ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಜತುಗೃಹದಾಹ ಪರ್ವ
ಅಧ್ಯಾಯ 129
ಸಾರ
ಪಾಂಡವರನ್ನು ಕೊಲ್ಲಲು ಕೌರವರ ಹಲವು ಉಪಾಯಗಳು; ಪಾಂಡುಸುತರ ಜನಪ್ರಿಯತೆಯನ್ನು ನೋಡಿ ದುರ್ಯೋಧನನು ಪರಿತಪಿಸಿದುದು (1-10). ತಾವು ಪರಪಿಂಡದ ಜೀವನಕ್ಕೆ ಹೋಗುವ ಮುನ್ನ ಏನನ್ನಾದರೂ ಮಾಡಬೇಕೆಂದು ದುರ್ಯೋಧನನು ಏಕಾಂತದಲ್ಲಿ ಧೃತರಾಷ್ಟ್ರನಿಗೆ ಹೇಳುವುದು (11-18).
01129001 ವೈಶಂಪಾಯನ ಉವಾಚ।
01129001a ಪ್ರಾಣಾಧಿಕಂ ಭೀಮಸೇನಂ ಕೃತವಿದ್ಯಂ ಧನಂಜಯಂ।
01129001c ದುರ್ಯೋಧನೋ ಲಕ್ಷಯಿತ್ವ ಪರ್ಯತಪ್ಯತ ದುರ್ಮತಿಃ।।
ವೈಶಂಪಾಯನನು ಹೇಳಿದನು: “ಭೀಮಸೇನನ ಅಧಿಕ ಶಕ್ತಿಯನ್ನೂ ಧನಂಜಯನ ಕೃತವಿದ್ಯೆಯನ್ನೂ ನೋಡಿದ ದುರ್ಮತಿ ದುರ್ಯೋಧನನು ಪರಿತಪಿಸಿದನು.
01129002a ತತೋ ವೈಕರ್ತನಃ ಕರ್ಣಃ ಶಕುನಿಶ್ಚಾಪಿ ಸೌಬಲಃ।
01129002c ಅನೇಕೈರಭ್ಯುಪಾಯೈಸ್ತಾಂಜಿಘಾಂಸಂತಿ ಸ್ಮ ಪಾಂಡವಾನ್।।
01129003a ಪಾಂಡವಾಶ್ಚಾಪಿ ತತ್ಸರ್ವಂ ಪ್ರತ್ಯಜಾನನ್ನರಿಂದಮಾಃ।
01129003c ಉದ್ಭಾವನಮಕುರ್ವಂತೋ ವಿದುರಸ್ಯ ಮತೇ ಸ್ಥಿತಾಃ।।
ವೈಕರ್ತನ ಕರ್ಣ ಮತ್ತು ಸೌಬಲ ಶಕುನಿಯರು ಪಾಂಡವರನ್ನು ಕೊಲ್ಲಲು ಅನೇಕ ಉಪಾಯಗಳನ್ನು ಹೂಡಿದರು. ಆದರೆ ಆ ಅರಿಂದಮ ಪಾಂಡವರು ಅವೆಲ್ಲವನ್ನೂ ಮೊದಲೇ ತಿಳಿದುಕೊಂಡಿದ್ದರೂ ವಿದುರನ ಸಲಹೆಯಂತೆ ಅವನ್ನು ಸಹಿಸಿಕೊಂಡು ಬಹಿರಂಗಗೊಳಿಸದೇ ಇದ್ದರು.
01129004a ಗುಣೈಃ ಸಮುದಿತಾನ್ದೃಷ್ಟ್ವಾ ಪೌರಾಃ ಪಾಂಡುಸುತಾಂಸ್ತದಾ।
01129004c ಕಥಯಂತಿ ಸ್ಮ ಸಂಭೂಯ ಚತ್ವರೇಷು ಸಭಾಸು ಚ।।
ಪಾಂಡುಸುತರು ಸುಗುಣಗಳಿಂದ ಬೆಳೆಯುತ್ತಿರುವುದನ್ನು ನೋಡಿದ ಪೌರರು ಚೌಕಗಳಲ್ಲಿ ಸೇರಿದಾಗಲೆಲ್ಲೆಲ್ಲಾ ಅವರ ಕುರಿತೇ ಮಾತನಾಡುತ್ತಿದ್ದರು.
01129005a ಪ್ರಜ್ಞಾಚಕ್ಷುರಚಕ್ಷುಷ್ಟ್ವಾದ್ಧೃತರಾಷ್ಟ್ರೋ ಜನೇಶ್ವರಃ।
01129005c ರಾಜ್ಯಮಪ್ರಾಪ್ತವಾನ್ಪೂರ್ವಂ ಸ ಕಥಂ ನೃಪತಿರ್ಭವೇತ್।।
“ಮೊದಲು ಪ್ರಜ್ಞಾಚಕ್ಷು ಜನೇಶ್ವರ ಧೃತರಾಷ್ಟ್ರನಿಗೆ ಕುರುಡನಾಗಿದ್ದಾನೆಂದು ರಾಜ್ಯವು ದೊರೆಯಲಿಲ್ಲ. ಈಗ ಹೇಗೆ ರಾಜನಾಗಿದ್ದಾನೆ?
01129006a ತಥಾ ಭೀಷ್ಮಃ ಶಾಂತನವಃ ಸತ್ಯಸಂಧೋ ಮಹಾವ್ರತಃ।
01129006c ಪ್ರತ್ಯಾಖ್ಯಾಯ ಪುರಾ ರಾಜ್ಯಂ ನಾದ್ಯ ಜಾತು ಗ್ರಹೀಷ್ಯತಿ।।
ಹಿಂದೆ ರಾಜ್ಯವನ್ನು ತಿರಸ್ಕರಿಸಿದ ಸತ್ಯಸಂಧ ಮಹಾವ್ರತ ಶಾಂತನವ ಭೀಷ್ಮನು ಮುಂದೆ ಎಂದೂ ಅದನ್ನು ಸ್ವೀಕರಿಸುವುದಿಲ್ಲ.
01129007a ತೇ ವಯಂ ಪಾಂಡವಂ ಜ್ಯೇಷ್ಠಂ ತರುಣಂ ವೃದ್ಧಶೀಲಿನಂ।
01129007c ಅಭಿಷಿಂಚಾಮ ಸಾಧ್ವದ್ಯ ಸತ್ಯಂ ಕರುಣವೇದಿನಂ।।
ಹಾಗಿದ್ದಾಗ ಈಗ ನಾವು ತರುಣನಾಗಿದ್ದರೂ ವೃದ್ಧರಂತೆ ಶೀಲವಂತ, ಸತ್ಯನೂ ಕರುಣವೇದಿಯೂ ಆದ ಜ್ಯೇಷ್ಠ ಪಾಂಡವನನ್ನು ಅಭಿಷೇಕಿಸಬೇಕು.
01129008a ಸ ಹಿ ಭೀಷ್ಮಂ ಶಾಂತನವಂ ಧೃತರಾಷ್ಟ್ರಂ ಚ ಧರ್ಮವಿತ್।
01129008c ಸಪುತ್ರಂ ವಿವಿಧೈರ್ಭೋಗೈರ್ಯೋಜಯಿಷ್ಯತಿ ಪೂಜಯನ್।।
ಆ ಧರ್ಮವಿದನೇ ಶಾಂತನವ ಭೀಷ್ಮ, ಪುತ್ರರಿಂದೊಡಗೂಡಿದ ಧೃತರಾಷ್ಟ್ರ ಇವರನ್ನು ಪೂಜಿಸಿ ವಿವಿಧ ಭೋಗಗಳಿಗೆ ಏರ್ಪಾಡುಮಾಡಿಕೊಡುತ್ತಾನೆ.”
01129009a ತೇಷಾಂ ದುರ್ಯೋಧನಃ ಶ್ರುತ್ವಾ ತಾನಿ ವಾಕ್ಯಾನಿ ಭಾಷತಾಂ।
01129009c ಯುಧಿಷ್ಠಿರಾನುರಕ್ತಾನಾಂ ಪರ್ಯತಪ್ಯತ ದುರ್ಮತಿಃ।।
ದುರ್ಮತಿ ದುರ್ಯೋಧನನು ಯುಧಿಷ್ಠಿರನ ಅನುರಕ್ತರು ಮಾತನಾಡಿಕೊಳ್ಳುತ್ತಿದ್ದ ಈ ವಾಕ್ಯಗಳನ್ನು ಕೇಳಿ ಪರಿತಪಿಸಿದನು.
01129010a ಸ ತಪ್ಯಮಾನೋ ದುಷ್ಟಾತ್ಮಾ ತೇಷಾಂ ವಾಚೋ ನ ಚಕ್ಷಮೇ।
01129010c ಈರ್ಷ್ಯಯಾ ಚಾಭಿಸಂತಪ್ತೋ ಧೃತರಾಷ್ಟ್ರಮುಪಾಗಮತ್।।
ಆ ದುಷ್ಟಾತ್ಮನು ಅವರ ಈ ಮಾತುಗಳಿಂದ ಬೆಂದು, ಅವನ್ನು ಕ್ಷಮಿಸಲಾಗದೇ, ಈರ್ಷೆಯಿಂದ ಸಂತಪ್ತನಾಗಿ ಧೃತರಾಷ್ಟ್ರನಲ್ಲಿಗೆ ಬಂದನು.
01129011a ತತೋ ವಿರಹಿತಂ ದೃಷ್ಟ್ವಾ ಪಿತರಂ ಪ್ರತಿಪೂಜ್ಯ ಸಃ।
01129011c ಪೌರಾನುರಾಗಸಂತಪ್ತಃ ಪಶ್ಚಾದಿದಮಭಾಷತ।।
ಅವನು ಒಬ್ಬನೇ ಇದ್ದುದನ್ನು ನೋಡಿ ತನ್ನ ತಂದೆಗೆ ನಮಸ್ಕರಿಸಿ, ಪೌರರ ಬಯಕೆಗಳಿಂದ ಸಂತಪ್ತನಾಗಿ, ಈ ಮಾತುಗಳನ್ನಾಡಿದನು:
01129012a ಶ್ರುತಾ ಮೇ ಜಲ್ಪತಾಂ ತಾತ ಪೌರಾಣಾಮಶಿವಾ ಗಿರಃ।
01129012c ತ್ವಾಮನಾದೃತ್ಯ ಭೀಷ್ಮಂ ಚ ಪತಿಮಿಚ್ಛಂತಿ ಪಾಂಡವಂ।।
“ತಂದೇ! ಪೌರರ ತೊದಲಿಕೆಯ ಅಶುಭ ಮಾತುಗಳನ್ನು ಕೇಳಿದ್ದೇನೆ. ನಿನ್ನನ್ನು ಮತ್ತು ಭೀಷ್ಮನನ್ನು ಅನಾದರಿಸಿ ಅವರು ಪಾಂಡವನನ್ನು ತಮ್ಮ ರಾಜನನ್ನಾಗಿ ಬಯಸುತ್ತಾರೆ.
01129013a ಮತಮೇತಚ್ಚ ಭೀಷ್ಮಸ್ಯ ನ ಸ ರಾಜ್ಯಂ ಬುಭೂಷತಿ।
01129013c ಅಸ್ಮಾಕಂ ತು ಪರಾಂ ಪೀಡಾಂ ಚಿಕೀರ್ಷಂತಿ ಪುರೇ ಜನಾಃ।।
ರಾಜ್ಯವನ್ನು ಬಯಸದ ಭೀಷ್ಮನೇನೋ ಇದಕ್ಕೆ ಒಪ್ಪಿಕೊಳ್ಳಬಹುದು. ಆದರೆ ನಮ್ಮ ಮೇಲೆ ಪುರದ ಜನರು ಅತಿ ದೊಡ್ಡ ಪೀಡೆಯನ್ನು ತರಲು ಬಯಸುತ್ತಿದ್ದಾರೆ.
01129014a ಪಿತೃತಃ ಪ್ರಾಪ್ತವಾನ್ರಾಜ್ಯಂ ಪಾಂಡುರಾತ್ಮಗುಣೈಃ ಪುರಾ।
01129014c ತ್ವಮಪ್ಯಗುಣಸಮ್ಯೋಗಾತ್ಪ್ರಾಪ್ತಂ ರಾಜ್ಯಂ ನ ಲಬ್ಧವಾನ್।।
ಹಿಂದೆ ಪಾಂಡುವು ತನ್ನ ಗುಣಗಳ ಕಾರಣಗಳಿಂದ ತನ್ನ ತಂದೆಯಿಂದ ರಾಜ್ಯವನ್ನು ಪಡೆದನು. ರಾಜ್ಯವು ನಿನಗೆ ಪ್ರಾಪ್ತಿಯಾಗುತ್ತಿದ್ದರೂ ನಿನ್ನ ಅವಗುಣದ ಕಾರಣದಿಂದ ಅದು ನಿನಗೆ ದೊರೆಯಲಿಲ್ಲ.
01129015a ಸ ಏಷ ಪಾಂಡೋರ್ದಾಯಾದ್ಯಂ ಯದಿ ಪ್ರಾಪ್ನೋತಿ ಪಾಂಡವಃ।
01129015c ತಸ್ಯ ಪುತ್ರೋ ಧ್ರುವಂ ಪ್ರಾಪ್ತಸ್ತಸ್ಯ ತಸ್ಯೇತಿ ಚಾಪರಃ।।
ಈಗ ಪಾಂಡುವಿನ ದಾಯಾದ್ಯವು ಪಾಂಡವನಿಗೆ ದೊರೆತರೆ ಅದು ಮುಂದೆ ಅವನ ಮಗನಿಗೆ, ಮತ್ತೆ ಅವನ ಮಗನಿಗೆ ದೊರೆಯುವುದು ನಿರ್ದಿಷ್ಟ.
01129016a ತೇ ವಯಂ ರಾಜವಂಶೇನ ಹೀನಾಃ ಸಹ ಸುತೈರಪಿ।
01129016c ಅವಜ್ಞಾತಾ ಭವಿಷ್ಯಾಮೋ ಲೋಕಸ್ಯ ಜಗತೀಪತೇ।।
ಜಗತೀಪತೇ! ನಾವಾದರೂ ನಮ್ಮ ಮಕ್ಕಳೊಂದಿಗೆ ರಾಜವಂಶವನ್ನು ಕಳೆದುಕೊಂಡು ಲೋಕದಲ್ಲಿ ಯಾರಿಗೂ ತಿಳಿಯದವರಂತೆ ಆಗಿಬಿಡುತ್ತೇವೆ.
01129017a ಸತತಂ ನಿರಯಂ ಪ್ರಾಪ್ತಾಃ ಪರಪಿಂಡೋಪಜೀವಿನಃ।
01129017c ನ ಭವೇಮ ಯಥಾ ರಾಜಂಸ್ತಥಾ ಶೀಘ್ರಂ ವಿಧೀಯತಾಂ।।
ರಾಜನ್! ನಾವು ಈ ರೀತಿ ಪರ ಪಿಂಡದ ಉಪಜೀವನವೆಂಬ ಸತತ ನರಕಕ್ಕೆ ಹೋಗುವ ಮುನ್ನ ಇದಕ್ಕೆ ಏನನ್ನಾದರೂ ಶೀಘ್ರವಾಗಿ ಕ್ರಮತೆಗೆದುಕೋ.
01129018a ಅಭವಿಷ್ಯಃ ಸ್ಥಿರೋ ರಾಜ್ಯೇ ಯದಿ ಹಿ ತ್ವಂ ಪುರಾ ನೃಪ।
01129018c ಧ್ರುವಂ ಪ್ರಾಪ್ಸ್ಯಾಮ ಚ ವಯಂ ರಾಜ್ಯಮಪ್ಯವಶೇ ಜನೇ।।
ನೃಪ! ಹಿಂದೆ ನೀನೇ ರಾಜ್ಯದಲ್ಲಿ ಸ್ಥಿರವಾಗಿ ಅಭಿಷಿಕ್ತನಾಗಿದ್ದರೆ, ಜನರಿಗೆ ಇಷ್ಟವಿಲ್ಲದಿದ್ದರೂ ನಿಶ್ಚಯವಾಗಿ ನಾವೇ ರಾಜ್ಯವನ್ನು ಪಡೆಯುತ್ತಿದ್ದೆವು.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹದಾಹಪರ್ವಣಿ ದುರ್ಯೋಧನೇರ್ಷ್ಯಾಯಾಂ ಊನತ್ರಿಂಶದಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹದಾಹ ಪರ್ವದಲ್ಲಿ ದುರ್ಯೋಧನೇರ್ಷ್ಯಾಯಾಂ ನೂರಾಇಪ್ಪತ್ತೊಂಭತ್ತನೆಯ ಅಧ್ಯಾಯವು.