ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಜತುಗೃಹದಾಹ ಪರ್ವ
ಅಧ್ಯಾಯ 132
ಸಾರ
ದುರ್ಯೋಧನನು ಪುರೋಚನನನ್ನು ಕರೆಯಿಸಿ ಗೌಪ್ಯವಾಗಿ ಅರಗಿನ ಮನೆಯನ್ನು ನಿರ್ಮಿಸಿ ಪಾಂಡವರನ್ನು ಅದರೊಡನೆ ಸುಡಲು ಆದೇಶವನ್ನು ನೀಡುವುದು (1-17), ಅರಗಿನ ಮನೆಯ ನಿರ್ಮಾಣ (18-19).
01132001 ವೈಶಂಪಾಯನ ಉವಾಚ।
01132001a ಏವಮುಕ್ತೇಷು ರಾಜ್ಞಾ ತು ಪಾಂಡವೇಷು ಮಹಾತ್ಮಸು।
01132001c ದುರ್ಯೋಧನಃ ಪರಂ ಹರ್ಷಮಾಜಗಾಮ ದುರಾತ್ಮವಾನ್।।
ವೈಶಂಪಾಯನನು ಹೇಳಿದನು: “ರಾಜನು ಮಹಾತ್ಮ ಪಾಂಡವನಿಗೆ ಈ ರೀತಿ ಹೇಳಿದ್ದುದರಿಂದ ದುರಾತ್ಮ ದುರ್ಯೋಧನನು ಬಹಳ ಹರ್ಷಗೊಂಡನು.
01132002a ಸ ಪುರೋಚನಮೇಕಾಂತಮಾನೀಯ ಭರತರ್ಷಭ।
01132002c ಗೃಹೀತ್ವಾ ದಕ್ಷಿಣೇ ಪಾಣೌ ಸಚಿವಂ ವಾಕ್ಯಮಬ್ರವೀತ್।।
ಭರತರ್ಷಭ! ಅವನು ತನ್ನ ಸಚಿವ ಪುರೋಚನನನ್ನು ಏಕಾಂತದಲ್ಲಿ ಕರೆದು ಅವನ ಬಲಗೈಯನ್ನು ಹಿಡಿದು ಈ ಮಾತುಗಳನ್ನಾಡಿದನು:
01132003a ಮಮೇಯಂ ವಸುಸಂಪೂರ್ಣಾ ಪುರೋಚನ ವಸುಂಧರಾ।
01132003c ಯಥೇಯಂ ಮಮ ತದ್ವತ್ತೇ ಸ ತಾಂ ರಕ್ಷಿತುಮರ್ಹಸಿ।
“ಪುರೋಚನ! ವಸುಸಂಪೂರ್ಣ ಈ ವಸುಂಧರೆಯು ನನ್ನವಳಾದಹಾಗೆ! ನನ್ನವಳಾದ ಅವಳನ್ನು ನಿನಗೂ ಕೊಟ್ಟಿದ್ದೇನೆ. ಅವಳನ್ನು ರಕ್ಷಿಸಬೇಕು.
01132004a ನ ಹಿ ಮೇ ಕಶ್ಚಿದನ್ಯೋಽಸ್ತಿ ವೈಶ್ವಾಸಿಕತರಸ್ತ್ವಯಾ।
01132004c ಸಹಾಯೋ ಯೇನ ಸಂಧಾಯ ಮಂತ್ರಯೇಯಂ ಯಥಾ ತ್ವಯಾ।।
ನಿನ್ನಲ್ಲಿದ್ದಷ್ಟು ವಿಶ್ವಾಸವು ನನಗೆ ಬೇರೆ ಯಾರಲ್ಲಿಯೂ ಇಲ್ಲ. ನನಗೆ ಈ ಸಹಾಯವನ್ನು ಮಾಡಿದೆಯೆಂದರೆ ನಿನಗೆ ಮಂತ್ರಿತ್ವವನ್ನು ನೀಡುವ ಭರವಸೆ ಕೊಡುತ್ತೇನೆ.
01132005a ಸಂರಕ್ಷ ತಾತ ಮಂತ್ರಂ ಚ ಸಪತ್ನಾಂಶ್ಚ ಮಮೋದ್ಧರ।
01132005c ನಿಪುಣೇನಾಭ್ಯುಪಾಯೇನ ಯದ್ಬ್ರವೀಮಿ ತಥಾ ಕುರು।।
ಗೆಳೆಯ! ಈ ಸಮಾಲೋಚನೆಯನ್ನು ಗೌಪ್ಯವಾಗಿಡು. ನಿನ್ನ ನಿಪುಣ ಉಪಾಯಗಳಿಂದ ನನ್ನ ಪ್ರತಿದ್ವಂದಿಗಳನ್ನು ನಾಶಗೊಳಿಸು. ನಾನು ಹೇಳಿದ ಹಾಗೆ ಮಾಡು.
01132006a ಪಾಂಡವಾ ಧೃತರಾಷ್ಟ್ರೇಣ ಪ್ರೇಷಿತಾ ವಾರಣಾವತಂ।
01132006c ಉತ್ಸವೇ ವಿಹರಿಷ್ಯಂತಿ ಧೃತರಾಷ್ಟ್ರಸ್ಯ ಶಾಸನಾತ್।।
ಧೃತರಾಷ್ಟ್ರನು ಪಾಂಡವರನ್ನು ವಾರಣಾವತಕ್ಕೆ ಕಳುಹಿಸುತ್ತಿದ್ದಾನೆ. ಧೃತರಾಷ್ಟ್ರನ ಆದೇಶದಂತೆ ಅವರು ಅಲ್ಲಿ ಉತ್ಸವದಲ್ಲಿ ವಿಹರಿಸುತ್ತಾರೆ.
01132007a ಸ ತ್ವಂ ರಾಸಭಯುಕ್ತೇನ ಸ್ಯಂದನೇನಾಶುಗಾಮಿನಾ।
01132007c ವಾರಣಾವತಮದ್ಯೈವ ಯಥಾ ಯಾಸಿ ತಥಾ ಕುರು।।
ನೀನು ಇಂದೇ ವೇಗವಾಗಿ ಓಡುವ ರಾಸಭಗಳ ಗಾಡಿಯಲ್ಲಿ ವಾರಣಾವತವನ್ನು ಸೇರಿ ನಾನು ಹೇಳಿದ ಹಾಗೆ ಮಾಡು.
01132008a ತತ್ರ ಗತ್ವಾ ಚತುಃಶಾಲಂ ಗೃಹಂ ಪರಮಸಂವೃತಂ।
01132008c ಆಯುಧಾಗಾರಮಾಶ್ರಿತ್ಯ ಕಾರಯೇಥಾ ಮಹಾಧನಂ।।
ಅಲ್ಲಿ ಹೋಗಿ ಆಯುಧಾಗಾರದ ಬಳಿಯಲ್ಲಿಯೇ ಪರಮಸಂವೃತ ನಾಲ್ಕು ಕೋಣೆಗಳನ್ನುಳ್ಳ ಬೆಲೆಬಾಳುವ ಗೃಹವೊಂದನ್ನು ನಿರ್ಮಿಸು.
01132009a ಶಣಸರ್ಜರಸಾದೀನಿ ಯಾನಿ ದ್ರವ್ಯಾಣಿ ಕಾನಿ ಚಿತ್।
01132009c ಆಗ್ನೇಯಾನ್ಯುತ ಸಂತೀಹ ತಾನಿ ಸರ್ವಾಣಿ ದಾಪಯ।।
ಶಣ-ಸರ್ಜರ ಮೊದಲಾದ ಮತ್ತು ಅಗ್ನಿಯಲ್ಲಿ ಸುಟ್ಟುಹೋಗಬಲ್ಲಂತಹ ಎಲ್ಲ ವಸ್ತುಗಳನ್ನೂ ಬಳಸು.
01132010a ಸರ್ಪಿಷಾ ಚ ಸತೈಲೇನ ಲಾಕ್ಷಯಾ ಚಾಪ್ಯನಲ್ಪಯಾ।
01132010c ಮೃತ್ತಿಕಾಂ ಮಿಶ್ರಯಿತ್ವಾ ತ್ವಂ ಲೇಪಂ ಕುಡ್ಯೇಷು ದಾಪಯೇಃ।।
ಅವುಗಳನ್ನು ತೈಲ, ಅರಗು ಮತ್ತು ತುಪ್ಪಗಳಿಂದ ಮಣ್ಣಿನಲ್ಲಿ ಸೇರಿಸಿ ಗೋಡೆಗಳಿಗೆ ಲೇಪಿಸು.
01132011a ಶಣಾನ್ವಂಶಂ ಘೃತಂ ದಾರು ಯಂತ್ರಾಣಿ ವಿವಿಧಾನಿ ಚ।
01132011c ತಸ್ಮಿನ್ವೇಶ್ಮನಿ ಸರ್ವಾಣಿ ನಿಕ್ಷಿಪೇಥಾಃ ಸಮಂತತಃ।।
01132012a ಯಥಾ ಚ ತ್ವಾಂ ನ ಶಂಕೇರನ್ಪರೀಕ್ಷಂತೋಽಪಿ ಪಾಂಡವಾಃ।
01132012c ಆಗ್ನೇಯಮಿತಿ ತತ್ಕಾರ್ಯಮಿತಿ ಚಾನ್ಯೇ ಚ ಮಾನವಾಃ।।
ಹೆಚ್ಚಿನ ಪ್ರಮಾಣದಲ್ಲಿ ಸೆಣಬು, ಬಿದಿರು, ತುಪ್ಪ, ಮರ, ಮತ್ತು ಮರದ ಪುಡಿಯನ್ನು ಸೇರಿಸಬೇಕು. ಆದರೆ ಪಾಂಡವರು ಪರೀಕ್ಷಿಸಿದರೂ ಅವರಿಗೆ ಶಂಕೆಯುಂಟಾಗಬಾರದ ಹಾಗಿರಬೇಕು. ಅಥವಾ ಬೇರೆ ಯಾರಿಗೂ ಇದೊಂದು ಅಗ್ನಿಯ ಶಲ್ಯಂತ್ರವೆಂದು ತಿಳಿಯಬಾರದು.
01132013a ವೇಶ್ಮನ್ಯೇವಂ ಕೃತೇ ತತ್ರ ಕೃತ್ವಾ ತಾನ್ಪರಮಾರ್ಚಿತಾನ್।
01132013c ವಾಸಯೇಃ ಪಾಂಡವೇಯಾಂಶ್ಚ ಕುಂತೀಂ ಚ ಸಸುಹೃಜ್ಜನಾಂ।।
ಈ ರೀತಿ ಮನೆಯನ್ನು ನಿರ್ಮಿಸಿ, ಅವರನ್ನು ಸತ್ಕರಿಸಿ ಪಾಂಡವರು ಸಖೀಮೇಳದೊಂದಿಗೆ ಅಲ್ಲಿ ವಾಸಿಸಲು ಕುಂತಿಯನ್ನು ಆಗ್ರಹಿಸಬೇಕು.
01132014a ತತ್ರಾಸನಾನಿ ಮುಖ್ಯಾನಿ ಯಾನಾನಿ ಶಯನಾನಿ ಚ।
01132014c ವಿಧಾತವ್ಯಾನಿ ಪಾಂಡೂನಾಂ ಯಥಾ ತುಷ್ಯೇತ ಮೇ ಪಿತಾ।।
ನನ್ನ ತಂದೆಗೆ ತೃಪ್ತಿಕೊಡುವಷ್ಟು ಅಲ್ಲಿ ಪಾಂಡವರಿಗಾಗಿ ಆಸನಗಳ, ಹಾಸಿಗೆಗಳ, ಮಂಚಗಳ, ಮತ್ತು ವಾಹನಗಳ ವ್ಯವಸ್ಥೆಯಾಗಬೇಕು.
01132015a ಯಥಾ ರಮೇರನ್ವಿಶ್ರಬ್ಧಾ ನಗರೇ ವಾರಣಾವತೇ।
01132015c ತಥಾ ಸರ್ವಂ ವಿಧಾತವ್ಯಂ ಯಾವತ್ಕಾಲಸ್ಯ ಪರ್ಯಯಃ।।
ವಾರಣಾವತ ನಗರಿಯಲ್ಲಿ ಅವರು, ನಮ್ಮ ಸಮಯವು ಬರುವವರೆಗೆ, ಯಾವುದೇ ರೀತಿಯ ಸಂಶಯವನ್ನೂ ಹೊಂದದೇ ವಿಶ್ರಾಂತಿಪಡೆಯುತ್ತಿರಬೇಕು.
01132016a ಜ್ಞಾತ್ವಾ ತು ತಾನ್ಸುವಿಶ್ವಸ್ತಾಂಶಯಾನಾನಕುತೋಭಯಾನ್।
01132016c ಅಗ್ನಿಸ್ತತಸ್ತ್ವಯಾ ದೇಯೋ ದ್ವಾರತಸ್ತಸ್ಯ ವೇಶ್ಮನಃ।।
ಅವರಿಗೆ ಬರುವ ಅಪಾಯದ ಯಾವ ಶಂಕೆಯೂ ಇಲ್ಲ ಎಂದು ನಿಶ್ಚಯಮಾಡಿಕೊಂಡ ನಂತರ ಅವರು ನಿರ್ಭಯರಾಗಿ ಮಲಗಿಕೊಂಡಿದ್ದಾಗ ದ್ವಾರದಲ್ಲಿಯೇ ಬೆಂಕಿಯನ್ನು ಹಾಕಿ ಹೊತ್ತಿಸಬೇಕು.
01132017a ದಗ್ಧಾನೇವಂ ಸ್ವಕೇ ಗೇಹೇ ದಗ್ಧಾ ಇತಿ ತತೋ ಜನಾಃ।
01132017c ಜ್ಞಾತಯೋ ವಾ ವದಿಷ್ಯಂತಿ ಪಾಂಡವಾರ್ಥಾಯ ಕರ್ಹಿ ಚಿತ್।।
ಈ ರೀತಿ ಬೆಂಕಿಯಲ್ಲಿ ಸುಟ್ಟು ತೀರಿಕೊಂಡಾಗ ಪಾಂಡವರು ಅವರ ಮನೆಯಲ್ಲಿಯೇ ಜೀವಂತ ಸುಟ್ಟುಹೋದರು ಎಂದು ಅವರ ಜನರೆಲ್ಲರೂ ತಿಳಿದುಕೊಳ್ಳುತ್ತಾರೆ.”
01132018a ತತ್ತಥೇತಿ ಪ್ರತಿಜ್ಞಾಯ ಕೌರವಾಯ ಪುರೋಚನಃ।
01132018c ಪ್ರಾಯಾದ್ರಾಸಭಯುಕ್ತೇನ ನಗರಂ ವಾರಣಾವತಂ।।
ಪುರೋಚನನು ಕೌರವನಿಗೆ ಹಾಗೆಯೇ ಮಾಡುತ್ತೇನೆಂದು ಪ್ರತಿಜ್ಞೆಯನ್ನಿತ್ತು ಕತ್ತೆಯ ಬಂಡಿಯನ್ನೇರಿ ವಾರಣಾವತ ನಗರಿಗೆ ಹೊರಟನು.
01132019a ಸ ಗತ್ವಾ ತ್ವರಿತೋ ರಾಜನ್ದುರ್ಯೋಧನಮತೇ ಸ್ಥಿತಃ।
01132019c ಯಥೋಕ್ತಂ ರಾಜಪುತ್ರೇಣ ಸರ್ವಂ ಚಕ್ರೇ ಪುರೋಚನಃ।।
ರಾಜನ್! ದುರ್ಯೋಧನನಿಗೆ ವಿನೀತನಾಗಿದ್ದ ಪುರೋಚನನು ಬೇಗನೆ ಹೋಗಿ ರಾಜಪುತ್ರನು ಹೇಳಿದ ಹಾಗೆಯೇ ಎಲ್ಲವನ್ನೂ ಮಾಡಿದನು.”