139 ಭೀಮಹಿಡಿಂಬಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಹಿಡಿಂಬವಧ ಪರ್ವ

ಅಧ್ಯಾಯ 139

ಸಾರ

ಪಾಂಡವರ ಸುಳಿವನ್ನು ತಿಳಿದ ರಾಕ್ಷಸ ಹಿಡಿಂಬನು ಆ ಮನುಷ್ಯರನ್ನು ಕೊಂದು ತರಲು ತಂಗಿ ಹಿಡಿಂಬೆಗೆ ಹೇಳುವುದು (1-11). ಅಲ್ಲಿ ಅವನನ್ನು ನೋಡಿ ಕಾಮವಶಳಾದ ಹಿಡಿಂಬೆಯು ತನ್ನ ಪತಿಯಾಗೆಂದು ಭೀಮಸೇನನಿಗೆ ಕೇಳುವುದು (12-26). ಭೀಮನು ನಿರಾಕರಿಸಲು, ಹಿಡಿಂಬೆಯು ತನ್ನ ಅಣ್ಣನ ಕುರಿತು ಹೇಳುವುದು (27-32).

01139001 ವೈಶಂಪಾಯನ ಉವಾಚ।
01139001a ತತ್ರ ತೇಷು ಶಯಾನೇಷು ಹಿಡಿಂಬೋ ನಾಮ ರಾಕ್ಷಸಃ।
01139001c ಅವಿದೂರೇ ವನಾತ್ತಸ್ಮಾತ್ ಶಾಲವೃಕ್ಷಮುಪಾಶ್ರಿತಃ।।

ವೈಶಂಪಾಯನನು ಹೇಳಿದನು: “ಅಲ್ಲಿ ಅವರು ಮಲಗಿರುವಾಗ, ಆ ವನದಿಂದ ಸ್ವಲ್ಪ ದೂರದಲ್ಲಿಯೇ ಒಂದು ಶಾಲವೃಕ್ಷದಲ್ಲಿ ಹಿಡಿಂಬ ಎಂಬ ಹೆಸರಿನ ರಾಕ್ಷಸನು ಮಲಗಿದ್ದನು.

01139002a ಕ್ರೂರೋ ಮಾನುಷಮಾಂಸಾದೋ ಮಹಾವೀರ್ಯೋ ಮಹಾಬಲಃ।
01139002c ವಿರೂಪರೂಪಃ ಪಿಂಗಾಕ್ಷಃ ಕರಾಲೋ ಘೋರದರ್ಶನಃ।
01139002e ಪಿಶಿತೇಪ್ಸುಃ ಕ್ಷುಧಾರ್ತಸ್ತಾನಪಶ್ಯತ ಯದೃಚ್ಛಯಾ।।

ಮಹಾವೀರ, ಮಹಾಬಲಿ, ವಿರೂಪರೂಪಿ, ಪಿಂಗಾಕ್ಷ, ಕರಾಲ, ಘೋರದರ್ಶನ ಕ್ರೂರನು ಮನುಷ್ಯರ ಮಾಂಸವನ್ನು ಭಕ್ಷಿಸುವವನಾಗಿದ್ದನು. ಹಸಿದ ಅವನು ಮಾಂಸವನ್ನು ಬಯಸುತ್ತಿದ್ದಾಗ ಅಲ್ಲಿರುವ ಅವರನ್ನು ನೋಡಿದನು.

01139003a ಊರ್ಧ್ವಾಂಗುಲಿಃ ಸ ಕಂಡೂಯನ್ಧುನ್ವನ್ರೂಕ್ಷಾಂ ಶಿರೋರುಹಾನ್।
01139003c ಜೃಂಭಮಾಣೋ ಮಹಾವಕ್ತ್ರಃ ಪುನಃ ಪುನರವೇಕ್ಷ್ಯ ಚ।।

ಪುನಃ ಪುನಃ ಅವನ ಕಣ್ಣುಗಳು ಅವರೆಡೆಗೇ ತಿರುಗುತ್ತಿರಲು ಅವನು ತನ್ನ ಬೆರಳುಗಳನ್ನು ಮೇಲಕ್ಕೆ ಮಾಡಿ ಹೊಲಸಾದ ತನ್ನ ಕೂದಲುಗಳನ್ನು ಕೆರೆದು ಕೆದರಿ ತನ್ನ ಅಗಲ ಬಾಯಿಯಿಂದ ಆಕಳಿಸಿದನು.

01139004a ದುಷ್ಟೋ ಮಾನುಷಮಾಂಸಾದೋ ಮಹಾಕಾಯೋ ಮಹಾಬಲಃ।
01139004c ಆಘ್ರಾಯ ಮಾನುಷಂ ಗಂಧಂ ಭಗಿನೀಮಿದಮಬ್ರವೀತ್।।

ಆಗ ಆ ದುಷ್ಟ ಮಾನುಷಮಾಂಸ ಭಕ್ಷಕ, ಮಹಾಕಾಯ ಮಹಾಬಲಿಯು ಮನುಷ್ಯರ ವಾಸನೆಯನ್ನು ಆಘ್ರಾಣಿಸಿ ತನ್ನ ತಂಗಿಗೆ ಹೇಳಿದನು:

01139005a ಉಪಪನ್ನಶ್ಚಿರಸ್ಯಾದ್ಯ ಭಕ್ಷೋ ಮಮ ಮನಃಪ್ರಿಯಃ।
01139005c ಸ್ನೇಹಸ್ರವಾನ್ಪ್ರಸ್ರವತಿ ಜಿಹ್ವಾ ಪರ್ಯೇತಿ ಮೇ ಮುಖಂ।।

“ದೀರ್ಘ ಕಾಲದ ನಂತರ ಇಂದು ನನ್ನ ಮನಃಪ್ರಿಯ ಭಕ್ಷವು ದೊರಕಿದೆ. ನನ್ನ ನಾಲಿಗೆಯು ಹಸಿವೆಯಿಂದ ಜೊಲ್ಲು ಸುರಿಸುತ್ತಿದೆ ಮತ್ತು ಬಾಯಿಯ ಸುತ್ತನ್ನೆಲ್ಲಾ ನೆಕ್ಕುತ್ತಿದೆ.

01139006a ಅಷ್ಟೌ ದಂಷ್ಟ್ರಾಃ ಸುತೀಕ್ಷ್ಣಾಗ್ರಾಶ್ಚಿರಸ್ಯಾಪಾತದುಃಸಹಾಃ।
01139006c ದೇಹೇಷು ಮಜ್ಜಯಿಷ್ಯಾಮಿ ಸ್ನಿಗ್ಧೇಷು ಪಿಶಿತೇಷು ಚ।।

ಎಷ್ಟೋ ಸಮಯದಿಂದ ಏನನ್ನೂ ಕಚ್ಚಲು ದೊರೆಯದಿದ್ದ ನನ್ನ ಈ ಎಂಟು ತೀಕ್ಷ್ಣ ದಂಷ್ಟ್ರಗಳನ್ನು ಆ ದೇಹಗಳಲ್ಲಿರುವ ರುಚಿ ಮಾಂಸಗಳಲ್ಲಿ ಹುಗಿದುಕೊಳ್ಳಲು ಕಾತರಗೊಂಡಿವೆ.

01139007a ಆಕ್ರಮ್ಯ ಮಾನುಷಂ ಕಂಠಮಾಚ್ಛಿದ್ಯ ಧಮನೀಮಪಿ।
01139007c ಉಷ್ಣಂ ನವಂ ಪ್ರಪಾಸ್ಯಾಮಿ ಫೇನಿಲಂ ರುಧಿರಂ ಬಹು।।

ಆ ಮನುಷ್ಯರನ್ನು ಆಕ್ರಮಿಸಿ ಅವರ ಕಂಠಗಳ ಧಮನಿಯಲ್ಲಿ ಹರಿಯುವ ನೊರೆಯುಕ್ತ ಬಿಸಿಬಿಸಿ ಹೊಸರಕ್ತವನ್ನು ಕುಡಿಯುತ್ತೇನೆ.

01139008a ಗಚ್ಛ ಜಾನೀಹಿ ಕೇ ತ್ವೇತೇ ಶೇರತೇ ವನಮಾಶ್ರಿತಾಃ।
01139008c ಮಾನುಷೋ ಬಲವಾನ್ಗಂಧೋ ಘ್ರಾಣಂ ತರ್ಪಯತೀವ ಮೇ।।

ಹೋಗು! ಈ ವನದಲ್ಲಿ ಮಲಗಿರುವ ಅವರು ಯಾರು ಎಂದು ತಿಳಿದುಕೊಂಡು ಬಾ. ಆ ಮನುಷ್ಯರ ಗಾಢ ವಾಸನೆಯಿಂದಲೇ ನಾನು ತೃಪ್ತನಾಗುತ್ತಿದ್ದೇನೆಂದು ಅನ್ನಿಸುತ್ತದೆ.

01139009a ಹತ್ವೈತಾನ್ಮಾನುಷಾನ್ಸರ್ವಾನಾನಯಸ್ವ ಮಮಾಂತಿಕಂ।
01139009c ಅಸ್ಮದ್ವಿಷಯಸುಪ್ತೇಭ್ಯೋ ನೈತೇಭ್ಯೋ ಭಯಮಸ್ತಿ ತೇ।।

ಆ ಮನುಷ್ಯರೆಲ್ಲರನ್ನೂ ಕೊಂದು ನನ್ನ ಹತ್ತಿರ ತೆಗೆದುಕೊಂಡು ಬಾ. ನಮ್ಮದಾದ ಈ ಪ್ರದೇಶದಲ್ಲಿ ಮಲಗಿರುವ ಅವರಿಂದ ನಿನಗೆ ಯಾವುದೇ ರೀತಿಯ ಭಯವೂ ಇಲ್ಲ.

01139010a ಏಷಾಂ ಮಾಂಸಾನಿ ಸಂಸ್ಕೃತ್ಯ ಮಾನುಷಾಣಾಂ ಯಥೇಷ್ಟತಃ।
01139010c ಭಕ್ಷಯಿಷ್ಯಾವ ಸಹಿತೌ ಕುರು ತೂರ್ಣಂ ವಚೋ ಮಮ।।

ಮನುಷ್ಯರ ಈ ಮಾಂಸಗಳಿಂದ ನಮಗಿಷ್ಟವಾದ ಹಾಗೆ ಅಡುಗೆ ಮಾಡಿ ಭಕ್ಷಿಸೋಣ. ಬೇಗನೆ ಹೋಗು ಮತ್ತು ನಾನು ಹೇಳಿದ ಹಾಗೆಯೇ ಮಾಡು.”

01139011a ಭ್ರಾತುರ್ವಚನಮಾಜ್ಞಾಯ ತ್ವರಮಾಣೇವ ರಾಕ್ಷಸೀ।
01139011c ಜಗಾಮ ತತ್ರ ಯತ್ರ ಸ್ಮ ಪಾಂಡವಾ ಭರತರ್ಷಭ।।

ಭರತರ್ಷಭ! ಅಣ್ಣನ ಈ ಆಜ್ಞೆಯನ್ನು ಕೇಳಿದ ರಾಕ್ಷಸಿಯು ತಕ್ಷಣವೇ ಪಾಂಡವರಿದ್ದಲ್ಲಿಗೆ ಹೋದಳು.

01139012a ದದರ್ಶ ತತ್ರ ಗತ್ವಾ ಸಾ ಪಾಂಡವಾನ್ಪೃಥಯಾ ಸಹ।
01139012c ಶಯಾನಾನ್ಭೀಮಸೇನಂ ಚ ಜಾಗ್ರತಂ ತ್ವಪರಾಜಿತಂ।।

ಅಲ್ಲಿ ಬಂದ ಅವಳು ಪೃಥಳ ಜೊತೆ ಮಲಗಿದ್ದ ಪಾಂಡವರನ್ನು ಮತ್ತು ಎಚ್ಚೆತ್ತಿದ್ದ ಅಪರಾಜಿತ ಭೀಮಸೇನನನ್ನು ನೋಡಿದಳು.

01139013a ದೃಷ್ಟ್ವೈವ ಭೀಮಸೇನಂ ಸಾ ಶಾಲಸ್ಕಂಧಮಿವೋದ್ಗತಂ।
01139013c ರಾಕ್ಷಸೀ ಕಾಮಯಾಮಾಸ ರೂಪೇಣಾಪ್ರತಿಮಂ ಭುವಿ।।

ಶಾಲ ವೃಕ್ಷದ ರೆಂಬೆಯಂತೆ ಎತ್ತರವಾಗಿದ್ದ ಆ ಭೀಮಸೇನನನ್ನು ನೋಡಿದಾಕ್ಷಣವೇ ಆ ರಾಕ್ಷಸಿಯು ಭೂವಿಯಲ್ಲಿಯೇ ಅಪ್ರತಿಮ ರೂಪವಂತನಾದ ಅವನನ್ನು ಬಯಸಿದಳು.

01139014a ಅಯಂ ಶ್ಯಾಮೋ ಮಹಾಬಾಹುಃ ಸಿಂಹಸ್ಕಂಧೋ ಮಹಾದ್ಯುತಿಃ।
01139014c ಕಂಬುಗ್ರೀವಃ ಪುಷ್ಕರಾಕ್ಷೋ ಭರ್ತಾ ಯುಕ್ತೋ ಭವೇನ್ಮಮ।।

“ಈ ಶ್ಯಾಮವರ್ಣದ ಮಹಾಬಾಹು, ಸಿಂಹಸ್ಕಂಧ, ಮಾಹಾಕಾಂತಿಯುಕ್ತ, ಕಂಬುಗ್ರೀವ, ಪುಷ್ಕರಾಕ್ಷನು ನನಗೆ ಯೋಗ್ಯ ಗಂಡನಾಗುತ್ತಾನೆ.

01139015a ನಾಹಂ ಭ್ರಾತೃವಚೋ ಜಾತು ಕುರ್ಯಾಂ ಕ್ರೂರೋಪಸಂಹಿತಂ।
01139015c ಪತಿಸ್ನೇಹೋಽತಿಬಲವಾನ್ನ ತಥಾ ಭ್ರಾತೃಸೌಹೃದಂ।।

ನಾನು ನನ್ನ ಅಣ್ಣನ ಆ ಕ್ರೂರ ಆಜ್ಞೆಯನ್ನು ನಡೆಸುವುದಿಲ್ಲ. ಪತಿಯ ಮೇಲಿನ ಪ್ರೀತಿಯು ಅಣ್ಣನ ಮೇಲಿನ ಪ್ರೀತಿಗಿಂತ ಹೆಚ್ಚೇ ಅಲ್ಲವೇ?

01139016a ಮುಹೂರ್ತಮಿವ ತೃಪ್ತಿಶ್ಚ ಭವೇದ್ಭ್ರಾತುರ್ಮಮೈವ ಚ।
01139016c ಹತೈರೇತೈರಹತ್ವಾ ತು ಮೋದಿಷ್ಯೇ ಶಾಶ್ವತಿಃ ಸಮಾಃ।।

ಇವರನ್ನು ಕೊಂದರೆ ನನಗೆ ಮತ್ತು ಅಣ್ಣನಿಗೆ ಕ್ಷಣಮಾತ್ರದ ತೃಪ್ತಿ ದೊರೆಯಬಹುದು. ಆದರೆ ಇವರನ್ನು ಕೊಲ್ಲದಿದ್ದರೆ ವರ್ಷಾನುಗಟ್ಟಲೆ ನಾನು ತೃಪ್ತಿ ಹೊಂದಬಲ್ಲೆ.”

01139017a ಸಾ ಕಾಮರೂಪಿಣೀ ರೂಪಂ ಕೃತ್ವಾ ಮಾನುಷಮುತ್ತಮಂ।
01139017c ಉಪತಸ್ಥೇ ಮಹಾಬಾಹುಂ ಭೀಮಸೇನಂ ಶನೈಃ ಶನೈಃ।।
01139018a ವಿಲಜ್ಜಮಾನೇವ ಲತಾ ದಿವ್ಯಾಭರಣಭೂಷಿತಾ।
01139018c ಸ್ಮಿತಪೂರ್ವಮಿದಂ ವಾಕ್ಯಂ ಭೀಮಸೇನಮಥಾಬ್ರವೀತ್।।

ಆ ಕಾಮರೂಪಿಣಿಯು ಉತ್ತಮ ಮಾನುಷಿಯ ರೂಪವನ್ನು ಧರಿಸಿ ನಾಚಿಕೊಂಡ ಲತೆಯಂತೆ ಮಹಾಬಾಹು ಭೀಮಸೇನನ ಬಳಿ ಮೆಲ್ಲ ಮೆಲ್ಲಗೆ ಬಂದಳು. ಆ ದಿವ್ಯಾಭರಣಭೂಷಿತೆಯು ಮುಗುಳ್ನಗುತ್ತಾ ಭೀಮಸೇನನಿಗೆ ಹೇಳಿದಳು:

01139019a ಕುತಸ್ತ್ವಮಸಿ ಸಂಪ್ರಾಪ್ತಃ ಕಶ್ಚಾಸಿ ಪುರುಷರ್ಷಭ।
01139019c ಕ ಇಮೇ ಶೇರತೇ ಚೇಹ ಪುರುಷಾ ದೇವರೂಪಿಣಃ।।

“ಪುರುಷರ್ಷಭ! ನೀನು ಎಲ್ಲಿಂದ ಬಂದಿದ್ದೀಯೆ ಮತ್ತು ನೀನು ಯಾರು? ಇಲ್ಲಿ ಮಲಗಿರುವ ದೇವರೂಪಿ ಈ ಪುರುಷರು ಯಾರು?

01139020a ಕೇಯಂ ಚ ಬೃಹತೀ ಶ್ಯಾಮಾ ಸುಕುಮಾರೀ ತವಾನಘ।
01139020c ಶೇತೇ ವನಮಿದಂ ಪ್ರಾಪ್ಯ ವಿಶ್ವಸ್ತಾ ಸ್ವಗೃಹೇ ಯಥಾ।।

ಅನಘ! ಈ ಶ್ಯಾಮವರ್ಣಿ, ತನ್ನ ಮನೆಯಂತೆ ವಿಶ್ವಾಸದಿಂದ ಈ ವನದಲ್ಲಿ ಮಲಗಿರುವ ಈ ಹಿರಿಯ ಸುಕುಮಾರಿಯು ನಿನಗೆ ಏನಾಗಬೇಕು?

01139021a ನೇದಂ ಜಾನಾತಿ ಗಹನಂ ವನಂ ರಾಕ್ಷಸಸೇವಿತಂ।
01139021c ವಸತಿ ಹ್ಯತ್ರ ಪಾಪಾತ್ಮಾ ಹಿಡಿಂಬೋ ನಾಮ ರಾಕ್ಷಸಃ।।

ಈ ಗಹನ ವನವು ರಾಕ್ಷಸರಿಂದ ಸೇರಿದೆ ಮತ್ತು ಇಲ್ಲಿಯೇ ಹತ್ತಿರದಲ್ಲಿ ಹಿಂಡಿಂಬ ಎಂಬ ಹೆಸರಿನ ಪಾಪಾತ್ಮ ರಾಕ್ಷಸನು ವಾಸಿಸುತ್ತಿದ್ದಾನೆ ಎನ್ನುವುದು ಅವಳಿಗೆ ತಿಳಿದಿಲ್ಲವೇ?

01139022a ತೇನಾಹಂ ಪ್ರೇಷಿತಾ ಭ್ರಾತ್ರಾ ದುಷ್ಟಭಾವೇನ ರಕ್ಷಸಾ।
01139022c ಬಿಭಕ್ಷಯಿಷತಾ ಮಾಂಸಂ ಯುಷ್ಮಾಕಮಮರೋಪಮ।।

ನನ್ನ ಅಣ್ಣ ಆ ರಾಕ್ಷಸನು ದುಷ್ಟಭಾವದಿಂದ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ. ಅವನು ಅಮರೋಪಮ ನಿಮ್ಮ ಮಾಂಸವನ್ನು ಭಕ್ಷಿಸಲು ಬಯಸುತ್ತಾನೆ.

01139023a ಸಾಹಂ ತ್ವಾಮಭಿಸಂಪ್ರೇಕ್ಷ್ಯ ದೇವಗರ್ಭಸಮಪ್ರಭಂ।
01139023c ನಾನ್ಯಂ ಭರ್ತಾರಮಿಚ್ಛಾಮಿ ಸತ್ಯಮೇತದ್ಬ್ರವೀಮಿ ತೇ।।

ದೇವಗರ್ಭಸಮಪ್ರಭನಾದ ನಿನ್ನನ್ನು ನೋಡಿದಾಕ್ಷಣವೇ ನನ್ನ ಓರ್ವನೇ ಪತಿಯನ್ನಾಗಿ ಹೊಂದಲು ಬಯಸುತ್ತೇನೆ. ನಿನಗೆ ನಾನು ಸತ್ಯವನ್ನೇ ಹೇಳುತ್ತಿದ್ದೇನೆ.

01139024a ಏತದ್ವಿಜ್ಞಾಯ ಧರ್ಮಜ್ಞ ಯುಕ್ತಂ ಮಯಿ ಸಮಾಚರ।
01139024c ಕಾಮೋಪಹತಚಿತ್ತಾಂಗೀಂ ಭಜಮಾನಾಂ ಭಜಸ್ವ ಮಾಂ।।

ಧರ್ಮಜ್ಞ! ಇದನ್ನು ತಿಳಿದ ನೀನು ನನಗೆ ಯುಕ್ತವಾದಹಾಗೆ ನಡೆದುಕೋ. ನನ್ನ ಅಂಗಗಳು ಮತ್ತು ಮನಸ್ಸನ್ನು ಕಾಮವು ಆವರಿಸಿದೆ. ನಿನ್ನನ್ನು ಪ್ರೀತಿಸುತ್ತೇನೆ. ನನ್ನನ್ನು ಪ್ರೀತಿಸು.

01139025a ತ್ರಾಸ್ಯೇಽಹಂ ತ್ವಾಂ ಮಹಾಬಾಹೋ ರಾಕ್ಷಸಾತ್ಪುರುಷಾದಕಾತ್।
01139025c ವತ್ಸ್ಯಾವೋ ಗಿರಿದುರ್ಗೇಷು ಭರ್ತಾ ಭವ ಮಮಾನಘ।।

ಮಹಾಬಾಹು! ನಿನ್ನನ್ನು ನಾನು ಆ ನರಭಕ್ಷಕ ರಾಕ್ಷಸನಿಂದ ಉಳಿಸಬಲ್ಲೆ. ನಾವಿಬ್ಬರೂ ಗಿರಿದುರ್ಗಗಳಲ್ಲಿ ವಾಸಿಸೋಣ. ಅನಘ! ನನ್ನ ಪತಿಯಾಗು.

01139026a ಅಂತರಿಕ್ಷಚರಾ ಹ್ಯಸ್ಮಿ ಕಾಮತೋ ವಿಚರಾಮಿ ಚ।
01139026c ಅತುಲಾಮಾಪ್ನುಹಿ ಪ್ರೀತಿಂ ತತ್ರ ತತ್ರ ಮಯಾ ಸಹ।।

ಅಂತರಿಕ್ಷದಲ್ಲಿ ಸಂಚರಿಸಬಲ್ಲೆ, ಬೇಕಾದಲ್ಲಿ ಹೋಗಬಲ್ಲೆ. ಎಲ್ಲಿ ಬೇಕಾದರಲ್ಲಿ ನನ್ನೊಂದಿಗೆ ಅತುಲ ಪ್ರೀತಿಯನ್ನು ಹೊಂದು.”

01139027 ಭೀಮ ಉವಾಚ।
01139027a ಮಾತರಂ ಭ್ರಾತರಂ ಜ್ಯೇಷ್ಠಂ ಕನಿಷ್ಠಾನಪರಾನಿಮಾನ್।
01139027c ಪರಿತ್ಯಜೇತ ಕೋಽನ್ವದ್ಯ ಪ್ರಭವನ್ನಿವ ರಾಕ್ಷಸಿ।।

ಭೀಮನು ಹೇಳಿದನು: “ರಾಕ್ಷಸಿ! ತಾಯಿಯನ್ನು, ಹಿರಿಯಣ್ಣನನ್ನು, ಮತ್ತು ಕಿರಿಯವರನ್ನು ಪರಿತ್ಯಜಿಸುವನು ಹೇಗೆ ತಾನೆ ಪ್ರಭು ಎನ್ನಿಸಿಕೊಳ್ಳುವನು?

01139028a ಕೋ ಹಿ ಸುಪ್ತಾನಿಮಾನ್ಭ್ರಾತೄನ್ದತ್ತ್ವಾ ರಾಕ್ಷಸಭೋಜನಂ।
01139028c ಮಾತರಂ ಚ ನರೋ ಗಚ್ಛೇತ್ಕಾಮಾರ್ತ ಇವ ಮದ್ವಿಧಃ।।

ನನ್ನಂಥಹ ಯಾವ ಮನುಷ್ಯನು ಮಲಗಿರುವ ಈ ಭ್ರಾತೃಗಳನ್ನು ಮತ್ತು ತಾಯಿಯನ್ನು ರಾಕ್ಷಸಭೋಜನವನ್ನಾಗಿ ಕೊಟ್ಟು ಕಾಮಾರ್ತನಾಗಿ ಹೋಗುತ್ತಾನೆ?”

01139029 ರಾಕ್ಷಸ್ಯುವಾಚ।
01139029a ಯತ್ತೇ ಪ್ರಿಯಂ ತತ್ಕರಿಷ್ಯೇ ಸರ್ವಾನೇತಾನ್ಪ್ರಬೋಧಯ।
01139029c ಮೋಕ್ಷಯಿಷ್ಯಾಮಿ ವಃ ಕಾಮಂ ರಾಕ್ಷಸಾತ್ಪುರುಷಾದಕಾತ್।।

ರಾಕ್ಷಸಿಯು ಹೇಳಿದಳು: “ನಿನಗೆ ಬೇಕಾದುದನ್ನು ನಾನು ಮಾಡುತ್ತೇನೆ. ಇವರೆಲ್ಲರನ್ನೂ ಎಬ್ಬಿಸು. ಆ ನರಭಕ್ಷಕ ರಾಕ್ಷಸನಿಂದ ನಿಮ್ಮನ್ನು ಉಳಿಸಲು ಬಯಸುತ್ತೇನೆ.”

01139030 ಭೀಮ ಉವಾಚ।
01139030a ಸುಖಸುಪ್ತಾನ್ವನೇ ಭ್ರಾತೄನ್ಮಾತರಂ ಚೈವ ರಾಕ್ಷಸಿ।
01139030c ನ ಭಯಾದ್ಬೋಧಯಿಷ್ಯಾಮಿ ಭ್ರಾತುಸ್ತವ ದುರಾತ್ಮನಃ।।

ಭೀಮನು ಹೇಳಿದನು: “ರಾಕ್ಷಸಿ! ನನ್ನ ತಾಯಿ ಮತ್ತು ಸಹೋದರರು ವನದಲ್ಲಿ ಸುಖವಾಗಿ ನಿದ್ರಿಸುತ್ತಿದ್ದಾರೆ. ನಿನ್ನ ಆ ದುರಾತ್ಮ ಅಣ್ಣನ ಭಯದಿಂದ ನಾನು ಅವರನ್ನು ಎಬ್ಬಿಸಲಾರೆ.

01139031a ನ ಹಿ ಮೇ ರಾಕ್ಷಸಾ ಭೀರು ಸೋಢುಂ ಶಕ್ತಾಃ ಪರಾಕ್ರಮಂ।
01139031c ನ ಮನುಷ್ಯಾ ನ ಗಂಧರ್ವಾ ನ ಯಕ್ಷಾಶ್ಚಾರುಲೋಚನೇ।।

ಭೀರು! ಚಾರುಲೋಚನೇ! ನನ್ನ ಪರಾಕ್ರಮವನ್ನು ಎದುರಿಸುವ ಯಾವ ರಾಕ್ಷಸನೂ ಇಲ್ಲ, ಮನುಷ್ಯನೂ ಇಲ್ಲ, ಗಂಧರ್ವನೂ ಇಲ್ಲ ಅಥವಾ ಯಕ್ಷನೂ ಇಲ್ಲ.

01139032a ಗಚ್ಛ ವಾ ತಿಷ್ಠ ವಾ ಭದ್ರೇ ಯದ್ವಾಪೀಚ್ಛಸಿ ತತ್ಕುರು।
01139032c ತಂ ವಾ ಪ್ರೇಷಯ ತನ್ವಂಗಿ ಭ್ರಾತರಂ ಪುರುಷಾದಕಂ।।

ಭದ್ರೇ! ಇಲ್ಲಿಯೇ ನಿಲ್ಲು ಅಥವಾ ಹೊರಟು ಹೋಗು. ತನ್ವಾಂಗಿ! ನಿನಗಿಷ್ಟ ಬಂದ ಹಾಗೆ ಮಾಡು. ಅಥವಾ ನಿನ್ನ ಆ ನರಭಕ್ಷಕ ಅಣ್ಣನನ್ನು ಕಳುಹಿಸಿಕೊಡು.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿ ಪರ್ವಣಿ ಹಿಡಿಂಬವಧ ಪರ್ವಣಿ ಭೀಮಹಿಡಿಂಬಸಂವಾದೇ ಏಕೋನಚತ್ವಾರಿಂಶದಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿ ಪರ್ವದಲ್ಲಿ ಹಿಡಿಂಬವಧ ಪರ್ವದಲ್ಲಿ ಭೀಮಹಿಡಿಂಬಸಂವಾದ ಎನ್ನುವ ನೂರಾಮೂವತ್ತೊಂಭತ್ತನೆಯ ಅಧ್ಯಾಯವು.