146

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಬಕವಧ ಪರ್ವ

ಅಧ್ಯಾಯ 146

ಸಾರ

ಬ್ರಾಹ್ಮಣಿಯು ತಾನೇ ಸಾಯುವುದು ಲೇಸೆಂದು ಹೇಳುವುದು (1-36).

01146001 ಬ್ರಾಹ್ಮಣ್ಯುವಾಚ।
01146001a ನ ಸಂತಾಪಸ್ತ್ವಯಾ ಕಾರ್ಯಃ ಪ್ರಾಕೃತೇನೇವ ಕರ್ಹಿ ಚಿತ್।
01146001c ನ ಹಿ ಸಂತಾಪಕಾಲೋಽಯಂ ವೈದ್ಯಸ್ಯ ತವ ವಿದ್ಯತೇ।।

ಬ್ರಾಹ್ಮಣಿಯು ಹೇಳಿದಳು: “ಒಬ್ಬ ಸಾಮಾನ್ಯನಂತೆ ಸಂತಾಪಿಸುವುದು ನಿನಗೆ ಸರಿಯಲ್ಲ. ನಿನ್ನಂಥಹ ವಿದ್ವಾಂಸನಿಗೆ ಸಂತಾಪ ಮಾಡುವ ಕಾಲವು ಇದಲ್ಲ.

01146002a ಅವಶ್ಯಂ ನಿಧನಂ ಸರ್ವೈರ್ಗಂತವ್ಯಮಿಹ ಮಾನವೈಃ।
01146002c ಅವಶ್ಯಭಾವಿನ್ಯರ್ಥೇ ವೈ ಸಂತಾಪೋ ನೇಹ ವಿದ್ಯತೇ।।

ಮಾನವರೆಲ್ಲರೂ ಅವಶ್ಯವಾಗಿ ನಿಧನ ಹೊಂದಲೇ ಬೇಕು. ಅವಶ್ಯವಾಗಿರುವುದಕ್ಕೆ ಸಂತಾಪಪಡುವುದು ಸರಿಯಲ್ಲ.

01146003a ಭಾರ್ಯಾ ಪುತ್ರೋಽಥ ದುಹಿತಾ ಸರ್ವಮಾತ್ಮಾರ್ಥಮಿಷ್ಯತೇ।
01146003c ವ್ಯಥಾಂ ಜಹಿ ಸುಬುದ್ಧ್ಯಾ ತ್ವಂ ಸ್ವಯಂ ಯಾಸ್ಯಾಮಿ ತತ್ರ ವೈ।।

ಭಾರ್ಯೆ, ಪುತ್ರ ಮತ್ತು ಪುತ್ರಿ ಎಲ್ಲರನ್ನೂ ಮನುಷ್ಯನು ತನಗಾಗಿಯೇ ಬಯಸುತ್ತಾನೆ. ಸುಬುದ್ಧಿಯಿಂದ ವ್ಯಥೆಪಡುವುದನ್ನು ಬಿಡು. ಅಲ್ಲಿಗೆ ಸ್ವಯಂ ನಾನೇ ಹೋಗುತ್ತೇನೆ.

01146004a ಏತದ್ಧಿ ಪರಮಂ ನಾರ್ಯಾಃ ಕಾರ್ಯಂ ಲೋಕೇ ಸನಾತನಂ।
01146004c ಪ್ರಾಣಾನಪಿ ಪರಿತ್ಯಜ್ಯ ಯದ್ಭರ್ತೃಹಿತಮಾಚರೇತ್।।

ತನ್ನ ಪ್ರಾಣವನ್ನಾದರೂ ಪರಿತ್ಯಜಿಸಿ ಭರ್ತೃವಿಗೆ ಹಿತವನ್ನು ಮಾಡುವುದು ಈ ಲೋಕದ ನಾರಿಯರ ಸನಾತನ ಪರಮ ಕರ್ತವ್ಯ.

01146005a ತಚ್ಚ ತತ್ರ ಕೃತಂ ಕರ್ಮ ತವಾಪೀಹ ಸುಖಾವಹಂ।
01146005c ಭವತ್ಯಮುತ್ರ ಚಾಕ್ಷಯ್ಯಂ ಲೋಕೇಽಸ್ಮಿಂಶ್ಚ ಯಶಸ್ಕರಂ।।

ನಾನು ಹೀಗೆ ಮಾಡುವುದು ನಿನಗೆ ಇಲ್ಲಿ ಸುಖವನ್ನು ತರುತ್ತದೆ ಮತ್ತು ನನಗೆ ಇಲ್ಲಿ ಮತ್ತು ಅಲ್ಲಿ ಎರಡೂ ಕಡೆ ಅಕ್ಷಯ ಯಶಸ್ಸನ್ನು ತರುತ್ತದೆ.

01146006a ಏಷ ಚೈವ ಗುರುರ್ಧರ್ಮೋ ಯಂ ಪ್ರವಕ್ಷಾಮ್ಯಹಂ ತವ।
01146006c ಅರ್ಥಶ್ಚ ತವ ಧರ್ಮಶ್ಚ ಭೂಯಾನತ್ರ ಪ್ರದೃಶ್ಯತೇ।।

ನಾನು ನಿನಗೆ ಹೇಳಿದ್ದುದೇ ಶ್ರೇಷ್ಠ ಧರ್ಮ. ಇದರಿಂದ ನಿನ್ನ ಅರ್ಥ ಮತ್ತು ಧರ್ಮ ಇವೆರಡೂ ವೃದ್ಧಿಯಾಗುತ್ತವೆ.

01146007a ಯದರ್ಥಮಿಷ್ಯತೇ ಭಾರ್ಯಾ ಪ್ರಾಪ್ತಃ ಸೋಽರ್ಥಸ್ತ್ವಯಾ ಮಯಿ।
01146007c ಕನ್ಯಾ ಚೈವ ಕುಮಾರಶ್ಚ ಕೃತಾಹಮನೃಣಾ ತ್ವಯಾ।।

ಯಾವುದು ಬೇಕೆಂದು ಭಾರ್ಯೆಯನ್ನು ಬಯಸುತ್ತಾರೋ ಅದು ನಿನಗೆ ಈಗಾಗಲೇ ನನ್ನಿಂದ ದೊರಕಿದೆ. ಕನ್ಯೆ ಮತ್ತು ಕುಮಾರರನ್ನಿತ್ತು ನೀನು ನನ್ನನ್ನು ಋಣಮುಕ್ತಳನ್ನಾಗಿ ಮಾಡಿದ್ದೀಯೆ.

01146008a ಸಮರ್ಥಃ ಪೋಷಣೇ ಚಾಸಿ ಸುತಯೋ ರಕ್ಷಣೇ ತಥಾ।
01146008c ನ ತ್ವಹಂ ಸುತಯೋಃ ಶಕ್ತಾ ತಥಾ ರಕ್ಷಣಪೋಷಣೇ।।

ನೀನು ಈ ಇಬ್ಬರು ಮಕ್ಕಳನ್ನೂ ಪೋಷಿಸಿ ರಕ್ಷಿಸಲು ಸಮರ್ಥನಾಗಿರುವೆ. ಆದರೆ ನಿನ್ನಹಾಗೆ ನಾನು ಇವರ ಪೋಷಣೆ-ರಕ್ಷಣೆಗೆ ಸಮರ್ಥಳಿಲ್ಲ.

01146009a ಮಮ ಹಿ ತ್ವದ್ವಿಹೀನಾಯಾಃ ಸರ್ವಕಾಮಾ ನ ಆಪದಃ।
01146009c ಕಥಂ ಸ್ಯಾತಾಂ ಸುತೌ ಬಾಲೌ ಭವೇಯಂ ಚ ಕಥಂ ತ್ವಹಂ।।

ನಿನ್ನನ್ನು ಕಳೆದುಕೊಂಡ ನನಗೆ ಎಲ್ಲ ಅವಶ್ಯಕತೆಗಳೂ ಆಪತ್ತುಗಳಾಗುವವು. ನೀನಿಲ್ಲದೇ ಇನ್ನೂ ಬಾಲ್ಯದಲ್ಲಿರುವ ಈ ಮಕ್ಕಳಿಬ್ಬರು ಮತ್ತು ನಾನು ಹೇಗೆ ಇರಬಲ್ಲೆವು?

01146010a ಕಥಂ ಹಿ ವಿಧವಾನಾಥಾ ಬಾಲಪುತ್ರಾ ವಿನಾ ತ್ವಯಾ।
01146010c ಮಿಥುನಂ ಜೀವಯಿಷ್ಯಾಮಿ ಸ್ಥಿತಾ ಸಾಧುಗತೇ ಪಥಿ।।

ನೀನಿಲ್ಲದೇ ಅನಾಥಳಾಗಿ ವಿಧವೆಯಾದ ನಾನು ಈ ಇಬ್ಬರು ಸಣ್ಣ ಮಕ್ಕಳನ್ನು ಸನ್ಮಾರ್ಗದಲ್ಲಿದ್ದುಕೊಂಡು ಹೇಗೆ ತಾನೇ ಸಾಕಬಲ್ಲೆ?

01146011a ಅಹಂಕೃತಾವಲಿಪ್ತೈಶ್ಚ ಪ್ರಾರ್ಥ್ಯಮಾನಾಮಿಮಾಂ ಸುತಾಂ।
01146011c ಅಯುಕ್ತೈಸ್ತವ ಸಂಬಂಧೇ ಕಥಂ ಶಕ್ಷ್ಯಾಮಿ ರಕ್ಷಿತುಂ।।

ನಿನ್ನೊಡನೆ ಸಂಬಂಧವನ್ನು ಬೆಳೆಸಲು ಅಯೋಗ್ಯರಾಗಿ, ಅಹಂಕಾರದಿಂದ ಸೊಕ್ಕಿರುವವರಿಂದ ಈ ಮಗಳನ್ನು ಹೇಗೆ ತಾನೆ ರಕ್ಷಿಸಬಲ್ಲೆ?

01146012a ಉತ್ಸೃಷ್ಟಮಾಮಿಷಂ ಭೂಮೌ ಪ್ರಾರ್ಥಯಂತಿ ಯಥಾ ಖಗಾಃ।
01146012c ಪ್ರಾರ್ಥಯಂತಿ ಜನಾಃ ಸರ್ವೇ ವೀರಹೀನಾಂ ತಥಾ ಸ್ತ್ರಿಯಂ।।

ನೆಲದ ಮೇಲೆ ಎಸೆದ ಮಾಂಸದ ತುಂಡನ್ನು ಪಕ್ಷಿಗಳೆಲ್ಲವೂ ಹೇಗೆ ಅಪೇಕ್ಷಿಸುತ್ತವೆಯೋ ಹಾಗೆ ವೀರ ಪತಿಯಿಲ್ಲದ ಸ್ತ್ರೀಯನ್ನು ಎಲ್ಲರೂ ಬಯಸುತ್ತಾರೆ.

01146013a ಸಾಹಂ ವಿಚಾಲ್ಯಮಾನಾ ವೈ ಪ್ರಾರ್ಥ್ಯಮಾನಾ ದುರಾತ್ಮಭಿಃ।
01146013c ಸ್ಥಾತುಂ ಪಥಿ ನ ಶಕ್ಷ್ಯಾಮಿ ಸಜ್ಜನೇಷ್ಟೇ ದ್ವಿಜೋತ್ತಮ।।

ದ್ವಿಜೋತ್ತಮ! ದುರಾತ್ಮರು ನನ್ನನ್ನು ವಿಚಲಿತಳನ್ನಾಗಿ ಮಾಡಿ ಕೋರುತ್ತಿರುವಾಗ ಸಜ್ಜನರ ಮಾರ್ಗದಲ್ಲಿಯೇ ಇರಲು ಶಕ್ತಳಾಗುವುದಿಲ್ಲ.

01146014a ಕಥಂ ತವ ಕುಲಸ್ಯೈಕಾಮಿಮಾಂ ಬಾಲಾಮಸಂಸ್ಕೃತಾಂ।
01146014c ಪಿತೃಪೈತಾಮಹೇ ಮಾರ್ಗೇ ನಿಯೋಕ್ತುಮಹಮುತ್ಸಹೇ।।

ನಿನ್ನ ಕುಲದ ಈ ಏಕೈಕ ಅವಿವಾಹಿತ ಬಾಲೆಯನ್ನು ಪಿತೃಪಿತಾಮಹರ ಮಾರ್ಗದಲ್ಲಿ ನಡೆಯುವಂತೆ ಹೇಗೆ ನಿರ್ವಹಿಸಬಲ್ಲೆ?

01146015a ಕಥಂ ಶಕ್ಷ್ಯಾಮಿ ಬಾಲೇಽಸ್ಮಿನ್ಗುಣಾನಾಧಾತುಮೀಪ್ಷಿತಾನ್।
01146015c ಅನಾಥೇ ಸರ್ವತೋ ಲುಪ್ತೇ ಯಥಾ ತ್ವಂ ಧರ್ಮದರ್ಶಿವಾನ್।।

ಧರ್ಮದರ್ಶಿ ನೀನಿಲ್ಲದೇ ಸರ್ವದಿಂದಲೂ ವಂಚಿತನಾಗುವ ಈ ಅನಾಥ ಬಾಲಕನಲ್ಲಿ ಅಪೇಕ್ಷಿತ ಗುಣಗಳನ್ನು ಬೆಳೆಸಲು ನನಗೆ ಹೇಗೆ ತಾನೆ ಸಾಧ್ಯ?

01146016a ಇಮಾಮಪಿ ಚ ತೇ ಬಾಲಾಮನಾಥಾಂ ಪರಿಭೂಯ ಮಾಂ।
01146016c ಅನರ್ಹಾಃ ಪ್ರಾರ್ಥಯಿಷ್ಯಂತಿ ಶೂದ್ರಾ ವೇದಶ್ರುತಿಂ ಯಥಾ।।

ಶೂದ್ರರು ವೇದಶೃತಿಗಾಗಿ ಹೇಗೋ ಹಾಗೆ ಅನರ್ಹರು ನಿನ್ನ ಈ ಅನಾಥ ಬಾಲೆಯನ್ನು ಕೇಳುತ್ತಾ ನನ್ನನ್ನು ಪೀಡಿಸುತ್ತಾರೆ.

01146017a ತಾಂ ಚೇದಹಂ ನ ದಿತ್ಸೇಯಂ ತ್ವದ್ಗುಣೈರುಪಬೃಂಹಿತಾಂ।
01146017c ಪ್ರಮಥ್ಯೈನಾಂ ಹರೇಯುಸ್ತೇ ಹವಿರ್ಧ್ವಾಂಕ್ಷಾ ಇವಾಧ್ವರಾತ್।

ನಿನ್ನ ಸದ್ಗುಣಗಳಿಂದ ಸಂವರ್ಧಿತಳಾದ ಅವಳನ್ನು ನಾನು ಕೊಡಲು ಇಷ್ಟಪಡದಿದ್ದರೆ ಅವರು ಕಾಗೆಗಳು ಯಜ್ಞದಿಂದ ಹವಿಸ್ಸನ್ನು ಅಪಹರಿಸುವಂತೆ ಇವಳನ್ನು ಬಲಾತ್ಕಾರವಾಗಿ ಅಪಹರಿಸಿಕೊಂಡು ಹೋಗಬಹುದು.

01146018a ಸಂಪ್ರೇಕ್ಷಮಾಣಾ ಪುತ್ರಂ ತೇ ನಾನುರೂಪಮಿವಾತ್ಮನಃ।
01146018c ಅನರ್ಹವಶಮಾಪನ್ನಾಮಿಮಾಂ ಚಾಪಿ ಸುತಾಂ ತವ।।

ನಿನಗೆ ಅನುರೂಪನಾಗಿ ಬೆಳೆಯದಿದ್ದ ನಿನ್ನ ಈ ಮಗನನ್ನು ಮತ್ತು ಅನರ್ಹರ ವಶಳಾಗುವ ನಿನ್ನ ಈ ಮಗಳನ್ನು ನೋಡಿದ ಜನರು ನನ್ನನ್ನು ದೂರುತ್ತಾರೆ.

01146019a ಅವಜ್ಞಾತಾ ಚ ಲೋಕಸ್ಯ ತಥಾತ್ಮಾನಮಜಾನತೀ।
01146019c ಅವಲಿಪ್ತೈರ್ನರೈರ್ಬ್ರಹ್ಮನ್ಮರಿಷ್ಯಾಮಿ ನ ಸಂಶಯಃ।।

ಅವಲಿಪ್ತ ಜನರ ಮಧ್ಯೆ ಈ ಲೋಕದಲ್ಲಿ ನನ್ನನ್ನು ನಾನೇ ಗುರುತಿಸಲಾರದಂತಾಗಿ ನಿಸ್ಸಂಶಯವಾಗಿಯೂ ಸಾಯುತ್ತೇನೆ.

01146020a ತೌ ವಿಹೀನೌ ಮಯಾ ಬಾಲೌ ತ್ವಯಾ ಚೈವ ಮಮಾತ್ಮಜೌ।
01146020c ವಿನಶ್ಯೇತಾಂ ನ ಸಂದೇಹೋ ಮತ್ಸ್ಯಾವಿವ ಜಲಕ್ಷಯೇ।।

ನಿನ್ನ ಮತ್ತು ನನ್ನಿಂದ ವಿಹೀನರಾದ, ನಿನ್ನಿಂದ ನನ್ನಲ್ಲಿ ಹುಟ್ಟಿದ ಈ ಇಬ್ಬರು ಮಕ್ಕಳೂ ನೀರು ಬತ್ತಿಹೋದಾಗ ಸಾಯುವ ಮೀನುಗಳಂತೆ ವಿನಾಶರಾಗುತ್ತಾರೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.

01146021a ತ್ರಿತಯಂ ಸರ್ವಥಾಪ್ಯೇವಂ ವಿನಶಿಷ್ಯತ್ಯಸಂಶಯಂ।
01146021c ತ್ವಯಾ ವಿಹೀನಂ ತಸ್ಮಾತ್ತ್ವಂ ಮಾಂ ಪರಿತ್ಯಕ್ತುಮರ್ಹಸಿ।।

ಈ ರೀತಿ ನಿನ್ನಿಂದ ವಿಹೀನರಾದ ನಾವು ಮೂವರೂ ಸರ್ವಥಾ ವಿನಾಶಹೊಂದುತ್ತೇವೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದುದರಿಂದ ನೀನು ನನ್ನನ್ನು ಪರಿತ್ಯಜಿಸುವುದು ಒಳ್ಳೆಯದು.

01146022a ವ್ಯುಷ್ಟಿರೇಷಾ ಪರಾ ಸ್ತ್ರೀಣಾಂ ಪೂರ್ವಂ ಭರ್ತುಃ ಪರಾ ಗತಿಃ।
01146022c ನ ತು ಬ್ರಾಹ್ಮಣ ಪುತ್ರಾಣಾಂ ವಿಷಯೇ ಪರಿವರ್ತಿತುಂ।।

ಬ್ರಾಹ್ಮಣ! ಭರ್ತುವಿನ ಮೊದಲೇ ಪರಾಗತಿಯನ್ನು ಹೊಂದುವುದು ಸ್ತ್ರೀಯರಿಗೆ ಅತ್ಯಂತ ಶ್ರೇಷ್ಠ. ಪುತ್ರರ ಆಶ್ರಯದಲ್ಲಿ ಜೀವಿಸುವುದು ಸರಿಯಲ್ಲ.

01146023a ಪರಿತ್ಯಕ್ತಃ ಸುತಶ್ಚಾಯಂ ದುಹಿತೇಯಂ ತಥಾ ಮಯಾ।
01146023c ಬಾಂಧವಾಶ್ಚ ಪರಿತ್ಯಕ್ತಾಸ್ತ್ವದರ್ಥಂ ಜೀವಿತಂ ಚ ಮೇ।।

ನಿನಗಾಗಿ ನಾನು ನನ್ನ ಮಗ, ಮಗಳು, ಬಾಂಧವರು ಮತ್ತು ನನ್ನ ಈ ಜೀವವನ್ನೂ ಪರಿತ್ಯಜಿಸಲು ಸಿದ್ಧಳಿದ್ದೇನೆ.

01146024a ಯಜ್ಞೈಸ್ತಪೋಭಿರ್ನಿಯಮೈರ್ದಾನೈಶ್ಚ ವಿವಿಧೈಸ್ತಥಾ।
01146024c ವಿಶಿಷ್ಯತೇ ಸ್ತ್ರಿಯಾ ಭರ್ತುರ್ನಿತ್ಯಂ ಪ್ರಿಯಹಿತೇ ಸ್ಥಿತಿಃ।।

ಯಜ್ಞ, ತಪಸ್ಸು, ನಿಯಮ, ಮತ್ತು ದಾನ ಈ ಎಲ್ಲವುದಕ್ಕಿಂತಲೂ ನಿತ್ಯವೂ ಭರ್ತೃವಿನ ಪ್ರಿಯಹಿತ ನಿರತಳಾಗಿರುವುದು ಸ್ತ್ರೀಯ ವಿಶೇಷತೆ.

01146025a ತದಿದಂ ಯಚ್ಚಿಕೀರ್ಷಾಮಿ ಧರ್ಮ್ಯಂ ಪರಮಸಮ್ಮತಂ।
01146025c ಇಷ್ಟಂ ಚೈವ ಹಿತಂ ಚೈವ ತವ ಚೈವ ಕುಲಸ್ಯ ಚ।।

ಆದುದರಿಂದ ನಾನು ನಿನಗೆ ಹೇಳುತ್ತಿರುವುದು ನಿನ್ನ ಇಷ್ಟ, ಹಿತ ಮತ್ತು ಕುಲಕ್ಕೆ ಪರಮ ಸಮ್ಮತ ಧರ್ಮ.

01146026a ಇಷ್ಟಾನಿ ಚಾಪ್ಯಪತ್ಯಾನಿ ದ್ರವ್ಯಾಣಿ ಸುಹೃದಃ ಪ್ರಿಯಾಃ।
01146026c ಆಪದ್ಧರ್ಮವಿಮೋಕ್ಷಾಯ ಭಾರ್ಯಾ ಚಾಪಿ ಸತಾಂ ಮತಂ।।

ಆಪದ್ಧರ್ಮದಿಂದ ಮೋಕ್ಷವನ್ನು ಪಡೆಯಲು ಮಕ್ಕಳು, ಹಣ, ಸುಹೃದಯ ಪ್ರಿಯರು ಮತ್ತು ಭಾರ್ಯೆ ಬೇಕೆಂದು ತಿಳಿದಿರುವವರು ಅಭಿಪ್ರಾಯ ಪಡುತ್ತಾರೆ.

01146027a ಏಕತೋ ವಾ ಕುಲಂ ಕೃತ್ಸ್ನಮಾತ್ಮಾ ವಾ ಕುಲವರ್ಧನ।
01146027c ನ ಸಮಂ ಸರ್ವಮೇವೇತಿ ಬುಧಾನಾಮೇಷ ನಿಶ್ಚಯಃ।।

ಕುಲವರ್ಧನ! ಒಂದು ಕಡೆ ಸಂಪೂರ್ಣ ಕುಲವನ್ನು ಮತ್ತು ಇನ್ನೊಂದು ಕಡೆ ತನ್ನನ್ನು ಇರಿಸಿ ತುಲನೆ ಮಾಡಿದರೆ ಅವೆಲ್ಲವೂ ಸೇರಿ ಅವನನ್ನು ಹೋಲುವುದಿಲ್ಲ ಎಂದು ತಿಳಿದವರು ಹೇಳುತ್ತಾರೆ.

01146028a ಸ ಕುರುಷ್ವ ಮಯಾ ಕಾರ್ಯಂ ತಾರಯಾತ್ಮಾನಮಾತ್ಮನಾ।
01146028c ಅನುಜಾನೀಹಿ ಮಾಮಾರ್ಯ ಸುತೌ ಮೇ ಪರಿರಕ್ಷ ಚ।।

ಈ ಕೆಲಸವು ನನ್ನಿಂದಲೇ ನಡೆಯಲಿ. ನೀನು ನಿನ್ನನ್ನು ಉಳಿಸಿಕೋ. ನನಗೆ ಹೋಗಲಿಕ್ಕೆ ಅನುಮತಿಯನ್ನು ನೀಡು. ಆರ್ಯ! ನನ್ನ ಈ ಮಕ್ಕಳನ್ನು ಪರಿರಕ್ಷಿಸು.

01146029a ಅವಧ್ಯಾಃ ಸ್ತ್ರಿಯೈತ್ಯಾಹುರ್ಧರ್ಮಜ್ಞಾ ಧರ್ಮನಿಶ್ಚಯೇ।
01146029c ಧರ್ಮಜ್ಞಾನ್ರಾಕ್ಷಸಾನಾಹುರ್ನ ಹನ್ಯಾತ್ಸ ಚ ಮಾಮಪಿ।।

ಸ್ತ್ರೀಯನ್ನು ವಧಿಸಬಾರದೆಂದು ಧರ್ಮಜ್ಞರು ಧರ್ಮನಿಶ್ಚಯಗಳಲ್ಲಿ ಹೇಳುತ್ತಾರೆ. ರಾಕ್ಷಸರೂ ಧರ್ಮಜ್ಞರಿರುತ್ತಾರೆ. ಹಾಗಾಗಿ ಅವನು ನನ್ನನ್ನು ಕೊಲ್ಲದೆಯೂ ಇರಬಹುದು.

01146030a ನಿಃಸಂಶಯೋ ವಧಃ ಪುಂಸಾಂ ಸ್ತ್ರೀಣಾಂ ಸಂಶಯಿತೋ ವಧಃ।
01146030c ಅತೋ ಮಾಮೇವ ಧರ್ಮಜ್ಞ ಪ್ರಸ್ಥಾಪಯಿತುಮರ್ಹಸಿ।।

ಪುರುಷನನ್ನು ಕೊಲ್ಲುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ಸ್ತ್ರೀಯನ್ನು ಕೊಲ್ಲುತ್ತಾನೆ ಎನ್ನುವುದರಲ್ಲಿ ಅನುಮಾನವಿದೆ. ಆದುದರಿಂದ ಧರ್ಮಜ್ಞನಾದ ನೀನು ನನಗೆ ಹೊರಡಲು ಅನುಮತಿಯನ್ನು ನೀಡು.

01146031a ಭುಕ್ತಂ ಪ್ರಿಯಾಣ್ಯವಾಪ್ತಾನಿ ಧರ್ಮಶ್ಚ ಚರಿತೋ ಮಯಾ।
01146031c ತ್ವತ್ಪ್ರಸೂತಿಃ ಪ್ರಿಯಾ ಪ್ರಾಪ್ತಾ ನ ಮಾಂ ತಪ್ಸ್ಯತ್ಯಜೀವಿತಂ।।

ನಾನು ಸಾಕಷ್ಟು ಭೋಗಿಸಿದ್ದೇನೆ. ಸಂತೋಷಪಟ್ಟಿದ್ದೇನೆ. ಧರ್ಮದಲ್ಲಿ ನಡೆದುಕೊಂಡಿದ್ದೇನೆ. ಮತ್ತು ನಿನ್ನಿಂದ ಈ ಮುದ್ದು ಮಕ್ಕಳನ್ನು ಪಡೆದಿದ್ದೇನೆ. ಸಾಯಲು ನನಗೆ ದುಃಖವೇನೂ ಆಗುತ್ತಿಲ್ಲ.

01146032a ಜಾತಪುತ್ರಾ ಚ ವೃದ್ಧಾ ಚ ಪ್ರಿಯಕಾಮಾ ಚ ತೇ ಸದಾ।
01146032c ಸಮೀಕ್ಷ್ಯೈತದಹಂ ಸರ್ವಂ ವ್ಯವಸಾಯಂ ಕರೋಮ್ಯತಃ।।

ಮಕ್ಕಳ ತಾಯಿಯಾಗಿದ್ದೇನೆ. ಮುದಿಯಾಗುತ್ತಿದ್ದೇನೆ. ನಿನಗೆ ಪ್ರಿಯವಾದುದನ್ನು ಮಾಡಬೇಕೆಂದು ಸದಾ ಯೋಚಿಸುತ್ತಿದ್ದೆ. ಹೀಗಾಗಿ ಇವೆಲ್ಲವನ್ನು ನೋಡಿಯೇ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ.

01146033a ಉತ್ಸೃಜ್ಯಾಪಿ ಚ ಮಾಮಾರ್ಯ ವೇತ್ಸ್ಯಸ್ಯನ್ಯಾಮಪಿ ಸ್ತ್ರಿಯಂ।
01146033c ತತಃ ಪ್ರತಿಷ್ಠಿತೋ ಧರ್ಮೋ ಭವಿಷ್ಯತಿ ಪುನಸ್ತವ।।

ಆರ್ಯ! ನನ್ನನ್ನು ಕಳೆದುಕೊಂಡರೂ ಕೂಡ ನಿನಗೆ ಅನ್ಯ ಸ್ತ್ರೀಯರು ದೊರಕುತ್ತಾರೆ. ನಿನ್ನ ಧರ್ಮವು ಪುನಃ ಚ್ಯುತಿಯಾಗುವುದಿಲ್ಲ.

01146034a ನ ಚಾಪ್ಯಧರ್ಮಃ ಕಲ್ಯಾಣ ಬಹುಪತ್ನೀಕತಾ ನೃಣಾಂ।
01146034c ಸ್ತ್ರೀಣಾಮಧರ್ಮಃ ಸುಮಹಾನ್ಭರ್ತುಃ ಪೂರ್ವಸ್ಯ ಲಂಘನೇ।।

ಬಹುಪತ್ನಿಯರನ್ನು ವಿವಾಹವಾಗುವುದು ಪುರುಷರಿಗೆ ಅಧರ್ಮವೆಂದೆನಿಸಿಕೊಳ್ಳುವುದಿಲ್ಲ. ಆದರೆ ಮೊದಲ ಗಂಡನನ್ನು ಬಿಟ್ಟು ಮದುವೆಯಾಗುವುದು ಸ್ತ್ರಿಯರಿಗೆ ಮಹಾ ಅಧರ್ಮವೆನಿಸುತ್ತದೆ.

01146035a ಏತತ್ಸರ್ವಂ ಸಮೀಕ್ಷ್ಯ ತ್ವಮಾತ್ಮತ್ಯಾಗಂ ಚ ಗರ್ಹಿತಂ।
01146035c ಆತ್ಮಾನಂ ತಾರಯ ಮಯಾ ಕುಲಂ ಚೇಮೌ ಚ ದಾರಕೌ।।

ಇವೆಲ್ಲವನ್ನೂ ನೋಡಿ ಮತ್ತು ನಿನಗೆ ಆತ್ಮತ್ಯಾಗವು ಸರಿಯಲ್ಲ ಎಂದು ತಿಳಿದು ನೀನು ನಿನ್ನನ್ನು, ಕುಲವನ್ನು ಮತ್ತು ಮಕ್ಕಳನ್ನು ನನ್ನ ಮೂಲಕವೇ ಉಳಿಸಿಕೊಳ್ಳಬೇಕು.””

01146036 ವೈಶಂಪಾಯನ ಉವಾಚ।
01146036a ಏವಮುಕ್ತಸ್ತಯಾ ಭರ್ತಾ ತಾಂ ಸಮಾಲಿಂಗ್ಯ ಭಾರತ।
01146036c ಮುಮೋಚ ಬಾಷ್ಪಂ ಶನಕೈಃ ಸಭಾರ್ಯೋ ಭೃಶದುಃಖಿತಃ।।

ವೈಶಂಪಾಯನನು ಹೇಳಿದನು: “ಭಾರತ! ಹೀಗೆ ಹೇಳಿದ ಅವಳನ್ನು ಪತಿಯು ಆಲಿಂಗಿಸಿದನು. ಪತ್ನಿಯೂ ಸೇರಿ ಇಬ್ಬರೂ ದುಃಖ ಪೀಡಿತರಾಗಿ ಒಂದೇ ಸಮನೆ ಕಣ್ಣೀರಿಟ್ಟರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಬಕವಧಪರ್ವಣಿ ಚತುಶಡ್ವಾರಿಂಶದಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಬಕವಧಪರ್ವದಲ್ಲಿ ನೂರಾನಲ್ವತ್ತಾರನೆಯ ಅಧ್ಯಾಯವು.