ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಚೈತ್ರರಥ ಪರ್ವ
ಅಧ್ಯಾಯ 154
ಸಾರ
ದ್ರುಪದ-ದ್ರೋಣರ ಸಖ್ಯ (1-7). ದ್ರೋಣನು ಪರಶುರಾಮನಿಂದ ಅಸ್ತ್ರಗಳನ್ನು ಪಡೆದುದು (8-13). ದ್ರುಪದನಿಂದ ದ್ರೋಣನ ಅಪಮಾನ (೧೪-೧೬). ದ್ರೋಣನು ಕೌರವ-ಪಾಂಡವರಿಂದ ಗುರುದಕ್ಷಿಣೆಯನ್ನಾಗಿ ದ್ರುಪದನನ್ನು ಕೇಳಿದುದು (17-22). ಸೆರೆಯಾಗಿ ಬಂದ ದ್ರುಪದನ ಅರ್ಧರಾಜ್ಯವನ್ನು ಇಟ್ಟುಕೊಂಡು ಉಳಿದರ್ಧವನ್ನು ಹಿಂದಿರುಗಿ ಕೊಟ್ಟಿದ್ದುದು (23-25).
01154001 ಬ್ರಾಹ್ಮಣ ಉವಾಚ।
01154001a ಗಂಗಾದ್ವಾರಂ ಪ್ರತಿ ಮಹಾನ್ಬಭೂವರ್ಷಿರ್ಮಹಾತಪಾಃ।
01154001c ಭರದ್ವಾಜೋ ಮಹಾಪ್ರಾಜ್ಞಃ ಸತತಂ ಸಂಶಿತವ್ರತಃ।।
ಬ್ರಾಹ್ಮಣನು ಹೇಳಿದನು: “ಗಂಗಾದ್ವಾರದ ಬಳಿಯಲ್ಲಿ ಮಹಾತಪಸ್ವಿ, ಮಹಾನೃಷಿ, ಮಹಾಪ್ರಾಜ್ಞ, ಸತತ ಸಂಶಿತವ್ರತ ಭರದ್ವಾಜನಿದ್ದನು.
01154002a ಸೋಽಭಿಷೇಕ್ತುಂ ಗತೋ ಗಂಗಾಂ ಪೂರ್ವಮೇವಾಗತಾಂ ಸತೀಂ।
01154002c ದದರ್ಶಾಪ್ಸರಸಂ ತತ್ರ ಘೃತಾಚೀಮಾಪ್ಲುತಾಮೃಷಿಃ।।
ಒಮ್ಮೆ ಅವನು ಗಂಗೆಯಲ್ಲಿ ಸ್ನಾನಕ್ಕೆಂದು ಹೋದಾಗ ಅಲ್ಲಿಗೆ ಮೊದಲೇ ಬಂದು ಅಷ್ಟೇ ಸ್ನಾನವನ್ನು ಮುಗಿಸಿದ್ದ ಸತಿ ಅಪ್ಸರೆ ಘೃತಾಚಿಯನ್ನು ನೋಡಿದನು.
01154003a ತಸ್ಯಾ ವಾಯುರ್ನದೀತೀರೇ ವಸನಂ ವ್ಯಹರತ್ತದಾ।
01154003c ಅಪಕೃಷ್ಟಾಂಬರಾಂ ದೃಷ್ಟ್ವಾ ತಾಮೃಷಿಶ್ಚಕಮೇ ತತಃ।।
ನದೀತೀರದಲ್ಲಿ ನಿಂತಿರುವಾಗ ವಾಯುವು ಅವಳ ವಸ್ತ್ರವನ್ನು ಹಾರಿಸಿದನು ಮತ್ತು ನಗ್ನಳಾದವಳನ್ನು ನೋಡಿ ಋಷಿಯು ಅವಳನ್ನು ಕಾಮಿಸಿದನು.
01154004a ತಸ್ಯಾಂ ಸಂಸಕ್ತಮನಸಃ ಕೌಮಾರಬ್ರಹ್ಮಚಾರಿಣಃ।
01154004c ಹೃಷ್ಟಸ್ಯ ರೇತಶ್ಚಸ್ಕಂದ ತದೃಷಿರ್ದ್ರೋಣ ಆದಧೇ।।
ಮನಸ್ಸನ್ನು ಅವಳಲ್ಲೇ ಅನುರಕ್ತಗೊಳಿಸಿದ ಆ ಕೌಮಾರ ಬ್ರಹ್ಮಚಾರಿಯು ಹೃಷ್ಟನಾಗಿ ರೇತಸ್ಖಲನವಾಯಿತು. ಅದನ್ನು ಋಷಿಯು ಒಂದು ದೊನ್ನೆಯಲ್ಲಿ ಇರಿಸಿದನು.
01154005a ತತಃ ಸಮಭವದ್ದ್ರೋಣಃ ಕುಮಾರಸ್ತಸ್ಯ ಧೀಮತಃ।
01154005c ಅಧ್ಯಗೀಷ್ಟ ಸ ವೇದಾಂಶ್ಚ ವೇದಾಂಗಾನಿ ಚ ಸರ್ವಶಃ।।
ಅಲ್ಲಿಂದಲೇ ಅವನಿಗೆ ಧೀಮಂತ ಕುಮಾರ ದ್ರೋಣನು ಹುಟ್ಟಿದನು. ಅವನು ವೇದ ಮತ್ತು ವೇದಾಂಗಗಳೆಲ್ಲವನ್ನೂ ಅಧ್ಯಯನ ಮಾಡಿದನು.
01154006a ಭರದ್ವಾಜಸ್ಯ ತು ಸಖಾ ಪೃಷತೋ ನಾಮ ಪಾರ್ಥಿವಃ।
01154006c ತಸ್ಯಾಪಿ ದ್ರುಪದೋ ನಾಮ ತದಾ ಸಮಭವತ್ಸುತಃ।।
ಪೃಷತ ಎಂಬ ಹೆಸರಿನ ಪಾರ್ಥಿವನು ಭರದ್ವಾಜನ ಸಖನಾಗಿದ್ದನು. ಅವನಿಗೂ ದ್ರುಪದ ಎಂಬ ಹೆಸರಿನ ಸುತನಿದ್ದನು.
01154007a ಸ ನಿತ್ಯಮಾಶ್ರಮಂ ಗತ್ವಾ ದ್ರೋಣೇನ ಸಹ ಪಾರ್ಷತಃ।
01154007c ಚಿಕ್ರೀಡಾಧ್ಯಯನಂ ಚೈವ ಚಕಾರ ಕ್ಷತ್ರಿಯರ್ಷಭಃ।।
ಆ ಕ್ಷತ್ರಿಯರ್ಷಭ ಪಾರ್ಷತನು ನಿತ್ಯವೂ ಆಶ್ರಮಕ್ಕೆ ಹೋಗಿ ದ್ರೋಣನ ಸಹಿತ ಅಧ್ಯಯನ ಮಾಡುತ್ತಿದ್ದನು ಮತ್ತು ಆಟವಾಡುತ್ತಿದ್ದನು.
01154008a ತತಸ್ತು ಪೃಷತೇಽತೀತೇ ಸ ರಾಜಾ ದ್ರುಪದೋಽಭವತ್।
01154008c ದ್ರೋಣೋಽಪಿ ರಾಮಂ ಶುಶ್ರಾವ ದಿತ್ಸಂತಂ ವಸು ಸರ್ವಶಃ।।
01154009a ವನಂ ತು ಪ್ರಸ್ಥಿತಂ ರಾಮಂ ಭರದ್ವಾಜಸುತೋಽಬ್ರವೀತ್।
01154009c ಆಗತಂ ವಿತ್ತಕಾಮಂ ಮಾಂ ವಿದ್ಧಿ ದ್ರೋಣಂ ದ್ವಿಜರ್ಷಭ।।
ಪೃಷತನ ಅತೀತದ ನಂತರ ದ್ರುಪದನು ರಾಜನಾದನು. ರಾಮನು ತನ್ನ ಸರ್ವ ಸಂಪತ್ತನ್ನೂ ಕೊಡುತ್ತಿದ್ದಾನೆ ಎಂದು ಕೇಳಿದ ಭರದ್ವಾಜಸುತ ದ್ರೋಣನು ವನಕ್ಕೆ ತೆರಳುತ್ತಿದ್ದ ರಾಮನಿಗೆ ಹೇಳಿದನು: “ದ್ವಿಜರ್ಷಭ! ವಿತ್ತವನ್ನು ಅಪೇಕ್ಷಿಸಿ ಬಂದಿರುವ ನನ್ನನ್ನು ದ್ರೋಣನೆಂದು ತಿಳಿ.”
01154010 ರಾಮ ಉವಾಚ।
01154010a ಶರೀರಮಾತ್ರಮೇವಾದ್ಯ ಮಯೇದಮವಶೇಷಿತಂ।
01154010c ಅಸ್ತ್ರಾಣಿ ವಾ ಶರೀರಂ ವಾ ಬ್ರಹ್ಮನ್ನನ್ಯತರಂ ವೃಣು।।
ರಾಮನು ಹೇಳಿದನು: “ನನ್ನ ಈ ದೇಹವೊಂದೇ ಇಂದು ಉಳಿದಿದೆ. ಬ್ರಾಹ್ಮಣ! ನನ್ನ ಅಸ್ತ್ರಗಳನ್ನು ಅಥವಾ ನನ್ನ ಈ ಶರೀರವನ್ನು ವರವನ್ನಾಗಿ ಕೇಳಿಕೋ.”
01154011 ದ್ರೋಣ ಉವಾಚ।
01154011a ಅಸ್ತ್ರಾಣಿ ಚೈವ ಸರ್ವಾಣಿ ತೇಷಾಂ ಸಂಹಾರಮೇವ ಚ।
01154011c ಪ್ರಯೋಗಂ ಚೈವ ಸರ್ವೇಷಾಂ ದಾತುಮರ್ಹತಿ ಮೇ ಭವಾನ್।।
ದ್ರೋಣನು ಹೇಳಿದನು: “ನಿನ್ನ ಸರ್ವ ಅಸ್ತ್ರಗಳನ್ನೂ ನೀಡು. ಅವುಗಳ ಪ್ರಯೋಗ ಮತ್ತು ಸಂಹಾರಗಳ ಕುರಿತು ಸರ್ವವನ್ನೂ ನನಗೆ ನೀಡಬೇಕು.””
01154012 ಬ್ರಾಹ್ಮಣ ಉವಾಚ।
01154012a ತಥೇತ್ಯುಕ್ತ್ವಾ ತತಸ್ತಸ್ಮೈ ಪ್ರದದೌ ಭೃಗುನಂದನಃ।
01154012c ಪ್ರತಿಗೃಹ್ಯ ತತೋ ದ್ರೋಣಃ ಕೃತಕೃತ್ಯೋಽಭವತ್ತದಾ।।
ಬ್ರಾಹ್ಮಣನು ಹೇಳಿದನು: “ಹಾಗೆಯೇ ಆಗಲಿ ಎಂದು ಆ ಭೃಗುನಂದನನು ಅವುಗಳನ್ನು ನೀಡಲು ಒಪ್ಪಿದನು. ದ್ರೋಣನು ಅವುಗಳನ್ನು ಪಡೆದು ಕೃತಕೃತ್ಯನಾದನು.
01154013a ಸಂಪ್ರಹೃಷ್ಟಮನಾಶ್ಚಾಪಿ ರಾಮಾತ್ಪರಮಸಮ್ಮತಂ।
01154013c ಬ್ರಹ್ಮಾಸ್ತ್ರಂ ಸಮನುಪ್ರಾಪ್ಯ ನರೇಷ್ವಭ್ಯಧಿಕೋಽಭವತ್।।
ರಾಮನಿಂದ ಅವನು ನರರಲ್ಲಿರುವುದೆಲ್ಲಕ್ಕಿಂತಲೂ ಅಧಿಕ ಪರಮ ಸಮ್ಮತ ಬ್ರಹ್ಮಾಸ್ತ್ರವನ್ನು ಸಂಪ್ರಹೃಷ್ಟಮನಸ್ಕನಾಗಿ ಸ್ವೀಕರಿಸಿದನು.
01154014a ತತೋ ದ್ರುಪದಮಾಸಾದ್ಯ ಭಾರದ್ವಾಜಃ ಪ್ರತಾಪವಾನ್।
01154014c ಅಬ್ರವೀತ್ಪುರುಷವ್ಯಾಘ್ರಃ ಸಖಾಯಂ ವಿದ್ಧಿ ಮಾಮಿತಿ।।
ನಂತರ ಪ್ರತಾಪಿ ಭಾರದ್ವಾಜನು ದ್ರುಪದನ ಬಳಿ ಹೋಗಿ “ಪುರುಷವ್ಯಾಘ್ರ! ನನ್ನನ್ನು ನಿನ್ನ ಸಖನೆಂದು ತಿಳಿ” ಎಂದನು.
01154015 ದ್ರುಪದ ಉವಾಚ।
01154015a ನಾಶ್ರೋತ್ರಿಯಃ ಶ್ರೋತ್ರಿಯಸ್ಯ ನಾರಥೀ ರಥಿನಃ ಸಖಾ।
01154015c ನಾರಾಜಾ ಪಾರ್ಥಿವಸ್ಯಾಪಿ ಸಖಿಪೂರ್ವಂ ಕಿಮಿಷ್ಯತೇ।।
ದ್ರುಪದನು ಹೇಳಿದನು: “ಅಶ್ರೋತ್ರಿಯು ಶ್ರೋತ್ರಿಯ, ಅರಥಿಯು ರಥಿಯ, ಮತ್ತು ಪಾರ್ಥಿವನೋರ್ವನು ರಾಜನಲ್ಲದವನ ಸಖನಾಗಲು ಸಾಧ್ಯವಿಲ್ಲ. ಹಳೆಯ ಸಖನು ಯಾರಿಗೆ ತಾನೇ ಬೇಕು?””
01154016 ಬ್ರಾಹ್ಮಣ ಉವಾಚ।
01154016a ಸ ವಿನಿಶ್ಚಿತ್ಯ ಮನಸಾ ಪಾಂಚಾಲ್ಯಂ ಪ್ರತಿ ಬುದ್ಧಿಮಾನ್।
01154016c ಜಗಾಮ ಕುರುಮುಖ್ಯಾನಾಂ ನಗರಂ ನಾಗಸಾಹ್ವಯಂ।।
ಬ್ರಾಹ್ಮಣನು ಹೇಳಿದನು: “ಆ ಬುದ್ಧಿವಂತನು ಮನಸ್ಸಿನಲ್ಲಿಯೇ ಪಾಂಚಾಲ್ಯನ ವಿರುದ್ಧ ನಿಶ್ಚಯಿಸಿ ಕುರುಮುಖ್ಯರ ನಗರ ನಾಗಸಾಹ್ವಯಕ್ಕೆ ಹೋದನು.
01154017a ತಸ್ಮೈ ಪೌತ್ರಾನ್ಸಮಾದಾಯ ವಸೂನಿ ವಿವಿಧಾನಿ ಚ।
01154017c ಪ್ರಾಪ್ತಾಯ ಪ್ರದದೌ ಭೀಷ್ಮಃ ಶಿಷ್ಯಾನ್ದ್ರೋಣಾಯ ಧೀಮತೇ।।
ಆಗಮಿಸಿದ ಧೀಮಂತ ದ್ರೋಣನಿಗೆ ಭೀಷ್ಮನು ವಿವಿಧ ಸಂಪತ್ತುಗಳನ್ನು ಕೊಟ್ಟು ತನ್ನ ಮೊಮ್ಮಕ್ಕಳನ್ನು ಶಿಷ್ಯರನ್ನಾಗಿ ಒಪ್ಪಿಸಿದನು.
01154018a ದ್ರೋಣಃ ಶಿಷ್ಯಾಂಸ್ತತಃ ಸರ್ವಾನಿದಂ ವಚನಮಬ್ರವೀತ್।
01154018c ಸಮಾನೀಯ ತದಾ ವಿದ್ವಾನ್ದ್ರುಪದಸ್ಯಾಸುಖಾಯ ವೈ।।
ದ್ರುಪದನಿಗೆ ಕೇಡನ್ನು ಬಯಸಿದ ವಿದ್ವಾನ್ ದ್ರೋಣನು ಎಲ್ಲ ಶಿಷ್ಯರನ್ನೂ ಕರೆದು ಈ ಮಾತುಗಳನ್ನಾಡಿದನು:
01154019a ಆಚಾರ್ಯವೇತನಂ ಕಿಂ ಚಿದ್ಧೃದಿ ಸಂಪರಿವರ್ತತೇ।
01154019c ಕೃತಾಸ್ತ್ರೈಸ್ತತ್ಪ್ರದೇಯಂ ಸ್ಯಾತ್ತದೃತಂ ವದತಾನಘಾಃ।।
“ಗುರುದಕ್ಷಿಣೆಯಾಗಿ ಪಡೆಯಬೇಕೆಂದು ನನ್ನ ಮನಸ್ಸಿನಲ್ಲಿ ಒಂದು ವಿಚಾರವಿದೆ. ಅನಘರೇ! ಕೃತಾಸ್ತ್ರರಾದನಂತರ ನೀವು ನನಗೆ ಅದನ್ನು ನಿಜವಾಗಿಯೂ ಕೊಡುತ್ತೀರಿ ಎಂದು ಭರವಸೆಯನ್ನು ನೀಡಿ.”
01154020a ಯದಾ ಚ ಪಾಂಡವಾಃ ಸರ್ವೇ ಕೃತಾಸ್ತ್ರಾಃ ಕೃತನಿಶ್ರಮಾಃ।
01154020c ತತೋ ದ್ರೋಣೋಽಬ್ರವೀದ್ಭೂಯೋ ವೇತನಾರ್ಥಮಿದಂ ವಚಃ।।
ಪಾಂಡವರೆಲ್ಲರೂ ಕೃತಾಸ್ತ್ರರೂ ಕೃತನಿಶ್ರಮರೂ ಆದ ನಂತರ ದ್ರೋಣನು ಪುನಃ ವೇತನದ ಕುರಿತು ಕೇಳಿದನು.
01154021a ಪಾರ್ಷತೋ ದ್ರುಪದೋ ನಾಮ ಚತ್ರವತ್ಯಾಂ ನರೇಶ್ವರಃ।
01154021c ತಸ್ಯಾಪಕೃಷ್ಯ ತದ್ರಾಜ್ಯಂ ಮಮ ಶೀಘ್ರಂ ಪ್ರದೀಯತಾಂ।।
“ಚತ್ರವತಿಯಲ್ಲಿ ಪಾರ್ಷತ ದ್ರುಪದನೆಂಬ ಹೆಸರಿನ ನರೇಶ್ವರನಿದ್ದಾನೆ. ಶೀಘ್ರದಲ್ಲಿಯೇ ಅವನ ರಾಜ್ಯವನ್ನು ಅವನಿಂದ ಗೆದ್ದು ನನಗೆ ನೀಡಿ!”
01154022a ತತಃ ಪಾಂಡುಸುತಾಃ ಪಂಚ ನಿರ್ಜಿತ್ಯ ದ್ರುಪದಂ ಯುಧಿ।
01154022c ದ್ರೋಣಾಯ ದರ್ಶಯಾಮಾಸುರ್ಬದ್ಧ್ವಾ ಸಸಚಿವಂ ತದಾ।।
ಆಗ ಪಂಚ ಪಾಂಡುಸುತರು ದ್ರುಪದನನ್ನು ಯುದ್ಧದಲ್ಲಿ ನಿರ್ಜಯಿಸಿ ಸಚಿವ ಸಹಿತ ಅವನನ್ನು ಬಂಧಿಸಿ ದ್ರೋಣನಲ್ಲಿಗೆ ಕರೆತಂದರು.
01154023 ದ್ರೋಣ ಉವಾಚ।
01154023a ಪ್ರಾರ್ಥಯಾಮಿ ತ್ವಯಾ ಸಖ್ಯಂ ಪುನರೇವ ನರಾಧಿಪ।
01154023c ಅರಾಜಾ ಕಿಲ ನೋ ರಾಜ್ಞಃ ಸಖಾ ಭವಿತುಮರ್ಹತಿ।।
ದ್ರೋಣನು ಹೇಳಿದನು: “ನರಾಧಿಪ! ನಿನ್ನಿಂದ ಸಖ್ಯವನ್ನು ಪುನಃ ಪ್ರಾರ್ಥಿಸುತ್ತಿದ್ದೇನೆ. ಯಾವ ರಾಜನೂ ರಾಜನಲ್ಲದವನ ಸಖ್ಯನಾಗಲಾರ ಎಂದು ನಿನಗೆ ತಿಳಿದೇ ಇದೆ.
01154024a ಅತಃ ಪ್ರಯತಿತಂ ರಾಜ್ಯೇ ಯಜ್ಞಸೇನ ಮಯಾ ತವ।
01154024c ರಾಜಾಸಿ ದಕ್ಷಿಣೇ ಕೂಲೇ ಭಾಗೀರಥ್ಯಾಹಮುತ್ತರೇ।।
ಆದುದರಿಂದ ಯಜ್ಞಸೇನ! ನಾನು ನಿನ್ನ ರಾಜ್ಯಕ್ಕಾಗಿ ಪ್ರಯತ್ನಿಸಿದೆ. ನೀನು ಭಾಗೀರಥಿಯ ದಕ್ಷಿಣದಲ್ಲಿ ರಾಜನಾಗಿರು ಮತ್ತು ನಾನು ಉತ್ತರದಲ್ಲಿ ರಾಜನಾಗಿರುತ್ತೇನೆ.””
01154025 ಬ್ರಾಹ್ಮಣ ಉವಾಚ।
01154025a ಅಸತ್ಕಾರಃ ಸ ಸುಮಹಾನ್ಮುಹೂರ್ತಮಪಿ ತಸ್ಯ ತು।
01154025c ನ ವ್ಯೇತಿ ಹೃದಯಾದ್ರಾಜ್ಞೋ ದುರ್ಮನಾಃ ಸ ಕೃಶೋಽಭವತ್।।
ಬ್ರಾಹ್ಮಣನು ಹೇಳಿದನು: “ಅಷ್ಟು ದೊಡ್ಡ ಅಪಮಾನವು ಅವನ ಹೃದಯವನ್ನು ಒಂದು ಕ್ಷಣವೂ ಬಿಡಲಿಲ್ಲ ಮತ್ತು ರಾಜನು ದುರ್ಮನಸ್ಕನೂ ಕೃಶನೂ ಆದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ದ್ರೌಪದೀಸಂಭವೇ ಚತುಷ್ಪಂಚಾದಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ದ್ರೌಪದೀಸಂಭವದಲ್ಲಿ ನೂರಾಐವತ್ತ್ನಾಲ್ಕನೆಯ ಅಧ್ಯಾಯವು.