156 ಪಾಂಚಾಲದೇಶಯಾತ್ರಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಚೈತ್ರರಥ ಪರ್ವ

ಅಧ್ಯಾಯ 156

ಸಾರ

ಕುಂತಿ ಮತ್ತು ಪಾಂಡವರು ಪಾಂಚಾಲನಗರಿಯ ಕಡೆ ಹೊರಡುವುದು (1-11).

01156001 ವೈಶಂಪಾಯನ ಉವಾಚ।
01156001a ಏತಚ್ಛೃತ್ವಾ ತು ಕೌಂತೇಯಾಃ ಶಲ್ಯವಿದ್ಧಾ ಇವಾಭವನ್।
01156001c ಸರ್ವೇ ಚಾಸ್ವಸ್ಥಮನಸೋ ಬಭೂವುಸ್ತೇ ಮಹಾರಥಾಃ।।

ವೈಶಂಪಾಯನನು ಹೇಳಿದನು: “ಇದನ್ನು ಕೇಳಿದ ಮಹಾರಥಿ ಕೌಂತೇಯರು ಎಲ್ಲರೂ ಈಟಿ ಚುಚ್ಚಿದಂತವರಾಗಿ ಅಸ್ವಸ್ಥಮನಸ್ಕರಾದರು.

01156002a ತತಃ ಕುಂತೀ ಸುತಾನ್ದೃಷ್ಟ್ವಾ ವಿಭ್ರಾಂತಾನ್ಗತಚೇತಸಃ।
01156002c ಯುಧಿಷ್ಠಿರಮುವಾಚೇದಂ ವಚನಂ ಸತ್ಯವಾದಿನೀ।।

ವಿಭ್ರಾಂತರಾಗಿ ಗತಚೇತಸರಾದ ಮಕ್ಕಳನ್ನು ನೋಡಿ ಸತ್ಯವಾದಿನೀ ಕುಂತಿಯು ಯುಧಿಷ್ಠಿರನಿಗೆ ಹೇಳಿದಳು:

01156003a ಚಿರರಾತ್ರೋಷಿತಾಃ ಸ್ಮೇಹ ಬ್ರಾಹ್ಮಣಸ್ಯ ನಿವೇಶನೇ।
01156003c ರಮಮಾಣಾಃ ಪುರೇ ರಮ್ಯೇ ಲಬ್ಧಭೈಕ್ಷಾ ಯುಧಿಷ್ಠಿರ।।

“ಯುಧಿಷ್ಠಿರ! ಈ ಬ್ರಾಹ್ಮಣನ ಮನೆಯಲ್ಲಿದ್ದುಕೊಂಡು ಈ ರಮ್ಯ ಪುರದಲ್ಲಿ ಭಿಕ್ಷೆಬೇಡಿಕೊಂಡು ನಾವು ಬಹಳ ದಿನಗಳನ್ನು ಸುಖವಾಗಿ ಕಳೆದಿದ್ದೇವೆ.

01156004a ಯಾನೀಹ ರಮಣೀಯಾನಿ ವನಾನ್ಯುಪವನಾನಿ ಚ।
01156004c ಸರ್ವಾಣಿ ತಾನಿ ದೃಷ್ಟಾನಿ ಪುನಃ ಪುನರರಿಂದಮ।।

ಅರಿಂದಮ! ಇಲ್ಲಿರುವ ರಮಣೀಯ ವನ ಉಪವನಗಳೆಲ್ಲವನ್ನೂ ಪುನಃ ಪುನಃ ನೋಡಿಯಾಗಿದೆ.

01156005a ಪುನರ್ದೃಷ್ಟಾನಿ ತಾನ್ಯೇವ ಪ್ರೀಣಯಂತಿ ನ ನಸ್ತಥಾ।
01156005c ಭೈಕ್ಷಂ ಚ ನ ತಥಾ ವೀರ ಲಭ್ಯತೇ ಕುರುನಂದನ।।

ಅವುಗಳನ್ನೇ ಪುನಃ ನೋಡಲು ಮನಸ್ಸಾಗಲಿಕ್ಕಿಲ್ಲ. ವೀರ ಕುರುನಂದನ! ನಮಗೆ ಇಲ್ಲಿ ಇನ್ನು ಭಿಕ್ಷವೂ ಅಷ್ಟೊಂದು ದೊರೆಯಲಿಕ್ಕಿಲ್ಲ.

01156006a ತೇ ವಯಂ ಸಾಧು ಪಾಂಚಾಲಾನ್ಗಚ್ಛಾಮ ಯದಿ ಮನ್ಯಸೇ।
01156006c ಅಪೂರ್ವದರ್ಶನಂ ತಾತ ರಮಣೀಯಂ ಭವಿಷ್ಯತಿ।।

ಮಗು! ನೀನು ಒಪ್ಪಿಕೊಂಡರೆ ನಾವು ಅಪೂರ್ವದರ್ಶನವೂ ರಮಣೀಯವೂ ಆದ ಪಾಂಚಾಲರಲ್ಲಿಗೆ ಹೋಗುವುದು ಒಳ್ಳೆಯದೆನಿಸುತ್ತದೆ.

01156007a ಸುಭಿಕ್ಷಾಶ್ಚೈವ ಪಾಂಚಾಲಾಃ ಶ್ರೂಯಂತೇ ಶತ್ರುಕರ್ಶನ।
01156007c ಯಜ್ಞಸೇನಶ್ಚ ರಾಜಾಸೌ ಬ್ರಹ್ಮಣ್ಯ ಇತಿ ಶುಶ್ರುಮಃ।।

ಶತ್ರುಕರ್ಶನ! ಪಾಂಚಾಲರಲ್ಲಿ ಸುಭಿಕ್ಷವಾಗಿದೆ ಎಂದು ಕೇಳಿದ್ದೇನೆ. ರಾಜ ಯಜ್ಞಸೇನನು ಬ್ರಹ್ಮಣ್ಯ ಎಂದೂ ಕೇಳಿದ್ದೇನೆ.

01156008a ಏಕತ್ರ ಚಿರವಾಸೋ ಹಿ ಕ್ಷಮೋ ನ ಚ ಮತೋ ಮಮ।
01156008c ತೇ ತತ್ರ ಸಾಧು ಗಚ್ಛಾಮೋ ಯದಿ ತ್ವಂ ಪುತ್ರ ಮನ್ಯಸೇ।।

ಒಂದೇ ಸ್ಥಳದಲ್ಲಿ ಬಹಳ ಕಾಲ ವಾಸಮಾಡುವುದು ಸರಿಯಲ್ಲವೆಂದು ನನ್ನ ಅಭಿಪ್ರಾಯ. ಪುತ್ರ! ನೀನು ಒಪ್ಪಿಕೊಳ್ಳುವೆಯಾದರೆ ನಾವು ಅಲ್ಲಿಗೆ ಹೋಗುವುದು ನಮಗೆ ಒಳ್ಳೆಯದಾಗುತ್ತದೆ.”

01156009 ಯುಧಿಷ್ಠಿರ ಉವಾಚ।
01156009a ಭವತ್ಯಾ ಯನ್ಮತಂ ಕಾರ್ಯಂ ತದಸ್ಮಾಕಂ ಪರಂ ಹಿತಂ।
01156009c ಅನುಜಾಂಸ್ತು ನ ಜಾನಾಮಿ ಗಚ್ಛೇಯುರ್ನೇತಿ ವಾ ಪುನಃ।।

ಯುಧಿಷ್ಠಿರನು ಹೇಳಿದನು: “ನೀನು ಬಯಸಿದ ಕಾರ್ಯವು ನಮಗೆ ಪರಮಹಿತವಾಗುತ್ತದೆ. ಆದರೆ ನನ್ನ ಅನುಜರು ಹೋಗಲು ಬಯಸುತ್ತಾರೋ ಇಲ್ಲವೋ ಗೊತ್ತಿಲ್ಲ.””

01156010 ವೈಶಂಪಾಯನ ಉವಾಚ।
01156010a ತತಃ ಕುಂತೀ ಭೀಮಸೇನಮರ್ಜುನಂ ಯಮಜೌ ತಥಾ।
01156010c ಉವಾಚ ಗಮನಂ ತೇ ಚ ತಥೇತ್ಯೇವಾಬ್ರುವಂಸ್ತದಾ।।

ವೈಶಂಪಾಯನನು ಹೇಳಿದನು: “ಆಗ ಕುಂತಿಯು ಹೊರಡುವುದರ ಕುರಿತು ಭೀಮಸೇನ, ಅರ್ಜುನ ಮತ್ತು ಯಮಳರಿಗೆ ಹೇಳಿದಾಗ, ಅವರೆಲ್ಲರೂ ಹಾಗೆಯೇ ಆಗಲಿ ಎಂದರು.

01156011a ತತ ಆಮಂತ್ರ್ಯ ತಂ ವಿಪ್ರಂ ಕುಂತೀ ರಾಜನ್ಸುತೈಃ ಸಹ।
01156011c ಪ್ರತಸ್ಥೇ ನಗರೀಂ ರಮ್ಯಾಂ ದ್ರುಪದಸ್ಯ ಮಹಾತ್ಮನಃ।।

ರಾಜನ್! ಆ ವಿಪ್ರನನ್ನು ಬೀಳ್ಕೊಂಡು ಪುತ್ರರ ಸಹಿತ ಕುಂತಿಯು ಮಹಾತ್ಮ ದ್ರುಪದನ ರಮ್ಯ ನಗರಿಗೆ ಹೊರಟಳು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ಪಾಂಚಾಲದೇಶಯಾತ್ರಾಯಾಂ ಷಟ್‌ಪಂಚಾದಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ಪಾಂಚಾಲದೇಶಯಾತ್ರೆಯಲ್ಲಿ ನೂರಾಐವತ್ತಾರನೆಯ ಅಧ್ಯಾಯವು.