151

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಬಕವಧ ಪರ್ವ

ಅಧ್ಯಾಯ 151

ಸಾರ

ಆಹಾರವನ್ನು ತೆಗೆದುಕೊಂಡು ಭೀಮನು ರಾಕ್ಷಸ ಬಕನಲ್ಲಿಗೆ ಹೋಗಿ ಆಹಾರವನ್ನು ತಿಂದು ಮುಗಿಸುವುದು (1-10). ಕೋಪಗೊಂಡ ಬಕನು ಭೀಮನೊಂದಿಗೆ ಯುದ್ಧಕ್ಕೆ ಬರುವುದು; ಬಕನ ಸಾವು (11-24).

01151001 ವೈಶಂಪಾಯನ ಉವಾಚ।
01151001a ತತೋ ರಾತ್ರ್ಯಾಂ ವ್ಯತೀತಾಯಾಮನ್ನಮಾದಾಯ ಪಾಂಡವಃ।
01151001c ಭೀಮಸೇನೋ ಯಯೌ ತತ್ರ ಯತ್ರಾಸೌ ಪುರುಷಾದಕಃ।।

ವೈಶಂಪಾಯನನು ಹೇಳಿದನು: “ರಾತ್ರಿ ಕಳೆದ ನಂತರ ಪಾಂಡವ ಭೀಮಸೇನನು ಆಹಾರವನ್ನು ತೆಗೆದುಕೊಂಡು ಆ ಪುರುಷಾದಕನು ವಾಸಿಸುತ್ತಿರುವಲ್ಲಿಗೆ ಹೋದನು.

01151002a ಆಸಾದ್ಯ ತು ವನಂ ತಸ್ಯ ರಕ್ಷಸಃ ಪಾಂಡವೋ ಬಲೀ।
01151002c ಆಜುಹಾವ ತತೋ ನಾಮ್ನಾ ತದನ್ನಮುಪಯೋಜಯನ್।।

ರಾಕ್ಷಸನ ಆ ವನವನ್ನು ತಲುಪಿದ ಬಲಶಾಲಿ ಪಾಂಡವನು ಅವನನ್ನು ಅವನ ಹೆಸರಿನಿಂದ ಕೂಗಿ ಕರೆದು ಆಹಾರವನ್ನು ತಿನ್ನ ತೊಡಗಿದನು.

01151003a ತತಃ ಸ ರಾಕ್ಷಸಃ ಶ್ರುತ್ವಾ ಭೀಮಸೇನಸ್ಯ ತದ್ವಚಃ।
01151003c ಆಜಗಾಮ ಸುಸಂಕ್ರುದ್ಧೋ ಯತ್ರ ಭೀಮೋ ವ್ಯವಸ್ಥಿತಃ।।

ಭೀಮಸೇನನ ಆ ಕೂಗನ್ನು ಕೇಳಿದ ಆ ರಾಕ್ಷಸನು ಸಂಕೃದ್ಧನಾಗಿ ಭೀಮನು ನಿಂತಿರುವಲ್ಲಿಗೆ ಬಂದನು.

01151004a ಮಹಾಕಾಯೋ ಮಹಾವೇಗೋ ದಾರಯನ್ನಿವ ಮೇದಿನೀಂ।
01151004c ತ್ರಿಶಿಖಾಂ ಭೃಕುಟಿಂ ಕೃತ್ವಾ ಸಂದಶ್ಯ ದಶನಚ್ಛದಂ।।

ಮೂರು ಹುಬ್ಬುಗಳನ್ನು ಶಿಖಗಳನ್ನಾಗಿ ಕಟ್ಟಿ ಹಲ್ಲುಗಳ ಮೊಸಡೆಗಳನ್ನು ಕಡಿಯುತ್ತಾ ಆ ಮಹಾಕಾಯನು ಮೇದಿನಿಯನ್ನು ಪುಡಿಮಾಡುತ್ತಾನೋ ಎನ್ನುವಂತೆ ಮಹಾವೇಗದಲ್ಲಿ ಬಂದನು.

01151005a ಭುಂಜಾನಮನ್ನಂ ತಂ ದೃಷ್ಟ್ವಾ ಭೀಮಸೇನಂ ಸ ರಾಕ್ಷಸಃ।
01151005c ವಿವೃತ್ಯ ನಯನೇ ಕ್ರುದ್ಧ ಇದಂ ವಚನಮಬ್ರವೀತ್।।

ಅನ್ನವನ್ನು ತಿನ್ನುತ್ತಿರುವ ಭೀಮಸೇನನನ್ನು ನೋಡಿದ ಆ ರಾಕ್ಷಸನು ಸಿಟ್ಟಿನಿಂದ ಕಣ್ಣುಗಳನ್ನು ಅಗಲಿಸಿ ಈ ಮಾತುಗಳನ್ನಾಡಿದನು:

01151006a ಕೋಽಯಮನ್ನಮಿದಂ ಭುಂಕ್ತೇ ಮದರ್ಥಮುಪಕಲ್ಪಿತಂ।
01151006c ಪಶ್ಯತೋ ಮಮ ದುರ್ಬುದ್ಧಿರ್ಯಿಯಾಸುರ್ಯಮಸಾದನಂ।।

“ನನಗಾಗಿ ಕಳುಹಿಸಿದ ಈ ಅಹಾರವನ್ನು, ನಾನು ನೋಡುತ್ತಿರುವ ಹಾಗೆಯೇ ತಿನ್ನುತ್ತಿರುವ ದುರ್ಬುದ್ಧಿ ನೀನು ಯಾರು? ಯಮಸಾದನಕ್ಕೆ ಹೋಗಲು ಬಯಸುತ್ತಿದ್ದೀಯಾ?”

01151007a ಭೀಮಸೇನಸ್ತು ತಚ್ಛೃತ್ವಾ ಪ್ರಹಸನ್ನಿವ ಭಾರತ।
01151007c ರಾಕ್ಷಸಂ ತಮನಾದೃತ್ಯ ಭುಂಕ್ತ ಏವ ಪರಾಙ್ಮುಖಃ।।

ಭಾರತ! ಅವನನ್ನು ಕೇಳಿದ ಭೀಮಸೇನನು ನಗುತ್ತಾ ಆ ರಾಕ್ಷಸನನ್ನು ತಿರಸ್ಕರಿಸಿ ಬೇರೆ ಕಡೆ ಮುಖ ತಿರುಗಿಸಿ ತಿನ್ನುವುದನ್ನು ಮುಂದುವರಿಸಿದನು.

01151008a ತತಃ ಸ ಭೈರವಂ ಕೃತ್ವಾ ಸಮುದ್ಯಮ್ಯ ಕರಾವುಭೌ।
01151008c ಅಭ್ಯದ್ರವದ್ಭೀಮಸೇನಂ ಜಿಘಾಂಸುಃ ಪುರುಷಾದಕಃ।।

ಆಗ ಆ ಪುರುಷಾಧಕನು ಒಂದು ಭೈರವ ಕೂಗನ್ನು ಕೂಗಿ, ಎರಡೂ ತೋಳುಗಳನ್ನೂ ಮೇಲಕ್ಕೆತ್ತಿ ಭೀಮಸೇನನನ್ನು ಕೊಲ್ಲಲು ಅವನೆಡೆಗೆ ಮುನ್ನುಗ್ಗಿದ್ದನು.

01151009a ತಥಾಪಿ ಪರಿಭೂಯೈನಂ ನೇಕ್ಷಮಾಣೋ ವೃಕೋದರಃ।
01151009c ರಾಕ್ಷಸಂ ಭುಂಕ್ತ ಏವಾನ್ನಂ ಪಾಂಡವಃ ಪರವೀರಹಾ।।

ಆದರೂ ಪರವೀರ ಪಾಂಡವ ವೃಕೋದರನು ಆ ರಾಕ್ಷಸನಿಗೆ ಗಮನಕೊಡದೇ ಆಹಾರವನ್ನು ತಿನ್ನುವುದನ್ನು ಮುಂದುವರಿಸಿದನು.

01151010a ಅಮರ್ಷೇಣ ತು ಸಂಪೂರ್ಣಃ ಕುಂತೀಪುತ್ರಸ್ಯ ರಾಕ್ಷಸಃ।
01151010c ಜಘಾನ ಪೃಷ್ಠಂ ಪಾಣಿಭ್ಯಾಮುಭಾಭ್ಯಾಂ ಪೃಷ್ಠತಃ ಸ್ಥಿತಃ।।

ರೋಷಗೊಂಡ ರಾಕ್ಷಸನು ಕುಂತೀಪುತ್ರನ ಹಿಂದೆ ನಿಂತು ತನ್ನ ಎರಡೂ ಕೈಗಳಿಂದ ಅವನ ಬೆನ್ನಿನ ಮೇಲೆ ಗುದ್ದತೊಡಗಿದನು.

01151011a ತಥಾ ಬಲವತಾ ಭೀಮಃ ಪಾಣಿಭ್ಯಾಂ ಭೃಶಮಾಹತಃ।
01151011c ನೈವಾವಲೋಕಯಾಮಾಸ ರಾಕ್ಷಸಂ ಭುಂಕ್ತ ಏವ ಸಃ।।

ರಾಕ್ಷಸನ ಕೈಗಳಿಂದ ನೋವಿನ ಪೆಟ್ಟುಗಳು ಬೀಳುತ್ತಿದ್ದರೂ ಬಲವಂತ ಭೀಮನು ಅವನನ್ನು ಅವಲೋಕಿಸದೇ ತಿನ್ನುತ್ತಲೇ ಇದ್ದನು.

01151012a ತತಃ ಸ ಭೂಯಃ ಸಂಕ್ರುದ್ಧೋ ವೃಕ್ಷಮಾದಾಯ ರಾಕ್ಷಸಃ।
01151012c ತಾಡಯಿಷ್ಯಂಸ್ತದಾ ಭೀಮಂ ಪುನರಭ್ಯದ್ರವದ್ಬಲೀ।।

ಇನ್ನೂ ಸಂಕೃದ್ಧನಾದ ರಾಕ್ಷಸನು ಒಂದು ಮರವನ್ನು ಕಿತ್ತೆತ್ತಿ ಬಲಿ ಭೀಮನನ್ನು ಹೊಡೆಯಲೋಸುಗ ಪುನಃ ಓಡಿ ಬಂದನು.

01151013a ತತೋ ಭೀಮಃ ಶನೈರ್ಭುಕ್ತ್ವಾ ತದನ್ನಂ ಪುರುಷರ್ಷಭಃ।
01151013c ವಾರ್ಯುಪಸ್ಪೃಶ್ಯ ಸಂಹೃಷ್ಟಸ್ತಸ್ಥೌ ಯುಧಿ ಮಹಾಬಲಃ।।

ಅಷ್ಟರಲ್ಲಿಯೇ ಪುರುಷರ್ಷಭ ಭೀಮನು ತನ್ನ ಊಟವನ್ನು ಮುಗಿಸಿದ್ದನು. ಬಾಯಿ ಕೈಗಳನ್ನು ತೊಳೆದ ಆ ಮಹಾಬಲಿಯು ಸಂತೋಷದಿಂದ ಯುದ್ಧಕ್ಕೆ ಎದುರಾದನು.

01151014a ಕ್ಷಿಪ್ತಂ ಕ್ರುದ್ಧೇನ ತಂ ವೃಕ್ಷಂ ಪ್ರತಿಜಗ್ರಾಹ ವೀರ್ಯವಾನ್।
01151014c ಸವ್ಯೇನ ಪಾಣಿನಾ ಭೀಮಃ ಪ್ರಹಸನ್ನಿವ ಭಾರತ।।

ಭಾರತ! ಸಿಟ್ಟಿಗೆದ್ದ ರಾಕ್ಷಸನು ಎಸೆದ ವೃಕ್ಷವನ್ನು ಎಡಗೈಯಿಂದ ಬೇಗನೆ ಹಿಡಿದು ಭೀಮನು ಜೋರಾಗಿ ನಗತೊಡಗಿದನು.

01151015a ತತಃ ಸ ಪುನರುದ್ಯಮ್ಯ ವೃಕ್ಷಾನ್ಬಹುವಿಧಾನ್ಬಲೀ।
01151015c ಪ್ರಾಹಿಣೋದ್ಭೀಮಸೇನಾಯ ತಸ್ಮೈ ಭೀಮಶ್ಚ ಪಾಂಡವಃ।।

ಪುನಃ ಆ ಬಲಿಯು ಬಹುವಿಧ ವೃಕ್ಷಗಳನ್ನು ಕಿತ್ತು ಪಾಂಡವ ಭೀಮಸೇನನ ಮೇಲೆ ಎಸೆಯತೊಡಗಿದನು. ಭೀಮನೂ ಕೂಡ ಅವನ ಮೇಲೆ ಎಸೆಯತೊಡಗಿದನು.

01151016a ತದ್ವೃಕ್ಷಯುದ್ಧಮಭವನ್ಮಹೀರುಹವಿನಾಶನಂ।
01151016c ಘೋರರೂಪಂ ಮಹಾರಾಜ ಬಕಪಾಂಡವಯೋರ್ಮಹತ್।।

ಮಹಾರಾಜ! ಈ ರೀತಿ ಬಕ ಮತ್ತು ಪಾಂಡವನ ಮಧ್ಯೆ ಕಾಡನ್ನೇ ನಾಶಪಡಿಸಿದ ಘೋರರೂಪಿ ವೃಕ್ಷಯುದ್ಧವು ನಡೆಯಿತು.

01151017a ನಾಮ ವಿಶ್ರಾವ್ಯ ತು ಬಕಃ ಸಮಭಿದ್ರುತ್ಯ ಪಾಂಡವಂ।
01151017c ಭುಜಾಭ್ಯಾಂ ಪರಿಜಗ್ರಾಹ ಭೀಮಸೇನಂ ಮಹಾಬಲಂ।।

ಹೆಸರನ್ನು ಕೂಗುತ್ತಾ ಬಕನು ಪಾಂಡವನ ಕಡೆ ಓಡಿಬಂದು ಮಹಾಬಲಗಳನ್ನುಳ್ಳ ತನ್ನ ಎರಡೂ ಭುಜಗಳಿಂದ ಭೀಮಸೇನನನ್ನು ಹಿಡಿದುಕೊಂಡನು.

01151018a ಭೀಮಸೇನೋಽಪಿ ತದ್ರಕ್ಷಃ ಪರಿರಭ್ಯ ಮಹಾಭುಜಃ।
01151018c ವಿಸ್ಫುರಂತಂ ಮಹಾವೇಗಂ ವಿಚಕರ್ಷ ಬಲಾದ್ಬಲೀ।।

ಭೀಮಸೇನನೂ ಕೂಡ ತನ್ನ ಮಹಾಭುಜಗಳಿಂದ ಆ ರಾಕ್ಷಸನನ್ನು ಹಿಡಿದು ಭುಸುಗುಟ್ಟುತ್ತಿದ್ದ ಆ ಬಲಶಾಲಿಯನ್ನು ಬಲಾತ್ಕಾರವಾಗಿ ಮಹಾವೇಗದಲ್ಲಿ ಎಳೆದಾಡಿದನು.

01151019a ಸ ಕೃಷ್ಯಮಾಣೋ ಭೀಮೇನ ಕರ್ಷಮಾಣಶ್ಚ ಪಾಂಡವಂ।
01151019c ಸಮಯುಜ್ಯತ ತೀವ್ರೇಣ ಶ್ರಮೇಣ ಪುರುಷಾದಕಃ।।

ಭೀಮನಿಂದ ಎಳೆಯಲ್ಪಟ್ಟ, ಪಾಂಡವನನ್ನೂ ಎಳೆಯುತ್ತಿದ್ದ ಆ ಪುರುಷಾದಕನು ಬೇಗನೇ ತೀವ್ರ ಆಯಾಸವನ್ನು ಹೊಂದಿದನು.

01151020a ತಯೋರ್ವೇಗೇನ ಮಹತಾ ಪೃಥಿವೀ ಸಮಕಂಪತ।
01151020c ಪಾದಪಾಂಶ್ಚ ಮಹಾಕಾಯಾಂಶ್ಚೂರ್ಣಯಾಮಾಸತುಸ್ತದಾ।।

ಅವರು ಮಹಾಕಾಯದ ಮರಗಳನ್ನು ಪುಡಿಪುಡಿ ಮಾಡುತ್ತಿದ್ದ ಮಹಾವೇಗದಿಂದ ಪೃಥ್ವಿಯೇ ನಡುಗಿತು.

01151021a ಹೀಯಮಾನಂ ತು ತದ್ರಕ್ಷಃ ಸಮೀಕ್ಷ್ಯ ಭರತರ್ಷಭ।
01151021c ನಿಷ್ಪಿಷ್ಯ ಭೂಮೌ ಪಾಣಿಭ್ಯಾಂ ಸಮಾಜಘ್ನೇ ವೃಕೋದರಃ।।

ಭರತರ್ಷಭ! ಆ ರಾಕ್ಷಸನು ಕ್ಷೀಣಗೊಳ್ಳುತ್ತಿದ್ದಾನೆ ಎಂದು ನೋಡಿದ ವೃಕೋದರನು ಅವನನ್ನು ನೆಲದ ಮೇಲೆ ಬೀಳಿಸಿ ಮುಷ್ಠಿಗಳಿಂದ ಹೊಡೆಯತೊಡಗಿದನು.

01151022a ತತೋಽಸ್ಯ ಜಾನುನಾ ಪೃಷ್ಠಮವಪೀಡ್ಯ ಬಲಾದಿವ।
01151022c ಬಾಹುನಾ ಪರಿಜಗ್ರಾಹ ದಕ್ಷಿಣೇನ ಶಿರೋಧರಾಂ।।
01151023a ಸವ್ಯೇನ ಚ ಕಟೀದೇಶೇ ಗೃಹ್ಯ ವಾಸಸಿ ಪಾಂಡವಃ।
01151023c ತದ್ರಕ್ಷೋ ದ್ವಿಗುಣಂ ಚಕ್ರೇ ನದಂತಂ ಭೈರವಾನ್ರವಾನ್।।

ನಂತರ ಅವನ ಬೆನ್ನನ್ನು ತನ್ನ ತೊಡೆಯಿಂದ ಬಿಗಿಯಾಗಿ ಕೆಳಕ್ಕೆ ಒತ್ತಿಹಿಡಿದು ಬಲಗೈಯಿಂದ ಅವನ ಶಿರವನ್ನು ಹಿಡಿದು ಎಡಗೈಯಿಂದ ಅವನ ಸೊಂಟದ ಪಟ್ಟಿಯನ್ನು ಹಿಡಿದು ಪಾಂಡವನು ಭೈರವವಾಗಿ ಕೂಗಿಕೊಳ್ಳುತ್ತಿದ್ದ ಆ ರಾಕ್ಷಸನನ್ನು ಎರಡು ತುಂಡುಮಾಡಿದನು.

01151024a ತತೋಽಸ್ಯ ರುಧಿರಂ ವಕ್ತ್ರಾತ್ಪ್ರಾದುರಾಸೀದ್ವಿಶಾಂ ಪತೇ।
01151024c ಭಜ್ಯಮಾನಸ್ಯ ಭೀಮೇನ ತಸ್ಯ ಘೋರಸ್ಯ ರಕ್ಷಸಃ।।

ವಿಶಾಂಪತೇ! ಭೀಮನು ಆ ಘೋರ ರಾಕ್ಷಸನನ್ನು ತುಂಡರಿಸುತ್ತಿದ್ದಂತೆ ಅವನ ಬಾಯಿಯಿಂದ ರಕ್ತವು ಹೊರಚೆಲ್ಲಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಬಕವಧಪರ್ವಣಿ ಪಂಚಾಏಕರಿಂಶದಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಬಕವಧಪರ್ವದಲ್ಲಿ ನೂರಾಐವತ್ತೊಂದನೆಯ ಅಧ್ಯಾಯವು.