152

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಬಕವಧ ಪರ್ವ

ಅಧ್ಯಾಯ 152

ಸಾರ

ಭೀಮನು ಬಕನ ಶವವನ್ನು ನಗರದ ಬಾಗಿಲಿಗೆ ಕಟ್ಟಿ ಯಾರಿಗೂ ತಿಳಿಯದಂತೆ ಹೊರಟು ಹೋದುದು (1-6). ಕಂಟಕವು ಕಳೆಯಿತೆಂದು ಪುರಜನರು ಹರ್ಷಿಸುವುದು (7-19).

01152001 ವೈಶಂಪಾಯನ ಉವಾಚ।
01152001a ತೇನ ಶಬ್ದೇನ ವಿತ್ರಸ್ತೋ ಜನಸ್ತಸ್ಯಾಥ ರಕ್ಷಸಃ।
01152001c ನಿಷ್ಪಪಾತ ಗೃಹಾದ್ರಾಜನ್ಸಹೈವ ಪರಿಚಾರಿಭಿಃ।।

ವೈಶಂಪಾಯನನು ಹೇಳಿದನು: “ರಾಜನ್! ಆ ಶಬ್ಧದಿಂದ ಎಚ್ಚೆತ್ತ ರಾಕ್ಷಸ ಜನರೆಲ್ಲರೂ ಪರಿಚಾರಿಗಳ ಸಹಿತ ಮನೆಯಿಂದ ಹೊರಬಿದ್ದರು.

01152002a ತಾನ್ಭೀತಾನ್ವಿಗತಜ್ಞಾನಾನ್ಭೀಮಃ ಪ್ರಹರತಾಂ ವರಃ।
01152002c ಸಾಂತ್ವಯಾಮಾಸ ಬಲವಾನ್ಸಮಯೇ ಚ ನ್ಯವೇಶಯತ್।।

ಮುಷ್ಠಿಯುದ್ಧದಲ್ಲಿ ಶ್ರೇಷ್ಠ ಬಲವಾನ್ ಭೀಮನು ಭೀತರಾಗಿ ಬುದ್ಧಿಕಳೆದುಕೊಂಡಿದ್ದ ಅವರನ್ನು ಸಮಾಧಾನಪಡಿಸಿ ಒಂದು ಒಪ್ಪಂದಕ್ಕೆ ಒಪ್ಪಿಕೊಳ್ಳುವಂತೆ ಮಾಡಿದನು.

01152003a ನ ಹಿಂಸ್ಯಾ ಮಾನುಷಾ ಭೂಯೋ ಯುಷ್ಮಾಭಿರಿಹ ಕರ್ಹಿ ಚಿತ್।
01152003c ಹಿಂಸತಾಂ ಹಿ ವಧಃ ಶೀಘ್ರಮೇವಮೇವ ಭವೇದಿತಿ।।

“ಇಲ್ಲಿರುವ ಯಾವ ಮನುಷ್ಯರಿಗೂ ಎಂದೂ ನೀವ್ಯಾರೂ ಹಿಂಸಿಸಬಾರದು. ಹಿಂಸಿಸುವವರು ಇದೇರೀತಿ ಶೀಘ್ರವಾಗಿ ಸಾಯುತ್ತಾರೆ” ಎಂದನು.

01152004a ತಸ್ಯ ತದ್ವಚನಂ ಶ್ರುತ್ವಾ ತಾನಿ ರಕ್ಷಾಂಸಿ ಭಾರತ।
01152004c ಏವಮಸ್ತ್ವಿತಿ ತಂ ಪ್ರಾಹುರ್ಜಗೃಹುಃ ಸಮಯಂ ಚ ತಂ।।

ಭಾರತ! ಅವನ ಆ ಮಾತುಗಳನ್ನು ಕೇಳಿದ ಆ ರಾಕ್ಷಸರು “ಹಾಗೆಯೇ ಆಗಲಿ!”ಎಂದು ಒಪ್ಪಂದಮಾಡಿಕೊಂಡು ಹೊರಟುಹೋದರು.

01152005a ತತಃ ಪ್ರಭೃತಿ ರಕ್ಷಾಂಸಿ ತತ್ರ ಸೌಮ್ಯಾನಿ ಭಾರತ।
01152005c ನಗರೇ ಪ್ರತ್ಯದೃಶ್ಯಂತ ನರೈರ್ನಗರವಾಸಿಭಿಃ।।

ಭಾರತ! ಅಂದಿನಿಂದ ಅಲ್ಲಿರುವ ರಾಕ್ಷಸರು ನಗರ ವಾಸಿಗಳನ್ನು ನಗರದ ಸುತ್ತಮುತ್ತ ನೋಡಿದರೂ ಸೌಮ್ಯರಾಗಿದ್ದರು.

01152006a ತತೋ ಭಿಮಸ್ತಮಾದಾಯ ಗತಾಸುಂ ಪುರುಷಾದಕಂ।
01152006c ದ್ವಾರದೇಶೇ ವಿನಿಕ್ಷಿಪ್ಯ ಜಗಾಮಾನುಪಲಕ್ಷಿತಃ।।

ಭೀಮನು ಸತ್ತುಹೋಗಿದ್ದ ಆ ಪುರುಷಾದಕನನ್ನು ಎಳೆದು ದ್ವಾರದ ಕೆಳಗೆ ಬೀಳಿಸಿ, ಯಾರಿಗೂ ಕಾಣದ ಹಾಗೆ ಅಲ್ಲಿಂದ ಹೊರಟುಹೋದನು.

01152007a ತತಃ ಸ ಭೀಮಸ್ತಂ ಹತ್ವಾ ಗತ್ವಾ ಬ್ರಾಹ್ಮಣವೇಶ್ಮ ತತ್।
01152007c ಆಚಚಕ್ಷೇ ಯಥಾವೃತ್ತಂ ರಾಜ್ಞಃ ಸರ್ವಮಶೇಷತಃ।।

ಅವನನ್ನು ಕೊಂದು ಭೀಮನು ಬ್ರಾಹ್ಮಣನ ಮನೆಗೆ ಹೋಗಿ ರಾಜ ಯುಧಿಷ್ಠಿರನಿಗೆ ಏನನ್ನೂ ಬಿಡದೆ ಎಲ್ಲವನ್ನೂ ಯಥಾವತ್ತಾಗಿ ವರದಿಮಾಡಿದನು.

01152008a ತತೋ ನರಾ ವಿನಿಷ್ಕ್ರಾಂತಾ ನಗರಾತ್ಕಾಲ್ಯಮೇವ ತು।
01152008c ದದೃಶುರ್ನಿಹತಂ ಭೂಮೌ ರಾಕ್ಷಸಂ ರುಧಿರೋಕ್ಷಿತಂ।।
01152009a ತಮದ್ರಿಕೂಟಸದೃಶಂ ವಿನಿಕೀರ್ಣಂ ಭಯಾವಹಂ।
01152009c ಏಕಚಕ್ರಾಂ ತತೋ ಗತ್ವಾ ಪ್ರವೃತ್ತಿಂ ಪ್ರದದುಃ ಪರೇ।।

ಮರುದಿನ ಬೆಳಿಗ್ಗೆ ನಗರದಿಂದ ಹೊರಬಂದ ಜನರು ನೆಲದ ಮೇಲೆ ರಕ್ತದಿಂದ ಒದ್ದೆಯಾಗಿದ್ದ, ಪರ್ವತ ಶಿಖರದಂತೆ ಪುಡಿಯಾಗಿ ಭಯಾವಹವಾಗಿ ಸತ್ತು ಬಿದ್ದಿದ್ದ ರಾಕ್ಷಸನನ್ನು ನೋಡಿ ಏಕಚಕ್ರಕ್ಕೆ ಹೋಗಿ ಈ ವೃತ್ತಾಂತವನ್ನು ಬೇರೆಯವರಿಗೆಲ್ಲ ಹರಡಿದರು.

01152010a ತತಃ ಸಹಸ್ರಶೋ ರಾಜನ್ನರಾ ನಗರವಾಸಿನಃ।
01152010c ತತ್ರಾಜಗ್ಮುರ್ಬಕಂ ದ್ರಷ್ಟುಂ ಸಸ್ತ್ರೀವೃದ್ಧಕುಮಾರಕಾಃ।।

ರಾಜನ್! ಆಗ ನಗರವಾಸಿಗಳು ತಮ್ಮ ಪತ್ನಿ ಮಕ್ಕಳ ಸಹಿತ ಸಹಸ್ರಾರು ಸಂಖ್ಯೆಗಳಲ್ಲಿ ಬಕನನ್ನು ನೋಡಲು ಅಲ್ಲಿಗೆ ಬಂದರು.

01152011a ತತಸ್ತೇ ವಿಸ್ಮಿತಾಃ ಸರ್ವೇ ಕರ್ಮ ದೃಷ್ಟ್ವಾತಿಮಾನುಷಂ।
01152011c ದೈವತಾನ್ಯರ್ಚಯಾಂ ಚಕ್ರುಃ ಸರ್ವ ಏವ ವಿಶಾಂ ಪತೇ।।

ವಿಶಾಂಪತೇ! ಆ ಅತಿಮಾನುಷ ಕರ್ಮವನ್ನು ನೋಡಿ ವಿಸ್ಮಿತರಾದ ಎಲ್ಲರೂ ಎಲ್ಲ ದೇವತೆಗಳಿಗೂ ಅರ್ಚನೆಯನ್ನು ನೀಡಿದರು.

01152012a ತತಃ ಪ್ರಗಣಯಾಮಾಸುಃ ಕಸ್ಯ ವಾರೋಽದ್ಯ ಭೋಜನೇ।
01152012c ಜ್ಞಾತ್ವಾ ಚಾಗಮ್ಯ ತಂ ವಿಪ್ರಂ ಪಪ್ರಚ್ಛುಃ ಸರ್ವ ಏವ ತತ್।।

ಆಗ ಅವರು ರಾಕ್ಷಸನಿಗೆ ಭೋಜನವನ್ನು ನೀಡುವ ಬಾರಿ ಯಾರಿದ್ದಿರಬಹುದು ಎಂದು ಲೆಖ್ಕ ಮಾಡಿ, ಆ ವಿಪ್ರನ ಬಾರಿಯಾಗಿತ್ತು ಎಂದು ತಿಳಿದು ಎಲ್ಲರೂ ಅವನನ್ನು ಪ್ರಶ್ನಿಸತೊಡಗಿದರು.

01152013a ಏವಂ ಪೃಷ್ಟಸ್ತು ಬಹುಶೋ ರಕ್ಷಮಾಣಶ್ಚ ಪಾಂಡವಾನ್।
01152013c ಉವಾಚ ನಾಗರಾನ್ಸರ್ವಾನಿದಂ ವಿಪ್ರರ್ಷಭಸ್ತದಾ।।

ಈ ರೀತಿ ಬಹಳಷ್ಟು ಪ್ರಶ್ನೆಗಳನ್ನು ಎದುರಿಸಿದ ವಿಪ್ರರ್ಷಭನು ಪಾಂಡವರನ್ನು ರಕ್ಷಿಸುತ್ತಾ ನಾಗರೀಕರಿಗೆ ಹೇಳಿದನು:

01152014a ಆಜ್ಞಾಪಿತಂ ಮಾಮಶನೇ ರುದಂತಂ ಸಹ ಬಂಧುಭಿಃ।
01152014c ದದರ್ಶ ಬ್ರಾಹ್ಮಣಃ ಕಶ್ಚಿನ್ಮಂತ್ರಸಿದ್ಧೋ ಮಹಾಬಲಃ।।

“ಆಹಾರವನ್ನೊದಗಿಸಲು ನನಗೆ ಆಜ್ಞಾಪನೆ ಬಂದಾಗ ಬಂಧುಗಳ ಸಹಿತ ರೋದಿಸುತ್ತಿರುವ ನಮ್ಮನ್ನು ಓರ್ವ ಮಂತ್ರಸಿದ್ಧ ಮಹಾಬಲಿ ಬ್ರಾಹ್ಮಣನು ನೋಡಿದನು.

01152015a ಪರಿಪೃಚ್ಛ್ಯ ಸ ಮಾಂ ಪೂರ್ವಂ ಪರಿಕ್ಲೇಶಂ ಪುರಸ್ಯ ಚ।
01152015c ಅಬ್ರವೀದ್ಬ್ರಾಹ್ಮಣಶ್ರೇಷ್ಠ ಆಶ್ವಾಸ್ಯ ಪ್ರಹಸನ್ನಿವ।।
01152016a ಪ್ರಾಪಯಿಷ್ಯಾಮ್ಯಹಂ ತಸ್ಮೈ ಇದಮನ್ನಂ ದುರಾತ್ಮನೇ।
01152016c ಮನ್ನಿಮಿತ್ತಂ ಭಯಂ ಚಾಪಿ ನ ಕಾರ್ಯಮಿತಿ ವೀರ್ಯವಾನ್।।

ಅವನು ನನ್ನಲ್ಲಿ ಹಿಂದಿನಿಂದ ಇರುವ ಪುರದ ಪರಿಕ್ಲೇಶದ ಕುರಿತು ಕೇಳಿದನು. ಮತ್ತು ಆ ವೀರ ಬ್ರಾಹ್ಮಣಶ್ರೇಷ್ಠನು ನಗುತ್ತಾ “ಆ ದುರಾತ್ಮನಿಗೆ ಆಹಾರವನ್ನು ನಾನು ಕೊಂಡೊಯ್ಯುತ್ತೇನೆ. ನನ್ನ ಕುರಿತು ಭಯಪಡಬೇಡ!” ಎಂದು ಆಶ್ವಾಸನೆಯನ್ನಿತ್ತನು.

01152017a ಸ ತದನ್ನಮುಪಾದಾಯ ಗತೋ ಬಕವನಂ ಪ್ರತಿ।
01152017c ತೇನ ನೂನಂ ಭವೇದೇತತ್ಕರ್ಮ ಲೋಕಹಿತಂ ಕೃತಂ।।

ಅವನು ಆಹಾರವನ್ನು ತೆಗೆದುಕೊಂಡು ಬಕವನದ ಕಡೆ ಹೋದನು. ಈ ಲೋಕಹಿತ ಕಾರ್ಯವು ಅವನ ಕೃತ್ಯವೇ ಆಗಿರಬೇಕು!”

01152018a ತತಸ್ತೇ ಬ್ರಾಹ್ಮಣಾಃ ಸರ್ವೇ ಕ್ಷತ್ರಿಯಾಶ್ಚ ಸುವಿಸ್ಮಿತಾಃ।
01152018c ವೈಶ್ಯಾಃ ಶೂದ್ರಾಶ್ಚ ಮುದಿತಾಶ್ಚಕ್ರುರ್ಬ್ರಹ್ಮಮಹಂ ತದಾ।।

ವಿಸ್ಮಿತರಾದ, ಮುದಿತ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ಎಲ್ಲರೂ ಬ್ರಾಹ್ಮಣನಿಗೆ ಮಹಾ ಔತಣವನ್ನಿತ್ತರು.

01152019a ತತೋ ಜಾನಪದಾಃ ಸರ್ವೇ ಆಜಗ್ಮುರ್ನಗರಂ ಪ್ರತಿ।
01152019c ತದದ್ಭುತತಮಂ ದ್ರಷ್ಟುಂ ಪಾರ್ಥಾಸ್ತತ್ರೈವ ಚಾವಸನ್।।

ಆಗ ಆ ಮಹಾ ಅದ್ಭುತವನ್ನು ನೋಡಲು ಜನಪದದಿಂದ ಎಲ್ಲರೂ ನಗರಕ್ಕೆ ಬಂದರು. ಪಾರ್ಥರು ತಮ್ಮ ವಾಸವನ್ನು ಅಲ್ಲಿಯೇ ಮುಂದುವರಿಸಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಬಕವಧಪರ್ವಣಿ ದೈಪಂಚಾರಿಂಶದಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಬಕವಧಪರ್ವದಲ್ಲಿ ನೂರಾಐವತ್ತೆರಡನೆಯ ಅಧ್ಯಾಯವು. ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಬಕವಧಪರ್ವ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಬಕವಧಪರ್ವವು. ಇದೂವರೆಗಿನ ಒಟ್ಟು ಮಹಾಪರ್ವಗಳು-0/18, ಉಪಪರ್ವಗಳು-10/100, ಅಧ್ಯಾಯಗಳು-152/1995, ಶ್ಲೋಕಗಳು-5222/76784.