159 ಗಂಧರ್ವಪರಾಭವಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಚೈತ್ರರಥ ಪರ್ವ

ಅಧ್ಯಾಯ 159

ಸಾರ

ರಾತ್ರಿಯಲ್ಲಿ ಪ್ರಯಾಣಮಾಡುತ್ತಿರುವಾಗ ಧಾಳಿ ಮಾಡಿದುದಕ್ಕೆ ಕಾರಣವನ್ನು ಕೇಳಲು ಗಂಧರ್ವನು ಅರ್ಜುನನಿಗೆ ಕ್ಷತ್ರಿಯರು ಪುರೋಹಿತರನ್ನು ಇರಿಸಿಕೊಳ್ಳುವುದರ ಮಹತ್ವವನ್ನು ವಿವರಿಸಿದುದು (1-22).

01159001 ಅರ್ಜುನ ಉವಾಚ।
01159001a ಕಾರಣಂ ಬ್ರೂಹಿ ಗಂಧರ್ವ ಕಿಂ ತದ್ಯೇನ ಸ್ಮ ಧರ್ಷಿತಾಃ।
01159001c ಯಾಂತೋ ಬ್ರಹ್ಮವಿದಃ ಸಂತಃ ಸರ್ವೇ ರಾತ್ರಾವರಿಂದಮ।।

ಅರ್ಜುನನು ಹೇಳಿದನು: “ಅರಿಂದಮ! ಗಂಧರ್ವ! ಬ್ರಹ್ಮವಿದ ನಾವೆಲ್ಲರೂ ರಾತ್ರಿಯಲ್ಲಿ ಪ್ರಯಾಣಮಾಡುತ್ತಿರುವಾಗ ನಮ್ಮ ಮೇಲೆ ನೀನು ಧಾಳಿಮಾಡಿದುದರ ಕಾರಣವನ್ನು ಹೇಳು.”

01159002 ಗಂಧರ್ವ ಉವಾಚ।
01159002a ಅನಗ್ನಯೋಽನಾಹುತಯೋ ನ ಚ ವಿಪ್ರಪುರಸ್ಕೃತಾಃ।
01159002c ಯೂಯಂ ತತೋ ಧರ್ಷಿತಾಃ ಸ್ಥ ಮಯಾ ಪಾಂಡವನಂದನ।।

ಗಂಧರ್ವನು ಹೇಳಿದನು: “ಪಾಂಡವನಂದನ! ಅನಗ್ನ, ಅನಾಹುತ ಮತ್ತು ವಿಪ್ರನನ್ನು ಮುಂದುಮಾಡಿಕೊಂಡಿರದೇ ಹೋಗುತ್ತಿದ್ದ ನಿಮ್ಮನ್ನು ನಾನು ತಡೆದು ಧಾಳಿಮಾಡಿದೆನು.

01159003a ಯಕ್ಷರಾಕ್ಷಸಗಂಧರ್ವಾಃ ಪಿಶಾಚೋರಗಮಾನವಾಃ।
01159003c ವಿಸ್ತರಂ ಕುರುವಂಶಸ್ಯ ಶ್ರೀಮತಃ ಕಥಯಂತಿ ತೇ।।

ಯಕ್ಷ, ರಾಕ್ಷಸ, ಗಂಧರ್ವ, ಪಿಶಾಚ, ಉರಗ ಮತ್ತು ಮಾನವರು ವಿಸ್ತಾರ ಶ್ರೀಮಂತ ಕುರುವಂಶದ ಚರಿತ್ರೆಯನ್ನು ಹೇಳುತ್ತಿರುತ್ತಾರೆ.

01159004a ನಾರದಪ್ರಭೃತೀನಾಂ ಚ ದೇವರ್ಷೀಣಾಂ ಮಯಾ ಶ್ರುತಂ।
01159004c ಗುಣಾನ್ಕಥಯತಾಂ ವೀರ ಪೂರ್ವೇಷಾಂ ತವ ಧೀಮತಾಂ।।

ವೀರ! ನಾರದರೇ ಮೊದಲಾದ ದೇವರ್ಷಿಗಳಿಂದ ನಿನ್ನ ಧೀಮಂತ ಪೂರ್ವಜರ ಗುಣಗಳನ್ನು ನಾನು ಕೇಳಿದ್ದೇನೆ.

01159005a ಸ್ವಯಂ ಚಾಪಿ ಮಯಾ ದೃಷ್ಟಶ್ಚರತಾ ಸಾಗರಾಂಬರಾಂ।
01159005c ಇಮಾಂ ವಸುಮತೀಂ ಕೃತ್ಸ್ನಾಂ ಪ್ರಭಾವಃ ಸ್ವಕುಲಸ್ಯ ತೇ।।

ಸಾಗರಾಂಬರಿ ಈ ವಸುಮತಿಯಲ್ಲಿ ಸಂಚರಿಸುತ್ತಿರುವಾಗ ಸ್ವಯಂ ನಾನೇ ನಿನ್ನ ಕುಲದ ಶ್ರೇಷ್ಠ ಪ್ರಭಾವವನ್ನು ಕಂಡಿದ್ದೇನೆ.

01159006a ವೇದೇ ಧನುಷಿ ಚಾಚಾರ್ಯಮಭಿಜಾನಾಮಿ ತೇಽರ್ಜುನ।
01159006c ವಿಶ್ರುತಂ ತ್ರಿಷು ಲೋಕೇಷು ಭಾರದ್ವಾಜಂ ಯಶಸ್ವಿನಂ।।

ಅರ್ಜುನ! ಧನುರ್ವಿದ್ಯೆಯಲ್ಲಿ ನಿನ್ನ ಆಚಾರ್ಯ ಮೂರೂ ಲೋಕಗಳಲ್ಲಿ ವಿಶೃತ ಯಶಸ್ವಿ ಭಾರದ್ವಾಜನೂ ನನಗೆ ಗೊತ್ತು.

01159007a ಧರ್ಮಂ ವಾಯುಂ ಚ ಶಕ್ರಂ ಚ ವಿಜಾನಾಮ್ಯಶ್ವಿನೌ ತಥಾ।
01159007c ಪಾಂಡುಂ ಚ ಕುರುಶಾರ್ದೂಲ ಷಡೇತಾನ್ಕುಲವರ್ಧನಾನ್।
01159007e ಪಿತೄನೇತಾನಹಂ ಪಾರ್ಥ ದೇವಮಾನುಷಸತ್ತಮಾನ್।।

ಪಾರ್ಥ! ಧರ್ಮ, ವಾಯು, ಶಕ್ರ, ಅಶ್ವಿನಿಯರು ಮತ್ತು ದೇವಮಾನುಷಸತ್ತಮ ನಿನ್ನ ತಂದೆ ಕುರುಶಾರ್ದೂಲ ಪಾಂಡು ಈ ಆರು ಕುಲವರ್ಧನರೂ ನನಗೆ ಗೊತ್ತು.

01159008a ದಿವ್ಯಾತ್ಮಾನೋ ಮಹಾತ್ಮಾನಃ ಸರ್ವಶಸ್ತ್ರಭೃತಾಂ ವರಾಃ।
01159008c ಭವಂತೋ ಭ್ರಾತರಃ ಶೂರಾಃ ಸರ್ವೇ ಸುಚರಿತವ್ರತಾಃ।।

ನಿನ್ನ ಭ್ರಾತೃಗಳೆಲ್ಲರೂ ದಿವ್ಯಾತ್ಮರೂ, ಮಹಾತ್ಮರೂ, ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠರೂ, ಸುಚರಿತವ್ರತರೂ ಆಗಿದ್ದಾರೆ.

01159009a ಉತ್ತಮಾಂ ತು ಮನೋಬುದ್ಧಿಂ ಭವತಾಂ ಭಾವಿತಾತ್ಮನಾಂ।
01159009c ಜಾನನ್ನಪಿ ಚ ವಃ ಪಾರ್ಥ ಕೃತವಾನಿಹ ಧರ್ಷಣಾಂ।।

ಪಾರ್ಥ! ನಿಮ್ಮೆಲ್ಲರ ಉತ್ತಮ ಮನೋಬುದ್ಧಿಯನ್ನು ಮತ್ತು ಭಾವಿತ ಆತ್ಮಗಳನ್ನು ತಿಳಿದಿದ್ದರೂ ನಾನು ನಿಮ್ಮ ಮೇಲೆ ಇಲ್ಲಿ ಧಾಳಿಮಾಡಿದೆ.

01159010a ಸ್ತ್ರೀಸಕಾಶೇ ಚ ಕೌರವ್ಯ ನ ಪುಮಾನ್ ಕ್ಷಂತುಮರ್ಹತಿ।
01159010c ಧರ್ಷಣಾಮಾತ್ಮನಃ ಪಶ್ಯನ್ಬಾಹುದ್ರವಿಣಮಾಶ್ರಿತಃ।।

ಕೌರವ್ಯ! ಸ್ತ್ರೀಯರ ಎದಿರು ಉಲ್ಲಂಘನೆ ಮಾಡುವವರನ್ನು ನೋಡಿದ ಬಾಹುದ್ರವಿಣ ಆಶ್ರಿತ ಯಾರೂ ಕ್ಷಮಿಸುವುದಿಲ್ಲ.

01159011a ನಕ್ತಂ ಚ ಬಲಮಸ್ಮಾಕಂ ಭೂಯ ಏವಾಭಿವರ್ಧತೇ।
01159011c ಯತಸ್ತತೋ ಮಾಂ ಕೌಂತೇಯ ಸದಾರಂ ಮನ್ಯುರಾವಿಶತ್।।

ರಾತ್ರಿವೇಳೆಯಲ್ಲಿ ನಮ್ಮ ಬಲವು ವೃದ್ಧಿಯಾಗುತ್ತದೆ. ಆದುದರಿಂದ ಕೌಂತೇಯ! ಪತ್ನಿಯೊಡನಿದ್ದ ನಾನು ಕೋಪಾವಿಷ್ಟನಾಗಿಬಿಟ್ಟೆ.

01159012a ಸೋಽಹಂ ತ್ವಯೇಹ ವಿಜಿತಃ ಸಂಖ್ಯೇ ತಾಪತ್ಯವರ್ಧನ।
01159012c ಯೇನ ತೇನೇಹ ವಿಧಿನಾ ಕೀರ್ತ್ಯಮಾನಂ ನಿಬೋಧ ಮೇ।।

ತಾಪತ್ಯವರ್ಧನ! ಈಗ ನಾನು ನಿನ್ನಿಂದ ಯುದ್ಧದಲ್ಲಿ ಸೋಲಲ್ಪಟ್ಟು ಸಖನಾಗಿ ನಿಂತಿದ್ದೇನೆ. ಯಾವ ರೀತಿಯಲ್ಲಿ ಇದನ್ನು ಆಚರಿಸಬೇಕು ಎನ್ನುವುದನ್ನು ಹೇಳು.

01159013a ಬ್ರಹ್ಮಚರ್ಯಂ ಪರೋ ಧರ್ಮಃ ಸ ಚಾಪಿ ನಿಯತಸ್ತ್ವಯಿ।
01159013c ಯಸ್ಮಾತ್ತಸ್ಮಾದಹಂ ಪಾರ್ಥ ರಣೇಽಸ್ಮಿನ್ವಿಜಿತಸ್ತ್ವಯಾ।।

ಬ್ರಹ್ಮಚರ್ಯವು ಪರಮ ಧರ್ಮ ಮತ್ತು ಇದು ನಿನ್ನಲ್ಲಿ ಗಟ್ಟಿಯಾಗಿ ನಿಂತುಕೊಂಡಿದೆ. ಪಾರ್ಥ! ಇದರಿಂದಲೇ ನೀನು ಇಂದು ರಣದಲ್ಲಿ ನನ್ನನ್ನು ಗೆದ್ದೆ.

01159014a ಯಸ್ತು ಸ್ಯಾತ್ ಕ್ಷತ್ರಿಯಃ ಕಶ್ಚಿತ್ಕಾಮವೃತ್ತಃ ಪರಂತಪ।
01159014c ನಕ್ತಂ ಚ ಯುಧಿ ಯುಧ್ಯೇತ ನ ಸ ಜೀವೇತ್ಕಥಂ ಚನ।।

ಆದರೆ ಪರಂತಪ! ಕಾಮವೃತ ಕ್ಷತ್ರಿಯರು ಎಂದೂ ಯಾವರೀತಿಯಲ್ಲಿಯೂ ರಾತ್ರಿ ವೇಳೆ ನಮ್ಮಲ್ಲಿ ಯುದ್ಧಮಾಡಿ ಜೀವಿತವಾಗಿರಲು ಸಾಧ್ಯವಿಲ್ಲ.

01159015a ಯಸ್ತು ಸ್ಯಾತ್ಕಾಮವೃತ್ತೋಽಪಿ ರಾಜಾ ತಾಪತ್ಯ ಸಂಗರೇ।
01159015c ಜಯೇನ್ನಕ್ತಂಚರಾನ್ಸರ್ವಾನ್ಸ ಪುರೋಹಿತಧೂರ್ಗತಃ।।

ತಾಪತ್ಯ! ಕಾಮವೃತ ರಾಜನೂ ಕೂಡ ಪುರೋಹಿತನನ್ನು ಮುಂದಿಟ್ಟುಕೊಂಡು ಬಂದರೆ ರಾತ್ರಿವೇಳೆ ಸಂಗರದಲ್ಲಿ ಎಲ್ಲ ನಿಶಾಚರರ ಮೇಲೆ ಜಯವನ್ನು ಪಡೆಯಬಹುದು.

01159016a ತಸ್ಮಾತ್ತಾಪತ್ಯ ಯತ್ಕಿಂ ಚಿನ್ನೃಣಾಂ ಶ್ರೇಯ ಇಹೇಪ್ಸಿತಂ।
01159016c ತಸ್ಮಿನ್ಕರ್ಮಣಿ ಯೋಕ್ತವ್ಯಾ ದಾಂತಾತ್ಮಾನಃ ಪುರೋಹಿತಾಃ।।

ತಾಪತ್ಯ! ಆದುದರಿಂದಲೇ ಮನುಷ್ಯನು ಇಲ್ಲಿ ಏನೇ ಶ್ರೇಯಸ್ಸನ್ನು ಬಯಸಿದರೂ ಆ ಕರ್ಮದಲ್ಲಿ ದಾಂತಾತ್ಮ ಪುರೋಹಿತನನ್ನು ಬಳಸಿಕೊಳ್ಳಬೇಕು.

01159017a ವೇದೇ ಷಡಂಗೇ ನಿರತಾಃ ಶುಚಯಃ ಸತ್ಯವಾದಿನಃ।
01159017c ಧರ್ಮಾತ್ಮಾನಃ ಕೃತಾತ್ಮಾನಃ ಸ್ಯುರ್ನೃಪಾಣಾಂ ಪುರೋಹಿತಾಃ।।

ಎಲ್ಲ ನೃಪರೂ ಷಡಂಗಸಹಿತ ವೇದಗಳಲ್ಲಿ ನಿರತ, ಶುಚ, ಸತ್ಯವಾದಿ, ಧರ್ಮಾತ್ಮ, ಮತ್ತು ಕೃತಾತ್ಮ ಪುರೋಹಿತರನ್ನು ಪಡೆದಿರಬೇಕು.

01159018a ಜಯಶ್ಚ ನಿಯತೋ ರಾಜ್ಞಃ ಸ್ವರ್ಗಶ್ಚ ಸ್ಯಾದನಂತರಂ।
01159018c ಯಸ್ಯ ಸ್ಯಾದ್ಧರ್ಮವಿದ್ವಾಗ್ಮೀ ಪುರೋಧಾಃ ಶೀಲವಾಂಶುಚಿಃ।।

ಶೀಲವಂತ, ಶುಚಿ, ವಾಗ್ಮಿ ಮತ್ತು ಧರ್ಮವಿದ ಪುರೋಹಿತನನ್ನು ಪಡೆದಿದ್ದ ರಾಜನಿಗೆ ಇಲ್ಲಿ ಜಯ ಮತ್ತು ನಂತರ ಸ್ವರ್ಗವು ನಿಶ್ಚಯವಾದದ್ದು.

01159019a ಲಾಭಂ ಲಬ್ಧುಮಲಬ್ಧಂ ಹಿ ಲಬ್ಧಂ ಚ ಪರಿರಕ್ಷಿತುಂ।
01159019c ಪುರೋಹಿತಂ ಪ್ರಕುರ್ವೀತ ರಾಜಾ ಗುಣಸಮನ್ವಿತಂ।।

ಅಲಬ್ಧವನ್ನು ಪಡೆಯಲು ಮತ್ತು ಪಡೆದುದನ್ನು ಪರಿರಕ್ಷಿಸಲು ರಾಜನು ಗುಣಸಮನ್ವಿತ ಪುರೋಹಿತನನ್ನು ಇಟ್ಟುಕೊಳ್ಳಬೇಕು.

01159020a ಪುರೋಹಿತಮತೇ ತಿಷ್ಠೇದ್ಯ ಇಚ್ಛೇತ್ಪೃಥಿವೀಂ ನೃಪಃ।
01159020c ಪ್ರಾಪ್ತುಂ ಮೇರುವರೋತ್ತಂಸಾಂ ಸರ್ವಶಃ ಸಾಗರಾಂಬರಾಂ।।

ಪುರೋಹಿತನ ಸಲಹೆಯಂತೆಯೇ ನಡೆದುಕೊಂಡರೆ ನೃಪನು ಮೇರುವರೋತ್ತಂಸೆ ಸಾಗರಾಂಬರೆ ಸರ್ವ ಪೃಥ್ವಿಯನ್ನೂ ಹೊಂದಲು ಇಚ್ಛಿಸಬಹುದು.

01159021a ನ ಹಿ ಕೇವಲಶೌರ್ಯೇಣ ತಾಪತ್ಯಾಭಿಜನೇನ ಚ।
01159021c ಜಯೇದಬ್ರಾಹ್ಮಣಃ ಕಶ್ಚಿದ್ಭೂಮಿಂ ಭೂಮಿಪತಿಃ ಕ್ವ ಚಿತ್।।

ತಾಪತ್ಯ! ಅಬ್ರಾಹ್ಮಣ ಭೂಮಿಪತಿಯು ಕೇವಲ ಶೌರ್ಯದಿಂದ ಅಥವಾ ಉತ್ತಮ ಜನ್ಮದಿಂದ ಎಂದೂ ಯಾವುದೇ ರೀತಿಯಲ್ಲಿಯೂ ಭೂಮಿಯನ್ನು ಜಯಿಸಲು ಶಕ್ಯನಾಗಲಾರ.

01159022a ತಸ್ಮಾದೇವಂ ವಿಜಾನೀಹಿ ಕುರೂಣಾಂ ವಂಶವರ್ಧನ।
01159022c ಬ್ರಾಹ್ಮಣಪ್ರಮುಖಂ ರಾಜ್ಯಂ ಶಕ್ಯಂ ಪಾಲಯಿತುಂ ಚಿರಂ।।

ಕುರುವಂಶವರ್ಧನ! ಆದುದರಿಂದ ಬ್ರಾಹ್ಮಣಪ್ರಮುಖ ರಾಜ್ಯವನ್ನು ಚಿರವಾಗಿ ಪಾಲಿಸಲು ಸಾಧ್ಯ ಎನ್ನುವುದನ್ನು ತಿಳಿದುಕೋ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ಗಂಧರ್ವಪರಾಭವೇ ಏಕೋನಷಷ್ಟ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ಗಂಧರ್ವಪರಾಭವದಲ್ಲಿ ನೂರಾಐವತ್ತೊಂಭತ್ತನೆಯ ಅಧ್ಯಾಯವು.