷತ್ರಿಯೋಽಹಂ ಭವಾನ್ವಿಪ್ರಸ್ತಪಃಸ್ವಾಧ್ಯಾಯಸಾಧನಃ।
01165018c ಬ್ರಾಹ್ಮಣೇಷು ಕುತೋ ವೀರ್ಯಂ ಪ್ರಶಾಂತೇಷು ಧೃತಾತ್ಮಸು।।
ವಿಶ್ವಾಮಿತ್ರನು ಹೇಳಿದನು: “ನಾನು ಕ್ಷತ್ರಿಯ ಮತ್ತು ನೀನು ತಪಸ್ಸು, ಅಧ್ಯಾಯ, ಸಾಧನೆಗಳಲ್ಲಿರುವ ವಿಪ್ರ. ಅತ್ಮವನ್ನು ಗೆದ್ದ ಪ್ರಶಾಂತ ಬ್ರಾಹ್ಮಣರಲ್ಲಿ ಇಂಥಹ ಪ್ರತಿಭಟನೆ ಎಲ್ಲಿಂದ ಬರುತ್ತದೆ?
01165019a ಅರ್ಬುದೇನ ಗವಾಂ ಯಸ್ತ್ವಂ ನ ದದಾಸಿ ಮಮೇಪ್ಸಿತಾಂ।
01165019c ಸ್ವಧರ್ಮಂ ನ ಪ್ರಹಾಸ್ಯಾಮಿ ನಯಿಷ್ಯೇ ತೇ ಬಲೇನ ಗಾಂ।।
ನನಗೆ ಬೇಕಾದ ಗೋವನ್ನು ಅರ್ಬುದ ಗೋವುಗಳಿಗೂ ನೀನು ಕೊಡದೇ ಇದ್ದರೆ ಸ್ವಧರ್ಮವನ್ನು ನಾನು ಬಿಡುವುದಿಲ್ಲ. ಗೋವನ್ನು ನಾನು ಬಲವಂತವಾಗಿ ನಿನ್ನಿಂದ ಹಿಡಿದೊಯ್ಯುತ್ತೇನೆ.”
01165020 ವಸಿಷ್ಠ ಉವಾಚ।
01165020a ಬಲಸ್ಥಶ್ಚಾಸಿ ರಾಜಾ ಚ ಬಾಹುವೀರ್ಯಶ್ಚ ಕ್ಷತ್ರಿಯಃ।
01165020c ಯಥೇಚ್ಛಸಿ ತಥಾ ಕ್ಷಿಪ್ರಂ ಕುರು ತ್ವಂ ಮಾ ವಿಚಾರಯ।।
ವಸಿಷ್ಠನು ಹೇಳಿದನು: “ರಾಜ! ನಿನ್ನಲ್ಲಿ ಸೇನೆಯಿದೆ ಮತ್ತು ಕ್ಷತ್ರಿಯನ ಬಾಹುವೀರ್ಯವಿದೆ. ತಡಮಾಡದೇ, ಏನನ್ನೂ ವಿಚಾರಮಾಡದೇ ನಿನಗಿಷ್ಟಬಂದಂತೆ ಮಾಡು.””
01165021 ಗಂಧರ್ವ ಉವಾಚ।
01165021a ಏವಮುಕ್ತಸ್ತದಾ ಪಾರ್ಥ ವಿಶ್ವಾಮಿತ್ರೋ ಬಲಾದಿವ।
01165021c ಹಂಸಚಂದ್ರಪ್ರತೀಕಾಶಾಂ ನಂದಿನೀಂ ತಾಂ ಜಹಾರ ಗಾಂ।।
ಗಂಧರ್ವನು ಹೇಳಿದನು: “ಪಾರ್ಥ! ಈ ಮಾತುಗಳನ್ನು ಕೇಳಿದ ವಿಶ್ವಾಮಿತ್ರನು ಬಲವಂತವಾಗಿ ಹಂಸ ಅಥವ ಚಂದ್ರನಂತಿರುವ ನಂದಿನಿಯನ್ನು ಎಳೆದುಕೊಂಡು ಹೊರಟನು.
01165022a ಕಶಾದಂಡಪ್ರತಿಹತಾ ಕಾಲ್ಯಮಾನಾ ತತಸ್ತತಃ।
01165022c ಹಂಭಾಯಮಾನಾ ಕಲ್ಯಾಣೀ ವಸಿಷ್ಠಸ್ಯಾಥ ನಂದಿನೀ।।
ಕಾಶ ಮತ್ತು ದಂಡಗಳಿಂದ ಹೊಡೆತ ತಿನ್ನುತ್ತಾ ಎಳೆದುಕೊಂಡು ಕರೆದೊಯ್ಯಲ್ಪಟ್ಟ ವಸಿಷ್ಠನ ಕಲ್ಯಾಣಿ ನಂದಿನಿಯು ಕೂಗತೊಡಗಿದಳು.
01165023a ಆಗಮ್ಯಾಭಿಮುಖೀ ಪಾರ್ಥ ತಸ್ಥೌ ಭಗವದುನ್ಮುಖೀ।
01165023c ಭೃಶಂ ಚ ತಾಡ್ಯಮಾನಾಪಿ ನ ಜಗಾಮಾಶ್ರಮಾತ್ತತಃ।।
ಪಾರ್ಥ! ಅವಳು ಹಿಂದಿರುಗಿ ಬಂದು ಭಗವಾನ್ ಋಷಿಯ ಎದುರಿಗೆ ನಿಂತುಕೊಂಡಳು ಮತ್ತು ಎಷ್ಟೇ ಜೋರಾಗಿ ಹೊಡೆದರೂ ಆಶ್ರಮದಿಂದ ಹೊರಹೋಗಲಿಲ್ಲ.
01165024 ವಸಿಷ್ಠ ಉವಾಚ।
01165024a ಶೃಣೋಮಿ ತೇ ರವಂ ಭದ್ರೇ ವಿನದಂತ್ಯಾಃ ಪುನಃ ಪುನಃ।
01165024c ಬಲಾದ್ಧ್ರಿಯಸಿ ಮೇ ನಂದಿ ಕ್ಷಮಾವಾನ್ಬ್ರಾಹ್ಮಣೋ ಹ್ಯಹಂ।।
ವಸಿಷ್ಠನು ಹೇಳಿದನು: “ಭದ್ರೇ! ನೋವಿನಿಂದ ನರಳುತ್ತಿರುವ ನಿನ್ನ ಕೂಗನ್ನು ಪುನಃ ಪುನಃ ಕೇಳುತ್ತಿದ್ದೇನೆ. ನಾನೋರ್ವ ಕ್ಷಮಾವಂತ ಬ್ರಾಹ್ಮಣನಾದುದರಿಂದ ನಿನ್ನನ್ನು ನನ್ನಿಂದ ಬಲಾತ್ಕಾರವಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ.””
01165025 ಗಂಧರ್ವ ಉವಾಚ।
01165025a ಸಾ ತು ತೇಷಾಂ ಬಲಾನ್ನಂದೀ ಬಲಾನಾಂ ಭರತರ್ಷಭ।
01165025c ವಿಶ್ವಾಮಿತ್ರಭಯೋದ್ವಿಗ್ನಾ ವಸಿಷ್ಠಂ ಸಮುಪಾಗಮತ್।।
ಗಂಧರ್ವನು ಹೇಳಿದನು: “ಭರತರ್ಷಭ! ಆ ಸೈನಿಕರ ಬಲ ಮತ್ತು ವಿಶ್ವಾಮಿತ್ರರಿಂದ ಭಯೋದ್ವಿಗ್ನಳಾಗ ಆ ನಂದಿನಿಯು ವಸಿಷ್ಠನ ಇನ್ನೂ ಹತ್ತಿರ ಬಂದಳು.
01165026 ಗೌರುವಾಚ।
01165026a ಪಾಷಾಣದಂಡಾಭಿಹತಾಂ ಕ್ರಂದಂತೀಂ ಮಾಮನಾಥವತ್।
01165026c ವಿಶ್ವಾಮಿತ್ರಬಲೈರ್ಘೋರೈರ್ಭಗವನ್ಕಿಮುಪೇಕ್ಷಸೇ।।
ಗೋವು ಹೇಳಿತು: “ಭಗವನ್! ವಿಶ್ವಾಮಿತ್ರನ ಬಲದಿಂದ ಘೋರವಾಗಿ ಪಾಷಾಣ ದಂಡಗಳಿಂದ ಹೊಡೆತತಿಂದು ಅನಾಥಳಂತೆ ಕೂಗುತ್ತಿರುವ ನನ್ನನ್ನು ಏಕೆ ಉಪೇಕ್ಷಿಸುತ್ತಿರುವೆ?””
01165027 ಗಂಧರ್ವ ಉವಾಚ।
01165027a ಏವಂ ತಸ್ಯಾಂ ತದಾ ಪರ್ಥ ಧರ್ಷಿತಾಯಾಂ ಮಹಾಮುನಿಃ।
01165027c ನ ಚುಕ್ಷುಭೇ ನ ಧೈರ್ಯಾಚ್ಚ ವಿಚಚಾಲ ಧೃತವ್ರತಃ।।
ಗಂಧರ್ವನು ಹೇಳಿದನು: “ಪಾರ್ಥ! ಈ ರೀತಿ ಗೋವು ಆಕ್ರಮಣಕ್ಕೊಳಗಾದಾಗ ಆ ಮಹಾಮುನಿ ಧೃತವ್ರತನು ಯಾವುದೇ ರೀತಿಯ ಆತಂಕವನ್ನಾಗಲೀ ಕೋಪವನ್ನಾಗಲೀ ಹೊಂದದೇ ವಿಚಲಿತನಾಗಲಿಲ್ಲ.
01165028 ವಸಿಷ್ಠ ಉವಾಚ।
01165028a ಕ್ಷತ್ರಿಯಾಣಾಂ ಬಲಂ ತೇಜೋ ಬ್ರಾಹ್ಮಣಾನಾಂ ಕ್ಷಮಾ ಬಲಂ।
01165028c ಕ್ಷಮಾ ಮಾಂ ಭಜತೇ ತಸ್ಮಾದ್ಗಮ್ಯತಾಂ ಯದಿ ರೋಚತೇ।।
ವಸಿಷ್ಠನು ಹೇಳಿದನು: “ಕ್ಷತ್ರಿಯರಿಗೆ ತೇಜಸ್ಸು ಬಲ ಮತ್ತು ಬ್ರಾಹ್ಮಣರಿಗೆ ಕ್ಷಮೆಯೇ ಬಲ. ಕ್ಷಮೆಯೇ ನನ್ನನ್ನು ಆವರಿಸಿದೆ. ಆದುದರಿಂದ ನಿನಗಿಷ್ಟವಾದರೆ ನೀನು ಹೋಗಬಹುದು.”
01165029 ಗೌರುವಾಚ।
01165029a ಕಿಂ ನು ತ್ಯಕ್ತಾಸ್ಮಿ ಭಗವನ್ಯದೇವಂ ಮಾಂ ಪ್ರಭಾಷಸೇ।
01165029c ಅತ್ಯಕ್ತಾಹಂ ತ್ವಯಾ ಬ್ರಹ್ಮನ್ನ ಶಕ್ಯಾ ನಯಿತುಂ ಬಲಾತ್।।
ಗೋವು ಹೇಳಿತು: “ಭಗವನ್! ನೀನು ಈ ರೀತಿ ಮಾತನಾಡುತ್ತಿದ್ದೀಯಲ್ಲ! ನನ್ನನ್ನು ತ್ಯಜಿಸಿಬಿಟ್ಟಿದ್ದೀಯಾ ಹೇಗೆ? ಬ್ರಹ್ಮನ್! ನೀನು ನನ್ನನ್ನು ತೊರೆದಿಲ್ಲವೆಂದಾದರೆ ಅವರು ನನ್ನನ್ನು ಬಲಾತ್ಕಾರವಾಗಿ ಕೊಂಡೊಯ್ಯಲು ಶಕ್ಯರಾಗುವುದಿಲ್ಲ.”
01165030 ವಸಿಷ್ಠ ಉವಾಚ।
01165030a ನ ತ್ವಾಂ ತ್ಯಜಾಮಿ ಕಲ್ಯಾಣಿ ಸ್ಥೀಯತಾಂ ಯದಿ ಶಕ್ಯತೇ।
01165030c ದೃಢೇನ ದಾಮ್ನಾ ಬದ್ಧ್ವೈಷ ವತ್ಸಸ್ತೇ ಹ್ರಿಯತೇ ಬಲಾತ್।।
ವಸಿಷ್ಠನು ಹೇಳಿದನು: “ನಾನು ನಿನ್ನನ್ನು ತ್ಯಜಿಸಿಲ್ಲ ಕಲ್ಯಾಣಿ! ಶಕ್ಯವಾದರೆ ಇಲ್ಲಿಯೇ ಇರು. ಅವರು ನಿನ್ನ ಕರುವನ್ನು ಗಟ್ಟಿಯಾಗಿ ಕಟ್ಟಿಹಾಕಿ ಬಲಾತ್ಕಾರವಾಗಿ ಕೊಂಡೊಯ್ಯುತ್ತಿದ್ದಾರೆ.””
01165031 ಗಂಧರ್ವ ಉವಾಚ।
01165031a ಸ್ಥೀಯತಾಮಿತಿ ತಚ್ಛೃತ್ವಾ ವಸಿಷ್ಠಸ್ಯ ಪಯಸ್ವಿನೀ।
01165031c ಊರ್ಧ್ವಾಂಚಿತಶಿರೋಗ್ರೀವಾ ಪ್ರಬಭೌ ಘೋರದರ್ಶನಾ।।
ಗಂಧರ್ವನು ಹೇಳಿದನು: “ನಿಲ್ಲು! ಎಂಬ ವಶಿಷ್ಠನ ಮಾತನ್ನು ಕೇಳಿದ ಆ ಯಶಸ್ವಿನಿಯು ತನ್ನ ತಲೆ ಮತ್ತು ಕುತ್ತಿಗೆಯನ್ನು ಮೇಲೆತ್ತಲು ಅವಳು ಘೋರರೂಪಿಣಿಯಾಗಿ ಕಂಡಳು.
01165032a ಕ್ರೋಧರಕ್ತೇಕ್ಷಣಾ ಸಾ ಗೌರ್ಹಂಭಾರವಘನಸ್ವನಾ।
01165032c ವಿಶ್ವಾಮಿತ್ರಸ್ಯ ತತ್ಸೈನ್ಯಂ ವ್ಯದ್ರಾವಯತ ಸರ್ವಶಃ।।
ಕ್ರೋಧದಿಂದ ಅವಳ ಕಣ್ಣುಗಳು ಕೆಂಪಾದವು. ಗುಡುಗಿನಂತೆ “ಅಂಭಾ!” ಎಂದು ಕೂಗುತ್ತಾ ಅವಳು ವಿಶ್ವಾಮಿತ್ರನ ಸೇನೆಯನ್ನು ಎಲ್ಲಕಡೆ ಓಡಿಸಿದಳು.
01165033a ಕಶಾಗ್ರದಂಡಾಭಿಹತಾ ಕಾಲ್ಯಮಾನಾ ತತಸ್ತತಃ।
01165033c ಕ್ರೋಧದೀಪ್ತೇಕ್ಷಣಾ ಕ್ರೋಧಂ ಭೂಯ ಏವ ಸಮಾದಧೇ।।
ಕಟ್ಟಿಗೆ ದಂಡಗಳಿಂದ ಪೆಟ್ಟುತಿಂದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡುತ್ತಿರುವಾಗ ಅವಳ ಕಣ್ಣುಗಳು ಕ್ರೋಧದಿಂದ ಉರಿದೆದ್ದವು ಮತ್ತು ಕ್ರೋಧವು ಹೆಚ್ಚಾಗುತ್ತಲೇ ಹೋಯಿತು.
01165034a ಆದಿತ್ಯ ಇವ ಮಧ್ಯಾಹ್ನೇ ಕ್ರೋಧದೀಪ್ತವಪುರ್ಬಭೌ।
01165034c ಅಂಗಾರವರ್ಷಂ ಮುಂಚಂತೀ ಮುಹುರ್ವಾಲಧಿತೋ ಮಹತ್।।
ಮಧ್ಯಾಹ್ನದ ಆದಿತ್ಯನಂತೆ ಅವಳ ದೇಹವು ಕ್ರೋಧದಿಂದ ಉರಿದೆದ್ದಿತು ಮತ್ತು ಅವಳ ಬಾಯಿ-ಬಾಲಗಳಿಂದ ಮಹಾ ಕೆಂಡಗಳ ಸುರಿಮಳೆಯೇ ಹೊರಹೊಮ್ಮಿತು.
01165035a ಅಸೃಜತ್ಪಹ್ಲವಾನ್ಪುಚ್ಛಾಚ್ಚಕೃತಃ ಶಬರಾಂಶಕಾನ್।
01165035c ಮೂತ್ರತಶ್ಚಾಸೃಜಚ್ಚಾಪಿ ಯವನಾನ್ಕ್ರೋಧಮೂರ್ಚ್ಛಿತಾ।।
ಕ್ರೋಧಮೂರ್ಛಿತಳಾದ ಅವಳು ಹಿಂಭಾಗದಿಂದ ಪಹ್ಲವರನ್ನು ಸೃಷ್ಟಿಸಿದಳು, ಶಬರ-ಶಕರನ್ನು ಸಗಣಿಯಿಂದ, ಮತ್ತು ಮೂತ್ರದಿಂದ ಯವನರನ್ನು ಸೃಷ್ಟಿಸಿದಳು.
01165036a ಪುಂಡ್ರಾನ್ಕಿರಾತಾನ್ದ್ರಮಿಡಾನ್ಸಿಂಹಲಾನ್ಬರ್ಬರಾಂಸ್ತಥಾ।
01165036c ತಥೈವ ದರದಾನ್ಮ್ಲೇಚ್ಛಾನ್ಫೇನತಃ ಸಾ ಸಸರ್ಜ ಹ।।
ಹಾಲಿನ ನೊರೆಯಿಂದ ಪುಂಡ್ರ, ಕಿರಾತ, ದ್ರಮಿಡ, ಸಿಂಹಲ, ಬರ್ಬರ, ದರದ, ಮತ್ತು ಮ್ಲೇಚ್ಛರನ್ನು ಸೃಷ್ಟಿಸಿದಳು.
01165037a ತೈರ್ವಿಸೃಷ್ಟೈರ್ಮಹತ್ಸೈನ್ಯಂ ನಾನಾಂಲೇಚ್ಛಗಣೈಸ್ತದಾ।
01165037c ನಾನಾವರಣಸಂಚನ್ನೈರ್ನಾನಾಯುಧಧರೈಸ್ತಥಾ।
01165037e ಅವಾಕೀರ್ಯತ ಸಂರಬ್ಧೈರ್ವಿಶ್ವಾಮಿತ್ರಸ್ಯ ಪಶ್ಯತಃ।।
ಈ ರೀತಿ ಅವಳು ಸೃಷ್ಟಿಸಿದ ಮ್ಲೇಚ್ಛರ ನಾನಾ ಗುಂಪಿನ ಮಹಾ ಸೇನೆಯು ನಾನಾ ರೀತಿಯ ಕವಚಗಳನ್ನು ಮತ್ತು ನಾನಾರೀತಿಯ ಆಯುಧಗಳನ್ನು ಧರಿಸಿದವರಾಗಿ, ವಿಶ್ವಾಮಿತ್ರನು ನೋಡುತ್ತಿದ್ದಂತೆಯೇ ಅವನ ಸೇನೆಯನ್ನು ಚದುರಿಸಿ ಓಡಿಸಿತು.
01165038a ಏಕೈಕಶ್ಚ ತದಾ ಯೋಧಃ ಪಂಚಭಿಃ ಸಪ್ತಭಿರ್ವೃತಃ।
01165038c ಅಸ್ತ್ರವರ್ಷೇಣ ಮಹತಾ ಕಾಲ್ಯಮಾನಂ ಬಲಂ ತತಃ।
01165038e ಪ್ರಭಗ್ನಂ ಸರ್ವತಸ್ತ್ರಸ್ತಂ ವಿಶ್ವಾಮಿತ್ರಸ್ಯ ಪಶ್ಯತಃ।।
ಪ್ರತಿಯೊಬ್ಬ ಯೋಧನೂ ಇನ್ನೂ ಐದು ಯೋಧರಿಂದ ಸುತ್ತುವರೆಯಲ್ಪಟ್ಟಿದ್ದನು. ವಿಶ್ವಾಮಿತ್ರನು ನೋಡುತ್ತಿದ್ದಂತೆಯೇ ಅವನ ಬಲವು ಎಲ್ಲಾ ಕಡೆಯಿಂದಲೂ ಮಹಾ ಅಸ್ತ್ರವರ್ಷಗಳಿಗೆ ಸಿಲುಕಿ ಎಲ್ಲಕಡೆಯಿಂದಲೂ ನಾಶಹೊಂದಿತು.
01165039a ನ ಚ ಪ್ರಾಣೈರ್ವಿಯುಜ್ಯಂತ ಕೇ ಚಿತ್ತೇ ಸೈನಿಕಾಸ್ತದಾ।
01165039c ವಿಶ್ವಾಮಿತ್ರಸ್ಯ ಸಂಕ್ರುದ್ಧೈರ್ವಾಸಿಷ್ಠೈರ್ಭರತರ್ಷಭ।।
ಭರತರ್ಷಭ! ಆದರೂ ವಿಶ್ವಾಮಿತ್ರನ ಯಾರೊಬ್ಬ ಸೈನಿಕನೂ ವಸಿಷ್ಠನ ಸಂಕೃದ್ಧ ಸೈನಿಕರಿಂದ ಪ್ರಾಣವನ್ನು ಕಳೆದುಕೊಳ್ಳಲಿಲ್ಲ
01165040a ವಿಶ್ವಾಮಿತ್ರಸ್ಯ ಸೈನ್ಯಂ ತು ಕಾಲ್ಯಮಾನಂ ತ್ರಿಯೋಜನಂ।
01165040c ಕ್ರೋಶಮಾನಂ ಭಯೋದ್ವಿಗ್ನಂ ತ್ರಾತಾರಂ ನಾಧ್ಯಗಚ್ಛತ।।
ಭಯೋದ್ವಿಗ್ನವಾಗಿ ಕೂಗುತ್ತಿದ್ದರೂ ಯಾವ ತ್ರಾತಾರನನ್ನೂ ಕಾಣದ ವಿಶ್ವಾಮಿತ್ರನ ಸೈನ್ಯವು ಮೂರು ಯೋಜನೆಗಳವರೆಗೆ ಓಡಿಹೋಯಿತು.
01165041a ದೃಷ್ಟ್ವಾ ತನ್ಮಹದಾಶ್ಚರ್ಯಂ ಬ್ರಹ್ಮತೇಜೋಭವಂ ತದಾ।
01165041c ವಿಶ್ವಾಮಿತ್ರಃ ಕ್ಷತ್ರಭಾವಾನ್ನಿರ್ವಿಣ್ಣೋ ವಾಕ್ಯಮಬ್ರವೀತ್।।
ಬ್ರಹ್ಮತೇಜಸ್ಸಿನಿಂದ ಹುಟ್ಟಿದ ಆ ಮಹದಾಶ್ಚರ್ಯವನ್ನು ಕಂಡ ವಿಶ್ವಾಮಿತ್ರನು ತನ್ನ ಕ್ಷಾತ್ರಭಾವದಿಂದ ನಿರ್ವಿಣ್ಣನಾಗಿ ಈ ಮಾತುಗಳನ್ನಾಡಿದನು:
01165042a ಧಿಗ್ಬಲಂ ಕ್ಷತ್ರಿಯಬಲಂ ಬ್ರಹ್ಮತೇಜೋಬಲಂ ಬಲಂ।
01165042c ಬಲಾಬಲಂ ವಿನಿಶ್ಚಿತ್ಯ ತಪ ಏವ ಪರಂ ಬಲಂ।।
“ಕ್ಷತ್ರಿಯಬಲವೆಂದೆನಿಸಿಕೊಂಡ ಬಲಕ್ಕೆ ಧಿಕ್ಕಾರ! ಬ್ರಹ್ಮತೇಜೋಬಲವೇ ಬಲವು. ಬಲಾಬಲವನ್ನು ನೋಡಿದರೆ ತಪಸ್ಸಿನ ಬಲವೇ ಪರಮ ಬಲವೆಂದು ನಿಶ್ಚಿತವಾಗುತ್ತದೆ.”
01165043a ಸ ರಾಜ್ಯಂ ಸ್ಫೀತಮುತ್ಸೃಜ್ಯ ತಾಂ ಚ ದೀಪ್ತಾಂ ನೃಪಶ್ರಿಯಂ।
01165043c ಭೋಗಾಂಶ್ಚ ಪೃಷ್ಠತಃ ಕೃತ್ವಾ ತಪಸ್ಯೇವ ಮನೋ ದಧೇ।।
ಅವನು ತನ್ನ ಶ್ರೀಮಂತ ರಾಜ್ಯ ಮತ್ತು ಬೆಳಗುತ್ತಿರುವ ನೃಪಶ್ರೀಯನ್ನು ತಿರಸ್ಕರಿಸಿ ಎಲ್ಲ ಭೋಗಗಳನ್ನು ಹಿಂದಕ್ಕೆ ತಳ್ಳಿ ತಪಸ್ಸಿನಲ್ಲಿಯೇ ತನ್ನ ಮನಸ್ಸನ್ನು ತೊಡಗಿಸಿದನು.
01165044a ಸ ಗತ್ವಾ ತಪಸಾ ಸಿದ್ಧಿಂ ಲೋಕಾನ್ವಿಷ್ಟಭ್ಯ ತೇಜಸಾ।
01165044c ತತಾಪ ಸರ್ವಾನ್ದೀಪ್ತೌಜಾ ಬ್ರಾಹ್ಮಣತ್ವಮವಾಪ ಚ।
01165044e ಅಪಿಬಚ್ಚ ಸುತಂ ಸೋಮಮಿಂದ್ರೇಣ ಸಹ ಕೌಶಿಕಃ।।
ಅವನು ತಪಸ್ಸಿನಲ್ಲಿ ಸಿದ್ಧಿಯನ್ನು ಪಡೆದು ತನ್ನ ತೇಜಸ್ಸಿನಿಂದ ಲೋಕಗಳನ್ನೆಲ್ಲಾ ತುಂಬಿಸಿ ತನ್ನ ಓಜಸ್ಸಿನ ದೀಪದಿಂದ ಎಲ್ಲವನ್ನು ಬೆಳಗಿಸಿ ಬ್ರಾಹ್ಮಣತ್ವವನ್ನು ಪಡೆದನು. ಇಂದ್ರನ ಸಹಿತ ಕೌಶಿಕನು ಸೋಮವನ್ನು ಸೇವಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ವಿಶ್ವಾಮಿತ್ರಪರಾಭವೇ ಷಷ್ಟಷಷ್ಟ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ವಿಶ್ವಾಮಿತ್ರಪರಾಭವದಲ್ಲಿ ನೂರಾಅರವತ್ತೈದನೆಯ ಅಧ್ಯಾಯವು.