ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಬಕವಧ ಪರ್ವ
ಅಧ್ಯಾಯ 149
ಸಾರ
ಕುಂತಿಯು ತನ್ನ ಮಗನು ರಾಕ್ಷಸನಿಗೆ ಭೋಜನವನ್ನು ತೆಗೆದುಕೊಂಡು ಹೋಗುತ್ತಾನೆ ಎಂದು ಹೇಳಲು, ಬ್ರಾಹ್ಮಣನು ನಿರಾಕರಿಸುವುದು (1-12). ತನ್ನ ಮಗನು ರಾಕ್ಷಸನಿಂದ ಸುರಕ್ಷಿತವಾಗಿ ಹಿಂದಿರುಗಿ ಬರುತ್ತಾನೆ ಎಂದು ವಿಶ್ವಾಸದಿಂದ ಕುಂತಿಯು ಹೇಳಲು ಬ್ರಾಹ್ಮಣನು ಒಪ್ಪಿಕೊಳ್ಳುವುದು (13-20).
01149001 ಕುಂತ್ಯುವಾಚ।
01149001a ನ ವಿಷಾದಸ್ತ್ವಯಾ ಕಾರ್ಯೋ ಭಯಾದಸ್ಮಾತ್ಕಥಂ ಚನ।
01149001c ಉಪಾಯಃ ಪರಿದೃಷ್ಟೋಽತ್ರ ತಸ್ಮಾನ್ಮೋಕ್ಷಾಯ ರಕ್ಷಸಃ।।
ಕುಂತಿಯು ಹೇಳಿದಳು: “ನಿನ್ನ ಈ ಪರಿಸ್ಥಿತಿಯ ಕುರಿತು ಸ್ವಲ್ಪವೂ ವಿಷಾದಿಸಬೇಡ. ಆ ರಾಕ್ಷಸನಿಂದ ಬಿಡುಗಡೆ ಹೊಂದಲು ನನಗೆ ಒಂದು ಉಪಾಯವು ತೋಚುತ್ತಿದೆ.
01149002a ಏಕಸ್ತವ ಸುತೋ ಬಾಲಃ ಕನ್ಯಾ ಚೈಕಾ ತಪಸ್ವಿನೀ।
01149002c ನ ತೇ ತಯೋಸ್ತಥಾ ಪತ್ನ್ಯಾ ಗಮನಂ ತತ್ರ ರೋಚಯೇ।।
ನಿನಗೆ ಒಬ್ಬನೇ ಒಬ್ಬ ಮಗನಿದ್ದಾನೆ ಮತ್ತು ಅವನೂ ಬಾಲಕನಿದ್ದಾನೆ. ಹಾಗೂ ಓರ್ವ ತಪಸ್ವಿನೀ ಕನ್ಯೆಯಿದ್ದಾಳೆ. ನೀನಾಗಲೀ ಅಥವಾ ನಿನ್ನ ಪತ್ನಿಯಾಗಲೀ ಅಲ್ಲಿಗೆ ಹೋಗುವುದು ನನಗೆ ಸರಿಯೆನಿಸುವುದಿಲ್ಲ.
01149003a ಮಮ ಪಂಚ ಸುತಾ ಬ್ರಹ್ಮಂಸ್ತೇಷಾಮೇಕೋ ಗಮಿಷ್ಯತಿ।
01149003c ತ್ವದರ್ಥಂ ಬಲಿಮಾದಾಯ ತಸ್ಯ ಪಾಪಸ್ಯ ರಕ್ಷಸಃ।।
ಬ್ರಾಹ್ಮಣ! ನನಗೆ ಐವರು ಮಕ್ಕಳಿದ್ದಾರೆ. ಅವರಲ್ಲಿ ಒಬ್ಬನು ಹೋಗುತ್ತಾನೆ ಮತ್ತು ನಿನ್ನ ಪರವಾಗಿ ಆ ಪಾಪಿ ರಾಕ್ಷಸನಿಗೆ ಬಲಿಯನ್ನು ತೆಗೆದುಕೊಂಡು ಹೋಗುತ್ತಾನೆ.”
01149004 ಬ್ರಾಹ್ಮಣ ಉವಾಚ।
01149004a ನಾಹಮೇತತ್ಕರಿಷ್ಯಾಮಿ ಜೀವಿತಾರ್ಥೀ ಕಥಂ ಚನ।
01149004c ಬ್ರಾಹ್ಮಣಸ್ಯಾತಿಥೇಶ್ಚೈವ ಸ್ವಾರ್ಥೇ ಪ್ರಾಣೈರ್ವಿಯೋಜನಂ।।
ಬ್ರಾಹ್ಮಣನು ಹೇಳಿದನು: “ನನ್ನ ಜೀವನವನ್ನು ಹಿಡಿದುಕೊಂಡು ಬ್ರಾಹ್ಮಣ ಅತಿಥಿಯೊಬ್ಬನು ನನಗಾಗಿ ತನ್ನ ಪ್ರಾಣವನ್ನು ಬಿಡುವಂಥಹ ಕಾರ್ಯವನ್ನು ಎಂದೂ ಮಾಡುವುದಿಲ್ಲ.
01149005a ನ ತ್ವೇತದಕುಲೀನಾಸು ನಾಧರ್ಮಿಷ್ಠಾಸು ವಿದ್ಯತೇ।
01149005c ಯದ್ಬ್ರಾಹ್ಮಣಾರ್ಥೇ ವಿಸೃಜೇದಾತ್ಮಾನಮಪಿ ಚಾತ್ಮಜಂ।।
ಒಬ್ಬ ಬ್ರಾಹ್ಮಣನಿಗಾಗಿ ತನ್ನನ್ನಾಗಲೀ ಅಥವಾ ತನ್ನ ಮಗನನ್ನಾಗಲೀ ತ್ಯಜಿಸುವುದು ಅಧರ್ಮಿಷ್ಠರಲ್ಲಿ ಅಥವಾ ಅಕುಲೀನರಲ್ಲಿಯೂ ನಡೆಯುವುದಿಲ್ಲ.
01149006a ಆತ್ಮನಸ್ತು ಮಯಾ ಶ್ರೇಯೋ ಬೋದ್ಧವ್ಯಮಿತಿ ರೋಚಯೇ।
01149006c ಬ್ರಹ್ಮವಧ್ಯಾತ್ಮವಧ್ಯಾ ವಾ ಶ್ರೇಯ ಆತ್ಮವಧೋ ಮಮ।।
ನನಗೆ ಯಾವುದು ಶ್ರೇಯಸ್ಸನ್ನು ತಂದು ಕೊಡುತ್ತದೆ ಎನ್ನುವುದನ್ನು ನಾನೇ ಅರ್ಥಮಾಡಿಕೊಳ್ಳಬೇಕು ಎಂದು ನನಗನ್ನಿಸುತ್ತದೆ. ಬ್ರಾಹ್ಮಣನನ್ನು ಕೊಲ್ಲುವುದು ಮತ್ತು ತಾನೇ ಸಾಯುವುದು ಇವೆರಡರಲ್ಲಿ ಆತ್ಮವಧೆಯೇ ಶ್ರೇಯಸ್ಸು ಎಂದು ನನಗನ್ನಿಸುತ್ತಿದೆ.
01149007a ಬ್ರಹ್ಮವಧ್ಯಾ ಪರಂ ಪಾಪಂ ನಿಷ್ಕೃತಿರ್ನಾತ್ರ ವಿದ್ಯತೇ।
01149007c ಅಬುದ್ಧಿಪೂರ್ವಂ ಕೃತ್ವಾಪಿ ಶ್ರೇಯ ಆತ್ಮವಧೋ ಮಮ।।
ಬ್ರಹ್ಮವಧೆಯು ಪರಮ ಪಾಪ ಮತ್ತು ಅದಕ್ಕೆ ಯಾವುದೇ ರೀತಿಯ ನಿಷ್ಕೃತಿಯೂ ಇಲ್ಲ. ಅಬುದ್ಧಿಪೂರ್ವಕವಾಗಿ ಮಾಡಿದರೂ ಆತ್ಮವಧೆಯೇ ನನಗೆ ಶ್ರೇಯಸ್ಸು.
01149008a ನ ತ್ವಹಂ ವಧಮಾಕಾಂಕ್ಷೇ ಸ್ವಯಮೇವಾತ್ಮನಃ ಶುಭೇ।
01149008c ಪರೈಃ ಕೃತೇ ವಧೇ ಪಾಪಂ ನ ಕಿಂ ಚಿನ್ಮಯಿ ವಿದ್ಯತೇ।।
ಶುಭೇ! ಆದರೂ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಬಯಸುವುದಿಲ್ಲ. ಆದರೆ ಇನ್ನೊಬ್ಬರು ನನ್ನನ್ನು ವಧಿಸುವುದರಿಂದ ನನಗೆ ಆ ಪಾಪ ಸ್ವಲ್ಪವೂ ಬರುವುದಿಲ್ಲ ಎಂದು ತಿಳಿದಿದ್ದೇನೆ.
01149009a ಅಭಿಸಂಧಿಕೃತೇ ತಸ್ಮಿನ್ಬ್ರಾಹ್ಮಣಸ್ಯ ವಧೇ ಮಯಾ।
01149009c ನಿಷ್ಕೃತಿಂ ನ ಪ್ರಪಶ್ಯಾಮಿ ನೃಶಂಸಂ ಕ್ಷುದ್ರಮೇವ ಚ।।
ಆದರೆ ತಿಳಿದೂ ತಿಳಿದೂ ಬ್ರಾಹ್ಮಣನ ವಧೆಯಲ್ಲಿ ನಾನು ಭಾಗವಹಿಸಿದರೆ ಆ ಹೀನ ಕ್ರೂರ ಕೃತ್ಯಕ್ಕೆ ಯಾವುದೇರೀತಿಯ ನಿಷ್ಕೃತಿಯೂ ನನಗೆ ತೋಚುವುದಿಲ್ಲ.
01149010a ಆಗತಸ್ಯ ಗೃಹೇ ತ್ಯಾಗಸ್ತಥೈವ ಶರಣಾರ್ಥಿನಃ।
01149010c ಯಾಚಮಾನಸ್ಯ ಚ ವಧೋ ನೃಶಂಸಂ ಪರಮಂ ಮತಂ।।
ಮನೆಗೆ ಬಂದವನನ್ನು ತ್ಯಾಗಮಾಡುವುದು, ಅಥವಾ ಶರಣಾರ್ಥಿಯನ್ನು ಹಾಗೂ ಬೇಡುವವನನ್ನು ವಧಿಸುವುದು ಅತ್ಯಂತ ಹೀನ ಕೃತ್ಯ ಎಂದು ನನಗನ್ನಿಸುತ್ತದೆ.
01149011a ಕುರ್ಯಾನ್ನ ನಿಂದಿತಂ ಕರ್ಮ ನ ನೃಶಂಸಂ ಕದಾ ಚನ।
01149011c ಇತಿ ಪೂರ್ವೇ ಮಹಾತ್ಮಾನ ಆಪದ್ಧರ್ಮವಿದೋ ವಿದುಃ।।
ಎಂದೂ ನಿಂದಿತ ಹೀನ ಕೃತ್ಯವನ್ನು ಮಾಡಬಾರದು ಎಂದು ಹಿಂದಿನ ಮಹಾತ್ಮರು ಮತ್ತು ಆಪದ್ಧರ್ಮವನ್ನು ಅರಿತವರು ತಿಳಿಸಿದ್ದಾರೆ.
01149012a ಶ್ರೇಯಾಂಸ್ತು ಸಹದಾರಸ್ಯ ವಿನಾಶೋಽದ್ಯ ಮಮ ಸ್ವಯಂ।
01149012c ಬ್ರಾಹ್ಮಣಸ್ಯ ವಧಂ ನಾಹಮನುಮಂಸ್ಯೇ ಕಥಂ ಚನ।।
ಪತ್ನಿಯ ಸಹಿತ ನಾನೇ ಸಾಯುವುದು ನನಗೆ ಶ್ರೇಯಸ್ಸು. ಎಂದೂ ನಾನು ಬ್ರಾಹ್ಮಣನ ವಧೆಯನ್ನು ಒಪ್ಪುವುದಿಲ್ಲ.”
01149013 ಕುಂತ್ಯುವಾಚ।
01149013a ಮಮಾಪ್ಯೇಷಾ ಮತಿರ್ಬ್ರಹ್ಮನ್ವಿಪ್ರಾ ರಕ್ಷ್ಯಾ ಇತಿ ಸ್ಥಿರಾ।
01149013c ನ ಚಾಪ್ಯನಿಷ್ಟಃ ಪುತ್ರೋ ಮೇ ಯದಿ ಪುತ್ರಶತಂ ಭವೇತ್।।
ಕುಂತಿಯು ಹೇಳಿದಳು: “ಬ್ರಾಹ್ಮಣ! ವಿಪ್ರರ ರಕ್ಷಣೆ ಮಾಡಬೇಕೆನ್ನುವುದು ನನ್ನ ದೃಢ ಅಭಿಪ್ರಾಯ. ನನಗೆ ಒಂದು ನೂರು ಪುತ್ರರಿದ್ದರೂ ನಾನು ಯಾರೊಬ್ಬನನ್ನೂ ಕಡಿಮೆ ಪ್ರೀತಿಸುತ್ತಿರಲಿಲ್ಲ.
01149014a ನ ಚಾಸೌ ರಾಕ್ಷಸಃ ಶಕ್ತೋ ಮಮ ಪುತ್ರವಿನಾಶನೇ।
01149014c ವೀರ್ಯವಾನ್ಮಂತ್ರಸಿದ್ಧಶ್ಚ ತೇಜಸ್ವೀ ಚ ಸುತೋ ಮಮ।।
ಆದರೆ ರಾಕ್ಷಸನು ನನ್ನ ಈ ಪುತ್ರನನ್ನು ಕೊಲ್ಲಲು ಶಕ್ತನಿಲ್ಲ. ನನ್ನ ಈ ವೀರ ತೇಜಸ್ವಿ ಮಗನು ಮಂತ್ರಸಿದ್ಧಿಯನ್ನು ಹೊಂದಿದ್ದಾನೆ.
01149015a ರಾಕ್ಷಸಾಯ ಚ ತತ್ಸರ್ವಂ ಪ್ರಾಪಯಿಷ್ಯತಿ ಭೋಜನಂ।
01149015c ಮೋಕ್ಷಯಿಷ್ಯತಿ ಚಾತ್ಮಾನಮಿತಿ ಮೇ ನಿಶ್ಚಿತಾ ಮತಿಃ।।
ನನ್ನ ಮಗನು ರಾಕ್ಷಸನಿಗೆ ಆ ಭೋಜನವೆಲ್ಲವನ್ನೂ ತೆಗೆದುಕೊಂಡು ಹೋಗಿ ಒಪ್ಪಿಸಿ ಅವನಿಂದ ನಿಶ್ಚಿತವಾಗಿಯೂ ತನ್ನನ್ನು ತಾನು ಬಿಡುಗಡೆ ಮಾಡಿಸಿಕೊಳ್ಳುತ್ತಾನೆ ಎಂದು ನನಗೆ ವಿಶ್ವಾಸವಿದೆ.
01149016a ಸಮಾಗತಾಶ್ಚ ವೀರೇಣ ದೃಷ್ಟಪೂರ್ವಾಶ್ಚ ರಾಕ್ಷಸಾಃ।
01149016c ಬಲವಂತೋ ಮಹಾಕಾಯಾ ನಿಹತಾಶ್ಚಾಪ್ಯನೇಕಶಃ।।
ಇದಕ್ಕೂ ಮೊದಲೇ ಹಲವು ಬಲಶಾಲಿ ಮಹಾಕಾಯ ರಾಕ್ಷಸರು ಈ ವೀರನನ್ನು ಎದುರಿಸಿ ಅವನಿಂದ ವಧಿಸಲ್ಪಟ್ಟಿದ್ದಾರೆ.
01149017a ನ ತ್ವಿದಂ ಕೇಷು ಚಿದ್ಬ್ರಹ್ಮನ್ವ್ಯಾಹರ್ತವ್ಯಂ ಕಥಂ ಚನ।
01149017c ವಿದ್ಯಾರ್ಥಿನೋ ಹಿ ಮೇ ಪುತ್ರಾನ್ವಿಪ್ರಕುರ್ಯುಃ ಕುತೂಹಲಾತ್।।
ಬ್ರಾಹ್ಮಣ! ಆದರೆ ನೀನು ಇದರ ಕುರಿತು ಯಾರಿಗೂ ಯಾವ ಕಾರಣಕ್ಕೂ ಸ್ವಲ್ಪವೂ ತಿಳಿಸಬಾರದು. ಯಾಕೆಂದರೆ ಜನರು ಕುತೂಹಲದಿಂದ ಗುಟ್ಟನ್ನು ತಿಳಿಯಲು ಕಷ್ಟಕೊಡಬಹುದು.
01149018a ಗುರುಣಾ ಚಾನನುಜ್ಞಾತೋ ಗ್ರಾಹಯೇದ್ಯಂ ಸುತೋ ಮಮ।
01149018c ನ ಸ ಕುರ್ಯಾತ್ತಯಾ ಕಾರ್ಯಂ ವಿದ್ಯಯೇತಿ ಸತಾಂ ಮತಂ।।
ನನ್ನ ಮಗನು ಇದನ್ನು ಗುರುವಿನ ಅನುಜ್ಞೆಯಿಲ್ಲದೇ ಇನ್ನೊಬ್ಬರಿಗೆ ತಿಳಿಸಿದರೆ ಅದು ಕಾರ್ಯವನ್ನು ಎಸಗದೇ ಇರಬಹುದು ಎಂದು ತಿಳಿದವರು ಅಭಿಪ್ರಾಯ ಪಡುತ್ತಾರೆ.””
01149019 ವೈಶಂಪಾಯನ ಉವಾಚ।
01149019a ಏವಮುಕ್ತಸ್ತು ಪೃಥಯಾ ಸ ವಿಪ್ರೋ ಭಾರ್ಯಯಾ ಸಹ।
01149019c ಹೃಷ್ಟಃ ಸಂಪೂಜಯಾಮಾಸ ತದ್ವಾಕ್ಯಮಮೃತೋಪಮಂ।।
ವೈಶಂಪಾಯನನು ಹೇಳಿದನು: “ಪೃಥೆಯು ಹೀಗೆ ಹೇಳಲು ಪತ್ನಿಸಮೇತ ಆ ವಿಪ್ರನು ಸಂತೋಷಗೊಂಡು ಆ ಅಮೃತೋಪಮ ಮಾತುಗಳನ್ನು ಆದರಿಸಿದನು.
01149020a ತತಃ ಕುಂತೀ ಚ ವಿಪ್ರಶ್ಚ ಸಹಿತಾವನಿಲಾತ್ಮಜಂ।
01149020c ತಮಬ್ರೂತಾಂ ಕುರುಷ್ವೇತಿ ಸ ತಥೇತ್ಯಬ್ರವೀಚ್ಚ ತೌ।।
ಆಗ ಕುಂತಿ ಮತ್ತು ವಿಪ್ರ ಇಬ್ಬರೂ ಸೇರಿ ಅನಿಲಾತ್ಮಜನಿಗೆ ಏನೇನು ಮಾಡಬೇಕೆಂದು ಹೇಳಿದರು. ಅವನು ಅವರಿಬ್ಬರಿಗೂ “ಹಾಗೆಯೇ ಆಗಲಿ!” ಎಂದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಬಕವಧಪರ್ವಣಿ ಏಕೋಪಂಚಾರಿಂಶದಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಬಕವಧಪರ್ವದಲ್ಲಿ ನೂರಾನಲ್ವತ್ತೊಂಭತ್ತನೆಯ ಅಧ್ಯಾಯವು.