141 ಹಿಡಿಂಬಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಹಿಡಿಂಬವಧ ಪರ್ವ

ಅಧ್ಯಾಯ 141

ಸಾರ

ಭೀಮನು ಹಿಂಡಿಂಬನನ್ನು ಕೊಲ್ಲುವುದಾಗಿ ಹೇಳುವುದು (1-12). ಕೋಪದಿಂದ ಮುನ್ನುಗ್ಗಿ ಬಂದ ಹಿಡಿಂಬನೊಂದಿಗೆ ಭೀಮನ ಭಯಂಕರ ಯುದ್ಧನಡೆಯುವಾಗ ಎಚ್ಚೆತ್ತ ಪಾಂಡವರು ಅಲ್ಲಿ ನಿಂತಿದ್ದ ಹಿಡಿಂಬಿಯನ್ನು ನೋಡಿದುದು (13-24).

01141001 ವೈಶಂಪಾಯನ ಉವಾಚ।
01141001a ಭೀಮಸೇನಸ್ತು ತಂ ದೃಷ್ಟ್ವಾ ರಾಕ್ಷಸಂ ಪ್ರಹಸನ್ನಿವ।
01141001c ಭಗಿನೀಂ ಪ್ರತಿ ಸಂಕ್ರುದ್ಧಮಿದಂ ವಚನಮಬ್ರವೀತ್।।

ವೈಶಂಪಾಯನನು ಹೇಳಿದನು: “ತಂಗಿಯ ಮೇಲೆ ಸಿಟ್ಟಿಗೆದ್ದ ಆ ರಾಕ್ಷಸನನ್ನು ನೋಡಿ ಭೀಮಸೇನನು ನಗುತ್ತಾ ಹೇಳಿದನು:

01141002a ಕಿಂ ತೇ ಹಿಡಿಂಬ ಏತೈರ್ವಾ ಸುಖಸುಪ್ತೈಃ ಪ್ರಬೋಧಿತೈಃ।
01141002c ಮಾಮಾಸಾದಯ ದುರ್ಬುದ್ಧೇ ತರಸಾ ತ್ವಂ ನರಾಶನ।।

“ಹಿಡಿಂಬ! ಸುಖವಾಗಿ ಮಲಗಿರುವ ಇವರನ್ನು ಏಕೆ ಎಬ್ಬಿಸುತ್ತಿರುವೆ? ನರಾಶನ! ದುರ್ಬುದ್ಧಿ! ಕೂಡಲೇ ನನ್ನನ್ನು ಎದುರಿಸು.

01141003a ಮಯ್ಯೇವ ಪ್ರಹರೈಹಿ ತ್ವಂ ನ ಸ್ತ್ರಿಯಂ ಹಂತುಮರ್ಹಸಿ।
01141003c ವಿಶೇಷತೋಽನಪಕೃತೇ ಪರೇಣಾಪಕೃತೇ ಸತಿ।।

ನನ್ನ ಮೇಲೆ ನಿನ್ನ ಪ್ರಹಾರಗಳನ್ನು ಪ್ರಯತ್ನಿಸು. ತಾನೇನೂ ತಪ್ಪು ಮಾಡಿರದ, ವಿಶೇಷವಾಗಿ ಇನ್ನೊಬ್ಬರಿಂದ ಅಪಕೃತಳಾದ ಈ ಸ್ತ್ರೀಯನ್ನು ಹೊಡೆಯಬೇಡ.

01141004a ನ ಹೀಯಂ ಸ್ವವಶಾ ಬಾಲಾ ಕಾಮಯತ್ಯದ್ಯ ಮಾಮಿಹ।
01141004c ಚೋದಿತೈಷಾ ಹ್ಯನಂಗೇನ ಶರೀರಾಂತರಚಾರಿಣಾ।
01141004e ಭಗಿನೀ ತವ ದುರ್ಬುದ್ಧೇ ರಾಕ್ಷಸಾನಾಂ ಯಶೋಹರ।।

ಈ ಬಾಲೆಯು ನನ್ನನ್ನು ಬಯಸುತ್ತಿರುವುದು ಅವಳ ವಶದಲ್ಲಿಲ್ಲ ಮತ್ತು ಪಾಪವೂ ಅಲ್ಲ. ಶರೀರಾಂತರದಲ್ಲಿ ಚಲಿಸುವ ಅನಂಗನಿಂದ ಅವಳು ಚೋದಿತಳಾಗಿದ್ದಾಳೆ. ರಾಕ್ಷಸರ ಯಶೋಹರ ದುರ್ಬುದ್ಧಿಯೇ! ಇವಳು ನಿನ್ನ ತಂಗಿ!

01141005a ತ್ವನ್ನಿಯೋಗೇನ ಚೈವೇಯಂ ರೂಪಂ ಮಮ ಸಮೀಕ್ಷ್ಯ ಚ।
01141005c ಕಾಮಯತ್ಯದ್ಯ ಮಾಂ ಭೀರುರ್ನೈಷಾ ದೂಷಯತೇ ಕುಲಂ।।

ನೀನೇ ಅವಳನ್ನು ಇಲ್ಲಿಗೆ ಕಳುಹಿಸಿದೆ. ನನ್ನ ರೂಪವನ್ನು ನೋಡಿ ಕಾಮಪೀಡಿತಳಾದ ಈ ಭೀರುವು ನಿನ್ನ ಕುಲವನ್ನೇನೂ ದೂಷಿತ ಮಾಡಿಲ್ಲ.

01141006a ಅನಂಗೇನ ಕೃತೇ ದೋಷೇ ನೇಮಾಂ ತ್ವಮಿಹ ರಾಕ್ಷಸ।
01141006c ಮಯಿ ತಿಷ್ಠತಿ ದುಷ್ಟಾತ್ಮನ್ನ ಸ್ತ್ರಿಯಂ ಹಂತುಮರ್ಹಸಿ।।

ಅನಂಗನಿಂದ ಆದ ದೋಷಕ್ಕಾಗಿ ಈ ಸ್ತ್ರೀಯನ್ನು ನಾನು ಇಲ್ಲಿ ನಿಂತಿರುವಾಗ ರಾಕ್ಷಸ ದುಷ್ಟಾತ್ಮ ನೀನು ಕೊಲ್ಲಲಿಕ್ಕಾಗುವುದಿಲ್ಲ.

01141007a ಸಮಾಗಚ್ಛ ಮಯಾ ಸಾರ್ಧಮೇಕೇನೈಕೋ ನರಾಶನ।
01141007c ಅಹಮೇವ ನಯಿಷ್ಯಾಮಿ ತ್ವಾಮದ್ಯ ಯಮಸಾದನಂ।।

ನರಾಶನ! ನನ್ನೊಡನೆ, ಒಬ್ಬನಿಗೆ ಒಬ್ಬನಾಗಿ ಹೋರಾಡು. ಇಂದು ನಾನೊಬ್ಬನೇ ನಿನ್ನನ್ನು ಯಮಸಾದನಕ್ಕೆ ಕಳುಹಿಸುತ್ತೇನೆ.

01141008a ಅದ್ಯ ತೇ ತಲನಿಷ್ಪಿಷ್ಟಂ ಶಿರೋ ರಾಕ್ಷಸ ದೀರ್ಯತಾಂ।
01141008c ಕುಂಜರಸ್ಯೇವ ಪಾದೇನ ವಿನಿಷ್ಪಿಷ್ಟಂ ಬಲೀಯಸಃ।।

ರಾಕ್ಷಸ! ಇಂದು ನಿನ್ನ ತಲೆಯನ್ನು, ಆನೆಯೊಂದು ತನ್ನ ಕಾಲಿನಿಂದ ಜೋರಾಗಿ ತುಳಿದಿದೆಯೋ ಅನ್ನುವ ಹಾಗೆ ಅದು ಒಡೆದುಹೋಗುವ ತನಕ ನೆಲಕ್ಕೆ ಹಾಕಿ ಅಚ್ಚುತ್ತೇನೆ.

01141009a ಅದ್ಯ ಗಾತ್ರಾಣಿ ಕ್ರವ್ಯಾದಾಃ ಶ್ಯೇನಾ ಗೋಮಾಯವಶ್ಚ ತೇ।
01141009c ಕರ್ಷಂತು ಭುವಿ ಸಂಹೃಷ್ಟಾ ನಿಹತಸ್ಯ ಮಯಾ ಮೃಧೇ।।

ಇಂದು ಹೋರಾಟದಲ್ಲಿ ನಿನ್ನನ್ನು ಕೊಂದಾಗ ಹದ್ದುಗಳು ಮತ್ತು ನರಿಗಳು ಸಂತೋಷದಿಂದ ನಿನ್ನ ಅಂಗ-ಅಂಗವನ್ನು ಹರಿದು ತಿನ್ನುತ್ತವೆ.

01141010a ಕ್ಷಣೇನಾದ್ಯ ಕರಿಷ್ಯೇಽಹಮಿದಂ ವನಮಕಂಟಕಂ।
01141010c ಪುರಸ್ತಾದ್ದೂಷಿತಂ ನಿತ್ಯಂ ತ್ವಯಾ ಭಕ್ಷಯತಾ ನರಾನ್।।

ಒಂದೇ ಒಂದು ಕ್ಷಣದಲ್ಲಿ ಈ ವನವನ್ನು ಅದರ ಕಂಟಕನಿಂದ ಬಿಡುಗಡೆ ಮಾಡುತ್ತೇನೆ. ಮನುಷ್ಯರನ್ನು ಭಕ್ಷಿಸುತ್ತಾ ನೀನು ಬಹಳ ಕಾಲದವರೆಗೆ ಇದನ್ನು ದೂಷಿಸುತ್ತಿದ್ದೀಯೆ.

01141011a ಅದ್ಯ ತ್ವಾಂ ಭಗಿನೀ ಪಾಪ ಕೃಷ್ಯಮಾಣಂ ಮಯಾ ಭುವಿ।
01141011c ದ್ರಕ್ಷತ್ಯದ್ರಿಪ್ರತೀಕಾಶಂ ಸಿಂಹೇನೇವ ಮಹಾದ್ವಿಪಂ।।

ಇಂದು ಪರ್ವತಾಕಾರದ ಆನೆಯನ್ನು ಒಂದು ಹುಲಿಯು ಎಳೆದಾಡುವಂತೆ ನಿನ್ನನ್ನು ನಾನು ನೆಲದ ಮೇಲೆ ಎಳೆದಾಡಿ ಅಪ್ಪಳಿಸುವುದನ್ನು ನಿನ್ನ ತಂಗಿಯು ನೋಡುವಳು.

01141012a ನಿರಾಬಾಧಾಸ್ತ್ವಯಿ ಹತೇ ಮಯಾ ರಾಕ್ಷಸಪಾಂಸನ।
01141012c ವನಮೇತಚ್ಚರಿಷ್ಯಂತಿ ಪುರುಷಾ ವನಚಾರಿಣಃ।।

ಪಾಪಿ ರಾಕ್ಷಸನೇ! ನಿನ್ನನ್ನು ಕೊಂದ ನಂತರ ಈ ವನದಲ್ಲಿ ಸಂಚರಿಸುವ ಪುರುಷರು ನಿನ್ನ ಭಯವಿಲ್ಲದೇ ಸಂಚರಿಸಬಹುದು.”

01141013 ಹಿಡಿಂಬ ಉವಾಚ।
01141013a ಗರ್ಜಿತೇನ ವೃಥಾ ಕಿಂ ತೇ ಕತ್ಥಿತೇನ ಚ ಮಾನುಷ।
01141013c ಕೃತ್ವೈತತ್ಕರ್ಮಣಾ ಸರ್ವಂ ಕತ್ಥೇಥಾ ಮಾ ಚಿರಂ ಕೃಥಾಃ।।

ಹಿಡಿಂಬನು ಹೇಳಿದನು: “ಮನುಷ್ಯ! ವೃಥಾ ಏಕೆ ಗರ್ಜಿಸುತ್ತಿರುವೆ? ಮೊದಲು ಕೃತ್ಯವನ್ನು ಮಾಡಿ ತೋರಿಸು. ಆಮೇಲೆ ಅದರ ಕುರಿತು ಜಂಬ ಕೊಚ್ಚಿಕೊಳ್ಳುವಿಯಂತೆ! ವಿಳಂಬ ಮಾಡಬೇಡ.

01141014a ಬಲಿನಂ ಮನ್ಯಸೇ ಯಚ್ಚ ಆತ್ಮಾನಮಪರಾಕ್ರಮಂ।
01141014c ಜ್ಞಾಸ್ಯಸ್ಯದ್ಯ ಸಮಾಗಮ್ಯ ಮಯಾತ್ಮಾನಂ ಬಲಾಧಿಕಂ।।

ನನ್ನ ಬಲಕ್ಕಿಂಥ ನಿನ್ನನ್ನು ನೀನೇ ಪರಾಕ್ರಮಿಯೆಂದು ತಿಳಿದುಕೊಂಡಿದ್ದರೆ ನನ್ನೊಡನೆ ಹೋರಾಡು. ನಿನಗಿಂಥ ನನ್ನ ಬಲವೇ ಅಧಿಕ ಎನ್ನುವುದನ್ನು ತಿಳಿಯುತ್ತೀಯೆ.

01141015a ನ ತಾವದೇತಾನ್ ಹಿಂಸಿಷ್ಯೇ ಸ್ವಪಂತ್ವೇತೇ ಯಥಾಸುಖಂ।
01141015c ಏಷ ತ್ವಾಮೇವ ದುರ್ಬುದ್ಧೇ ನಿಹನ್ಮ್ಯದ್ಯಾಪ್ರಿಯಂವದಂ।।

ಇವರನ್ನು ನಾನು ಈಗಲೇ ಹಿಂಸಿಸುವುದಿಲ್ಲ. ಸುಖವಾಗಿ ಮಲಗಿಕೊಂಡಿದ್ದಾರೆ. ಮಲಗಿರಲಿ. ಅಪ್ರಿಯ ಮಾತನಾಡುತ್ತಿರುವ ದುರ್ಬುದ್ದಿ ನಿನ್ನನ್ನು ಮೊದಲು ಕೊಲ್ಲುತ್ತೇನೆ.

01141016a ಪೀತ್ವಾ ತವಾಸೃಗ್ಗಾತ್ರೇಭ್ಯಸ್ತತಃ ಪಶ್ಚಾದಿಮಾನಪಿ।
01141016c ಹನಿಷ್ಯಾಮಿ ತತಃ ಪಶ್ಚಾದಿಮಾಂ ವಿಪ್ರಿಯಕಾರಿಣೀಂ।।

ನಿನ್ನ ದೇಹದ ರಕ್ತವನ್ನು ಕುಡಿದ ನಂತರ ಅವರನ್ನೂ ಮತ್ತು ನಂತರ ಈ ವಿಪ್ರಿಯಕಾರಿಣಿಯನ್ನೂ ಕೊಲ್ಲುತ್ತೇನೆ.””

01141017 ವೈಶಂಪಾಯನ ಉವಾಚ।
01141017a ಏವಮುಕ್ತ್ವಾ ತತೋ ಬಾಹುಂ ಪ್ರಗೃಹ್ಯ ಪುರುಷಾದಕಃ।
01141017c ಅಭ್ಯಧಾವತ ಸಂಕ್ರುದ್ಧೋ ಭೀಮಸೇನಮರಿಂದಮಂ।।

ವೈಶಂಪಾಯನನು ಹೇಳಿದನು: “ಹೀಗೆ ಹೇಳಿದ ಆ ಸಂಕೃದ್ಧ ಪುರುಷಾದಕನು ತನ್ನ ಬಾಹುಗಳನ್ನು ಚಾಚಿ ಅರಿಂದಮ ಭೀಮಸೇನನ ಕಡೆ ಮುನ್ನುಗ್ಗಿದನು.

01141018a ತಸ್ಯಾಭಿಪತತಸ್ತೂರ್ಣಂ ಭೀಮೋ ಭೀಮಪರಾಕ್ರಮಃ।
01141018c ವೇಗೇನ ಪ್ರಹೃತಂ ಬಾಹುಂ ನಿಜಗ್ರಾಹ ಹಸನ್ನಿವ।।

ಆದರೆ ಅವನು ವೇಗದಿಂದ ಬರುತ್ತಿದ್ದ ಹಾಗೆಯೇ ಭೀಮಪರಾಕ್ರಮಿ ಭೀಮನು ನಗುತ್ತಾ ಅವನ ಬಾಹುಗಳಿಗೆ ಹೊಡೆದು ಕೆಳಗುರುಳಿಸಿದನು.

01141019a ನಿಗೃಹ್ಯ ತಂ ಬಲಾದ್ಭೀಮೋ ವಿಸ್ಫುರಂತಂ ಚಕರ್ಷ ಹ।
01141019c ತಸ್ಮಾದ್ದೇಶಾದ್ಧನೂಂಷ್ಯಷ್ಟೌ ಸಿಂಹಃ ಕ್ಷುದ್ರಮೃಗಂ ಯಥಾ।।

ಅವನನ್ನು ಕೆಳಗುರುಳಿಸಿದ ಭೀಮನು ಸಿಂಹವು ಒಂದು ಸಣ್ಣ ಪ್ರಾಣಿಯನ್ನು ಎಳೆದುಕೊಂಡು ಹೋಗುವಂತೆ ಅಲ್ಲಿಂದ ಎಂಟು ಧನುಸ್ಸುಗಳ ದೂರಕ್ಕೆ ಜೋರಾಗಿ ಎಳೆದುಕೊಂಡು ಹೋದನು.

01141020a ತತಃ ಸ ರಾಕ್ಷಸಃ ಕ್ರುದ್ಧಃ ಪಾಂಡವೇನ ಬಲಾದ್ಧೃತಃ।
01141020c ಭೀಮಸೇನಂ ಸಮಾಲಿಂಗ್ಯ ವ್ಯನದದ್ಭೈರವಂ ರವಂ।।

ಪಾಂಡವನಿಂದ ಬಲವಂತವಾಗಿ ಎಳೆದುಕೊಂಡು ಹೋಗಲ್ಪಟ್ಟ ರಾಕ್ಷಸನು ಕೃದ್ಧನಾಗಿ ಭೀಮಸೇನನನ್ನು ಬಿಗಿದಪ್ಪಿ ಭೈರವ ಸ್ವರದಲ್ಲಿ ಕೂಗಿದನು.

01141021a ಪುನರ್ಭೀಮೋ ಬಲಾದೇನಂ ವಿಚಕರ್ಷ ಮಹಾಬಲಃ।
01141021c ಮಾ ಶಬ್ಧಃ ಸುಖಸುಪ್ತಾನಾಂ ಭ್ರಾತೄಣಾಂ ಮೇ ಭವೇದಿತಿ।।

ಪುನಃ ಮಹಾಬಲಿ ಭೀಮನು ಸುಖವಾಗಿ ಮಲಗಿದ್ದ ಭ್ರಾತೃಗಳು ಆ ಶಬ್ಧದಿಂದ ಎಚ್ಚೆತ್ತುಕೊಳ್ಳಬಾರದೆಂದು ಅವನನ್ನು ಬಲವಂತವಾಗಿ ಎಳೆದುಕೊಂಡು ಇನ್ನೂ ಸ್ವಲ್ಪ ದೂರ ಹೋದನು.

01141022a ಅನ್ಯೋನ್ಯಂ ತೌ ಸಮಾಸಾದ್ಯ ವಿಚಕರ್ಷತುರೋಜಸಾ।
01141022c ರಾಕ್ಷಸೋ ಭೀಮಸೇನಶ್ಚ ವಿಕ್ರಮಂ ಚಕ್ರತುಃ ಪರಂ।।

ತಮ್ಮ ಎಲ್ಲ ಬಲವನ್ನೂ ಬಳಸಿ ಅವರಿಬ್ಬರೂ ಅನ್ಯೋನ್ಯರ ಮೇಲೆ ಕುಳಿತುಕೊಂಡು ಎಳೆದಾಡಿದರು: ರಾಕ್ಷಸ ಮತ್ತು ಭೀಮ ಇಬ್ಬರೂ ತಮ್ಮ ಪರಮ ವಿಕ್ರಮವನ್ನು ಪ್ರದರ್ಶಿಸಿದರು.

01141023a ಬಭಂಜತುರ್ಮಹಾವೃಕ್ಷಾಽಲ್ಲತಾಶ್ಚಾಕರ್ಷತುಸ್ತತಃ।
01141023c ಮತ್ತಾವಿವ ಸುಸಂರಬ್ಧೌ ವಾರಣೌ ಷಷ್ಟಿಹಾಯನೌ।।

ಮತ್ತಿನಲ್ಲಿರುವ ಅರವತ್ತು ವರ್ಷಗಳ ಆನೆಗಳಂತೆ ಇಬ್ಬರೂ ಮರಗಳನ್ನು ಮತ್ತು ಬಳ್ಳಿಗಳನ್ನು ಕಿತ್ತು ನಾಶಮಾಡಿದರು.

01141024a ತಯೋಃ ಶಬ್ಧೇನ ಮಹತಾ ವಿಬುದ್ಧಾಸ್ತೇ ನರರ್ಷಭಾಃ।
01141024c ಸಹ ಮಾತ್ರಾ ತು ದದೃಶುರ್ಹಿಡಿಂಬಾಮಗ್ರತಃ ಸ್ಥಿತಾಂ।।

ಈ ಮಹಾ ಶಬ್ಧವನ್ನು ಕೇಳಿದ ನರರ್ಷಭರು ಎಚ್ಚೆತ್ತರು ಮತ್ತು ತಾಯಿಯೊಂದಿಗೆ ಅವರು ಎದುರಿಗೆ ನಿಂತಿದ್ದ ಹಿಡಿಂಬೆಯನ್ನು ನೋಡಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಹಿಡಿಂಬವಧಪರ್ವಣಿ ಹಿಡಿಂಬಯುದ್ಧೇ ಏಕಚತ್ವಾರಿಂಶದಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಹಿಡಿಂಬವಧಪರ್ವದಲ್ಲಿ ಹಿಡಿಂಬಯುದ್ಧ ಎನ್ನುವ ನೂರಾನಲ್ವತ್ತೊಂದನೆಯ ಅಧ್ಯಾಯವು.