137 ಪಾಂಡವವನಪ್ರವೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಜತುಗೃಹದಾಹ ಪರ್ವ

ಅಧ್ಯಾಯ 137

ಸಾರ

ಮರುದಿನ ಪೌರಜನರು ಪಾಂಡವರನ್ನು ಹುಡುಕಲು, ಸುಟ್ಟುಹೋಗಿದ್ದ ನೈಷಾದಿ ಮತ್ತು ಅವಳ ಮಕ್ಕಳೇ ಕುಂತಿ ಪಾಂಡವರೆಂದು ತಿಳಿದು ಶೋಕಿಸಿದುದು; ಖನಿಕನು ಬಂದು ಬಿಲವನ್ನು ಮುಚ್ಚಿ ಕುರುಹುಗಳಿಲ್ಲದಂತೆ ಮಾಡಿದುದು (1-9). ಪಾಂಡುಪುತ್ರರ ವಿನಾಶವನ್ನು ಕೇಳಿ ಧೃತರಾಷ್ಟ್ರನು ಶೋಕಿಸಿ, ಅವರಿಗೆ ತರ್ಪಣಗಳನ್ನಿತ್ತುದುದು (10-16). ಭೀಮನು ತಾಯಿ ಮತ್ತು ಸಹೋದರರನ್ನು ಎತ್ತಿಕೊಂಡು ಪಲಾಯನಗೈದುದು (17-23).

01137001 ವೈಶಂಪಾಯನ ಉವಾಚ।
01137001a ಅಥ ರಾತ್ರ್ಯಾಂ ವ್ಯತೀತಾಯಾಮಶೇಷೋ ನಾಗರೋ ಜನಃ।
01137001c ತತ್ರಾಜಗಾಮ ತ್ವರಿತೋ ದಿದೃಕ್ಷುಃ ಪಾಂಡುನಂದನಾನ್।।

ವೈಶಂಪಾಯನನು ಹೇಳಿದನು: “ರಾತ್ರಿಯು ಕಳೆದ ನಂತರ ನಗರದ ಎಲ್ಲ ಜನರೂ ಬೇಗನೆ ಅಲ್ಲಿಗೆ ಬಂದು ಪಾಂಡುನಂದನರನ್ನು ಹುಡುಕ ತೊಡಗಿದರು.

01137002a ನಿರ್ವಾಪಯಂತೋ ಜ್ವಲನಂ ತೇ ಜನಾ ದದೃಶುಸ್ತತಃ।
01137002c ಜಾತುಷಂ ತದ್ಗೃಹಂ ದಗ್ಧಮಮಾತ್ಯಂ ಚ ಪುರೋಚನಂ।।

ಬೆಂಕಿಯ ಉರಿಯನ್ನು ಆರಿಸಿದ ನಂತರ ಆ ಜನರು ಅದೊಂದು ಜಾತುಗೃಹವಾಗಿತ್ತು ಮತ್ತು ಅದರಲ್ಲಿ ಅಮಾತ್ಯ ಪುರೋಚನನೂ ಸುಟ್ಟು ಹೋಗಿದ್ದಾನೆ ಎನ್ನುವುದನ್ನು ಕಂಡರು.

01137003a ನೂನಂ ದುರ್ಯೋಧನೇನೇದಂ ವಿಹಿತಂ ಪಾಪಕರ್ಮಣಾ।
01137003c ಪಾಂಡವಾನಾಂ ವಿನಾಶಾಯ ಇತ್ಯೇವಂ ಚುಕ್ರುಷುರ್ಜನಾಃ।।

“ಇದು ಪಾಂಡವರ ವಿನಾಶಕ್ಕಾಗಿ ದುರ್ಯೊಧನನು ನಡೆಸಿದ ಪಾಪ ಕರ್ಮ!” ಎಂದು ಕೂಗಾಡಿದರು.

01137004a ವಿದಿತೇ ಧೃತರಾಷ್ಟ್ರಸ್ಯ ಧಾರ್ತರಾಷ್ಟ್ರೋ ನ ಸಂಶಯಃ।
01137004c ದಗ್ಧವಾನ್ಪಾಂಡುದಾಯಾದಾನ್ನ ಹ್ಯೇನಂ ಪ್ರತಿಷಿದ್ಧವಾನ್।।

“ಈ ರೀತಿ ದಾಯಾದಿ ಪಾಂಡುಪುತ್ರರನ್ನು ಸುಟ್ಟುಹಾಕಿದ ಧಾರ್ತರಾಷ್ಟ್ರನ ಈ ಕೃತ್ಯವು ಧೃತರಾಷ್ಟ್ರನಿಗೆ ನಿಸ್ಸಂಶಯವಾಗಿಯೂ ತಿಳಿದಿತ್ತು. ಆದರೂ ಅವನು ಇದನ್ನು ನಿಲ್ಲಿಸಲಿಲ್ಲ.

01137005a ನೂನಂ ಶಾಂತನವೋ ಭೀಷ್ಮೋ ನ ಧರ್ಮಮನುವರ್ತತೇ।
01137005c ದ್ರೋಣಶ್ಚ ವಿದುರಶ್ಚೈವ ಕೃಪಶ್ಚಾನ್ಯೇ ಚ ಕೌರವಾಃ।।

ನಿಜವಾಗಿ ಶಾಂತನವ ಭೀಷ್ಮನಾಗಲೀ, ದ್ರೋಣ, ವಿದುರ, ಕೃಪ ಮತ್ತು ಅನ್ಯ ಕೌರವರಾಗಲೀ ಯಾರೂ ಧರ್ಮವನ್ನು ಅನುಸರಿಸುತ್ತಿಲ್ಲ.

01137006a ತೇ ವಯಂ ಧೃತರಾಷ್ಟ್ರಸ್ಯ ಪ್ರೇಷಯಾಮೋ ದುರಾತ್ಮನಃ।
01137006c ಸಂವೃತ್ತಸ್ತೇ ಪರಃ ಕಾಮಃ ಪಾಂಡವಾನ್ದಗ್ಧವಾನಸಿ।।

ಪಾಂಡವರನ್ನು ಸುಟ್ಟುಹಾಕುವ ನಿನ್ನ ಈ ಸಂಚು ಸಫಲವಾಯಿತು ಎಂದು ಆ ದುರಾತ್ಮ ಧೃತರಾಷ್ಟ್ರನಿಗೆ ಸಂದೇಶವನ್ನು ಕಳಿಸೋಣ.”

01137007a ತತೋ ವ್ಯಪೋಹಮಾನಾಸ್ತೇ ಪಾಂಡವಾರ್ಥೇ ಹುತಾಶನಂ।
01137007c ನಿಷಾದೀಂ ದದೃಶುರ್ದಗ್ಧಾಂ ಪಂಚಪುತ್ರಾಮನಾಗಸಂ।।

ಬೆಂಕಿಯಲ್ಲಿ ಪಾಂಡವರನ್ನು ಹುಡುಕುತ್ತಿದ್ದಾಗ ಮುಗ್ಧ ನಿಷಾದಿ ಮತ್ತು ಅವಳ ಐವರು ಪುತ್ರರು ಸುಟ್ಟುಹೋಗಿದ್ದುದನ್ನು ಕಂಡರು.

01137008a ಖನಕೇನ ತು ತೇನೈವ ವೇಶ್ಮ ಶೋಧಯತಾ ಬಿಲಂ।
01137008c ಪಾಂಸುಭಿಃ ಪ್ರತ್ಯಪಿಹಿತಂ ಪುರುಷೈಸ್ತೈರಲಕ್ಷಿತಂ।।

ಮನೆಯನ್ನು ಹುಡುಕುವಾಗ ಅದೇ ಖನಕನು ಆ ಬಿಲವನ್ನು ಸಂಪೂರ್ಣವಾಗಿ ಕಸದಿಂದ ಮುಚ್ಚಿ, ಇತರ ಜನರಿಗೆ ಕಾಣದಹಾಗೆ ಮಾಡಿದನು.

01137009a ತತಸ್ತೇ ಪ್ರೇಷಯಾಮಾಸುರ್ಧೃತರಾಷ್ಟ್ರಸ್ಯ ನಾಗರಾಃ।
01137009c ಪಾಂಡವಾನಗ್ನಿನಾ ದಗ್ಧಾನಮಾತ್ಯಂ ಚ ಪುರೋಚನಂ।।

ನಂತರ ನಾಗರೀಕರು ಪಾಂಡವರು ಮತ್ತು ಅಮಾತ್ಯ ಪುರೋಚನ ಅಗ್ನಿಯಲ್ಲಿ ಸುಟ್ಟುಹೋದರು ಎನ್ನುವ ವಿಷಯವನ್ನು ಧೃತರಾಷ್ಟ್ರನಿಗೆ ಕಳುಹಿಸಿದರು.

01137010a ಶ್ರುತ್ವಾ ತು ಧೃತರಾಷ್ಟ್ರಸ್ತದ್ರಾಜಾ ಸುಮಹದಪ್ರಿಯಂ।
01137010c ವಿನಾಶಂ ಪಾಂಡುಪುತ್ರಾಣಾಂ ವಿಲಲಾಪ ಸುದುಃಖಿತಃ।।

ರಾಜ ಧೃತರಾಷ್ಟ್ರನು ಪಾಂಡುಪುತ್ರರ ಮಹಾ ಅಪ್ರಿಯ ವಿನಾಶವನ್ನು ಕೇಳಿ ಬಹು ದುಃಖಿತನಾಗಿ ವಿಲಪಿಸಿದನು.

01137011a ಅದ್ಯ ಪಾಂಡುರ್ಮೃತೋ ರಾಜಾ ಭ್ರಾತಾ ಮಮ ಸುದುರ್ಲಭಃ।
01137011c ತೇಷು ವೀರೇಷು ದಗ್ಧೇಷು ಮಾತ್ರಾ ಸಹ ವಿಶೇಷತಃ।।

“ವಿಶೇಷವಾಗಿ ಅವನ ವೀರರು ಮಾತೆಯ ಸಹಿತ ಸುಟ್ಟುಹೋದ ನಂತರ ಈಗ ನನ್ನ ಸುದುರ್ಲಭ ತಮ್ಮ ರಾಜ ಪಾಂಡುವು ಮೃತನಾದ.

01137012a ಗಚ್ಛಂತು ಪುರುಷಾಃ ಶೀಘ್ರಂ ನಗರಂ ವಾರಣಾವತಂ।
01137012c ಸತ್ಕಾರಯಂತು ತಾನ್ವೀರಾನ್ಕುಂತಿರಾಜಸುತಾಂ ಚ ತಾಂ।।

ಜನರು ಶೀಘ್ರವೇ ವಾರಣಾವತ ನಗರಕ್ಕೆ ಹೋಗಿ ಆ ವೀರರಿಗೆ ಮತ್ತು ಕುಂತಿರಾಜಸುತೆಗೆ ಸಂಸ್ಕಾರಕ್ರಿಯೆಗಳನ್ನು ಮಾಡಲಿ.

01137013a ಕಾರಯಂತು ಚ ಕುಲ್ಯಾನಿ ಶುಭ್ರಾಣಿ ಚ ಮಹಾಂತಿ ಚ।
01137013c ಯೇ ಚ ತತ್ರ ಮೃತಾಸ್ತೇಷಾಂ ಸುಹೃದೋಽರ್ಚಂತು ತಾನಪಿ।।

ಅವರ ಅಸ್ತಿಗಳಿಗೆ ಶುಭ್ರ ದೊಡ್ಡ ಕುಂಡಗಳನ್ನು ತಯಾರಿಸಿ ಅಲ್ಲಿ ಮೃತರಾದವರ ಸುಹೃದಯರು ಅವರನ್ನು ಸತ್ಕರಿಸಲಿ.

01137014a ಏವಂಗತೇ ಮಯಾ ಶಕ್ಯಂ ಯದ್ಯತ್ಕಾರಯಿತುಂ ಹಿತಂ।
01137014c ಪಾಂಡವಾನಾಂ ಚ ಕುಂತ್ಯಾಶ್ಚ ತತ್ಸರ್ವಂ ಕ್ರಿಯತಾಂ ಧನೈಃ।।

ಈ ಗತಿಯನ್ನು ಹೊಂದಿದ ಪಾಂಡವರು ಮತ್ತು ಕುಂತಿಗೆ ನನ್ನಿಂದ ಏನೆಲ್ಲ ಮಾಡುವುದೋ ಹಿತವೋ ಮತ್ತು ಧನಗಳಿಂದ ಶಖ್ಯವೋ ಅವೆಲ್ಲವನ್ನು ಮಾಡಬೇಕು.”

01137015a ಏವಮುಕ್ತ್ವಾ ತತಶ್ಚಕ್ರೇ ಜ್ಞಾತಿಭಿಃ ಪರಿವಾರಿತಃ।
01137015c ಉದಕಂ ಪಾಂಡುಪುತ್ರಾಣಾಂ ಧೃತರಾಷ್ಟ್ರೋಽಂಬಿಕಾಸುತಃ।।

ಹೀಗೆಂದ ಅಂಬಿಕಾ ಸುತ ಧೃತರಾಷ್ಟ್ರನು ತನ್ನ ಕುಲದವರಿಂದ ಸುತ್ತುವರೆಯಲ್ಪಟ್ಟು ಪಾಂಡುಪುತ್ರರಿಗೆ ತರ್ಪಣವನ್ನಿತ್ತನು.

01137016a ಚುಕ್ರುಶುಃ ಕೌರವಾಃ ಸರ್ವೇ ಭೃಶಂ ಶೋಕಪರಾಯಣಾಃ।
01137016c ವಿದುರಸ್ತ್ವಲ್ಪಶಶ್ಚಕ್ರೇ ಶೋಕಂ ವೇದ ಪರಂ ಹಿ ಸಃ।।

ಶೋಕಪರಾಯಣ ಸರ್ವ ಕೌರವರೂ ದುಃಖಿತರಾಗಿ ರೋದಿಸಿದರು. ಆದರೆ ಅವರಿಗಿಂಥ ಹೆಚ್ಚು ತಿಳಿದಿದ್ದ ವಿದುರನು ಸ್ವಲ್ಪವೇ ಶೋಕವನ್ನು ವ್ಯಕ್ತಪಡಿಸಿದನು.

01137017a ಪಾಂಡವಾಶ್ಚಾಪಿ ನಿರ್ಗತ್ಯ ನಗರಾದ್ವಾರಣಾವತಾತ್।
01137017c ಜವೇನ ಪ್ರಯಯೂ ರಾಜನ್ದಕ್ಷಿಣಾಂ ದಿಶಮಾಶ್ರಿತಾಃ।।

ರಾಜನ್! ಪಾಂಡವರಾದರೂ ವಾರಣಾವತ ನಗರವನ್ನು ಬಿಟ್ಟು ವೇಗದಲ್ಲಿ ದಕ್ಷಿಣ ದಿಕ್ಕಿನ ಮುಖವಾಗಿ ಪ್ರಯಾಣಮಾಡಿದರು.

01137018a ವಿಜ್ಞಾಯ ನಿಶಿ ಪಂಥಾನಂ ನಕ್ಷತ್ರೈರ್ದಕ್ಷಿಣಾಮುಖಾಃ।
01137018c ಯತಮಾನಾ ವನಂ ರಾಜನ್ಗಹನಂ ಪ್ರತಿಪೇದಿರೇ।।

ರಾಜನ್! ನಕ್ಷತ್ರಗಳ ಚಿಹ್ನೆಗಳಿಂದ ದಾರಿಯನ್ನು ತಿಳಿಯುತ್ತಾ ಅತಿ ಕಷ್ಟದಿಂದ ದಕ್ಷಿಣಾಭಿಮುಖವಾಗಿ ಹೋಗುತ್ತಾ ಗಹನ ವನವೊಂದನ್ನು ಸಮೀಪಿಸಿದರು.

01137019a ತತಃ ಶ್ರಾಂತಾಃ ಪಿಪಾಸಾರ್ತಾ ನಿದ್ರಾಂಧಾಃ ಪಾಂಡುನಂದನಾಃ।
01137019c ಪುನರೂಚುರ್ಮಹಾವೀರ್ಯಂ ಭೀಮಸೇನಮಿದಂ ವಚಃ।।

ಪಾಂಡುನಂದನರು ಆಯಾಸಗೊಂಡಿದ್ದರು, ಬಾಯಾರಿಕೆಯಿಂದ ಬಳಲಿದ್ದರು ಮತ್ತು ನಿದ್ದೆಯಿಂದ ಕುರುಡರಾಗಿದ್ದರು. ಪುನಃ ಅವರು ಮಹಾವೀರ ಭೀಮಸೇನನಿಗೆ ಹೇಳಿದರು:

01137020a ಇತಃ ಕಷ್ಟತರಂ ಕಿಂ ನು ಯದ್ವಯಂ ಗಹನೇ ವನೇ।
01137020c ದಿಶಶ್ಚ ನ ಪ್ರಜಾನೀಮೋ ಗಂತುಂ ಚೈವ ನ ಶಕ್ನುಮಃ।।

“ಈ ಗಹನ ವನದಲ್ಲಿ ಇರುವುದಕ್ಕಿಂದ ಕಷ್ಟತರವಾದುದ್ದಾದರೂ ಏನಿದೆ? ಯಾವ ದಿಕ್ಕೂ ನಮಗೆ ತಿಳಿಯುತ್ತಿಲ್ಲ ಮತ್ತು ಮುಂದುವರೆಯಲು ಶಕ್ತಿಯೂ ಇಲ್ಲವಾಗಿದೆ.

01137021a ತಂ ಚ ಪಾಪಂ ನ ಜಾನೀಮೋ ಯದಿ ದಗ್ಧಃ ಪುರೋಚನಃ।
01137021c ಕಥಂ ನು ವಿಪ್ರಮುಚ್ಯೇಮ ಭಯಾದಸ್ಮಾದಲಕ್ಷಿತಾಃ।।

ಆ ಪಾಪಿ ಪುರೋಚನನು ಸುಟ್ಟು ಸತ್ತನೋ ಇಲ್ಲವೋ ಎಂದೂ ನಮಗೆ ತಿಳಿಯದು. ಹೇಗೆತಾನೆ ನಾವು ಈ ಭಯದಿಂದ ಯಾರಿಗೂ ಕಾಣದ ರೀತಿಯಲ್ಲಿ ತಪ್ಪಿಸಿಕೊಳ್ಳಬಹುದು?

01137022a ಪುನರಸ್ಮಾನುಪಾದಾಯ ತಥೈವ ವ್ರಜ ಭಾರತ।
01137022c ತ್ವಂ ಹಿ ನೋ ಬಲವಾನೇಕೋ ಯಥಾ ಸತತಗಸ್ತಥಾ।।

ಭಾರತ! ಮೊದಲು ಮಾಡಿದಂತೆ ನಮ್ಮನ್ನು ಪುನಃ ಎತ್ತಿಕೋ. ನಮ್ಮೆಲ್ಲರಲ್ಲಿ ನೀನೊಬ್ಬನೇ ವಾಯುವಿನಷ್ಟು ಬಲವಂತನಾಗಿದ್ದೀಯೆ.”

01137023a ಇತ್ಯುಕ್ತೋ ಧರ್ಮರಾಜೇನ ಭೀಮಸೇನೋ ಮಹಾಬಲಃ।
01137023c ಆದಾಯ ಕುಂತೀಂ ಭ್ರಾತೄಂಶ್ಚ ಜಗಾಮಾಶು ಮಹಾಬಲಃ।।

ಧರ್ಮರಾಜನು ಹೀಗೆ ಹೇಳಲು ಮಹಾಬಲಿ ಭೀಮಸೇನನು ಕುಂತಿ ಮತ್ತು ಭ್ರಾತೃಗಳನ್ನು ಎತ್ತಿಕೊಂಡು ಹೊರಟನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹದಾಹಪರ್ವಣಿ ಪಾಂಡವವನಪ್ರವೇಶೇ ಸಪ್ತತ್ರಿಂಶದಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹದಾಹ ಪರ್ವದಲ್ಲಿ ಪಾಂಡವವನಪ್ರವೇಶ ಎನ್ನುವ ನೂರಾಮೂವತ್ತೇಳನೆಯ ಅಧ್ಯಾಯವು.