142 ಹಿಡಿಂಬವಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಹಿಡಿಂಬವಧ ಪರ್ವ

ಅಧ್ಯಾಯ 142

ಸಾರ

ಕುಂತಿಯು ಕೇಳಲು ಹಿಡಿಂಬಿಯು ತನ್ನ ಪರಿಚಯವನ್ನು ಹೇಳಿಕೊಂಡು, ತಾನು ಭೀಮನನ್ನು ಬಯಸಿದುದನ್ನೂ, ಅಣ್ಣ ಹಿಡಿಂಬನೊಂದಿಗೆ ಭೀಮನು ಹೋರಾಡುತ್ತಿರುವುದನ್ನೂ ಹೇಳಿದುದು (1-12). ಹಿಡಿಂಬನೊಂದಿಗೆ ಹೋರಾಡುತ್ತಿದ್ದ ಭೀಮನಿಗೆ ಅರ್ಜುನನು ಬೇಗ ಮುಗಿಸೆಂದು ಸೂಚಿಸುವುದು, ಭೀಮನು ಹಿಂಡಿಂಬನನ್ನು ಕೊಂದುದು (13-28). ಕಾಡನ್ನು ಬಿಟ್ಟು ಹೋಗುತ್ತಿದ್ದ ಪಾಂಡವರನ್ನು ಹಿಡಿಂಬಿಯು ಹಿಂಬಾಲಿಸಿ ಹೋದುದು (29-34).

01142001 ವೈಶಂಪಾಯನ ಉವಾಚ।
01142001a ಪ್ರಬುದ್ಧಾಸ್ತೇ ಹಿಡಿಂಬಾಯಾ ರೂಪಂ ದೃಷ್ಟ್ವಾತಿಮಾನುಷಂ।
01142001c ವಿಸ್ಮಿತಾಃ ಪುರುಷವ್ಯಾಘ್ರಾ ಬಭೂವುಃ ಪೃಥಯಾ ಸಹ।।

ವೈಶಂಪಾಯನನು ಹೇಳಿದನು: “ಎಚ್ಚೆತ್ತ ಪೃಥೆಯ ಸಹಿತ ಆ ಪುರುಷವ್ಯಾಘ್ರರು ಅಮಾನುಷ ರೂಪಿಣಿ ಹಿಡಿಂಬೆಯನ್ನು ನೋಡಿ ವಿಸ್ಮಿತರಾದರು.

01142002a ತತಃ ಕುಂತೀ ಸಮೀಕ್ಷ್ಯೈನಾಂ ವಿಸ್ಮಿತಾ ರೂಪಸಂಪದಾ।
01142002c ಉವಾಚ ಮಧುರಂ ವಾಕ್ಯಂ ಸಾಂತ್ವಪೂರ್ವಮಿದಂ ಶನೈಃ।।

ಆ ರೂಪಸಂಪದೆಯನ್ನು ನೋಡಿ ವಿಸ್ಮಿತಳಾದ ಕುಂತಿಯು, ನಿಧಾನವಾಗಿ ಸಾಂತ್ವನ ಪೂರ್ವಕ ಈ ಮಧುರ ವಾಖ್ಯಗಳನ್ನು ನುಡಿದಳು:

01142003a ಕಸ್ಯ ತ್ವಂ ಸುರಗರ್ಭಾಭೇ ಕಾ ಚಾಸಿ ವರವರ್ಣಿನಿ।
01142003c ಕೇನ ಕಾರ್ಯೇಣ ಸುಶ್ರೋಣಿ ಕುತಶ್ಚಾಗಮನಂ ತವ।।

“ವರವರ್ಣಿನಿ! ಸುರರ ಮಗುವಂತಿರುವ ನೀನು ಯಾರು? ಯಾವ ಕೆಲಸವನ್ನಿಟ್ಟು-ಕೊಂಡು ನೀನು ಇಲ್ಲಿಗೆ ಬಂದಿರುವೆ? ಎಲ್ಲಿಂದ ಬಂದಿರುವೆ?

01142004a ಯದಿ ವಾಸ್ಯ ವನಸ್ಯಾಸಿ ದೇವತಾ ಯದಿ ವಾಪ್ಸರಾಃ।
01142004c ಆಚಕ್ಷ್ವ ಮಮ ತತ್ಸರ್ವಂ ಕಿಮರ್ಥಂ ಚೇಹ ತಿಷ್ಠಸಿ।।

ನೀನು ಈ ವನದ ದೇವತೆಯಾಗಿದ್ದರೆ ಅಥವಾ ಅಪ್ಸರೆಯಾಗಿದ್ದರೆ ಎಲ್ಲವನ್ನೂ ನನಗೆ ಹೇಳು. ನೀನು ಏಕೆ ಇಲ್ಲಿ ನಿಂತಿದ್ದೀಯೆ ಹೇಳು.”

01142005 ಹಿಡಿಂಬೋವಾಚ।
01142005a ಯದೇತತ್ಪಶ್ಯಸಿ ವನಂ ನೀಲಮೇಘನಿಭಂ ಮಹತ್।
01142005c ನಿವಾಸೋ ರಾಕ್ಷಸಸ್ಯೈತದ್ ಹಿಡಿಂಬಸ್ಯ ಮಮೈವ ಚ।।

ಹಿಡಿಂಬೆಯು ಹೇಳಿದಳು: “ನೀಲಮೇಘನಿಭದಂತೆ ದಟ್ಟ ಈ ಮಹಾವನವನ್ನು ನೀನೇನು ನೋಡುತ್ತಿದ್ದೀಯೋ ಅದು ನನ್ನ ಮತ್ತು ರಾಕ್ಷಸ ಹಿಡಿಂಬನ ವಾಸಸ್ಥಳ.

01142006a ತಸ್ಯ ಮಾಂ ರಾಕ್ಷಸೇಂದ್ರಸ್ಯ ಭಗಿನೀಂ ವಿದ್ಧಿ ಭಾಮಿನಿ।
01142006c ಭ್ರಾತ್ರಾ ಸಂಪ್ರೇಷಿತಾಮಾರ್ಯೇ ತ್ವಾಂ ಸಪುತ್ರಾಂ ಜಿಘಾಂಸತಾ।।

ಭಾಮಿನಿ! ನಾನು ಆ ರಾಕ್ಷಸೇಂದ್ರನ ತಂಗಿಯೆಂದು ತಿಳಿ. ನಿನ್ನನ್ನು ಮತ್ತು ನಿನ್ನ ಪುತ್ರರನ್ನು ಭಕ್ಷಿಸ ಬಯಸಿದ ನನ್ನ ಅಣ್ಣನು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ.

01142007a ಕ್ರೂರಬುದ್ಧೇರಹಂ ತಸ್ಯ ವಚನಾದಾಗತಾ ಇಹ।
01142007c ಅದ್ರಾಕ್ಷಂ ಹೇಮವರ್ಣಾಭಂ ತವ ಪುತ್ರಂ ಮಹೌಜಸಂ।।

ಆ ಕ್ರೂರ ರಾಕ್ಷಸನ ಅಪ್ಪಣೆಯಂತೆ ನಾನು ಇಲ್ಲಿಗೆ ಬಂದೆ. ಇಲ್ಲಿ ನಿನ್ನ ಹೇಮವರ್ಣದ ಮಹೌಜಸ ಪುತ್ರನನ್ನು ಕಂಡೆ.

01142008a ತತೋಽಹಂ ಸರ್ವಭೂತಾನಾಂ ಭಾವೇ ವಿಚರತಾ ಶುಭೇ।
01142008c ಚೋದಿತಾ ತವ ಪುತ್ರಸ್ಯ ಮನ್ಮಥೇನ ವಶಾನುಗಾ।।

ಶುಭೇ! ಸರ್ವಭೂತಗಳಲ್ಲಿ ವಿಚರಿಸಿರುವ ಮನ್ಮಥನಿಂದ ತಳ್ಳಲ್ಪಟ್ಟು ನಾನು ನಿನ್ನ ಪುತ್ರನ ವಶದಲ್ಲಿ ಬಂದೆ.

01142009a ತತೋ ವೃತೋ ಮಯಾ ಭರ್ತಾ ತವ ಪುತ್ರೋ ಮಹಾಬಲಃ।
01142009c ಅಪನೇತುಂ ಚ ಯತಿತೋ ನ ಚೈವ ಶಕಿತೋ ಮಯಾ।।

ನಿನ್ನ ಮಹಾಬಲಶಾಲಿ ಪುತ್ರನನ್ನು ನನ್ನ ಪತಿಯನ್ನಾಗಿ ವರಿಸಿದ್ದೇನೆ. ಅವನನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ.

01142010a ಚಿರಾಯಮಾಣಾಂ ಮಾಂ ಜ್ಞಾತ್ವಾ ತತಃ ಸ ಪುರುಷಾದಕಃ।
01142010c ಸ್ವಯಮೇವಾಗತೋ ಹಂತುಮಿಮಾನ್ಸರ್ವಾಂಸ್ತವಾತ್ಮಜಾನ್।।

ನಾನು ಹಿಂದಿರುಗುವುದಕ್ಕೆ ತಡವಾದದ್ದನ್ನು ತಿಳಿದ ಆ ನರಭಕ್ಷಕನು ನಿನ್ನ ಪುತ್ರರನ್ನು ಕೊಲ್ಲಲು ಸ್ವಯಂ ತಾನೇ ಇಲ್ಲಿಗೆ ಬಂದನು.

01142011a ಸ ತೇನ ಮಮ ಕಾಂತೇನ ತವ ಪುತ್ರೇಣ ಧೀಮತಾ।
01142011c ಬಲಾದಿತೋ ವಿನಿಷ್ಪಿಷ್ಯ ವ್ಯಪಕೃಷ್ಟೋ ಮಹಾತ್ಮನಾ।।

ನನ್ನ ಕಾಂತ ನಿನ್ನ ಧೀಮಂತ ಪುತ್ರ ಮಹಾತ್ಮನು ಅವನನ್ನು ನೆಲದ ಮೇಲೆ ಚಚ್ಚಿಹಾಕಿ ಇಲ್ಲಿಂದ ಬಲವಂತವಾಗಿ ಎಳೆದುಕೊಂಡು ಹೋದನು.

01142012a ವಿಕರ್ಷಂತೌ ಮಹಾವೇಗೌ ಗರ್ಜಮಾನೌ ಪರಸ್ಪರಂ।
01142012c ಪಶ್ಯಧ್ವಂ ಯುಧಿ ವಿಕ್ರಾಂತಾವೇತೌ ತೌ ನರರಾಕ್ಷಸೌ।।

ಅಲ್ಲಿ ನೋಡು! ಮಹಾವೇಗದಲ್ಲಿ ಗರ್ಜಿಸುತ್ತಾ ಪರಸ್ಪರ ಹೋರಾಡುತ್ತಿರುವ ಆ ವಿಕ್ರಾಂತ ನರ ರಾಕ್ಷಸರನ್ನು ನೋಡು.””

01142013 ವೈಶಂಪಾಯನ ಉವಾಚ।
01142013a ತಸ್ಯಾಃ ಶ್ರುತ್ವೈವ ವಚನಮುತ್ಪಪಾತ ಯುಧಿಷ್ಠಿರಃ।
01142013c ಅರ್ಜುನೋ ನಕುಲಶ್ಚೈವ ಸಹದೇವಶ್ಚ ವೀರ್ಯವಾನ್।।
01142014a ತೌ ತೇ ದದೃಶುರಾಸಕ್ತೌ ವಿಕರ್ಷಂತೌ ಪರಸ್ಪರಂ।
01142014c ಕಾಂಕ್ಷಮಾಣೌ ಜಯಂ ಚೈವ ಸಿಂಹಾವಿವ ರಣೋತ್ಕಟೌ।।

ವೈಶಂಪಾಯನನು ಹೇಳಿದನು: “ಅವಳ ಮಾತುಗಳನ್ನು ಕೇಳುತ್ತಿದ್ದಂತೆಯೇ ವೀರ ಯುಧಿಷ್ಠಿರ, ಅರ್ಜುನ ಮತ್ತು ನಕುಲ ಸಹದೇವರು ಮೇಲೆದ್ದು ಜಯವನ್ನು ಬಯಸುತ್ತಾ ಪರಸ್ಪರರನ್ನು ಎಳೆದಾಡುತ್ತಿರುವ ರಣೋತ್ಕಟ ಎರಡು ಸಿಂಹಗಳಂತೆ ಹೊಡೆದಾಡುತ್ತಿರುವ ಅವರೀರ್ವರನ್ನು ಕಂಡರು.

01142015a ತಾವನ್ಯೋನ್ಯಂ ಸಮಾಶ್ಲಿಷ್ಯ ವಿಕರ್ಷಂತೌ ಪರಸ್ಪರಂ।
01142015c ದಾವಾಗ್ನಿಧೂಮಸದೃಶಂ ಚಕ್ರತುಃ ಪಾರ್ಥಿವಂ ರಜಃ।।

ಅವರು ಅನ್ಯೋನ್ಯರನ್ನು ಹಿಡಿದು ಪರಸ್ಪರರನ್ನು ಎಳೆಯುತ್ತಾ ಕಾಡ್ಗಿಚ್ಚಿನ ಹೊಗೆಯಂತೆ ದಟ್ಟ ಧೂಳನ್ನೆಬ್ಬಿಸಿದರು.

01142016a ವಸುಧಾರೇಣುಸಂವೀತೌ ವಸುಧಾಧರಸಂನಿಭೌ।
01142016c ವಿಭ್ರಾಜೇತಾಂ ಯಥಾ ಶೈಲೌ ನೀಹಾರೇಣಾಭಿಸಂವೃತೌ।।

ಅವರು ಧೂಳಿನಿಂದ ಮುಚ್ಚಿದ ಬೆಟ್ಟಗಳಂತೆ ಕಂಡರು, ಮತ್ತು ಮಂಜು ಮುಸುಕಿದ ಕಲ್ಲಿನ ಬೆಟ್ಟಗಳಂತೆ ಕಂಡರು.

01142017a ರಾಕ್ಷಸೇನ ತಥಾ ಭೀಮಂ ಕ್ಲಿಶ್ಯಮಾನಂ ನಿರೀಕ್ಷ್ಯ ತು।
01142017c ಉವಾಚೇದಂ ವಚಃ ಪಾರ್ಥಃ ಪ್ರಹಸಂಶನಕೈರಿವ।।

ಭೀಮನು ಆ ರಾಕ್ಷಸನಿಂದ ಕಷ್ಟಕ್ಕೊಳಗಾದುದನ್ನು ನೋಡಿದ ಪಾರ್ಥನು ನಗುತ್ತಾ ಮೆಲ್ಲನೆ ಹೇಳಿದನು:

01142018a ಭೀಮ ಮಾ ಭೈರ್ಮಹಾಬಾಹೋ ನ ತ್ವಾಂ ಬುಧ್ಯಾಮಹೇ ವಯಂ।
01142018c ಸಮೇತಂ ಭೀಮರೂಪೇಣ ಪ್ರಸುಪ್ತಾಃ ಶ್ರಮಕರ್ಶಿತಾಃ।।

“ಮಹಾಬಾಹು ಭೀಮ! ಹೆದರ ಬೇಡ. ಆಯಾಸಗೊಂಡ ನಾವೆಲ್ಲಾ ಮಲಗಿದ್ದೆವು. ನೀನು ಈ ಭೀಮರೂಪದವನೊಡನೆ ಹೊಡೆದಾಟಕ್ಕಿಳಿದಿದ್ದುದು ತಿಳಿಯಲಿಲ್ಲ.

01142019a ಸಾಹಾಯ್ಯೇಽಸ್ಮಿ ಸ್ಥಿತಃ ಪಾರ್ಥ ಯೋಧಯಿಷ್ಯಾಮಿ ರಾಕ್ಷಸಂ।
01142019c ನಕುಲಃ ಸಹದೇವಶ್ಚ ಮಾತರಂ ಗೋಪಯಿಷ್ಯತಃ।।

ಪಾರ್ಥ! ರಾಕ್ಷಸನೊಡನೆ ನಿನ್ನ ಈ ಹೋರಾಟದಲ್ಲಿ ನಾನು ಸಯಾಯ ಮಾಡಲು ನಿಂತಿದ್ದೇನೆ. ನಕುಲ ಮತ್ತು ಸಹದೇವರು ತಾಯಿಯನ್ನು ಕಾಯುತ್ತಾರೆ.”

01142020 ಭೀಮ ಉವಾಚ।
01142020a ಉದಾಸೀನೋ ನಿರೀಕ್ಷಸ್ವ ನ ಕಾರ್ಯಃ ಸಂಭ್ರಮಸ್ತ್ವಯಾ।
01142020c ನ ಜಾತ್ವಯಂ ಪುನರ್ಜೀವೇನ್ಮದ್ಬಾಹ್ವಂತರಮಾಗತಃ।।

ಭೀಮನು ಹೇಳಿದನು: “ಸುಮ್ಮನೆ ಕುಳಿತುಕೊಂಡು ನೋಡಿ! ವೃಥಾ ಉದ್ವೇಗಕ್ಕೊಳಗಾಗಬೇಡಿ! ನನ್ನ ಬಾಹುಗಳ ಮದ್ಯದಲ್ಲಿ ಸಿಲುಕಿದ ಇವನು ಇನ್ನು ಹೆಚ್ಚು ಕಾಲ ಬದುಕಲಾರ.”

01142021 ಅರ್ಜುನ ಉವಾಚ।
01142021a ಕಿಮನೇನ ಚಿರಂ ಭೀಮ ಜೀವತಾ ಪಾಪರಕ್ಷಸಾ।
01142021c ಗಂತವ್ಯಂ ನ ಚಿರಂ ಸ್ಥಾತುಮಿಹ ಶಕ್ಯಮರಿಂದಮ।।

ಅರ್ಜುನನು ಹೇಳಿದನು: “ಆ ಪಾಪಿ ರಾಕ್ಷಸನನ್ನು ಕೊಲ್ಲಲು ಇಷ್ಟೊಂದು ಸಮಯವನ್ನೇಕೆ ತೆಗೆದುಕೊಳ್ಳುತ್ತಿದ್ದೀಯೆ ಭೀಮ? ಅರಿಂದಮ! ನಾವು ಇನ್ನು ಇಲ್ಲಿಂದ ಹೊರಡಬೇಕು. ಹೆಚ್ಚು ಹೊತ್ತು ಇಲ್ಲಿ ಇರಲು ಸಾಧ್ಯವಿಲ್ಲ.

01142022a ಪುರಾ ಸಂರಜ್ಯತೇ ಪ್ರಾಚೀ ಪುರಾ ಸಂಧ್ಯಾ ಪ್ರವರ್ತತೇ।
01142022c ರೌದ್ರೇ ಮುಹೂರ್ತೇ ರಕ್ಷಾಂಸಿ ಪ್ರಬಲಾನಿ ಭವಂತಿ ಚ।।

ಪೂರ್ವ ದಿಕ್ಕು ಕೆಂಪಾಗುವುದರೊಳಗಿನ ಸಂಧ್ಯಾ ಸಮಯದ ರೌದ್ರ ಮುಹೂರ್ತದಲ್ಲಿ ರಾಕ್ಷಸರು ಪ್ರಬಲರಾಗುತ್ತಾರೆ.

01142023a ತ್ವರಸ್ವ ಭೀಮ ಮಾ ಕ್ರೀಡ ಜಹಿ ರಕ್ಷೋ ವಿಭೀಷಣಂ।
01142023c ಪುರಾ ವಿಕುರುತೇ ಮಾಯಾಂ ಭುಜಯೋಃ ಸಾರಮರ್ಪಯ।।

ಬೇಗ ಮುಗಿಸು ಭೀಮ! ಅವನೊಂದಿಗೆ ಆಡಬೇಡ. ಆ ವಿಭೀಷಣ ರಾಕ್ಷಸನು ತನ್ನ ಮಾಯೆಯನ್ನು ಬಳಸುವುದರೊಳಗೆ ಅವನನ್ನು ಕೊಂದು ಹಾಕು. ನಿನ್ನ ಭುಜಗಳ ಶಕ್ತಿಯನ್ನು ಬಳಸು.””

01142024 ವೈಶಂಪಾಯನ ಉವಾಚ।
01142024a ಅರ್ಜುನೇನೈವಮುಕ್ತಸ್ತು ಭೀಮೋ ಭೀಮಸ್ಯ ರಕ್ಷಸಃ।
01142024c ಉತ್ಕ್ಷಿಪ್ಯಾಭ್ರಾಮಯದ್ದೇಹಂ ತೂರ್ಣಂ ಗುಣಶತಾಧಿಕಂ।।

ವೈಶಂಪಾಯನನು ಹೇಳಿದನು: “ಅರ್ಜುನನ ಈ ಮಾತುಗಳನ್ನು ಕೇಳಿದ ಭೀಮನು ಆ ಭಯಂಕರ ರಾಕ್ಷಸನ ದೇಹವನ್ನು ಮೇಲೆತ್ತಿ ನೂರಕ್ಕೂ ಹೆಚ್ಚು ಬಾರಿ ತಿರುಗಿಸಿದನು.

01142025 ಭೀಮ ಉವಾಚ।
01142025a ವೃಥಾಮಾಂಸೈರ್ವೃಥಾ ಪುಷ್ಟೋ ವೃಥಾ ವೃದ್ಧೋ ವೃಥಾಮತಿಃ।
01142025c ವೃಥಾಮರಣಮರ್ಹಸ್ತ್ವಂ ವೃಥಾದ್ಯ ನ ಭವಿಷ್ಯಸಿ।।

ಭೀಮನು ಹೇಳಿದನು: “ವೃಥಾ ಮಾಂಸವನ್ನು ತಿಂದು ವೃಥಾ ಕೊಬ್ಬಿದ್ದೀಯೆ! ಬುದ್ಧಿ ಬೆಳೆಯದೇ ವೃಥಾ ಬೆಳೆದಿದ್ದೀಯೆ! ವೃಥಾ ಜೀವಿಸುವ ನಿನಗೆ ವೃಥಾ ಮರಣವೇ ಸರಿಯಾದುದು!”

01142026 ಅರ್ಜುನ ಉವಾಚ।
01142026a ಅಥ ವಾ ಮನ್ಯಸೇ ಭಾರಂ ತ್ವಮಿಮಂ ರಾಕ್ಷಸಂ ಯುಧಿ।
01142026c ಕರೋಮಿ ತವ ಸಾಹಾಯ್ಯಂ ಶೀಘ್ರಮೇವ ನಿಹನ್ಯತಾಂ।।

ಅರ್ಜುನನು ಹೇಳಿದನು: “ಈ ರಾಕ್ಷಸನು ನಿನಗೆ ಭಾರಿ ಎಂದು ಅನ್ನಿಸಿದರೆ, ನಾನು ನಿನಗೆ ಯುದ್ಧದಲ್ಲಿ ಸಹಾಯಮಾಡುತ್ತೇನೆ. ಇವನನ್ನು ಬೇಗನೆ ಕೊಂದು ಮುಗಿಸು!

01142027a ಅಥ ವಾಪ್ಯಹಮೇವೈನಂ ಹನಿಷ್ಯಾಮಿ ವೃಕೋದರ।
01142027c ಕೃತಕರ್ಮಾ ಪರಿಶ್ರಾಂತಃ ಸಾಧು ತಾವದುಪಾರಮ।।

ಇಲ್ಲವಾದರೆ ನಾನು ಅವನನ್ನು ಕೊಂದು ಮುಗಿಸುತ್ತೇನೆ. ವೃಕೋದರ! ಹೋರಾಡಿ ಆಯಾಸಗೊಂಡಿದ್ದರೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವುದು ಸರಿ.””

01142028 ವೈಶಂಪಾಯನ ಉವಾಚ।
01142028a ತಸ್ಯ ತದ್ವಚನಂ ಶ್ರುತ್ವಾ ಭೀಮಸೇನೋಽತ್ಯಮರ್ಷಣಃ।
01142028c ನಿಷ್ಪಿಷ್ಯೈನಂ ಬಲಾದ್ ಭೂಮೌ ಪಶುಮಾರಮಮಾರಯತ್।।

ವೈಶಂಪಾಯನನು ಹೇಳಿದನು: “ಅವನ ಈ ಮಾತುಗಳನ್ನು ಕೇಳಿದ ಭೀಮಸೇನನು ರೊಚ್ಚೆದ್ದು ಅವನನ್ನು ಜೋರಾಗಿ ಭೂಮಿಯ ಮೇಲೆ ಅಪ್ಪಳಿಸಿ ಪ್ರಾಣಿಯನ್ನು ಬಲಿಕೊಡುವಂತೆ ಕೊಂದು ಹಾಕಿದನು.

01142029a ಸ ಮಾರ್ಯಮಾಣೋ ಭೀಮೇನ ನನಾದ ವಿಪುಲಂ ಸ್ವನಂ।
01142029c ಪೂರಯಂಸ್ತದ್ವನಂ ಸರ್ವಂ ಜಲಾರ್ದ್ರ ಇವ ದುಂದುಭಿಃ।।

ಭೀಮನ ಕೈಯಿಂದ ಸಾಯುವಾಗ ಅವನು ಜೋರಾಗಿ ಕಿರುಚಿ, ವನವೆಲ್ಲಾ ಆ ಆಕ್ರಂದನದಿಂದ ನೀರು ತುಂಬಿದ ದುಂದುಭಿಯಂತೆ ಮೊಳಗಿತು.

01142030a ಭುಜಾಭ್ಯಾಂ ಯೋಕ್ತ್ರಯಿತ್ವಾ ತಂ ಬಲವಾನ್ಪಾಂಡುನಂದನಃ।
01142030c ಮಧ್ಯೇ ಭಂಕ್ತ್ವಾ ಸ ಬಲವಾನ್ ಹರ್ಷಯಾಮಾಸ ಪಾಂಡವಾನ್।।

ಬಲಶಾಲಿ ಪಾಂಡುನಂದನನು ಅವನನ್ನು ತನ್ನ ತೊಡೆಯ ಮೇಲಿರಿಸಿ ಅವನ ಬೆನ್ನು ಮುರಿಯುವವರೆಗೆ ಬಗ್ಗಿಸಿ ತುಂಡುಮಾಡಿ ಪಾಂಡವರಿಗೆ ಆನಂದವನ್ನಿತ್ತನು.

01142031a ಹಿಡಿಂಬಂ ನಿಹತಂ ದೃಷ್ಟ್ವಾ ಸಂಹೃಷ್ಟಾಸ್ತೇ ತರಸ್ವಿನಃ।
01142031c ಅಪೂಜಯನ್ನರವ್ಯಾಘ್ರಂ ಭೀಮಸೇನಮರಿಂದಮಂ।।

ಹಿಡಿಂಬನ ಸಂಹಾರವನ್ನು ನೋಡಿದ ಅವರೆಲ್ಲರೂ ತುಂಬಾ ಸಂಹೃಷ್ಟರಾಗಿ ಅರಿಂದಮ, ನರವ್ಯಾಘ್ರ ಭೀಮಸೇನನನ್ನು ಅಭಿನಂದಿಸಿದರು.

01142032a ಅಭಿಪೂಜ್ಯ ಮಹಾತ್ಮಾನಂ ಭೀಮಂ ಭೀಮಪರಾಕ್ರಮಂ।
01142032c ಪುನರೇವಾರ್ಜುನೋ ವಾಕ್ಯಮುವಾಚೇದಂ ವೃಕೋದರಂ।।

ಭೀಮ ಪರಾಕ್ರಮಿ ಮಹಾತ್ಮ ಭೀಮನನ್ನು ಅಭಿನಂದಿಸಿದ ನಂತರ ಅರ್ಜುನನು ವೃಕೋದರನಿಗೆ ಹೇಳಿದನು:

01142033a ನದೂರೇ ನಗರಂ ಮನ್ಯೇ ವನಾದಸ್ಮಾದಹಂ ಪ್ರಭೋ।
01142033c ಶೀಘ್ರಂ ಗಚ್ಛಾಮ ಭದ್ರಂ ತೇ ನ ನೋ ವಿದ್ಯಾತ್ಸುಯೋಧನಃ।।

“ಪ್ರಭು! ಈ ವನದ ಹತ್ತಿರದಲ್ಲಿಯೇ ಒಂದು ನಗರವಿದೆ ಎಂದು ನನ್ನ ಅನಿಸಿಕೆ. ನಿನಗೆ ಮಂಗಳವಾಗಲಿ! ಶೀಘ್ರವಾಗಿ ಹೋಗೋಣ. ಸುಯೋಧನನಿಗೆ ನಾವಿರುವುದು ತಿಳಿಯಬಾರದು.”

01142034a ತತಃ ಸರ್ವೇ ತಥೇತ್ಯುಕ್ತ್ವಾ ಸಹ ಮಾತ್ರಾ ಪರಂತಪಾಃ।
01142034c ಪ್ರಯಯುಃ ಪುರುಷವ್ಯಾಘ್ರಾ ಹಿಡಿಂಬಾ ಚೈವ ರಾಕ್ಷಸೀ।।

ತಾಯಿಯೊಂದಿಗೆ ಎಲ್ಲ ಪರಂತಪರೂ ಹಾಗೆಯೇ ಆಗಲೆಂದು ಹೇಳಿ ಹೊರಟರು. ರಾಕ್ಷಸಿ ಹಿಡಿಂಬಿಯೂ ಆ ಪುರುಷವ್ಯಾಘ್ರರನ್ನು ಹಿಂಬಾಲಿಸಿದಳು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಹಿಡಿಂಬವಧಪರ್ವಣಿ ಹಿಡಿಂಬವಧೇ ದ್ವಿಚತ್ವಾರಿಂಶದಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಹಿಡಿಂಬವಧಪರ್ವದಲ್ಲಿ ಹಿಡಿಂಬವಧೆ ಎನ್ನುವ ನೂರಾನಲ್ವತ್ತೆರಡನೆಯ ಅಧ್ಯಾಯವು.