ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಬಕವಧ ಪರ್ವ
ಅಧ್ಯಾಯ 150
ಸಾರ
ಕುಂತಿಯ ಯೋಜನೆಯನ್ನು ಕೇಳಿ ಯುಧಿಷ್ಠಿರನು ತನ್ನ ಅಸಂತೋಷವನ್ನು ವ್ಯಕ್ತಪಡಿಸುವುದು (1-11). ಕುಂತಿಯು ತಾನು ಮಾಡಲಿಚ್ಛಿಸಿರುವುದರ ಕಾರಣವನ್ನು ತಿಳಿಸಿದಾಗ ಯುಧಿಷ್ಠಿರನು ಒಪ್ಪಿಕೊಳ್ಳುವುದು (12-27).
01150001 ವೈಶಂಪಾಯನ ಉವಾಚ।
01150001a ಕರಿಷ್ಯ ಇತಿ ಭೀಮೇನ ಪ್ರತಿಜ್ಞಾತೇ ತು ಭಾರತ।
01150001c ಆಜಗ್ಮುಸ್ತೇ ತತಃ ಸರ್ವೇ ಭೈಕ್ಷಮಾದಾಯ ಪಾಂಡವಾಃ।।
ವೈಶಂಪಾಯನನು ಹೇಳಿದನು: “ಭಾರತ! ಮಾಡುತ್ತೇನೆ ಎಂದು ಭೀಮನು ಪ್ರತಿಜ್ಞೆಯನ್ನಿತ್ತ ನಂತರ ಭಿಕ್ಷೆಯನ್ನು ತೆಗೆದುಕೊಂಡು ಎಲ್ಲ ಪಾಂಡವರೂ ಮರಳಿದರು.
01150002a ಆಕಾರೇಣೈವ ತಂ ಜ್ಞಾತ್ವಾ ಪಾಂಡುಪುತ್ರೋ ಯುಧಿಷ್ಠಿರಃ।
01150002c ರಹಃ ಸಮುಪವಿಶ್ಯೈಕಸ್ತತಃ ಪಪ್ರಚ್ಛ ಮಾತರಂ।।
ಪಾಂಡುಪುತ್ರ ಯುಧಿಷ್ಠಿರನು ಭೀಮನ ತೋರಿಕೆಯಿಂದಲೇ ಏನೋ ರಹಸ್ಯವಿದೆಯೆಂದು ತಿಳಿದುಕೊಂಡು ತನ್ನ ತಾಯಿ ಒಬ್ಬಳನ್ನೇ ಕೂರಿಸಿಕೊಂಡು ಪ್ರಶ್ನಿಸಿದನು.
01150003a ಕಿಂ ಚಿಕೀರ್ಷತ್ಯಯಂ ಕರ್ಮ ಭೀಮೋ ಭೀಮಪರಾಕ್ರಮಃ।
01150003c ಭವತ್ಯನುಮತೇ ಕಚ್ಚಿದಯಂ ಕರ್ತುಮಿಹೇಚ್ಛತಿ।।
“ಭೀಮಪರಾಕ್ರಮಿ ಭೀಮನು ಏನನ್ನು ಮಾಡಲು ಉತ್ಸುಕನಾಗಿದ್ದಾನೆ? ಅವನು ಏನನ್ನೋ ಮಾಡಲು ಬಯಸುತ್ತಿದ್ದಾನೆ ಮತ್ತು ಅದಕ್ಕೆ ನಿನ್ನ ಅನುಮತಿಯಿದ್ದಂತಿದೆ.”
01150004 ಕುಂತ್ಯುವಾಚ।
01150004a ಮಮೈವ ವಚನಾದೇಷ ಕರಿಷ್ಯತಿ ಪರಂತಪಃ।
01150004c ಬ್ರಾಹ್ಮಣಾರ್ಥೇ ಮಹತ್ಕೃತ್ಯಂ ಮೋಷ್ಕಾಯ ನಗರಸ್ಯ ಚ।।
ಕುಂತಿಯು ಹೇಳಿದಳು: “ನನ್ನ ಹೇಳಿಕೆಯಂತೆ ಈ ಪರಂತಪನು ಬ್ರಾಹ್ಮಣನಿಗಾಗಿ ಒಂದು ಮಹಾಕಾರ್ಯವನ್ನು ಮಾಡಿ ಈ ನಗರವನ್ನು ಬಿಡುಗಡೆಮಾಡಲಿದ್ದಾನೆ.”
01150005 ಯುಧಿಷ್ಠಿರ ಉವಾಚ।
01150005a ಕಿಮಿದಂ ಸಾಹಸಂ ತೀಕ್ಷ್ಣಂ ಭವತ್ಯಾ ದುಷ್ಕೃತಂ ಕೃತಂ।
01150005c ಪರಿತ್ಯಾಗಂ ಹಿ ಪುತ್ರಸ್ಯ ನ ಪ್ರಶಂಸಂತಿ ಸಾಧವಃ।।
ಯುಧಿಷ್ಠಿರನು ಹೇಳಿದನು: “ಇದೆಂತಹ ತೀಕ್ಷ್ಣ ದುಷ್ಕರ ಸಾಹಸ ಕಾರ್ಯವನ್ನೆಸಗಿದೆ! ಸಾಧುಗಳು ಪುತ್ರ ಪರಿತ್ಯಾಗವನ್ನು ಪ್ರಶಂಸಿಸುವುದಿಲ್ಲ.
01150006a ಕಥಂ ಪರಸುತಸ್ಯಾರ್ಥೇ ಸ್ವಸುತಂ ತ್ಯಕ್ತುಮಿಚ್ಛಸಿ।
01150006c ಲೋಕವೃತ್ತಿವಿರುದ್ಧಂ ವೈ ಪುತ್ರತ್ಯಾಗಾತ್ಕೃತಂ ತ್ವಯಾ।।
ಪರಸುತನ ಸಲುವಾಗಿ ಸ್ವಸುತನನ್ನು ತ್ಯಜಿಸಲು ಹೇಗೆ ಇಚ್ಛಿಸುವೆ? ನಿನ್ನ ಪುತ್ರನ ತ್ಯಾಗಗೈದು ನೀನು ಲೋಕಾವೃತ್ತಿಯ ವಿರುದ್ಧ ನಡೆಯುತ್ತಿದ್ದೀಯೆ.
01150007a ಯಸ್ಯ ಬಾಹೂ ಸಮಾಶ್ರಿತ್ಯ ಸುಖಂ ಸರ್ವೇ ಸ್ವಪಾಮಹೇ।
01150007c ರಾಜ್ಯಂ ಚಾಪಹೃತಂ ಕ್ಷುದ್ರೈರಾಜಿಹೀರ್ಷಾಮಹೇ ಪುನಃ।।
ಅವನ ಬಾಹುಗಳ ಆಶ್ರಯವನ್ನೇ ಹೊಂದಿ ನಾವೆಲ್ಲರೂ ಸುಖ ನಿದ್ದೆಯನ್ನು ಮಾಡಬಲ್ಲೆವು ಮತ್ತು ಕೆಟ್ಟಜನರಿಂದ ಅಪಹೃತ ರಾಜ್ಯವನ್ನು ಪುನಃ ಹಿಂದೆ ತೆಗೆದುಕೊಳ್ಳುವುದಕ್ಕೂ ಇವನೇ ಸಹಾಯಮಾಡುವವನು.
01150008a ಯಸ್ಯ ದುರ್ಯೋಧನೋ ವೀರ್ಯಂ ಚಿಂತಯನ್ನಮಿತೌಜಸಃ।
01150008c ನ ಶೇತೇ ವಸತೀಃ ಸರ್ವಾ ದುಃಖಾಚ್ಛಕುನಿನಾ ಸಹ।।
ಆ ಅಮಿತೌಜಸನ ವೀರ್ಯದಿಂದಾಗಿ ದುರ್ಯೋಧನನೂ ಚಿಂತೆಗೊಳಗಾಗುತ್ತಾನೆ ಮತ್ತು ಅವನಿಂದಾಗಿ ಶಕುನಿಯೂ ಸೇರಿ ಎಲ್ಲರೂ ದುಃಖದಿಂದ ನಿದ್ದೆ ಮಾಡುವುದಿಲ್ಲ.
01150009a ಯಸ್ಯ ವೀರಸ್ಯ ವೀರ್ಯೇಣ ಮುಕ್ತಾ ಜತುಗೃಹಾದ್ವಯಂ।
01150009c ಅನ್ಯೇಭ್ಯಶ್ಚೈವ ಪಾಪೇಭ್ಯೋ ನಿಹತಶ್ಚ ಪುರೋಚನಃ।।
ಆ ವೀರನ ಧೈರ್ಯದಿಂದಲೇ ನಾವು ಜತುಗೃಹ ಮತ್ತು ಇತರ ಆಪತ್ತುಗಳಿಂದ ತಪ್ಪಿಸಿಕೊಂಡೆವು ಮತ್ತು ಪುರೋಚನನು ಸತ್ತುಹೋದ.
01150010a ಯಸ್ಯ ವೀರ್ಯಂ ಸಮಾಶ್ರಿತ್ಯ ವಸುಪೂರ್ಣಾಂ ವಸುಂಧರಾಂ।
01150010c ಇಮಾಂ ಮನ್ಯಾಮಹೇ ಪ್ರಾಪ್ತಾಂ ನಿಹತ್ಯ ಧೃತರಾಷ್ಟ್ರಜಾನ್।।
ಅವನ ಧೈರ್ಯದ ಆಸರೆಯಲ್ಲಿಯೇ ನಾವು ಧೃತರಾಷ್ಟ್ರಜರನ್ನು ಕೊಂದು ಈ ವಸುಪೂರ್ಣೆ ವಸುಂಧರೆಯನ್ನು ಪಡೆಯುತ್ತೇವೆ ಎಂದು ಅಂದುಕೊಂಡಿದ್ದೇವೆ.
01150011a ತಸ್ಯ ವ್ಯವಸಿತಸ್ತ್ಯಾಗೋ ಬುದ್ಧಿಮಾಸ್ಥಾಯ ಕಾಂ ತ್ವಯಾ।
01150011c ಕಚ್ಚಿನ್ನ ದುಃಖೈರ್ಬುದ್ಧಿಸ್ತೇ ವಿಪ್ಲುತಾ ಗತಚೇತಸಃ।।
ಇಂಥ ಅವನನ್ನು ಪರಿತ್ಯಾಗಮಾಡಬೇಕೆಂಬುದು ನಿನ್ನ ಬುದ್ಧಿಗೆ ಹೇಗಾದರೂ ಬಂದಿತು? ದುಃಖದಿಂದ ನಿನ್ನ ಬುದ್ಧಿಯು ತೊಳೆದು ಹೋಗಿ ಬುದ್ಧಿಯಿಲ್ಲದವಳಂತೆ ಆಗಿಲ್ಲ ತಾನೆ?”
01150012 ಕುಂತ್ಯುವಾಚ।
01150012a ಯುಧಿಷ್ಠಿರ ನ ಸಂತಾಪಃ ಕಾರ್ಯಃ ಪ್ರತಿ ವೃಕೋದರಂ।
01150012c ನ ಚಾಯಂ ಬುದ್ಧಿದೌರ್ಬಲ್ಯಾದ್ವ್ಯ್ಯವಸಾಯಃ ಕೃತೋ ಮಯಾ।।
ಕುಂತಿಯು ಹೇಳಿದಳು: “ಯುಧಿಷ್ಠಿರ! ವೃಕೋದರನ ವಿಷಯದಲ್ಲಿ ಸಂತಾಪಪಡಬೇಡ. ನಾನು ಬುದ್ಧಿ ದೌರ್ಬಲ್ಯದಿಂದ ಈ ನಿಶ್ಚಯವನ್ನು ತೆಗೆದುಕೊಂಡಿಲ್ಲ.
01150013a ಇಹ ವಿಪ್ರಸ್ಯ ಭವನೇ ವಯಂ ಪುತ್ರ ಸುಖೋಷಿತಾಃ।
01150013c ತಸ್ಯ ಪ್ರತಿಕ್ರಿಯಾ ತಾತ ಮಯೇಯಂ ಪ್ರಸಮೀಕ್ಷಿತಾ।
01150013e ಏತಾವಾನೇವ ಪುರುಷಃ ಕೃತಂ ಯಸ್ಮಿನ್ನ ನಶ್ಯತಿ।।
ಪುತ್ರ! ಈ ವಿಪ್ರನ ಮನೆಯಲ್ಲಿ ನಾವು ಸುಖವಾಗಿ ವಾಸಿಸುತ್ತಿದ್ದೇವೆ. ಮಗೂ! ಅದಕ್ಕೆ ಪ್ರತಿಕ್ರಿಯೆಯಾಗಿ ನಾನು ಇದನ್ನು ಪರಿಗಣಿಸುತ್ತಿದ್ದೇನೆ. ಇಂಥಹ ಪುರುಷನಿಗೆ ಎಷ್ಟು ಮಾಡಿದರೂ ಸಾಕಾಗುವುದಿಲ್ಲ.
01150014a ದೃಷ್ಟ್ವಾ ಭೀಷ್ಮಸ್ಯ ವಿಕ್ರಾಂತಂ ತದಾ ಜತುಗೃಹೇ ಮಹತ್।
01150014c ಹಿಡಿಂಬಸ್ಯ ವಧಾಚ್ಚೈವ ವಿಶ್ವಾಸೋ ಮೇ ವೃಕೋದರೇ।।
ಜತುಗೃಹದಲ್ಲಿ ಭೀಮನ ಮಹಾ ವಿಕ್ರಾಂತ ಮತ್ತು ಹಿಡಿಂಬನ ವಧೆಯನ್ನು ನೋಡಿ ನನಗೆ ವೃಕೋದರನಲ್ಲಿ ವಿಶ್ವಾಸವಾಗಿದೆ.
01150015a ಬಾಹ್ವೋರ್ಬಲಂ ಹಿ ಭೀಮಸ್ಯ ನಾಗಾಯುತಸಮಂ ಮಹತ್।
01150015c ಯೇನ ಯೂಯಂ ಗಜಪ್ರಖ್ಯಾ ನಿರ್ವ್ಯೂಢಾ ವಾರಣಾವತಾತ್।।
ಭೀಮನ ಬಾಹುಗಳ ಬಲವು ಆನೆಗಳ ಒಂದು ದೊಡ್ಡ ಗುಂಪಿಗೆ ಸಮನಾಗಿದೆ. ಅದೇ ಬಾಹುಗಳಿಂದ ಆನೆಗಳಂತಿರುವ ಪ್ರತಿಯೊಬ್ಬ ನಿಮ್ಮೆಲ್ಲರನ್ನೂ ವಾರಣಾವತದಿಂದ ಹೊತ್ತು ತಂದನು.
01150016a ವೃಕೋದರಬಲೋ ನಾನ್ಯೋ ನ ಭೂತೋ ನ ಭವಿಷ್ಯತಿ।
01150016c ಯೋಽಭ್ಯುದೀಯಾದ್ಯುಧಿ ಶ್ರೇಷ್ಠಮಪಿ ವಜ್ರಧರಂ ಸ್ವಯಂ।।
ವೃಕೋದರನಷ್ಟು ಬಲಶಾಲಿಯಾದವನು ಬೇರೆ ಯಾರೂ ಇದಕ್ಕೆ ಮೊದಲೂ ಇರಲಿಲ್ಲ ಇನ್ನುಮುಂದೆಯೂ ಇರುವುದಿಲ್ಲ. ಅವನು ಯುದ್ಧದಲ್ಲಿ ಶ್ರೇಷ್ಠ ಯಾರನ್ನೂ, ಸ್ವಯಂ ವಜ್ರಧರನನ್ನೂ ಎದುರಿಸಬಲ್ಲ.
01150017a ಜಾತಮಾತ್ರಃ ಪುರಾ ಚೈಷ ಮಮಾಂಕಾತ್ಪತಿತೋ ಗಿರೌ।
01150017c ಶರೀರಗೌರವಾತ್ತಸ್ಯ ಶಿಲಾ ಗಾತ್ರೈರ್ವಿಚೂರ್ಣಿತಾ।।
ಅವನ ದೇಹವು ಎಷ್ಟು ಗಟ್ಟಿಯಿದೆಯೆಂದರೆ - ಹಿಂದೆ ಹುಟ್ಟಿದ ಕೆಲವೇ ಸಮಯದಲ್ಲಿ ಅವನು ನನ್ನ ತೊಡೆಯಿಂದ ಪರ್ವತದ ಕೆಳಗೆ ಬಿದ್ದಾಗ ಅವನು ತನ್ನ ದೇಹದಿಂದ ಶಿಲೆಯನ್ನು ಒಡೆದು ಪುಡಿಮಾಡಿದ್ದನು.
01150018a ತದಹಂ ಪ್ರಜ್ಞಯಾ ಸ್ಮೃತ್ವಾ ಬಲಂ ಭೀಮಸ್ಯ ಪಾಂಡವ।
01150018c ಪ್ರತೀಕಾರಂ ಚ ವಿಪ್ರಸ್ಯ ತತಃ ಕೃತವತೀ ಮತಿಂ।।
ಪಾಂಡವ! ಭೀಮನ ಬಲವನ್ನು ನೆನಪಿಸಿಕೊಂಡ ನಾನು ಸಂಪೂರ್ಣ ಪ್ರಜ್ಞೆಯಲ್ಲಿದ್ದೆ. ಆದುದರಿಂದಲೇ ನಾನು ಈ ಬ್ರಾಹ್ಮಣನಿಗೆ ಪ್ರತೀಕಾರವನ್ನು ಮಾಡಲು ಮನಸ್ಸುಮಾಡಿದೆ.
01150019a ನೇದಂ ಲೋಭಾನ್ನ ಚಾಜ್ಞಾನಾನ್ನ ಚ ಮೋಹಾದ್ವಿನಿಶ್ಚಿತಂ।
01150019c ಬುದ್ಧಿಪೂರ್ವಂ ತು ಧರ್ಮಸ್ಯ ವ್ಯವಸಾಯಃ ಕೃತೋ ಮಯಾ।।
ಇದನ್ನು ನಾನು ಲೋಭ ಅಥವಾ ಅಜ್ಞಾನ ಅಥವಾ ಮೋಹದಿಂದ ನಿರ್ಧರಿಸಲಿಲ್ಲ. ಬುದ್ದಿಪೂರ್ವಕವಾಗಿ ಧರ್ಮ ಪೂರಕವಾಗಿಯೇ ನಾನು ಇದನ್ನು ನಿಶ್ಚಯಿಸಿದೆ.
01150020a ಅರ್ಥೌ ದ್ವಾವಪಿ ನಿಷ್ಪನ್ನೌ ಯುಧಿಷ್ಠಿರ ಭವಿಷ್ಯತಃ।
01150020c ಪ್ರತೀಕಾರಶ್ಚ ವಾಸಸ್ಯ ಧರ್ಮಶ್ಚ ಚರಿತೋ ಮಹಾನ್।।
ಯುಧಿಷ್ಠಿರ! ಈ ರೀತಿಯಲ್ಲಿ ಎರಡು ಉದ್ದೇಶಗಳನ್ನು ಪೂರೈಸಬಹುದು: ನಮ್ಮ ವಸತಿಗೆ ಪ್ರತೀಕಾರ ಮತ್ತು ಅತಿ ದೊಡ್ಡ ಧರ್ಮವನ್ನು ಪಾಲಿಸುವುದು.
01150021a ಯೋ ಬ್ರಾಹ್ಮಣಸ್ಯ ಸಾಹಾಯ್ಯಂ ಕುರ್ಯಾದರ್ಥೇಷು ಕರ್ಹಿ ಚಿತ್।
01150021c ಕ್ಷತ್ರಿಯಃ ಸ ಶುಭಾಽಲ್ಲೋಕಾನ್ಪ್ರಾಪ್ನುಯಾದಿತಿ ಮೇ ಶ್ರುತಂ।।
ಬ್ರಾಹ್ಮಣನಿಗೆ ಯಾವುದೇ ವಿಷಯದಲ್ಲಿ ಯಾವುದೇ ರೀತಿಯಲ್ಲಿ ಸಹಾಯವನ್ನು ಮಾಡುವ ಕ್ಷತ್ರಿಯನಿಗೆ ಶುಭ ಲೋಕಗಳು ಪ್ರಾಪ್ತವಾಗುತ್ತವೆ ಎಂದು ಕೇಳಿದ್ದೇನೆ.
01150022a ಕ್ಷತ್ರಿಯಃ ಕ್ಷತ್ರಿಯಸ್ಯೈವ ಕುರ್ವಾಣೋ ವಧಮೋಕ್ಷಣಂ।
01150022c ವಿಪುಲಾಂ ಕೀರ್ತಿಮಾಪ್ನೋತಿ ಲೋಕೇಽಸ್ಮಿಂಶ್ಚ ಪರತ್ರ ಚ।।
ಇನ್ನೊಬ್ಬ ಕ್ಷತ್ರಿಯನನ್ನು ಸಾವಿನಿಂದ ಬಿಡುಗಡೆಮಾಡಿದ ಕ್ಷತ್ರಿಯನಿಗೆ ವಿಪುಲ ಕೀರ್ತಿ ಮತ್ತು ಲೋಕಗಳು ಇಲ್ಲಿ ಮತ್ತು ಪರದಲ್ಲಿ ದೊರೆಯುತ್ತವೆ.
01150023a ವೈಶ್ಯಸ್ಯೈವ ತು ಸಾಹಾಯ್ಯಂ ಕುರ್ವಾಣಃ ಕ್ಷತ್ರಿಯೋ ಯುಧಿ।
01150023c ಸ ಸರ್ವೇಷ್ವಪಿ ಲೋಕೇಷು ಪ್ರಜಾ ರಂಜಯತೇ ಧ್ರುವಂ।।
ಯುದ್ಧದಲ್ಲಿ ವೈಶ್ಯನಿಗೆ ಸಹಾಯಮಾಡುವ ಕ್ಷತ್ರಿಯನು ಕೂಡ ಸರ್ವ ಲೋಕಗಳಲ್ಲಿ ಪ್ರಜೆಗಳ ಪ್ರೀತಿಯನ್ನು ಅನುಭವಿಸುತ್ತಾನೆ ಎನ್ನುವುದು ಸತ್ಯ.
01150024a ಶೂದ್ರಂ ತು ಮೋಕ್ಷಯನ್ರಾಜಾ ಶರಣಾರ್ಥಿನಮಾಗತಂ।
01150024c ಪ್ರಾಪ್ನೋತೀಹ ಕುಲೇ ಜನ್ಮ ಸದ್ರವ್ಯೇ ರಾಜಸತ್ಕೃತೇ।।
ಶರಣಾರ್ಥಿಯಾಗಿ ಬಂದ ಶೂದ್ರನನ್ನು ಬಿಡುಗಡೆ ಮಾಡಿದ ರಾಜನು ರಾಜಸತ್ಕೃತನಾಗಿ ಶ್ರೀಮಂತ ಕುಲದಲ್ಲಿ ಜನ್ಮವನ್ನು ತಾಳುತ್ತಾನೆ.
01150025a ಏವಂ ಸ ಭಗವಾನ್ವ್ಯಾಸಃ ಪುರಾ ಕೌರವನಂದನ।
01150025c ಪ್ರೋವಾಚ ಸುತರಾಂ ಪ್ರಾಜ್ಞಸ್ತಸ್ಮಾದೇತಚ್ಚಿಕೀರ್ಷಿತಂ।।
ಕೌರವನಂದನ! ಈ ರೀತಿ ಆ ಭಗವಾನ್ ವ್ಯಾಸನು ಹಿಂದೆ ಹೇಳುತ್ತಿದ್ದನು. ಇದು ನಿಜವಾಗಿಯೂ ವಿವೇಕದ ಮಾತುಗಳು. ಆದುದರಿಂದ ನಾನು ಇದನ್ನು ಮಾಡಲು ಬಯಸುತ್ತೇನೆ.”
01150026 ಯುಧಿಷ್ಠಿರ ಉವಾಚ।
01150026a ಉಪಪನ್ನಮಿದಂ ಮಾತಸ್ತ್ವಯಾ ಯದ್ಬುದ್ಧಿಪೂರ್ವಕಂ।
01150026c ಆರ್ತಸ್ಯ ಬ್ರಾಹ್ಮಣಸ್ಯೈವಮನುಕ್ರೋಶಾದಿದಂ ಕೃತಂ।
01150026E ಧ್ರುವಮೇಷ್ಯತಿ ಭೀಮೋಽಯಂ ನಿಹತ್ಯ ಪುರುಷಾದಕಂ।।
ಯುಧಿಷ್ಠಿರನು ಹೇಳಿದನು: “ಮಾತೆ! ಬುದ್ಧಿಪೂರ್ವಕವಾಗಿ ನೀನು ಮಾಡಲು ತೊಡಗಿರುವುದು ಸರಿಯಾಗಿಯೇ ಇದೆ. ಆರ್ತ ಬ್ರಾಹ್ಮಣನ ಮೇಲಿನ ದಯೆಯಿಂದ ಇದನ್ನು ಮಾಡುತ್ತಿದ್ದೀಯೆ.
01150027a ಯಥಾ ತ್ವಿದಂ ನ ವಿಂದೇಯುರ್ನರಾ ನಗರವಾಸಿನಃ।
01150027c ತಥಾಯಂ ಬ್ರಾಹ್ಮಣೋ ವಾಚ್ಯಃ ಪರಿಗ್ರಾಹ್ಯಶ್ಚ ಯತ್ನತಃ।।
ಆದರೆ ಬ್ರಾಹ್ಮಣನು ಈ ವಿಷಯವನ್ನು ಬೇರೆ ಯಾರಲ್ಲಿಯೂ ಹೇಳದಂತೆ ಎಚ್ಚರ ವಹಿಸಬೇಕು. ನಗರವಾಸಿಗಳಿಗೆ ಇದರ ಕುರಿತು ಏನೂ ತಿಳಿಯಬಾರದು.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಬಕವಧಪರ್ವಣಿ ಪಂಚಾರಿಂಶದಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಬಕವಧಪರ್ವದಲ್ಲಿ ನೂರಾಐವತ್ತನೆಯ ಅಧ್ಯಾಯವು.