ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಜತುಗೃಹದಾಹ ಪರ್ವ
ಅಧ್ಯಾಯ 135
ಸಾರ
ವಿದುರನ ಸ್ನೇಹಿತ ಖನಕನು ಬಂದು ಅರಗಿನ ಮನೆಯಿಂದ ಕಾಡಿಗೆ ತಪ್ಪಿಸಿಕೊಂಡು ಹೋಗಲು ಸುರಂಗವನ್ನು ತೋಡುವುದು (1-21).
01135001 ವೈಶಂಪಾಯನ ಉವಾಚ।
01135001a ವಿದುರಸ್ಯ ಸುಹೃತ್ಕಶ್ಚಿತ್ಖನಕಃ ಕುಶಲಃ ಕ್ವ ಚಿತ್।
01135001c ವಿವಿಕ್ತೇ ಪಾಂಡವಾನ್ರಾಜನ್ನಿದಂ ವಚನಮಬ್ರವೀತ್।।
ವೈಶಂಪಾಯನನು ಹೇಳಿದನು: “ರಾಜನ್! ಒಮ್ಮೆ ವಿದುರನ ಓರ್ವ ಸ್ನೇಹಿತ ಖನಕನು ಪಾಂಡವರು ಒಬ್ಬರೇ ಇರುವಾಗ ಹೇಳಿದನು:
01135002a ಪ್ರಹಿತೋ ವಿದುರೇಣಾಸ್ಮಿ ಖನಕಃ ಕುಶಲೋ ಭೃಶಂ।
01135002c ಪಾಂಡವಾನಾಂ ಪ್ರಿಯಂ ಕಾರ್ಯಮಿತಿ ಕಿಂ ಕರವಾಣಿ ವಃ।।
“ನಾನೊಬ್ಬ ಅಗೆಯುವುದರಲ್ಲಿ ಕುಶಲ ಖನಕ. ವಿದುರನು ಪಾಂಡವರಿಗೆ ಒಳ್ಳೆಯದನ್ನು ಮಾಡಲೋಸುಗ ನನ್ನನ್ನು ಕಳುಹಿಸಿದ್ದಾನೆ. ನಿಮಗೆ ನಾನು ಏನು ಮಾಡಲಿ?
01135003a ಪ್ರಚ್ಛನ್ನಂ ವಿದುರೇಣೋಕ್ತಃ ಶ್ರೇಯಸ್ತ್ವಮಿಹ ಪಾಂಡವಾನ್।
01135003c ಪ್ರತಿಪಾದಯ ವಿಶ್ವಾಸಾದಿತಿ ಕಿಂ ಕರವಾಣಿ ವಃ।।
ಪಾಂಡವರಿಗೆ ಶ್ರೇಯಸ್ಸುಂಟಾಗುವಂತೆ ಮಾಡು, ಅವರಿಗೆ ವಿಶ್ವಾಸವನ್ನು ನೀಡು ಎಂದು ವಿದುರನು ನನಗೆ ಗುಟ್ಟಿನಲ್ಲಿ ಹೇಳಿದನು. ನಿಮಗೆ ನಾನು ಏನು ಮಾಡಲಿ?
01135004a ಕೃಷ್ಣಪಕ್ಷೇ ಚತುರ್ದಶ್ಯಾಂ ರಾತ್ರಾವಸ್ಯ ಪುರೋಚನಃ।
01135004c ಭವನಸ್ಯ ತವ ದ್ವಾರಿ ಪ್ರದಾಸ್ಯತಿ ಹುತಾಶನಂ।।
ಈ ಕೃಷ್ಣಪಕ್ಷದ ಚತುರ್ದಶಿಯ ರಾತ್ರಿ ಪುರೋಚನನು ನಿಮ್ಮ ಈ ಭವನದ ದ್ವಾರದಲ್ಲಿ ಬೆಂಕಿಯನ್ನು ಹಚ್ಚುವವನಿದ್ದಾನೆ.
01135005a ಮಾತ್ರಾ ಸಹ ಪ್ರದಗ್ಧವ್ಯಾಃ ಪಾಂಡವಾಃ ಪುರುಷರ್ಷಭಾಃ।
01135005c ಇತಿ ವ್ಯವಸಿತಂ ಪಾರ್ಥ ಧಾರ್ತರಾಷ್ಟ್ರಸ್ಯ ಮೇ ಶ್ರುತಂ।।
ಪಾರ್ಥ! ಧಾರ್ತರಾಷ್ಟ್ರನು ಪುರುಷರ್ಷಭ ಪಾಂಡವರನ್ನು ಅವರ ಮಾತೆಯ ಸಹಿತ ಸುಟ್ಟುಹಾಕಲು ನಿರ್ಧರಿಸಿದ್ದಾನೆ ಎಂದು ಕೇಳಿದ್ದೇನೆ.
01135006a ಕಿಂ ಚಿಚ್ಚ ವಿದುರೇಣೋಕ್ತೋ ಮ್ಲೇಚ್ಛವಾಚಾಸಿ ಪಾಂಡವ।
01135006c ತ್ವಯಾ ಚ ತತ್ತಥೇತ್ಯುಕ್ತಮೇತದ್ವಿಶ್ವಾಸಕಾರಣಂ।।
ಪಾಂಡವ! ವಿದುರನು ನಿನ್ನಲ್ಲಿ ಮ್ಲೇಚ್ಛ ಭಾಷೆಯಲ್ಲಿ ಏನನ್ನೋ ಹೇಳಿದ್ದನು. ಮತ್ತು ನೀನು ಅದಕ್ಕೆ ಹಾಗೆಯೇ ಆಗಲಿ ಎಂದು ಹೇಳಿದ್ದೆ. ಈ ವಿಷಯವೇ ನಿನಗೆ ನನ್ನಲ್ಲಿ ವಿಶ್ವಾಸವನ್ನು ತರಬೇಕು.”
01135007a ಉವಾಚ ತಂ ಸತ್ಯಧೃತಿಃ ಕುಂತೀಪುತ್ರೋ ಯುಧಿಷ್ಠಿರಃ।
01135007c ಅಭಿಜಾನಾಮಿ ಸೌಮ್ಯ ತ್ವಾಂ ಸುಹೃದಂ ವಿದುರಸ್ಯ ವೈ।।
01135008a ಶುಚಿಮಾಪ್ತಂ ಪ್ರಿಯಂ ಚೈವ ಸದಾ ಚ ದೃಢಭಕ್ತಿಕಂ।
01135008c ನ ವಿದ್ಯತೇ ಕವೇಃ ಕಿಂ ಚಿದಭಿಜ್ಞಾನಪ್ರಯೋಜನಂ।।
ಆಗ ಅವನಿಗೆ ಸತ್ಯಧೃತಿ ಕುಂತಿಪುತ್ರ ಯುಧಿಷ್ಠಿರನು ಹೇಳಿದನು: “ಸೌಮ್ಯ! ನಿನ್ನನ್ನು ನಾನು ವಿದುರನ ಸುಹೃದನೆಂದೂ, ಶುಚಿಯಾದವನೆಂದೂ, ದೃಢಭಕ್ತಿಯುಳ್ಳವನೆಂದೂ, ಪ್ರಿಯಕರನೆಂದೂ ಗುರುತಿಸುತ್ತೇನೆ. ಕವಿಯಿಂದ ಯಾವುದೇ ರೀತಿಯ ಅಭಿಜ್ಞಾನವನ್ನು ಬಳಸುವ ಅವಶ್ಯಕತೆಯಿಲ್ಲ.
01135009a ಯಥಾ ನಃ ಸ ತಥಾ ನಸ್ತ್ವಂ ನಿರ್ವಿಶೇಷಾ ವಯಂ ತ್ವಯಿ।
01135009c ಭವತಃ ಸ್ಮ ಯಥಾ ತಸ್ಯ ಪಾಲಯಾಸ್ಮಾನ್ಯಥಾ ಕವಿಃ।।
ಅವನು ಹೇಗೆ ನಮ್ಮವನೋ ನೀನೂ ಕೂಡ ನಮ್ಮವನೇ; ನಿನ್ನನ್ನು ನಮ್ಮಲ್ಲಿಯೇ ಒಬ್ಬನೆಂದು ಪರಿಗಣಿಸುತ್ತೇವೆ. ನಾವು ಹೇಗೆ ಅವನಿಗೆ ಸೇರಿದ್ದೇವೋ ಹಾಗೆ ನಿನಗೂ ಸೇರಿದ್ದೇವೆ. ಆ ಕವಿಯು ನಮ್ಮನ್ನು ಪಾಲಿಸುವಂತೆ ಪಾಲಿಸು.
01135010a ಇದಂ ಶರಣಮಾಗ್ನೇಯಂ ಮದರ್ಥಮಿತಿ ಮೇ ಮತಿಃ।
01135010c ಪುರೋಚನೇನ ವಿಹಿತಂ ಧಾರ್ತರಾಷ್ಟ್ರಸ್ಯ ಶಾಸನಾತ್।।
ಧಾರ್ತರಾಷ್ಟ್ರನ ಶಾಸನದಂತೆ ಪುರೋಚನನು ನನಗಾಗಿ ಈ ಅಗ್ನಿಜಾಲದ ಮನೆಯನ್ನು ನಿರ್ಮಿಸಿದ್ದಾನೆ ಎನ್ನುವುದು ವಿಹಿತವಾಗಿದೆ.
01135011a ಸ ಪಾಪಃ ಕೋಶವಾಂಶ್ಚೈವ ಸಸಹಾಯಶ್ಚ ದುರ್ಮತಿಃ।
01135011c ಅಸ್ಮಾನಪಿ ಚ ದುಷ್ಟಾತ್ಮಾ ನಿತ್ಯಕಾಲಂ ಪ್ರಬಾಧತೇ।।
ಆ ಪಾಪಿಯಲ್ಲಿ ಕೋಶವೂ ಇದೆ ಸಹಾಯಕರೂ ಇದ್ದಾರೆ. ಆ ದುರ್ಮತಿ ದುಷ್ಟಾತ್ಮನು ಯಾವಾಗಲೂ ನಮ್ಮನ್ನು ಬಾಧಿಸಲು ನಿರತನಾಗಿದ್ದಾನೆ.
01135012a ಸ ಭವಾನ್ಮೋಕ್ಷಯತ್ವಸ್ಮಾನ್ಯತ್ನೇನಾಸ್ಮಾದ್ಧುತಾಶನಾತ್।
01135012c ಅಸ್ಮಾಸ್ವಿಹ ಹಿ ದಗ್ಧೇಷು ಸಕಾಮಃ ಸ್ಯಾತ್ಸುಯೋಧನಃ।।
ನಿನ್ನೆಲ್ಲ ಪ್ರಯತ್ನಗಳಿಂದ ಬೆಂಕಿಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡು. ನಾವು ಸುಟ್ಟುಹೋದರೆ ಸುಯೋಧನನು ಬಯಸಿದಂತೆಯೇ ಆಗುತ್ತದೆ.
01135013a ಸಮೃದ್ಧಮಾಯುಧಾಗಾರಮಿದಂ ತಸ್ಯ ದುರಾತ್ಮನಃ।
01135013c ವಪ್ರಾಂತೇ ನಿಷ್ಪ್ರತೀಕಾರಮಾಶ್ಲಿಷ್ಯೇದಂ ಕೃತಂ ಮಹತ್।।
ಇದೋ ಅಲ್ಲಿರುವುದು ಆ ದುರಾತ್ಮನ ಸಮೃದ್ಧ ಆಯುಧಾಗಾರ. ಈ ವಿಶಾಲ ಅರಮನೆಯನ್ನು ಅದರ ಗೋಡೆಗೆ ಹೊಂದಿಕೊಂಡೇ ಕಟ್ಟಿಸಿದ್ದಾರೆ.
01135014a ಇದಂ ತದಶುಭಂ ನೂನಂ ತಸ್ಯ ಕರ್ಮ ಚಿಕೀರ್ಷಿತಂ।
01135014c ಪ್ರಾಗೇವ ವಿದುರೋ ವೇದ ತೇನಾಸ್ಮಾನನ್ವಬೋಧಯತ್।।
ಈ ಅಶುಭ ಕರ್ಮದಕುರಿತು ವಿದುರನಿಗೆ ಮೊದಲೇ ತಿಳಿದಿತ್ತು. ಆದುದರಿಂದಲೇ ಅವನು ನಮಗೆ ಎಚ್ಚರಿಕೆಯನ್ನು ನೀಡಿದ್ದ.
01135015a ಸೇಯಮಾಪದನುಪ್ರಾಪ್ತಾ ಕ್ಷತ್ತಾ ಯಾಂ ದೃಷ್ಟವಾನ್ಪುರಾ।
01135015c ಪುರೋಚನಸ್ಯಾವಿದಿತಾನಸ್ಮಾಂಸ್ತ್ವಂ ವಿಪ್ರಮೋಚಯ।।
ಮೊದಲೇ ಕ್ಷತ್ತನು ವೀಕ್ಷಿಸಿದ್ದ ಆಪತ್ತು ನಮಗೆ ಈಗ ಬಂದಾಗಿದೆ. ಪುರೋಚನನಿಗೆ ತಿಳಿಯದ ರೀತಿಯಲ್ಲಿ ನಾವು ಇದರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡು.”
01135016a ಸ ತಥೇತಿ ಪ್ರತಿಶ್ರುತ್ಯ ಖನಕೋ ಯತ್ನಮಾಸ್ಥಿತಃ।
01135016c ಪರಿಖಾಮುತ್ಕಿರನ್ನಾಮ ಚಕಾರ ಸುಮಹದ್ಬಿಲಂ।।
ಹಾಗೆಯೇ ಆಗಲೆಂದು ಹೇಳಿ ಖನಕನು ತನ್ನ ಕೆಲಸದಲ್ಲಿ ನಿರತನಾದನು. ಅವನು ಒಂದು ದೊಡ್ಡ ಗುಂಡಿಯನ್ನು ತೆಗೆದು ಅದರಲ್ಲಿ ವಿಶಾಲ ಬಿಲವನ್ನು ಅಗೆದನು.
01135017a ಚಕ್ರೇ ಚ ವೇಶ್ಮನಸ್ತಸ್ಯ ಮಧ್ಯೇ ನಾತಿಮಹನ್ಮುಖಂ।
01135017c ಕಪಾಟಯುಕ್ತಮಜ್ಞಾತಂ ಸಮಂ ಭೂಮ್ಯಾ ಚ ಭಾರತ।।
ಭಾರತ! ಅವನು ಅದನ್ನು ಮನೆಯ ಮಧ್ಯದಲ್ಲಿ ಅತಿ ದೊಡ್ಡ ಬಾಯಿಯಿಲ್ಲದೇ ನಿರ್ಮಿಸಿದನು. ಅದರ ಬಾಯನ್ನು ಭೂಮಿಗೆ ಸಮಾನ ಹಲಗೆಗಳಿಂದ ಮುಚ್ಚಿದನು.
01135018a ಪುರೋಚನಭಯಾಚ್ಚೈವ ವ್ಯದಧಾತ್ಸಂವೃತಂ ಮುಖಂ।
01135018c ಸ ತತ್ರ ಚ ಗೃಹದ್ವಾರಿ ವಸತ್ಯಶುಭಧೀಃ ಸದಾ।।
ಸದಾ ಅವರ ಗೃಹದ್ವಾರದಲ್ಲಿಯೇ ವಾಸಿಸುತ್ತಿದ್ದ ಅಶುಭ ಪುರೋಚನನ ಭಯದಿಂದ ಅವರು ಅದರ ಬಾಯನ್ನು ಚೆನ್ನಾಗಿ ಮುಚ್ಚಿದರು.
01135019a ತತ್ರ ತೇ ಸಾಯುಧಾಃ ಸರ್ವೇ ವಸಂತಿ ಸ್ಮ ಕ್ಷಪಾಂ ನೃಪ।
01135019c ದಿವಾ ಚರಂತಿ ಮೃಗಯಾಂ ಪಾಂಡವೇಯಾ ವನಾದ್ವನಂ।।
ನೃಪ! ಪಾಂಡವೇಯರೆಲ್ಲರೂ ಆಯುಧಗಳ ಜೊತೆ ಆ ಬಿಲದಲ್ಲಿಯೇ ಮಲಗುತ್ತಿದ್ದರು. ಹಗಲಿನಲ್ಲಿ ಅವರು ಬೇಟೆಗೆಂದು ವನದಿಂದ ವನಕ್ಕೆ ಸಂಚರಿಸುತ್ತಿದ್ದರು.
01135020a ವಿಶ್ವಸ್ತವದವಿಶ್ವಸ್ತಾ ವಂಚಯಂತಃ ಪುರೋಚನಂ।
01135020c ಅತುಷ್ಟಾಸ್ತುಷ್ಟವದ್ರಾಜನ್ನೂಷುಃ ಪರಮದುಃಖಿತಾಃ।।
ಅವರು ಅಲ್ಲಿ ವಿಶ್ವಾಸವಿಲ್ಲದವರಾದರೂ ವಿಶ್ವಾಸವಿದ್ದವರಂತೆ, ಅಸಂತುಷ್ಟರಾಗಿದ್ದರೂ ಸಂತುಷ್ಟರಾದವರಂತೆ ಪುರೋಚನನನ್ನು ವಂಚಿಸಿ ಪರಮದುಃಖಿತರಾಗಿ ವಾಸಿಸುತ್ತಿದ್ದರು.
01135021a ನ ಚೈನಾನನ್ವಬುಧ್ಯಂತ ನರಾ ನಗರವಾಸಿನಃ।
01135021c ಅನ್ಯತ್ರ ವಿದುರಾಮಾತ್ಯಾತ್ತಸ್ಮಾತ್ಖನಕಸತ್ತಮಾತ್।।
ವಿದುರನ ಅಮಾತ್ಯ ಖನಕಸತ್ತಮನನ್ನು ಬಿಟ್ಟು ನಗರವಾಸಿಗಳಲ್ಲಿ ಬೇರೆ ಯಾರೂ ಅವರನ್ನು ಅರ್ಥಮಾಡಿಕೊಳ್ಳಲಿಲ್ಲ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹದಾಹಪರ್ವಣಿ ಜತುಗೃಹವಾಸೇ ಪಂಚತ್ರಿಂಶದಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹದಾಹ ಪರ್ವದಲ್ಲಿ ಜತುಗೃಹವಾಸ ಎನ್ನುವ ನೂರಾಮೂವತ್ತೈದನೆಯ ಅಧ್ಯಾಯವು.