ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಜತುಗೃಹದಾಹ ಪರ್ವ
ಅಧ್ಯಾಯ 130
ಸಾರ
ಪಾಂಡುವು ತನ್ನ ಮೇಲೆ ತೋರಿಸಿದ್ದ ಪ್ರೀತಿಯನ್ನು ನೆನೆದುಕೊಂಡು ಧೃತರಾಷ್ಟ್ರನು ಯುಧಿಷ್ಠಿರನ ಸಲುವಾಗಿ ಪೌರರು ಸಬಾಂಧವರಾಗಿ ತಮ್ಮನ್ನು ಕೊಲ್ಲಬಹುದೆಂದು ಅಳುಕುವುದು (1-7). ಅದರ ಕುರಿತು ಯೋಜನೆಗಳನ್ನು ಈಗಾಗಲೇ ಮಾಡಿದ್ದಾಗಿಯೂ, ರಾಜನು ಹೇಗಾದರೂ ಮಾಡಿ ಪಾಂಡವರನ್ನು ವಾರಣಾವತಕ್ಕೆ ಕಳುಹಿಸಬೇಕೆಂದೂ, ರಾಜ್ಯವು ತನ್ನಲ್ಲಿ ಪ್ರತಿಷ್ಠಿತವಾದಾಗ ಅವರು ಮರಳಿ ಬರಬಹುದೆಂದೂ ದುರ್ಯೋಧನನು ಹೇಳುವುದು (8-11). ಧೃತರಾಷ್ಟ್ರನು ಹಿಂಜರಿಯಲು ದುರ್ಯೋಧನನು ತನ್ನ ಹೃದಯವನ್ನು ಚುಚ್ಚಿ ಶೋಕದ ಪಾವಕನನ್ನು ಹುಟ್ಟಿಸಿರುವ ಈ ಅತಿ ಘೋರ ಮುಳ್ಳನ್ನು ನಾಶಪಡಿಸಲು ಕೇಳಿಕೊಳ್ಳುವುದು (12-20).
01130001 ವೈಶಂಪಾಯನ ಉವಾಚ।
01130001a ಧೃತರಾಷ್ಟ್ರಸ್ತು ಪುತ್ರಸ್ಯ ಶ್ರುತ್ವಾ ವಚನಮೀದೃಶಂ।
01130001c ಮುಹೂರ್ತಮಿವ ಸಂಚಿಂತ್ಯ ದುರ್ಯೋಧನಮಥಾಬ್ರವೀತ್।।
ವೈಶಂಪಾಯನನು ಹೇಳಿದನು: “ಪುತ್ರ ದುರ್ಯೋಧನನ ಈ ಮಾತುಗಳನ್ನು ಕೇಳಿದ ಧೃತರಾಷ್ಟ್ರನು ಒಂದು ಕ್ಷಣ ಯೋಚಿಸಿ ಹೇಳಿದನು:
01130002a ಧರ್ಮನಿತ್ಯಃ ಸದಾ ಪಾಂಡುರ್ಮಮಾಸೀತ್ಪ್ರಿಯಕೃದ್ಧಿತಃ।
01130002c ಸರ್ವೇಷು ಜ್ಞಾತಿಷು ತಥಾ ಮಯಿ ತ್ವಾಸೀದ್ವಿಶೇಷತಃ।।
“ಧರ್ಮನಿತ್ಯ ಪಾಂಡುವು ಸದಾ ಎಲ್ಲ ಬಾಂಧವರಿಗೂ, ಅದರಲ್ಲೂ ವಿಶೇಷವಾಗಿ ನನಗೆ ಪ್ರಿಯವಾದುದನ್ನೇ ಮಾಡುತ್ತಿದ್ದನು.
01130003a ನಾಸ್ಯ ಕಿಂ ಚಿನ್ನ ಜಾನಾಮಿ ಭೋಜನಾದಿ ಚಿಕೀರ್ಷಿತಂ।
01130003c ನಿವೇದಯತಿ ನಿತ್ಯಂ ಹಿ ಮಮ ರಾಜ್ಯಂ ಧೃತವ್ರತಃ।।
ಅವನು ತನಗಾಗಿ ಭೋಜನವೇ ಇತ್ಯಾದಿ ಏನನ್ನೂ ಬಯಸಿದ್ದುದನ್ನು ತಿಳಿದಿಲ್ಲ. ಆ ಧೃತವ್ರತನು ರಾಜ್ಯವನ್ನು ಹೇಗೋ ಹಾಗೆ ನನಗೆ ಎಲ್ಲವನ್ನೂ ಕೊಡುತ್ತಿದ್ದನು.
01130004a ತಸ್ಯ ಪುತ್ರೋ ಯಥಾ ಪಾಂಡುಸ್ತಥಾ ಧರ್ಮಪರಾಯಣಃ।
01130004c ಗುಣವಾಽಲ್ಲೋಕವಿಖ್ಯಾತಃ ಪೌರಾಣಾಂ ಚ ಸುಸಮ್ಮತಃ।।
ಪಾಂಡುವಿನ ಹಾಗೆ ಅವನ ಪುತ್ರನೂ ಕೂಡ ಧರ್ಮಪರಾಯಣನಾಗಿದ್ದಾನೆ. ಗುಣದಲ್ಲಿ ಲೋಕವಿಖ್ಯಾತನಾಗಿದ್ದಾನೆ ಮತ್ತು ಪೌರರ ಸುಸಮ್ಮತನಾಗಿದ್ದಾನೆ.
01130005a ಸ ಕಥಂ ಶಕ್ಯಮಸ್ಮಾಭಿರಪಕ್ರಷ್ಟುಂ ಬಲಾದಿತಃ।
01130005c ಪಿತೃಪೈತಾಮಹಾದ್ರಾಜ್ಯಾತ್ ಸಸಹಾಯೋ ವಿಶೇಷತಃ।।
ನಾವಾದರೂ ಹೇಗೆ, ವಿಶೇಷವಾಗಿ ಸಸಹಾಯನಾದ ಅವನನ್ನು ಬಲವಂತವಾಗಿ ತನ್ನ ಪಿತೃ-ಪಿತಾಮಹರ ರಾಜ್ಯದಿಂದ ಹೊರಗಟ್ಟಲು ಸಾದ್ಯ?
01130006a ಭೃತಾ ಹಿ ಪಾಂಡುನಾಮಾತ್ಯಾ ಬಲಂ ಚ ಸತತಂ ಭೃತಂ।
01130006c ಭೃತಾಃ ಪುತ್ರಾಶ್ಚ ಪೌತ್ರಾಶ್ಚ ತೇಷಾಮಪಿ ವಿಶೇಷತಃ।।
ಪಾಂಡುವು ಸತತವಾಗಿ ಅಮಾತ್ಯರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು, ಸೇನೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು ಮತ್ತು ವಿಶೇಷವಾಗಿ ತನ್ನ ಪುತ್ರ-ಪೌತ್ರರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು.
01130007a ತೇ ಪುರಾ ಸತ್ಕೃತಾಸ್ತಾತ ಪಾಂಡುನಾ ಪೌರವಾ ಜನಾಃ।
01130007c ಕಥಂ ಯುಧಿಷ್ಠಿರಸ್ಯಾರ್ಥೇ ನ ನೋ ಹನ್ಯುಃ ಸಬಾಂಧವಾನ್।।
ಹಿಂದೆ ಪಾಂಡುವು ಪೌರವ ಜನರೆಲ್ಲರನ್ನೂ ಸತ್ಕರಿಸುತ್ತಿದ್ದನು. ಮಗನೇ! ಯುಧಿಷ್ಠಿರನ ಸಲುವಾಗಿ ಸಬಾಂಧವರಾಗಿ ನಮ್ಮನ್ನೆಲ್ಲ ಅವರು ಕೊಲ್ಲುವುದಿಲ್ಲವೇ?”
01130008 ದುರ್ಯೋಧನ ಉವಾಚ।
01130008a ಏವಮೇತನ್ಮಯಾ ತಾತ ಭಾವಿತಂ ದೋಷಮಾತ್ಮನಿ।
01130008c ದೃಷ್ಟ್ವಾ ಪ್ರಕೃತಯಃ ಸರ್ವಾ ಅರ್ಥಮಾನೇನ ಯೋಜಿತಾಃ।।
01130009a ಧ್ರುವಮಸ್ಮತ್ಸಹಾಯಾಸ್ತೇ ಭವಿಷ್ಯಂತಿ ಪ್ರಧಾನತಃ।
01130009c ಅರ್ಥವರ್ಗಃ ಸಹಾಮಾತ್ಯೋ ಮತ್ಸಂಸ್ಥೋಽದ್ಯ ಮಹೀಪತೇ।।
ದುರ್ಯೋಧನನು ಹೇಳಿದನು: “ತಂದೇ! ಈ ದೋಷದ ಕುರಿತು ನಾನು ಇದಾಗಲೇ ಯೋಚಿಸಿದ್ದೇನೆ. ಪ್ರಕೃತಿಯಲ್ಲಿರುವ ಎಲ್ಲವನ್ನೂ ನೋಡಿದಾಗ ಹಣ ಮತ್ತು ಅನುಕೂಲಗಳನ್ನು ಪಡೆದಿರುವ ಪ್ರಜೆಗಳು ತಮ್ಮ ನಿಷ್ಠತೆಯನ್ನು ನಿಶ್ಚಯವಾಗಿಯೂ ನಮ್ಮ ಮೇಲೆ ಬದಲಾಯಿಸುತ್ತಾರೆ. ಮಹೀಪತೇ! ಅರ್ಥವರ್ಗ ಮತ್ತು ಅದಕ್ಕೆ ಸಂಬಂಧಿಸಿದ ಅಮಾತ್ಯರು ಈಗ ನನ್ನ ವಶದಲ್ಲಿದ್ದಾರೆ.
01130010a ಸ ಭವಾನ್ಪಾಂಡವಾನಾಶು ವಿವಾಸಯಿತುಮರ್ಹತಿ।
01130010c ಮೃದುನೈವಾಭ್ಯುಪಾಯೇನ ನಗರಂ ವಾರಣಾವತಂ।।
ನೀನು ಪಾಂಡವರನ್ನು ಯಾವುದಾದರೂ ಮೃದು ಉಪಾಯದಿಂದ ವಾರಣಾವತ ನಗರದಲ್ಲಿರುವಂತೆ ಮಾಡಬೇಕು.
01130011a ಯದಾ ಪ್ರತಿಷ್ಠಿತಂ ರಾಜ್ಯಂ ಮಯಿ ರಾಜನ್ಭವಿಷ್ಯತಿ।
01130011c ತದಾ ಕುಂತೀ ಸಹಾಪತ್ಯಾ ಪುನರೇಷ್ಯತಿ ಭಾರತ।।
ಭಾರತ ರಾಜನ್! ಯಾವಾಗ ಈ ರಾಜ್ಯವು ನನ್ನಲ್ಲಿ ಪ್ರತಿಷ್ಠಿತವಾಗುತ್ತದೆಯೋ ಆಗ ಕುಂತಿಯು ತನ್ನ ಮಕ್ಕಳಿಂದೊಡಗೂಡಿ ಪುನಃ ಇಲ್ಲಿಗೆ ಬರಬಹುದು.”
01130012 ಧೃತರಾಷ್ಟ್ರ ಉವಾಚ।
01130012a ದುರ್ಯೋಧನ ಮಮಾಪ್ಯೇತದ್ಧೃದಿ ಸಂಪರಿವರ್ತತೇ।
01130012c ಅಭಿಪ್ರಾಯಸ್ಯ ಪಾಪತ್ವಾನ್ನೈತತ್ತು ವಿವೃಣೋಮ್ಯಹಂ।।
ಧೃತರಾಷ್ಟ್ರನು ಹೇಳಿದನು: “ದುರ್ಯೋಧನ! ನಾನೂ ಕೂಡ ಅದೇ ಉಪಾಯವನ್ನು ಯೋಚಿಸಿದ್ದೆ. ಆದರೆ ಈ ಪಾಪಿ ಅಭಿಪ್ರಾಯವನ್ನು ಯಾರಿಗೂ ತಿಳಿಸಿರಲಿಲ್ಲ.
01130013a ನ ಚ ಭೀಷ್ಮೋ ನ ಚ ದ್ರೋಣೋ ನ ಕ್ಷತ್ತಾ ನ ಚ ಗೌತಮಃ।
01130013c ವಿವಾಸ್ಯಮಾನಾನ್ಕೌಂತೇಯಾನನುಮಂಸ್ಯಂತಿ ಕರ್ಹಿ ಚಿತ್।।
ಭೀಷ್ಮನಾಗಲೀ ದ್ರೊಣನಾಗಲೀ ಕ್ಷತ್ತನಾಗಲೀ ಗೌತಮನಾಗಲೀ ಯಾರೂ ಸಹ ಕೌಂತೇಯರನ್ನು ಹೊರಗಟ್ಟುವುದನ್ನು ಎಂದೂ ಸಮ್ಮತಿಸುವುದಿಲ್ಲ.
01130014a ಸಮಾ ಹಿ ಕೌರವೇಯಾಣಾಂ ವಯಮೇತೇ ಚ ಪುತ್ರಕ।
01130014c ನೈತೇ ವಿಷಮಮಿಚ್ಛೇಯುರ್ಧರ್ಮಯುಕ್ತಾ ಮನಸ್ವಿನಃ।।
ಪುತ್ರಕ! ಆ ಕೌರವರಿಗೆ ನಾವೂ ಮತ್ತು ಅವರೂ ಒಂದೇ. ಈ ಧರ್ಮಯುಕ್ತ ಮನಸ್ವಿಗಳು ಈ ರೀತಿಯ ವಿಷಮವನ್ನು ಎಂದೂ ಸಹಿಸುವುದಿಲ್ಲ.
01130015a ತೇ ವಯಂ ಕೌರವೇಯಾಣಾಮೇತೇಷಾಂ ಚ ಮಹಾತ್ಮನಾಂ।
01130015c ಕಥಂ ನ ವಧ್ಯತಾಂ ತಾತ ಗಚ್ಛೇಮ ಜಗತಸ್ತಥಾ।।
ಮಗನೇ! ಈ ಮಹಾತ್ಮ ಕೌರವರನ್ನು ಕೊಂದು ನಾವು ಹೇಗೆ ತಾನೆ ಜಗತ್ತಿನಲ್ಲಿ ಇರಲು ಸಾಧ್ಯ?”
01130016 ದುರ್ಯೋಧನ ಉವಾಚ।
01130016a ಮಧ್ಯಸ್ಥಃ ಸತತಂ ಭೀಷ್ಮೋ ದ್ರೋಣಪುತ್ರೋ ಮಯಿ ಸ್ಥಿತಃ।
01130016c ಯತಃ ಪುತ್ರಸ್ತತೋ ದ್ರೋಣೋ ಭವಿತಾ ನಾತ್ರ ಸಾಂಶಯಃ।।
ದುರ್ಯೋಧನನು ಹೇಳಿದನು: “ಭೀಷ್ಮನು ಯಾವಾಗಲೂ ಮಧ್ಯಸ್ಥನಾಗಿರುತ್ತಾನೆ. ದ್ರೋಣ ಪುತ್ರನು ನನ್ನ ಕಡೆ ಇದ್ದಾನೆ. ಮತ್ತು ತನ್ನ ಪುತ್ರನೆಲ್ಲಿರುತ್ತಾನೋ ಅಲ್ಲಿ ದ್ರೋಣನಿರುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
01130017a ಕೃಪಃ ಶಾರದ್ವತಶ್ಚೈವ ಯತ ಏತೇ ತ್ರಯಸ್ತತಃ।
01130017c ದ್ರೋಣಂ ಚ ಭಾಗಿನೇಯಂ ಚ ನ ಸ ತ್ಯಕ್ಷ್ಯತಿ ಕರ್ಹಿ ಚಿತ್।।
ಅವರು ಮೂವರೂ ಎಲ್ಲಿ ಇರಲಿಕ್ಕಾಗುತ್ತದೆಯೋ ಅಲ್ಲಿ ಕೃಪ ಶಾರದ್ವತನೂ ಸೇರುತ್ತಾನೆ. ಅವನು ಎಂದೂ ದ್ರೋಣ ಮತ್ತು ತನ್ನ ತಂಗಿಯ ಮಗನನ್ನು ಬಿಟ್ಟಿರುವುದಿಲ್ಲ.
01130018a ಕ್ಷತ್ತಾರ್ಥಬದ್ಧಸ್ತ್ವಸ್ಮಾಕಂ ಪ್ರಚ್ಛನ್ನಂ ತು ಯತಃ ಪರೇ।
01130018c ನ ಚೈಕಃ ಸ ಸಮರ್ಥೋಽಸ್ಮಾನ್ಪಾಂಡವಾರ್ಥೇ ಪ್ರಬಾಧಿತುಂ।।
ಅವನು ಬೇರೆಯವರೊಂದಿಗೆ ಗೌಪ್ಯವಾಗಿ ಎಷ್ಟೇ ಸೇರಿದರೂ, ಕ್ಷತ್ತನ ಜೀವನವು ನಮ್ಮೊಂದಿಗೆ ಬಂಧಿಸಲ್ಪಟ್ಟಿದೆ. ಪಾಂಡವರ ಪರವಾಗಿ ಏಕೈಕನಾದ ಅವನು ನಮಗೆ ಯಾವುದೇ ರೀತಿಯಲ್ಲಿ ಹಾನಿಯನ್ನುಂಟುಮಾಡಲಿಕ್ಕೂ ಸಮರ್ಥನಲ್ಲ.
01130019a ಸ ವಿಶ್ರಬ್ಧಃ ಪಾಂಡುಪುತ್ರಾನ್ಸಹ ಮಾತ್ರಾ ವಿವಾಸಯ।
01130019c ವಾರಣಾವತಮದ್ಯೈವ ನಾತ್ರ ದೋಷೋ ಭವಿಷ್ಯತಿ।।
ನೀನು ಬೇಕಾದರೆ ಇಂದೇ ತಾಯಿಯೊಂದಿಗೆ ಪಾಂಡುಪುತ್ರರನ್ನು ನಿಸ್ಸಂಕೋಚವಾಗಿ ವಾರಣಾವತಕ್ಕೆ ಕಳುಹಿಸಬಹುದು. ಇದರಿಂದ ಯಾವ ದೋಷವೂ ಉಂಟಾಗುವುದಿಲ್ಲ.
01130020a ವಿನಿದ್ರಕರಣಂ ಘೋರಂ ಹೃದಿ ಶಲ್ಯಮಿವಾರ್ಪಿತಂ।
01130020c ಶೋಕಪಾವಕಮುದ್ಭೂತಂ ಕರ್ಮಣೈತೇನ ನಾಶಯ।
ಹೀಗೆ ಮಾಡಿ ನನ್ನ ಹೃದಯವನ್ನು ಚುಚ್ಚಿ ಶೋಕದ ಪಾವಕನನ್ನು ಹುಟ್ಟಿಸಿರುವ ಈ ಒಂದು ಅತಿ ಘೋರ ಮುಳ್ಳನ್ನು ನಾಶಪಡಿಸು.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹದಾಹರ್ವಣಿ ದುರ್ಯೋಧನಪರಾಮರ್ಷೇ ತ್ರಿಂಶದಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹದಾಹ ಪರ್ವದಲ್ಲಿ ದುರ್ಯೋಧಪರಾಮರ್ಷ ಎನ್ನುವ ನೂರಾಮೂವತ್ತನೆಯ ಅಧ್ಯಾಯವು.