ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಚೈತ್ರರಥ ಪರ್ವ
ಅಧ್ಯಾಯ 155
ಸಾರ
ಅಪಮಾನಿತ ದ್ರುಪದನು ದ್ರೋಣನನ್ನು ಕೊಲ್ಲಬಲ್ಲ ಮಗನನ್ನು ಪಡೆಯಲು ಸಹಾಯ ಮಾಡುವ ಬ್ರಾಹ್ಮಣರನ್ನು ಹುಡುಕಿ, ಯಾಜ-ಉಪಯಾಜರನ್ನು ಒಪ್ಪಿಸಿದುದು (1-30). ಯಜ್ಞಕುಂಡದಿಂದ ಧೃಷ್ಟದ್ಯುಮ್ನ – ದ್ರೌಪದಿಯರು ಮೇಲೆದ್ದು ಬಂದುದು, ಅಶರೀರವಾಣಿ (31-46). ಮಕ್ಕಳಿಗೆ ಹೆಸರುಗಳನ್ನಿಟ್ಟಿದ್ದುದು (47-52).
01155001 ಬ್ರಾಹ್ಮಣ ಉವಾಚ।
01155001a ಅಮರ್ಷೀ ದ್ರುಪದೋ ರಾಜಾ ಕರ್ಮಸಿದ್ಧಾನ್ದ್ವಿಜರ್ಷಭಾನ್।
01155001c ಅನ್ವಿಚ್ಛನ್ಪರಿಚಕ್ರಾಮ ಬ್ರಾಹ್ಮಣಾವಸಥಾನ್ಬಹೂನ್।।
ಬ್ರಾಹ್ಮಣನು ಹೇಳಿದನು: “ಸೇಡಿನ ಮನಸ್ಸುಳ್ಳ ರಾಜ ದ್ರುಪದನು ಕರ್ಮಸಿದ್ಧ ದ್ವಿಜರ್ಷಭರನ್ನು ಹುಡುಕುತ್ತಾ ಹಲವಾರು ಬ್ರಾಹ್ಮಣ ವಾಸಸ್ಥಳಗಳಿಗೆ ಅಲೆದಾಡಿದನು.
01155002a ಪುತ್ರಜನ್ಮ ಪರೀಪ್ಸನ್ವೈ ಶೋಕೋಪಹತಚೇತನಃ।
01155002c ನಾಸ್ತಿ ಶ್ರೇಷ್ಠಂ ಮಮಾಪತ್ಯಮಿತಿ ನಿತ್ಯಮಚಿಂತಯತ್।।
ಶೋಕದಿಂದ ಚೇತನವನ್ನೇ ಕಳೆದುಕೊಂಡು ಪುತ್ರಜನ್ಮವನ್ನು ಬಯಸಿ, “ನನಗೆ ಶ್ರೇಷ್ಠ ಮಕ್ಕಳಿಲ್ಲ!” ಎಂದು ನಿತ್ಯವೂ ಚಿಂತಿಸುತ್ತಿದ್ದನು.
01155003a ಜಾತಾನ್ಪುತ್ರಾನ್ಸ ನಿರ್ವೇದಾದ್ಧಿಗ್ಬಧೂನಿತಿ ಚಾಬ್ರವೀತ್।
01155003c ನಿಃಶ್ವಾಸಪರಮಶ್ಚಾಸೀದ್ದ್ರೋಣಂ ಪ್ರತಿಚಿಕೀರ್ಷಯಾ।।
ಹುಟ್ಟಿದ್ದ ಪುತ್ರರನ್ನು ವೇದನೆಯಿಂದ “ಈ ಬಂಧುಗಳಿಗೆ ಧಿಕ್ಕಾರ!” ಎಂದು ಹೇಳಿದನು. ದ್ರೋಣನ ವಿರುದ್ಧ ಪ್ರತೀಕಾರವನ್ನು ಬಯಸುತ್ತಿದ್ದ ಅವನು ಯಾವಾಗಲೂ ನಿಟ್ಟುಸಿರು ಬಿಡುತ್ತಿದ್ದನು.
01155004a ಪ್ರಭಾವಂ ವಿನಯಂ ಶಿಕ್ಷಾಂ ದ್ರೋಣಸ್ಯ ಚರಿತಾನಿ ಚ।
01155004c ಕ್ಷಾತ್ರೇಣ ಚ ಬಲೇನಾಸ್ಯ ಚಿಂತಯನ್ನಾನ್ವಪದ್ಯತ।
01155004e ಪ್ರತಿಕರ್ತುಂ ನೃಪಶ್ರೇಷ್ಠೋ ಯತಮಾನೋಽಪಿ ಭಾರತ।।
ಭಾರತ! ಅ ನೃಪಶ್ರೇಷ್ಠನು ಎಷ್ಟೇ ಪ್ರಯತ್ನಪಟ್ಟರೂ ದ್ರೋಣನ ವಿನಯ, ಶಿಕ್ಷಣ ಮತ್ತು ಚಾರಿತ್ರಗಳ ಪ್ರಭಾವವನ್ನು ತನ್ನ ಕ್ಷತ್ರಿಯ ಬಲದಿಂದ ಹೇಗೆ ಹಿಂದಾಗಿಸಬೇಕು ಎನ್ನುವುದನ್ನು ಕಾಣಲಾರದೇ ಹೋದನು.
01155005a ಅಭಿತಃ ಸೋಽಥ ಕಲ್ಮಾಷೀಂ ಗಂಗಾಕೂಲೇ ಪರಿಭ್ರಮನ್।
01155005c ಬ್ರಾಹ್ಮಣಾವಸಥಂ ಪುಣ್ಯಮಾಸಸಾದ ಮಹೀಪತಿಃ।।
ಹೀಗೆ ಗಂಗಾತೀರದಲ್ಲಿ ಅಲೆದಾಡುತ್ತಾ ಮಹೀಪತಿಯು ಕಲ್ಮಾಷಿಯ ಬಳಿಯಲ್ಲಿ ಬ್ರಾಹ್ಮಣರು ವಾಸಿಸುತ್ತಿದ್ದ ಪುಣ್ಯಸ್ಥಳವೊಂದಕ್ಕೆ ಬಂದನು.
01155006a ತತ್ರ ನಾಸ್ನಾತಕಃ ಕಶ್ಚಿನ್ನ ಚಾಸೀದವ್ರತೀ ದ್ವಿಜಃ।
01155006c ತಥೈವ ನಾಮಹಾಭಾಗಃ ಸೋಽಪಶ್ಯತ್ಸಂಶಿತವ್ರತೌ।।
ಅಲ್ಲಿ ಸ್ನಾತಕರಲ್ಲದ, ವ್ರತನಿರತರಲ್ಲದ ದ್ವಿಜರು ಯಾರೂ ಇರಲಿಲ್ಲ. ಅಲ್ಲಿ ಆ ಮಹಾಭಾಗನು ಇಬ್ಬರು ಸಂಶಿತವ್ರತ ಬ್ರಾಹ್ಮಣರನ್ನು ಕಂಡನು.
01155007a ಯಾಜೋಪಯಾಜೌ ಬ್ರಹ್ಮರ್ಷೀ ಶಾಮ್ಯಂತೌ ಪೃಷತಾತ್ಮಜಃ।
01155007c ಸಂಹಿತಾಧ್ಯಯನೇ ಯುಕ್ತೌ ಗೋತ್ರತಶ್ಚಾಪಿ ಕಾಶ್ಯಪೌ।।
ಪೃಷತಾತ್ಮಜನು ಅಲ್ಲಿ ಯಾಜ ಮತ್ತು ಉಪಯಾಜರೆಂಬ ಇಬ್ಬರು ಸಂಹಿತಾಧ್ಯಯನ ಯುಕ್ತ ಕಾಶ್ಯಪ ಗೋತ್ರೋತ್ಪನ್ನ ಬ್ರಹ್ಮರ್ಷಿಗಳನ್ನು ಕಂಡನು.
01155008a ತಾರಣೇ ಯುಕ್ತರೂಪೌ ತೌ ಬ್ರಾಹ್ಮಣಾವೃಷಿಸತ್ತಮೌ।
01155008c ಸ ತಾವಾಮಂತ್ರಯಾಮಾಸ ಸರ್ವಕಾಮೈರತಂದ್ರಿತಃ।।
ಪಾರುಮಾಡಲು ಯುಕ್ತರೂಪ ಆ ಬ್ರಾಹ್ಮಣಋಷಿಸತ್ತಮರನ್ನು ಅವನು ಎಲ್ಲಾ ರೀತಿಯ ಆಸೆಗಳನ್ನು ತೋರಿಸಿ, ಎಡೆಬಿಡದೇ ಆಮಂತ್ರಿಸಿದನು.
01155009a ಬುದ್ಧ್ವಾ ತಯೋರ್ಬಲಂ ಬುದ್ಧಿಂ ಕನೀಯಾಂಸಮುಪಹ್ವರೇ।
01155009c ಪ್ರಪೇದೇ ಚಂದಯನ್ಕಾಮೈರುಪಯಾಜಂ ಧೃತವ್ರತಂ।।
ತನ್ನ ಬಲ ಮತ್ತು ಬುದ್ಧಿಯನ್ನು ಅವರಮೇಲೆ ಹಾಕಿ ತಾನು ದುರ್ಬಲನಾಗುತ್ತಿದ್ದೇನೆಂದು ತಿಳಿದ ಅವನು ಧೃತವ್ರತ ಉಪಯಾಜನನ್ನು ಸುತ್ತು ಬಳಸಿ ಆಸೆತೋರಿಸಿ ಗೆಲ್ಲಲು ಪ್ರಯತ್ನಿಸಿದನು.
01155010a ಪಾದಶುಶ್ರೂಷಣೇ ಯುಕ್ತಃ ಪ್ರಿಯವಾಕ್ಸರ್ವಕಾಮದಃ।
01155010c ಅರ್ಹಯಿತ್ವಾ ಯಥಾನ್ಯಾಯಮುಪಯಾಜಮುವಾಚ ಸಃ।।
ಅವನ ಪಾದಶುಶ್ರೂಷಣೆಯಲ್ಲಿ ನಿರತನಾಗಿ, ಪ್ರಿಯಮಾತುಗಳನ್ನಾಡುತ್ತಾ, ಬೇಕಾದುದೆಲ್ಲವನ್ನೂ ಕೊಡುತ್ತಾ, ನ್ಯಾಯದಂತೆ ನಡೆದುಕೊಳ್ಳುತ್ತಾ ಉಪಯಾಜನಿಗೆ ಹೇಳಿದನು:
01155011a ಯೇನ ಮೇ ಕರ್ಮಣಾ ಬ್ರಹ್ಮನ್ಪುತ್ರಃ ಸ್ಯಾದ್ದ್ರೋಣಮೃತ್ಯವೇ।
01155011c ಉಪಯಾಜ ಕೃತೇ ತಸ್ಮಿನ್ಗವಾಂ ದಾತಾಸ್ಮಿ ತೇಽರ್ಬುದಂ।।
01155012a ಯದ್ವಾ ತೇಽನ್ಯದ್ದ್ವಿಜಶ್ರೇಷ್ಠ ಮನಸಃ ಸುಪ್ರಿಯಂ ಭವೇತ್।
01155012c ಸರ್ವಂ ತತ್ತೇ ಪ್ರದಾತಾಹಂ ನ ಹಿ ಮೇಽಸ್ತ್ಯತ್ರ ಸಂಶಯಃ।।
“ಬ್ರಾಹ್ಮಣ! ದ್ರೋಣನ ಮೃತ್ಯುವಾಗಬಲ್ಲ ಪುತ್ರನನ್ನು ಪಡೆಯುವುದಕ್ಕೆ ಏನಾದರೂ ಕರ್ಮವಿದೆಯೇ? ಹಾಗೇನಾದರೂ ಇದ್ದರೆ ಅದನ್ನು ನಡೆಸುವುದಕ್ಕೆ ನಾನು ನಿನಗೆ ಎಷ್ಟು ಬೇಕಾದರೂ ಗೋವುಗಳನ್ನು ನೀಡುತ್ತೇನೆ ಅಥವಾ ನಿನ್ನ ಮನಸ್ಸಿಗೆ ಪ್ರಿಯವಾದ ಏನನ್ನೂ ಎಲ್ಲವನ್ನೂ ಕೊಡುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.”
01155013a ಇತ್ಯುಕ್ತೋ ನಾಹಮಿತ್ಯೇವಂ ತಮೃಷಿಃ ಪ್ರತ್ಯುವಾಚ ಹ।
01155013c ಆರಾಧಯಿಷ್ಯನ್ದ್ರುಪದಃ ಸ ತಂ ಪರ್ಯಚರತ್ಪುನಃ।।
“ನಾನು ಮಾಡುವುದಿಲ್ಲ!” ಎಂದು ಆ ಋಷಿಯು ಉತ್ತರಿಸಿದನು. ದ್ರುಪದನು ಅವನನ್ನು ಗೆಲ್ಲಲೋಸುಗ ಪುನಃ ಆರಾಧಿಸುವುದನ್ನು ಮುಂದುವರೆಸಿದನು.
01155014a ತತಃ ಸಂವತ್ಸರಸ್ಯಾಂತೇ ದ್ರುಪದಂ ಸ ದ್ವಿಜೋತ್ತಮಃ।
01155014c ಉಪಯಾಜೋಽಬ್ರವೀದ್ರಾಜನ್ಕಾಲೇ ಮಧುರಯಾ ಗಿರಾ।।
ಒಂದು ವರ್ಷವು ಕಳೆದನಂತರ ಆ ದ್ವಿಜೋತ್ತಮ ಉಪಯಜನು ಒಳ್ಳೆಯ ಸಮಯವನ್ನು ನೋಡಿ ಮಧುರವಾಣಿಯಿಂದ ಹೇಳಿದನು:
01155015a ಜ್ಯೇಷ್ಠೋ ಭ್ರಾತಾ ಮಮಾಗೃಹ್ಣಾದ್ವಿಚರನ್ವನನಿರ್ಝರೇ।
01155015c ಅಪರಿಜ್ಞಾತಶೌಚಾಯಾಂ ಭೂಮೌ ನಿಪತಿತಂ ಫಲಂ।।
“ನನ್ನ ಜ್ಯೇಷ್ಠ ಭ್ರಾತನು ಒಮ್ಮೆ ವನದಲ್ಲಿ ಸಂಚರಿಸುತ್ತಿರುವಾಗ ಭೂಮಿಯ ಮೇಲೆ ಬಿದ್ದಿರುವ ಫಲವೊಂದನ್ನು ಅಶೌಚವೆಂದು ತಿಳಿಯದೇ ಎತ್ತಿಕೊಂಡಿದ್ದನು.
01155016a ತದಪಶ್ಯಮಹಂ ಭ್ರಾತುರಸಾಂಪ್ರತಮನುವ್ರಜನ್।
01155016c ವಿಮರ್ಶಂ ಸಂಕರಾದಾನೇ ನಾಯಂ ಕುರ್ಯಾತ್ಕಥಂ ಚನ।।
ಅವನನ್ನು ಹಿಂಬಾಲಿಸುತ್ತಿದ್ದ ನಾನು ಅಣ್ಣನ ಈ ಅಸಾಂಪ್ರತ ಕ್ರಿಯೆಯನ್ನು ನೋಡಿದೆನು. ಅವನು ಅದನ್ನು ತೆಗೆದುಕೊಳ್ಳುವಾಗ ಯಾವುದೇ ರೀತಿಯ ವಿಮರ್ಷೆಯನ್ನೂ ಮಾಡಲಿಲ್ಲ.
01155017a ದೃಷ್ಟ್ವಾ ಫಲಸ್ಯ ನಾಪಶ್ಯದ್ದೋಷಾ ಯೇಽಸ್ಯಾನುಬಂಧಿಕಾಃ।
01155017c ವಿವಿನಕ್ತಿ ನ ಶೌಚಂ ಯಃ ಸೋಽನ್ಯತ್ರಾಪಿ ಕಥಂ ಭವೇತ್।।
ಫಲವನ್ನು ನೋಡಿದರೂ ಅದಕ್ಕೆ ಹತ್ತಿಕೊಂಡಿದ್ದ ದೋಷಗಳನ್ನು ನೋಡಲಿಲ್ಲ. ಒಂದು ವಿಷಯದಲ್ಲಿ ಶೌಚ ಅಶೌಚಗಳ ಬಗ್ಗೆ ಯೋಚಿಸದಿದ್ದವನು ಇನ್ನೊಂದು ವಿಷಯದ ಕುರಿತು ಏಕೆ ಯೋಚಿಸಿಯಾನು?
01155018a ಸಂಹಿತಾಧ್ಯಯನಂ ಕುರ್ವನ್ವಸನ್ಗುರುಕುಲೇ ಚ ಯಃ।
01155018c ಭೈಕ್ಷಮುಚ್ಛಿಷ್ಟಮನ್ಯೇಷಾಂ ಭುಂಕ್ತೇ ಚಾಪಿ ಸದಾ ಸದಾ।
01155018e ಕೀರ್ತಯನ್ಗುಣಮನ್ನಾನಾಮಘೃಣೀ ಚ ಪುನಃ ಪುನಃ।।
ಸಂಹಿತಾಧ್ಯಯನವನ್ನು ಮಾಡುತ್ತಾ ಗುರುಕುಲದಲ್ಲಿ ವಾಸಿಸುತ್ತಿರುವಾಗಲೂ ಅವನು ಬೇರೆಯವರಿಂದ ಎಂಜಲಾಗಿ ಬಿಟ್ಟಿದ್ದ ಭಿಕ್ಷವನ್ನು ಸದಾ ತಿನ್ನುತ್ತಿದ್ದನು ಮತ್ತು ಪುನಃ ಪುನಃ ಅಂಥ ಆಹಾರದ ಗುಣಗಾನಮಾಡುತ್ತಿದ್ದನು.
01155019a ತಮಹಂ ಫಲಾರ್ಥಿನಂ ಮನ್ಯೇ ಭ್ರಾತರಂ ತರ್ಕಚಕ್ಷುಷಾ।
01155019c ತಂ ವೈ ಗಚ್ಛಸ್ವ ನೃಪತೇ ಸ ತ್ವಾಂ ಸಮ್ಯಾಜಯಿಷ್ಯತಿ।।
ಅದರಿಂದ ನನ್ನ ಅಣ್ಣನು ಫಲಾರ್ಥಿ ಎಂದು ನನಗನ್ನಿಸುತ್ತದೆ. ನೃಪತೇ! ಅವನಲ್ಲಿಯೇ ಹೋಗು. ಅವನು ನಿನ್ನ ಸಂಯಾಜಿಯಾಗುತ್ತಾನೆ.”
01155020a ಜುಗುಪ್ಸಮಾನೋ ನೃಪತಿರ್ಮನಸೇದಂ ವಿಚಿಂತಯನ್।
01155020c ಉಪಯಾಜವಚಃ ಶ್ರುತ್ವಾ ನೃಪತಿಃ ಸರ್ವಧರ್ಮವಿತ್।
01155020e ಅಭಿಸಂಪೂಜ್ಯ ಪೂಜಾರ್ಹಮೃಷಿಂ ಯಾಜಮುವಾಚ ಹ।।
ಜುಗುಪ್ಸಮನಸ್ಕ ನೃಪತಿಯು ಉಪಯಾಜನ ಮಾತುಗಳನ್ನು ಕೇಳಿ ಮನಸ್ಸಿನಲ್ಲಿಯೇ ಚಿಂತಿಸಿದನು. ಸರ್ವಧರ್ಮವಿದ ನೃಪತಿಯು ಪೂಜಾರ್ಹ ಋಷಿ ಯಾಜನನ್ನು ಪೂಜಿಸಿ ಹೇಳಿದನು:
01155021a ಅಯುತಾನಿ ದದಾನ್ಯಷ್ಟೌ ಗವಾಂ ಯಾಜಯ ಮಾಂ ವಿಭೋ।
01155021c ದ್ರೋಣವೈರಾಭಿಸಂತಪ್ತಂ ತ್ವಂ ಹ್ಲಾದಯಿತುಮರ್ಹಸಿ।।
“ನಾನು ನಿನಗೆ ಎಂಭತ್ತು ಸಾವಿರ ಗೋವುಗಳನ್ನು ಕೊಡುತ್ತೇನೆ. ನನಗಾಗಿ ಯಜ್ಞವನ್ನು ಮಾಡು ವಿಭೋ! ದ್ರೋಣವೈರದಿಂದ ಅಭಿಸಂತಪ್ತ ನನ್ನನ್ನು ನೀನು ಬಿಡುಗಡೆಮಾಡಬೇಕು.
01155022a ಸ ಹಿ ಬ್ರಹ್ಮವಿದಾಂ ಶ್ರೇಷ್ಠೋ ಬ್ರಹ್ಮಾಸ್ತ್ರೇ ಚಾಪ್ಯನುತ್ತಮಃ।
01155022c ತಸ್ಮಾದ್ದ್ರೋಣಃ ಪರಾಜೈಷೀನ್ಮಾಂ ವೈ ಸ ಸಖಿವಿಗ್ರಹೇ।।
ಬ್ರಹ್ಮವಿದರಲ್ಲಿ ಶ್ರೇಷ್ಠನಾದ ಅವನು ಬ್ರಹ್ಮಾಸ್ತ್ರದಲ್ಲಿ ಅನುತ್ತಮನಾಗಿದ್ದಾನೆ. ಹಾಗಾಗಿ ದ್ರೋಣನು ಸ್ನೇಹಿತರ ಮಧ್ಯದ ಜಗಳದಲ್ಲಿ ನನ್ನನ್ನು ಪರಾಜಯಗೊಳಿಸಿದನು.
01155023a ಕ್ಷತ್ರಿಯೋ ನಾಸ್ತಿ ತುಲ್ಯೋಽಸ್ಯ ಪೃಥಿವ್ಯಾಂ ಕಶ್ಚಿದಗ್ರಣೀಃ।
01155023c ಕೌರವಾಚಾರ್ಯಮುಖ್ಯಸ್ಯ ಭಾರದ್ವಾಜಸ್ಯ ಧೀಮತಃ।।
ಎಷ್ಟೇ ಅಗ್ರಣಿಯಾದರೂ ಕೌರವರ ಪ್ರಮುಖ ಆಚಾರ್ಯ ಧೀಮಂತ ಭಾರದ್ವಾಜನ ಸರಿಸಮ ಕ್ಷತ್ರಿಯನು ಪೃಥ್ವಿಯಲ್ಲಿಯೇ ಇಲ್ಲ
01155024a ದ್ರೋಣಸ್ಯ ಶರಜಾಲಾನಿ ಪ್ರಾಣಿದೇಹಹರಾಣಿ ಚ।
01155024c ಷಡರತ್ನಿ ಧನುಶ್ಚಾಸ್ಯ ದೃಶ್ಯತೇಽಪ್ರತಿಮಂ ಮಹತ್।।
ದ್ರೋಣನ ಶರಜಾಲಗಳು ಪ್ರಾಣಿಗಳ ದೇಹಹರಣ ಮಾಡುತ್ತವೆ ಮತ್ತು ಅವನ ಆರು ಅಡಿ ಎತ್ತರದ ಮಹಾ ಧನುಸ್ಸಿನ ಸರಿಸಾಟಿಯಾದುದು ಇನ್ನೊಂದಿಲ್ಲ.
01155025a ಸ ಹಿ ಬ್ರಾಹ್ಮಣವೇಗೇನ ಕ್ಷಾತ್ರಂ ವೇಗಮಸಂಶಯಂ।
01155025c ಪ್ರತಿಹಂತಿ ಮಹೇಷ್ವಾಸೋ ಭಾರದ್ವಾಜೋ ಮಹಾಮನಾಃ।।
ಮಹೇಷ್ವಾಸ ಮಹಾತ್ಮ ಭಾರದ್ವಾಜನ ಬ್ರಾಹ್ಮಣವೇಗವು ಕ್ಷಾತ್ರವೇಗವನ್ನು ನಿಸ್ಸಂಶಯವಾಗಿಯೂ ಸೋಲಿಸುತ್ತದೆ.
01155026a ಕ್ಷತ್ರೋಚ್ಛೇದಾಯ ವಿಹಿತೋ ಜಾಮದಗ್ನ್ಯ ಇವಾಸ್ಥಿತಃ।
01155026c ತಸ್ಯ ಹ್ಯಸ್ತ್ರಬಲಂ ಘೋರಮಪ್ರಸಹ್ಯಂ ನರೈರ್ಭುವಿ।।
ಕ್ಷತ್ರಿಯರ ಛೇದನೆಗೆ ವಿಹಿತನಾಗಿ ಜಾಮದಗ್ನಿಯಂತೆ ಬಂದಿರುವ ಅವನ ಘೋರ ಅಸ್ತ್ರಬಲವು ಭೂಮಿಯ ನರರಿಂದ ಸಹಿಸಲಸಾಧ್ಯವಾದುದು.
01155027a ಬ್ರಾಹ್ಮಮುಚ್ಚಾರಯಂಸ್ತೇಜೋ ಹುತಾಹುತಿರಿವಾನಲಃ।
01155027c ಸಮೇತ್ಯ ಸ ದಹತ್ಯಾಜೌ ಕ್ಷತ್ರಂ ಬ್ರಹ್ಮಪುರಃಸ್ಸರಃ।
01155027e ಬ್ರಹ್ಮಕ್ಷತ್ರೇ ಚ ವಿಹಿತೇ ಬ್ರಹ್ಮತೇಜೋ ವಿಶಿಷ್ಯತೇ।।
ತನ್ನ ಬ್ರಾಹ್ಮಣ ತೇಜಸ್ಸಿನಿಂದ ಅಗ್ನಿಯಂತೆ ಪ್ರಜ್ವಲಿಸುತ್ತಿರುವ ಅವನು ರಣರಂಗದಲ್ಲಿ ತುಪ್ಪದಿಂದ ಇನ್ನೂ ಉರಿಯುವ ಬೆಂಕಿಯಂತೆ ಕ್ಷತ್ರಿಯರನ್ನು ಸುಟ್ಟುಹಾಕುತ್ತಾನೆ. ಬ್ರಾಹ್ಮಣ ಮತ್ತು ಕ್ಷತ್ರಿಯರು ಎದುರಾದಾಗ ಬ್ರಹ್ಮತೇಜಸ್ಸೇ ಮೇಲಾಗುತ್ತದೆ.
01155028a ಸೋಽಹಂ ಕ್ಷತ್ರಬಲಾದ್ಧೀನೋ ಬ್ರಹ್ಮತೇಜಃ ಪ್ರಪೇದಿವಾನ್।
01155028c ದ್ರೋಣಾದ್ವಿಶಿಷ್ಟಮಾಸಾದ್ಯ ಭವಂತಂ ಬ್ರಹ್ಮವಿತ್ತಮಂ।।
ಕೇವಲ ನನ್ನ ಕ್ಷತ್ರಿಯ ಬಲದಿಂದ ನಾನು ಸೋಲುತ್ತೇನೆ. ಆದರೆ ಈಗ ನಾನು ಬ್ರಹ್ಮವಿತ್ತಮ ನಿನ್ನನ್ನು ಸೇವಿಸಿ ದ್ರೋಣನಿಗಿಂಥಲೂ ವಿಶಿಷ್ಟ ಬ್ರಹ್ಮತೇಜಸ್ಸನ್ನು ಪಡೆದಿದ್ದೇನೆ.
01155029a ದ್ರೋಣಾಂತಕಮಹಂ ಪುತ್ರಂ ಲಭೇಯಂ ಯುಧಿ ದುರ್ಜಯಂ।
01155029c ತತ್ಕರ್ಮ ಕುರು ಮೇ ಯಾಜ ನಿರ್ವಪಾಮ್ಯರ್ಬುದಂ ಗವಾಂ।।
ಯುದ್ಧದಲ್ಲಿ ದುರ್ಜಯ ದ್ರೋಣಾಂತಕ ಪುತ್ರನನ್ನು ಕೊಡುವಂಥ ಕರ್ಮವನ್ನು ಯಾಜಿಸು. ನಿನಗೆ ಬೇಕಾದಷ್ಟು ಗೋವುಗಳನ್ನು ಕೊಡುತ್ತೇನೆ.”
01155030a ತಥೇತ್ಯುಕ್ತ್ವಾ ತು ತಂ ಯಾಜೋ ಯಾಜ್ಯಾರ್ಥಮುಪಕಲ್ಪಯತ್।
01155030c ಗುರ್ವರ್ಥ ಇತಿ ಚಾಕಾಮಮುಪಯಾಜಮಚೋದಯತ್।
01155030e ಯಾಜೋ ದ್ರೋಣವಿನಾಶಾಯ ಪ್ರತಿಜಜ್ಞೇ ತಥಾ ಚ ಸಃ।।
“ಹಾಗೆಯೇ ಆಗಲಿ!” ಎಂದು ಹೇಳಿದ ಯಾಜನು ಯಜ್ಞಕ್ಕೆ ತಯಾರಿ ನಡೆಸಿದನು. ಅವನು ಉಪಯಾಜನಿಗೆ ಮನಸ್ಸಿಲ್ಲದಿದ್ದರೂ “ಅಣ್ಣನಿಗೆ ಸಹಾಯ ಮಾಡು!” ಎಂದು ಒತ್ತಾಯಿಸಿದನು. ನಂತರ ಯಾಜನೂ ಕೂಡ ದ್ರೋಣವಿನಾಶಕ್ಕೆ ಭರವಸೆಯನ್ನಿತ್ತನು.
01155031a ತತಸ್ತಸ್ಯ ನರೇಂದ್ರಸ್ಯ ಉಪಯಾಜೋ ಮಹಾತಪಾಃ।
01155031c ಆಚಖ್ಯೌ ಕರ್ಮ ವೈತಾನಂ ತದಾ ಪುತ್ರಫಲಾಯ ವೈ।।
ನಂತರ ಮಹಾತಪಸ್ವಿ ಉಪಯಾಜನು ನರೇಂದ್ರನಿಗೆ ಪುತ್ರಫಲವನ್ನು ನೀಡುವಂಥ ಕರ್ಮವನ್ನು ನಡೆಸಲು ಸೂಚನೆಯನ್ನಿತ್ತನು.
01155032a ಸ ಚ ಪುತ್ರೋ ಮಹಾವೀರ್ಯೋ ಮಹಾತೇಜಾ ಮಹಾಬಲಃ।
01155032c ಇಷ್ಯತೇ ಯದ್ವಿಧೋ ರಾಜನ್ಭವಿತಾ ತೇ ತಥಾವಿಧಃ।।
“ರಾಜನ್! ನಿನಗೆ ಮಹಾವೀರ, ಮಹಾತೇಜಸ್ವಿ, ಮಹಾಬಲಿ ಪುತ್ರನಾಗುವ ಹಾಗೆ ಮಾಡುವ ವಿಧಾನವಿದು.”
01155033a ಭಾರದ್ವಾಜಸ್ಯ ಹಂತಾರಂ ಸೋಽಭಿಸಂಧಾಯ ಭೂಮಿಪಃ।
01155033c ಆಜಹ್ರೇ ತತ್ತಥಾ ಸರ್ವಂ ದ್ರುಪದಃ ಕರ್ಮಸಿದ್ಧಯೇ।।
ಭಾರದ್ವಾಜನ ಹಂತಾರನನ್ನು ಅಭಿಸಂಧಾನ ಮಾಡಿದ ಭೂಮಿಪ ದ್ರುಪದನು ಕರ್ಮಸಿದ್ಧಿಗಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಿದನು.
01155034a ಯಾಜಸ್ತು ಹವನಸ್ಯಾಂತೇ ದೇವೀಮಾಹ್ವಾಪಯತ್ತದಾ।
01155034c ಪ್ರೈಹಿ ಮಾಂ ರಾಜ್ಞಿ ಪೃಷತಿ ಮಿಥುನಂ ತ್ವಾಮುಪಸ್ಥಿತಂ।।
ಹವನದ ಅಂತ್ಯದಲ್ಲಿ ಯಾಜನು ದೇವಿ ರಾಣಿಯನ್ನು ಕರೆದನು: “ಪೃಷತಿ ರಾಣಿ! ನನ್ನೊಂದಿಗೆ ಮಿಥುನದ ಕಾಲವೊದಗಿದೆ. ನನ್ನ ಬಳಿ ಬಾ.”
01155035 ದೇವ್ಯುವಾಚ।
01155035a ಅವಲಿಪ್ತಂ ಮೇ ಮುಖಂ ಬ್ರಹ್ಮನ್ಪುಣ್ಯಾನ್ಗಂಧಾನ್ಬಿಭರ್ಮಿ ಚ।
01155035c ಸುತಾರ್ಥೇನೋಪರುದ್ಧಾಸ್ಮಿ ತಿಷ್ಠ ಯಾಜ ಮಮ ಪ್ರಿಯೇ।।
ದೇವಿಯು ಹೇಳಿದಳು: “ಬ್ರಾಹ್ಮಣ! ನನ್ನ ಮುಖವು ಅವಲಿಪ್ತವಾಗಿದೆ. ನಾನು ಪುಣ್ಯಗಂಧಗಳನ್ನು ಧರಿಸಿದ್ದೇನೆ. ಯಾಜ! ನನ್ನ ಪ್ರಿಯ ಸುತನಿಗಾಗಿ ಉಪರುದ್ಧಳಾಗಿದ್ದೇನೆ. ನಿಲ್ಲು!”
01155036 ಯಾಜ ಉವಾಚ।
01155036a ಯಾಜೇನ ಶ್ರಪಿತಂ ಹವ್ಯಮುಪಯಾಜೇನ ಮಂತ್ರಿತಂ।
01155036c ಕಥಂ ಕಾಮಂ ನ ಸಂದಧ್ಯಾತ್ಸಾ ತ್ವಂ ವಿಪ್ರೈಹಿ ತಿಷ್ಠ ವಾ।।
ಯಾಜನು ಹೇಳಿದನು: “ನೀನು ಇಲ್ಲಿಗೆ ಬಾ ಅಥವಾ ಅಲ್ಲಿಯೇ ನಿಲ್ಲು. ಯಾಜನಿಂದ ಶ್ರಪಿತ ಮತ್ತು ಉಪಯಾಜನಿಂದ ಮಂತ್ರಿತ ಈ ಹವಿಸ್ಸು ಹೇಗೆ ತಾನೇ ನಿನ್ನ ಆಸೆಯನ್ನು ನೆರವೇರಿಸಲಾರದು?””
01155037 ಬ್ರಾಹ್ಮಣ ಉವಾಚ।
01155037a ಏವಮುಕ್ತೇ ತು ಯಾಜೇನ ಹುತೇ ಹವಿಷಿ ಸಂಸ್ಕೃತೇ।
01155037c ಉತ್ತಸ್ಥೌ ಪಾವಕಾತ್ತಸ್ಮಾತ್ಕುಮಾರೋ ದೇವಸನ್ನಿಭಃ।।
01155038a ಜ್ವಾಲಾವರ್ಣೋ ಘೋರರೂಪಃ ಕಿರೀಟೀ ವರ್ಮ ಚೋತ್ತಮಂ।
01155038c ಬಿಭ್ರತ್ಸಖಡ್ಗಃ ಸಶರೋ ಧನುಷ್ಮಾನ್ವಿನದನ್ಮುಹುಃ।।
ಬ್ರಾಹ್ಮಣನು ಹೇಳಿದನು: “ಹೀಗೆ ಹೇಳಿದ ಯಾಜನು ಸಂಸ್ಕೃತಗೊಂಡ ಹವಿಸ್ಸನ್ನು ಆಹುತಿಯನ್ನಾಗಿತ್ತನು. ಆ ಪಾವಕನಿಂದ ದೇವಸನ್ನಿಭ ಜ್ವಾಲವರ್ಣಿ, ಘೋರರೂಪಿ, ಕಿರೀಟಿ, ಉತ್ತಮ ಕವಚಧಾರಿ ಕುಮಾರನೋರ್ವನು ಹೊಳೆಯುತ್ತಿರುವ ಖಡ್ಗ ಮತ್ತು ಶರಗಳೊಂದಿಗೆ ಧನುಸ್ಸನ್ನೂ ಹಿಡಿದು ಹೂಂಕಾರಗೈಯುತ್ತಾ ಎದ್ದು ಬಂದನು.
01155039a ಸೋಽಧ್ಯಾರೋಹದ್ರಥವರಂ ತೇನ ಚ ಪ್ರಯಯೌ ತದಾ।
01155039c ತತಃ ಪ್ರಣೇದುಃ ಪಾಂಚಾಲಾಃ ಪ್ರಹೃಷ್ಟಾಃ ಸಾಧು ಸಾಧ್ವಿತಿ।।
ಅವನು ಶ್ರೇಷ್ಠ ರಥವನ್ನೇರಿ ಮುಂದೆ ಬರುತ್ತಿದ್ದಂತೆಯೇ ಪಾಂಚಾಲರು ಪ್ರಹೃಷ್ಠರಾಗಿ “ಸಾಧು! ಸಾಧು!” ಎಂದು ಉದ್ಗಾರಗೈದರು.
01155040a ಭಯಾಪಹೋ ರಾಜಪುತ್ರಃ ಪಾಂಚಾಲಾನಾಂ ಯಶಸ್ಕರಃ।
01155040c ರಾಜ್ಞಃ ಶೋಕಾಪಹೋ ಜಾತ ಏಷ ದ್ರೋಣವಧಾಯ ವೈ।
01155040e ಇತ್ಯುವಾಚ ಮಹದ್ಭೂತಮದೃಶ್ಯಂ ಖೇಚರಂ ತದಾ।।
ಆಗ “ಈ ಪಾಂಚಾಲರ ಯಶಸ್ಕರ, ರಾಜನ ಶೋಕಾಪಹ ಭಯಾಪಹ ರಾಜಪುತ್ರನು ದ್ರೋಣವಧೆಗಾಗಿಯೇ ಹುಟ್ಟಿದ್ದಾನೆ!” ಎಂದು ಅದೃಶ್ಯ ಖೇಚರ ಮಹಾಭೂತವೊಂದು ಹೇಳಿತು.
01155041a ಕುಮಾರೀ ಚಾಪಿ ಪಾಂಚಾಲೀ ವೇದಿಮಧ್ಯಾತ್ಸಮುತ್ಥಿತಾ।
01155041c ಸುಭಗಾ ದರ್ಶನೀಯಾಂಗೀ ವೇದಿಮಧ್ಯಾ ಮನೋರಮಾ।।
ನಂತರ ವೇದಿಮಧ್ಯದಿಂದ ಸುಭಗೆ, ದರ್ಶನೀಯಾಂಗಿ, ವೇದಿಮಧ್ಯಾ, ಮನೋರಮೆ ಕುಮಾರಿ ಪಾಂಚಾಲಿಯೂ ಎದ್ದು ಬಂದಳು.
01155042a ಶ್ಯಾಮಾ ಪದ್ಮಪಲಾಶಾಕ್ಷೀ ನೀಲಕುಂಚಿತಮೂರ್ಧಜಾ।
01155042c ಮಾನುಷಂ ವಿಗ್ರಹಂ ಕೃತ್ವಾ ಸಾಕ್ಷಾದಮರವರ್ಣಿನೀ।।
ಶ್ಯಾಮಳಾದ ಅವಳು ಪದ್ಮಪಲಾಶಾಕ್ಷಿಯೂ, ನೀಲಕುಂಜಿತ ಮೂರ್ಧಜೆಯೂ ಆಗಿದ್ದು ಸಾಕ್ಷಾದ್ ಅಮರವರ್ಣಿನಿಯು ಮಾನುಷ ದೇಹವನ್ನು ಧರಿಸಿದ್ದಾಳೆಯೋ ಎಂಬಂತೆ ತೋರುತ್ತಿದ್ದಳು.
01155043a ನೀಲೋತ್ಪಲಸಮೋ ಗಂಧೋ ಯಸ್ಯಾಃ ಕ್ರೋಶಾತ್ಪ್ರವಾಯತಿ।
01155043c ಯಾ ಬಿಭರ್ತಿ ಪರಂ ರೂಪಂ ಯಸ್ಯಾ ನಾಸ್ತ್ಯುಪಮಾ ಭುವಿ।।
ಅವಳಿಂದ ಹೊರಸೂಸುತ್ತಿದ್ದ ನೀಲೋತ್ಪಲ ಸಮಾನ ಸುಗಂಧವು ಒಂದು ಕ್ರೋಶದವರೆಗೂ ಪ್ರವಾಹಿಸುತ್ತಿತ್ತು. ಅವಳ ಪರಮ ರೂಪವು ಅತಿ ಸುಂದರವಾಗಿದ್ದು ಭೂವಿಯಲ್ಲಿಯೇ ಅವಳ ಸರಿಸಾಟಿಯಾದವಳು ಯಾರೂ ಇರಲಿಲ್ಲ.
01155044a ತಾಂ ಚಾಪಿ ಜಾತಾಂ ಸುಶ್ರೋಣೀಂ ವಾಗುವಾಚಾಶರೀರಿಣೀ।
01155044c ಸರ್ವಯೋಷಿದ್ವರಾ ಕೃಷ್ಣಾ ಕ್ಷಯಂ ಕ್ಷತ್ರಂ ನಿನೀಷತಿ।।
ಆ ಸುಶ್ರೋಣಿಯು ಹುಟ್ಟುತ್ತಿದ್ದಹಾಗೆಯೇ ಅಶರೀರವಾಣಿಯು ನುಡಿಯಿತು: “ಸರ್ವ ಸ್ತ್ರೀಯರಲ್ಲಿ ಶ್ರೇಷ್ಠೆ ಈ ಕೃಷ್ಣೆಯು ಕ್ಷತ್ರಿಯರ ಕ್ಷಯವನ್ನು ನಡೆಸಿಕೊಡುತ್ತಾಳೆ.
01155045a ಸುರಕಾರ್ಯಮಿಯಂ ಕಾಲೇ ಕರಿಷ್ಯತಿ ಸುಮಧ್ಯಮಾ।
01155045c ಅಸ್ಯಾ ಹೇತೋಃ ಕ್ಷತ್ರಿಯಾಣಾಂ ಮಹದುತ್ಪತ್ಸ್ಯತೇ ಭಯಂ।।
ಈ ಸುಮಧ್ಯಮೆಯು ಕಾಲಬಂದಾಗ ಸುರಕಾರ್ಯವನ್ನು ನಡೆಸಿಕೊಡುತ್ತಾಳೆ ಮತ್ತು ಅವಳ ಕಾರಣದಿಂದಾಗಿ ಕ್ಷತ್ರಿಯರಿಗೆ ಮಹಾ ಭಯವೊಂದು ಉಂಟಾಗುತ್ತದೆ!”
01155046a ತಚ್ಛೃತ್ವಾ ಸರ್ವಪಾಂಚಾಲಾಃ ಪ್ರಣೇದುಃ ಸಿಂಹಸಂಘವತ್।
01155046c ನ ಚೈತಾನ್ ಹರ್ಷಸಂಪೂಣಾನಿಯಂ ಸೇಹೇ ವಸುಂಧರಾ।।
ಇದನ್ನು ಕೇಳಿದ ಪಾಂಚಾಲರೆಲ್ಲರೂ ಸಿಂಹಸಂಘದಂತೆ ಗರ್ಜಿಸಿದರು ಮತ್ತು ಹರ್ಷಸಂಪೂರ್ಣರಾದ ಅವರನ್ನು ವಸುಂಧರೆಯು ಸಹಿಸಲು ಅಸಮರ್ಥಳಾದಳು.
01155047a ತೌ ದೃಷ್ಟ್ವಾ ಪೃಷತೀ ಯಾಜಂ ಪ್ರಪೇದೇ ವೈ ಸುತಾರ್ಥಿನೀ।
01155047c ನ ವೈ ಮದನ್ಯಾಂ ಜನನೀಂ ಜಾನೀಯಾತಾಮಿಮಾವಿತಿ।।
ಅವರೀರ್ವರನ್ನೂ ನೋಡಿದ ಸುತಾರ್ಥಿನೀ ಪೃಷತಿಯು ಯಾಜನಲ್ಲಿ ಕೇಳಿಕೊಂಡಳು: “ಇವರೀರ್ವರು ನನ್ನನ್ನು ಬಿಟ್ಟು ಬೇರೆ ಯಾರನ್ನೂ ತಾಯಿಯನ್ನಾಗಿ ತಿಳಿಯದಿರಲಿ!”
01155048a ತಥೇತ್ಯುವಾಚ ತಾಂ ಯಾಜೋ ರಾಜ್ಞಃ ಪ್ರಿಯಚಿಕೀರ್ಷಯಾ।
01155048c ತಯೋಶ್ಚ ನಾಮನೀ ಚಕ್ರುರ್ದ್ವಿಜಾಃ ಸಂಪೂರ್ಣಮಾನಸಾಃ।।
ರಾಜನಿಗೆ ಪ್ರಿಯವಾದುದನ್ನು ಮಾಡಲು ಬಯಸಿದ ಯಾಜನು “ಹಾಗೆಯೇ ಆಗಲಿ!” ಎಂದನು. ಆ ಸಂಪೂರ್ಣ ಮಾನಸ ದ್ವಿಜರು ಅವರೀರ್ವರಿಗೆ ಹೆಸರುಗಳನ್ನಿಟ್ಟರು.
01155049a ಧೃಷ್ಟತ್ವಾದತಿಧೃಷ್ಣುತ್ವಾದ್ಧರ್ಮಾದ್ದ್ಯುತ್ಸಂಭವಾದಪಿ।
01155049c ಧೃಷ್ಟದ್ಯುಮ್ನಃ ಕುಮಾರೋಽಯಂ ದ್ರುಪದಸ್ಯ ಭವತ್ವಿತಿ।।
“ಧೃಷ್ಟ, ಅತಿಘೃಷ್ಣು ಮತ್ತು ಧ್ಯುತಸಂಭವನಾದ ದ್ರುಪದನ ಈ ಕುಮಾರನು ಧೃಷ್ಟಧ್ಯುಮ್ನನಾಗುತ್ತಾನೆ.
01155050a ಕೃಷ್ಣೇತ್ಯೇವಾಬ್ರುವನ್ಕೃಷ್ಣಾಂ ಕೃಷ್ಣಾಭೂತ್ಸಾ ಹಿ ವರ್ಣತಃ।
01155050c ತಥಾ ತನ್ಮಿಥುನಂ ಜಜ್ಞೇ ದ್ರುಪದಸ್ಯ ಮಹಾಮಖೇ।।
ಬಣ್ಣದಲ್ಲಿ ಕೃಷ್ಣೆಯಾಗಿರುವ ಇವಳು ಕೃಷ್ಣೆ!” ಎಂದು ಕರೆದರು. ಹೀಗೆ ದ್ರುಪದನಿಗೆ ಈ ಅವಳಿ ಮಕ್ಕಳು ಮಹಾಮಖದಲ್ಲಿ ಹುಟ್ಟಿದರು.
01155051a ಧೃಷ್ಟದ್ಯುಮ್ನಂ ತು ಪಾಂಚಾಲ್ಯಮಾನೀಯ ಸ್ವಂ ವಿವೇಶನಂ।
01155051c ಉಪಾಕರೋದಸ್ತ್ರಹೇತೋರ್ಭಾರದ್ವಾಜಃ ಪ್ರತಾಪವಾನ್।।
ಪ್ರತಾಪಿ ಭಾರದ್ವಾಜನು ಪಾಂಚಾಲ್ಯ ಧೃಷ್ಟಧ್ಯುಮ್ನನನ್ನು ತನ್ನ ಮನೆಗೇ ಕರೆಸಿಕೊಂಡು ಅವನಿಗೆ ಅಸ್ತ್ರಗಳ ಶಿಕ್ಷಣವನ್ನಿತ್ತನು.
01155052a ಅಮೋಕ್ಷಣೀಯಂ ದೈವಂ ಹಿ ಭಾವಿ ಮತ್ವಾ ಮಹಾಮತಿಃ।
01155052c ತಥಾ ತತ್ಕೃತವಾನ್ದ್ರೋಣ ಆತ್ಮಕೀರ್ತ್ಯನುರಕ್ಷಣಾತ್।।
ದೈವವು ಅಮೋಕ್ಷಣೀಯವಾದದ್ದು ಎಂದು ತಿಳಿದ ಮಹಾಮತಿ ದ್ರೋಣನು ತನ್ನ ಕೀರ್ತಿಯನ್ನು ರಕ್ಷಿಸುವುದಕ್ಕೋಸ್ಕರ ಈ ರೀತಿ ಮಾಡಿದನು.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ದ್ರೌಪದೀಸಂಭವೇ ಪಂಚಪಂಚಾದಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ದ್ರೌಪದೀಸಂಭವದಲ್ಲಿ ನೂರಾಐವತ್ತೈದನೆಯ ಅಧ್ಯಾಯವು.