ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಜತುಗೃಹದಾಹ ಪರ್ವ
ಅಧ್ಯಾಯ 134
ಸಾರ
ವಾರಣಾವತದಲ್ಲಿ ಪಾಂಡವರ ಸ್ವಾಗತ, ಸತ್ಕಾರ; ಪುರೋಚನನಿಂದ ಉಡುಗೊರೆಯಾಗಿ ಪಡೆದ ಅರಗಿನ ಮನೆಯ ಪ್ರವೇಶ (1-12). ಸಂಶಯಪಟ್ಟ ಯುಧಿಷ್ಠಿರ-ಭೀಮರ ಸಂವಾದ (13-28).
01134001 ವೈಶಂಪಾಯನ ಉವಾಚ।
01134001a ತತಃ ಸರ್ವಾಃ ಪ್ರಕೃತಯೋ ನಗರಾದ್ವಾರಣಾವತಾತ್।
01134001c ಸರ್ವಮಂಗಲಸಂಯುಕ್ತಾ ಯಥಾಶಾಸ್ತ್ರಮತಂದ್ರಿತಾಃ।।
01134002a ಶ್ರುತ್ವಾಗತಾನ್ಪಾಂಡುಪುತ್ರಾನ್ನಾನಾಯಾನೈಃ ಸಹಸ್ರಶಃ।
01134002c ಅಭಿಜಗ್ಮುರ್ನರಶ್ರೇಷ್ಠಾಂ ಶ್ರುತ್ವೈವ ಪರಯಾ ಮುದಾ।।
ವೈಶಂಪಾಯನನು ಹೇಳಿದನು: “ವಾರಣಾವತದ ಸರ್ವ ಪೌರಜನರೂ ನರಶ್ರೇಷ್ಠ ಪಾಂಡುಪುತ್ರರು ಬಂದಿದ್ದಾರೆಂದು ಕೇಳಿದೊಡನೆ ಅತಿ ಸಂತೋಷದಿಂದ ನಾನಾ ವಾಹನಗಳಲ್ಲಿ ಸಹಸ್ರಾರು ಸಂಖ್ಯೆಗಳಲ್ಲಿ ಶಾಸ್ತ್ರಗಳಲ್ಲಿ ಹೇಳಿದ ಎಲ್ಲ ಮಂಗಲ ವಸ್ತುಗಳನ್ನು ತೆಗೆದುಕೊಂಡು ನಗರದಿಂದ ಹೊರಬಂದರು.
01134003a ತೇ ಸಮಾಸಾದ್ಯ ಕೌಂತೇಯಾನ್ವಾರಣಾವತಕಾ ಜನಾಃ।
01134003c ಕೃತ್ವಾ ಜಯಾಶಿಷಃ ಸರ್ವೇ ಪರಿವಾರ್ಯೋಪತಸ್ಥಿರೇ।।
ವಾರಣಾವತಕ ಜನರು ಕೌಂತೇಯರನ್ನು ತಲುಪಿ ಸರ್ವರೂ ಅವರನ್ನು ಗೌರವದಿಂದ ಸುತ್ತುವರೆದು ಜಯಘೋಷಗೈದರು.
01134004a ತೈರ್ವೃತಃ ಪುರುಷವ್ಯಾಘ್ರೋ ಧರ್ಮರಾಜೋ ಯುಧಿಷ್ಠಿರಃ।
01134004c ವಿಬಭೌ ದೇವಸಂಕಾಶೋ ವಜ್ರಪಾಣಿರಿವಾಮರೈಃ।।
ಅವರಿಂದ ಆವೃತ ಪುರುಷವ್ಯಾಘ್ರ ಧರ್ಮರಾಜ ಯುಧಿಷ್ಠಿರನು ಅಮರರ ಮಧ್ಯೆ ದೇವಸಂಕಾಶ ವಜ್ರಪಾಣಿಯಂತೆ ಕಂಗೊಳಿಸಿದನು.
01134005a ಸತ್ಕೃತಾಸ್ತೇ ತು ಪೌರೈಶ್ಚ ಪೌರಾನ್ಸತ್ಕೃತ್ಯ ಚಾನಘಾಃ।
01134005c ಅಲಂಕೃತಂ ಜನಾಕೀರ್ಣಂ ವಿವಿಶುರ್ವಾರಣಾವತಂ।।
ಪೌರರಿಂದ ಸತ್ಕೃತರಾದ ಮತ್ತು ಪೌರರನ್ನು ಸತ್ಕರಿಸಿದ ಆ ಅನಘರು ಅಲಂಕೃತ ಜನಸಂಕೀರ್ಣ ವಾರಣಾವತವನ್ನು ಪ್ರವೇಶಿಸಿದರು.
01134006a ತೇ ಪ್ರವಿಶ್ಯ ಪುರಂ ವೀರಾಸ್ತೂರ್ಣಂ ಜಗ್ಮುರಥೋ ಗೃಹಾನ್।
01134006c ಬ್ರಾಹ್ಮಣಾನಾಂ ಮಹೀಪಾಲ ರತಾನಾಂ ಸ್ವೇಷು ಕರ್ಮಸು।।
01134007a ನಗರಾಧಿಕೃತಾನಾಂ ಚ ಗೃಹಾಣಿ ರಥಿನಾಂ ತಥಾ।
01134007c ಉಪತಸ್ಥುರ್ನರಶ್ರೇಷ್ಠಾ ವೈಶ್ಯಶೂದ್ರಗೃಹಾನಪಿ।।
ಮಹೀಪಾಲ! ಪುರವನ್ನು ಪ್ರವೇಶಿಸಿದ ಕೂಡಲೇ ಆ ವೀರರು ತಮ್ಮ ಕರ್ಮಗಳಲ್ಲಿ ನಿರತ ಬ್ರಾಹ್ಮಣರ ಮನೆಗಳಿಗೆ ಭೆಟ್ಟಿಯಿಟ್ಟರು. ಹಾಗೆಯೇ ನಗರದ ಅಧಿಕಾರಿಗಳ ಮತ್ತು ರಥಿಗಳ ಮನೆಗಳಿಗೆ ಹೋದರು. ಈ ನರಶ್ರೇಷ್ಠರು ವೈಶ್ಯ ಮತ್ತು ಶೂದ್ರರ ಮನೆಗಳಿಗೂ ಭೆಟ್ಟಿಯನ್ನಿತ್ತರು.
01134008a ಅರ್ಚಿತಾಶ್ಚ ನರೈಃ ಪೌರೈಃ ಪಾಂಡವಾ ಭರತರ್ಷಭಾಃ।
01134008c ಜಗ್ಮುರಾವಸಥಂ ಪಶ್ಚಾತ್ಪುರೋಚನಪುರಸ್ಕೃತಾಃ।।
ಪೌರಜನರಿಂದ ಪೂಜಿಸಿಲ್ಪಟ್ಟ ನಂತರ ಭರತರ್ಷಭ ಪಾಂಡವರು ತಮ್ಮ ವಸತಿಗೃಹಕ್ಕೆ ತೆರಳಿ ಅಲ್ಲಿ ಪುರೋಚನನಿಂದ ಸ್ವಾಗತಿಸಲ್ಪಟ್ಟರು.
01134009a ತೇಭ್ಯೋ ಭಕ್ಷ್ಯಾನ್ನಪಾನಾನಿ ಶಯನಾನಿ ಶುಭಾನಿ ಚ।
01134009c ಆಸನಾನಿ ಚ ಮುಖ್ಯಾನಿ ಪ್ರದದೌ ಸ ಪುರೋಚನಃ।।
ಪುರೋಚನನು ಅವರಿಗೆ ಭಕ್ಷ್ಯಾನ್ನಗಳನ್ನೂ, ಪಾನೀಯಗಳನ್ನೂ, ಸುಂದರ ಹಾಸಿಗೆಗಳನ್ನೂ ಮತ್ತು ಮುಖ್ಯ ಆಸನಗಳನ್ನೂ ಇತ್ತನು.
01134010a ತತ್ರ ತೇ ಸತ್ಕೃತಾಸ್ತೇನ ಸುಮಹಾರ್ಹಪರಿಚ್ಛದಾಃ।
01134010c ಉಪಾಸ್ಯಮಾನಾಃ ಪುರುಷೈರೂಷುಃ ಪುರನಿವಾಸಿಭಿಃ।।
ಅಲ್ಲಿ ಅವರು ತಮ್ಮ ರಾಜಪರಿಚಾರಕರೊಂದಿಗೆ ಅವನಿಂದ ಸತ್ಕೃತರಾಗಿ ಪುರನಿವಾಸಿಗಳ ಸೇವೆಗಳೊಂದಿಗೆ ವಾಸಿಸಿದರು.
01134011a ದಶರಾತ್ರೋಷಿತಾನಾಂ ತು ತತ್ರ ತೇಷಾಂ ಪುರೋಚನಃ।
01134011c ನಿವೇದಯಾಮಾಸ ಗೃಹಂ ಶಿವಾಖ್ಯಮಶಿವಂ ತದಾ।।
ಅಲ್ಲಿ ಅವರು ಹತ್ತು ದಿನಗಳು ಇರಲಾಗಿ ಪುರೋಚನನು ಅಶುಭವಾದರೂ ಶಿವ ಎಂದು ಕರೆಯಲ್ಪಟ್ಟ ಗೃಹವನ್ನು ಉಡುಗೊರೆಯಾಗಿತ್ತನು.
01134012a ತತ್ರ ತೇ ಪುರುಷವ್ಯಾಘ್ರಾ ವಿವಿಶುಃ ಸಪರಿಚ್ಛದಾಃ।
01134012c ಪುರೋಚನಸ್ಯ ವಚನಾತ್ಕೈಲಾಸಮಿವ ಗುಹ್ಯಕಾಃ।।
ಪುರೋಚನನ ವಚನದಂತೆ ಆ ಪುರುಷವ್ಯಾಘ್ರರು ತಮ್ಮ ಪರಿಚಾರಕರೊಂದಿಗೆ ಗುಹ್ಯಕರು ಕೈಲಾಸವನ್ನು ಪ್ರವೇಶಿಸುವಂತೆ ಆ ಮನೆಯನ್ನು ಪ್ರವೇಶಿಸಿದರು.
01134013a ತತ್ತ್ವಗಾರಮಭಿಪ್ರೇಕ್ಷ್ಯ ಸರ್ವಧರ್ಮವಿಶಾರದಃ।
01134013c ಉವಾಚಾಗ್ನೇಯಮಿತ್ಯೇವಂ ಭೀಮಸೇನಂ ಯುಧಿಷ್ಠಿರಃ।
01134013e ಜಿಘ್ರನ್ಸೋಮ್ಯ ವಸಾಗಂಧಂ ಸರ್ಪಿರ್ಜತುವಿಮಿಶ್ರಿತಂ।।
ಆದರೆ ಸರ್ವಧರ್ಮವಿಶಾರದ ಯುಧಿಷ್ಠಿರನು ಆ ಮನೆಯನ್ನು ಪರೀಕ್ಷಿಸಿ ಭೀಮಸೇನನಿಗೆ “ಬೆಣ್ಣೆ ಮತ್ತು ಲಾಕ್ಷಗಳಿಂದ ಮಿಶ್ರಿತ ಕೊಬ್ಬಿನ ವಾಸನೆ ಬರುತ್ತಿರುವ ಇದು ಒಂದು ಅಗ್ನಿಜಾಲ!” ಎಂದು ಹೇಳಿದನು.
01134014a ಕೃತಂ ಹಿ ವ್ಯಕ್ತಮಾಗ್ನೇಯಮಿದಂ ವೇಶ್ಮ ಪರಂತಪ।
01134014c ಶಣಸರ್ಜರಸಂ ವ್ಯಕ್ತಮಾನೀತಂ ಗೃಹಕರ್ಮಣಿ।
01134014e ಮುಂಜಬಲ್ವಜವಂಶಾದಿ ದ್ರವ್ಯಂ ಸರ್ವಂ ಘೃತೋಕ್ಷಿತಂ।।
“ಪರಂತಪ! ಬೆಂಕಿಯಲ್ಲಿ ಸುಟ್ಟು ಭಸ್ಮಮಾಡುವುದಕ್ಕಾಗಿಯೇ ಈ ಮನೆಯನ್ನು ನಿರ್ಮಿಸಿದ್ದಾರೆ ಎನ್ನುವುದು ವ್ಯಕ್ತವಾಗುತ್ತದೆ. ಮನೆಯನ್ನು ಕಟ್ಟುವುದಕ್ಕೆ ಬಳಸಿದ ಶಣ, ಸರ್ಜ, ಗನ್ನೆ, ಹುಲ್ಲು, ತೊಗಟೆ ಮತ್ತು ಬಿದಿರು ಎಲ್ಲವನ್ನೂ ತುಪ್ಪದಲ್ಲಿ ತೋಯಿಸಿದ್ದಾರೆ ಎನ್ನುವುದೂ ವ್ಯಕ್ತವಾಗುತ್ತದೆ.
01134015a ಶಿಲ್ಪಿಭಿಃ ಸುಕೃತಂ ಹ್ಯಾಪ್ತೈರ್ವಿನೀತೈರ್ವೇಶ್ಮಕರ್ಮಣಿ।
01134015c ವಿಶ್ವಸ್ತಂ ಮಾಮಯಂ ಪಾಪೋ ದಗ್ಧುಕಾಮಃ ಪುರೋಚನಃ।।
ಅವರ ವೃತ್ತಿಯನ್ನು ಚೆನ್ನಾಗಿ ತಿಳಿದಿರುವ ಶಿಲ್ಪಿಗಳೇ ಇದನ್ನು ನಿರ್ಮಿಸಿದ್ದಾರೆ ಎನ್ನುವುದು ಸತ್ಯ. ನಾನು ನಿಶ್ಚಿಂತೆಯಿಂದಿರುವಾಗ ಪಾಪಿ ಪುರೋಚನನು ನನ್ನನ್ನು ಸುಟ್ಟುಹಾಕಲು ಬಯಸಿದ್ದಾನೆ.
01134016a ಇಮಾಂ ತು ತಾಂ ಮಹಾಬುದ್ಧಿರ್ವಿದುರೋ ದೃಷ್ಟವಾಂಸ್ತದಾ।
01134016c ಆಪದಂ ತೇನ ಮಾಂ ಪಾರ್ಥ ಸ ಸಂಬೋಧಿತವಾನ್ಪುರಾ।।
ಪಾರ್ಥ! ಇದನ್ನೇ ಆ ಮಹಾಬುದ್ಧಿ ವಿದುರನು ಮೊದಲೇ ವೀಕ್ಷಿಸಿ ಇದರ ಕುರಿತು ಎಚ್ಚರಿಕೆಯ ಮಾತುಗಳನ್ನಾಡಿದ್ದ.
01134017a ತೇ ವಯಂ ಬೋಧಿತಾಸ್ತೇನ ಬುದ್ಧವಂತೋಽಶಿವಂ ಗೃಹಂ।
01134017c ಆಚಾರ್ಯೈಃ ಸುಕೃತಂ ಗೂಢೈರ್ದುರ್ಯೋಧನವಶಾನುಗೈಃ।।
ಅವನು ಮೊದಲೇ ನಮಗೆ ಎಚ್ಚರಿಕೆ ನೀಡಿದ್ದುದರಿಂದ ಈಗ ನಮಗೆ ಈ ಮನೆಯು ಅಶುಭವಾದದ್ದು ಮತ್ತು ದುರ್ಯೋಧನನ ವಶದಲ್ಲಿದ್ದು ಅವನಿಗೆ ವಿಧೇಯರಾಗಿರುವ ಗೂಢ ಕರ್ಮಿಗಳು ಇದನ್ನು ನಿರ್ಮಿಸಿದ್ದಾರೆ ಎನ್ನುವುದು ತಿಳಿದಿದೆ.”
01134018 ಭೀಮ ಉವಾಚ।
01134018a ಯದಿದಂ ಗೃಹಮಾಗ್ನೇಯಂ ವಿಹಿತಂ ಮನ್ಯತೇ ಭವಾನ್।
01134018c ತತ್ರೈವ ಸಾಧು ಗಚ್ಛಾಮೋ ಯತ್ರ ಪೂರ್ವೋಷಿತಾ ವಯಂ।।
ಭೀಮನು ಹೇಳಿದನು: “ಈ ಮನೆಯು ಅಗ್ನಿಜಾಲವಾಗಿ ನಿರ್ಮಿತವಾಗಿದೆ ಎಂದು ನಿನ್ನ ಅಭಿಪ್ರಾಯವಾದರೆ ನಾವು ಮೊದಲೇ ವಾಸಿಸುತ್ತಿದ್ದ ಮನೆಗೆ ಹೋಗುವುದು ಒಳ್ಳೆಯದು.”
01134019 ಯುಧಿಷ್ಠಿರ ಉವಾಚ।
01134019a ಇಹ ಯತ್ತೈರ್ನಿರಾಕಾರೈರ್ವಸ್ತವ್ಯಮಿತಿ ರೋಚಯೇ।
01134019c ನಷ್ಟೈರಿವ ವಿಚಿನ್ವದ್ಭಿರ್ಗತಿಮಿಷ್ಟಾಂ ಧ್ರುವಾಮಿತಃ।।
ಯುಧಿಷ್ಠಿರನು ಹೇಳಿದನು: “ಇಲ್ಲ. ನಾವು ಏನೂ ತಿಳಿಯದವರಂತೆ ಉತ್ಸಾಹದಿಂದ, ನಾಶವಾಗುತ್ತೇವೋ ಎನ್ನುವ ಹಾಗೆ ಇಲ್ಲಿಯೇ ಇದ್ದುಕೊಂಡು ಇಲ್ಲಿಂದ ತಪ್ಪಿಸಿಕೊಳ್ಳುವ ನಿರ್ದಿಷ್ಠ ಮಾರ್ಗವನ್ನು ಹುಡುಕಬೇಕು ಎಂದು ನನಗನ್ನಿಸುತ್ತದೆ.
01134020a ಯದಿ ವಿಂದೇತ ಚಾಕಾರಮಸ್ಮಾಕಂ ಹಿ ಪುರೋಚನಃ।
01134020c ಶೀಘ್ರಕಾರೀ ತತೋ ಭೂತ್ವಾ ಪ್ರಸಹ್ಯಾಪಿ ದಹೇತ ನಃ।।
ಏಕೆಂದರೆ ಪುರೋಚನನು ನಮಗೆ ಇದೆಲ್ಲ ತಿಳಿದಿದೆ ಎಂದು ಯೋಚಿಸಿದರೆ ಶೀಘ್ರದಲ್ಲಿಯೇ ಕಾರ್ಯವೆಸಗಿ ನಮ್ಮನ್ನು ಸುಟ್ಟು ಸಾಯಿಸುತ್ತಾನೆ.
01134021a ನಾಯಂ ಬಿಭೇತ್ಯುಪಕ್ರೋಶಾದಧರ್ಮಾದ್ವಾ ಪುರೋಚನಃ।
01134021c ತಥಾ ಹಿ ವರ್ತತೇ ಮಂದಃ ಸುಯೋಧನಮತೇ ಸ್ಥಿತಃ।।
ಸುಯೋಧನನ ಅನುಮತಿಯಂತೆ ನಡೆಯುತ್ತಿರುವ ಮೂಢ ಪುರೋಚನನು ಯಾವುದೇ ರೀತಿಯ ಅಧರ್ಮ ಮತ್ತು ಉಪಕ್ರೋಶದಿಂದ ಹಿಂಜರಿಯುವುದಿಲ್ಲ.
01134022a ಅಪಿ ಚೇಹ ಪ್ರದಗ್ಧೇಷು ಭೀಷ್ಮೋಽಸ್ಮಾಸು ಪಿತಾಮಹಃ।
01134022c ಕೋಪಂ ಕುರ್ಯಾತ್ಕಿಮರ್ಥಂವಾ ಕೌರವಾನ್ಕೋಪಯೇತ ಸಃ।
01134022e ಧರ್ಮ ಇತ್ಯೇವ ಕುಪ್ಯೇತ ತಥಾನ್ಯೇ ಕುರುಪುಂಗವಾಃ।।
ನಾವು ಸುಟ್ಟು ಭಸ್ಮವಾದಾಗ ಪಿತಾಮಹ ಭೀಷ್ಮ ಅಥವಾ ಇತರ ಕೌರವರು ಕುಪಿತರಾಗುತ್ತಾರೋ ಇಲ್ಲವೋ ಎನ್ನುವುದು ಪ್ರಶ್ನೆ. ಧರ್ಮಪೂರಕವಾಗಿ ಅವನು ಮತ್ತು ಅನ್ಯ ಕುರುಪುಂಗವರು ಸಿಟ್ಟಿಗೇಳಲೂ ಬಹುದು.
01134023a ವಯಂ ತು ಯದಿ ದಾಹಸ್ಯ ಬಿಭ್ಯತಃ ಪ್ರದ್ರವೇಮ ಹಿ।
01134023c ಸ್ಪಶೈರ್ನೋ ಘಾತಯೇತ್ಸಾರ್ವಾನ್ರಾಜ್ಯಲುಬ್ಧಃ ಸುಯೋಧನಃ।।
ಆದರೆ ಬೆಂಕಿಯ ಭಯದಿಂದ ನಾವು ಪಲಾಯನ ಮಾಡಿದರೆ ರಾಜ್ಯಲುಬ್ಧ ಸುಯೋಧನನು ನಮ್ಮೆಲ್ಲರನ್ನೂ ತನ್ನ ಗೂಢಾಚಾರಿಗಳ ಮೂಲಕ ಸಾಯಿಸುತ್ತಾನೆ.
01134024a ಅಪದಸ್ಥಾನ್ಪದೇ ತಿಷ್ಠನ್ನಪಕ್ಷಾನ್ಪಕ್ಷಸಂಸ್ಥಿತಃ।
01134024c ಹೀನಕೋಶಾನ್ಮಹಾಕೋಶಃ ಪ್ರಯೋಗೈರ್ಘಾತಯೇದ್ಧ್ರುವಂ।।
ಅವನಿಗೆ ಸ್ಥಾನಮಾನಗಳಿವೆ, ನಮಗೆ ಸ್ಥಾನಮಾನಗಳಿಲ್ಲ. ಅವನಿಗೆ ತನ್ನ ಪಕ್ಷದವರು ಎನ್ನುವುವರಿದ್ದಾರೆ, ನಮಗೆ ನಮ್ಮವರು ಯಾರೂ ಇಲ್ಲ. ಅವನಿಗೆ ಮಹಾಕೋಶವೇ ಇದೆ. ನಮಗೆ ಕೋಶವೇ ಇಲ್ಲ. ನಿರ್ದಿಷ್ಠವಾಗಿಯೂ ಅವನು ನಮ್ಮನ್ನು ಸಂಹರಿಸಬಲ್ಲ.
01134025a ತದಸ್ಮಾಭಿರಿಮಂ ಪಾಪಂ ತಂ ಚ ಪಾಪಂ ಸುಯೋಧನಂ।
01134025c ವಂಚಯದ್ಭಿರ್ನಿವಸ್ತವ್ಯಂ ಚನ್ನವಾಸಂ ಕ್ವ ಚಿತ್ಕ್ವ ಚಿತ್।।
ಆದುದರಿಂದ ಈ ಪಾಪಿಯನ್ನೂ ಮತ್ತು ಪಾಪಿ ಸುಯೋಧನನ್ನೂ ವಂಚಿಸಿ ನಾವು ಎಲ್ಲಿಯೇ ವಾಸಿಸುತ್ತಿರಲಿ ಗೂಢವಾಗಿ ವಾಸಿಸಬೇಕು.
01134026a ತೇ ವಯಂ ಮೃಗಯಾಶೀಲಾಶ್ಚರಾಮ ವಸುಧಾಮಿಮಾಂ।
01134026c ತಥಾ ನೋ ವಿದಿತಾ ಮಾರ್ಗಾ ಭವಿಷ್ಯಂತಿ ಪಲಾಯತಾಂ।।
ನಾವು ಬೇಟೆಗಾರರಂತೆ ಭೂಮಿಯನ್ನೆಲ್ಲಾ ಸುತ್ತೋಣ. ಇದರಿಂದ ಭವಿಷ್ಯದಲ್ಲಿ ಪಲಾಯನಗೈಯಲು ಎಲ್ಲ ಮಾರ್ಗಗಳೂ ನಮಗೆ ತಿಳಿಯುತ್ತವೆ.
01134027a ಭೌಮಂ ಚ ಬಿಲಮದ್ಯೈವ ಕರವಾಮ ಸುಸಂವೃತಂ।
01134027c ಗೂಢೋಚ್ಛ್ವಸಾನ್ನ ನಸ್ತತ್ರ ಹುತಾಶಃ ಸಂಪ್ರಧಕ್ಷ್ಯತಿ।।
ಚೆನ್ನಾಗಿ ಮುಚ್ಚಲ್ಪಟ್ಟ ಒಂದು ಬಿಲವನ್ನು ಭೂಮಿಯಲ್ಲಿ ಅಗೆಯಬೇಕು; ಅಲ್ಲಿ ಅಡಗಿ ಕೊಂಡರೆ ಬೆಂಕಿಯು ನಮ್ಮನ್ನು ಸುಡುವುದಿಲ್ಲ.
01134028a ವಸತೋಽತ್ರ ಯಥಾ ಚಾಸ್ಮಾನ್ನ ಬುಧ್ಯೇತ ಪುರೋಚನಃ।
01134028c ಪೌರೋ ವಾಪಿ ಜನಃ ಕಶ್ಚಿತ್ತಥಾ ಕಾರ್ಯಮತಂದ್ರಿತೈಃ।।
ನಾವು ಇಲ್ಲಿ ವಾಸಿಸುತ್ತಿರುವಾಗ ಪುರೋಚನನಿಗಾಗಲೀ ಅಥವಾ ಇತರ ಪೌರ ಜನರಿಗಾಗಲೀ ತಿಳಿಯದಂತೆ ಎಲ್ಲ ಜಾಗರೂಕತೆಯನ್ನೂ ವಹಿಸೋಣ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹದಾಹಪರ್ವಣಿ ಭೀಮಸೇನಯುಧಿಷ್ಠಿರಸಂವಾದೇ ಚತುಸ್ತ್ರಿಂಶದಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹದಾಹ ಪರ್ವದಲ್ಲಿ ಭೀಮಸೇನಯುಧಿಷ್ಠಿರಸಂವಾದ ಎನ್ನುವ ನೂರಾಮೂವತ್ತ್ನಾಲ್ಕನೆಯ ಅಧ್ಯಾಯವು.