136 ಜತುಗೃಹದಾಹಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಜತುಗೃಹದಾಹ ಪರ್ವ

ಅಧ್ಯಾಯ 136

ಸಾರ

ಅರಗಿನ ಮನೆಯಲ್ಲಿ ಪುರೋಚನ ಮತ್ತು ರಾತ್ರಿ ಭೋಜನಕ್ಕಾಗಿ ತನ್ನ ಐವರು ಮಕ್ಕಳೊಂದಿಗೆ ಬಂದಿದ್ದ ನಿಷಾದಿಯು ಮಲಗಿರುವಾಗ ಭೀಮನು ಬೆಂಕಿ ಹಚ್ಚಿಸಿದುದು (1-9). ಪಾಂಡವರು ಸುಟ್ಟುಹೋದರೆಂದು ಪುರಜನರ ಹಾಹಾಕಾರ (10-14). ಸುರಂಗದಿಂದ ತಪ್ಪಿಸಿಕೊಂಡು ಭೀಮನ ಸಹಾಯದಿಂದ ಪಾಂಡವರು ಕುಂತಿಯೊಂದಿಗೆ ಪಲಾಯನಗೈದುದು (15-19).

01136001 ವೈಶಂಪಾಯನ ಉವಾಚ।
01136001a ತಾಂಸ್ತು ದೃಷ್ಟ್ವಾ ಸುಮನಸಃ ಪರಿಸಂವತ್ಸರೋಷಿತಾನ್।
01136001c ವಿಶ್ವಸ್ತಾನಿವ ಸಂಲಕ್ಷ್ಯ ಹರ್ಷಂ ಚಕ್ರೇ ಪುರೋಚನಃ।।
01136002a ಪುರೋಚನೇ ತಥಾ ಹೃಷ್ಟೇ ಕೌಂತೇಯೋಽಥ ಯುಧಿಷ್ಠಿರಃ।
01136002c ಭೀಮಸೇನಾರ್ಜುನೌ ಚೈವ ಯಮೌ ಚೋವಾಚ ಧರ್ಮವಿತ್।।

ವೈಶಂಪಾಯನನು ಹೇಳಿದನು: “ಅವರು ಸಂತೋಷದಿಂದ ಏನೂ ಸಂಶಯವಿಲ್ಲದವರ ಹಾಗೆ ಒಂದು ವರ್ಷ ಸಂಪೂರ್ಣವಾಗಿ ಕಳೆದುದನ್ನು ನೋಡಿದ ಪುರೋಚನನು ಹರ್ಷಿತನಾದನು. ಹಾಗೆ ಪುರೋಚನನು ಸಂತೋಷದಿಂದಿರಲು ಕೌಂತೇಯ ಧರ್ಮವಿದ ಯುಧಿಷ್ಠಿರನು ಭೀಮಸೇನ, ಅರ್ಜುನ ಮತ್ತು ಯಮಳರಿಗೆ ಹೇಳಿದನು:

01136003a ಅಸ್ಮಾನಯಂ ಸುವಿಶ್ವಸ್ತಾನ್ವೇತ್ತಿ ಪಾಪಃ ಪುರೋಚನಃ।
01136003c ವಂಚಿತೋಽಯಂ ನೃಶಂಸಾತ್ಮಾ ಕಾಲಂ ಮನ್ಯೇ ಪಲಾಯನೇ।।

“ಪಾಪಿ ಪುರೋಚನನು ನಮಗೇನೂ ಸಂಶಯವಿಲ್ಲವೆಂದು ನಂಬಿದ್ದಾನೆ. ಆ ನೃಶಂಸಾತ್ಮನನ್ನು ಮೋಸಗೊಳಿಸಿ ಪಲಾಯನಮಾಡುವ ಕಾಲವು ಪ್ರಾಪ್ತವಾಗಿದೆ ಎಂದು ನನ್ನ ಅಭಿಪ್ರಾಯ.

01136004a ಆಯುಧಾಗಾರಮಾದೀಪ್ಯ ದಗ್ಧ್ವಾ ಚೈವ ಪುರೋಚನಂ।
01136004c ಷಟ್ಪ್ರಾಣಿನೋ ನಿಧಾಯೇಹ ದ್ರವಾಮೋಽನಭಿಲಕ್ಷಿತಾಃ।।

ಆಯುಧಾಗರಕ್ಕೆ ಬೆಂಕಿಯನ್ನಿಟ್ಟು ಪುರೋಚನನನ್ನೂ ಸುಟ್ಟು ಬಿಡೋಣ. ಆರು ಜನರನ್ನು ಇಲ್ಲಿ ಇರಿಸಿ, ನಾವು ಯಾರಿಗೂ ಕಾಣಿಸದ ಹಾಗೆ ತಪ್ಪಿಸಿಕೊಳ್ಳೋಣ.”

01136005a ಅಥ ದಾನಾಪದೇಶೇನ ಕುಂತೀ ಬ್ರಾಹ್ಮಣಭೋಜನಂ।
01136005c ಚಕ್ರೇ ನಿಶಿ ಮಹದ್ರಾಜನ್ನಾಜಗ್ಮುಸ್ತತ್ರ ಯೋಷಿತಃ।।

ರಾಜನ್! ಆಗ ದಾನದ ನೆಪದಿಂದ ಕುಂತಿಯು ಒಂದು ರಾತ್ರಿ ಬ್ರಾಹ್ಮಣರಿಗೆ ಮಹಾ ಭೋಜನವನ್ನು ನಿಯೋಜಿಸಿದಳು.

01136006a ತಾ ವಿಹೃತ್ಯ ಯಥಾಕಾಮಂ ಭುಕ್ತ್ವಾ ಪೀತ್ವಾ ಚ ಭಾರತ।
01136006c ಜಗ್ಮುರ್ನಿಶಿ ಗೃಹಾನೇವ ಸಮನುಜ್ಞಾಪ್ಯ ಮಾಧವೀಂ।।

ಭಾರತ! ಬಂದಿದ್ದ ಸ್ತ್ರೀಯರು ಯಥೇಚ್ಛವಾಗಿ ತಿಂದು ಕುಡಿದು ವಿಹರಿಸಿದರು. ನಂತರ ಮಾಧವಿಯ ಅನುಜ್ಞೆಯನ್ನು ಪಡೆದು ತಮ್ಮ ತಮ್ಮ ಮನೆಗಳಿಗೆ ತೆರಳಿದರು.

01136007a ನಿಷಾದೀ ಪಂಚಪುತ್ರಾ ತು ತಸ್ಮಿನ್ಭೋಜ್ಯೇ ಯದೃಚ್ಛಯಾ।
01136007c ಅನ್ನಾರ್ಥಿನೀ ಸಮಭ್ಯಾಗಾತ್ಸಪುತ್ರಾ ಕಾಲಚೋದಿತಾ।।

ಅನ್ನವನ್ನು ಬೇಡಿಕೊಂಡು ಕಾಲಚೋದಿತ ನಿಷಾದಿಯೋರ್ವಳು ತನ್ನ ಐವರು ಪುತ್ರರೊಂದಿಗೆ ಆ ಭೋಜನಕ್ಕೆ ಬಂದಿದ್ದಳು.

01136008a ಸಾ ಪೀತ್ವಾ ಮದಿರಾಂ ಮತ್ತಾ ಸಪುತ್ರಾ ಮದವಿಹ್ವಲಾ।
01136008c ಸಹ ಸರ್ವೈಃ ಸುತೈ ರಾಜಂಸ್ತಸ್ಮಿನ್ನೇವ ನಿವೇಶನೇ।
01136008e ಸುಷ್ವಾಪ ವಿಗತಜ್ಞಾನಾ ಮೃತಕಲ್ಪಾ ನರಾಧಿಪ।।

ಅವಳು ಮತ್ತು ಅವಳ ಪುತ್ರರು ಮದಿರವನ್ನು ಕುಡಿದು ಅಮಲಿನಿಂದ ಮದವಿಹ್ವಲರಾದರು. ರಾಜನ್! ಅವರೆಲ್ಲರೂ ಮಕ್ಕಳೂ ಕೂಡಿ ಅಲ್ಲಿಯೇ ಉಳಿದರು. ನರಾಧಿಪ! ಅವರು ಸತ್ತವರಂತೆ ಹೊರಗಿನ ಜ್ಞಾನವೇ ಇಲ್ಲದೇ ಮಲಗಿದ್ದರು.

01136009a ಅಥ ಪ್ರವಾತೇ ತುಮುಲೇ ನಿಶಿ ಸುಪ್ತೇ ಜನೇ ವಿಭೋ।
01136009c ತದುಪಾದೀಪಯದ್ಭೀಮಃ ಶೇತೇ ಯತ್ರ ಪುರೋಚನಃ।।

ವಿಭೋ! ಆಗ ಭಿರುಗಾಳಿ ಬೀಸುತ್ತಿರಲು ಜನರೆಲ್ಲ ರಾತ್ರಿ ಮಲಗಿರಲು ಭೀಮನು ಪುರೋಚನನು ಮಲಗಿದ್ದಲ್ಲಿ ಬೆಂಕಿಯನ್ನಿಟ್ಟನು.

01136010a ತತಃ ಪ್ರತಾಪಃ ಸುಮಹಾಂ ಶಬ್ಧಶ್ಚೈವ ವಿಭಾವಸೋಃ।
01136010c ಪ್ರಾದುರಾಸೀತ್ತದಾ ತೇನ ಬುಬುಧೇ ಸ ಜನವ್ರಜಃ।।

ಆಗ ಜೋರಾಗಿ ಉರಿಯುತ್ತಿರುವ ಬೆಂಕಿಯ ಶಬ್ಧದಿಂದ ಜನರೆಲ್ಲರಿಗೂ ಎಚ್ಚರವಾಯಿತು.

01136011 ಪೌರಾ ಊಚುಃ।
01136011a ದುರ್ಯೋಧನಪ್ರಯುಕ್ತೇನ ಪಾಪೇನಾಕೃತಬುದ್ಧಿನಾ।
01136011c ಗೃಹಮಾತ್ಮವಿನಾಶಾಯ ಕಾರಿತಂ ದಾಹಿತಂ ಚ ಯತ್।।

ಪೌರರು ಹೇಳಿದರು: “ದುರ್ಯೋಧನನ ಆಜ್ಞೆಯಂತೆ ಆ ಪಾಪಿ ಅಕೃತಬುದ್ಧಿಯು ಈ ಮನೆಯನ್ನು ಕಟ್ಟಿ ತಾನೇ ಅದರಲ್ಲಿ ಸುಟ್ಟುಹೋದ.

01136012a ಅಹೋ ಧಿಗ್ಧೃತರಾಷ್ಟ್ರಸ್ಯ ಬುದ್ಧಿರ್ನಾತಿಸಮಂಜಸೀ।
01136012c ಯಃ ಶುಚೀನ್ಪಾಂಡವಾನ್ಬಾಲಾನ್ದಾಹಯಾಮಾಸ ಮಂತ್ರಿಣಾ।।

ಮಂತ್ರಿಗಳ ಮೂಲಕ ಬಾಲಕ ಶುದ್ಧ ಪಾಂಡವರನ್ನು ಸುಟ್ಟುಹಾಕಿದ ಧೃತರಾಷ್ಟ್ರನ ಕೆಟ್ಟ ಬುದ್ಧಿಗೆ ಧಿಕ್ಕಾರ!

01136013a ದಿಷ್ಟ್ಯಾ ತ್ವಿದಾನೀಂ ಪಾಪಾತ್ಮಾ ದಗ್ಧೋಽಯಮತಿದುರ್ಮತಿಃ।
01136013c ಅನಾಗಸಃ ಸುವಿಶ್ವಸ್ತಾನ್ಯೋ ದದಾಹ ನರೋತ್ತಮಾನ್।।

ವಿಶ್ವಾಸದಿಂದಿದ್ದ ಆ ಮುಗ್ಧ ನರೋತ್ತಮರನ್ನು ಸುಡುವುದರೊಂದಿಗೆ ಆ ಅತಿದುರ್ಮತಿ ಪಾಪಾತ್ಮನೂ ಸುಟ್ಟು ಹೋಗಿದ್ದುದು ಒಳ್ಳೆಯದೇ ಆಯಿತು.””

01136014 ವೈಶಂಪಾಯನ ಉವಾಚ।
01136014a ಏವಂ ತೇ ವಿಲಪಂತಿ ಸ್ಮ ವಾರಣಾವತಕಾ ಜನಾಃ।
01136014c ಪರಿವಾರ್ಯ ಗೃಹಂ ತಚ್ಚ ತಸ್ಥೂ ರಾತ್ರೌ ಸಮಂತತಃ।।

ವೈಶಂಪಾಯನನು ಹೇಳಿದನು: “ಆ ರಾತ್ರಿ ಮನೆಯನ್ನು ಸುತ್ತುವರೆದಿದ್ದ ವಾರಣಾವತದ ಜನರು ಈ ರೀತಿ ವಿಲಪಿಸಿದರು.

01136015a ಪಾಂಡವಾಶ್ಚಾಪಿ ತೇ ರಾಜನ್ಮಾತ್ರಾ ಸಹ ಸುದುಃಖಿತಾಃ।
01136015c ಬಿಲೇನ ತೇನ ನಿರ್ಗತ್ಯ ಜಗ್ಮುರ್ಗೂಢಮಲಕ್ಷಿತಾಃ।।

ರಾಜನ್! ದುಃಖಿತ ಪಾಂಡವರು ತಮ್ಮ ತಾಯಿಯೊಂದಿಗೆ ಬಿಲದ ಮೂಲಕ ಹೊರಟು ಗುಟ್ಟಾಗಿ ಯಾರಿಗೂ ಕಾಣದಹಾಗೆ ಹೋದರು.

01136016a ತೇನ ನಿದ್ರೋಪರೋಧೇನ ಸಾಧ್ವಸೇನ ಚ ಪಾಂಡವಾಃ। 01136016c ನ ಶೇಕುಃ ಸಹಸಾ ಗಂತುಂ ಸಹ ಮಾತ್ರಾ ಪರಂತಪಾಃ।।

ಆದರೆ ನಿದ್ದೆಯು ಕಡಿಮೆಯಾಗಿದ್ದುದರಿಂದ ಮತ್ತು ಭಯದಿಂದ ತಾಯಿಯೊಂದಿಗಿದ್ದ ಪರಂತಪ ಪಾಂಡವರಿಗೆ ಬೇಗ ಬೇಗ ಹೋಗಲು ಸಾಧ್ಯವಾಗಲಿಲ್ಲ.

01136017a ಭೀಮಸೇನಸ್ತು ರಾಜೇಂದ್ರ ಭೀಮವೇಗಪರಾಕ್ರಮಃ।
01136017c ಜಗಾಮ ಭ್ರಾತೄನಾದಾಯ ಸರ್ವಾನ್ಮಾತರಮೇವ ಚ।।

ರಾಜೇಂದ್ರ! ಆಗ ಭೀಮವೇಗಪರಾಕ್ರಮಿ ಭೀಮಸೇನನು ತಾಯಿಯನ್ನೂ ಮತ್ತು ಭ್ರಾತೃಗಳೆಲ್ಲರನ್ನೂ ಎತ್ತಿಕೊಂಡು ನಡೆಯತೊಡಗಿದನು.

01136018a ಸ್ಕಂಧಮಾರೋಪ್ಯ ಜನನೀಂ ಯಮಾವಂಕೇನ ವೀರ್ಯವಾನ್।
01136018c ಪಾರ್ಥೌ ಗೃಹೀತ್ವಾ ಪಾಣಿಭ್ಯಾಂ ಭ್ರಾತರೌ ಸುಮಹಾಬಲೌ।।

ಆ ವೀರನು ತಾಯಿಯನ್ನು ಭುಜದಮೇಲೇರಿಸಿಕೊಂಡನು, ಯಮಳರನ್ನು ಸೊಂಟದ ಮೇಲಿರಿಸಿಕೊಂಡನು, ಮತ್ತು ಮಹಾಬಲಶಾಲಿ ಪಾರ್ಥರೀರ್ವರನ್ನೂ ಕೈಗಳಲ್ಲಿ ಎತ್ತಿ ಹಿಡಿದನು.

01136019a ತರಸಾ ಪಾದಪಾನ್ಭಂಜನ್ಮಹೀಂ ಪದ್ಭ್ಯಾಂ ವಿದಾರಯನ್।
01136019c ಸ ಜಗಾಮಾಶು ತೇಜಸ್ವೀ ವಾತರಂಹಾ ವೃಕೋದರಃ।।

ತನ್ನ ವೇಗದಿಂದ ಮರಗಳನ್ನು ಬೀಳಿಸಿದನು ಮತ್ತು ತನ್ನ ಹೆಜ್ಜೆಗಳಿಂದ ನೆಲವನ್ನು ತುಳಿದು ತತ್ತರಿಸಿದನು. ಈ ರೀತಿ ತೇಜಸ್ವಿ ವೃಕೋದರನು ಭಿರುಗಾಳಿಯಂತೆ ಮುನ್ನುಗ್ಗಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹದಾಹಪರ್ವಣಿ ಜತುಗೃಹದಾಹೇ ಷಟ್‌ತ್ರಿಂಶದಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹದಾಹ ಪರ್ವದಲ್ಲಿ ಜತುಗೃಹದಾಹ ಎನ್ನುವ ನೂರಾಮೂವತ್ತಾರನೆಯ ಅಧ್ಯಾಯವು.