ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಬಕವಧ ಪರ್ವ
ಅಧ್ಯಾಯ 148
ಸಾರ
ಕುಂತಿಯು ಕೇಳಲು ಬ್ರಾಹ್ಮಣನು ತನಗೆ ಒದಗಿಬಂದಿರುವ ಗಂಡಾಂತರದ ಕುರಿತು ವಿವರಿಸಿದುದು (1-16).
01148001 ಕುಂತ್ಯುವಾಚ।
01148001a ಕುತೋಮೂಲಮಿದಂ ದುಃಖಂ ಜ್ಞಾತುಮಿಚ್ಛಾಮಿ ತತ್ತ್ವತಃ।
01148001c ವಿದಿತ್ವಾ ಅಪಕರ್ಷೇಯಂ ಶಕ್ಯಂ ಚೇದಪಕರ್ಷಿತುಂ।।
ಕುಂತಿಯು ಹೇಳಿದಳು: “ಈ ದುಃಖದ ಮೂಲ ಯಾವುದು ಎನ್ನುವುದನ್ನು ಸ್ಪಷ್ಟವಾಗಿ ತಿಳಿಯ ಬಯಸುತ್ತೇನೆ. ಅದನ್ನು ತಿಳಿದ ನಂತರ ಹೋಗಲಾಡಿಸಬಹುದಾದರೆ ಹೋಗಲಾಡಿಸುತ್ತೇನೆ.”
01148002 ಬ್ರಾಹ್ಮಣ ಉವಾಚ।
01148002a ಉಪಪನ್ನಂ ಸತಾಮೇತದ್ಯದ್ಬ್ರವೀಷಿ ತಪೋಧನೇ।
01148002c ನ ತು ದುಃಖಮಿದಂ ಶಕ್ಯಂ ಮಾನುಷೇಣ ವ್ಯಪೋಹಿತುಂ।।
ಬ್ರಾಹ್ಮಣನು ಹೇಳಿದನು: “ತಪೋಧನೇ! ನೀನು ಒಳ್ಳೆಯ ಮಾತುಗಳನ್ನೇ ಆಡಿದ್ದೀಯೆ. ಆದರೆ ಈ ದುಃಖವನ್ನು ಹೋಗಲಾಡಿಸಲು ಯಾವ ಮನುಷ್ಯನಿಂದಲೂ ಸಾಧ್ಯವಿಲ್ಲ.
01148003a ಸಮೀಪೇ ನಗರಸ್ಯಾಸ್ಯ ಬಕೋ ವಸತಿ ರಾಕ್ಷಸಃ।
01148003c ಈಶೋ ಜನಪದಸ್ಯಾಸ್ಯ ಪುರಸ್ಯ ಚ ಮಹಾಬಲಃ।।
ಈ ನಗರದ ಸಮೀಪದಲ್ಲಿ ಬಕ ಎನ್ನುವ ರಾಕ್ಷಸನು ವಾಸಿಸುತ್ತಾನೆ. ಆ ಮಹಾಬಲಿಯು ಈ ಜನಪದ ಮತ್ತು ನಗರಗಳನ್ನು ಆಳುತ್ತಿದ್ದಾನೆ.
01148004a ಪುಷ್ಟೋ ಮಾನುಷಮಾಂಸೇನ ದುರ್ಬುದ್ಧಿಃ ಪುರುಷಾದಕಃ।
01148004c ರಕ್ಷತ್ಯಸುರರಾಣ್ನಿತ್ಯಮಿಮಂ ಜನಪದಂ ಬಲೀ।।
01148005a ನಗರಂ ಚೈವ ದೇಶಂ ಚ ರಕ್ಷೋಬಲಸಮನ್ವಿತಃ।
01148005c ತತ್ಕೃತೇ ಪರಚಕ್ರಾಚ್ಚ ಭೂತೇಭ್ಯಶ್ಚ ನ ನೋ ಭಯಂ।।
ಈ ಪುರುಷಾದಕ ದುರ್ಬುದ್ಧಿಯು ಮಾನುಷ ಮಾಂಸವನ್ನು ತಿಂದು ಕೊಬ್ಬಿದ್ದಾನೆ. ಅಸುರರಾಜ, ರಾಕ್ಷಸಬಲಸಮನ್ವಿತ ಆ ಬಲಶಾಲಿಯು ಜನಪದ, ನಗರ ಮತ್ತು ದೇಶವನ್ನು ರಕ್ಷಿಸುತ್ತಿದ್ದಾನೆ. ಅವನಿಂದಾಗಿ ನಮಗೆ ಶತ್ರುಗಳಿಂದ ಅಥವಾ ಯಾರಿಂದಲೂ ಭಯವೇ ಇಲ್ಲದಂತಾಗಿದೆ.
01148006a ವೇತನಂ ತಸ್ಯ ವಿಹಿತಂ ಶಾಲಿವಾಹಸ್ಯ ಭೋಜನಂ।
01148006c ಮಹಿಷೌ ಪುರುಷಶ್ಚೈಕೋ ಯಸ್ತದಾದಾಯ ಗಚ್ಛತಿ।।
ಅವನ ವಿಹಿತ ವೇತನವು ಒಂದು ಬಂಡಿ ಭೋಜನ, ಎರಡು ಎಮ್ಮೆಗಳು, ಮತ್ತು ಅವುಗಳನ್ನು ಅವನಲ್ಲಿಗೆ ತೆಗೆದುಕೊಂಡು ಹೋಗುವ ಓರ್ವ ಪುರುಷ.
01148007a ಏಕೈಕಶ್ಚೈವ ಪುರುಷಸ್ತತ್ಪ್ರಯಚ್ಛತಿ ಭೋಜನಂ।
01148007c ಸ ವಾರೋ ಬಹುಭಿರ್ವರ್ಷೈರ್ಭವತ್ಯಸುತರೋ ನರೈಃ।।
ಒಬ್ಬೊಬ್ಬರಾಗಿ ಎಲ್ಲರೂ ಅವನಿಗೆ ಭೋಜನವನ್ನು ಕಳುಹಿಸುತ್ತಾರೆ. ಆದರೆ ಬಹಳ ವರ್ಷಗಳಿಗೊಮ್ಮೆ ಬರುವ ಬಾರಿಯು ಬಂದಾಗ ಮನುಷ್ಯನಿಗೆ ಅದರಿಂದ ತಪ್ಪಿಸಿಕೊಳ್ಳಲು ಕಷ್ಟವಾಗುತ್ತದೆ.
01148008a ತದ್ವಿಮೋಕ್ಷಾಯ ಯೇ ಚಾಪಿ ಯತಂತೇ ಪುರುಷಾಃ ಕ್ವ ಚಿತ್।
01148008c ಸಪುತ್ರದಾರಾಂಸ್ತಾನ್ ಹತ್ವಾ ತದ್ರಕ್ಷೋ ಭಕ್ಷಯತ್ಯುತ।।
ಒಂದುವೇಳೆ ಯಾರಾದರೂ ಇದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಅವನನ್ನು ಆ ರಾಕ್ಷಸನು ಪುತ್ರ ಮತ್ತು ಪತ್ನಿ ಸಹಿತ ಕೊಂದು ಭಕ್ಷಿಸುತ್ತಾನೆ.
01148009a ವೇತ್ರಕೀಯಗೃಹೇ ರಾಜಾ ನಾಯಂ ನಯಮಿಹಾಸ್ಥಿತಃ।
01148009c ಅನಾಮಯಂ ಜನಸ್ಯಾಸ್ಯ ಯೇನ ಸ್ಯಾದದ್ಯ ಶಾಶ್ವತಂ।।
ವೈತ್ರಕೀಯ ಗೃಹದಲ್ಲಿರುವ ನಮ್ಮ ರಾಜನು ತನ್ನ ಜನರನ್ನು ಈ ಪೀಡೆಯಿಂದ ಶಾಶ್ವತವಾಗಿ ಮುಕ್ತಿಗೊಳಿಸಲು ಯಾವುದೇ ರೀತಿಯ ಯೋಜನೆಯನ್ನೂ ಹೊಂದಿಲ್ಲ.
01148010a ಏತದರ್ಹಾ ವಯಂ ನೂನಂ ವಸಾಮೋ ದುರ್ಬಲಸ್ಯ ಯೇ।
01148010c ವಿಷಯೇ ನಿತ್ಯಮುದ್ವಿಗ್ನಾಃ ಕುರಾಜಾನಮುಪಾಶ್ರಿತಾಃ।।
ಕುರಾಜನ ಆಶ್ರಯದಲ್ಲಿ ಯಾವಾಗಲೂ ಉದ್ವಿಗ್ನರಾಗಿರುವ, ದುರ್ಬಲ ರಾಜನ ರಾಜ್ಯದಲ್ಲಿರುವ ನಾವು ಇದಕ್ಕೆ ಅರ್ಹರಾಗಿದ್ದೇವೆ.
01148011a ಬ್ರಾಹ್ಮಣಾಃ ಕಸ್ಯ ವಕ್ತವ್ಯಾಃ ಕಸ್ಯ ವಾ ಚಂದಚಾರಿಣಃ।
01148011c ಗುಣೈರೇತೇ ಹಿ ವಾಸ್ಯಂತೇ ಕಾಮಗಾಃ ಪಕ್ಷಿಣೋ ಯಥಾ।।
ಬ್ರಾಹ್ಮಣರು ಯಾರ ಮಾತಿಗೂ ಒಳಪಡದೇ ಯಾರ ಇಚ್ಛೆಗೂ ಅಧೀನರಾಗಿ ನಡೆದುಕೊಳ್ಳದೇ ಇಚ್ಛೆಬಂದಂತೆ ಸಂಚರಿಸುವ ಪಕ್ಷಿಗಳೆಂದೂ ತಮ್ಮ ಗುಣಗಳಿಗೆ ಮಾತ್ರ ಅಧೀನರಾಗಿರುತ್ತಾರೆಂದು ಹೇಳುತ್ತಾರೆ.
01148012a ರಾಜಾನಂ ಪ್ರಥಮಂ ವಿಂದೇತ್ತತೋ ಭಾರ್ಯಾಂ ತತೋ ಧನಂ।
01148012c ತ್ರಯಸ್ಯ ಸಂಚಯೇ ಚಾಸ್ಯ ಜ್ಞಾತೀನ್ಪುತ್ರಾಂಶ್ಚ ಧಾರಯೇತ್।।
ಮೊದಲು ರಾಜನನ್ನು ಹುಡುಕಿಕೊಳ್ಳಬೇಕು ನಂತರ ಭಾರ್ಯೆಯನ್ನು ಮತ್ತು ಧನವನ್ನು. ಈ ಮೂರನ್ನೂ ಪಡೆದವನು ತನ್ನ ಪುತ್ರರನ್ನು ಮತ್ತು ಬಾಂಧವರನ್ನು ಪಾಲಿಸಬಹುದು.
01148013a ವಿಪರೀತಂ ಮಯಾ ಚೇದಂ ತ್ರಯಂ ಸರ್ವಮುಪಾರ್ಜಿತಂ।
01148013c ತ ಇಮಾಮಾಪದಂ ಪ್ರಾಪ್ಯ ಭೃಶಂ ತಪ್ಸ್ಯಾಮಹೇ ವಯಂ।।
ಆದರೆ ನಾನು ಈ ಮೂರನ್ನೂ ವಿಪರೀತವಾಗಿ ಪಡೆದೆ (ಮೊದಲು ಧನ, ನಂತರ ಪತ್ನಿ ಮತ್ತು ಅಂತ್ಯದಲ್ಲಿ ರಾಜ). ಈಗ ನಾವು ಈ ಆಪತ್ತಿನಲ್ಲಿ ಸಿಲುಕಿದ್ದೇವೆ ಮತ್ತು ನಾವೇ ಇದನ್ನು ಅನುಭವಿಸಬೇಕು.
01148014a ಸೋಽಯಮಸ್ಮಾನನುಪ್ರಾಪ್ತೋ ವಾರಃ ಕುಲವಿನಾಶನಃ।
01148014c ಭೋಜನಂ ಪುರುಷಶ್ಚೈಕಃ ಪ್ರದೇಯಂ ವೇತನಂ ಮಯಾ।।
ಆ ಕುಲವಿನಾಶಕ ಬಾರಿಯು ಈಗ ನಮಗೆ ಬಂದಿದೆ. ಅವನಿಗೆ ನಾನು ಓರ್ವ ಪುರುಷನನ್ನು ಭೋಜನವಾಗಿ ಕಳುಹಿಸಬೇಕಾಗಿದೆ.
01148015a ನ ಚ ಮೇ ವಿದ್ಯತೇ ವಿತ್ತಂ ಸಂಕ್ರೇತುಂ ಪುರುಷಂ ಕ್ವ ಚಿತ್।
01148015c ಸುಹೃಜ್ಜನಂ ಪ್ರದಾತುಂ ಚ ನ ಶಕ್ಷ್ಯಾಮಿ ಕಥಂ ಚನ।
01148015e ಗತಿಂ ಚಾಪಿ ನ ಪಶ್ಯಾಮಿ ತಸ್ಮಾನ್ಮೋಕ್ಷಾಯ ರಕ್ಷಸಃ।।
ಎಲ್ಲಿಂದಲಾದರೂ ವ್ಯಕ್ತಿಯೋರ್ವನನ್ನು ಖರೀದಿಸೋಣ ಎಂದರೂ ನನ್ನಲ್ಲಿ ಹಣವಿಲ್ಲ. ನನ್ನ ಕುಟುಂಬದ ಯಾರನ್ನು ಕೊಡಲೂ ಶಕ್ಯನಾಗಿಲ್ಲ. ಆ ರಾಕ್ಷಸನಿಂದ ಬಿಡುಗಡೆಹೊಂದುವ ಯಾವ ದಾರಿಯೂ ನನಗೆ ಕಾಣುತ್ತಿಲ್ಲ.
01148016a ಸೋಽಹಂ ದುಃಖಾರ್ಣವೇ ಮಗ್ನೋ ಮಹತ್ಯಸುತರೇ ಭೃಶಂ।
01148016c ಸಹೈವೈತೈರ್ಗಮಿಷ್ಯಾಮಿ ಬಾಂಧವೈರದ್ಯ ರಾಕ್ಷಸಂ।
01148016e ತತೋ ನಃ ಸಹಿತನ್ ಕ್ಷುದ್ರಃ ಸರ್ವಾನೇವೋಪಭೋಕ್ಷ್ಯತಿ।।
ಹೀಗೆ ನಾನು ದುಃಖಸಾಗರದಲ್ಲಿ ಮುಳುಗಿ ಯಾವುದೇ ರೀತಿಯ ಬಿಡುಗಡೆ ದೊರೆಯದಂತಾಗಿದ್ದೇನೆ. ಈಗ ನಾನು ನನ್ನ ಇಡೀ ಕುಟುಂಬ ಸಮೇತ ಆ ರಾಕ್ಷಸನಲ್ಲಿಗೆ ಹೋಗುತ್ತೇನೆ. ಆ ಕ್ಷುದ್ರ ರಾಕ್ಷಸನು ನಮ್ಮೆಲ್ಲರನ್ನೂ ತಿನ್ನಲಿ.”