ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಜತುಗೃಹದಾಹ ಪರ್ವ
ಅಧ್ಯಾಯ 131
ಸಾರ
ದುರ್ಯೋಧನನ ಪ್ರೇರಣೆಯಂತೆ ಪುರಜನರು ವಾರಣಾವತದ ಕುರಿತು ಪಾಂಡವರಲ್ಲಿ ಆಸಕ್ತಿಯನ್ನು ಹುಟ್ಟಿಸಿದುದು (1-5). ಧೃತರಾಷ್ಟ್ರನು ಪಾಂಡವರಿಗೆ ತಾಯಿಯೊಂದಿಗೆ ವಾರಣಾವತಕ್ಕೆ ಹೋಗಲು ಸೂಚಿಸುವುದು (6-10). ಪಾಂಡವರು ವಾರಣಾವತಕ್ಕೆ ಹೊರಟಿದುದು (11-18).
01131001 ವೈಶಂಪಾಯನ ಉವಾಚ।
01131001a ತತೋ ದುರ್ಯೋಧನೋ ರಾಜಾ ಸರ್ವಾಸ್ತಾಃ ಪ್ರಕೃತೀಃ ಶನೈಃ।
01131001c ಅರ್ಥಮಾನಪ್ರದಾನಾಭ್ಯಾಂ ಸಂಜಹಾರ ಸಹಾನುಜಃ।।
ವೈಶಂಪಾಯನನು ಹೇಳಿದನು: “ನಂತರ ದುರ್ಯೋಧನನು ತನ್ನ ತಮ್ಮಂದಿರೊಡಗೂಡಿ ಹಣ ಮತ್ತು ಗೌರವಗಳನ್ನು ನೀಡುತ್ತಾ ಕ್ರಮೇಣವಾಗಿ ಎಲ್ಲ ಪ್ರಜೆಗಳನ್ನೂ ಗೆಲ್ಲ ತೊಡಗಿದನು.
01131002a ಧೃತರಾಷ್ಟ್ರಪ್ರಯುಕ್ತಾಸ್ತು ಕೇ ಚಿತ್ಕುಶಲಮಂತ್ರಿಣಃ।
01131002c ಕಥಯಾಂ ಚಕ್ರಿರೇ ರಮ್ಯಂ ನಗರಂ ವಾರಣಾವತಂ।।
ಧೃತರಾಷ್ಟ್ರನ ಆದೇಶದಂತೆ ಕೆಲವು ಕುಶಲಮಂತ್ರಿಗಳು ವಾರಣಾವತ ನಗರದ ರಮ್ಯತೆಯ ಕುರಿತಾಗಿ ಕಥೆಗಳನ್ನು ಕಟ್ಟಿ ಹೇಳ ತೊಡಗಿದರು.
01131003a ಅಯಂ ಸಮಾಜಃ ಸುಮಹಾನ್ರಮಣೀಯತಮೋ ಭುವಿ।
01131003c ಉಪಸ್ಥಿತಃ ಪಶುಪತೇರ್ನಗರೇ ವಾರಣಾವತೇ।।
“ಭುವಿಯಲ್ಲೆ ರಮಣೀಯತಮ ಪಶುಪತಿಯ ನಗರ ವಾರಣಾವತದಲ್ಲಿ ಅತಿ ದೊಡ್ಡ ಸಮ್ಮೇಳನವು ನಡೆಯಲಿದೆ.
01131004a ಸರ್ವರತ್ನಸಮಾಕೀರ್ಣೇ ಪುಂಸಾಂ ದೇಶೇ ಮನೋರಮೇ।
01131004c ಇತ್ಯೇವಂ ಧೃತರಾಷ್ಟ್ರಸ್ಯ ವಚನಾಚ್ಚಕ್ರಿರೇ ಕಥಾಃ।।
ಮನೋರಮೆ ಆ ಶ್ರೇಷ್ಠ ನಗರವು ಸರ್ವರತ್ನ ಸಮಾಕೀರ್ಣವಾಗಿದೆ.” ಹೀಗೆಂದು ಧೃತರಾಷ್ಟ್ರನ ಜನರು ಕಥೆಗಳನ್ನು ಹರಡಿಸಿದರು.
01131005a ಕಥ್ಯಮಾನೇ ತಥಾ ರಮ್ಯೇ ನಗರೇ ವಾರಣಾವತೇ।
01131005c ಗಮನೇ ಪಾಂಡುಪುತ್ರಾಣಾಂ ಜಜ್ಞೇ ತತ್ರ ಮತಿರ್ನೃಪ।।
ನೃಪ! ಈ ರೀತಿ ರಮ್ಯ ವಾರಣಾವತ ನಗರದ ಕುರಿತು ಹೇಳಿದ್ದುದನ್ನು ಕೇಳಿದ ಪಾಂಡುಪುತ್ರರಲ್ಲಿ ಅಲ್ಲಿಗೆ ಹೋಗುವ ಅಭಿಪ್ರಾಯವುಂಟಾಯಿತು.
01131006a ಯದಾ ತ್ವಮನ್ಯತ ನೃಪೋ ಜಾತಕೌತೂಹಲಾ ಇತಿ।
01131006c ಉವಾಚೈನಾನಥ ತದಾ ಪಾಂಡವಾನಂಬಿಕಾಸುತಃ।।
ಅವರಲ್ಲಿ ಕುತೂಹಲ ಮೂಡಿದೆ ಎಂದು ತಿಳಿದ ನೃಪ ಅಂಬಿಕಾಸುತನು ಪಾಂಡವರನ್ನು ಕರೆಯಿಸಿ ಅವರಿಗೆ ಹೇಳಿದನು:
01131007a ಮಮೇಮೇ ಪುರುಷಾ ನಿತ್ಯಂ ಕಥಯಂತಿ ಪುನಃ ಪುನಃ।
01131007c ರಮಣೀಯತರಂ ಲೋಕೇ ನಗರಂ ವಾರಣಾವತಂ।।
“ನನ್ನ ಜನರು ನಿತ್ಯವೂ ಪುನಃ ಪುನಃ ವಾರಾಣಾವತ ನಗರವು ಲೋಕದಲ್ಲೇ ರಮಣೀಯತರವಾದುದು ಎಂದು ಹೇಳುತ್ತಿರುತ್ತಾರೆ.
01131008a ತೇ ತಾತ ಯದಿ ಮನ್ಯಧ್ವಮುತ್ಸವಂ ವಾರಣಾವತೇ।
01131008c ಸಗಣಾಃ ಸಾನುಯಾತ್ರಾಶ್ಚ ವಿಹರಧ್ವಂ ಯಥಾಮರಾಃ।।
ಮಗನೇ! ವಾರಣಾವತ ಉತ್ಸವವನ್ನು ನೋಡುವ ಮನಸ್ಸಿದ್ದರೆ ನಿನ್ನ ಅನುಯಾಯಿ ಗಣದೊಂದಿಗೆ ಅಲ್ಲಿ ಅಮರರಂತೆ ವಿಹರಿಸು.
01131009a ಬ್ರಾಹ್ಮಣೇಭ್ಯಶ್ಚ ರತ್ನಾನಿ ಗಾಯನೇಭ್ಯಶ್ಚ ಸರ್ವಶಃ।
01131009c ಪ್ರಯಚ್ಛಧ್ವಂ ಯಥಾಕಾಮಂ ದೇವಾ ಇವ ಸುವರ್ಚಸಃ।।
ಸುವರ್ಚಸ ದೇವತೆಗಳಂತೆ ನಿನಗಿಷ್ಟಬಂದ ಹಾಗೆ ಬ್ರಾಹ್ಮಣರಿಗೆ ಮತ್ತು ಗಾಯಕರೆಲ್ಲರಿಗೂ ರತ್ನಗಳನ್ನು ಕೊಡು.
01131010a ಕಂ ಚಿತ್ಕಾಕಾಲಂ ವಿಹೃತ್ಯೈವಮನುಭೂಯ ಪರಾಂ ಮುದಂ।
01131010c ಇದಂ ವೈ ಹಾಸ್ತಿನಪುರಂ ಸುಖಿನಃ ಪುನರೇಷ್ಯಥ।।
ಸ್ವಲ್ಪ ಕಾಲ ಅಲ್ಲಿದ್ದು ಸಂಪೂರ್ಣ ಸಂತೋಷವನ್ನು ಹೊಂದಿಯಾದ ನಂತರ ನೀನು ಸುಖದಿಂದ ಪುನಃ ಈ ಹಸ್ತಿನಾಪುರಕ್ಕೆ ಬರಬಹುದು.”
01131011a ಧೃತರಾಷ್ಟ್ರಸ್ಯ ತಂ ಕಾಮಮನುಬುದ್ಧ್ವಾ ಯುಧಿಷ್ಠಿರಃ।
01131011c ಆತ್ಮನಶ್ಚಾಸಹಾಯತ್ವಂ ತಥೇತಿ ಪ್ರತ್ಯುವಾಚ ತಂ।।
ಇದು ಧೃತರಾಷ್ಟ್ರನ ಆಸೆ ಎಂದು ತಿಳಿದ ಯುಧಿಷ್ಠಿರನು ತನ್ನ ಅಸಹಾಯಕತೆಯನ್ನು ತಿಳಿದು ಹಾಗೆಯೇ ಆಗಲೆಂದು ಉತ್ತರಿಸಿದನು.
01131012a ತತೋ ಭೀಷ್ಮಂ ಮಹಾಪ್ರಾಜ್ಞಂ ವಿದುರಂ ಚ ಮಹಾಮತಿಂ।
01131012c ದ್ರೋಣಂ ಚ ಬಾಹ್ಲಿಕಂ ಚೈವ ಸೋಮದತ್ತಂ ಚ ಕೌರವಂ।।
01131013a ಕೃಪಮಾಚಾರ್ಯಪುತ್ರಂ ಚ ಗಾಂಧಾರೀಂ ಚ ಯಶಸ್ವಿನೀಂ।
01131013c ಯುಧಿಷ್ಠಿರಃ ಶನೈರ್ದೀನಮುವಾಚೇದಂ ವಚಸ್ತದಾ।।
ನಂತರ ಯುಧಿಷ್ಠಿರನು ದೀನನಾಗಿ ಮೆಲ್ಲಗೆ ಮಹಾಪ್ರಾಜ್ಞ ಭೀಷ್ಮ, ಮಹಾಮತಿ ವಿದುರ, ದ್ರೋಣ, ಬಾಹ್ಲೀಕ, ಕೌರವ ಸೋಮದತ್ತ, ಕೃಪ, ಆಚಾರ್ಯ ಪುತ್ರ ಮತ್ತು ಯಶಸ್ವಿನಿ ಗಾಂಧಾರಿಯಲ್ಲಿ ಹೇಳಿದನು:
01131014a ರಮಣೀಯೇ ಜನಾಕೀರ್ಣೇ ನಗರೇ ವಾರಣಾವತೇ।
01131014c ಸಗಣಾಸ್ತಾತ ವತ್ಸ್ಯಾಮೋ ಧೃತರಾಷ್ಟ್ರಸ್ಯ ಶಾಸನಾತ್।।
“ಧೃತರಾಷ್ಟ್ರನ ಆದೇಶದಂತೆ ನಾವು ನಮ್ಮವರೊಂದಿಗೆ ಜನಸಂಧಣಿಯ ರಮಣೀಯ ವಾರಣಾವತ ನಗರದಲ್ಲಿ ಹೋಗಿ ವಾಸಿಸುತ್ತೇವೆ.
01131015a ಪ್ರಸನ್ನಮನಸಃ ಸರ್ವೇ ಪುಣ್ಯಾ ವಾಚೋ ವಿಮುಂಚತ।
01131015c ಆಶೀರ್ಭಿರ್ವರ್ಧಿತಾನಸ್ಮಾನ್ನ ಪಾಪಂ ಪ್ರಸಹಿಷ್ಯತಿ।।
ಎಲ್ಲರೂ ಪ್ರಸನ್ನ ಮನಸ್ಕರಾಗಿ ಪುಣ್ಯ ಮಾತುಗಳಿಂದ ನೀವು ನೀಡಿದ ಆಶೀರ್ವಾದದ ಬಲದಿಂದ ನಮಗೆ ಯಾವುದೇ ರೀತಿಯ ಕಷ್ಟವೂ ಬರುವುದಿಲ್ಲ.”
01131016a ಏವಮುಕ್ತಾಸ್ತು ತೇ ಸರ್ವೇ ಪಾಂಡುಪುತ್ರೇಣ ಕೌರವಾಃ।
01131016c ಪ್ರಸನ್ನವದನಾ ಭೂತ್ವಾ ತೇಽಭ್ಯವರ್ತಂತ ಪಾಂಡವಾನ್।।
ಪಾಂಡುಪುತ್ರನ ಈ ಮಾತುಗಳಿಗೆ ಸರ್ವ ಕೌರವರೂ ಪ್ರಸನ್ನವದನರಾಗಿ ಪಾಂಡವರನ್ನು ಬೀಳ್ಕೊಟ್ಟರು.
01131017a ಸ್ವಸ್ತ್ಯಸ್ತು ವಃ ಪಥಿ ಸದಾ ಭೂತೇಭ್ಯಶ್ಚೈವ ಸರ್ವಶಃ।
01131017c ಮಾ ಚ ವೋಽಸ್ತ್ವಶುಭಂ ಕಿಂ ಚಿತ್ಸರ್ವತಃ ಪಾಂಡುನಂದನಾಃ।।
“ನಿನ್ನ ದಾರಿಯಲ್ಲಿ ಎಲ್ಲ ಭೂತಗಳಿಂದಲೂ ಮಂಗಳವುಂಟಾಗಲಿ. ಪಾಂಡುನಂದನ! ಯಾವ ಕಡೆಯಿಂದಲೂ ಯಾವುದರಿಂದಲೂ ನಿನಗೆ ಅಶುಭವು ಬಾರದಿರಲಿ!”
01131018a ತತಃ ಕೃತಸ್ವಸ್ತ್ಯಯನಾ ರಾಜ್ಯಲಾಭಾಯ ಪಾಂಡವಾಃ।
01131018c ಕೃತ್ವಾ ಸರ್ವಾಣಿ ಕಾರ್ಯಾಣಿ ಪ್ರಯಯುರ್ವಾರಣಾವತಂ।।
ನಂತರ ಶುಭ ಪ್ರಯಾಣದ ಆಶೀರ್ವಾದಗಳನ್ನು ಹೊತ್ತ ಪಾಂಡವರು ರಾಜ್ಯಲಾಭಕ್ಕೆಂದು ಬೇಕಾದ ಎಲ್ಲ ಕಾರ್ಯಗಳನ್ನೂ ನೆರವೇರಿಸಿ ವಾರಣಾವತಕ್ಕೆ ಹೊರಟರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹದಾಹಪರ್ವಣಿ ವಾರಣಾವತಯಾತ್ರಾಯಾಂ ಏಕತ್ರಿಂಶದಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹದಾಹ ಪರ್ವದಲ್ಲಿ ವಾರಣಾವತಯಾತ್ರ ಎನ್ನುವ ನೂರಾಮೂವತ್ತೊಂದನೆಯ ಅಧ್ಯಾಯವು.