ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಚೈತ್ರರಥ ಪರ್ವ
ಅಧ್ಯಾಯ 157
ಸಾರ
ವ್ಯಾಸನು ಪಾಂಡವರಿಗೆ ದ್ರೌಪದಿಯ ಪೂರ್ವ ಜನ್ಮದ ವೃತ್ತಾಂತವನ್ನು ಹೇಳುವುದು (1-13). ಅವಳು ಪಾಂಡವರ ಪತ್ನಿಯಾಗುತ್ತಾಳೆಂದು ಹೇಳಿ ಹೊರಟುಹೋದುದು (14-15).
01157001 ವೈಶಂಪಾಯನ ಉವಾಚ।
01157001a ವಸತ್ಸು ತೇಷು ಪ್ರಚ್ಛನ್ನಂ ಪಾಂಡವೇಷು ಮಹಾತ್ಮಸು।
01157001c ಆಜಗಾಮಾಥ ತಾನ್ದ್ರಷ್ಟುಂ ವ್ಯಾಸಃ ಸತ್ಯವತೀಸುತಃ।।
ವೈಶಂಪಾಯನನು ಹೇಳಿದನು: “ಮಹಾತ್ಮ ಪಾಂಡವರು ಅಲ್ಲಿ ಪ್ರಚ್ಛನ್ನರಾಗಿ ವಾಸಿಸುತ್ತಿದ್ದಾಗ ಅವರನ್ನು ನೋಡಲು ಸತ್ಯವತೀಸುತ ವ್ಯಾಸನು ಬಂದಿದ್ದನು.
01157002a ತಮಾಗತಮಭಿಪ್ರೇಕ್ಷ್ಯ ಪ್ರತ್ಯುದ್ಗಮ್ಯ ಪರಂತಪಾಃ।
01157002c ಪ್ರಣಿಪತ್ಯಾಭಿವಾದ್ಯೈನಂ ತಸ್ಥುಃ ಪ್ರಾಂಜಲಯಸ್ತದಾ।।
ಅವನು ಆಗಮಿಸುತ್ತಿರುವುದನ್ನು ನೋಡಿದ ಪರಂತಪರು ಅವನನ್ನು ಭೆಟ್ಟಿಯಾಗಲು ಮೇಲೆದ್ದು ಕೈಗಳನ್ನು ಜೋಡಿಸಿ ಅಭಿವಂದಿಸಿ ಅವನ ಎದಿರು ನಿಂತುಕೊಂಡರು.
01157003a ಸಮನುಜ್ಞಾಪ್ಯ ತಾನ್ಸರ್ವಾನಾಸೀನಾನ್ಮುನಿರಬ್ರವೀತ್।
01157003c ಪ್ರಸನ್ನಃ ಪೂಜಿತಃ ಪಾರ್ಥೈಃ ಪ್ರೀತಿಪೂರ್ವಮಿದಂ ವಚಃ।।
ಪಾರ್ಥರಿಂದ ಪೂಜಿತನಾಗಿ ಪ್ರಸನ್ನನಾದ ಮುನಿಯು ಅವರೆಲ್ಲರಿಗೂ ಸುಖಾಸೀನರಾಗಲು ಅನುಜ್ಞೆಯನ್ನಿತ್ತು ಈ ಪ್ರೀತಿಪೂರ್ವಕ ಮಾತುಗಳನ್ನಾಡಿದನು: 01157004a ಅಪಿ ಧರ್ಮೇಣ ವರ್ತಧ್ವಂ ಶಾಸ್ತ್ರೇಣ ಚ ಪರಂತಪಾಃ।
01157004c ಅಪಿ ವಿಪ್ರೇಷು ವಃ ಪೂಜಾ ಪೂಜಾರ್ಹೇಷು ನ ಹೀಯತೇ।।
“ಪರಂತಪರೇ! ನೀವು ಧರ್ಮ ಮತ್ತು ಶಾಸ್ತ್ರಗಳ ಪ್ರಕಾರವೇ ನಡೆದುಕೊಂಡು ಬಂದಿದ್ದೀರಾ? ಪೂಜಾರ್ಹ ವಿಪ್ರರಿಗೆ ಬೇಕಾದಷ್ಟು ಗೌರವ ನೀಡುತ್ತಿದ್ದೀರಾ?”
01157005a ಅಥ ಧರ್ಮಾರ್ಥವದ್ವಾಕ್ಯಮುಕ್ತ್ವಾ ಸ ಭಗವಾನೃಷಿಃ।
01157005c ವಿಚಿತ್ರಾಶ್ಚ ಕಥಾಸ್ತಾಸ್ತಾಃ ಪುನರೇವೇದಮಬ್ರವೀತ್।।
ಈ ಧರ್ಮಾರ್ಥ ಮಾತುಗಳನ್ನಾಡಿದ ಭಗವಾನ್ ಋಷಿಯು ವಿಚಿತ್ರ ಕಥೆಗಳನ್ನು ಹೇಳುತ್ತಾ ಪುನಃ ಈ ಮಾತುಗಳನ್ನಾಡಿದನು.
01157006a ಆಸೀತ್ತಪೋವನೇ ಕಾ ಚಿದೃಷೇಃ ಕನ್ಯಾ ಮಹಾತ್ಮನಃ।
01157006c ವಿಲಗ್ನಮಧ್ಯಾ ಸುಶ್ರೋಣೀ ಸುಭ್ರೂಃ ಸರ್ವಗುಣಾನ್ವಿತಾ।।
“ಹಿಂದೆ ಒಮ್ಮೆ ತಪೋವನದಲ್ಲಿ ತೆಳು ಸೊಂಟದ, ಸುಶ್ರೋಣಿ, ಸುಂದರ ಹುಬ್ಬಿನ, ಸರ್ವಗುಣಾನ್ವಿತೆ ಮಹಾತ್ಮ ಋಷಿಯ ಮಗಳೋರ್ವಳು ವಾಸಿಸುತ್ತಿದ್ದಳು.
01157007a ಕರ್ಮಭಿಃ ಸ್ವಕೃತೈಃ ಸಾ ತು ದುರ್ಭಗಾ ಸಮಪದ್ಯತ।
01157007c ನಾಧ್ಯಗಚ್ಛತ್ಪತಿಂ ಸಾ ತು ಕನ್ಯಾ ರೂಪವತೀ ಸತೀ।।
ಅವಳು ಮಾಡಿದ ಕರ್ಮಗಳಿಂದಾಗಿ ಅವಳು ದುರ್ಭಗಳಾಗಿದ್ದಳು. ರೂಪವತಿಯಾಗಿದ್ದರೂ ಆ ಸತಿ ಕನ್ಯೆಯು ಪತಿಯನ್ನು ಪಡೆಯಲಿಲ್ಲ.
01157008a ತಪಸ್ತಪ್ತುಮಥಾರೇಭೇ ಪತ್ಯರ್ಥಮಸುಖಾ ತತಃ।
01157008c ತೋಷಯಾಮಾಸ ತಪಸಾ ಸಾ ಕಿಲೋಗ್ರೇಣ ಶಂಕರಂ।।
ಅಸುಖಿಯಾದ ಅವಳು ಪತಿಯನ್ನು ಪಡೆಯಲೋಸುಗ ತಪಸ್ಸನ್ನು ಪ್ರಾರಂಭಿಸಿದಳು. ಅವಳು ಉಗ್ರ ತಪಸ್ಸಿನಿಂದ ಶಂಕರನನ್ನು ತೃಪ್ತಿಪಡಿಸಿದಳು.
01157009a ತಸ್ಯಾಃ ಸ ಭಗವಾಂಸ್ತುಷ್ಟಸ್ತಾಮುವಾಚ ತಪಸ್ವಿನೀಂ।
01157009c ವರಂ ವರಯ ಭದ್ರಂ ತೇ ವರದೋಽಸ್ಮೀತಿ ಭಾಮಿನಿ।।
ಸಂತುಷ್ಟ ಭಗವಾನನು ಆ ತಪಸ್ವಿನಿಗೆ ಹೇಳಿದನು: “ಭದ್ರೇ! ಭಾಮಿನೀ! ವರವನ್ನು ನೀಡುತ್ತೇನೆ. ಬೇಕಾದ ವರವನ್ನು ಕೇಳಿಕೋ.”
01157010a ಅಥೇಶ್ವರಮುವಾಚೇದಮಾತ್ಮನಃ ಸಾ ವಚೋ ಹಿತಂ।
01157010c ಪತಿಂ ಸರ್ವಗುಣೋಪೇತಮಿಚ್ಛಾಮೀತಿ ಪುನಃ ಪುನಃ।।
ಆಗ ಅವಳು “ಸರ್ವಗುಣೋಪೇತ ಪತಿಯನ್ನು ಬಯಸುತ್ತೇನೆ!” ಎಂಬ ಅತ್ಮಹಿತ ಮಾತುಗಳನ್ನು ಪುನಃ ಪುನಃ ಈಶ್ವರನಲ್ಲಿ ಹೇಳಿಕೊಂಡಳು.
01157011a ತಾಮಥ ಪ್ರತ್ಯುವಾಚೇದಮೀಶಾನೋ ವದತಾಂ ವರಃ।
01157011c ಪಂಚ ತೇ ಪತಯೋ ಭದ್ರೇ ಭವಿಷ್ಯಂತೀತಿ ಶಂಕರಃ।।
ಮಾತುನಾಡುವವರಲ್ಲಿ ಶ್ರೇಷ್ಠ ಈಶಾನ ಶಂಕರನು “ಭದ್ರೇ! ನಿನಗೆ ಐವರು ಪತಿಗಳಾಗುತ್ತಾರೆ!” ಎಂದು ಉತ್ತರಿಸಿದನು.
01157012a ಪ್ರತಿಬ್ರುವಂತೀಮೇಕಂ ಮೇ ಪತಿಂ ದೇಹೀತಿ ಶಂಕರಂ।
01157012c ಪುನರೇವಾಬ್ರವೀದ್ದೇವ ಇದಂ ವಚನಮುತ್ತಮಂ।।
“ನನಗೆ ಒಬ್ಬನೇ ಪತಿಯನ್ನು ಕೊಡು!” ಎಂದು ಪುನಃ ಕೇಳಿಕೊಂಡಾಗ ದೇವ ಶಂಕರನು ಈ ಮಾತುಗಳನ್ನಾಡಿದನು:
01157013a ಪಂಚಕೃತ್ವಸ್ತ್ವಯಾ ಉಕ್ತಃ ಪತಿಂ ದೇಹೀತ್ಯಹಂ ಪುನಃ।
01157013c ದೇಹಮನ್ಯಂ ಗತಾಯಾಸ್ತೇ ಯಥೋಕ್ತಂ ತದ್ ಭವಿಷ್ಯತಿ।।
“ನೀನು ಪುನಃ ಪುನಃ ಐದು ಬಾರಿ ಪತಿಯನ್ನು ಕೊಡು ಎಂದು ಕೇಳಿಕೊಂಡಿದ್ದೀಯೆ. ನೀನು ಅನ್ಯ ದೇಹವನ್ನು ಹೊಂದಿದಾಗ ನೀನು ಕೇಳಿಕೊಂಡಂತೆಯೇ ಆಗುತ್ತದೆ.”
01157014a ದ್ರುಪದಸ್ಯ ಕುಲೇ ಜಾತಾ ಕನ್ಯಾ ಸಾ ದೇವರೂಪಿಣೀ।
01157014c ನಿರ್ದಿಷ್ಟಾ ಭವತಾಂ ಪತ್ನೀ ಕೃಷ್ಣಾ ಪಾರ್ಷತ್ಯನಿಂದಿತಾ।।
ಅದೇ ಕನ್ಯೆಯು ದ್ರುಪದ ಕುಲದಲ್ಲಿ ದೇವರೂಪಿಣಿಯಾಗಿ ಹುಟ್ಟಿದ್ದಾಳೆ. ಆ ಅನಿಂದಿತೆ ಪಾರ್ಷತಿ ಕೃಷ್ಣೆಯು ನಿರ್ದಿಷ್ಠವಾಗಿಯು ನಿಮ್ಮ ಪತ್ನಿಯಾಗುತ್ತಾಳೆ.
01157015a ಪಾಂಚಾಲನಗರಂ ತಸ್ಮಾತ್ಪ್ರವಿಶಧ್ವಂ ಮಹಾಬಲಾಃ।
01157015c ಸುಖಿನಸ್ತಾಮನುಪ್ರಾಪ್ಯ ಭವಿಷ್ಯಥ ನ ಸಂಶಯಃ।।
ಮಹಾಬಲರೇ! ಆದುದರಿಂದ ಪಾಂಚಾಲನಗರವನ್ನು ಪ್ರವೇಶಿಸಿ. ಅವಳನ್ನು ಪಡೆದ ಭವಿಷ್ಯದಲ್ಲಿ ನೀವು ಸುಖಿಗಳಾಗುತ್ತೀರಿ ಎನ್ನುವುದರಲ್ಲಿ ಸಂಶಯವಿಲ್ಲ.”
01157016a ಏವಮುಕ್ತ್ವಾ ಮಹಾಭಾಗಃ ಪಾಂಡವಾನಾಂ ಪಿತಾಮಹಃ।
01157016c ಪಾರ್ಥಾನಾಮಂತ್ರ್ಯ ಕುಂತೀಂ ಚ ಪ್ರಾತಿಷ್ಠತ ಮಹಾತಪಾಃ।।
ಪಾಂಡವ ಪಿತಾಮಹ ಮಹಾಭಾಗ ಪ್ರತಿಷ್ಠಿತ ಮಹಾತಪಸ್ವಿಯು ಹೀಗೆ ಹೇಳಿ ಕುಂತಿ ಮತ್ತು ಪಾರ್ಥರಿಂದ ಬೀಳ್ಕೊಂಡನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ದ್ರೌಪದೀಜನ್ಮಾಂತರಕಥನೇ ಸಪ್ತಪಂಚಾದಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ದ್ರೌಪದೀಜನ್ಮಾಂತರಕಥನದಲ್ಲಿ ನೂರಾಐವತ್ತೇಳನೆಯ ಅಧ್ಯಾಯವು.