ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಹಿಡಿಂಬವಧ ಪರ್ವ
ಅಧ್ಯಾಯ 140
ಸಾರ
ತಂಗಿಯು ಹೋಗಿ ತುಂಬಾ ಹೊತ್ತಾಯಿತೆಂದು ಹಿಡಿಂಬನು ಪಾಂಡವರಿದ್ದಲ್ಲಿಗೆ ಬರುವುದು, ಹಿಡಿಂಬೆಯು ಭೀಮನನ್ನು ಎಚ್ಚರಿಸುವುದು (1-21).
01140001 ವೈಶಂಪಾಯನ ಉವಾಚ।
01140001a ತಾಂ ವಿದಿತ್ವಾ ಚಿರಗತಾಂ ಹಿಡಿಂಬೋ ರಾಕ್ಷಸೇಶ್ವರಃ।
01140001c ಅವತೀರ್ಯ ದ್ರುಮಾತ್ತಸ್ಮಾದಾಜಗಾಮಾಥ ಪಾಂಡವಾನ್।।
01140002a ಲೋಹಿತಾಕ್ಷೋ ಮಹಾಬಾಹುರೂರ್ಧ್ವಕೇಶೋ ಮಹಾಬಲಃ।
01140002c ಮೇಘಸಂಘಾತವರ್ಷ್ಮಾ ಚ ತೀಕ್ಷ್ಣದಂಷ್ಟ್ರೋಜ್ಜ್ವಲಾನನಃ।।
ವೈಶಂಪಾಯನನು ಹೇಳಿದನು: “ತನ್ನ ತಂಗಿಯು ಹೋಗಿ ತುಂಬಾ ಹೊತ್ತಾಯಿತೆಂದು ತಿಳಿದ ರಾಕ್ಷಸೇಶ್ವರ ಹಿಡಿಂಬನು ಮರದಿಂದ ಕೆಳಗಿಳಿದು ಪಾಂಡವನಿದ್ದಲ್ಲಿಗೆ ಬಂದನು. ಆ ಮಹಾಬಲನ ಕಣ್ಣುಗಳು ಕೆಂಪಾಗಿದ್ದವು, ಬಾಹುಗಳು ಬಲವಾಗಿದ್ದವು, ಕೂದಲು ಎದ್ದು ನಿಂತಿದ್ದವು, ಮಳೆಯ ಮೋಡದಂತೆ ದಟ್ಟನಾಗಿದ್ದನು, ಹಲ್ಲುಗಳು ಮೊನಚಾಗಿದ್ದವು ಮತ್ತು ಮುಖವು ಪ್ರಜ್ಚಲಿಸುತ್ತಿತ್ತು.
01140003a ತಮಾಪತಂತಂ ದೃಷ್ಟ್ವೈವ ತಥಾ ವಿಕೃತದರ್ಶನಂ।
01140003c ಹಿಡಿಂಬೋವಾಚ ವಿತ್ರಸ್ತಾ ಭೀಮಸೇನಮಿದಂ ವಚಃ।।
ಮೇಲೆರಗುತ್ತಾನೋ ಎನ್ನುವಂತಿರುವ ಆ ವಿಕೃತದರ್ಶನನನ್ನು ನೋಡಿ ಹಿಡಿಂಬಿಯು ನಡುಗುತ್ತಾ ಭೀಮಸೇನನಿಗೆ ಹೇಳಿದಳು:
01140004a ಆಪತತ್ಯೇಷ ದುಷ್ಟಾತ್ಮಾ ಸಂಕ್ರುದ್ಧಃ ಪುರುಷಾದಕಃ।
01140004c ತ್ವಾಮಹಂ ಭ್ರಾತೃಭಿಃ ಸಾರ್ಧಂ ಯದ್ಬ್ರವೀಮಿ ತಥಾ ಕುರು।।
“ಇಗೋ ದುಷ್ಟಾತ್ಮ ನರಭಕ್ಷಕನು ಕೋಪಗೊಂಡು ಬರುತ್ತಿದ್ದಾನೆ. ನೀನು ಮತ್ತು ನಿನ್ನ ಸಹೋದರರು ನಾನು ಹೇಳಿದ ಹಾಗೆ ಮಾಡಿ.
01140005a ಅಹಂ ಕಾಮಗಮಾ ವೀರ ರಕ್ಷೋಬಲಸಮನ್ವಿತಾ।
01140005c ಆರುಹೇಮಾಂ ಮಮ ಶ್ರೋಣೀಂ ನೇಷ್ಯಾಮಿ ತ್ವಾಂ ವಿಹಾಯಸಾ।।
ವೀರ! ರಾಕ್ಷಸರ ಬಲಸಮನ್ವಿತೆ ನಾನು ಬೇಕಾದಲ್ಲಿ ಹೋಗಬಲ್ಲೆ. ನನ್ನ ಸೊಂಟದ ಮೇಲೇರು. ನಿನ್ನನ್ನು ಆಕಾಶ ಮಾರ್ಗದಲ್ಲಿ ಕರೆದೊಯ್ಯುತ್ತೇನೆ.
01140006a ಪ್ರಬೋಧಯೈನಾನ್ಸಂಸುಪ್ತಾನ್ಮಾತರಂ ಚ ಪರಂತಪ।
01140006c ಸರ್ವಾನೇವ ಗಮಿಷ್ಯಾಮಿ ಗೃಹೀತ್ವಾ ವೋ ವಿಹಾಯಸಾ।।
ಪರಂತಪ! ಮಲಗಿಕೊಂಡಿರುವ ನಿನ್ನ ಈ ತಾಯಿ ಮತ್ತು ಸಹೋದರರನ್ನು ಎಚ್ಚರಿಸು. ನಿಮ್ಮೆಲ್ಲರನ್ನೂ ನಾನು ಆಕಾಶ ಮಾರ್ಗವಾಗಿ ಕರೆದೊಯ್ಯುತ್ತೇನೆ.”
01140007 ಭೀಮ ಉವಾಚ।
01140007a ಮಾ ಭೈಸ್ತ್ವಂ ವಿಪುಲಶ್ರೋಣಿ ನೈಷ ಕಶ್ಚಿನ್ಮಯಿ ಸ್ಥಿತೇ।
01140007c ಅಹಮೇನಂ ಹನಿಷ್ಯಾಮಿ ಪ್ರೇಕ್ಷಂತ್ಯಾಸ್ತೇ ಸುಮಧ್ಯಮೇ।।
ಭೀಮನು ಹೇಳಿದನು: “ವಿಪುಲಶ್ರೋಣಿ! ಹೆದರದಿರು. ನಾನಿಲ್ಲಿ ನಿಂತಿರುವಾಗ ಯಾರೂ ಯಾವುದೇರೀತಿಯ ಹಾನಿಯನ್ನುಂಟುಮಾಡುವುದಿಲ್ಲ. ಸುಮದ್ಯಮೇ! ನಿನ್ನ ಕಣ್ಣುಗಳೆದುರೇ ಅವನನ್ನು ಕೊಂದು ಹಾಕುತ್ತೇನೆ.
01140008a ನಾಯಂ ಪ್ರತಿಬಲೋ ಭೀರು ರಾಕ್ಷಸಾಪಸದೋ ಮಮ।
01140008c ಸೋಢುಂ ಯುಧಿ ಪರಿಸ್ಪಂದಮಥವಾ ಸರ್ವರಾಕ್ಷಸಾಃ।।
ಭೀರು! ಈ ರಾಕ್ಷಸಾಧಮನು ಬಲದಲ್ಲಿ ನನ್ನ ಸರಿಸಾಟಿಯೇನಲ್ಲ. ರಾಕ್ಷಸರೆಲ್ಲ ಒಂದು ಸೇರಿದರೂ ಯುದ್ಧದಲ್ಲಿ ನನ್ನನ್ನು ಎದುರಿಸಲು ಸಾಧ್ಯವಿಲ್ಲ.
01140009a ಪಶ್ಯ ಬಾಹೂ ಸುವೃತ್ತೌ ಮೇ ಹಸ್ತಿಹಸ್ತನಿಭಾವಿಮೌ।
01140009c ಊರೂ ಪರಿಘಸಂಕಾಶೌ ಸಂಹತಂ ಚಾಪ್ಯುರೋ ಮಮ।।
ಆನೆಯ ಸೊಂಡಿಲಿನಂತೆ ಗೋಲಾಕಾರವಾಗಿರುವ ಈ ನನ್ನ ಬಾಹುಗಳನ್ನು ನೋಡು. ಪರಿಘಗಳಂತಿರುವ ನನ್ನ ಈ ತೊಡೆಗಳನ್ನು ನೋಡು ಮತ್ತು ಗಟ್ಟಿಯಾದ ನನ್ನ ಈ ಎದೆಯನ್ನು ನೋಡು.
01140010a ವಿಕ್ರಮಂ ಮೇ ಯಥೇಂದ್ರಸ್ಯ ಸಾದ್ಯ ದ್ರಕ್ಷ್ಯಸಿ ಶೋಭನೇ।
01140010c ಮಾವಮಂಸ್ಥಾಃ ಪೃಥುಶ್ರೋಣಿ ಮತ್ವಾ ಮಾಮಿಹ ಮಾನುಷಂ।।
ಇಂದ್ರನಂತಿರುವ ನನ್ನ ವಿಕ್ರಮವನ್ನು ಇಂದು ನೀನು ನೋಡುವೆ ಶೋಭನೇ! ಪೃಥುಶ್ರೋಣಿ! ನಾನೋರ್ವ ಕೇವಲ ಮನುಷ್ಯನೆಂದು ತಿಳಿದು ಕಡೆಗಾಣಿಸಬೇಡ.”
01140011 ಹಿಡಿಂಬೋವಾಚ।
01140011a ನಾವಮನ್ಯೇ ನರವ್ಯಾಘ್ರ ತ್ವಾಮಹಂ ದೇವರೂಪಿಣಂ।
01140011c ದೃಷ್ಟಾಪದಾನಸ್ತು ಮಯಾ ಮಾನುಷೇಷ್ವೇವ ರಾಕ್ಷಸಃ।।
ಹಿಡಿಂಬೆಯು ಹೇಳಿದಳು: “ನರವ್ಯಾಘ್ರ! ದೇವರೂಪಿಣಿ ನಿನ್ನನ್ನು ನಾನು ಕಡೆಗಣಿಸುತ್ತಿಲ್ಲ. ಈ ರಾಕ್ಷಸನು ಮನುಷ್ಯರ ಮೇಲೆ ಯಾವರೀತಿ ಧಾಳಿ ಮಾಡುತ್ತಾನೆ ಎನ್ನುವುದನ್ನು ನಾನು ಮೊದಲೇ ನೋಡಿದ್ದೇನೆ.””
01140012 ವೈಶಂಪಾಯನ ಉವಾಚ।
01140012a ತಥಾ ಸಂಜಲ್ಪತಸ್ತಸ್ಯ ಭೀಮಸೇನಸ್ಯ ಭಾರತ।
01140012c ವಾಚಃ ಶುಶ್ರಾವ ತಾಃ ಕ್ರುದ್ಧೋ ರಾಕ್ಷಸಃ ಪುರುಷಾದಕಃ।।
ವೈಶಂಪಾಯನನು ಹೇಳಿದನು: “ಭಾರತ! ಅವಳು ಈ ರೀತಿ ಭೀಮಸೇನನೊಡನೆ ಮಾತನಾಡುತ್ತಿರುವಾಗ ಆ ನರಭಕ್ಷಕ ರಾಕ್ಷಸನು ಕೇಳಿ ಕೃದ್ಧನಾದನು.
01140013a ಅವೇಕ್ಷಮಾಣಸ್ತಸ್ಯಾಶ್ಚ ಹಿಡಿಂಬೋ ಮಾನುಷಂ ವಪುಃ।
01140013c ಸ್ರಗ್ದಾಮಪೂರಿತಶಿಖಂ ಸಮಗ್ರೇಂದುನಿಭಾನನಂ।।
01140014a ಸುಭ್ರೂನಾಸಾಕ್ಷಿಕೇಶಾಂತಂ ಸುಕುಮಾರನಖತ್ವಚಂ।
01140014c ಸರ್ವಾಭರಣಸಮ್ಯುಕ್ತಂ ಸುಸೂಕ್ಷ್ಮಾಂಬರವಾಸಸಂ।।
ಹಿಡಿಂಬನು ಅವಳು ಮಾನುಷ ರೂಪವನ್ನು ಧರಿಸಿದ್ದುದನ್ನು ನೋಡಿದನು: ತಲೆಗೆ ಹೂಗಳನ್ನು ಮುಡಿದಿದ್ದಳು, ಅವಳ ಮುಖವು ಚಂದ್ರನ ಕಾಂತಿಯನ್ನು ಹೊಂದಿತ್ತು, ಸುಂದರ ಕಣ್ಣುಗಳನ್ನು, ಹುಬ್ಬುಗಳನ್ನು, ಮೂಗು ಮತ್ತು ಕೂದಲು, ಸುಕುಮಾರ ಉಗುರುಗಳು ಮತ್ತು ಚರ್ಮ, ಸರ್ವಾಭರಣ ಸಂಯುಕ್ತಳಾಗಿ, ಸೂಕ್ಷ್ಮ ವಸ್ತ್ರವನ್ನು ಧರಿಸಿದ್ದಳು.
01140015a ತಾಂ ತಥಾ ಮಾನುಷಂ ರೂಪಂ ಬಿಭ್ರತೀಂ ಸುಮನೋಹರಂ।
01140015c ಪುಂಸ್ಕಾಮಾಂ ಶಂಕಮಾನಶ್ಚ ಚುಕ್ರೋಧ ಪುರುಷಾದಕಃ।।
ವಿಭ್ರಾಂತಿಗೊಳಿಸುವ ಸುಮನೋಹರ ಮಾನುಷಿಯ ರೂಪದಲ್ಲಿದ್ದ ಅವಳು ಆ ಪುರುಷನನ್ನು ಕಾಮಿಸುತ್ತಿದ್ದಾಳೆ ಎಂದು ಶಂಕಿಸಿ ಆ ನರಭಕ್ಷಕನು ಕೋಪಗೊಂಡನು.
01140016a ಸಂಕ್ರುದ್ಧೋ ರಾಕ್ಷಸಸ್ತಸ್ಯಾ ಭಗಿನ್ಯಾಃ ಕುರುಸತ್ತಮ।
01140016c ಉತ್ಫಾಲ್ಯ ವಿಪುಲೇ ನೇತ್ರೇ ತತಸ್ತಾಮಿದಮಬ್ರವೀತ್।।
ಕುರುಸತ್ತಮ! ರಾಕ್ಷಸನು ತನ್ನ ತಂಗಿಯ ಮೇಲೆ ಸಂಕೃದ್ಧನಾಗಿ ಅವನ ದೊಡ್ಡ ಕಣ್ಣುಗಳನ್ನು ತೆರೆದು ಅವಳಿಗೆ ಹೇಳಿದನು:
01140017a ಕೋ ಹಿ ಮೇ ಭೋಕ್ತುಕಾಮಸ್ಯ ವಿಘ್ನಂ ಚರತಿ ದುರ್ಮತಿಃ।
01140017c ನ ಬಿಭೇಷಿ ಹಿಡಿಂಬೇ ಕಿಂ ಮತ್ಕೋಪಾದ್ವಿಪ್ರಮೋಹಿತಾ।।
“ನಾನು ಹಸಿದಿರುವಾಗ ಯಾವ ದುರ್ಮತಿಯು ವಿಘ್ನವನ್ನು ತರುತ್ತಿದ್ದಾಳೆ! ಹಿಂಡಿಂಬೇ! ನನ್ನ ಕೋಪದ ಸ್ವಲ್ಪವೂ ಭಯವಿಲ್ಲವೇ ನಿನಗೆ? ನಿನ್ನ ಬುದ್ಧಿಯನ್ನು ಕಳೆದುಕೊಂಡುಬಿಟ್ಟಿದ್ದೀಯಾ?
01140018a ಧಿಕ್ತ್ವಾಮಸತಿ ಪುಂಸ್ಕಾಮೇ ಮಮ ವಿಪ್ರಿಯಕಾರಿಣಿ।
01140018c ಪೂರ್ವೇಷಾಂ ರಾಕ್ಷಸೇಂದ್ರಾಣಾಂ ಸರ್ವೇಷಾಮಯಶಸ್ಕರಿ।।
ಪುರುಷನ ಹಿಂದೆ ಬಿದ್ದು ನನಗಿಷ್ಟವಾಗಿಲ್ಲದ್ದನ್ನು ಮಾಡುತ್ತಿರುವ ನಿನಗೆ ಧಿಕ್ಕಾರ! ಹಿಂದಿನ ಎಲ್ಲ ರಾಕ್ಷಸೇಂದ್ರರಿಗೆ ನೀನೊಬ್ಬಳು ಕಳಂಕಿ!
01140019a ಯಾನಿಮಾನಾಶ್ರಿತಾಕಾರ್ಷೀರಪ್ರಿಯಂ ಸುಮಹನ್ಮಮ।
01140019c ಏಷ ತಾನದ್ಯ ವೈ ಸರ್ವಾನ್ ಹನಿಷ್ಯಾಮಿ ತ್ವಯಾ ಸಹ।।
ಯಾರಿಗೋಸ್ಕರ ನೀನು ನನ್ನ ವಿರುದ್ಧವಾಗಿ ನಡೆದುಕೊಳ್ಳುತ್ತಿರುವೆಯೋ ಅವರೆಲ್ಲರನ್ನೂ ಮತ್ತು ನಿನ್ನನ್ನೂ ಈ ಕ್ಷಣವೇ ಕೊಂದುಹಾಕುತ್ತೇನೆ.”
01140020a ಏವಮುಕ್ತ್ವಾ ಹಿಡಿಂಬಾಂ ಸ ಹಿಡಿಂಬೋ ಲೋಹಿತೇಕ್ಷಣಃ।
01140020c ವಧಾಯಾಭಿಪಪಾತೈನಾಂ ದಂತೈರ್ದಂತಾನುಪಸ್ಪೃಶನ್।।
ಹೀಗೆ ಹೇಳಿ ಲೋಹಿತಾಕ್ಷ ಹಿಡಿಂಬನು ಹಲ್ಲುಗಳನ್ನು ಕಡಿಯುತ್ತಾ ಹಿಡಿಂಬಿಯನ್ನು ವಧಿಸಲು ಅವಳ ಮೇಲೆರಗಿದನು.
01140021a ತಮಾಪತಂತಂ ಸಂಪ್ರೇಕ್ಷ್ಯ ಭೀಮಃ ಪ್ರಹರತಾಂ ವರಃ।
01140021c ಭರ್ತ್ಸಯಾಮಾಸ ತೇಜಸ್ವೀ ತಿಷ್ಠ ತಿಷ್ಠೇತಿ ಚಾಬ್ರವೀತ್।।
ತನ್ನ ತಂಗಿಯ ಮೇಲೆ ಬೀಳುತ್ತಿರುವ ಅವನನ್ನು ನೋಡಿ ಪ್ರಹರಿಗಳಲ್ಲಿ ಶ್ರೇಷ್ಠ ತೇಜಸ್ವಿ ಭೀಮನು ಅವನನ್ನು ಅವಹೇಳಿಸುತ್ತಾ “ನಿಲ್ಲು! ನಿಲ್ಲು!” ಎಂದು ಕೂಗಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಹಿಡಿಂಬವಧಪರ್ವಣಿ ಹಿಡಿಂಬಯುದ್ಧೇ ಚತ್ವಾರಿಂಶದಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಹಿಡಿಂಬವಧಪರ್ವದಲ್ಲಿ ಹಿಡಿಂಬಯುದ್ಧ ಎನ್ನುವ ನೂರಾನಲ್ವತ್ತನೆಯ ಅಧ್ಯಾಯವು.