128 ದ್ರುಪದಶಾಸನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಜತುಗೃಹದಾಹ ಪರ್ವ

ಅಧ್ಯಾಯ 128

ಸಾರ

ಪಾಂಚಾಲ ರಾಜ ದ್ರುಪದನನ್ನು ಹಿಡಿದು ತರವುದೇ ಗುರುದಕ್ಷಿಣೆಯೆಂದು ದ್ರೋಣನು ಹೇಳಲು, ಪಾಂಚಲನಗರಿಯನ್ನು ಆಕ್ರಮಣಿಸಿ ರಾಜನನ್ನು ಸೆರೆಹಿಡಿದು ಗುರುವಿಗೆ ಒಪ್ಪಿಸಿದುದು (1-6). ದ್ರೋಣನು ದ್ರುಪದನಿಗೆ ಚುಚ್ಚು ಮಾತುಗಳನ್ನಾಗಿ, ಅವನ ಅರ್ಧರಾಜ್ಯವನ್ನಿಟ್ಟುಕೊಂಡು ಉಳಿದ ಅರ್ಧವನ್ನು ಹಿಂದಿರುಗಿಸಿದುದು (7-18).

01128001 ವೈಶಂಪಾಯನ ಉವಾಚ।
01128001a ತತಃ ಶಿಷ್ಯಾನ್ಸಮಾನೀಯ ಆಚಾರ್ಯಾರ್ಥಮಚೋದಯತ್।
01128001c ದ್ರೋಣಃ ಸರ್ವಾನಶೇಷೇಣ ದಕ್ಷಿಣಾರ್ಥಂ ಮಹೀಪತೇ।।

ವೈಶಂಪಾಯನನು ಹೇಳಿದನು: “ಮಹೀಪತೇ! ಆಚಾರ್ಯ ದ್ರೋಣನು ಶಿಷ್ಯರೆಲ್ಲರನ್ನೂ ಸೇರಿಸಿ ಯಾರನ್ನೂ ಬಿಡದೇ ಎಲ್ಲರಲ್ಲಿಯೂ ಗುರುದಕ್ಷಿಣೆಗಾಗಿ ಪ್ರಚೋದಿಸಿದನು.

01128002a ಪಾಂಚಾಲರಾಜಂ ದ್ರುಪದಂ ಗೃಹೀತ್ವಾ ರಣಮೂರ್ಧನಿ।
01128002c ಪರ್ಯಾನಯತ ಭದ್ರಂ ವಃ ಸಾ ಸ್ಯಾತ್ಪರಮದಕ್ಷಿಣಾ।।

“ಪಾಂಚಾಲರಾಜ ದ್ರುಪದದನ್ನು ರಣಭೂಮಿಯಿಂದ ಹಿಡಿದು ತನ್ನಿ. ಅದೇ ಪರಮ ದಕ್ಷಿಣೆ. ನಿಮಗೆ ಮಂಗಳವಾಗಲಿ.”

01128003a ತಥೇತ್ಯುಕ್ತ್ವಾ ತು ತೇ ಸರ್ವೇ ರಥೈಸ್ತೂರ್ಣಂ ಪ್ರಹಾರಿಣಃ।
01128003c ಆಚಾರ್ಯಧನದಾನಾರ್ಥಂ ದ್ರೋಣೇನ ಸಹಿತಾ ಯಯುಃ।।

“ಹಾಗೆಯೇ ಆಗಲಿ” ಎಂದು ಅವರೆಲ್ಲರೂ ಆಯುಧಗಳನ್ನು ಹಿಡಿದು ರಥಗಳನ್ನೇರಿ ಗುರುದಕ್ಷಿಣೆಯನ್ನು ತರಲು ದ್ರೋಣನನ್ನೊಡಗೂಡಿ ಹೊರಟರು.

01128004a ತತೋಽಭಿಜಗ್ಮುಃ ಪಾಂಚಾಲಾನ್ನಿಘ್ನಂತಸ್ತೇ ನರರ್ಷಭಾಃ।
01128004c ಮಮೃದುಸ್ತಸ್ಯ ನಗರಂ ದ್ರುಪದಸ್ಯ ಮಹೌಜಸಃ।।

ಆ ನರರ್ಷಭರು ಪಾಂಚಾಲರ ಮೇಲೆ ಧಾಳಿಯಿಕ್ಕಿ, ಅವರನ್ನು ಸದೆಬಡಿದು, ಮಹೌಜಸ ದ್ರುಪದನ ನಗರವನ್ನು ಪುಡಿಮಾಡಿದರು.

01128005a ತೇ ಯಜ್ಞಸೇನಂ ದ್ರುಪದಂ ಗೃಹೀತ್ವಾ ರಣಮೂರ್ಧನಿ।
01128005c ಉಪಾಜಹ್ರುಃ ಸಹಾಮಾತ್ಯಂ ದ್ರೋಣಾಯ ಭರತರ್ಷಭಾಃ।।

ಆ ಭರತರ್ಷಭರು ರಣಭೂಮಿಯಲ್ಲಿ ಯಜ್ಞಸೇನ ದ್ರುಪದನನ್ನು ಅವನ ಅಮಾತ್ಯರೊಂದಿಗೆ ಸೆರೆಹಿಡಿದು ದ್ರೋಣನ ಬಳಿ ಕರೆತಂದರು.

01128006a ಭಗ್ನದರ್ಪಂ ಹೃತಧನಂ ತಥಾ ಚ ವಶಮಾಗತಂ।
01128006c ಸ ವೈರಂ ಮನಸಾ ಧ್ಯಾತ್ವಾ ದ್ರೋಣೋ ದ್ರುಪದಮಬ್ರವೀತ್।।

ವೈರವನ್ನು ಮನಸ್ಸಿನಲ್ಲಿಯೇ ನೆನಪಿಸಿಕೊಂಡು ದ್ರೋಣನು ಸೆರೆಹಿಡಿಯಲ್ಪಟ್ಟ ಭಗ್ನದರ್ಪ ಹೃತಧನ ದ್ರುಪದನಿಗೆ ಇಂತೆಂದನು:

01128007a ಪ್ರಮೃದ್ಯ ತರಸಾ ರಾಷ್ಟ್ರಂ ಪುರಂ ತೇ ಮೃದಿತಂ ಮಯಾ।
01128007c ಪ್ರಾಪ್ಯ ಜೀವನ್ರಿಪುವಶಂ ಸಖಿಪೂರ್ವಂ ಕಿಮಿಷ್ಯತೇ।।

“ಸೇಡಿನಿಂದ ನಿನ್ನ ರಾಷ್ಟ್ರ ಮತ್ತು ಪುರವನ್ನು ನಾನು ಗಳಿಸಿದ್ದೇನೆ. ಜೀವಂತವಿದ್ದರೂ ರಿಪುವಶದಲ್ಲಿರುವ ಹಳೆಯ ಸ್ನೇಹಿತನು ಯಾರಿಗೆ ಬೇಕು?”

01128008a ಏವಮುಕ್ತ್ವಾ ಪ್ರಹಸ್ಯೈನಂ ನಿಶ್ಚಿತ್ಯ ಪುನರಬ್ರವೀತ್।
01128008c ಮಾ ಭೈಃ ಪ್ರಾಣಭಯಾದ್ರಾಜನ್ಕ್ಷಮಿಣೋ ಬ್ರಾಹ್ಮಣಾ ವಯಂ।।

ಹೀಗೆ ಹೇಳಿ ಜೋರಾಗಿ ನಕ್ಕ ಅವನು ಒಂದು ನಿಶ್ಚಯಕ್ಕೆ ಬಂದು ಪುನಃ ಹೇಳಿದನು: “ರಾಜನ್! ನನ್ನಲ್ಲಿ ನಿನ್ನ ಪ್ರಾಣಕ್ಕೆ ಭಯಪಡಬೇಡ. ನಾವು ಬ್ರಾಹ್ಮಣರು ಕ್ಷಮಾವಂತರು.

01128009a ಆಶ್ರಮೇ ಕ್ರೀಡಿತಂ ಯತ್ತು ತ್ವಯಾ ಬಾಲ್ಯೇ ಮಯಾ ಸಹ।
01128009c ತೇನ ಸಂವರ್ಧಿತಃ ಸ್ನೇಹಸ್ತ್ವಯಾ ಮೇ ಕ್ಷತ್ರಿಯರ್ಷಭ।।

ಕ್ಷತ್ರಿಯರ್ಷಭ! ಬಾಲ್ಯದಲ್ಲಿ ಆಶ್ರಮದಲ್ಲಿ ನನ್ನೊಡನೆ ಆಡುತ್ತಿದ್ದಾಗ ನನಗೆ ನಿನ್ನಲ್ಲಿ ಸ್ನೇಹವು ಬೆಳೆಯಿತು.

01128010a ಪ್ರಾರ್ಥಯೇಯಂ ತ್ವಯಾ ಸಖ್ಯಂ ಪುನರೇವ ನರರ್ಷಭ।
01128010c ವರಂ ದದಾಮಿ ತೇ ರಾಜನ್ರಾಜ್ಯಸ್ಯಾರ್ಧಮವಾಪ್ನುಹಿ।।

ನರರ್ಷಭ! ಪುನಃ ಇನ್ನೊಮ್ಮೆ ನಿನ್ನ ಸಖ್ಯವನ್ನು ಪ್ರಾರ್ಥಿಸುತ್ತಿದ್ದೇನೆ. ರಾಜನ್! ನಿನಗೆ ಅರ್ಧರಾಜ್ಯದ ವರವನ್ನು ನೀಡುತ್ತಿದ್ದೇನೆ. ತೆಗೆದುಕೋ.

01128011a ಅರಾಜಾ ಕಿಲ ನೋ ರಾಜ್ಞಾಂ ಸಖಾ ಭವಿತುಮರ್ಹತಿ।
01128011c ಅತಃ ಪ್ರಯತಿತಂ ರಾಜ್ಯೇ ಯಜ್ಞಸೇನ ಮಯಾ ತವ।।

ರಾಜ್ಯವಿದ್ದವನು ರಾಜ್ಯವಿಲ್ಲದವನ ಸಖನಾದರೂ ಹೇಗೆ ಆಗಬಲ್ಲನು? ಆದುದರಿಂದ ಯಜ್ಞಸೇನ! ನಿನ್ನ ರಾಜ್ಯವನ್ನು ನಾನು ಗಳಿಸಿದ್ದೇನೆ.

01128012a ರಾಜಾಸಿ ದಕ್ಷಿಣೇ ಕೂಲೇ ಭಾಗೀರಥ್ಯಾಹಮುತ್ತರೇ।
01128012c ಸಖಾಯಂ ಮಾಂ ವಿಜಾನೀಹಿ ಪಾಂಚಾಲ ಯದಿ ಮನ್ಯಸೇ।।

ಭಾಗೀರಥಿಯ ದಕ್ಷಿಣಕ್ಕೆ ನೀನು ಮತ್ತು ಅದರ ಉತ್ತರಕ್ಕೆ ನಾನು ರಾಜರಾಗೋಣ. ಪಾಂಚಾಲ! ನಿನಗೆ ಒಪ್ಪಿಗೆಯಾದರೆ ನಾನು ನಿನ್ನನ್ನು ಸಖನೆಂದು ಪರಿಗಣಿಸುತ್ತೇನೆ.”

01128013 ದ್ರುಪದ ಉವಾಚ।
01128013a ಅನಾಶ್ಚರ್ಯಮಿದಂ ಬ್ರಹ್ಮನ್ವಿಕ್ರಾಂತೇಷು ಮಹಾತ್ಮಸು।
01128013c ಪ್ರೀಯೇ ತ್ವಯಾಹಂ ತ್ವತ್ತಶ್ಚ ಪ್ರೀತಿಮಿಚ್ಛಾಮಿ ಶಾಶ್ವತೀಂ।।

ದ್ರುಪದನು ಹೇಳಿದನು: “ಬ್ರಹ್ಮನ್! ಈ ಮಹಾತ್ಮ ವಿಕ್ರಾಂತರಿಂದಾದ ಇದು ಆಶ್ಚರ್ಯಕರವಾದುದೇನೂ ಅಲ್ಲ. ನಾನು ನಿನ್ನ ಮಿತ್ರನಾಗುತ್ತೇನೆ. ನಾನು ನಿನ್ನಿಂದ ಶಾಶ್ವತ ಪ್ರೀತಿಯನ್ನು ಬಯಸುತ್ತೇನೆ.””

01128014 ವೈಶಂಪಾಯನ ಉವಾಚ।
01128014a ಏವಮುಕ್ತಸ್ತು ತಂ ದ್ರೋಣೋ ಮೋಕ್ಷಯಾಮಾಸ ಭಾರತ।
01128014c ಸತ್ಕೃತ್ಯ ಚೈನಂ ಪ್ರೀತಾತ್ಮಾ ರಾಜ್ಯಾರ್ಧಂ ಪ್ರತ್ಯಪಾದಯತ್।।

ವೈಶಂಪಾಯನನು ಹೇಳಿದನು: “ಭಾರತ! ಇದನ್ನು ಕೇಳಿದ ದ್ರೋಣನು ಅವನನ್ನು ಸತ್ಕರಿಸಿ ಸಂತೋಷದಿಂದ ಅರ್ಧ ರಾಜ್ಯವನ್ನು ನೀಡಿ ಬಿಡುಗಡೆ ಮಾಡಿದನು.

01128015a ಮಾಕಂದೀಮಥ ಗಂಗಾಯಾಸ್ತೀರೇ ಜನಪದಾಯುತಾಂ।
01128015c ಸೋಽಧ್ಯಾವಸದ್ದೀನಮನಾಃ ಕಾಂಪಿಲ್ಯಂ ಚ ಪುರೋತ್ತಮಂ।
01128015e ದಕ್ಷಿಣಾಂಶ್ಚೈವ ಪಾಂಚಾಲಾನ್ಯಾವಚ್ಚರ್ಮಣ್ವತೀ ನದೀ।।

ದೀನಮನಸ್ಕನಾದ ದ್ರುಪದನು ಗಂಗಾತೀರದಲ್ಲಿರುವ ಮಾಕಂದಿಯ ಜನಪದ ಕಾಂಪಿಲ್ಯವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು, ದಕ್ಷಿಣ ಪಾಂಚಾಲವನ್ನು ಚರ್ಮಣ್ವತೀ ನದಿಯವರೆಗೂ ಆಳತೊಡಗಿದನು.

01128016a ದ್ರೋಣೇನ ವೈರಂ ದ್ರುಪದಃ ಸಂಸ್ಮರನ್ನ ಶಶಾಮ ಹ।
01128016c ಕ್ಷಾತ್ರೇಣ ಚ ಬಲೇನಾಸ್ಯ ನಾಪಶ್ಯತ್ಸ ಪರಾಜಯಂ।।
01128017a ಹೀನಂ ವಿದಿತ್ವಾ ಚಾತ್ಮಾನಂ ಬ್ರಾಹ್ಮಣೇನ ಬಲೇನ ಚ।
01128017c ಪುತ್ರಜನ್ಮ ಪರೀಪ್ಸನ್ವೈ ಸ ರಾಜಾ ತದಧಾರಯತ್।

ದ್ರೋಣನೊಂದಿಗಿದ್ದ ವೈರತ್ವವನ್ನು ನೆನಪಿಸಿಕೊಳ್ಳುತ್ತಿದ್ದ ದ್ರುಪದನಿಗೆ ಶಾಂತಿಯೇ ದೊರೆಯಲಿಲ್ಲ. ತನ್ನ ಕ್ಷತ್ರಿಯ ಬಲದಿಂದ ಅವನನ್ನು ಪರಾಜಯಗೊಳಿಸುವ ದಾರಿಯನ್ನೇ ಕಾಣಲಿಲ್ಲ. ಬ್ರಾಹ್ಮಣನ ಬಲಕ್ಕಿಂತ ತನ್ನ ಬಲವು ಹೀನವಾದದ್ದು ಎಂದು ತಿಳಿದನು. ಅದನ್ನು ಸಹಿಸಿಕೊಂಡ ರಾಜನು ಪುತ್ರನ ಜನ್ಮಕ್ಕಾಗಿ ಕಾಯುತ್ತಿದ್ದನು.

01128017e ಅಹಿಚ್ಛತ್ರಂ ಚ ವಿಷಯಂ ದ್ರೋಣಃ ಸಮಭಿಪದ್ಯತ।।
01128018a ಏವಂ ರಾಜನ್ನಹಿಚ್ಛತ್ರಾ ಪುರೀ ಜನಪದಾಯುತಾ।
01128018c ಯುಧಿ ನಿರ್ಜಿತ್ಯ ಪಾರ್ಥೇನ ದ್ರೋಣಾಯ ಪ್ರತಿಪಾದಿತಾ।।

ಅಹಿಚ್ಛತ್ರದಲ್ಲಿ ದ್ರೋಣನು ನೆಲೆಸಿದನು. ರಾಜನ್! ಈ ರೀತಿ ಪಾರ್ಥನು ಜನಪದಗಳಿಂದ ಆವೃತ ಅಹಿಚ್ಛತ್ರ ಪುರಿಯನ್ನು ಯುದ್ಧದಲ್ಲಿ ಗೆದ್ದು ದ್ರೋಣನಿಗೆ ದಕ್ಷಿಣೆಯನ್ನಾಗಿತ್ತನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹದಾಹಪರ್ವಣಿ ದ್ರುಪದಶಾಸನೇ ಅಷ್ಟವಿಂಶತ್ಯಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹದಾಹ ಪರ್ವದಲ್ಲಿ ದ್ರುಪದಶಾಸನ ಎನ್ನುವ ನೂರಾಇಪ್ಪತ್ತೆಂಟನೆಯ ಅಧ್ಯಾಯವು.