ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸಂಭವ ಪರ್ವ
ಅಧ್ಯಾಯ 123
ಸಾರ
ಅರ್ಜುನನ ಅಭ್ಯಾಸವನ್ನು ನೋಡಿ ಸಂತೋಷಗೊಂಡ ದ್ರೋಣನು “ನಿನ್ನ ಸರಿಸಮ ಧನುರ್ಧರ ಅನ್ಯ ಯಾರೂ ಈ ಲೋಕದಲ್ಲಿ ಇಲ್ಲದಿರುವಂತೆ ಮಾಡುತ್ತೇನೆ” ಎಂದು ವಚನವನ್ನು ನೀಡುವುದು (1-6). ಕಲಿಯಲು ಬಂದ ಏಕಲವ್ಯನನ್ನು ನೈಷಾದನೆಂದು ದ್ರೋಣನು ಶಿಷ್ಯನನ್ನಾಗಿ ಸ್ವೀಕರಿಸದೇ ಇರುವುದು; ಏಕಲವ್ಯನು ಅರಣ್ಯವನ್ನು ಸೇರಿ ದ್ರೋಣನ ವಿಗ್ರಹವನ್ನು ಮಾಡಿ, ಗುರುವೆಂದು ಪರಿಗಣಿಸಿ, ಅಸ್ತ್ರಾಭ್ಯಾಸ ಮಾಡಿದ್ದುದು (7-14). ಬೇಟೆಯಾಡಲು ಹೋಗಿದ್ದಾಗ ಅರ್ಜುನನು ಏಕಲವ್ಯನು ಶಬ್ಧವೇದಿಯನ್ನು ಬಳಸಿದುದನ್ನು ಕಂಡು, ಗುರು ಯಾರೆಂಬ ಪ್ರಶ್ನೆಗೆ ದ್ರೋಣನೆಂದು ಹೇಳಲು ದುಃಖಿತನಾಗಿ ದ್ರೋಣನಿಗೆ ಹೇಳಿಕೊಳ್ಳುವುದು (15-28). ದ್ರೋಣನು ಏಕಲವ್ಯನಲ್ಲಿಗೆ ಹೋಗಿ ಅವನ ಬಲಗೈಯ ಹೆಬ್ಬೆರಳನ್ನು ಗುರುದಕ್ಷಿಣೆಯನ್ನಾಗಿ ಪಡೆದು ಅರ್ಜುನನನ್ನು ಸಂತೋಷಗೊಳಿಸಿದುದು (29-39). ದ್ರೋಣನು ಕೃತ್ರಿಮ ಪಕ್ಷಿಯೊಂದನ್ನು ಮರದ ಮೇಲಿರಿಸಿ, ಅದಕ್ಕೆ ಗುರಿಯಿಡಲು ಹೇಳಿ, ತನ್ನ ಶಿಷ್ಯರನ್ನು ಪರೀಕ್ಷಿಸಿದುದು, ಕೇವಲ ಅರ್ಜುನನು ಉತ್ತೀರ್ಣನಾದುದು (40-67). ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದ ದ್ರೋಣನನ್ನು ಮೊಸಳೆಯು ಹಿಡಿದುಕೊಳ್ಳಲು ಅರ್ಜುನನು ಬಾಣಪ್ರಯೋಗಿಸಿ ಬಿಡಿಸಿದುದು, ಬದಲಾಗಿ ಅರ್ಜುನನಿಗೆ ಅಸ್ತ್ರ ಬ್ರಹ್ಮಶಿರ ಪ್ರದಾನ (68-78).
01123001 ವೈಶಂಪಾಯನ ಉವಾಚ।
01123001a ಅರ್ಜುನಸ್ತು ಪರಂ ಯತ್ನಮಾತಸ್ಥೇ ಗುರುಪೂಜನೇ।
01123001c ಅಸ್ತ್ರೇ ಚ ಪರಮಂ ಯೋಗಂ ಪ್ರಿಯೋ ದ್ರೋಣಸ್ಯ ಚಾಭವತ್।।
ವೈಶಂಪಾಯನನು ಹೇಳಿದನು: “ಅರ್ಜುನನಾದರೋ ತನ್ನ ಪರಮ ಯತ್ನದಿಂದ ಗುರುಪೂಜನೆಯಲ್ಲಿ ನಿರತನಾಗಿದ್ದನು. ಅಸ್ತ್ರಗಳಲ್ಲಿರುವ ತನ್ನ ಪರಮ ಯೋಗದ ಮೂಲಕ ದ್ರೋಣನ ಪ್ರೀತಿಪಾತ್ರನಾದನು.
01123002a ದ್ರೋಣೇನ ತು ತದಾಹೂಯ ರಹಸ್ಯುಕ್ತೋಽನ್ನಸಾಧಕಃ।
01123002c ಅಂಧಕಾರೇಽರ್ಜುನಾಯಾನ್ನಂ ನ ದೇಯಂ ತೇ ಕಥಂ ಚನ।।
ದ್ರೋಣನು ಅನ್ನಸಾಧಕನನ್ನು ರಹಸ್ಯದಲ್ಲಿ ಕರೆದು “ಕತ್ತಲೆಯಲ್ಲಿ ಎಂದೂ ಅರ್ಜುನನಿಗೆ ಏನನ್ನೂ ತಿನ್ನಲು ಕೊಡಬೇಡ!” ಎಂದು ಹೇಳಿದನು.
01123003a ತತಃ ಕದಾ ಚಿದ್ಭುಂಜಾನೇ ಪ್ರವವೌ ವಾಯುರರ್ಜುನೇ।
01123003c ತೇನ ತತ್ರ ಪ್ರದೀಪಃ ಸ ದೀಪ್ಯಮಾನೋ ನಿವಾಪಿತಃ।।
ನಂತರ ಒಂದು ದಿನ ಅರ್ಜುನನು ಊಟ ಮಾಡುತ್ತಿರುವಾಗ ಗಾಳಿ ಬೀಸಿ ಅವನು ಯಾವುದರ ಬೆಳಕಿನಲ್ಲಿ ಊಟಮಾಡುತ್ತಿದ್ದನೋ ಆ ದೀಪವನ್ನು ಆರಿಸಿತು.
01123004a ಭುಂಕ್ತ ಏವಾರ್ಜುನೋ ಭಕ್ತಂ ನ ಚಾಸ್ಯಾಸ್ಯಾದ್ವ್ಯಮುಹ್ಯತ।
01123004c ಹಸ್ತಸ್ತೇಜಸ್ವಿನೋ ನಿತ್ಯಮನ್ನಗ್ರಹಣಕಾರಣಾತ್।
01123004e ತದಭ್ಯಾಸಕೃತಂ ಮತ್ವಾ ರಾತ್ರಾವಭ್ಯಸ್ತ ಪಾಂಡವಃ।।
ಅರ್ಜುನನು ಊಟವನ್ನು ಮುಂದುವರಿಸಿದನು ಮತ್ತು ಅವನ ಕೈಯು ನಿತ್ಯವೂ ಅನ್ನವನ್ನು ಹಿಡಿದು ಊಟಮಾಡುವ ಅಭ್ಯಾಸಬಲದಿಂದ ತಾನಾಗಿಯೇ ಬಾಯಿಯನ್ನು ಸೇರುತ್ತಿತ್ತು. ಅಭ್ಯಾಸದಿಂದ ಏನೆಲ್ಲ ಮಾಡಬಹುದು ಎಂದು ತಿಳಿದ ಆ ಪಾಂಡವನು ರಾತ್ರಿಯಲ್ಲಿಯೂ ಅಭ್ಯಾಸಮಾಡಲು ಪ್ರಾರಂಭಿಸಿದನು.
01123005a ತಸ್ಯ ಜ್ಯಾತಲನಿರ್ಘೋಷಂ ದ್ರೋಣಃ ಶುಶ್ರಾವ ಭಾರತ।
01123005c ಉಪೇತ್ಯ ಚೈನಮುತ್ಥಾಯ ಪರಿಷ್ವಜ್ಯೇದಮಬ್ರವೀತ್।।
ಭಾರತ! ದ್ರೋಣನು ಅವನು ಬಿಲ್ಲು ಮೀಟುವ ಶಬ್ಧವನ್ನು ಕೇಳಿ, ಮೇಲೆದ್ದು ಅವನಲ್ಲಿಗೆ ಬಂದು ಬಿಗಿದಪ್ಪಿ ಹೇಳಿದನು:
01123006a ಪ್ರಯತಿಷ್ಯೇ ತಥಾ ಕರ್ತುಂ ಯಥಾ ನಾನ್ಯೋ ಧನುರ್ಧರಃ।
01123006c ತ್ವತ್ಸಮೋ ಭವಿತಾ ಲೋಕೇ ಸತ್ಯಮೇತದ್ಬ್ರವೀಮಿ ತೇ।।
“ನಿನ್ನ ಸರಿಸಮ ಧನುರ್ಧರ ಅನ್ಯ ಯಾರೂ ಈ ಲೋಕದಲ್ಲಿ ಇಲ್ಲದಿರುವಂತೆ ಮಾಡಲು ಎಲ್ಲವನ್ನೂ ನಾನು ಮಾಡುತ್ತೇನೆ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ.”
01123007a ತತೋ ದ್ರೋಣೋಽರ್ಜುನಂ ಭೂಯೋ ರಥೇಷು ಚ ಗಜೇಷು ಚ।
01123007c ಅಶ್ವೇಷು ಭೂಮಾವಪಿ ಚ ರಣಶಿಕ್ಷಾಮಶಿಕ್ಷಯತ್।।
ನಂತರ ದ್ರೋಣನು ಅರ್ಜುನನಿಗೆ ರಥದಮೇಲೆ, ಆನೆಯ ಮೇಲೆ, ಕುದುರೆಯ ಮೇಲೆ ಮತ್ತು ಭೂಮಿಯ ಮೇಲೂ ನಿಂತು ಯುದ್ಧಮಾಡುವುದನ್ನು ಕಲಿಸಿಕೊಟ್ಟನು.
01123008a ಗದಾಯುದ್ಧೇಽಸಿಚರ್ಯಾಯಾಂ ತೋಮರಪ್ರಾಸಶಕ್ತಿಷು।
01123008c ದ್ರೋಣಃ ಸಂಕೀರ್ಣಯುದ್ಧೇಷು ಶಿಕ್ಷಯಾಮಾಸ ಪಾಂಡವಂ।।
ದ್ರೋಣನು ಆ ಪಾಂಡವನಿಗೆ ಗದಾಯುದ್ಧದಲ್ಲಿ, ಖಡ್ಗಧಾರಣೆಯಲ್ಲಿ, ಕೈಯಿಂದ ಬಿಸಾಡುವ ತೋಮರ, ಪ್ರಾಸ, ಶಕ್ತಿ ಮುಂತಾದವುಗಳನ್ನು ಬಳಸುವುದರಲ್ಲಿ ಮತ್ತು ಮಿಶ್ರ ಆಯುಧಗಳಿಂದ ಯುದ್ಧಮಾಡುವುದನ್ನೂ ಕಲಿಸಿಕೊಟ್ಟನು.
01123009a ತಸ್ಯ ತತ್ಕೌಶಲಂ ದೃಷ್ಟ್ವಾ ಧನುರ್ವೇದಜಿಘೃಕ್ಷವಃ।
01123009c ರಾಜಾನೋ ರಾಜಪುತ್ರಾಶ್ಚ ಸಮಾಜಗ್ಮುಃ ಸಹಸ್ರಶಃ।।
ಅವನ ಆ ಕೌಶಲತೆಯನ್ನು ನೋಡಿ ಸಹಸ್ರಾರು ರಾಜರು-ರಾಜಪುತ್ರರು ಧನುರ್ವೇದವನ್ನು ವಶೀಕರಿಸಿಕೊಳ್ಳಲು ಬಂದು ಸೇರಿದರು.
01123010a ತತೋ ನಿಷಾದರಾಜಸ್ಯ ಹಿರಣ್ಯಧನುಷಃ ಸುತಃ।
01123010c ಏಕಲವ್ಯೋ ಮಹಾರಾಜ ದ್ರೋಣಮಭ್ಯಾಜಗಾಮ ಹ।।
ಮಹಾರಾಜ! ಹಾಗೆಯೇ ನಿಷಾದರಾಜ ಹಿರಣ್ಯಧನುಷನ ಮಗ ಏಕಲವ್ಯನೂ ದ್ರೋಣನಲ್ಲಿಗೆ ಬಂದನು.
01123011a ನ ಸ ತಂ ಪ್ರತಿಜಗ್ರಾಹ ನೈಷಾದಿರಿತಿ ಚಿಂತಯನ್।
01123011c ಶಿಷ್ಯಂ ಧನುಷಿ ಧರ್ಮಜ್ಞಸ್ತೇಷಾಮೇವಾನ್ವವೇಕ್ಷಯಾ।।
ಆದರೆ ಆ ಧರ್ಮಜ್ಞನು ಬೇರೆಯವರ ಆಸಕ್ತಿಯನ್ನು ನೋಡಿ ನೈಷಾದನೆಂದು ಯೋಚಿಸಿ ಅವನನ್ನು ಧನುರ್ವಿದ್ಯೆಗೆ ಶಿಷ್ಯನನ್ನಾಗಿ ಸ್ವೀಕರಿಸಲಿಲ್ಲ.
01123012a ಸ ತು ದ್ರೋಣಸ್ಯ ಶಿರಸಾ ಪಾದೌ ಗೃಹ್ಯ ಪರಂತಪಃ।
01123012c ಅರಣ್ಯಮನುಸಂಪ್ರಾಪ್ತಃ ಕೃತ್ವಾ ದ್ರೋಣಂ ಮಹೀಮಯಂ।।
ಆ ಪರಂತಪ ಏಕಲವ್ಯನು ದ್ರೋಣನ ಪಾದಗಳಿಗೆ ಶಿರಬಾಗಿ ನಮಸ್ಕರಿಸಿ ಅರಣ್ಯವನ್ನು ಸೇರಿದನು.
01123013a ತಸ್ಮಿನ್ನಾಚಾರ್ಯವೃತ್ತಿಂ ಚ ಪರಮಾಮಾಸ್ಥಿತಸ್ತದಾ।
01123013c ಇಷ್ವಸ್ತ್ರೇ ಯೋಗಮಾತಸ್ಥೇ ಪರಂ ನಿಯಮಮಾಸ್ಥಿತಃ।।
ಅಲ್ಲಿ ಮಣ್ಣಿನಿಂದ ದ್ರೋಣನನ್ನೇ ಹೋಲುವ ವಿಗ್ರಹವೊಂದನ್ನು ಮಾಡಿ, ಅದನ್ನೇ ಆಚಾರ್ಯನೆಂದು ಪರಿಗಣಿಸಿ ಪರಮ ನಿಯಮ ಮತ್ತು ಯೋಗಗಳಿಂದ ಧನುರ್ವಿದ್ಯೆಯ ಅಭ್ಯಾಸ ಮಾಡತೊಡಗಿದನು.
01123014a ಪರಯಾ ಶ್ರದ್ಧಯಾ ಯುಕ್ತೋ ಯೋಗೇನ ಪರಮೇಣ ಚ।
01123014c ವಿಮೋಕ್ಷಾದಾನಸಂಧಾನೇ ಲಘುತ್ವಂ ಪರಮಾಪ ಸಃ।।
ಪರಮ ಶ್ರದ್ಧೆ ಮತ್ತು ಪರಮ ಯೋಗಗಳಿಂದ ಅವನು ಬಾಣಗಳ ಆದಾನ, ಅನುಸಂಧಾನ, ಮತ್ತು ವಿಮೋಕ್ಷಗಳಲ್ಲಿ ಪರಮ ಲಘುತ್ವವನ್ನು ಪಡೆದನು.
01123015a ಅಥ ದ್ರೋಣಾಭ್ಯನುಜ್ಞಾತಾಃ ಕದಾ ಚಿತ್ಕುರುಪಾಂಡವಾಃ।
01123015c ರಥೈರ್ವಿನಿರ್ಯಯುಃ ಸರ್ವೇ ಮೃಗಯಾಮರಿಮರ್ದನಾಃ।।
ಒಮ್ಮೆ ದ್ರೋಣನ ಅಪ್ಪಣೆಯನ್ನು ಪಡೆದು ಅರಿಮರ್ದನ ಕುರುಪಾಂಡವರು ಎಲ್ಲರೂ ರಥಗಳನ್ನೇರಿ ಬೇಟೆಗೆಂದು ಹೊರಟರು.
01123016a ತತ್ರೋಪಕರಣಂ ಗೃಹ್ಯ ನರಃ ಕಶ್ಚಿದ್ಯದೃಚ್ಛಯಾ।
01123016c ರಾಜನ್ನನುಜಗಾಮೈಕಃ ಶ್ವಾನಮಾದಾಯ ಪಾಂಡವಾನ್।।
ರಾಜನ್! ಅಲ್ಲಿ ಪಾಂಡವರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ನರನೊಬ್ಬನು ತನ್ನ ನಾಯಿಯನ್ನೂ ಕರೆದುಕೊಂಡು ಬಂದಿದ್ದನು.
01123017a ತೇಷಾಂ ವಿಚರತಾಂ ತತ್ರ ತತ್ತತ್ಕರ್ಮ ಚಿಕೀರ್ಷತಾಂ।
01123017c ಶ್ವಾ ಚರನ್ಸ ವನೇ ಮೂದೋ ನೈಷಾದಿಂ ಪ್ರತಿ ಜಗ್ಮಿವಾನ್।।
ಅವರೆಲ್ಲರೂ ಅಲ್ಲಿ ತಮ್ಮ ತಮ್ಮ ಉಪಾಯಗಳಂತೆ ತಿರುಗಾಡುತ್ತಿದ್ದಾಗ ಆ ನಾಯಿಯು ವನವನ್ನು ಸೇರಿ ದಾರಿತಪ್ಪಿ ನಿಷಾದನಿದ್ದಲ್ಲಿಗೆ ಬಂದಿತು.
01123018a ಸ ಕೃಷ್ಣಂ ಮಲದಿಗ್ಧಾಂಗಂ ಕೃಷ್ಣಾಜಿನಧರಂ ವನೇ।
01123018c ನೈಷಾದಿಂ ಶ್ವಾ ಸಮಾಲಕ್ಷ್ಯ ಭಷಂಸ್ತಸ್ಥೌ ತದಂತಿಕೇ।।
ಆ ವನದಲ್ಲಿ ಮಲಿನಾಂಗಿ, ಕೃಷ್ಣಾಜಿನಧರ ಕಪ್ಪು ನೈಷದನನ್ನು ನೋಡಿದ ಆ ನಾಯಿಯು ಒಂದೇ ಸಮನೆ ಬೊಗಳ ತೊಡಗಿತು.
01123019a ತದಾ ತಸ್ಯಾಥ ಭಷತಃ ಶುನಃ ಸಪ್ತ ಶರಾನ್ಮುಖೇ।
01123019c ಲಾಘವಂ ದರ್ಶಯನ್ನಸ್ತ್ರೇ ಮುಮೋಚ ಯುಗಪದ್ಯಥಾ।।
ಆಗ ಅವನು ಬೊಗಳುತ್ತಿರುವ ನಾಯಿಯ ಬಾಯಿಯಲ್ಲಿ ಒಂದೇ ವೇಳೆಯಲ್ಲಿ ಏಳು ಬಾಣಗಳನ್ನು ಬಿಟ್ಟು ತನ್ನ ಕೌಶಲ್ಯತೆಯನ್ನು ತೋರಿಸಿದನು.
01123020a ಸ ತು ಶ್ವಾ ಶರಪೂರ್ಣಾಸ್ಯಃ ಪಾಂಡವಾನಾಜಗಾಮ ಹ।
01123020c ತಂ ದೃಷ್ಟ್ವಾ ಪಾಂಡವಾ ವೀರಾ ವಿಸ್ಮಯಂ ಪರಮಂ ಯಯುಃ।।
ಬಾಯಿಯಲ್ಲಿ ಬಾಣಗಳು ತುಂಬಿಕೊಂಡಿದ್ದಂತೆ ಆ ನಾಯಿಯು ಪಾಂಡವರಿದ್ದಲ್ಲಿಗೆ ಹೋಯಿತು. ಅದನ್ನು ನೋಡಿದ ವೀರ ಪಾಂಡವರು ಪರಮ ವಿಸ್ಮಿತರಾದರು.
01123021a ಲಾಘವಂ ಶಬ್ದವೇಧಿತ್ವಂ ದೃಷ್ಟ್ವಾ ತತ್ಪರಮಂ ತದಾ।
01123021c ಪ್ರೇಕ್ಷ್ಯ ತಂ ವ್ರೀಡಿತಾಶ್ಚಾಸನ್ಪ್ರಶಶಂಸುಶ್ಚ ಸರ್ವಶಃ।।
ಶಬ್ದವೇಧಿಯಲ್ಲಿದ್ದ ಆ ಪರಮ ಕುಶಲತೆಯನ್ನು ನೋಡಿ ಎಲ್ಲರೂ ವಿನೀತರಾಗಿ ಆ ಕೃತ್ಯವನ್ನೆಸಗಿದವನ್ನು ಪ್ರಶಂಸಿಸಿದರು.
01123022a ತಂ ತತೋಽನ್ವೇಷಮಾಣಾಸ್ತೇ ವನೇ ವನನಿವಾಸಿನಂ।
01123022c ದದೃಶುಃ ಪಾಂಡವಾ ರಾಜನ್ನಸ್ಯಂತಮನಿಶಂ ಶರಾನ್।।
ರಾಜನ್! ಪಾಂಡವರು ವನದಲ್ಲಿ ಅವನನ್ನು ಅನ್ವೇಷಿಸುತ್ತಾ ಒಂದೇ ಸಮನೆ ಬಾಣಗಳನ್ನು ಬಿಡುತ್ತಿದ್ದ ಆ ವನವಾಸಿಯನ್ನು ಕಂಡರು.
01123023a ನ ಚೈನಮಭ್ಯಜಾನಂಸ್ತೇ ತದಾ ವಿಕೃತದರ್ಶನಂ।
01123023c ಅಥೈನಂ ಪರಿಪಪ್ರಚ್ಛುಃ ಕೋ ಭವಾನ್ಕಸ್ಯ ವೇತ್ಯುತ।।
ವಿಕೃತವಾಗಿ ಕಾಣುತ್ತಿರುವ ಅವನನ್ನು ಗುರುತಿಸಲಾಗದೇ ಕೇಳಿದರು: “ನೀನು ಯಾರು ಮತ್ತು ಯಾರವನು?”
01123024 ಏಕಲವ್ಯ ಉವಾಚ।
01123024a ನಿಷಾದಾಧಿಪತೇರ್ವೀರಾ ಹಿರಣ್ಯಧನುಷಃ ಸುತಂ।
01123024c ದ್ರೋಣಶಿಷ್ಯಂ ಚ ಮಾಂ ವಿತ್ತ ಧನುರ್ವೇದಕೃತಶ್ರಮಂ।।
ಏಕಲವ್ಯನು ಹೇಳಿದನು: “ನಿಷಾದಾಧಿಪತಿ ವೀರ ಹಿರಣ್ಯಧನುಷನ ಮಗನೆಂದು, ದ್ರೋಣಶಿಷ್ಯನೆಂದು, ಧನುರ್ವೇದವನ್ನು ಕಲಿಯಲು ಶ್ರಮಿಸುತ್ತಿರುವವನೆಂದೂ ನನ್ನನ್ನು ತಿಳಿಯಿರಿ.””
01123025 ವೈಶಂಪಾಯನ ಉವಾಚ।
01123025a ತೇ ತಮಾಜ್ಞಾಯ ತತ್ತ್ವೇನ ಪುನರಾಗಮ್ಯ ಪಾಂಡವಾಃ।
01123025c ಯಥಾವೃತ್ತಂ ಚ ತೇ ಸರ್ವಂ ದ್ರೋಣಾಯಾಚಖ್ಯುರದ್ಭುತಂ।।
ವೈಶಂಪಾಯನನು ಹೇಳಿದನು: “ಆಗ ಪಾಂಡವರು ಅವನನ್ನು ಗುರುತಿಸಿದರು. ಅವರು ಹಿಂದಿರುಗಿ ಬಂದು ಆ ಅದ್ಭುತ ಎಲ್ಲವನ್ನೂ ಯಥಾವತ್ತಾಗಿ ದ್ರೋಣನಿಗೆ ವರದಿ ಮಾಡಿದರು.
01123026a ಕೌಂತೇಯಸ್ತ್ವರ್ಜುನೋ ರಾಜನ್ನೇಕಲವ್ಯಮನುಸ್ಮರನ್।
01123026c ರಹೋ ದ್ರೋಣಂ ಸಮಾಗಮ್ಯ ಪ್ರಣಯಾದಿದಮಬ್ರವೀತ್।।
ರಾಜನ್! ಆದರೆ ಕೌಂತೇಯ ಅರ್ಜುನನು ಏಕಲವ್ಯನ ಕುರಿತು ಚಿಂತಿಸತೊಡಗಿದನು. ಏಕಾಂತದಲ್ಲಿ ದ್ರೋಣನನ್ನು ಭೆಟ್ಟಿಯಾಗಿ ಪ್ರೇಮಾಭಾವದಿಂದ ಹೇಳಿದನು:
01123027a ನನ್ವಹಂ ಪರಿರಭ್ಯೈಕಃ ಪ್ರೀತಿಪೂರ್ವಮಿದಂ ವಚಃ।
01123027c ಭವತೋಕ್ತೋ ನ ಮೇ ಶಿಷ್ಯಸ್ತ್ವದ್ವಿಶಿಷ್ಟೋ ಭವಿಷ್ಯತಿ।।
“ಒಮ್ಮೆ ನಾನು ಒಬ್ಬನೇ ಇರುವಾಗ ನನ್ನನ್ನು ಬಿಗಿದಪ್ಪಿ ಪ್ರೀತಿಪೂರ್ವಕ ನನ್ನ ಯಾವ ಶಿಷ್ಯರೂ ಎಂದೂ ನಿನ್ನನ್ನು ಹಿಂದೆಹಾಕುವುದಿಲ್ಲ ಎಂದು ಹೇಳಿರಲಿಲ್ಲವೇ?
01123028a ಅಥ ಕಸ್ಮಾನ್ಮದ್ವಿಶಿಷ್ಟೋ ಲೋಕಾದಪಿ ಚ ವೀರ್ಯವಾನ್।
01123028c ಅಸ್ತ್ಯನ್ಯೋ ಭವತಃ ಶಿಷ್ಯೋ ನಿಷಾದಾಧಿಪತೇಃ ಸುತಃ।।
ಹಾಗಿದ್ದಾಗ ಈಗ ಹೇಗೆ ನನಗಿಂಥಲೂ ವಿಶಿಷ್ಠ ವೀರ್ಯವಾನ್ ನಿಷದಾಧಿಪತಿಯ ಮಗನು ನಿನ್ನ ಶಿಷ್ಯನಾಗಿದ್ದಾನೆ?”
01123029a ಮುಹೂರ್ತಮಿವ ತಂ ದ್ರೋಣಶ್ಚಿಂತಯಿತ್ವಾ ವಿನಿಶ್ಚಯಂ।
01123029c ಸವ್ಯಸಾಚಿನಮಾದಾಯ ನೈಷಾದಿಂ ಪ್ರತಿ ಜಗ್ಮಿವಾನ್।।
ಸ್ವಲ್ಪ ಸಮಯ ಯೋಚಿಸಿದ ದ್ರೋಣನು ಒಂದು ನಿಶ್ಚಯ ಮಾಡಿ ಸವ್ಯಸಾಚಿಯನ್ನೂ ಕರೆದುಕೊಂಡು ನೈಷಾದಿಯಿದ್ದಲ್ಲಿಗೆ ಬಂದನು.
01123030a ದದರ್ಶ ಮಲದಿಗ್ಧಾಂಗಂ ಜಟಿಲಂ ಚೀರವಾಸಸಂ।
01123030c ಏಕಲವ್ಯಂ ಧನುಷ್ಪಾಣಿಮಸ್ಯಂತಮನಿಶಂ ಶರಾನ್।।
ಅಲ್ಲಿ ಮಲದಿಗ್ದಾಂಗ, ಜಟಿಲ, ಹರಕು ಬಟ್ಟೆಗಳನ್ನು ಧರಿಸಿದ್ದ, ಧನುಷ್ಪಾಣಿ ನಿರಂತರವಾಗಿ ಬಾಣಗಳನ್ನು ಬಿಡುತ್ತಿದ್ದ ಏಕಲವ್ಯನನ್ನು ಕಂಡನು.
01123031a ಏಕಲವ್ಯಸ್ತು ತಂ ದೃಷ್ಟ್ವಾ ದ್ರೋಣಮಾಯಾಂತಮಂತಿಕಾತ್।
01123031c ಅಭಿಗಮ್ಯೋಪಸಂಗೃಹ್ಯ ಜಗಾಮ ಶಿರಸಾ ಮಹೀಂ।।
ಏಕಲವ್ಯನೂ ಕೂಡ ಬರುತ್ತಿದ್ದ ದ್ರೋಣನನ್ನು ನೋಡಿ ಅವನಲ್ಲಿಗೆ ಹೋಗಿ ಅವನ ಕಾಲುಗಳನ್ನು ಹಿಡಿದು ತನ್ನ ತಲೆಯಿಂದ ಭೂಮಿಯನ್ನು ಸ್ಪರ್ಷಿಸಿದನು.
01123032a ಪೂಜಯಿತ್ವಾ ತತೋ ದ್ರೋಣಂ ವಿಧಿವತ್ಸ ನಿಷಾದಜಃ।
01123032c ನಿವೇದ್ಯ ಶಿಷ್ಯಮಾತ್ಮಾನಂ ತಸ್ಥೌ ಪ್ರಾಂಜಲಿರಗ್ರತಃ।।
ಆ ನಿಷಾದಜನು ದ್ರೋಣನನ್ನು ವಿಧಿವತ್ತಾಗಿ ಪೂಜಿಸಿ ತಾನು ಶಿಷ್ಯನೆಂದು ನಿವೇದಿಸಿ ಅವನ ಎದಿರು ಅಂಜಲೀ ಬದ್ಧನಾಗಿ ನಿಂತುಕೊಂಡನು.
01123033a ತತೋ ದ್ರೋಣೋಽಬ್ರವೀದ್ರಾಜನ್ನೇಕಲವ್ಯಮಿದಂ ವಚಃ।
01123033c ಯದಿ ಶಿಷ್ಯೋಽಸಿ ಮೇ ತೂರ್ಣಂ ವೇತನಂ ಸಂಪ್ರದೀಯತಾಂ।।
ರಾಜನ್! ಆಗ ದ್ರೋಣನು ಎಕಲವ್ಯನಿಗೆ ಹೇಳಿದನು: “ನೀನು ನನ್ನ ಶಿಷ್ಯನೇ ಆಗಿದ್ದರೆ ತಕ್ಷಣವೇ ನನಗೆ ವೇತನವನ್ನು ನೀಡಬೇಕು.”
01123034a ಏಕಲವ್ಯಸ್ತು ತಚ್ಛೃತ್ವಾ ಪ್ರೀಯಮಾಣೋಽಬ್ರವೀದಿದಂ।
01123034c ಕಿಂ ಪ್ರಯಚ್ಛಾಮಿ ಭಗವನ್ನಾಜ್ಞಾಪಯತು ಮಾಂ ಗುರುಃ।।
ಇದನ್ನು ಕೇಳಿ ಏಕಲವ್ಯನು ಸಂತಸದಿಂದ ಹೇಳಿದನು: “ಭಗವನ್! ಏನನ್ನು ಕೊಡಲಿ? ನನ್ನ ಗುರುವು ಆಜ್ಞಾಪಿಸಲಿ.
01123035a ನ ಹಿ ಕಿಂ ಚಿದದೇಯಂ ಮೇ ಗುರವೇ ಬ್ರಹ್ಮವಿತ್ತಮ।
01123035c ತಮಬ್ರವೀತ್ತ್ವಯಾಂಗುಷ್ಠೋ ದಕ್ಷಿಣೋ ದೀಯತಾಂ ಮಮ।।
ನನ್ನ ಬ್ರಹ್ಮವಿತ್ತಮ ಗುರುವಿಗೆ ಕೊಡದೇ ಇರುವಂಥಹುದು ಏನೂ ಇಲ್ಲ.” ಆಗ ಅವನು “ನನಗೆ ನಿನ್ನ ಬಲಗೈಯ ಅಂಗುಷ್ಠವನ್ನು ಕೊಡು!””ಎಂದನು.
01123036a ಏಕಲವ್ಯಸ್ತು ತಚ್ಛ್ರುತ್ವಾ ವಚೋ ದ್ರೋಣಸ್ಯ ದಾರುಣಂ।
01123036c ಪ್ರತಿಜ್ಞಾಮಾತ್ಮನೋ ರಕ್ಷನ್ಸತ್ಯೇ ಚ ನಿರತಃ ಸದಾ।।
01123037a ತಥೈವ ಹೃಷ್ಟವದನಸ್ತಥೈವಾದೀನಮಾನಸಃ।
01123037c ಚಿತ್ತ್ವಾವಿಚಾರ್ಯ ತಂ ಪ್ರಾದಾದ್ದ್ರೋಣಾಯಾಂಗುಷ್ಠಮಾತ್ಮನಃ।।
ದ್ರೋಣನ ಆ ದಾರುಣ ಮಾತುಗಳನ್ನು ಕೇಳಿದ ಸದಾ ಸತ್ಯದಲ್ಲಿ ನಿರತ ಏಕಲವ್ಯನಾದರೋ ಸಂತೋಷದ ಮುಖದಿಂದ, ಮನಸ್ಸಿನಲ್ಲಿ ಸ್ವಲ್ಪವೂ ದೀನತೆಯಿಲ್ಲದೇ ಸ್ವಲ್ಪವೂ ಯೋಚನೆಯಿಲ್ಲದೇ ತನ್ನ ಅಂಗುಷ್ಠವನ್ನು ಕತ್ತರಿಸಿ ದ್ರೋಣನಿಗಿತ್ತು ತನ್ನ ಪ್ರತಿಜ್ಞೆಯನ್ನು ಪೂರೈಸಿದನು.
01123038a ತತಃ ಪರಂ ತು ನೈಷಾದಿರಂಗುಲೀಭಿರ್ವ್ಯಕರ್ಷತ।
01123038c ನ ತಥಾ ಸ ತು ಶೀಘ್ರೋಽಭೂದ್ಯಥಾ ಪೂರ್ವಂ ನರಾಧಿಪ।।
ನರಾಧಿಪ! ತನ್ನ ಅಂಗುಲಿಯನ್ನು ಕತ್ತರಿಸಿಕೊಟ್ಟ ನೈಷಾದನು ಮೊದಲಿನ ಹಾಗೆ ಶಿಘ್ರನಾಗಿರಲಿಲ್ಲ.
01123039a ತತೋಽರ್ಜುನಃ ಪ್ರೀತಮನಾ ಬಭೂವ ವಿಗತಜ್ವರಃ।
01123039c ದ್ರೋಣಶ್ಚ ಸತ್ಯವಾಗಾಸೀನ್ನಾನ್ಯೋಽಭ್ಯಭವದರ್ಜುನಂ।।
ಅರ್ಜುನನ ಜ್ವರವು ಬಿಟ್ಟು ಅವನು ಪ್ರೀತಮನಸ್ಕನಾದನು. ದ್ರೋಣನ ಮಾತೂ ಸತ್ಯವಾಗಿ ಉಳಿಯಿತು. ಬೇರೆ ಯಾರೂ ಅರ್ಜುನನನ್ನು ಹಿಂದೆ ಹಾಕಲಿಲ್ಲ.
01123040a ದ್ರೋಣಸ್ಯ ತು ತದಾ ಶಿಷ್ಯೌ ಗದಾಯೋಗ್ಯಾಂ ವಿಶೇಷತಃ।
01123040c ದುರ್ಯೋಧನಶ್ಚ ಭೀಮಶ್ಚ ಕುರೂಣಾಮಭ್ಯಗಚ್ಛತಾಂ।।
ದ್ರೋಣನಲ್ಲಿ ಕಲಿಯುತ್ತಿದ್ದ ಕುರು ಶಿಷ್ಯರಲ್ಲಿ ದುರ್ಯೋಧನ ಮತ್ತು ಭೀಮ ಇಬ್ಬರೂ ಗದಾಯುದ್ಧದಲ್ಲಿ ವಿಶೇಷತೆಯನ್ನು ಪಡೆದರು.
01123041a ಅಶ್ವತ್ಥಾಮಾ ರಹಸ್ಯೇಷು ಸರ್ವೇಷ್ವಭ್ಯಧಿಕೋಽಭವತ್।
01123041c ತಥಾತಿ ಪುರುಷಾನನ್ಯಾನ್ತ್ಸಾರುಕೌ ಯಮಜಾವುಭೌ।
01123041e ಯುಧಿಷ್ಠಿರೋ ರಥಶ್ರೇಷ್ಠಃ ಸರ್ವತ್ರ ತು ಧನಂಜಯಃ।।
ಅಶ್ವತ್ಥಾಮನು ರಹಸ್ಯಾಸ್ತ್ರಗಳಲ್ಲಿ ಎಲ್ಲರಿಗಿಂಥಲೂ ಮುಂದುವರೆದಿದ್ದನು. ಹಾಗೆಯೇ ಅವಳಿ ಮಕ್ಕಳು ಖಡ್ಗವನ್ನು ಹಿಡಿಯುವುದರಲ್ಲಿ, ಯುಧಿಷ್ಠಿರನು ರಥಯುದ್ಧದಲ್ಲಿ, ಮತ್ತು ಧನಂಜಯನು ಎಲ್ಲ ಆಯುಧಗಳಲ್ಲಿ ಅನ್ಯ ಪುರುಷರಿಗಿಂಥ ಮುಂದುವರೆದಿದ್ದರು.
01123042a ಪ್ರಥಿತಃ ಸಾಗರಾಂತಾಯಾಂ ರಥಯೂಥಪಯೂಥಪಃ।
01123042c ಬುದ್ಧಿಯೋಗಬಲೋತ್ಸಾಹೈಃ ಸರ್ವಾಸ್ತ್ರೇಷು ಚ ಪಾಂಡವಃ।।
ರಥಯೂಥಪಯೂಥಪ ಆ ಪಾಂಡವನು ಬುದ್ಧಿಯೋಗಬಲೋತ್ಸಾಹಗಳಲ್ಲಿ ಸರ್ವಾಸ್ತ್ರಗಳಲ್ಲಿ ಸಾಗರಪರ್ಯಂತವೂ ಪ್ರಥಿತನಾಗಿದ್ದನು.
01123043a ಅಸ್ತ್ರೇ ಗುರ್ವನುರಾಗೇ ಚ ವಿಶಿಷ್ಟೋಽಭವದರ್ಜುನಃ।
01123043c ತುಲ್ಯೇಷ್ವಸ್ತ್ರೋಪದೇಶೇಷು ಸೌಷ್ಠವೇನ ಚ ವೀರ್ಯವಾನ್।
01123043e ಏಕಃ ಸರ್ವಕುಮಾರಾಣಾಂ ಬಭೂವಾತಿರಥೋಽರ್ಜುನಃ।।
ಅಸ್ತ್ರಗಳಲ್ಲಿ ಮತ್ತು ಗುರುವಿನ ಮೇಲಿನ ಅನುರಾಗದಲ್ಲಿ ಅರ್ಜುನನು ವಿಶಿಷ್ಠನಾಗಿದ್ದನು. ವೀರರೆಲ್ಲರಿಗೂ ಅಸ್ತ್ರೋಪದೇಶ ಒಂದೇ ಆಗಿದ್ದರೂ ಸರ್ವ ಕುಮಾರರಲ್ಲಿ ಅರ್ಜುನನು ಎದ್ದು ಕಾಣುತ್ತಿದ್ದನು.
01123044a ಪ್ರಾಣಾಧಿಕಂ ಭೀಮಸೇನಂ ಕೃತವಿದ್ಯಂ ಧನಂಜಯಂ।
01123044c ಧಾರ್ತರಾಷ್ಟ್ರಾ ದುರಾತ್ಮಾನೋ ನಾಮೃಷ್ಯಂತ ನರಾಧಿಪ।।
ನರಾಧಿಪ! ಬಲದಲ್ಲಿ ಅಧಿಕ ಭೀಮಸೇನ ಮತ್ತು ಕೃತವಿದ್ಯ ಧನಂಜಯನನನ್ನು ನೋಡಿ ದುರಾತ್ಮ ಧಾರ್ತರಾಷ್ಟ್ರರು ಅಸೂಯಾಪರರಾಗಿದ್ದರು.
01123045a ತಾಂಸ್ತು ಸರ್ವಾನ್ಸಮಾನೀಯ ಸರ್ವವಿದ್ಯಾಸು ನಿಷ್ಠಿತಾನ್।
01123045c ದ್ರೋಣಃ ಪ್ರಹರಣಜ್ಞಾನೇ ಜಿಜ್ಞಾಸುಃ ಪುರುಷರ್ಷಭ।।
ಪುರುಷರ್ಷಭ! ಅವರ ಎಲ್ಲ ಶಿಕ್ಷಣವೂ ಸಮಾಪ್ತಿಯಾದ ನಂತರ ದ್ರೋಣನು ಅವರ ಪ್ರಹರಣ ಜ್ಞಾನವನ್ನು ತಿಳಿಯಲೋಸುಗ ಎಲ್ಲರನ್ನೂ ಕರೆದು ಒಂದೆಡೆ ಸೇರಿಸಿದನು.
01123046a ಕೃತ್ರಿಮಂ ಭಾಸಮಾರೋಪ್ಯ ವೃಕ್ಷಾಗ್ರೇ ಶಿಲ್ಪಿಭಿಃ ಕೃತಂ।
01123046c ಅವಿಜ್ಞಾತಂ ಕುಮಾರಾಣಾಂ ಲಕ್ಷ್ಯಭೂತಮುಪಾದಿಶತ್।।
ಶಿಲ್ಪಿಗಳಿಂದ ಮಾಡಿಸಿದ ಒಂದು ಪಕ್ಷಿಯ ಕೃತ್ರಿಮವನ್ನು ವೃಕ್ಷದ ಮೇಲೆ ಇರಿಸಿ ಆ ಲಕ್ಷ್ಯವನ್ನು ತೋರಿಸುತ್ತಾ ದ್ರೋಣನು ಕುಮಾರರಿಗೆ ಹೇಳಿದನು:
01123047 ದ್ರೋಣ ಉವಾಚ।
01123047a ಶೀಘ್ರಂ ಭವಂತಃ ಸರ್ವೇ ವೈ ಧನೂಂಷ್ಯಾದಾಯ ಸತ್ವರಾಃ।
01123047c ಭಾಸಮೇತಂ ಸಮುದ್ದಿಶ್ಯ ತಿಷ್ಠಂತಾಂ ಸಂಹಿತೇಷವಃ।।
ದ್ರೋಣನು ಹೇಳಿದನು: “ಎಲ್ಲರೂ ತ್ವರೆ ಮಾಡಿ. ಬೇಗನೆ ನಿಮ್ಮ ನಿಮ್ಮ ಧನುಸ್ಸನ್ನು ತೆಗೆದುಕೊಳ್ಳಿ. ಬಾಣವನ್ನು ಬಿಲ್ಲಿಗೆ ಹೂಡಿ ಆ ಪಕ್ಷಿಯನ್ನು ಗುರಿಮಾಡಿ ನಿಂತುಕೊಳ್ಳಿ.
01123048a ಮದ್ವಾಕ್ಯಸಮಕಾಲಂ ಚ ಶಿರೋಽಸ್ಯ ವಿನಿಪಾತ್ಯತಾಂ।
01123048c ಏಕೈಕಶೋ ನಿಯೋಕ್ಷ್ಯಾಮಿ ತಥಾ ಕುರುತ ಪುತ್ರಕಾಃ।।
ನಾನು ಹೇಳಿದ ಕೂಡಲೇ ಅದರ ತಲೆಯನ್ನು ಹೊಡೆದು ಬೀಳಿಸಿರಿ. ಮಕ್ಕಳೇ! ನಾನು ಒಬ್ಬೊಬ್ಬರಿಗೇ ಹೇಳುತ್ತೇನೆ. ಹಾಗೆಯೆ ಮಾಡಿರಿ.””
01123049 ವೈಶಂಪಾಯನ ಉವಾಚ।
01123049a ತತೋ ಯುಧಿಷ್ಠಿರಂ ಪೂರ್ವಮುವಾಚಾಂಗಿರಸಾಂ ವರಃ।
01123049c ಸಂಧತ್ಸ್ವ ಬಾಣಂ ದುರ್ಧರ್ಷ ಮದ್ವಾಕ್ಯಾಂತೇ ವಿಮುಂಚ ಚ।।
ವೈಶಂಪಾಯನನು ಹೇಳಿದನು: “ಶ್ರೇಷ್ಠ ಆಂಗಿರಸನು ಮೊಟ್ಟ ಮೊದಲು ಯುಧಿಷ್ಠಿರನನ್ನು ಕುರಿತು ಹೇಳಿದನು: “ದುರ್ಧರ್ಷ! ಬಾಣವನ್ನು ಹೂಡು. ನನ್ನ ಮಾತು ಮುಗಿದಕೂಡಲೇ ಅದನ್ನು ಬಿಡು.”
01123050a ತತೋ ಯುಧಿಷ್ಠಿರಃ ಪೂರ್ವಂ ಧನುರ್ಗೃಹ್ಯ ಮಹಾರವಂ।
01123050c ತಸ್ಥೌ ಭಾಸಂ ಸಮುದ್ದಿಶ್ಯ ಗುರುವಾಕ್ಯಪ್ರಚೋದಿತಃ।।
ಆಗ ಯುಧಿಷ್ಠಿರನು ಗುರುವಿನ ಮಾತಿನಂತೆ ಮಹಾಧ್ವನಿ ಧನುವನ್ನು ಹಿಡಿದು ಪಕ್ಷಿಯನ್ನು ಗುರಿಯನ್ನಾಗಿಟ್ಟು ನಿಂತುಕೊಂಡನು.
01123051a ತತೋ ವಿತತಧನ್ವಾನಂ ದ್ರೋಣಸ್ತಂ ಕುರುನಂದನಂ।
01123051c ಸ ಮುಹೂರ್ತಾದುವಾಚೇದಂ ವಚನಂ ಭರತರ್ಷಭ।।
ಈ ರೀತಿ ಧನುವನ್ನೆಳೆದು ನಿಂತಿದ್ದ ಕುರುನಂದನನಿಗೆ ಒಂದು ಮುಹೂರ್ತದ ನಂತರ ದ್ರೋಣನು ಕೇಳಿದನು:
01123052a ಪಶ್ಯಸ್ಯೇನಂ ದ್ರುಮಾಗ್ರಸ್ಥಂ ಭಾಸಂ ನರವರಾತ್ಮಜ।
01123052c ಪಶ್ಯಾಮೀತ್ಯೇವಮಾಚಾರ್ಯಂ ಪ್ರತ್ಯುವಾಚ ಯುಧಿಷ್ಠಿರಃ।।
“ನರವರಾತ್ಮಜ! ಮರದಮೇಲಿನ ಪಕ್ಷಿಯು ನಿನಗೆ ಕಾಣುತ್ತಿದೆಯೇ?” “ಕಾಣುತ್ತಿದೆ” ಎಂದು ಯುಧಿಷ್ಠಿರನು ಆಚಾರ್ಯನಿಗೆ ಉತ್ತರಿಸಿದನು.
01123053a ಸ ಮುಹೂರ್ತಾದಿವ ಪುನರ್ದ್ರೋಣಸ್ತಂ ಪ್ರತ್ಯಭಾಷತ।
01123053c ಅಥ ವೃಕ್ಷಮಿಮಂ ಮಾಂ ವಾ ಭ್ರಾತೄನ್ವಾಪಿ ಪ್ರಪಶ್ಯಸಿ।।
ಸ್ವಲ್ಪ ಹೊತ್ತಿನ ನಂತರ ದ್ರೋಣನು ಪುನಃ ಕೇಳಿದನು: “ಈಗ ನಿನಗೆ ಏನು ಕಾಣುತ್ತಿದೆ? ನಾನು ಕಾಣುತ್ತಿದ್ದೇನೋ ಅಥವಾ ಈ ಮರವೋ ಅಥವಾ ನಿನ್ನ ಸಹೋದರರೋ?”
01123054a ತಮುವಾಚ ಸ ಕೌಂತೇಯಃ ಪಶ್ಯಾಮ್ಯೇನಂ ವನಸ್ಪತಿಂ।
01123054c ಭವಂತಂ ಚ ತಥಾ ಭ್ರಾತೄನ್ಭಾಸಂ ಚೇತಿ ಪುನಃ ಪುನಃ।।
ಅದಕ್ಕೆ ಕೌಂತೇಯನು ಹೇಳಿದನು: “ಈ ಮರ ಕಾಣುತ್ತಿದೆ, ನೀವೂ ಕಾಣುತ್ತಿದ್ದೀರಿ, ಸಹೋದರರೂ ಕಾಣುತ್ತಿದ್ದಾರೆ ಮತ್ತು ಪಕ್ಷಿಯೂ ಕಾಣುತ್ತಿದೆ.”
01123055a ತಮುವಾಚಾಪಸರ್ಪೇತಿ ದ್ರೋಣೋಽಪ್ರೀತಮನಾ ಇವ।
01123055c ನೈತಚ್ಶಕ್ಯಂ ತ್ವಯಾ ವೇದ್ಧುಂ ಲಕ್ಷ್ಯಮಿತ್ಯೇವ ಕುತ್ಸಯನ್।।
ಆಗ ಅಪ್ರೀತ ದ್ರೋಣನು “ಆಚೆ ಸರಿ. ನಿನಗೆ ಗುರಿಯನ್ನು ಹೊಡೆಯಲು ಸಾದ್ಯವಿಲ್ಲ” ಎಂದು ಬೈದನು.
01123056a ತತೋ ದುರ್ಯೋಧನಾದೀಂಸ್ತಾನ್ಧಾರ್ತರಾಷ್ಟ್ರಾನ್ಮಮಹಾಯಶಾಃ।
01123056c ತೇನೈವ ಕ್ರಮಯೋಗೇನ ಜಿಜ್ಞಾಸುಃ ಪರ್ಯಪೃಚ್ಛತ।।
01123057a ಅನ್ಯಾಂಶ್ಚ ಶಿಷ್ಯಾನ್ಭೀಮಾದೀನ್ರಾಜ್ಞಶ್ಚೈವಾನ್ಯದೇಶಜಾನ್।
01123057c ತಥಾ ಚ ಸರ್ವೇ ಸರ್ವಂ ತತ್ಪಶ್ಯಾಮ ಇತಿ ಕುತ್ಸಿತಾಃ।।
ನಂತರ ಆ ಮಹಾಯಶನು ದುರ್ಯೋಧನನೇ ಮೊದಲಾದ ಧಾರ್ತರಾಷ್ಟ್ರರನ್ನು ಕ್ರಮವಾಗಿ ಇದೇ ರೀತಿ ಪ್ರಶ್ನಿಸಿ, ಪರೀಕ್ಷಿಸಿದನು. ಭೀಮನೇ ಮೊದಲಾದ ಅನ್ಯ ಶಿಷ್ಯರನ್ನೂ, ಅನ್ಯ ದೇಶದ ರಾಜರನ್ನೂ ಪರೀಕ್ಷಿಸಿದನು. ಅವರೆಲ್ಲರೂ ಇವೆಲ್ಲವೂ ಕಾಣುತ್ತಿವೆ ಎಂದಾಗ ಸಿಟ್ಟಿಗೆದ್ದು ಬೈದನು.
01123058a ತತೋ ಧನಂಜಯಂ ದ್ರೋಣಃ ಸ್ಮಯಮಾನೋಽಭ್ಯಭಾಷತ।
01123058c ತ್ವಯೇದಾನೀಂ ಪ್ರಹರ್ತವ್ಯಮೇತಲ್ಲಕ್ಷ್ಯಂ ನಿಶಮ್ಯತಾಂ।।
ಆಗ ದ್ರೋಣನು ಮುಗುಳ್ನಗುತ್ತಾ ಧನಂಜಯನಿಗೆ ಹೇಳಿದನು: “ಈಗ ನೀನು ಈ ಲಕ್ಷ್ಯವನ್ನು ಹೊಡೆದುರುಳಿಸಬೇಕು.
01123059a ಮದ್ವಾಕ್ಯಸಮಕಾಲಂ ತೇ ಮೋಕ್ತವ್ಯೋಽತ್ರ ಭವೇಚ್ಶರಃ।
01123059c ವಿತತ್ಯ ಕಾರ್ಮುಕಂ ಪುತ್ರ ತಿಷ್ಠ ತಾವನ್ಮುಹೂರ್ತಕಂ।।
ಕೇಳು. ನಾನು ಹೇಳಿದ ತಕ್ಷಣವೇ ಬಾಣವನ್ನು ಬಿಡಬೇಕು. ಮಗು! ಮೊದಲು ಬಿಲ್ಲಿನಲ್ಲಿ ಬಾಣವನ್ನು ಹೂಡಿ ಒಂದು ಕ್ಷಣ ಹಾಗೆಯೇ ನಿಂತುಕೋ.”
01123060a ಏವಮುಕ್ತಃ ಸವ್ಯಸಾಚೀ ಮಂಡಲೀಕೃತಕಾರ್ಮುಕಃ।
01123060c ತಸ್ಥೌ ಲಕ್ಷ್ಯಂ ಸಮುದ್ದಿಶ್ಯ ಗುರುವಾಕ್ಯಪ್ರಚೋದಿತಃ।।
ಇದನ್ನು ಕೇಳಿದ ಸವ್ಯಸಾಚಿಯು ಬಿಲ್ಲನ್ನು ವೃತ್ತಾಕಾರದಲ್ಲಿ ಬಗ್ಗಿಸಿ ಲಕ್ಷ್ಯಕ್ಕೇ ಗುರಿಯಿಟ್ಟು ಗುರುವು ಹೇಳಿದಂತೆ ನಿಂತುಕೊಂಡನು.
01123061a ಮುಹೂರ್ತಾದಿವ ತಂ ದ್ರೋಣಸ್ತಥೈವ ಸಮಭಾಷತ।
01123061c ಪಶ್ಯಸ್ಯೇನಂ ಸ್ಥಿತಂ ಭಾಸಂ ದ್ರುಮಂ ಮಾಮಪಿ ವೇತ್ಯುತ।।
ಸ್ವಲ್ಪ ಸಮಯದ ನಂತರ ಅವನಿಗೆ ದ್ರೋಣನು ಹೇಳಿದನು: “ನಿನಗೆ ಅಲ್ಲಿ ಕುಳಿತಿರುವ ಪಕ್ಷಿಯು ಕಾಣುತ್ತಿದೆಯೇ? ಮತ್ತು ಆ ಮರ ಮತ್ತು ನಾನು?”
01123062a ಪಶ್ಯಾಮ್ಯೇನಂ ಭಾಸಮಿತಿ ದ್ರೋಣಂ ಪಾರ್ಥೋಽಭ್ಯಭಾಷತ।
01123062c ನ ತು ವೃಕ್ಷಂ ಭವಂತಂ ವಾ ಪಶ್ಯಾಮೀತಿ ಚ ಭಾರತ।।
ಭಾರತ! ಪಾರ್ಥನು ದ್ರೋಣನಿಗೆ ಉತ್ತರಿಸಿದನು: “ಪಕ್ಷಿಯು ಕಾಣುತ್ತಿದೆ. ಆದರೆ ವೃಕ್ಷವಾಗಲೀ ನೀವಾಗಲೀ ಕಾಣುತ್ತಿಲ್ಲ.”
01123063a ತತಃ ಪ್ರೀತಮನಾ ದ್ರೋಣೋ ಮುಹೂರ್ತಾದಿವ ತಂ ಪುನಃ।
01123063c ಪ್ರತ್ಯಭಾಷತ ದುರ್ಧರ್ಷಃ ಪಾಂಡವಾನಾಂ ರಥರ್ಷಭಂ।।
ಸಂತೋಷಗೊಂಡ ದ್ರೋಣನು ಒಂದು ಕ್ಷಣ ತಡೆದು ಪುನಃ ಆ ರಥರ್ಷಭ ದುರ್ಧರ್ಷ ಪಾಂಡವನಿಗೆ ಹೇಳಿದನು:
01123064a ಭಾಸಂ ಪಶ್ಯಸಿ ಯದ್ಯೇನಂ ತಥಾ ಬ್ರೂಹಿ ಪುನರ್ವಚಃ।
01123064c ಶಿರಃ ಪಶ್ಯಾಮಿ ಭಾಸಸ್ಯ ನ ಗಾತ್ರಮಿತಿ ಸೋಽಬ್ರವೀತ್।।
“ಪಕ್ಷಿಯನ್ನು ನೋಡುತ್ತಿದ್ದೀಯಾದರೆ ಅದನ್ನು ನನಗೆ ವರ್ಣಿಸು.” ಅದಕ್ಕೆ ಅವನು ಹೇಳಿದನು: “ಪಕ್ಷಿಯ ತಲೆ ಮಾತ್ರ ಕಾಣುತ್ತಿದೆ. ದೇಹವು ಕಾಣುತ್ತಿಲ್ಲ.”
01123065a ಅರ್ಜುನೇನೈವಮುಕ್ತಸ್ತು ದ್ರೋಣೋ ಹೃಷ್ಟತನೂರುಹಃ।
01123065c ಮುಂಚಸ್ವೇತ್ಯಬ್ರವೀತ್ಪಾರ್ಥಂ ಸ ಮುಮೋಚಾವಿಚಾರಯನ್।।
01123066a ತತಸ್ತಸ್ಯ ನಗಸ್ಥಸ್ಯ ಕ್ಷುರೇಣ ನಿಶಿತೇನ ಹ।
01123066c ಶಿರ ಉತ್ಕೃತ್ಯ ತರಸಾ ಪಾತಯಾಮಾಸ ಪಾಂಡವಃ।।
ಅರ್ಜುನನ ಈ ಮಾತುಗಳನ್ನು ಕೇಳಿದ ದ್ರೋಣನ ದೇಹವು ಸಂತೋಷದಿಂದ ಪುಳಕಿತಗೊಂಡಿತು. “ಬಾಣವನ್ನು ಬಿಡು!” ಎಂದು ಹೇಳಿದನು. ಪಾಂಡವ ಪಾರ್ಥನು ಸ್ವಲ್ಪವೂ ಹಿಂಜರಿಯದೇ ಬಾಣವನ್ನು ಬಿಟ್ಟು ತನ್ನ ತೀಕ್ಷ್ಣ ಬಾಣದಿಂದ ಮರದ ಮೇಲೆ ಕುಳಿತಿದ್ದ ಪಕ್ಷಿಯ ತಲೆಯನ್ನು ಕತ್ತರಿಸಿ, ಕೆಳಗೆ ಬೀಳಿಸಿದನು.
01123067a ತಸ್ಮಿನ್ಕರ್ಮಣಿ ಸಂಸಿದ್ಧೇ ಪರ್ಯಶ್ವಜತ ಫಲ್ಗುನಂ।
01123067c ಮೇನೇ ಚ ದ್ರುಪದಂ ಸಂಖ್ಯೇ ಸಾನುಬಂಧಂ ಪರಾಜಿತಂ।।
ಫಲ್ಗುಣನು ಈ ಕೃತ್ಯದಲ್ಲಿ ಯಶಸ್ವಿಯಾಗಿದ್ದುದನ್ನು ನೋಡಿದ ದ್ರೋಣನು ಅವನನ್ನು ಬಿಗಿದಪ್ಪಿ, ದ್ರುಪದ ಮತ್ತು ಅವನ ಬಂಧುಗಳು ಪರಾಜಿತಗೊಂಡರೆಂದೇ ಯೋಚಿಸಿದನು.
01123068a ಕಸ್ಯ ಚಿತ್ತ್ವಥ ಕಾಲಸ್ಯ ಸಶಿಷ್ಯೋಽಂಗಿರಸಾಂ ವರಃ।
01123068c ಜಗಾಮ ಗಂಗಾಮಭಿತೋ ಮಜ್ಜಿತುಂ ಭರತರ್ಷಭ।।
ಭರತರ್ಷಭ! ಸ್ವಲ್ಪ ದಿನಗಳ ನಂತರ ಶ್ರೇಷ್ಠ ಆಂಗಿರಸನು ತನ್ನ ಶಿಷ್ಯರಿಂದೊಡಗೂಡಿ ಸ್ನಾನಕ್ಕೆಂದು ಗಂಗಾನದಿಗೆ ಹೋದನು.
01123069a ಅವಗಾದಮಥೋ ದ್ರೋಣಂ ಸಲಿಲೇ ಸಲಿಲೇಚರಃ।
01123069c ಗ್ರಾಹೋ ಜಗ್ರಾಹ ಬಲವಾಂಜಂಘಾಂತೇ ಕಾಲಚೋದಿತಃ।।
ದ್ರೋಣನು ನೀರಿಗಿಳಿದಾಗ ನದಿಯಲ್ಲಿ ವಾಸಿಸುತ್ತಿದ್ದ ಬಲಶಾಲಿ ಮೊಸಳೆಯೊಂದು ಕಾಲಚೋದಿತಗೊಂಡು ಅವನ ಕಾಲನ್ನು ಹಿಡಿಯಿತು.
01123070a ಸ ಸಮರ್ಥೋಽಪಿ ಮೋಕ್ಷಾಯ ಶಿಷ್ಯಾನ್ಸರ್ವಾನಚೋದಯತ್।
01123070c ಗ್ರಾಹಂ ಹತ್ವಾ ಮೋಕ್ಷಯಧ್ವಂ ಮಾಮಿತಿ ತ್ವರಯನ್ನಿವ।।
ತನ್ನನ್ನು ಬಿಡಿಸಿಕೊಳ್ಳಲು ಸಮರ್ಥನಾಗಿದ್ದರೂ ಅವನು ತನ್ನ ಎಲ್ಲ ಶಿಷ್ಯರಿಗೂ ಆದೇಶವನ್ನಿತ್ತನು: “ಬೇಗನೆ ಈ ಮೊಸಳೆಯನ್ನು ಕೊಂದು ನನ್ನನ್ನು ಬಿಡಿಸಿ.”
01123071a ತದ್ವಾಕ್ಯಸಮಕಾಲಂ ತು ಬೀಭತ್ಸುರ್ನಿಶಿತೈಃ ಶರೈಃ।
01123071c ಆವಾಪೈಃ ಪಂಚಭಿರ್ಗ್ರಾಹಂ ಮಗ್ನಮಂಭಸ್ಯತಾಡಯತ್।
01123071e ಇತರೇ ತು ವಿಸಮ್ಮೂದಾಸ್ತತ್ರ ತತ್ರ ಪ್ರಪೇದಿರೇ।।
ಅವನು ಹೇಳುವುದನ್ನು ಮುಗಿಸುವುದರೊಳಗೇ ಇತರರು ಸಮ್ಮೂಢರಾಗಿ ಎಲ್ಲೆಲ್ಲಿಂದಲೂ ಓಡಿ ಬರುತ್ತಿರುವಾಗ ಬೀಭತ್ಸುವು ಐದು ಬಾಣಗಳನ್ನು ಬಿಟ್ಟು ನೀರಿನೊಳಗಿದ್ದ ಮೊಸಳೆಯನ್ನು ಕೊಂದನು.
01123072a ತಂ ಚ ದೃಷ್ಟ್ವಾ ಕ್ರಿಯೋಪೇತಂ ದ್ರೋಣೋಽಮನ್ಯತ ಪಾಂಡವಂ।
01123072c ವಿಶಿಷ್ಟಂ ಸರ್ವಶಿಷ್ಯೇಭ್ಯಃ ಪ್ರೀತಿಮಾಂಶ್ಚಾಭವತ್ತದಾ।।
ಕ್ರಿಯೋಪೇತ ಪಾಂಡವನನ್ನು ನೋಡಿದ ದ್ರೋಣನು ಅವನು ಸರ್ವ ಶಿಷ್ಯರಲ್ಲಿ ವಿಶಿಷ್ಟನೆಂದು ಮನ್ನಿಸಿದನು ಮತ್ತು ತುಂಬಾ ಸಂತೋಷಗೊಂಡನು.
01123073a ಸ ಪಾರ್ಥಬಾಣೈರ್ಬಹುಧಾ ಖಂಡಶಃ ಪರಿಕಲ್ಪಿತಃ।
01123073c ಗ್ರಾಹಃ ಪಂಚತ್ವಮಾಪೇದೇ ಜಂಘಾಂ ತ್ಯಕ್ತ್ವಾ ಮಹಾತ್ಮನಃ।।
ಪಾರ್ಥನ ಬಾಣಗಳಿಂದ ಕಡಿದು ತುಂಡಾದ ಮೊಸಳೆಯು ಆ ಮಹಾತ್ಮನ ಕಾಲನ್ನು ಬಿಟ್ಟು ಪಂಚಭೂತಗಳಲ್ಲಿ ಸೇರಿಕೊಂಡಿತು.
01123074a ಅಥಾಬ್ರವೀನ್ಮಹಾತ್ಮಾನಂ ಭಾರದ್ವಾಜೋ ಮಹಾರಥಂ।
01123074c ಗೃಹಾಣೇದಂ ಮಹಾಬಾಹೋ ವಿಶಿಷ್ಟಮತಿದುರ್ಧರಂ।
01123074e ಅಸ್ತ್ರಂ ಬ್ರಹ್ಮಶಿರೋ ನಾಮ ಸಪ್ರಯೋಗನಿವರ್ತನಂ।।
ಆಗ ಮಹಾತ್ಮ ಭಾರದ್ವಾಜನು ಮಹಾರಥಿಗೆ ಹೇಳಿದನು: “ಮಹಾಬಾಹು! ನನ್ನಿಂದ ಈ ವಿಶಿಷ್ಟ ಅತಿದುರ್ಧರ ಬ್ರಹ್ಮಶಿರ ಎಂಬ ಹೆಸರಿನ ಅಸ್ತ್ರವನ್ನು, ಬಳಸುವ ಮತ್ತು ಹಿಂದೆ ತೆಗೆದುಕೊಳ್ಳುವ ವಿಧಾನಗಳ ಜೊತೆಗೆ ಸ್ವೀಕರಿಸು.
01123075a ನ ಚ ತೇ ಮಾನುಷೇಷ್ವೇತತ್ಪ್ರಯೋಕ್ತವ್ಯಂ ಕಥಂ ಚನ।
01123075c ಜಗದ್ವಿನಿರ್ದಹೇದೇತದಲ್ಪತೇಜಸಿ ಪಾತಿತಂ।।
ಇದನ್ನು ಮನುಷ್ಯರ ಮೇಲೆ ಎಂದೂ ಬಳಸಬಾರದು. ಅಲ್ಪತೇಜಸ್ವಿಯ ಮೇಲೆ ಇದನ್ನು ಬಿಟ್ಟರೆ ಇದು ಇಡೀ ಜಗತ್ತನ್ನೇ ಸುಟ್ಟುಬಿಡಬಹುದು.
01123076a ಅಸಾಮಾನ್ಯಮಿದಂ ತಾತ ಲೋಕೇಷ್ವಸ್ತ್ರಂ ನಿಗದ್ಯತೇ।
01123076c ತದ್ಧಾರಯೇಥಾಃ ಪ್ರಯತಃ ಶೃಣು ಚೇದಂ ವಚೋ ಮಮ।।
01123077a ಬಾಧೇತಾಮಾನುಷಃ ಶತ್ರುರ್ಯದಾ ತ್ವಾಂ ವೀರ ಕಶ್ಚನ।
01123077c ತದ್ವಧಾಯ ಪ್ರಯುಂಜೀಥಾಸ್ತದಾಸ್ತ್ರಮಿದಮಾಹವೇ।।
ಮಗು! ಈ ರೀತಿಯ ಇನ್ನೊಂದು ಅಸ್ತ್ರವು ಈ ಮೂರೂ ಲೋಕಗಳಲ್ಲಿಯೂ ಇಲ್ಲ. ಆದುದರಿಂದ ಇದನ್ನು ನೀನು ತುಂಬಾ ಜಾಗ್ರತೆಯಲ್ಲಿ ಧರಿಸಬೇಕು. ನನ್ನ ಈ ಮಾತುಗಳನ್ನು ಕೇಳು. ವೀರ! ಎಂದಾದರೂ ಅಮಾನುಷ ಶತ್ರುವು ಯುದ್ಧದಲ್ಲಿ ನಿನ್ನನ್ನು ಎದುರಿಸಿದಾಗ ಈ ಅಸ್ತ್ರವನ್ನು ಬಳಸಿ ಅವನನ್ನು ಕೊಲ್ಲು.”
01123078a ತಥೇತಿ ತತ್ಪ್ರತಿಶ್ರುತ್ಯ ಬೀಭತ್ಸುಃ ಸ ಕೃತಾಂಜಲಿಃ।
01123078c ಜಗ್ರಾಹ ಪರಮಾಸ್ತ್ರಂ ತದಾಹ ಚೈನಂ ಪುನರ್ಗುರುಃ।
01123078e ಭವಿತಾ ತ್ವತ್ಸಮೋ ನಾನ್ಯಃ ಪುಮಾಽಲ್ಲೋಕೇ ಧನುರ್ಧರಃ।।
“ಹಾಗೆಯೇ ಆಗಲಿ!” ಎಂದು ಉತ್ತರಿಸಿದ ಬೀಭತ್ಸುವು ಅಂಜಲೀ ಬದ್ಧನಾಗಿ ಆ ಪರಮಾಸ್ತ್ರವನ್ನು ಸ್ವೀಕರಿಸಿದನು. ಗುರುವು ಪುನಃ ಹೇಳಿದನು: “ಇಡೀ ಲೋಕದಲ್ಲಿ ನಿನ್ನ ಸಮ ಧನುರ್ಧರನು ಬೇರೆ ಯಾರೂ ಇರುವುದಿಲ್ಲ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ದ್ರೋಣಶಿಷ್ಯಪರೀಕ್ಷಾಯಾಂ ತ್ರಯೋವಿಂಶತ್ಯಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ದ್ರೋಣಶಿಷ್ಯಪರೀಕ್ಷೆ ಎನ್ನುವ ನೂರಾ ಇಪ್ಪತ್ತ್ಮೂರನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-0/18, ಉಪಪರ್ವಗಳು-7/100, ಅಧ್ಯಾಯಗಳು-123/1995, ಶ್ಲೋಕಗಳು-4474/23784