147

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಬಕವಧ ಪರ್ವ

ಅಧ್ಯಾಯ 147

ಸಾರ

ಬ್ರಾಹ್ಮಣನ ಮಗಳು ತಾನೇ ಸಾಯುವುದು ಲೇಸೆಂದು ಹೇಳುವುದು (1-24).

01147001 ವೈಶಂಪಾಯನ ಉವಾಚ।
01147001a ತಯೋರ್ದುಃಖಿತಯೋರ್ವಾಕ್ಯಮತಿಮಾತ್ರಂ ನಿಶಮ್ಯ ತತ್।
01147001c ಭೃಶಂ ದುಃಖಪರೀತಾಂಗೀ ಕನ್ಯಾ ತಾವಭ್ಯಭಾಷತ।।

ವೈಶಂಪಾಯನನು ಹೇಳಿದನು: “ದುಃಖಿತರಾಗಿದ್ದ ಅವರ ಆ ಮಾತುಗಳನ್ನು ಕೇಳಿದ ಮಗಳು ದುಃಖಪರಿತಾಂಗಿಯಾಗಿ ಈ ಮಾತುಗಳನ್ನು ಹೇಳಿದಳು:

01147002a ಕಿಮಿದಂ ಭೃಶದುಃಖಾರ್ತೌ ರೋರವೀಥೋ ಅನಾಥವತ್।
01147002c ಮಮಾಪಿ ಶ್ರೂಯತಾಂ ಕಿಂ ಚಿಚ್ಛೃತ್ವಾ ಚ ಕ್ರಿಯತಾಂ ಕ್ಷಮಂ।।

“ಅತ್ಯಂತ ದುಃಖಾರ್ತರಾಗಿ ಅನಾಥರಂತೆ ಈ ರೀತಿ ಏಕೆ ಅಳುತ್ತಿರುವಿರಿ? ನನ್ನ ಮಾತುಗಳನ್ನೂ ಸ್ವಲ್ಪ ಕೇಳಿ. ನಂತರ ಸರಿಯೆನಿಸಿದುದನ್ನು ಮಾಡುವಿರಂತೆ.

01147003a ಧರ್ಮತೋಽಹಂ ಪರಿತ್ಯಾಜ್ಯಾ ಯುವಯೋರ್ನಾತ್ರ ಸಂಶಯಃ।
01147003c ತ್ಯಕ್ತವ್ಯಾಂ ಮಾಂ ಪರಿತ್ಯಜ್ಯ ತ್ರಾತಂ ಸರ್ವಂ ಮಯೈಕಯಾ।।

ಧರ್ಮದ ಪ್ರಕಾರ ಯೌವನಕ್ಕೆ ಬಂದನಂತರ ನನ್ನನ್ನು ನೀವು ಪರಿತ್ಯಜಿಸಲೇ ಬೇಕು. ಇದರಲ್ಲಿ ಸಂಶಯವಿಲ್ಲ. ಪರಿತ್ಯಜಿಸಲೇ ಬೇಕಾದ ನನ್ನನ್ನು ಈಗಲೇ ಪರಿತ್ಯಜಿಸಿ ನನ್ನೊಬ್ಬಳಿಂದ ನೀವು ಮೂವರೂ ಉಳಿದುಕೊಳ್ಳಿ.

01147004a ಇತ್ಯರ್ಥಮಿಷ್ಯತೇಽಪತ್ಯಂ ತಾರಯಿಷ್ಯತಿ ಮಾಮಿತಿ।
01147004c ತಸ್ಮಿನ್ನುಪಸ್ಥಿತೇ ಕಾಲೇ ತರತಂ ಪ್ಲವವನ್ಮಯಾ।।

ಮಕ್ಕಳು ನಮ್ಮನ್ನು ಪಾರುಮಾಡುತ್ತಾರೆ ಎನ್ನುವ ಉದ್ದೇಶದಿಂದಲೇ ಮಕ್ಕಳನ್ನು ಬಯಸುತ್ತಾರೆ. ಅಂತಹ ಕಾಲವು ಬಂದಿರುವಾಗ ನನ್ನನ್ನು ದೋಣಿಯನ್ನಾಗಿಸಿ ಪಾರುಮಾಡಿ.

01147005a ಇಹ ವಾ ತಾರಯೇದ್ದುರ್ಗಾದುತ ವಾ ಪ್ರೇತ್ಯ ತಾರಯೇತ್।
01147005c ಸರ್ವಥಾ ತಾರಯೇತ್ಪುತ್ರಃ ಪುತ್ರ ಇತ್ಯುಚ್ಯತೇ ಬುಧೈಃ।।

ಪುತ್ರನು ಎಲ್ಲ ರೀತಿಯಲ್ಲೂ ಪಾರುಮಾಡುತ್ತಾನೆ - ಇಲ್ಲಿ ಈ ಜೀವನದಲ್ಲಿ ಆಪತ್ತಿನಿಂದ ಪಾರು ಮಾಡುತ್ತಾನೆ ಅಥವಾ ಮರಣದ ನಂತರ ಆತ್ಮವನ್ನು ಪಾರುಮಾಡುತ್ತಾನೆ. ಆದುದರಿಂದಲೇ ತಿಳಿದವರು ಅವನಿಗೆ ಪುತ್ರ ಎಂದು ಕರೆಯುತ್ತಾರೆ.

01147006a ಆಕಾಂಕ್ಷಂತೇ ಚ ದೌಹಿತ್ರಾನಪಿ ನಿತ್ಯಂ ಪಿತಾಮಹಾಃ।
01147006c ತಾನ್ಸ್ವಯಂ ವೈ ಪರಿತ್ರಾಸ್ಯೇ ರಕ್ಷಂತೀ ಜೀವಿತಂ ಪಿತುಃ।।

ಪಿತಾಮಹರು ನಿತ್ಯ ಮಗಳ ಮಕ್ಕಳನ್ನೂ ಸಹ ಬಯಸುತ್ತಾರೆ. ನನ್ನ ತಂದೆಯ ಜೀವವನ್ನು ಉಳಿಸಿ ನಾನು ಅವರನ್ನೂ ಸಹ ಪಾರುಮಾಡುತ್ತೇನೆ.

01147007a ಭ್ರಾತಾ ಚ ಮಮ ಬಾಲೋಽಯಂ ಗತೇ ಲೋಕಮಮುಂ ತ್ವಯಿ।
01147007c ಅಚಿರೇಣೈವ ಕಾಲೇನ ವಿನಶ್ಯೇತ ನ ಸಂಶಯಃ।।

ನೀನು ಈ ಲೋಕದಿಂದ ಹೊರಟು ಹೋದರೆ ಈ ನನ್ನ ಬಾಲಕ ತಮ್ಮನು ಸ್ವಲ್ಪ ಸಮಯದಲ್ಲಿಯೇ ನಾಶಹೊಂದುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

01147008a ತಾತೇಽಪಿ ಹಿ ಗತೇ ಸ್ವರ್ಗಂ ವಿನಷ್ಟೇ ಚ ಮಮಾನುಜೇ।
01147008c ಪಿಂಡಃ ಪಿತೄಣಾಂ ವ್ಯುಚ್ಛಿದ್ಯೇತ್ತತ್ತೇಷಾಮಪ್ರಿಯಂ ಭವೇತ್।।

ತಂದೆಯೂ ಸ್ವರ್ಗವಾಸಿಯಾಗಿ, ನನ್ನ ತಮ್ಮನೂ ನಾಶವಾಗಿ ಪಿತೃಗಳ ಪಿಂಡವು ನಿಂತುಹೋದರೆ ಅವರಿಗೆ ಒಳ್ಳೆಯದಾಗುವುದಿಲ್ಲ.

01147009a ಪಿತ್ರಾ ತ್ಯಕ್ತಾ ತಥಾ ಮಾತ್ರಾ ಭ್ರಾತ್ರಾ ಚಾಹಮಸಂಶಯಂ।
01147009c ದುಃಖಾದ್ದುಃಖತರಂ ಪ್ರಾಪ್ಯ ಮ್ರಿಯೇಯಮತಥೋಚಿತಾ।।

ತಂದೆ, ತಾಯಿ, ಹಾಗೂ ತಮ್ಮನಿಂದ ತ್ಯಕ್ತಳಾದ ನಾನಾದರೂ ದುಃಖದಿಂದ ಅತಿದುಃಖವನ್ನು ಹೊಂದಿ ನಾಶವಾಗುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಹೀಗಾಗುವುದು ಸರಿಯೆಂದು ನನಗೆ ಕಾಣುವುದಿಲ್ಲ.

01147010a ತ್ವಯಿ ತ್ವರೋಗೇ ನಿರ್ಮುಕ್ತೇ ಮಾತಾ ಭ್ರಾತಾ ಚ ಮೇ ಶಿಶುಃ।
01147010c ಸಂತಾನಶ್ಚೈವ ಪಿಂಡಶ್ಚ ಪ್ರತಿಷ್ಠಾಸ್ಯತ್ಯಸಂಶಯಂ।।

ನೀನೊಬ್ಬನು ಆರೋಗ್ಯದಿಂದ ಬಿಡುಗಡೆಯಾದೆಯೆಂದರೆ ನನ್ನ ತಾಯಿ, ಇನ್ನೂ ಬಾಲಕನಾಗಿರುವ ನನ್ನ ತಮ್ಮ, ವಂಶ, ಪಿಂಡ ಎಲ್ಲವೂ ನಿಸ್ಸಂಶಯವಾಗಿ ನೆಲೆಗೊಳ್ಳುವವು.

01147011a ಆತ್ಮಾ ಪುತ್ರಃ ಸಖಾ ಭಾರ್ಯಾ ಕೃಚ್ಛ್ರಂತು ದುಹಿತಾ ಕಿಲ।
01147011c ಸ ಕೃಚ್ಛ್ರಾನ್ಮೋಚಯಾತ್ಮಾನಂ ಮಾಂ ಚ ಧರ್ಮೇಣ ಯೋಜಯ।।

ಪುತ್ರನು ಆತ್ಮ, ಭಾರ್ಯೆಯು ಸಖಿ ಮತ್ತು ಮಗಳು ಆಪತ್ತು ಎನ್ನುವುದಿಲ್ಲವೇ? ನಿನ್ನ ಈ ಆಪತ್ತಿನಿಂದ ಪಾರಾಗು ಮತ್ತು ನನ್ನನ್ನು ಧರ್ಮದೊಡನೆ ಜೋಡಿಸು.

01147012a ಅನಾಥಾ ಕೃಪಣಾ ಬಾಲಾ ಯತ್ರಕ್ವಚನಗಾಮಿನೀ।
01147012c ಭವಿಷ್ಯಾಮಿ ತ್ವಯಾ ತಾತ ವಿಹೀನಾ ಕೃಪಣಾ ಬತ।।

ತಂದೇ! ಬಾಲೆಯಾದ ನಾನು ನೀನಿಲ್ಲದೇ ಅನಾಥಳೂ, ಕರುಣಾಸ್ಪದಳೂ ಆಗಿ ಎಲ್ಲೆಲ್ಲಿಯೋ ತಿರುಗಾಡಬೇಕಾಗಿ ದೀನಳಾಗುವೆ.

01147013a ಅಥವಾಹಂ ಕರಿಷ್ಯಾಮಿ ಕುಲಸ್ಯಾಸ್ಯ ವಿಮೋಕ್ಷಣಂ।
01147013c ಫಲಸಂಸ್ಥಾ ಭವಿಷ್ಯಾಮಿ ಕೃತ್ವಾ ಕರ್ಮ ಸುದುಷ್ಕರಂ।।
01147014a ಅಥವಾ ಯಾಸ್ಯಸೇ ತತ್ರ ತ್ಯಕ್ತ್ವಾ ಮಾಂ ದ್ವಿಜಸತ್ತಮ।
01147014c ಪೀಡಿತಾಹಂ ಭವಿಷ್ಯಾಮಿ ತದವೇಕ್ಷಸ್ವ ಮಾಮಪಿ।।

ನಾನು ಕುಲವನ್ನು ಈ ಕಷ್ಟದಿಂದ ಪಾರುಮಾಡಿ ಬಹಳ ದುಷ್ಕರ ಕಾರ್ಯವನ್ನು ಮಾಡಿದ ಫಲವನ್ನು ಅನುಭವಿಸುತ್ತೇನೆ. ಅಥವಾ ದ್ವಿಜಸತ್ತಮ! ನನ್ನನ್ನು ಬಿಟ್ಟು ನೀನು ಅವನಲ್ಲಿಗೆ ಹೋದರೆ ನಾನು ವಿಪತ್ತಿಗೊಳಗಾಗುವೆನು. ನನ್ನ ಕುರಿತೂ ಯೋಚಿಸು.

01147015a ತದಸ್ಮದರ್ಥಂ ಧರ್ಮಾರ್ಥಂ ಪ್ರಸವಾರ್ಥಂ ಚ ಸತ್ತಮ।
01147015c ಆತ್ಮಾನಂ ಪರಿರಕ್ಷಸ್ವ ತ್ಯಕ್ತವ್ಯಾಂ ಮಾಂ ಚ ಸಂತ್ಯಜ।।

ಆದುದರಿಂದ ಸತ್ತಮ! ನಮಗಾಗಿ, ಧರ್ಮಕ್ಕಾಗಿ, ಮತ್ತು ಸಂತಾನಕ್ಕಾಗಿ ನಿನ್ನನ್ನು ನೀನು ಪರಿರಕ್ಷಿಸು. ತ್ಯಕ್ತವ್ಯಳಾದ ನನ್ನನ್ನು ಪರಿತ್ಯಜಿಸು.

01147016a ಅವಶ್ಯಕರಣೀಯೇಽರ್ಥೇ ಮಾ ತ್ವಾಂ ಕಾಲೋಽತ್ಯಗಾದಯಂ।
01147016c ತ್ವಯಾ ದತ್ತೇನ ತೋಯೇನ ಭವಿಷ್ಯತಿ ಹಿತಂ ಚ ಮೇ।।

ಅವಶ್ಯಕ ಕಾರ್ಯವನ್ನು ಕೈಗೊಳ್ಳುವುದರಲ್ಲಿ ವಿಳಂಬ ಮಾಡಬೇಡ. ನೀನು ನನಗೆ ಕೊಡುವ ತರ್ಪಣವೇ ನನಗೆ ಹಿತವನ್ನು ತರುತ್ತದೆ.

01147017a ಕಿಂ ನ್ವತಃ ಪರಮಂ ದುಃಖಂ ಯದ್ವಯಂ ಸ್ವರ್ಗತೇ ತ್ವಯಿ।
01147017c ಯಾಚಮಾನಾಃ ಪರಾದನ್ನಂ ಪರಿಧಾವೇಮಹಿ ಶ್ವವತ್।।

ನೀನು ಸ್ವರ್ಗಸ್ಥನಾಗಿ ನಾವು ಬೇರೆಯವರಿಂದ ಅನ್ನವನ್ನು ಬೇಡುತ್ತಾ ನಾಯಿಗಳಂತೆ ಅಲೆಯುವುದಕ್ಕಿಂತ ಹೆಚ್ಚಿನ ದುಃಖವಾದರೂ ಏನಿದೆ?

01147018a ತ್ವಯಿ ತ್ವರೋಗೇ ನಿರ್ಮುಕ್ತೇ ಕ್ಲೇಶಾದಸ್ಮಾತ್ಸಬಾಂಧವೇ।
01147018c ಅಮೃತೇ ವಸತೀ ಲೋಕೇ ಭವಿಷ್ಯಾಮಿ ಸುಖಾನ್ವಿತಾ।।

ಈ ಕಷ್ಟದಿಂದ ಬಂಧುಗಳ ಸಮೇತ ನೀನು ಆರೋಗ್ಯವಾಗಿ ನಿರ್ಮುಕ್ತನಾದೆಯೆಂದರೆ ಅಮೃತಲೋಕದಲ್ಲಿ ವಾಸಿಸುವ ನಾನೂ ಸುಖದಿಂದಿರುವೆ.”

01147019a ಏವಂ ಬಹುವಿಧಂ ತಸ್ಯಾ ನಿಶಮ್ಯ ಪರಿದೇವಿತಂ।
01147019c ಪಿತಾ ಮಾತಾ ಚ ಸಾ ಚೈವ ಕನ್ಯಾ ಪ್ರರುರುದುಸ್ತ್ರಯಃ।।

ಈ ರೀತಿಯ ಬಹುವಿಧ ಪರಿವೇದನೆಯನ್ನು ನೋಡಿದ ತಂದೆ, ತಾಯಿ ಮತ್ತು ಆ ಕನ್ಯೆ ಮೂವರೂ ಬಹಳ ರೋದಿಸಿದರು.

01147020a ತತಃ ಪ್ರರುದಿತಾನ್ಸರ್ವಾನ್ನಿಶಮ್ಯಾಥ ಸುತಸ್ತಯೋಃ।
01147020c ಉತ್ಫುಲ್ಲನಯನೋ ಬಾಲಃ ಕಲಮವ್ಯಕ್ತಮಬ್ರವೀತ್।।

ಅವರೆಲ್ಲರೂ ರೋದಿಸುತ್ತಿರುವುದನ್ನು ನೋಡಿದ ಅವರ ಬಾಲಕ ಮಗನು ಕಣ್ಣುಗಳನ್ನು ಅಗಲವಾಗಿ ತೆರೆದು ತೊದಲು ನುಡಿಗಳಿಂದ ಈ ಮುದ್ದು ಮಾತುಗಳನ್ನಾಡಿದನು:

01147021a ಮಾ ರೋದೀಸ್ತಾತ ಮಾ ಮಾತರ್ಮಾ ಸ್ವಸಸ್ತ್ವಮಿತಿ ಬ್ರುವನ್।
01147021c ಪ್ರಹಸನ್ನಿವ ಸರ್ವಾಂಸ್ತಾನೇಕೈಕಂ ಸೋಽಪಸರ್ಪತಿ।।

ಮುಗುಳ್ನಗೆಯಿಂದ “ಅಳಬೇಡ ಅಪ್ಪಾ! ಅಳಬೇಡ ಅಮ್ಮಾ! ಅಳಬೇಡ ಅಕ್ಕಾ!” ಎನ್ನುತ್ತಾ ಪ್ರತಿಯೊಬ್ಬರ ಬಳಿಯೂ ಅಂಬೆಗಾಲಿಡುತ್ತಾ ಹೋದನು.

01147022a ತತಃ ಸ ತೃಣಮಾದಾಯ ಪ್ರಹೃಷ್ಟಃ ಪುನರಬ್ರವೀತ್।
01147022c ಅನೇನ ತಂ ಹನಿಷ್ಯಾಮಿ ರಾಕ್ಷಸಂ ಪುರುಷಾದಕಂ।।

ಆಗ ಅವನು ಒಂದು ಹುಲ್ಲುಕಡ್ಡಿಯನ್ನು ಹಿಡಿದು ಸಂತೋಷದಿಂದ ಹೇಳಿದನು: “ಇದರಿಂದ ಆ ನರಭಕ್ಷಕ ರಾಕ್ಷಸನನ್ನು ಸಂಹರಿಸುತ್ತೇನೆ!”

01147023a ತಥಾಪಿ ತೇಷಾಂ ದುಃಖೇನ ಪರೀತಾನಾಂ ನಿಶಮ್ಯ ತತ್।
01147023c ಬಾಲಸ್ಯ ವಾಕ್ಯಮವ್ಯಕ್ತಂ ಹರ್ಷಃ ಸಮಭವನ್ಮಹಾನ್।।

ದುಃಖದಿಂದ ಆವೃತರಾಗಿದ್ದರೂ ಸಹ ಆ ಬಾಲಕನ ತೊದಲು ಮಾತುಗಳನ್ನು ಕೇಳಿದ ಅವರಿಗೆ ಮಹಾ ಹರ್ಷವಾಯಿತು.

01147024a ಅಯಂ ಕಾಲ ಇತಿ ಜ್ಞಾತ್ವಾ ಕುಂತೀ ಸಮುಪಸೃತ್ಯ ತಾನ್।
01147024c ಗತಾಸೂನಮೃತೇನೇವ ಜೀವಯಂತೀದಮಬ್ರವೀತ್।।

ಇದೇ ಸರಿಯಾದ ಸಮಯವೆಂದು ತಿಳಿದು ಕುಂತಿಯು ಅವರನ್ನು ಸಮೀಪಿಸಿ ಸತ್ತವರನ್ನು ಬದುಕಿಸಬಲ್ಲ ಅಮೃತದಂತಿರುವ ಈ ಮಾತುಗಳನ್ನಾಡಿದಳು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಬಕವಧಪರ್ವಣಿ ಚತುಃಸಪ್ತಾರಿಂಶದಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಬಕವಧಪರ್ವದಲ್ಲಿ ನೂರಾನಲ್ವತ್ತೇಳನೆಯ ಅಧ್ಯಾಯವು.