ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಜತುಗೃಹದಾಹ ಪರ್ವ
ಅಧ್ಯಾಯ 127
ಸಾರ
ಕರ್ಣನ ತಂದೆ ವೃದ್ಧ ಸೂತ ಅಧಿರಥನು ರಂಗವನ್ನು ಪ್ರವೇಶಿಸಲು ಭೀಮನು ಸೂತಪುತ್ರನೆಂದು ಕರ್ಣನನ್ನು ಅವಹೇಳನ ಮಾಡುವುದು (1-7). ಅದಕ್ಕೆ ದುರ್ಯೋಧನನು ಕರ್ಣನ ಪರವಾಗಿ ಮಾತನಾಡಿ ಭೀಮನನ್ನು ನಿಂದಿಸಿದುದು (8-17). ಸೂರ್ಯನು ಮುಳುಗಲು, ಪ್ರದರ್ಶನವು ಮುಕ್ತಾಯಗೊಂಡಿದುದು (18-24).
01127001 ವೈಶಂಪಾಯನ ಉವಾಚ।
01127001a ತತಃ ಸ್ರಸ್ತೋತ್ತರಪಟಃ ಸಪ್ರಸ್ವೇದಃ ಸವೇಪಥುಃ।
01127001c ವಿವೇಶಾಧಿರಥೋ ರಂಗಂ ಯಷ್ಟಿಪ್ರಾಣೋ ಹ್ವಯನ್ನಿವ।।
ವೈಶಂಪಾಯನನು ಹೇಳಿದನು: “ಆಗ ಉತ್ತರಪಟವನ್ನು ಕೆಳಗೆ ಬೀಳಿಸುತ್ತಾ ಬೆವರಿ ನಡಗುತ್ತಾ ಕೋಲನ್ನು ಹಿಡಿದು ದುರ್ಬಲ ಕಾಲುಗಳನ್ನೆಳೆಯುತ್ತಾ ಅಧಿರಥನು ರಂಗವನ್ನು ಪ್ರವೇಶಿಸಿದನು.
01127002a ತಮಾಲೋಕ್ಯ ಧನುಸ್ತ್ಯಕ್ತ್ವಾ ಪಿತೃಗೌರವಯಂತ್ರಿತಃ।
01127002c ಕರ್ಣೋಽಭಿಷೇಕಾರ್ದ್ರಶಿರಾಃ ಶಿರಸಾ ಸಮವಂದತ।।
ಅವನನ್ನು ನೋಡಿ, ಧನುಸ್ಸನ್ನು ಕೆಳಗಿಟ್ಟು, ಪಿತೃಗೌರವಾನ್ವಿತ ಕರ್ಣನು ಅಭಿಷೇಕದಿಂದ ಇನ್ನೂ ಒದ್ದೆಯಾಗಿಯೇ ಇದ್ದ ಶಿರದಿಂದ ಅವನನ್ನು ವಂದಿಸಿದನು.
01127003a ತತಃ ಪಾದಾವವಚ್ಛಾದ್ಯ ಪಟಾಂತೇನ ಸಸಂಭ್ರಮಃ।
01127003c ಪುತ್ರೇತಿ ಪರಿಪೂರ್ಣಾರ್ಥಮಬ್ರವೀದ್ರಥಸಾರಥಿಃ।।
ವಿಭ್ರಾಂತಿಗೊಂಡ ಆ ರಥಸಾರಥಿಯು ತನ್ನ ಪಂಚೆಯ ಅಂಚಿನಿಂದ ಕಾಲುಗಳನ್ನು ಮುಚ್ಚಿಕೊಳ್ಳುತ್ತಾ ಪರಿಪೂರ್ಣಾರ್ಥನಾದವನಿಗೆ “ಹಾ ಪುತ್ರ!” ಎಂದನು.
01127004a ಪರಿಷ್ವಜ್ಯ ಚ ತಸ್ಯಾಥ ಮೂರ್ಧಾನಂ ಸ್ನೇಹವಿಕ್ಲವಃ।
01127004c ಅಂಗರಾಜ್ಯಾಭಿಷೇಕಾರ್ದ್ರಮಶ್ರುಭಿಃ ಸಿಷಿಚೇ ಪುನಃ।।
ಸ್ನೇಹಭಾವದಿಂದ ಕಂಪಿತನಾಗಿ ಅವನನ್ನು ಬಿಗಿದಪ್ಪಿ ನೆತ್ತಿಗೆ ಮುತ್ತನ್ನಿಟ್ಟನು, ಮತ್ತು ಅಂಗರಾಜ್ಯಾಭಿಷೇಕದಿಂದ ಇನ್ನೂ ಒದ್ದೆಯಾಗಿದ್ದ ಅವನ ತಲೆಗೆ ತನ್ನ ಕಣ್ಣೀರಿನಿಂದ ಪುನಃ ಸಿಂಚಿಸಿದನು.
01127005a ತಂ ದೃಷ್ಟ್ವಾ ಸೂತಪುತ್ರೋಽಯಮಿತಿ ನಿಶ್ಚಿತ್ಯ ಪಾಂಡವಃ।
01127005c ಭೀಮಸೇನಸ್ತದಾ ವಾಕ್ಯಮಬ್ರವೀತ್ಪ್ರಹಸನ್ನಿವ।।
ಅವನನ್ನು ನೋಡಿದ ಪಾಂಡವ ಭೀಮನು ಇವನು ಸೂತಪುತ್ರನೆಂದು ನಿಶ್ಚಯಿಸಿ ನಗುತ್ತಾ ಹೇಳಿದನು:
01127006a ನ ತ್ವಮರ್ಹಸಿ ಪಾರ್ಥೇನ ಸೂತಪುತ್ರ ರಣೇ ವಧಂ।
01127006c ಕುಲಸ್ಯ ಸದೃಶಸ್ತೂರ್ಣಂ ಪ್ರತೋದೋ ಗೃಹ್ಯತಾಂ ತ್ವಯಾ।।
“ಸೂತಪುತ್ರ! ರಣದಲ್ಲಿ ನೀನು ಪಾರ್ಥನಿಂದ ವಧಿಸಲ್ಪಡಲು ಅರ್ಹನಲ್ಲ. ನಿನ್ನ ಕುಲಕ್ಕೆ ಸದೃಶವಾದ ಬಾರಿಕೋಲನ್ನೇ ಹಿಡಿಯುವುದು ಸರಿ!
01127007a ಅಂಗರಾಜ್ಯಂ ಚ ನಾರ್ಹಸ್ತ್ವಮುಪಭೋಕ್ತುಂ ನರಾಧಮ।
01127007c ಶ್ವಾ ಹುತಾಶಸಮೀಪಸ್ಥಂ ಪುರೋಡಾಶಮಿವಾಧ್ವರೇ।।
ನರಾಧಮ! ಹೇಗೆ ನಾಯಿಗೆ ಅಧ್ವರದಲ್ಲಿ ಹುತಾಶನನ ಸಮೀಪದ ಹವಿಸ್ಸಿನ ಅರ್ಹತೆ ಇಲ್ಲವೋ ಹಾಗೆ ಅಂಗರಾಜ್ಯವನ್ನು ಉಪಭೋಗಿಸುವ ಅರ್ಹತೆ ನಿನಗಿಲ್ಲ.”
01127008a ಏವಮುಕ್ತಸ್ತತಃ ಕರ್ಣಃ ಕಿಂ ಚಿತ್ಪ್ರಸ್ಫುರಿತಾಧರಃ।
01127008c ಗಗನಸ್ಥಂ ವಿನಿಃಶ್ವಸ್ಯ ದಿವಾಕರಮುದೈಕ್ಷತ।।
ಇದನ್ನು ಕೇಳಿದ ಕರ್ಣನ ಕೆಳತುಟಿಯು ನಡುಗತೊಡಗಿತು. ನಿಟ್ಟುಸಿರು ಬಿಡುತ್ತಾ ಆಕಾಶದಲ್ಲಿರುವ ಸೂರ್ಯನನ್ನು ತಲೆಯೆತ್ತಿ ನೋಡಿದನು.
01127009a ತತೋ ದುರ್ಯೋಧನಃ ಕೋಪಾದುತ್ಪಪಾತ ಮಹಾಬಲಃ।
01127009c ಭ್ರಾತೃಪದ್ಮವನಾತ್ತಸ್ಮಾನ್ಮದೋತ್ಕಟ ಇವ ದ್ವಿಪಃ।।
01127010a ಸೋಽಬ್ರವೀದ್ಭೀಮಕರ್ಮಾಣಂ ಭೀಮಸೇನಮವಸ್ಥಿತಂ।
01127010c ವೃಕೋದರ ನ ಯುಕ್ತಂ ತೇ ವಚನಂ ವಕ್ತುಮೀದೃಶಂ।।
ಆಗ ಮಹಾಬಲಿ ದುರ್ಯೋಧನನು ಕೋಪಗೊಂಡು ಕಮಲದ ಸರೋವರದಿಂದ ಮತ್ತಗಜವೊಂದು ಮೇಲೇಳುವಂತೆ ತನ್ನ ಸಹೋದರರ ಮಧ್ಯದಿಂದ ಮೇಲೆದ್ದು ಭೀಮಕರ್ಮಣಿ ಭೀಮಸೇನನಿಗೆ ಹೇಳಿದನು: “ವೃಕೋದರ! ಈ ರೀತಿ ಮಾತನಾಡುವುದು ನಿನಗೆ ಯುಕ್ತವಲ್ಲ.
01127011a ಕ್ಷತ್ರಿಯಾಣಾಂ ಬಲಂ ಜ್ಯೇಷ್ಠಂ ಯೋದ್ಧವ್ಯಂ ಕ್ಷತ್ರಬಂಧುನಾ।
01127011c ಶೂರಾಣಾಂ ಚ ನದೀನಾಂ ಚ ಪ್ರಭವಾ ದುರ್ವಿದಾಃ ಕಿಲ।।
ಕ್ಷತ್ರಿಯರಿಗೆ ಬಲವೇ ದೊಡ್ಡದು. ಕ್ಷತ್ರಬಂಧುವಿನೊಂದಿಗೆ ಯುದ್ಧ ಮಾಡಲೇ ಬೇಕು. ಶೂರರ ಮತ್ತು ನದಿಗಳ ಹುಟ್ಟು ನಿಜವಾಗಿಯೂ ತಿಳಿಯದಂಥಾದ್ದು.
01127012a ಸಲಿಲಾದುತ್ಥಿತೋ ವಹ್ನಿರ್ಯೇನ ವ್ಯಾಪ್ತಂ ಚರಾಚರಂ।
01127012c ದಧೀಚಸ್ಯಾಸ್ಥಿತೋ ವಜ್ರಂ ಕೃತಂ ದಾನವಸೂದನಂ।।
ಚರಾಚರಗಳನ್ನು ವ್ಯಾಪಿಸಿರುವ ವಹ್ನಿಯು ನೀರಿನಿಂದ ಹುಟ್ಟಿದ್ದುದು. ದಾನವರನ್ನು ಸಂಹರಿಸುವ ವಜ್ರವು ದಧೀಚಿಯ ಅಸ್ತಿಗಳಿಂದ ಮಾಡಲ್ಪಟ್ಟಿದೆ.
01127013a ಆಗ್ನೇಯಃ ಕೃತ್ತಿಕಾಪುತ್ರೋ ರೌದ್ರೋ ಗಾಂಗೇಯ ಇತ್ಯಪಿ।
01127013c ಶ್ರೂಯತೇ ಭಗವಾನ್ದೇವಃ ಸರ್ವಗುಹ್ಯಮಯೋ ಗುಹಃ।।
ಭಗವಾನ್ ದೇವ ಗುಹನು ಸಂಪೂರ್ಣವಾಗಿ ಗುಹ್ಯ ಎಂದು ಕೇಳಿದ್ದೇವೆ; ಅವನು ಆಗ್ನೇಯನಿರಬಹುದು, ಕೃತ್ತಿಕಾ ಪುತ್ರನಿರಬಹುದು, ರುದ್ರನ ಮಗನಿರಬಹುದು ಅಥವಾ ಗಂಗೆಯ ಮಗನಿರಬಹುದು.
01127014a ಕ್ಷತ್ರಿಯಾಭ್ಯಶ್ಚ ಯೇ ಜಾತಾ ಬ್ರಾಹ್ಮಣಾಸ್ತೇ ಚ ವಿಶ್ರುತಾಃ।
01127014c ಆಚಾರ್ಯಃ ಕಲಶಾಜ್ಜಾತಃ ಶರಸ್ತಂಬಾದ್ಗುರುಃ ಕೃಪಃ।
01127014e ಭವತಾಂ ಚ ಯಥಾ ಜನ್ಮ ತದಪ್ಯಾಗಮಿತಂ ನೃಪೈಃ।।
ಕ್ಷತ್ರಿಯರಲ್ಲಿ ಹುಟ್ಟಿದವರು ಬ್ರಾಹ್ಮಣರಾದರೆಂದೂ ಕೇಳಿದ್ದೇವೆ. ಆಚಾರ್ಯನು ಕಲಶದಲ್ಲಿ ಮತ್ತು ಗುರು ಕೃಪನು ಶರಸ್ತಂಭದಲ್ಲಿ ಜನಿಸಿದರು. ನಿಮ್ಮೆಲ್ಲರ ಜನ್ಮವೂ ಹೇಗಾಯಿತೆಂದು ಎಲ್ಲ ನೃಪರಿಗೂ ತಿಳಿದಿದ್ದುದೇ.
01127015a ಸಕುಂಡಲಂ ಸಕವಚಂ ದಿವ್ಯಲಕ್ಷಣಲಕ್ಷಿತಂ।
01127015c ಕಥಮಾದಿತ್ಯಸಂಕಾಶಂ ಮೃಗೀ ವ್ಯಾಘ್ರಂ ಜನಿಷ್ಯತಿ।।
ಕುಂಡಲ-ಕವಚಗಳೊಂದಿಗೇ ಹುಟ್ಟಿರುವ ದಿವ್ಯ ಲಕ್ಷಣ ಲಕ್ಷಿತ, ಆದಿತ್ಯ ಸಂಕಾಶ ಈ ಹುಲಿಗೆ ಹೇಗೆ ತಾನೆ ಒಂದು ಜಿಂಕೆಯು ಜನ್ಮ ನೀಡಬಲ್ಲದು?
01127016a ಪೃಥಿವೀರಾಜ್ಯಮರ್ಹೋಽಯಂ ನಾಂಗರಾಜ್ಯಂ ನರೇಶ್ವರಃ।
01127016c ಅನೇನ ಬಾಹುವೀರ್ಯೇಣ ಮಯಾ ಚಾಜ್ಞಾನುವರ್ತಿನಾ।।
ತನ್ನ ಈ ಬಾಹುವೀರ್ಯದಿಂದ ಮತ್ತು ಅವನ ಅನುಜ್ಞೆಯಂತೆ ನಡೆದುಕೊಳ್ಳುವ ನನ್ನಿಂದ ಈ ನರೇಶ್ವರನು ಕೇವಲ ಅಂಗರಾಜ್ಯ ಮಾತ್ರವಲ್ಲ ಇಡೀ ಪೃಥ್ವಿಯನ್ನೇ ಆಳುವ ಅರ್ಹತೆಯನ್ನು ಹೊಂದಿದ್ದಾನೆ.
01127017a ಯಸ್ಯ ವಾ ಮನುಜಸ್ಯೇದಂ ನ ಕ್ಷಾಂತಂ ಮದ್ವಿಚೇಷ್ಟಿತಂ।
01127017c ರಥಮಾರಹ್ಯ ಪದ್ಭ್ಯಾಂ ವಾ ವಿನಾಮಯತು ಕಾರ್ಮುಕಂ।।
ನಾನು ಮಾಡಿದುದು ಯಾರಿಗೆ ಒಪ್ಪಿಗೆಯಿಲ್ಲವೋ ಆ ಮನುಷ್ಯನು ರಥವನ್ನೇರಿಯಾಗಲೀ ಅಥವಾ ಪದಾತಿಯಾಗಲೀ ಇದನ್ನು ಪ್ರತಿಭಟಿಸಬೇಕು.”
01127018a ತತಃ ಸರ್ವಸ್ಯ ರಂಗಸ್ಯ ಹಾಹಾಕಾರೋ ಮಹಾನಭೂತ್।
01127018c ಸಾಧುವಾದಾನುಸಂಬದ್ಧಃ ಸೂರ್ಯಶ್ಚಾಸ್ತಮುಪಾಗಮತ್।।
ರಂಗದ ಎಲ್ಲೆಡೆಯಲ್ಲಿಯೂ ಜೋರಾಗಿ “ಸಾಧು! ಸಾಧು!” ಎಂಬ ಹಾಹಾಕಾರವೆದ್ದಿತು. ಅಷ್ಟರಲ್ಲಿ ಸೂರ್ಯನು ಮುಳುಗಿದನು.
01127019a ತತೋ ದುರ್ಯೋಧನಃ ಕರ್ಣಮಾಲಂಬ್ಯಾಥ ಕರೇ ನೃಪ।
01127019c ದೀಪಿಕಾಗ್ನಿಕೃತಾಲೋಕಸ್ತಸ್ಮಾದ್ರಂಗಾದ್ವಿನಿರ್ಯಯೌ।।
ಆಗ ದುರ್ಯೋಧನನು ನೃಪ ಕರ್ಣನ ಕೈಯನ್ನು ಹಿಡಿದುಕೊಂಡು ದೀವಟಿಕೆಗಳ ಬೆಂಕಿಯ ಬೆಳಕಿನಲ್ಲಿ ಆ ರಂಗದಿಂದ ನಿರ್ಗಮಿಸಿದನು.
01127020a ಪಾಂಡವಾಶ್ಚ ಸಹದ್ರೋಣಾಃ ಸಕೃಪಾಶ್ಚ ವಿಶಾಂ ಪತೇ।
01127020c ಭೀಷ್ಮೇಣ ಸಹಿತಾಃ ಸರ್ವೇ ಯಯುಃ ಸ್ವಂ ಸ್ವಂ ನಿವೇಶನಂ।।
ವಿಶಾಂಪತೇ! ಪಾಂಡವರು ದ್ರೋಣ, ಕೃಪ ಮತ್ತು ಭೀಷ್ಮರೊಂದಿಗೆ ಮತ್ತು ಎಲ್ಲರೂ ತಮ್ಮ ತಮ್ಮ ನಿವೇಶನಗಳಿಗೆ ತೆರಳಿದರು.
01127021a ಅರ್ಜುನೇತಿ ಜನಃ ಕಶ್ಚಿತ್ಕಶ್ಚಿತ್ಕರ್ಣೇತಿ ಭಾರತ।
01127021c ಕಶ್ಚಿದ್ದುರ್ಯೋಧನೇತ್ಯೇವಂ ಬ್ರುವಂತಃ ಪ್ರಸ್ಥಿತಾಸ್ತದಾ।।
ದಾರಿಯಲ್ಲಿ ಕೆಲವು ಜನರು “ಅರ್ಜುನ!”ಎಂದೂ ಕೆಲವರು “ಕರ್ಣ!” ಎಂದೂ ಇನ್ನು ಕೆಲವರು “ದುರ್ಯೋಧನ!” ಎಂದೂ ಘೋಷಿಸುತ್ತಿದ್ದರು.
01127022a ಕುಂತ್ಯಾಶ್ಚ ಪ್ರತ್ಯಭಿಜ್ಞಾಯ ದಿವ್ಯಲಕ್ಷಣಸೂಚಿತಂ।
01127022c ಪುತ್ರಮಂಗೇಶ್ವರಂ ಸ್ನೇಹಾಚ್ಶನ್ನಾ ಪ್ರೀತಿರವರ್ಧತ।।
ಕುಂತಿಯು ಅಂಗೇಶ್ವರನ ದಿವ್ಯಲಕ್ಷಣಗಳನ್ನು ನೋಡಿ ಅವನು ತನ್ನ ಪುತ್ರನೆಂದು ಗುರುತಿಸಿದಳು ಮತ್ತು ಅವನ ಕುರಿತು ಅಡಗಿಸಿಟ್ಟಿದ್ದ ಸ್ನೇಹ ಪ್ರೀತಿ ಭಾವಗಳು ಅವಳಲ್ಲಿ ಹೆಚ್ಚಾದವು.
01127023a ದುರ್ಯೋಧನಸ್ಯಾಪಿ ತದಾ ಕರ್ಣಮಾಸಾದ್ಯ ಪಾರ್ಥಿವ।
01127023c ಭಯಮರ್ಜುನಸಾಂಜಾತಂ ಕ್ಷಿಪ್ರಮಂತರಧೀಯತ।।
ಪಾರ್ಥಿವ! ಕರ್ಣನನ್ನು ಪಡೆದ ದುರ್ಯೋಧನನು ಅರ್ಜುನನಿಂದ ತನ್ನಲ್ಲುಂಟಾಗಿದ್ದ ಭಯವನ್ನು ಕಳೆದುಕೊಂಡನು.
01127024a ಸ ಚಾಪಿ ವೀರಃ ಕೃತಶಸ್ತ್ರನಿಶ್ರಮಃ ಪರೇಣ ಸಾಂನಾಭ್ಯವದತ್ಸುಯೋಧನಂ।
01127024c ಯುಧಿಷ್ಠಿರಸ್ಯಾಪ್ಯಭವತ್ತದಾ ಮತಿರ್ನ ಕರ್ಣತುಲ್ಯೋಽಸ್ತಿ ಧನುರ್ಧರಃ ಕ್ಷಿತೌ।।
ತನ್ನ ಶ್ರಮದಿಂದ ಅಸ್ತ್ರಗಳನ್ನು ತನ್ನದಾಗಿಸಿಕೊಂಡ ಆ ವೀರನಾದರೋ ಸುಯೋಧನನನ್ನು ಅತ್ಯಂತ ಒಳ್ಳೆಯ ಮಾತುಗಳಿಂದ ಹೊಗಳಿದನು. ಆ ವೇಳೆಯಲ್ಲಿ ಯುಧಿಷ್ಠಿರನೂ ಕೂಡ “ಕರ್ಣನಿಗೆ ಸಮಾನ ಧನುರ್ಧರನು ಭೂಮಿಯಲ್ಲೇ ಯಾರೂ ಇಲ್ಲ!” ಎಂದು ಯೋಚಿಸಿದನು.”