125 ಅಸ್ತ್ರದರ್ಶನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಜತುಗೃಹದಾಹ ಪರ್ವ

ಅಧ್ಯಾಯ 125

ಸಾರ

ಅರ್ಜುನನ ಪ್ರತಿಭಾ ಪ್ರದರ್ಶನ (1-32).

01125001 ವೈಶಂಪಾಯನ ಉವಾಚ।
01125001a ಕುರುರಾಜೇ ಚ ರಂಗಸ್ಥೇ ಭೀಮೇ ಚ ಬಲಿನಾಂ ವರೇ।
01125001c ಪಕ್ಷಪಾತಕೃತಸ್ನೇಹಃ ಸ ದ್ವಿಧೇವಾಭವಜ್ಜನಃ।।

ವೈಶಂಪಾಯನನು ಹೇಳಿದನು: “ರಂಗಸ್ಥ ಕುರುರಾಜ ಮತ್ತು ಬಲಿಗಳಲ್ಲಿಯೇ ಶ್ರೇಷ್ಠ ಭೀಮನನ್ನು ನೋಡಿದ ಜನರಲ್ಲಿ ತಮಗಿಷ್ಟವಿದ್ದವರ ಮೇಲೆ ಪಕ್ಷಪಾತ ಮಾಡುವ ಎರಡು ಪಂಗಡಗಳಾಯಿತು.

01125002a ಹಾ ವೀರ ಕುರುರಾಜೇತಿ ಹಾ ಭೀಮೇತಿ ಚ ನರ್ದತಾಂ।
01125002c ಪುರುಷಾಣಾಂ ಸುವಿಪುಲಾಃ ಪ್ರಣಾದಾಃ ಸಹಸೋತ್ಥಿತಾಃ।।

“ಹಾ ವೀರ ಕುರುರಾಜ! ಹಾ ಭೀಮ!” ಎಂದು ಕೂಗುತ್ತಿರುವ ಜನರ ಕೂಗು ತಕ್ಷಣವೇ ಮೊಳಗಿಬಂದಿತು.

01125003a ತತಃ ಕ್ಷುಬ್ಧಾರ್ಣವನಿಭಂ ರಂಗಮಾಲೋಕ್ಯ ಬುದ್ಧಿಮಾನ್।
01125003c ಭಾರದ್ವಾಜಃ ಪ್ರಿಯಂ ಪುತ್ರಮಶ್ವತ್ಥಾಮಾನಮಬ್ರವೀತ್।।

ಈ ರೀತಿ ಕ್ಷುಬ್ಧ ಸಾಗರದಂತೆ ತೋರುತ್ತಿದ್ದ ರಂಗವನ್ನು ನೋಡಿದ ಬುದ್ಧಿವಂತ ಭಾರದ್ವಾಜನು ತನ್ನ ಪ್ರಿಯ ಪುತ್ರ ಅಶ್ವತ್ಥಾಮನಿಗೆ ಹೇಳಿದನು:

01125004a ವಾರಯೈತೌ ಮಹಾವೀರ್ಯೌ ಕೃತಯೋಗ್ಯಾವುಭಾವಪಿ।
01125004c ಮಾ ಭೂದ್ರಂಗಪ್ರಕೋಪೋಽಯಂ ಭೀಮದುರ್ಯೋಧನೋದ್ಭವಃ।।

“ಚೆನ್ನಾಗಿಯೇ ತರಬೇತಿಯನ್ನು ಹೊಂದಿದ ಈ ಮಹಾವೀರರಿಬ್ಬರನ್ನೂ ನಿಲ್ಲಿಸು. ಇಲ್ಲವಾದರೆ ಭೀಮ-ದುರ್ಯೋಧನರನ್ನು ಕುರಿತು ರಂಗದಲ್ಲಿ ದಂಗೆಯುಂಟಾಗಬಹುದು.”

01125005a ತತಸ್ತಾವುದ್ಯತಗದೌ ಗುರುಪುತ್ರೇಣ ವಾರಿತೌ।
01125005c ಯುಗಾಂತಾನಿಲಸಂಕ್ಷುಬ್ಧೌ ಮಹಾವೇಗಾವಿವಾರ್ಣವೌ।।

ಆಗ ಯುಗಾಂತಕಾಲದ ಭಿರುಗಾಳಿಯಿಂದ ಮಹಾ ಕ್ಷೋಭಣೆಗೊಳಗಾದ ಎರಡು ಸಮುದ್ರಗಳಂತೆ ಪರಸ್ಪರರನ್ನು ಎದುರಿಸಿ ನಿಂತಿರುವ ಅವರೀರ್ವರನ್ನು ಗುರುಪುತ್ರನು ತಡೆದನು.

01125006a ತತೋ ರಂಗಾಂಗಣಗತೋ ದ್ರೋಣೋ ವಚನಮಬ್ರವೀತ್।
01125006c ನಿವಾರ್ಯ ವಾದಿತ್ರಗಣಂ ಮಹಾಮೇಘನಿಭಸ್ವನಂ।।

ರಂಗಾಂಗಣದಲ್ಲಿ ಇಳಿದು ದ್ರೋಣನು ಮಹಾಮೇಘನಿಭಸ್ವನವನ್ನುಂಟುಮಾಡುತ್ತಿದ್ದ ವಾದ್ಯವೃಂದವನ್ನು ನಿಲ್ಲಿಸಿ ಹೇಳಿದನು:

01125007a ಯೋ ಮೇ ಪುತ್ರಾತ್ಪ್ರಿಯತರಃ ಸರ್ವಾಸ್ತ್ರವಿದುಷಾಂ ವರಃ।
01125007c ಐಂದ್ರಿರಿಂದ್ರಾನುಜಸಮಃ ಸ ಪಾರ್ಥೋ ದೃಶ್ಯತಾಮಿತಿ।।

“ಈಗ ಸರ್ವಾಸ್ತ್ರವಿದುಷರಲ್ಲಿಯೇ ಶ್ರೇಷ್ಠ ಇಂದ್ರಾನುಜಸಮ, ನನಗೆ ನನ್ನ ಪುತ್ರನಿಗಿಂತಲೂ ಪ್ರಿಯಕರನಾದ ಐಂದ್ರಿ ಪಾರ್ಥನನ್ನು ನೋಡಿ!”

01125008a ಆಚಾರ್ಯವಚನೇನಾಥ ಕೃತಸ್ವಸ್ತ್ಯಯನೋ ಯುವಾ।
01125008c ಬದ್ಧಗೋಧಾಂಗುಲಿತ್ರಾಣಃ ಪೂರ್ಣತೂಣಃ ಸಕಾರ್ಮುಕಃ।।
01125009a ಕಾಂಚನಂ ಕವಚಂ ಬಿಭ್ರತ್ಪ್ರತ್ಯದೃಶ್ಯತ ಫಲ್ಗುನಃ।
01125009c ಸಾರ್ಕಃ ಸೇಂದ್ರಾಯುಧತಡಿತ್ಸಸಂಧ್ಯ ಇವ ತೋಯದಃ।।

ಆಚಾರ್ಯನ ವಚನಗಳಿಂದ ಬರಮಾಡಿಕೊಂಡ ಆ ಯುವಕ ಫಲ್ಗುನನು ಗೋಧಾಂಗುಲಿತ್ರಾಣಗಳನ್ನು ಕಟ್ಟಿಕೊಂಡು, ಪೂರ್ಣ ತೂರ್ಣನಾಗಿ ಹೊಳೆಯುತ್ತಿರುವ ಕಾಂಚನದ ಕವಚವನ್ನು ಧರಿಸಿ, ಮಳೆಯನ್ನು ತರುವ ಮಿಂಚುಗಳಿಂದೊಡಗೂಡಿದ ಮೋಡದೊಂದಿಗೆ ಬೆಳಗುತ್ತಿರುವ ಬಂಗಾರದ ಬಣ್ಣದ ಸೂರ್ಯನಂತೆ ತೋರುತ್ತಾ ಪ್ರವೇಶಿಸಿದನು.

01125010a ತತಃ ಸರ್ವಸ್ಯ ರಂಗಸ್ಯ ಸಮುತ್ಪಿಂಜೋಽಭವನ್ಮಹಾನ್।
01125010c ಪ್ರಾವಾದ್ಯಂತ ಚ ವಾದ್ಯಾನಿ ಸಶಂಖಾನಿ ಸಮಂತತಃ।।

ಆಗ ರಂಗದಲ್ಲಿ ಎಲ್ಲೆಡೆಯಲ್ಲಿಯೂ ಮಹಾ ಗದ್ದಲವಾಯಿತು ಮತ್ತು ಶಂಖಗಳೊಂದಿಗೆ ವಾದ್ಯಗಳು ಎಲ್ಲೆಡೆಯೂ ಮೊಳಗತೊಡಗಿದವು.

01125011a ಏಷ ಕುಂತೀಸುತಃ ಶ್ರೀಮಾನೇಷ ಪಾಂಡವಮಧ್ಯಮಃ।
01125011c ಏಷ ಪುತ್ರೋ ಮಹೇಂದ್ರಸ್ಯ ಕುರೂಣಾಮೇಷ ರಕ್ಷಿತಾ।।

“ಇವನೇ ಕುಂತೀಸುತ! ಇವನೇ ಶ್ರೀಮಾನ್ ಪಾಂಡುವಿನ ಮಧ್ಯಮ! ಇವನೇ ಕುರುಗಳನ್ನು ರಕ್ಷಿಸುವವವನು! ಮಹೇಂದ್ರನ ಪುತ್ರ!

01125012a ಏಷೋಽಸ್ತ್ರವಿದುಷಾಂ ಶ್ರೇಷ್ಠ ಏಷ ಧರ್ಮಭೃತಾಂ ವರಃ।
01125012c ಏಷ ಶೀಲವತಾಂ ಚಾಪಿ ಶೀಲಜ್ಞಾನನಿಧಿಃ ಪರಃ।।

ಇವನೇ ಅಸ್ತ್ರವಿದುಷರಲ್ಲಿ ಶ್ರೇಷ್ಠನಾದವನು! ಇವನೇ ಧರ್ಮಭೃತರಲ್ಲಿ ಶ್ರೇಷ್ಠನಾದವನು! ಇವನು ಶೀಲವಂತನೂ, ಶೀಲಜ್ಞಾನನಿಧಿಯೂ, ಶ್ರೇಷ್ಠನೂ ಆಗಿದ್ದಾನೆ.”

01125013a ಇತ್ಯೇವಮತುಲಾ ವಾಚಃ ಶೃಣ್ವಂತ್ಯಾಃ ಪ್ರೇಕ್ಷಕೇರಿತಾಃ।
01125013c ಕುಂತ್ಯಾಃ ಪ್ರಸ್ನವಸಮ್ಮಿಶ್ರೈರಸ್ರೈಃ ಕ್ಲಿನ್ನಮುರೋಽಭವತ್।।

ಪ್ರೇಕ್ಷಕರಿಂದ ಈ ರೀತಿ ಅತುಲ ಮಾತುಗಳು ಕೇಳಿಬರುತ್ತಿರುವಾಗ ಕುಂತಿಯ ಸ್ತನಗಳು ಕಣ್ಣೀರು ಮತ್ತು ಹಾಲು ಇವೆರಡರ ಮಿಶ್ರಣದಿಂದ ತೋಯ್ದವು.

01125014a ತೇನ ಶಬ್ಧೇನ ಮಹತಾ ಪೂರ್ಣಶ್ರುತಿರಥಾಬ್ರವೀತ್।
01125014c ಧೃತರಾಷ್ಟ್ರೋ ನರಶ್ರೇಷ್ಠೋ ವಿದುರಂ ಹೃಷ್ಟಮಾನಸಃ।।

ಈ ಮಾತುಗಳು ಅವನ ಕಿವಿಗಳನ್ನು ತುಂಬಲಾಗಿ ಹೃಷ್ಟಮನಸ್ಕ ನರಶ್ರೇಷ್ಠ ಧೃತರಾಷ್ಟ್ರನು ವಿದುರನಲ್ಲಿ ಕೇಳಿದನು:

01125015a ಕ್ಷತ್ತಃ ಕ್ಷುಬ್ಧಾರ್ಣವನಿಭಃ ಕಿಮೇಷ ಸುಮಹಾಸ್ವನಃ।
01125015c ಸಹಸೈವೋತ್ಥಿತೋ ರಂಗೇ ಭಿಂದನ್ನಿವ ನಭಸ್ತಲಂ।।

“ಕ್ಷತ್ತ! ಕ್ಷುಬ್ಧ ಸಾಗರದಂತೆ, ನಭಸ್ತಲವನ್ನೇ ಸೀಳುವಂತೆ ರಂಗದಿಂದ ಕೇಳಿಬರುತ್ತಿರುವ ಆ ಸುಮಹಾಸ್ವನವೇನು?”

01125016 ವಿದುರ ಉವಾಚ।
01125016a ಏಷ ಪಾರ್ಥೋ ಮಹಾರಾಜ ಫಲ್ಗುನಃ ಪಾಂಡುನಂದನಃ।
01125016c ಅವತೀರ್ಣಃ ಸಕವಚಸ್ತತ್ರೈಷ ಸುಮಹಾಸ್ವನಃ।।

ವಿದುರನು ಹೇಳಿದನು: “ಮಹಾರಾಜ! ಪಾಂಡುನಂದನ ಪಲ್ಗುನ ಪಾರ್ಥನು ಕವಚವನ್ನು ಧರಿಸಿ ರಂಗಕ್ಕಿಳಿದಿದ್ದಾನೆ. ಅದರ ಕುರಿತಾಗಿ ಈ ಸುಮಹಾಸ್ವನವು ಕೇಳಿ ಬರುತ್ತಿದೆ.”

01125017 ಧೃತರಾಷ್ಟ್ರ ಉವಾಚ।
01125017a ಧನ್ಯೋಽಸ್ಮ್ಯನುಗೃಹೀತೋಽಸ್ಮಿ ರಕ್ಷಿತೋಽಸ್ಮಿ ಮಹಾಮತೇ।
01125017c ಪೃಥಾರಣಿಸಮುದ್ಭೂತೈಸ್ತ್ರಿಭಿಃ ಪಾಂಡವವಹ್ನಿಭಿಃ।।

ಧೃತರಾಷ್ಟ್ರನು ಹೇಳಿದನು: “ಮಹಾಮತೇ! ಪೃಥಳಂಥಹ ಅರಣಿಯಿಂದ ಪಾಂಡವನಂಥಹ ವಹ್ನಿಯಲ್ಲಿ ಉದ್ಭವವಾದ ಈ ಮೂವರಿಂದ ನಾನು ಧನ್ಯನಾಗಿದ್ದೇನೆ! ನಾನು ಅನುಗೃಹೀತನಾಗಿದ್ದೇನೆ! ರಕ್ಷಿತನಾಗಿದ್ದೇನೆ!””

01125018 ವೈಶಂಪಾಯನ ಉವಾಚ।
01125018a ತಸ್ಮಿನ್ಸಮುದಿತೇ ರಂಗೇ ಕಥಂ ಚಿತ್ಪರ್ಯವಸ್ಥಿತೇ।
01125018c ದರ್ಶಯಾಮಾಸ ಬೀಭತ್ಸುರಾಚಾರ್ಯಾದಸ್ತ್ರಲಾಘವಂ।।

ವೈಶಂಪಾಯನನು ಹೇಳಿದನು: “ಉಲ್ಭಣಗೊಂಡ ಆ ರಂಗವು ಹೇಗೋ ಶಾಂತವಾಗುತ್ತಿದ್ದಂತೆಯೇ ಬೀಭತ್ಸುವು ಆಚಾರ್ಯನಿಂದ ಕಲಿತ ತನ್ನ ಅಸ್ತ್ರ ಕುಶಲತೆಯನ್ನು ತೋರಿಸತೊಡಗಿದನು.

01125019a ಆಗ್ನೇಯೇನಾಸೃಜದ್ವಹ್ನಿಂ ವಾರುಣೇನಾಸೃಜತ್ಪಯಃ।
01125019c ವಾಯವ್ಯೇನಾಸೃಜದ್ವಾಯುಂ ಪಾರ್ಜನ್ಯೇನಾಸೃಜದ್ಘನಾನ್।।
01125020a ಭೌಮೇನ ಪ್ರಾವಿಶದ್ಭೂಮಿಂ ಪಾರ್ವತೇನಾಸೃಜದ್ಗಿರೀನ್।
01125020c ಅಂತರ್ಧಾನೇನ ಚಾಸ್ತ್ರೇಣ ಪುನರಂತರ್ಹಿತೋಽಭವತ್।।

ಅಗ್ನೇಯದಿಂದ ವಹ್ನಿಯನ್ನು ಸೃಷ್ಟಿದನು. ವಾರುಣದಿಂದ ನೀರನ್ನು ಸೃಷ್ಟಿಸಿದನು. ವಾಯುವ್ಯದಿಂದ ವಾಯುವನ್ನು ಸೃಷ್ಟಿಸಿದನು. ಪರ್ಜನ್ಯದಿಂದ ಮೋಡಗಳನ್ನು ಸೃಷ್ಟಿಸಿದನು. ಭೌಮದಿಂದ ಭೂಮಿಯನ್ನು ಪ್ರವೇಶಿಸಿದನು. ಪರ್ವತದಿಂದ ಗಿರಿಗಳನ್ನು ಸೃಷ್ಟಿಸಿದನು. ಅಂತರ್ಧಾನಾಸ್ತ್ರದಿಂದ ಅವೆಲ್ಲವನ್ನೂ ಅಂತರ್ಧಾನಗೊಳಿಸಿದನು.

01125021a ಕ್ಷಣಾತ್ಪ್ರಾಂಶುಃ ಕ್ಷಣಾದ್ಧ್ರಸ್ವಃ ಕ್ಷಣಾಚ್ಚ ರಥಧೂರ್ಗತಃ।
01125021c ಕ್ಷಣೇನ ರಥಮಧ್ಯಸ್ಥಃ ಕ್ಷಣೇನಾವಾಪತನ್ಮಹೀಂ।।

ಒಂದು ಕ್ಷಣದಲ್ಲಿ ಎತ್ತರವಾಗಿ ನಿಂತನು. ಇನ್ನೊಂದು ಕ್ಷಣದಲ್ಲಿ ಸಣ್ಣವನಾಗಿ ಕಂಡನು. ಒಂದು ಕ್ಷಣ ರಥದ ಮುಂದೆ ಕಾಣಿಸಿಕೊಂಡರೆ ಮತ್ತೊಂದು ಕ್ಷಣದಲ್ಲಿ ರಥದ ಮಧ್ಯದಲ್ಲಿ ಕುಳಿತಿದ್ದನು ಮತ್ತು ಇನ್ನೊಂದು ಕ್ಷಣದಲ್ಲಿ ನೆಲದ ಮೇಲೆ ಹಾರಿ ನಿಂತಿದ್ದನು.

01125022a ಸುಕುಮಾರಂ ಚ ಸೂಕ್ಷ್ಮಂ ಚ ಗುರುಂ ಚಾಪಿ ಗುರುಪ್ರಿಯಃ।
01125022c ಸೌಷ್ಠವೇನಾಭಿಸಂಯುಕ್ತಃ ಸೋಽವಿಧ್ಯದ್ವಿವಿಧೈಃ ಶರೈಃ।।

ಆ ಗುರುಪ್ರಿಯ ಸುಕುಮಾರನು ವಿವಿಧ ಶರಗಳಿಂದ ಸೂಕ್ಷ್ಮ ಮತ್ತು ದೊಡ್ಡ ಗುರಿಗಳನ್ನು ಅತ್ಯಂತ ಕೌಶಲ್ಯದಿಂದ ಹೊಡೆದನು.

01125023a ಭ್ರಮತಶ್ಚ ವರಾಹಸ್ಯ ಲೋಹಸ್ಯ ಪ್ರಮುಖೇ ಸಮಂ।
01125023c ಪಂಚ ಬಾಣಾನಸಂಸಕ್ತಾನ್ಸ ಮುಮೋಚೈಕಬಾಣವತ್।।

ಲೋಹದ ಒಂದು ವರಾಹವನ್ನು ಎದುರಿಗೆ ತಂದಾಗ ಅದರ ಬಾಯಿಯಲ್ಲಿ ಐದು ಬಾಣಗಳನ್ನು ಒಂದೇ ಬಾಣವನ್ನೇ ಬಿಟ್ಟಿದ್ದಾನೋ ಎಂದು ಭ್ರಮಿಸುವ ಹಾಗೆ ಅತಿವೇಗದಲ್ಲಿ ಬಿಟ್ಟು ತುಂಬಿಸಿದನು.

01125024a ಗವ್ಯೇ ವಿಷಾಣಕೋಶೇ ಚ ಚಲೇ ರಜ್ಜ್ವವಲಂಬಿತೇ।
01125024c ನಿಚಖಾನ ಮಹಾವೀರ್ಯಃ ಸಾಯಕಾನೇಕವಿಂಶತಿಂ।।

ಒಂದು ಹಗ್ಗದಿಂದ ನೇತಾಡುತ್ತಿರುವ ಗೋವಿನ ಕೊಂಬಿನೊಳಗೆ ಇಪ್ಪತ್ತೊಂದು ಬಾಣಗಳನ್ನು ತುಂಬಿಸಿದನು.

01125025a ಇತ್ಯೇವಮಾದಿ ಸುಮಹತ್ಖಡ್ಗೇ ಧನುಷಿ ಚಾಭವತ್।
01125025c ಗದಾಯಾಂ ಶಸ್ತ್ರಕುಶಲೋ ದರ್ಶನಾನಿ ವ್ಯದರ್ಶಯತ್।।

ಇದೇ ರೀತಿ ಮತ್ತು ಇನ್ನೂ ಹಲವಾರು ರೀತಿಗಳಲ್ಲಿ ಅವನು ಬಿಲ್ಲುಬಾಣಗಳಲ್ಲಿ, ಖಡ್ಗದಲ್ಲಿ ಮತ್ತು ಗದೆಯಲ್ಲಿ ತನ್ನಲ್ಲಿದ್ದ ಕೌಶಲ್ಯತೆಯನ್ನು ಪ್ರದರ್ಶಿಸಿದನು.

01125026a ತತಃ ಸಮಾಪ್ತಭೂಯಿಷ್ಠೇ ತಸ್ಮಿನ್ಕರ್ಮಣಿ ಭಾರತ।
01125026c ಮಂದೀಭೂತೇ ಸಮಾಜೇ ಚ ವಾದಿತ್ರಸ್ಯ ಚ ನಿಸ್ವನೇ।।
01125027a ದ್ವಾರದೇಶಾತ್ಸಮುದ್ಭೂತೋ ಮಾಹಾತ್ಮ್ಯ ಬಲಸೂಚಕಃ।
01125027c ವಜ್ರನಿಷ್ಪೇಷಸದೃಶಃ ಶುಶ್ರುವೇ ಭುಜನಿಸ್ವನಃ।।

ಭಾರತ! ಆ ಪ್ರದರ್ಶನವು ಮುಗಿಯುತ್ತಾ ಬಂದಂತೆ ಮತ್ತು ಜನಸಂದಣಿಯು ಕಡಿಮೆಯಾಗುತ್ತಾ ಬಂದಂತೆ ದ್ವಾರದಲ್ಲಿ ವಜ್ರವೇ ಬಿದ್ದಹಾಗೆ, ಅದನ್ನುಂಟುಮಾಡಿದವನ ಮಹಾತ್ಮತೆ ಮತ್ತು ಬಲದ ಸೂಚಕವಾದ ಮಹಾ ಸ್ವರವೊಂದು ಕೇಳಿಬಂದಿತು.

01125028a ದೀರ್ಯಂತೇ ಕಿಂ ನು ಗಿರಯಃ ಕಿಂ ಸ್ವಿದ್ಭೂಮಿರ್ವಿದೀರ್ಯತೇ।
01125028c ಕಿಂ ಸ್ವಿದಾಪೂರ್ಯತೇ ವ್ಯೋಮ ಜಲಭಾರಘನೈರ್ಘನೈಃ।।

ಗಿರಿಗಳು ಕೆಳಗುರುಳುತ್ತಿವೆಯೇ? ಭೂಮಿಯು ಬಿರಿಯುತ್ತಿದೆಯೇ? ಜಲಭಾರಗೊಂಡ ಮೋಡಗಳಿಂದ ಆಕಾಶವು ತುಂಬಿಕೊಂಡಿದೆಯೇ?

01125029a ರಂಗಸ್ಯೈವಂ ಮತಿರಭೂತ್ ಕ್ಷಣೇನ ವಸುಧಾಧಿಪ।
01125029c ದ್ವಾರಂ ಚಾಭಿಮುಖಾಃ ಸರ್ವೇ ಬಭೂವುಃ ಪ್ರೇಕ್ಷಕಾಸ್ತದಾ।।

ವಸುಧಾಧಿಪ! ಈ ರೀತಿ ರಂಗದಲ್ಲಿರುವವರು ಒಂದು ಕ್ಷಣ ಯೋಚಿಸಿದರು. ಪ್ರೇಕ್ಷಕರೆಲ್ಲರೂ ದ್ವಾರದ ಕಡೆ ನೋಡತೊಡಗಿದರು.

01125030a ಪಂಚಭಿರ್ಭ್ರಾತೃಭಿಃ ಪಾರ್ಥೈರ್ದ್ರೋಣಃ ಪರಿವೃತೋ ಬಭೌ।
01125030c ಪಂಚತಾರೇಣ ಸಂಯುಕ್ತಃ ಸಾವಿತ್ರೇಣೇವ ಚಂದ್ರಮಾಃ।।

ಐವರು ಪಾರ್ಥ ಭ್ರಾತೃಗಳಿಂದ ಪರಿವೃತ ದ್ರೋಣನು ಐದು ತಾರೆಗಳಿಂದ ಕೂಡಿದ ಸಾವಿತ್ರಿಯಲ್ಲಿದ್ದ ಚಂದ್ರಮನಂತೆ ಕಂಗೊಳಿಸಿದನು.

01125031a ಅಶ್ವತ್ಥಾಮ್ನಾ ಚ ಸಹಿತಂ ಭ್ರಾತೄಣಾಂ ಶತಮೂರ್ಜಿತಂ।
01125031c ದುರ್ಯೋಧನಮಮಿತ್ರಘ್ನಮುತ್ಥಿತಂ ಪರ್ಯವಾರಯತ್।।

ಅಶ್ವತ್ಥಾಮನನ್ನೂ ಸೇರಿ ಒಂದು ನೂರು ಭ್ರಾತೃಗಳು ಎದ್ದು ನಿಂತ ಅಮಿತ್ರಘ್ನ ದುರ್ಯೋಧನನನ್ನು ಸುತ್ತುವರೆದಿದ್ದರು.

01125032a ಸ ತೈಸ್ತದಾ ಭ್ರಾತೃಭಿರುದ್ಯತಾಯುಧೈರ್ವೃತೋ ಗದಾಪಾಣಿರವಸ್ಥಿತೈಃ ಸ್ಥಿತಃ।
01125032c ಬಭೌ ಯಥಾ ದಾನವಸಂಕ್ಷಯೇ ಪುರಾ ಪುರಂದರೋ ದೇವಗಣೈಃ ಸಮಾವೃತಃ।।

ಗದಾಪಾಣಿಯಾದ ಅವನು ಹಿಂದೆ ದಾನವರ ನಾಶಕಾಲದಲ್ಲಿ ಪುರಂದರನು ದೇವತೆಗಳಿಂದ ಹೇಗೋ ಹಾಗೆ ಆಯುಧಗಳನ್ನು ಹಿಡಿದು ಸಿದ್ಧರಾಗಿದ್ದ ಭ್ರಾತೃಗಳಿಂದ ಸುತ್ತುವರೆಯಲ್ಪಟ್ಟಿದ್ದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹದಾಹಪರ್ವಣಿ ಅಸ್ತ್ರದರ್ಶನೇ ಪಂಚವಿಂಶತ್ಯಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹದಾಹ ಪರ್ವದಲ್ಲಿ ಅಸ್ತ್ರದರ್ಶನ ಎನ್ನುವ ನೂರಾ ಇಪ್ಪತ್ತೈದನೆಯ ಅಧ್ಯಾಯವು.