160 ತಪತ್ಯುಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಚೈತ್ರರಥ ಪರ್ವ

ಅಧ್ಯಾಯ 160

ಸಾರ

ತನ್ನನ್ನು ತಾಪತ್ಯ ಎಂದು ಕರೆದುದರ ಕಾರಣವನ್ನು ಅರ್ಜುನನು ಕೇಳಲು ಗಂಧರ್ವನು ಪುರುವಂಶಜ ಸಂವರಣನು ಸೂರ್ಯಪುತ್ರಿ ತಪತಿಯನ್ನು ಮೋಹಿಸಿದುದರ ಕುರಿತು ಹೇಳಿದುದು (1-41).

01160001 ಅರ್ಜುನ ಉವಾಚ।
01160001a ತಾಪತ್ಯ ಇತಿ ಯದ್ವಾಕ್ಯಮುಕ್ತವಾನಸಿ ಮಾಮಿಹ।
01160001c ತದಹಂ ಜ್ಞಾತುಮಿಚ್ಛಾಮಿ ತಾಪತ್ಯಾರ್ಥವಿನಿಶ್ಚಯಂ।।

ಅರ್ಜುನನು ಹೇಳಿದನು: “ನೀನು ನನಗೆ ತಾಪತ್ಯ ಎನ್ನುವ ಮಾತಿನಿಂದ ಸಂಬೋಧಿಸಿದ್ದೀಯಲ್ಲ. ಆ ತಾಪತ್ಯದ ಅರ್ಥವನ್ನು ತಿಳಿಯಲು ಬಯಸುತ್ತೇನೆ.

01160002a ತಪತೀ ನಾಮ ಕಾ ಚೈಷಾ ತಾಪತ್ಯಾ ಯತ್ಕೃತೇ ವಯಂ।
01160002c ಕೌಂತೇಯಾ ಹಿ ವಯಂ ಸಾಧೋ ತತ್ತ್ವಮಿಚ್ಛಾಮಿ ವೇದಿತುಂ।।

ನಾವು ಹೇಗೆ ಕೌಂತೇಯರೆಂದು ಕರೆದುಕೊಳ್ಳಲ್ಪಟ್ಟಿದ್ದೇವೋ ಹಾಗೆ ತಾಪತ್ಯ ಎಂದು ಕರೆದೆಯಲ್ಲ ಆ ತಪತಿಯು ಯಾರು ಮತ್ತು ಅವರ ಮಕ್ಕಳು ಯಾರು ಎಂದು ತಿಳಿಯಲು ಬಯಸುತ್ತೇನೆ.””

01160003 ವೈಶಂಪಾಯನ ಉವಾಚ।
01160003a ಏವಮುಕ್ತಃ ಸ ಗಂಧರ್ವಃ ಕುಂತೀಪುತ್ರಂ ಧನಂಜಯಂ।
01160003c ವಿಶ್ರುತಾಂ ತ್ರಿಷು ಲೋಕೇಷು ಶ್ರಾವಯಾಮಾಸ ವೈ ಕಥಾಂ।।

ವೈಶಂಪಾಯನನು ಹೇಳಿದನು: “ಕುಂತೀಪುತ್ರ ಧನಂಜಯನ ಈ ಮಾತುಗಳನ್ನು ಕೇಳಿದ ಗಂಧರ್ವನು ತ್ರಿಲೋಕವಿಶ್ರುತ ಕಥೆಯನ್ನು ಹೇಳಲು ತೊಡಗಿದನು.

01160004 ಗಂಧರ್ವ ಉವಾಚ।
01160004a ಹಂತ ತೇ ಕಥಯಿಷ್ಯಾಮಿ ಕಥಾಮೇತಾಂ ಮನೋರಮಾಂ।
01160004c ಯಥಾವದಖಿಲಾಂ ಪಾರ್ಥ ಧರ್ಮ್ಯಾಂ ಧರ್ಮಭೃತಾಂ ವರ।।

ಗಂಧರ್ವನು ಹೇಳಿದನು: “ಧರ್ಮಭೃತರಲ್ಲಿ ಶ್ರೇಷ್ಠ ಪಾರ್ಥ! ಅಖಿಲ ಧರ್ಮಗಳಿಂದೊಡಗೂಡಿದ ಆ ಮನೋರಮ ಕಥೆಯನ್ನು ನಡೆದಂತೆ ಹೇಳುತ್ತೇನೆ.

01160005a ಉಕ್ತವಾನಸ್ಮಿ ಯೇನ ತ್ವಾಂ ತಾಪತ್ಯ ಇತಿ ಯದ್ವಚಃ।
01160005c ತತ್ತೇಽಹಂ ಕಥಯಿಷ್ಯಾಮಿ ಶೃಣುಷ್ವೈಕಮನಾ ಮಮ।।

ನಿನ್ನನ್ನು ಏಕೆ ತಾಪತ್ಯ ಎಂದು ಕರೆದೆ ಎನ್ನುವುದನ್ನು ಹೇಳುತ್ತೇನೆ. ಏಕಾಗ್ರಚಿತ್ತನಾಗಿ ನನ್ನನ್ನು ಕೇಳು.

01160006a ಯ ಏಷ ದಿವಿ ಧಿಷ್ಣ್ಯೇನ ನಾಕಂ ವ್ಯಾಪ್ನೋತಿ ತೇಜಸಾ।
01160006c ಏತಸ್ಯ ತಪತೀ ನಾಮ ಬಭೂವಾಸದೃಶೀ ಸುತಾ।।

ದಿವಿಯಲ್ಲಿದ್ದುಕೊಂಡು ನಾಕದವರೆಗೂ ತನ್ನ ತೇಜಸ್ಸಿನಿಂದ ಬೆಳಗಿಸುವವನಿಗೆ ತಪತೀ ಎಂಬ ಹೆಸರಿನ ಅಸದೃಶಿ ಮಗಳಿದ್ದಳು.

01160007a ವಿವಸ್ವತೋ ವೈ ಕೌಂತೇಯ ಸಾವಿತ್ರ್ಯವರಜಾ ವಿಭೋ।
01160007c ವಿಶ್ರುತಾ ತ್ರಿಷು ಲೋಕೇಷು ತಪತೀ ತಪಸಾ ಯುತಾ।।

ಕೌಂತೇಯ! ಸಾವಿತ್ರಿಯಿಂದ ವಿವಸ್ವತನಲ್ಲಿ ಹುಟ್ಟಿದ ಈ ತಪತಿಯು ಮೂರೂ ಲೋಕಗಳಲ್ಲಿ ತಪಸ್ಸಿನಿಂದ ಯುಕ್ತಳಾಗಿ ವಿಶ್ರುತಳಾಗಿದ್ದಳು.

01160008a ನ ದೇವೀ ನಾಸುರೀ ಚೈವ ನ ಯಕ್ಷೀ ನ ಚ ರಾಕ್ಷಸೀ।
01160008c ನಾಪ್ಸರಾ ನ ಚ ಗಂಧರ್ವೀ ತಥಾರೂಪೇಣ ಕಾ ಚನ।।

ಯಾರೇ ದೇವಿಯಾಗಲೀ, ಅಸುರಿಯಾಗಲೀ, ಯಕ್ಷಿಯಾಗಲೀ, ರಾಕ್ಷಸಿಯಾಗಲೀ, ಅಪ್ಸರೆಯಾಗಲೀ, ಗಂಧರ್ವಿಯಾಗಲೀ ಅವಳಷ್ಟು ರೂಪವಂತಳಾಗಿರಲಿಲ್ಲ.

01160009a ಸುವಿಭಕ್ತಾನವದ್ಯಾಂಗೀ ಸ್ವಸಿತಾಯತಲೋಚನಾ।
01160009c ಸ್ವಾಚಾರಾ ಚೈವ ಸಾಧ್ವೀ ಚ ಸುವೇಷಾ ಚೈವ ಭಾಮಿನೀ।।

ಆ ಭಾಮಿನಿಯು ಸುವಿಭಕ್ತಳಾಗಿದ್ದಳು (ಅವಳ ದೇಹವು ಅಳತೆಯಲ್ಲಿ ಒಳ್ಳೆಯದಾಗಿದ್ದಿತ್ತು), ಅನವದ್ಯಾಂಗಿಯಾಗಿದ್ದಳು, ಕಪ್ಪಾದ ಅಗಲ ಕಣ್ಣುಗಳುಳ್ಳವಳಾಗಿದ್ದಳು, ಒಳ್ಳೆಯ ನಡತೆಯುಳ್ಳವಳಾಗಿದ್ದಳು, ಸಾಧ್ವಿಯಾಗಿದ್ದಳು ಮತ್ತು ಸುಂದರ ವೇಷ ಭೂಷಣಗಳನ್ನು ಧರಿಸುತ್ತಿದ್ದಳು.

01160010a ನ ತಸ್ಯಾಃ ಸದೃಶಂ ಕಂ ಚಿತ್ತ್ರಿಷು ಲೋಕೇಷು ಭಾರತ।
01160010c ಭರ್ತಾರಂ ಸವಿತಾ ಮೇನೇ ರೂಪಶೀಲಕುಲಶ್ರುತೈಃ।।

ಭಾರತ! ಸವಿತುವು ರೂಪ, ಶೀಲ, ಕುಲ ಮತ್ತು ಕಲಿಕೆ ಯಾವುದರಲ್ಲಿಯೂ ಅವಳ ಸದೃಶರಾದವನು ಈ ಮೂರೂ ಲೋಕಗಳಲ್ಲಿ ಯಾರೂ ಇಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದನು.

01160011a ಸಂಪ್ರಾಪ್ತಯೌವನಾಂ ಪಶ್ಯನ್ದೇಯಾಂ ದುಹಿತರಂ ತು ತಾಂ।
01160011c ನೋಪಲೇಭೇ ತತಃ ಶಾಂತಿಂ ಸಂಪ್ರದಾನಂ ವಿಚಿಂತಯನ್।।

ಅವಳು ಯೌವನವನ್ನು ಹೊಂದಲು ಮಗಳನ್ನು ಕೊಡಬೇಕು ಎನ್ನುವುದನ್ನು ನೋಡಿದ ಅವನು ಅವಳ ಮದುವೆಯ ಕುರಿತು ಯೋಚಿಸುತ್ತಾ ಚಿಂತೆಗೊಳಗಾದನು.

01160012a ಅರ್ಥರ್ಕ್ಷಪುತ್ರಃ ಕೌಂತೇಯ ಕುರೂಣಾಂ ಋಷಭೋ ಬಲೀ।
01160012c ಸೂರ್ಯಮಾರಾಧಯಾಮಾಸ ನೃಪಃ ಸಂವರಣಃ ಸದಾ।।
01160013a ಅರ್ಘ್ಯಮಾಲ್ಯೋಪಹಾರೈಶ್ಚ ಶಶ್ವಚ್ಚ ನೃಪತಿರ್ಯತಃ।
01160013c ನಿಯಮೈರುಪವಾಸೈಶ್ಚ ತಪೋಭಿರ್ವಿವಿಧೈರಪಿ।।

ಕೌಂತೇಯ! ಆಗ ಅರ್ಕ್ಷಪುತ್ರ ಕುರು‌ಋಷಭ ಬಲಶಾಲಿ ರಾಜ ಸಂವರಣನು ಸದಾ ಅರ್ಘ್ಯ ಮಾಲೆ ಉಪಹಾರಗಳಿಂದ, ಉಪವಾಸ ವ್ರತಗಳಿಂದ ಮತ್ತು ವಿವಿಧ ತಪಸ್ಸುಗಳಿಂದ ನಿಯಮಬದ್ಧನಾಗಿ ಸೂರ್ಯಾರಾಧನೆಯಲ್ಲಿ ತೊಡಗಿದ್ದನು.

01160014a ಶುಶ್ರೂಷುರನಹಂವಾದೀ ಶುಚಿಃ ಪೌರವನಂದನಃ।
01160014c ಅಂಶುಮಂತಂ ಸಮುದ್ಯಂತಂ ಪೂಜಯಾಮಾಸ ಭಕ್ತಿಮಾನ್।।

ಆ ಪೌರವನಂದನನು ವಿನಯದಿಂದ, ಅಹಂಕಾರವಿಲ್ಲದೆ ಶುಚಿರ್ಭೂತನಾಗಿ ಭಕ್ತಿಯಿಂದ ಆ ಅಂಶುಮಂತನನ್ನು ಪೂಜಿಸುತ್ತಿದ್ದನು.

01160015a ತತಃ ಕೃತಜ್ಞಂ ಧರ್ಮಜ್ಞಂ ರೂಪೇಣಾಸದೃಶಂ ಭುವಿ।
01160015c ತಪತ್ಯಾಃ ಸದೃಶಂ ಮೇನೇ ಸೂರ್ಯಃ ಸಂವರಣಂ ಪತಿಂ।।

ಆಗ ಕೃತಜ್ಞನೂ, ಧರ್ಮಜ್ಞನೂ, ಭುಮಿಯಲ್ಲಿಯೇ ರೂಪದಲ್ಲಿ ಅಸದೃಶನೂ ಆದ ಸಂವರಣನು ತಪತಿಗೆ ಸದೃಶ ಪತಿಯೆಂದು ಸೂರ್ಯನು ಅಭಿಪ್ರಾಯಪಟ್ಟನು.

01160016a ದಾತುಮೈಚ್ಛತ್ತತಃ ಕನ್ಯಾಂ ತಸ್ಮೈ ಸಂವರಣಾಯ ತಾಂ।
01160016c ನೃಪೋತ್ತಮಾಯ ಕೌರವ್ಯ ವಿಶ್ರುತಾಭಿಜನಾಯ ವೈ।।

ಕೌರವ್ಯ! ಆಗ ಅವನು ತನ್ನ ಕನ್ಯೆಯನ್ನು ವಿಶ್ರುತ ಅಭಿಜನ ನೃಪೋತ್ತಮ ಸಂವರಣನಿಗೆ ಕೊಡಲು ಇಚ್ಛಿಸಿದನು.

01160017a ಯಥಾ ಹಿ ದಿವಿ ದೀಪ್ತಾಂಶುಃ ಪ್ರಭಾಸಯತಿ ತೇಜಸಾ।
01160017c ತಥಾ ಭುವಿ ಮಹೀಪಾಲೋ ದೀಪ್ತ್ಯಾ ಸಂವರಣೋಽಭವತ್।

ದಿವಿಯಲ್ಲಿ ದೀಪ್ತಾಂಶುವು ತನ್ನ ತೇಜಸ್ಸಿನಿಂದ ಹೇಗೆ ಬೆಳಗುತ್ತಾನೋ ಹಾಗೆ ಭುವಿಯಲ್ಲಿ ಮಹೀಪಾಲ ಸಂವರಣನು ಬೆಳಗುತ್ತಿದ್ದನು.

01160018a ಯಥಾರ್ಚಯಂತಿ ಚಾದಿತ್ಯಮುದ್ಯಂತಂ ಬ್ರಹ್ಮವಾದಿನಃ।
01160018c ತಥಾ ಸಂವರಣಂ ಪಾರ್ಥ ಬ್ರಾಹ್ಮಣಾವರಜಾಃ ಪ್ರಜಾಃ।।

ಬ್ರಹ್ಮವಾದಿಗಳು ಹೇಗೆ ಉದಯಿಸುತ್ತಿರುವ ಆದಿತ್ಯನನ್ನು ಅರ್ಚಿಸುತ್ತಾರೋ ಹಾಗೆ ಪಾರ್ಥ! ಬ್ರಾಹ್ಮಣರೇ ಮೊದಲಾದ ಪ್ರಜೆಗಳು ಸಂವರಣನನ್ನು ಪೂಜಿಸುತ್ತಿದ್ದರು.

01160019a ಸ ಸೋಮಮತಿ ಕಾಂತತ್ವಾದಾದಿತ್ಯಮತಿ ತೇಜಸಾ।
01160019c ಬಭೂವ ನೃಪತಿಃ ಶ್ರೀಮಾನ್ಸುಹೃದಾಂ ದುರ್ಹೃದಾಮಪಿ।।

ಆ ಶ್ರೀಮಾನ್ ನೃಪತಿಯು ತನ್ನ ಸುಹೃದಯರಿಗೆ ಕಾಂತಿಯಲ್ಲಿ ಸೋಮನಂತಿದ್ದನು ಮತ್ತು ದುಹೃದಯರಿಗೆ ತೇಜಸ್ಸಿನಲ್ಲಿ ಆದಿತ್ಯನಂತಿದ್ದನು.

01160020a ಏವಂಗುಣಸ್ಯ ನೃಪತೇಸ್ತಥಾವೃತ್ತಸ್ಯ ಕೌರವ।
01160020c ತಸ್ಮೈ ದಾತುಂ ಮನಶ್ಚಕ್ರೇ ತಪತೀಂ ತಪನಃ ಸ್ವಯಂ।।

ಕೌರವ! ಈ ರೀತಿಯ ಗುಣ ಚಾರಿತ್ರ್ಯವುಳ್ಳ ನೃಪತಿಗೆ ಸ್ವಯಂ ತಪನನೇ ತಪತಿಯನ್ನು ಕೊಡಲು ನಿಶ್ಚಯಿಸಿದನು.

01160021a ಸ ಕದಾ ಚಿದಥೋ ರಾಜಾ ಶ್ರೀಮಾನುರುಯಶಾ ಭುವಿ।
01160021c ಚಚಾರ ಮೃಗಯಾಂ ಪಾರ್ಥ ಪರ್ವತೋಪವನೇ ಕಿಲ।

ಪಾರ್ಥ! ಹೀಗಿರಲು ಭೂವಿಯಲ್ಲಿಯೇ ಅತ್ಯಂತ ಪ್ರಸಿದ್ಧ ಆ ಶ್ರೀಮಾನ್ ರಾಜನು ಒಮ್ಮೆ ಬೇಟೆಯಾಡಲು ಪರ್ವತದ ಉಪವನವೊಂದಕ್ಕೆ ಹೋದನು.

01160022a ಚರತೋ ಮೃಗಯಾಂ ತಸ್ಯ ಕ್ಷುತ್ಪಿಪಾಸಾಶ್ರಮಾನ್ವಿತಃ।
01160022c ಮಮಾರ ರಾಜ್ಞಃ ಕೌಂತೇಯ ಗಿರಾವಪ್ರತಿಮೋ ಹಯಃ।।

ಕೌಂತೇಯ! ಬೇಟೆಯಾಡುತ್ತಿರುವಾಗ ಆ ರಾಜನ ಅಪ್ರತಿಮ ಕುದುರೆಯು ಹಸಿವು, ಬಾಯಾರಿಕೆ ಮತ್ತು ಆಯಾಸಗಳಿಂದ ಬಳಲಿ ಅಲ್ಲಿಯೇ ಬಿದ್ದು ಸತ್ತುಹೋಯಿತು.

01160023a ಸ ಮೃತಾಶ್ವಶ್ಚರನ್ಪಾರ್ಥ ಪದ್ಭ್ಯಾಮೇವ ಗಿರೌ ನೃಪಃ।
01160023c ದದರ್ಶಾಸದೃಶೀಂ ಲೋಕೇ ಕನ್ಯಾಮಾಯತಲೋಚನಾಂ।।

ಪಾರ್ಥ! ಕುದುರೆಯು ಸಾಯಲು ನೃಪನು ನಡೆದುಕೊಂಡೇ ಆ ಗಿರಿಯಮೇಲೆ ಹೋದನು. ಅಲ್ಲಿ ಅವನು ಲೋಕದಲ್ಲಿಯೇ ಅಸದೃಷಿ ಆಯತಲೋಚನೆ ಕನ್ಯೆಯೋರ್ವಳನ್ನು ನೋಡಿದನು.

01160024a ಸ ಏಕ ಏಕಾಮಾಸಾದ್ಯ ಕನ್ಯಾಂ ತಾಮರಿಮರ್ದನಃ।
01160024c ತಸ್ಥೌ ನೃಪತಿಶಾರ್ದೂಲಃ ಪಶ್ಯನ್ನವಿಚಲೇಕ್ಷಣಃ।।

ಅಲ್ಲಿ ಅವನು ಒಬ್ಬನೇ ಇದ್ದನು. ಅವಳೂ ಒಬ್ಬಳೇ ಇದ್ದಳು. ಆ ಅರಿಮರ್ದನ ನೃಪತಿಶಾರ್ದೂಲನು ಕನ್ಯೆಯನ್ನು ಅವಿಚಲೇಕ್ಷಣನಾಗಿ ನೋಡತೊಡಗಿದನು.

01160025a ಸ ಹಿ ತಾಂ ತರ್ಕಯಾಮಾಸ ರೂಪತೋ ನೃಪತಿಃ ಶ್ರಿಯಂ।
01160025c ಪುನಃ ಸಂತರ್ಕಯಾಮಾಸ ರವೇರ್ಭ್ರಷ್ಟಾಮಿವ ಪ್ರಭಾಂ।।

ಅವಳ ರೂಪದಿಂದ ಅವಳು ಶ್ರೀಯಿರಬಹುದೆಂದು ನೃಪತಿಯು ತರ್ಕಿಸಿದನು. ಪುನಃ ಅವಳು ಭೂಮಿಯ ಮೇಲೆ ಬಿದ್ದಿರುವ ರವಿಯ ಪ್ರಭೆಯೇ ಇರಬಹುದು ಎಂದು ಯೋಚಿಸಿದನು.

01160026a ಗಿರಿಪ್ರಸ್ಥೇ ತು ಸಾ ಯಸ್ಮಿನ್ ಸ್ಥಿತಾ ಸ್ವಸಿತಲೋಚನಾ।
01160026c ಸ ಸವೃಕ್ಷಕ್ಷುಪಲತೋ ಹಿರಣ್ಮಯ ಇವಾಭವತ್।।

ಆ ಅಸಿತಲೋಚನೆಯು ನಿಂತಿದ್ದ ಆ ಗಿರಿಪ್ರದೇಶವು, ಅಲ್ಲಿರುವ ವೃಕ್ಷ ಕ್ಷುಪ ಲತೆಗಳ ಜೊತೆಗೆ ಹಿರಣ್ಮಯದಂತೆ ತೋರುತ್ತಿತ್ತು.

01160027a ಅವಮೇನೇ ಚ ತಾಂ ದೃಷ್ಟ್ವಾ ಸರ್ವಪ್ರಾಣಭೃತಾಂ ವಪುಃ।
01160027c ಅವಾಪ್ತಂ ಚಾತ್ಮನೋ ಮೇನೇ ಸ ರಾಜಾ ಚಕ್ಷುಷಃ ಫಲಂ।।

ಅವಳನ್ನು ನೋಡಿದ ಅವನು ಸರ್ವ ಪ್ರಾಣಿಗಳ ಸೌಂದರ್ಯವನ್ನು ಅವಹೇಳನ ಮಾಡಿದನು ಮತ್ತು ಆ ರಾಜನು ತನ್ನ ಕಣ್ಣುಗಳು ತಮ್ಮ ಉದ್ದೇಶಗಳ ಫಲವನ್ನು ಹೊಂದಿದವು ಎಂದು ತಿಳಿದನು.

01160028a ಜನ್ಮಪ್ರಭೃತಿ ಯತ್ಕಿಂ ಚಿದ್ದೃಷ್ಟವಾನ್ಸ ಮಹೀಪತಿಃ।
01160028c ರೂಪಂ ನ ಸದೃಶಂ ತಸ್ಯಾಸ್ತರ್ಕಯಾಮಾಸ ಕಿಂ ಚನ।।

ಜನ್ಮಪ್ರಭೃತಿಯಾಗಿ ಏನೆಲ್ಲ ನೋಡಿದ್ದನೋ ರೂಪದಲ್ಲಿ ಅವಳ ಸದೃಶವಾದ ಬೇರೆ ಏನನ್ನೂ ನೋಡಲಿಲ್ಲ ಎಂದು ಆ ಮಹೀಪತಿಯು ತರ್ಕಿಸಿದನು.

01160029a ತಯಾ ಬದ್ಧಮನಶ್ಚಕ್ಷುಃ ಪಾಶೈರ್ಗುಣಮಯೈಸ್ತದಾ।
01160029c ನ ಚಚಾಲ ತತೋ ದೇಶಾದ್ಬುಬುಧೇ ನ ಚ ಕಿಂ ಚನ।।

ಅವಳ ಗುಣಪಾಶಗಳಿಂದ ಅವನ ಬುದ್ಧಿ, ಮನಸ್ಸು ಮತ್ತು ಕಣ್ಣುಗಳು ಬಂಧಿತವಾಗಿ ಅವನು ಆ ಸ್ಥಳದಿಂದ ಚಂಚಲಿಸಲಿಲ್ಲ ಮತ್ತು ಅಲ್ಲಿರುವ ಯಾವುದರ ಪರಿಜ್ಞಾನವೂ ಅವನಿಗಿರಲಿಲ್ಲ.

01160030a ಅಸ್ಯಾ ನೂನಂ ವಿಶಾಲಾಕ್ಷ್ಯಾಃ ಸದೇವಾಸುರಮಾನುಷಂ।
01160030c ಲೋಕಂ ನಿರ್ಮಥ್ಯ ಧಾತ್ರೇದಂ ರೂಪಮಾವಿಷ್ಕೃತಂ ಕೃತಂ।।

“ದೇವಾಸುರಮಾನುಷರ ಲೋಕವನ್ನೆಲ್ಲಾ ಮಥಿಸಿ ಧಾತ್ರಿಯು ಈ ವಿಶಾಲಾಕ್ಷಿಯ ರೂಪವನ್ನು ಆವಿಷ್ಕೃತಗೊಳಿಸಿರಬೇಕು!”

01160031a ಏವಂ ಸ ತರ್ಕಯಾಮಾಸ ರೂಪದ್ರವಿಣಸಂಪದಾ।
01160031c ಕನ್ಯಾಮಸದೃಶೀಂ ಲೋಕೇ ನೃಪಃ ಸಂವರಣಸ್ತದಾ।।

ಈ ರೀತಿ ರೂಪದ್ರವಿಣಸಂಪನ್ನೆ ಲೋಕದಲ್ಲಿಯೇ ಅಸದೃಶಿ ಕನ್ಯೆಯ ಕುರಿತು ನೃಪ ಸಂವರಣನು ಯೋಚಿಸಿದನು.

01160032a ತಾಂ ಚ ದೃಷ್ಟ್ವೈವ ಕಲ್ಯಾಣೀಂ ಕಲ್ಯಾಣಾಭಿಜನೋ ನೃಪಃ।
01160032c ಜಗಾಮ ಮನಸಾ ಚಿಂತಾಂ ಕಾಮಮಾರ್ಗಣಪೀಡಿತಃ।

ಕಲ್ಯಾಣಾಭಿಜನ ನೃಪನು ಆ ಕಲ್ಯಾಣಿಯನ್ನು ನೋಡುತ್ತಲೇ ಮನಸ್ಸು ಕಾಮಮಾರ್ಗಪೀಡಿತವಾಗಿ ಅವನು ಚಿಂತೆಗೊಳಗಾದನು.

01160033a ದಹ್ಯಮಾನಃ ಸ ತೀವ್ರೇಣ ನೃಪತಿರ್ಮನ್ಮಥಾಗ್ನಿನಾ।
01160033c ಅಪ್ರಗಲ್ಭಾಂ ಪ್ರಗಲ್ಭಃ ಸ ತಾಮುವಾಚ ಯಶಸ್ವಿನೀಂ।।

ಮನ್ಮಥಾಗ್ನಿಯಿಂದ ತೀವ್ರವಾಗಿ ದಹಿಸುತ್ತಿದ್ದ ಆ ನೃಪತಿಯು ಅಪ್ರಗಲ್ಭರಲ್ಲಿ ಪ್ರಗಲ್ಭಳಾದ ಯಶಸ್ವಿನಿಯನ್ನು ಕುರಿತು ಹೇಳಿದನು:

01160034a ಕಾಸಿ ಕಸ್ಯಾಸಿ ರಂಭೋರು ಕಿಮರ್ಥಂ ಚೇಹ ತಿಷ್ಠಸಿ।
01160034c ಕಥಂ ಚ ನಿರ್ಜನೇಽರಣ್ಯೇ ಚರಸ್ಯೇಕಾ ಶುಚಿಸ್ಮಿತೇ।।

“ನೀನು ಯಾರು? ನೀನು ಯಾರವಳು? ರಂಭೋರು! ಇಲ್ಲಿ ಯಾವ ಕಾರಣಕ್ಕಾಗಿ ನಿಂತಿರುವೆ? ಶುಚಿಸ್ಮಿತೇ! ನಿರ್ಜನ ಅರಣ್ಯದಲ್ಲಿ ಒಬ್ಬಂಟಿಯಾಗಿ ಏಕೆ ತಿರುಗುತ್ತಿರುವೆ?

01160035a ತ್ವಂ ಹಿ ಸರ್ವಾನವದ್ಯಾಂಗೀ ಸರ್ವಾಭರಣಭೂಷಿತಾ।
01160035c ವಿಭೂಷಣಮಿವೈತೇಷಾಂ ಭೂಷಣಾನಾಮಭೀಪ್ಸಿತಂ।।

ಸರ್ವಾನವದ್ಯಾಂಗಿ! ಸರ್ವಾಭರಣ ಭೂಷಿತೆಯಾದ ನಿನ್ನ ವಿಭೂಷಣಗಳೆಲ್ಲವೂ ನಿನ್ನನ್ನೇ ಭೂಷಣವನ್ನಾಗಿ ಬಯಸುತ್ತಿರುವಂತಿದೆ.

01160036a ನ ದೇವೀಂ ನಾಸುರೀಂ ಚೈವ ನ ಯಕ್ಷೀಂ ನ ಚ ರಾಕ್ಷಸೀಂ।
01160036c ನ ಚ ಭೋಗವತೀಂ ಮನ್ಯೇ ನ ಗಂಧರ್ವೀಂ ನ ಮಾನುಷೀಂ।।

ನೀನು ದೇವಿ ಅಥವಾ ಅಸುರಿ ಅಥವಾ ಯಕ್ಷೀ ಅಥವಾ ರಾಕ್ಷಸೀ ಅಥವಾ ಭೋಗವತೀ ಅಥವಾ ಗಂಧರ್ವಿ ಅಥವಾ ಮಾನುಷಿಯೆಂದು ನನಗೆ ಅನ್ನಿಸುವುದಿಲ್ಲ.

01160037a ಯಾ ಹಿ ದೃಷ್ಟಾ ಮಯಾ ಕಾಶ್ಚಿಚ್ಛೃತಾ ವಾಪಿ ವರಾಂಗನಾಃ।
01160037c ನ ತಾಸಾಂ ಸದೃಶೀಂ ಮನ್ಯೇ ತ್ವಾಮಹಂ ಮತ್ತಕಾಶಿನಿ।।

ಮತ್ತಕಾಶಿನೀ! ಇದೂವರೆಗೆ ನಾನು ಯಾವ ವರಾಂಗನೆಯರನ್ನು ನೋಡಿದ್ದೆನೋ ಅಥವಾ ಅವರ ಕುರಿತು ಕೇಳಿದ್ದೆನೋ ಅವರಲ್ಲಿ ಯಾರೂ ನಿನ್ನ ಸದೃಶರೆಂದು ನಾನು ತಿಳಿಯುವುದಿಲ್ಲ.”

01160038a ಏವಂ ತಾಂ ಸ ಮಹೀಪಾಲೋ ಬಭಾಷೇ ನ ತು ಸಾ ತದಾ।
01160038c ಕಾಮಾರ್ತಂ ನಿರ್ಜನೇಽರಣ್ಯೇ ಪ್ರತ್ಯಭಾಷತ ಕಿಂ ಚನ।।

ಈ ರೀತಿ ಆ ಮಹೀಪಾಲನು ಅವಳಲ್ಲಿ ಮಾತನಾಡಿದನು. ಆದರೆ ಆ ನಿರ್ಜನ ಅರಣ್ಯದಲ್ಲಿ ಅವಳು ಕಾಮಾರ್ತನಿಗೆ ಏನನ್ನೂ ಪ್ರತ್ಯುತ್ತರಿಸಲಿಲ್ಲ.

01160039a ತತೋ ಲಾಲಪ್ಯಮಾನಸ್ಯ ಪಾರ್ಥಿವಸ್ಯಾಯತೇಕ್ಷಣಾ।
01160039c ಸೌದಾಮಿನೀವ ಸಾಭ್ರೇಷು ತತ್ರೈವಾಂತರಧೀಯತ।।

ಆ ಪಾರ್ಥಿವನು ಈ ರೀತಿ ಲಾಲಪಿಸುತ್ತಿರಲು ಆ ಆಯತೇಕ್ಷಣೆಯು ಮೋಡಗಳಲ್ಲಿ ಮಿಂಚಿನಂತೆ ಅಲ್ಲಿಯೇ ಅಂತರ್ಧಾನಳಾದಳು.

01160040a ತಾಮನ್ವಿಚ್ಛನ್ಸ ನೃಪತಿಃ ಪರಿಚಕ್ರಾಮ ತತ್ತದಾ।
01160040c ವನಂ ವನಜಪತ್ರಾಕ್ಷೀಂ ಭ್ರಮನ್ನುನ್ಮತ್ತವತ್ತದಾ।।

ಭ್ರಮೆಗೊಳಗಾದವನಂತೆ ಆ ನೃಪತಿಯು ಆ ವನಜಪತ್ರಾಕ್ಷಿಯನ್ನು ವನದಲ್ಲೆಲ್ಲಾ ಹುಡುಕಾಡತೊಡಗಿದನು.

01160041a ಅಪಶ್ಯಮಾನಃ ಸ ತು ತಾಂ ಬಹು ತತ್ರ ವಿಲಪ್ಯ ಚ।
01160041c ನಿಶ್ಚೇಷ್ಟಃ ಕೌರವಶ್ರೇಷ್ಠೋ ಮುಹೂರ್ತಂ ಸ ವ್ಯತಿಷ್ಠತ।।

ಅವಳನ್ನು ಅಲ್ಲಿ ಕಾಣದಿರಲು ಆ ಕೌರವಶ್ರೇಷ್ಠನು ವಿಲಪಿಸುತ್ತಾ ಸ್ವಲ್ಪ ಹೊತ್ತು ಅಲ್ಲಿಯೇ ನಿಂತುಬಿಟ್ಟನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ತಪತ್ಯುಪಾಖ್ಯಾನೇ ಷಷ್ಟ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ತಪತ್ಯುಪಾಖ್ಯಾನದಲ್ಲಿ ನೂರಾಅರವತ್ತನೆಯ ಅಧ್ಯಾಯವು.