124 ಅಸ್ತ್ರದರ್ಶನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಜತುಗೃಹದಾಹ ಪರ್ವ

ಅಧ್ಯಾಯ 124

ಸಾರ

ವಿದ್ಯಾಭ್ಯಾಸವನ್ನು ಪೂರೈಸಿದ ರಾಜಪುತ್ರರ ಪ್ರತಿಭಾ ಪ್ರದರ್ಶನಕ್ಕೆ ಸಿದ್ಧತೆ (1-20). ರಾಜಪುತ್ರರ ಪ್ರತಿಭಾ ಪ್ರದರ್ಶನ (21-33).

01124001 ವೈಶಂಪಾಯನ ಉವಾಚ।
01124001a ಕೃತಾಸ್ತ್ರಾನ್ಧಾರ್ತರಾಷ್ಟ್ರಾಂಶ್ಚ ಪಾಂಡುಪುತ್ರಾಂಶ್ಚ ಭಾರತ।
01124001c ದೃಷ್ಟ್ವಾ ದ್ರೋಣೋಽಬ್ರವೀದ್ರಾಜನ್ಧೃತರಾಷ್ಟ್ರಂ ಜನೇಶ್ವರಂ।।
01124002a ಕೃಪಸ್ಯ ಸೋಮದತ್ತಸ್ಯ ಬಾಹ್ಲೀಕಸ್ಯ ಚ ಧೀಮತಃ।
01124002c ಗಾಂಗೇಯಸ್ಯ ಚ ಸಾನ್ನಿಧ್ಯೇ ವ್ಯಾಸಸ್ಯ ವಿದುರಸ್ಯ ಚ।।

ವೈಶಂಪಾಯನನು ಹೇಳಿದನು: “ಭಾರತ! ಧಾರ್ತರಾಷ್ಟ್ರರೂ ಪಾಂಡುಪುತ್ರರೂ ಕೃತಾಸ್ತ್ರರಾದುದನ್ನು ಕಂಡು ದ್ರೋಣನು ಜನೇಶ್ವರ ರಾಜ ಧೃತರಾಷ್ಟ್ರನಿಗೆ, ಕೃಪ, ಸೋಮದತ್ತ, ಬಾಹ್ಲೀಕ, ಧೀಮಂತ ಗಾಂಗೇಯ, ವ್ಯಾಸ ಮತ್ತು ವಿದುರರ ಸನ್ನಿಧಿಯಲ್ಲಿ ಹೇಳಿದನು:

01124003a ರಾಜನ್ಸಂಪ್ರಾಪ್ತವಿದ್ಯಾಸ್ತೇ ಕುಮಾರಾಃ ಕುರುಸತ್ತಮ।
01124003c ತೇ ದರ್ಶಯೇಯುಃ ಸ್ವಾಂ ಶಿಕ್ಷಾಂ ರಾಜನ್ನನುಮತೇ ತವ।।

“ಕುರುಸತ್ತಮ ರಾಜನ್! ನಿನ್ನ ಕುಮಾರರು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ್ದಾರೆ. ರಾಜನ್! ನಿನ್ನ ಅನುಮತಿಯಿದ್ದರೆ ತಾವು ಪಡೆದಿರುವ ಶಿಕ್ಷಣವನ್ನು ಅವರು ಪ್ರದರ್ಶಿಸಬಹುದು.”

01124004a ತತೋಽಬ್ರವೀನ್ಮಹಾರಾಜಃ ಪ್ರಹೃಷ್ಟೇನಾಂತರಾತ್ಮನಾ।
01124004c ಭಾರದ್ವಾಜ ಮಹತ್ಕರ್ಮ ಕೃತಂ ತೇ ದ್ವಿಜಸತ್ತಮ।।

ಆಗ ಪ್ರಹೃಷ್ಟ ಮನಸ್ಕ ಮಹಾರಾಜನು ಹೇಳಿದನು: “ದ್ವಿಜಸತ್ತಮ ಭಾರದ್ವಾಜ! ನೀನು ಒಂದು ಮಹತ್ತರ ಕಾರ್ಯವನ್ನೇ ಮಾಡಿದ್ದೀಯೆ.

01124005a ಯದಾ ತು ಮನ್ಯಸೇ ಕಾಲಂ ಯಸ್ಮಿನ್ದೇಶೇ ಯಥಾ ಯಥಾ।
01124005c ತಥಾ ತಥಾ ವಿಧಾನಾಯ ಸ್ವಯಮಾಜ್ಞಾಪಯಸ್ವ ಮಾಂ।।

ನೀನೇ ನಮಗೆ ಯಾವಾಗ, ಎಲ್ಲಿ, ಮತ್ತು ಯಾವ ರೀತಿಯಲ್ಲಿ ಇದನ್ನು ನಡೆಸಬೇಕೆಂದು ಅಪ್ಪಣೆ ಕೊಡಬೇಕು.

01124006a ಸ್ಪೃಹಯಾಮ್ಯದ್ಯ ನಿರ್ವೇದಾತ್ಪುರುಷಾಣಾಂ ಸಚಕ್ಷುಷಾಂ।
01124006c ಅಸ್ತ್ರಹೇತೋಃ ಪರಾಕ್ರಾಂತಾನ್ಯೇ ಮೇ ದ್ರಕ್ಷ್ಯಂತಿ ಪುತ್ರಕಾನ್।।

ಈ ದಿನ ನಾನು ನನ್ನ ಈ ಪುತ್ರರ ಅಸ್ತ್ರಜ್ಞಾನ ಮತ್ತು ಪರಾಕ್ರಮವನ್ನು ನೋಡಬಲ್ಲ ಕಣ್ಣಿರುವ ಇತರ ಪುರುಷರ ಕುರಿತು ವೇದನೆಯಿಂದ ಅಸೂಯೆಪಡುತ್ತೇನೆ.

01124007a ಕ್ಷತ್ತರ್ಯದ್ಗುರುರಾಚಾರ್ಯೋ ಬ್ರವೀತಿ ಕುರು ತತ್ತಥಾ।
01124007c ನ ಹೀದೃಶಂ ಪ್ರಿಯಂ ಮನ್ಯೇ ಭವಿತಾ ಧರ್ಮವತ್ಸಲ।।

ಕ್ಷತ್ತ! ಗುರು ಆಚಾರ್ಯನು ಹೇಳಿದಂತೆಯೇ ಮಾಡು. ಧರ್ಮವತ್ಸಲ! ಇದಕ್ಕಿಂತಲೂ ಸಂತೋಷವನ್ನು ತರುವಂಥಹುದು ಬೇರೆಯಾವುದೂ ಇಲ್ಲ ಎಂದು ನನ್ನ ಭಾವನೆ.”

01124008a ತತೋ ರಾಜಾನಮಾಮಂತ್ರ್ಯ ವಿದುರಾನುಗತೋ ಬಹಿಃ।
01124008c ಭಾರದ್ವಾಜೋ ಮಹಾಪ್ರಾಜ್ಞೋ ಮಾಪಯಾಮಾಸ ಮೇದಿನೀಂ।
01124008e ಸಮಾಮವೃಕ್ಷಾಂ ನಿರ್ಗುಲ್ಮಾಮುದಕ್ಪ್ರವಣಸಂಸ್ಥಿತಾಂ।।

ನಂತರ ರಾಜನ ಅನುಮತಿಯನ್ನು ಪಡೆದು ದ್ರೋಣನೂ ಮತ್ತು ಅವನ ಹಿಂದೆ ವಿದುರನೂ ಹೋದರು. ಮಹಾಪ್ರಾಜ್ಞ ಭಾರದ್ವಾಜನು ಮರಗಳಿಲ್ಲದ, ಗಿಡಗಂಟಿಗಳಿಲ್ಲದ, ನದಿಯ ಪಕ್ಕದಲ್ಲಿಯ ಸಮಪ್ರದೇಶದ ಭೂಮಿಯನ್ನು ಅಳೆಸಿದನು.

01124009a ತಸ್ಯಾಂ ಭೂಮೌ ಬಲಿಂ ಚಕ್ರೇ ತಿಥೌ ನಕ್ಷತ್ರಪೂಜಿತೇ।
01124009c ಅವಘುಷ್ಟಂ ಪುರೇ ಚಾಪಿ ತದರ್ಥಂ ವದತಾಂ ವರ।।

ಪೂಜನೀಯ ನಕ್ಷತ್ರ ತಿಥಿಗಳಲ್ಲಿ ಆ ಭೂಮಿಗೆ ಬಲಿಯನ್ನು ಹಾಕಿಸಿದನು. ಮಾತುಗಾರರಲ್ಲಿ ಶ್ರೇಷ್ಠ! ಆ ಜಾಗವು ಯಾವ ಉದ್ದೇಶಕ್ಕಿದೆಯೆಂದು ಪುರದಲ್ಲೆಲ್ಲಾ ಘೋಷಿಸಲಾಯಿತು.

01124010a ರಂಗಭೂಮೌ ಸುವಿಪುಲಂ ಶಾಸ್ತ್ರದೃಷ್ಟಂ ಯಥಾವಿಧಿ।
01124010c ಪ್ರೇಕ್ಷಾಗಾರಂ ಸುವಿಹಿತಂ ಚಕ್ರುಸ್ತತ್ರ ಚ ಶಿಲ್ಪಿನಃ।
01124010e ರಾಜ್ಞಃ ಸರ್ವಾಯುಧೋಪೇತಂ ಸ್ತ್ರೀಣಾಂ ಚೈವ ನರರ್ಷಭ।।

ನರರ್ಷಭ! ಈ ರಂಗಭೂಮಿಯಲ್ಲಿ ಶಿಲ್ಪಿಗಳು ಸುವಿಪುಲ ಶಾಸ್ತ್ರಗಳಲ್ಲಿ ಹೇಳಿದಂತೆ ಯಥಾವಿಧಿ ಸುವಿಹಿತ ಸರ್ವಾಯುಧೋಪೇತ ಪ್ರೇಕ್ಷಾಗಾರವನ್ನು ರಾಜನಿಗೆ ಮತ್ತು ಸ್ತ್ರೀಯರಿಗೆ ನಿರ್ಮಿಸಿದರು.

01124011a ಮಂಚಾಂಶ್ಚ ಕಾರಯಾಮಾಸುಸ್ತತ್ರ ಜಾನಪದಾ ಜನಾಃ।
01124011c ವಿಪುಲಾನುಚ್ಛ್ರಯೋಪೇತಾಂ ಶಿಬಿಕಾಶ್ಚ ಮಹಾಧನಾಃ।।

ಜಾನಪದ ಜನರಿಗೆ ಅಗಲ-ಎತ್ತರ ವಿಪುಲ ನೆರಳನ್ನು ನೀಡುವಂತೆ ಹೊದಿಕೆಗಳನ್ನು ಹೊಂದಿದ್ದ ಮಂಚಗಳನ್ನೂ ರಚಿಸಲಾಯಿತು.

01124012a ತಸ್ಮಿಂಸ್ತತೋಽಹನಿ ಪ್ರಾಪ್ತೇ ರಾಜಾ ಸಸಚಿವಸ್ತದಾ।
01124012c ಭೀಷ್ಮಂ ಪ್ರಮುಖತಃ ಕೃತ್ವಾ ಕೃಪಂ ಚಾಚಾರ್ಯಸತ್ತಮಂ।।
01124013a ಮುಕ್ತಾಜಾಲಪರಿಕ್ಷಿಪ್ತಂ ವೈಡೂರ್ಯಮಣಿಭೂಷಿತಂ।
01124013c ಶಾತಕುಂಭಮಯಂ ದಿವ್ಯಂ ಪ್ರೇಕ್ಷಾಗಾರಮುಪಾಗಮತ್।।

ಆ ದಿನವು ಬಂದಾಗ ರಾಜನು ತನ್ನ ಸಚಿವರೊಡಗೂಡಿ, ಭೀಷ್ಮ, ಕೃಪ ಮತ್ತು ಆಚಾರ್ಯರನ್ನು ಮುಂದೆ ಮಾಡಿಕೊಂಡು, ತೆಳು ಪರದೆಯಿಂದ ಆವೃತ, ವೈಡೂರ್ಯಮಣಿಭೂಷಿತ ಶಾತಕುಂಭಗಳನ್ನು ಹೊಂದಿದ್ದ ದಿವ್ಯ ಪ್ರೇಕ್ಷಾಗಾರಕ್ಕೆ ಆಗಮಿಸಿದನು.

01124014a ಗಾಂಧಾರೀ ಚ ಮಹಾಭಾಗಾ ಕುಂತೀ ಚ ಜಯತಾಂ ವರ।
01124014c ಸ್ತ್ರಿಯಶ್ಚ ಸರ್ವಾ ಯಾ ರಾಜ್ಞಃ ಸಪ್ರೇಷ್ಯಾಃ ಸಪರಿಚ್ಛದಾಃ।
01124014e ಹರ್ಷಾದಾರುರುಹುರ್ಮಂಚಾನ್ಮೇರುಂ ದೇವಸ್ತ್ರಿಯೋ ಯಥಾ।।

ವಿಜಯಿಗಳಲ್ಲಿ ಶ್ರೇಷ್ಠ! ಆಗ ಮಹಾಭಾಗೆ ಗಾಂಧಾರಿ, ಕುಂತಿ ಮೊದಲಾದ ರಾಜನ ಸರ್ವ ಸ್ತ್ರೀಯರೂ ತಮ್ಮ ತಮ್ಮ ಪರಿಚಾರಿಕೆಯರೊಂದಿಗೆ ದೇವಸ್ತ್ರೀಯರು ಮೇರುಪರ್ವತವನ್ನು ಹೇಗೋ ಹಾಗೆ ಹರ್ಷದಿಂದ ಮಂಚಗಳನ್ನು ಏರಿದರು.

01124015a ಬ್ರಾಹ್ಮಣಕ್ಷತ್ರಿಯಾದ್ಯಂ ಚ ಚಾತುರ್ವರ್ಣ್ಯಂ ಪುರಾದ್ದ್ರುತಂ।
01124015c ದರ್ಶನೇಪ್ಸು ಸಮಭ್ಯಾಗಾತ್ಕುಮಾರಾಣಾಂ ಕೃತಾಸ್ತ್ರತಾಂ।।

ಪುರದಿಂದ ಬ್ರಾಹ್ಮಣ ಕ್ಷತ್ರಿಯರೇ ಮೊದಲಾದ ನಾಲ್ಕು ವರ್ಣದವರೂ ಕೃತಾಸ್ತ್ರ ಕುಮಾರರನ್ನು ನೋಡಲು ಬಂದು ಸೇರಿದರು.

01124016a ಪ್ರವಾದಿತೈಶ್ಚ ವಾದಿತ್ರೈರ್ಜನಕೌತೂಹಲೇನ ಚ।
01124016c ಮಹಾರ್ಣವ ಇವ ಕ್ಷುಬ್ಧಃ ಸಮಾಜಃ ಸೋಽಭವತ್ತದಾ।।

ವಾದ್ಯಘೋಷಗಳ ಅಲೆಯಲ್ಲಿ ತೇಲುತ್ತಿದ್ದ ಆ ಕುತೂಹಲ ಜನಸಂದಣಿಯು ಒಂದು ಕ್ಷುಬ್ಧ ಮಹಾಸಾಗರದಂತೆ ತೋರುತ್ತಿತ್ತು.

01124017a ತತಃ ಶುಕ್ಲಾಂಬರಧರಃ ಶುಕ್ಲಯಜ್ಞೋಪವೀತವಾನ್।
01124017c ಶುಕ್ಲಕೇಶಃ ಸಿತಶ್ಮಶ್ರುಃ ಶುಕ್ಲಮಾಲ್ಯಾನುಲೇಪನಃ।।
01124018a ರಂಗಮಧ್ಯಂ ತದಾಚಾರ್ಯಃ ಸಪುತ್ರಃ ಪ್ರವಿವೇಶ ಹ।
01124018c ನಭೋ ಜಲಧರೈರ್ಹೀನಂ ಸಾಂಗಾರಕ ಇವಾಂಶುಮಾನ್।।

ಆಗ ಶುಕ್ಲಾಂಬರಧಾರಿ, ಶುಕ್ಲಯಜ್ಞೋಪವೀತ ಧಾರಿಣಿ, ಬಿಳಿಕೂದಲಿನ ಬಿಳಿಗಡ್ಡದ ಶುಕ್ಲಮಾಲ್ಯಾನುಲೇಪಿತ ಆಚಾರ್ಯನು ತನ್ನ ಪುತ್ರನನ್ನೊಡಗೂಡಿ ಮಳೆ-ಮೇಘಗಳಿಲ್ಲದ ನಭದಲ್ಲಿ ಅಂಗಾರಕನೊಂದಿಗೆ ಚಂದ್ರನು ಹೇಗೋ ಹಾಗೆ ರಂಗಮಧ್ಯವನ್ನು ಪ್ರವೇಶಿಸಿದನು.

01124019a ಸ ಯಥಾಸಮಯಂ ಚಕ್ರೇ ಬಲಿಂ ಬಲವತಾಂ ವರಃ।
01124019c ಬ್ರಾಹ್ಮಣಾಂಶ್ಚಾತ್ರ ಮಂತ್ರಜ್ಞಾನ್ವಾಚಯಾಮಾಸ ಮಂಗಲಂ।।

ಆ ಬಲವಂತರಲ್ಲಿ ಶ್ರೇಷ್ಠ ಮಂತ್ರಜ್ಞ ಬಲಿ ಬ್ರಾಹ್ಮಣನು ಆ ಸಮಯಕ್ಕೆ ತಕ್ಕುದಾದ ಮಂಗಲಾಚರಣೆಯನ್ನು ಹೇಳಿದನು.

01124020a ಅಥ ಪುಣ್ಯಾಹಘೋಷಸ್ಯ ಪುಣ್ಯಸ್ಯ ತದನಂತರಂ।
01124020c ವಿವಿಶುರ್ವಿವಿಧಂ ಗೃಹ್ಯ ಶಸ್ತ್ರೋಪಕರಣಂ ನರಾಃ।।

ಪುಣ್ಯಾಹ ಘೋಷ ಪುಣ್ಯದ ನಂತರ ವಿವಿಧ ಶಸ್ತ್ರೋಪಕರಣಗಳನ್ನು ಹಿಡಿದು ಜನರು ಪ್ರವೇಶಿಸಿದರು.

01124021a ತತೋ ಬದ್ಧತನುತ್ರಾಣಾ ಬದ್ಧಕಕ್ಷ್ಯಾ ಮಹಾಬಲಾಃ।
01124021c ಬದ್ಧತೂಣಾಃ ಸಧನುಷೋ ವಿವಿಶುರ್ಭರತರ್ಷಭಾಃ।।

ಆಗ ಸೊಂಟಕ್ಕೆ ಬಿಗಿಯಾಗಿ ಬಿಗಿದ, ಕವಚಗಳನ್ನು ಧರಿಸಿದ ಮಹಾಬಲ ಭರತರ್ಷಭರು ಧನುಸ್ಸುಗಳನ್ನು ಹಿಡಿದು ಪ್ರವೇಶಿಸಿದರು.

01124022a ಅನುಜ್ಯೇಷ್ಠಂ ಚ ತೇ ತತ್ರ ಯುಧಿಷ್ಠಿರಪುರೋಗಮಾಃ।
01124022c ಚಕ್ರುರಸ್ತ್ರಂ ಮಹಾವೀರ್ಯಾಃ ಕುಮಾರಾಃ ಪರಮಾದ್ಭುತಂ।।

ಯುಧಿಷ್ಠಿರನ ಮುಂದಾಳತ್ವದಲ್ಲಿ ಹಿರಿಯವನನ್ನು ಕ್ರಮವಾಗಿ ಹಿಂಬಾಲಿಸಿ ಪ್ರತಿಯೊಬ್ಬ ಮಹಾವೀರ ಕುಮಾರನೂ ತನ್ನ ತನ್ನ ಪರಮಾದ್ಭುತ ಅಸ್ತ್ರಗಳನ್ನು ಪ್ರದರ್ಶಿಸಿದರು.

01124023a ಕೇ ಚಿಚ್ಛರಾಕ್ಷೇಪಭಯಾಚ್ಶಿರಾಂಸ್ಯವನನಾಮಿರೇ।
01124023c ಮನುಜಾ ಧೃಷ್ಟಮಪರೇ ವೀಕ್ಷಾಂ ಚಕ್ರುಃ ಸವಿಸ್ಮಯಾಃ।।

ದರ್ಶಕರಲ್ಲಿ ಕೆಲವರು ಬಾಣಗಳು ತಮ್ಮ ಮೇಲೆ ಬಂದು ಬೀಳುತ್ತಿವೆಯೋ ಎಂಬ ಭಯದಿಂದ ತಲೆಗಳನ್ನು ತಗ್ಗಿಸುತ್ತಿದ್ದರೆ ಇನ್ನು ಕೆಲವು ಜನರು ವಿಸ್ಮಿತರಾಗಿ ನೋಡುತ್ತಲೇ ಇದ್ದರು.

01124024a ತೇ ಸ್ಮ ಲಕ್ಷ್ಯಾಣಿ ವಿವಿಧುರ್ಬಾಣೈರ್ನಾಮಾಂಕಶೋಭಿತೈಃ।
01124024c ವಿವಿಧೈರ್ಲಾಘವೋತ್ಸೃಷ್ಟೈರುಹ್ಯಂತೋ ವಾಜಿಭಿರ್ದ್ರುತಂ।।

ವೇಗವಾಗಿ ಕುದುರೆಗಳ ಮೇಲೆ ಹೋಗುತ್ತಿದ್ದ ಅವರು ಬಾಣಗಳಿಂದ ಗುರಿಗಳಿಗೆ ಸರಿಯಾಗಿ ಹೊಡೆದು ತಮ್ಮ ತಮ್ಮ ವಿವಿಧ ಕೌಶಲ್ಯತೆಗಳನ್ನು ತೋರಿಸಿಕೊಟ್ಟರು.

01124025a ತತ್ಕುಮಾರಬಲಂ ತತ್ರ ಗೃಹೀತಶರಕಾರ್ಮುಕಂ।
01124025c ಗಂಧರ್ವನಗರಾಕಾರಂ ಪ್ರೇಕ್ಷ್ಯ ತೇ ವಿಸ್ಮಿತಾಭವನ್।।

ಬಿಲ್ಲು ಬಾಣಗಳನ್ನು ಹಿಡಿಯುವುದರಲ್ಲಿ ಆ ಕುಮಾರರ ಗುಂಪಿಗಿದ್ದ ಕೌಶಲತೆಯನ್ನು ನೋಡಿದ ಜನರು ಗಂಧರ್ವನಗರವನ್ನು ನೋಡಿದವರಂತೆ ವಿಸ್ಮಿತರಾದರು.

01124026a ಸಹಸಾ ಚುಕ್ರುಶುಸ್ತತ್ರ ನರಾಃ ಶತಸಹಸ್ರಶಃ।
01124026c ವಿಸ್ಮಯೋತ್ಫುಲ್ಲನಯನಾಃ ಸಾಧು ಸಾಧ್ವಿತಿ ಭಾರತ।।

ಭಾರತ! ಅಲ್ಲಿ ಕಣ್ಣುಬಿಟ್ಟು ವಿಸ್ಮಿತರಾಗಿ ನೋಡುತ್ತಿದ್ದ ನೂರಾರು ಸಹಸ್ರಾರು ಜನರು “ಸಾಧು! ಸಾಧು!” ಎಂದು ಕೂಗುತ್ತಿದ್ದರು.

01124027a ಕೃತ್ವಾ ಧನುಷಿ ತೇ ಮಾರ್ಗಾನ್ರಥಚರ್ಯಾಸು ಚಾಸಕೃತ್।
01124027c ಗಜಪೃಷ್ಠೇಽಶ್ವಪೃಷ್ಠೇ ಚ ನಿಯುದ್ಧೇ ಚ ಮಹಾಬಲಾಃ।।

ಆ ಮಹಾಬಲಶಾಲಿಗಳು ಒಮ್ಮೆ ರಥದಮೇಲೆ, ನಂತರ ಆನೆಯ ಮೇಲೆ, ಕುದುರೆಯ ಮೇಲೆ ಮತ್ತು ಒಮ್ಮೆ ದ್ವಂದ್ವ ಯುದ್ಧದಲ್ಲಿ ಧನುಸ್ಸನ್ನು ಹಿಡಿದು ಪ್ರದರ್ಶಿಸಿದರು.

01124028a ಗೃಹೀತಖಡ್ಗಚರ್ಮಾಣಸ್ತತೋ ಭೂಯಃ ಪ್ರಹಾರಿಣಃ।
01124028c ತ್ಸರುಮಾರ್ಗಾನ್ಯಥೋದ್ದಿಷ್ಟಾಂಶ್ಚೇರುಃ ಸರ್ವಾಸು ಭೂಮಿಷು।।

ಖಡ್ಗ ಮತ್ತು ಗುರಾಣಿಗಳನ್ನು ಹಿಡಿದು ಬಾಹುಗಳಿಂದ ಬೀಸುತ್ತಾ ಆ ಮೈದಾನದಲ್ಲೆಲ್ಲಾ ಓಡಾಡಿ ಖಡ್ಗಯುದ್ಧದಲ್ಲಿ ತಮಗಿದ್ದ ಕೌಶಲ್ಯತೆಯನ್ನು ತೋರಿಸಿದರು.

01124029a ಲಾಘವಂ ಸೌಷ್ಠವಂ ಶೋಭಾಂ ಸ್ಥಿರತ್ವಂ ದೃಢಮುಷ್ಟಿತಾಂ।
01124029c ದದೃಶುಸ್ತತ್ರ ಸರ್ವೇಷಾಂ ಪ್ರಯೋಗೇ ಖಡ್ಗಚರ್ಮಣಾಂ।।

ಖಡ್ಗ-ಗುರಾಣಿಗಳ ಪ್ರಯೋಗದಲ್ಲಿ ಅವರಿಗಿದ್ದ ಲಾಘವ, ಸೌಷ್ಠವ, ಶೋಭೆ, ಸ್ಥಿರತ್ವ ಮತ್ತು ದೃಢಮುಷ್ಠಿಯನ್ನು ಅಲ್ಲಿ ಸರ್ವರೂ ನೋಡಿದರು.

01124030a ಅಥ ತೌ ನಿತ್ಯಸಂಹೃಷ್ಟೌ ಸುಯೋಧನವೃಕೋದರೌ।
01124030c ಅವತೀರ್ಣೌ ಗದಾಹಸ್ತಾವೇಕಶೃಂಗಾವಿವಾಚಲೌ।।

ಆಗ ನಿತ್ಯಸಹೃಷ್ಠ ಸುಯೋಧನ-ವೃಕೋದರರು ಕೈಯಲ್ಲಿ ಗದೆಯನ್ನು ಹಿಡಿದು ಒಂದೇ ಶಿಖರಗಳನ್ನು ಹೊಂದಿದ ಪರ್ವತಗಳಂತೆ ಅಲ್ಲಿ ಇಳಿದರು.

01124031a ಬದ್ಧಕಕ್ಷ್ಯೌ ಮಹಾಬಾಹೂ ಪೌರುಷೇ ಪರ್ಯವಸ್ಥಿತೌ।
01124031c ಬೃಂಹಂತೌ ವಾಶಿತಾಹೇತೋಃ ಸಮದಾವಿವ ಕುಂಜರೌ।।

ಸೊಂಟವನ್ನು ಬಿಗಿದು ಪೌರುಷವನ್ನು ತೋರಿಸುತ್ತಾ ಅಲ್ಲಿ ನಿಂತಿದ್ದ ಮಹಾಬಾಹುಗಳು ಒಂದೇ ಹೆಣ್ಣು ಆನೆಗಾಗಿ ಹೊಡೆದಾಡಲು ನಿಂತಿದ್ದ ಮದಿಸಿದ ಗಂಡಾನೆಗಳಂತೆ ತೋರುತ್ತಿದ್ದರು.

01124032a ತೌ ಪ್ರದಕ್ಷಿಣಸವ್ಯಾನಿ ಮಂಡಲಾನಿ ಮಹಾಬಲೌ।
01124032c ಚೇರತುರ್ನಿರ್ಮಲಗದೌ ಸಮದಾವಿವ ಗೋವೃಷೌ।।

ಆ ಮಹಾಬಲಿಗಳು ಹೊಳೆಯುತ್ತಿರುವ ಗದೆಗಳನ್ನು ಹಿಡಿದು ಸೂರ್ಯನಂತೆ ಮಂಡಲಗಳಲ್ಲಿ ಕಾವಿಗೆ ಬಂದ ಹೋರಿಗಳಂತೆ ಪ್ರದಕ್ಷಿಣೆಮಾಡುತ್ತಿದ್ದರು.

01124033a ವಿದುರೋ ಧೃತರಾಷ್ಟ್ರಾಯ ಗಾಂಧಾರ್ಯೈ ಪಾಂಡವಾರಣಿಃ।
01124033c ನ್ಯವೇದಯೇತಾಂ ತತ್ಸರ್ವಂ ಕುಮಾರಾಣಾಂ ವಿಚೇಷ್ಟಿತಂ।।

ಕುಮಾರರ ಈ ಎಲ್ಲ ವಿಚೇಷ್ಟಿತೆಗಳನ್ನೂ ವಿದುರನು ಧೃತರಾಷ್ಟ್ರನಿಗೆ ಮತ್ತು ಪಾಂಡವಾರಣಿ ಕುಂತಿಯು ಗಾಂಧಾರಿಗೆ ವರದಿಮಾಡುತ್ತಿದ್ದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹದಾಹಪರ್ವಣಿ ಅಸ್ತ್ರದರ್ಶನೇ ಚತುರ್ವಿಂಶತ್ಯಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹದಾಹ ಪರ್ವದಲ್ಲಿ ಅಸ್ತ್ರದರ್ಶನ ಎನ್ನುವ ನೂರಾ ಇಪ್ಪತ್ನಾಲ್ಕನೆಯ ಅಧ್ಯಾಯವು.