119 ಭೀಮಸೇನರಸಪಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 119

ಸಾರ

ವ್ಯಾಸನ ಸಲಹೆಯಂತೆ ಸತ್ಯವತಿಯು ಸೊಸೆಯರೊಂದಿಗೆ ವನವನ್ನು ಸೇರಿದುದು (1-13). ಕೌರವ-ಪಾಂಡವರ ಮಧ್ಯೆ ಸ್ಪರ್ಧಾ ಮತ್ತು ದ್ರೋಹಭಾವಗಳು ಬೆಳೆದುದು (14-25). ಪ್ರಮಾಣಕೋಟಿಯಲ್ಲಿ ದುರ್ಯೋಧನಾದಿಗಳು ಭೀಮನಿಗೆ ವಿಷವನ್ನು ಉಣ್ಣಿಸಿದುದು (26-43).

01119001 ವೈಶಂಪಾಯನ ಉವಾಚ।
01119001a ತತಃ ಕ್ಷತ್ತಾ ಚ ರಾಜಾ ಚ ಭೀಷ್ಮಶ್ಚ ಸಹ ಬಂಧುಭಿಃ।
01119001c ದದುಃ ಶ್ರಾದ್ಧಂ ತದಾ ಪಾಂಡೋಃ ಸ್ವಧಾಮೃತಮಯಂ ತದಾ।।

ವೈಶಂಪಾಯನನು ಹೇಳಿದನು: “ಅನಂತರ ಕ್ಷತ್ತ, ರಾಜ ಮತ್ತು ಭೀಷ್ಮರು ತಮ್ಮ ಬಂಧು ಸಹಿತ ಪಾಂಡುವಿಗೆ ಸ್ವಾಧಾಮೃತಮಯ ಶ್ರಾದ್ಧವನ್ನು ನೀಡಿದರು.

01119002a ಕುರೂಂಶ್ಚ ವಿಪ್ರಮುಖ್ಯಾಂಶ್ಚ ಭೋಜಯಿತ್ವಾ ಸಹಸ್ರಶಃ।
01119002c ರತ್ನೌಘಾನ್ದ್ವಿಜಮುಖ್ಯೇಭ್ಯೋ ದತ್ತ್ವಾ ಗ್ರಾಮವರಾನಪಿ।।

ಸಹಸ್ರಾರು ಕುರುಗಳಿಗೆ ಮತ್ತು ವಿಪ್ರಮುಖ್ಯರಿಗೆ ಭೋಜನಗಳನ್ನಿತ್ತರು. ಶ್ರೇಷ್ಠ ಗ್ರಾಮಗಳನ್ನು ರತ್ನದ ರಾಶಿಗಳನ್ನು ದ್ವಿಜಪ್ರಮುಖರಿಗೆ ದಾನವಿತ್ತರು.

01119003a ಕೃತಶೌಚಾಂಸ್ತತಸ್ತಾಂಸ್ತು ಪಾಂಡವಾನ್ಭರತರ್ಷಭಾನ್।
01119003c ಆದಾಯ ವಿವಿಶುಃ ಪೌರಾಃ ಪುರಂ ವಾರಣಸಾಹ್ವಯಂ।।

ಪೌರಜನರು ಶುಚಿರ್ಭೂತ ಭರತರ್ಷಭ ಪಾಂಡವರನ್ನು ಕರೆದುಕೊಂಡು ವಾರಣಸಾಹ್ವಯ ಪುರವನ್ನು ಪ್ರವೇಶಿಸಿದರು.

01119004a ಸತತಂ ಸ್ಮಾನ್ವತಪ್ಯಂತ ತಮೇವ ಭರತರ್ಷಭಂ।
01119004c ಪೌರಜಾನಪದಾಃ ಸರ್ವೇ ಮೃತಂ ಸ್ವಮಿವ ಬಾಂಧವಂ।।

ನಗರ ಮತ್ತು ಗ್ರಾಮೀಣ ಪ್ರದೇಶದ ಜನರೆಲ್ಲರೂ ಆ ಭರತರ್ಷಭನಿಗಾಗಿ ಮೃತನಾದವನು ತಮ್ಮದೇ ಬಂಧುವೇನೋ ಎನ್ನುವಂತೆ ಸತತ ಶೋಕಿಸಿದರು.

01119005a ಶ್ರಾದ್ಧಾವಸಾನೇ ತು ತದಾ ದೃಷ್ಟ್ವಾ ತಂ ದುಃಖಿತಂ ಜನಂ।
01119005c ಸಮ್ಮೂಢಾಂ ದುಃಖಶೋಕಾರ್ತಾಂ ವ್ಯಾಸೋ ಮಾತರಮಬ್ರವೀತ್।।

ಶ್ರಾದ್ಧ ಕರ್ಮಗಳು ಸಮಾಪ್ತಿಯಾದ ನಂತರ ದುಃಖಿತ ಜನರನ್ನು ನೋಡಿದ ವ್ಯಾಸನು ಸಮ್ಮೂಢಳಾಗಿದ್ದ ದುಃಖಶೋಕಾರ್ತ ತಾಯಿಗೆ ಹೇಳಿದನು:

01119006a ಅತಿಕ್ರಾಂತಸುಖಾಃ ಕಾಲಾಃ ಪ್ರತ್ಯುಪಸ್ಥಿತದಾರುಣಾಃ।
01119006c ಶ್ವಃ ಶ್ವಃ ಪಾಪೀಯದಿವಸಾಃ ಪೃಥಿವೀ ಗತಯೌವನಾ।।

“ಸುಖದ ಕಾಲಗಳು ಕಳೆದುಹೋದವು. ದಾರುಣ ಕಾಲಗಳು ಮುಂದೆ ಬರಲಿವೆ. ಯೌವನವನ್ನು ಕಳೆದುಕೊಳ್ಳುತ್ತಿರುವ ಈ ಪೃಥ್ವಿಯಲ್ಲಿ ಮುಂದಿನ ಒಂದೊಂದು ದಿನವೂ ಹಿಂದಿನ ದಿನಕ್ಕಿಂಥ ಪಾಪಿಯಾಗಿರುತ್ತದೆ.

01119007a ಬಹುಮಾಯಾಸಮಾಕೀರ್ಣೋ ನಾನಾದೋಷಸಮಾಕುಲಃ।
01119007c ಲುಪ್ತಧರ್ಮಕ್ರಿಯಾಚಾರೋ ಘೋರಃ ಕಾಲೋ ಭವಿಷ್ಯತಿ।।

ಬಹುಮಾಯೆಯಿಂದ ಸಮಾಕೀರ್ಣಗೊಂಡು ನಾನಾತರಹದ ದೋಷಗಳನ್ನೊಡಗೂಡಿ ಧರ್ಮಕ್ರಿಯಾಚಾರಗಳನ್ನು ಕಳೆದುಕೊಂಡ ಘೋರ ಕಾಲವು ಬರುತ್ತದೆ.

01119008a ಗಚ್ಛ ತ್ವಂ ತ್ಯಾಗಮಾಸ್ಥಾಯ ಯುಕ್ತಾ ವಸ ತಪೋವನೇ।
01119008c ಮಾ ದ್ರಕ್ಷ್ಯಸಿ ಕುಲಸ್ಯಾಸ್ಯ ಘೋರಂ ಸಂಕ್ಷಯಮಾತ್ಮನಃ।

ಇವೆಲ್ಲವನ್ನೂ ತ್ಯಜಿಸಿ ಹೊರಟುಹೋಗು. ತಪೋವನದಲ್ಲಿ ವಾಸಿಸು. ಈ ಕುಲದ ಘೋರ ಸಂಕ್ಷಯವನ್ನು ನೀನು ನೋಡುವುದು ಸರಿಯಲ್ಲ.”

01119009a ತಥೇತಿ ಸಮನುಜ್ಞಾಯ ಸಾ ಪ್ರವಿಶ್ಯಾಬ್ರವೀತ್ ಸ್ನುಷಾಂ।
01119009c ಅಂಬಿಕೇ ತವ ಪುತ್ರಸ್ಯ ದುರ್ನಯಾತ್ಕಿಲ ಭಾರತಾಃ।
01119009e ಸಾನುಬಂಧಾ ವಿನಂಕ್ಷ್ಯಂತಿ ಪೌತ್ರಾಶ್ಚೈವೇತಿ ನಃ ಶ್ರುತಂ।।

“ಹಾಗೆಯೇ ಆಗಲಿ” ಎಂದು ಒಪ್ಪಿಕೊಂಡು ಅವಳು ಸೊಸೆಯ ಅಂತಃಪುರವನ್ನು ಪ್ರವೇಶಿಸಿ ಹೇಳಿದಳು: “ಅಂಬಿಕಾ! ನಿನ್ನ ಪುತ್ರನ ದುರ್ನೀತಿಯಿಂದ ಭಾರತರೆಲ್ಲರೂ ಅವರ ಮೊಮ್ಮಕ್ಕಳು ಮತ್ತು ಅನುಯಾಯಿಗಳ ಸಹಿತ ವಿನಾಶಹೊಂದುತ್ತಾರೆ ಎಂದು ಕೇಳಿದ್ದೇನೆ.

01119010a ತತ್ಕೌಸಲ್ಯಾಮಿಮಾಮಾರ್ತಾಂ ಪುತ್ರಶೋಕಾಭಿಪೀಡಿತಾಂ।
01119010c ವನಮಾದಾಯ ಭದ್ರಂ ತೇ ಗಚ್ಛಾವೋ ಯದಿ ಮನ್ಯಸೇ।।

ಆದುದರಿಂದ, ನಿನ್ನ ಒಪ್ಪಿಗೆಯಿದ್ದರೆ, ನಾನು ಪುತ್ರಶೋಕ ಪೀಡಿತೆ ಕೌಸಲ್ಯೆಯನ್ನು ಕರೆದುಕೊಂಡು ವನವನ್ನು ಸೇರುತ್ತೇನೆ. ನಿನಗೆ ಮಂಗಳವಾಗಲಿ.”

01119011a ತಥೇತ್ಯುಕ್ತೇ ಅಂಬಿಕಯಾ ಭೀಷ್ಮಮಾಮಂತ್ರ್ಯ ಸುವ್ರತಾ।
01119011c ವನಂ ಯಯೌ ಸತ್ಯವತೀ ಸ್ನುಷಾಭ್ಯಾಂ ಸಹ ಭಾರತ।।

ಭಾರತ! ಅಂಬಿಕೆಯು ಅನುಮೋದಿಸಲು ಭೀಷ್ಮನನ್ನು ಬೀಳ್ಕೊಂಡು ಆ ಸುವ್ರತೆ ಸತ್ಯವತಿಯು ತನ್ನ ಇಬ್ಬರೂ ಸೊಸೆಯರೊಂದಿಗೆ ವನವನ್ನು ಸೇರಿದಳು.

01119012a ತಾಃ ಸುಘೋರಂ ತಪಃ ಕೃತ್ವಾ ದೇವ್ಯೋ ಭರತಸತ್ತಮ।
01119012c ದೇಹಂ ತ್ಯಕ್ತ್ವಾ ಮಹಾರಾಜ ಗತಿಮಿಷ್ಟಾಂ ಯಯುಸ್ತದಾ।।

ಭರತಸತ್ತಮ! ಮಹಾರಾಜ! ಆ ದೇವಿಯರು ಅತಿಘೋರ ತಪಸ್ಸು ಮಾಡಿ ದೇಹವನ್ನು ತ್ಯಜಿಸಿ ಮಹಾಯಾತ್ರೆಯನ್ನು ಕೈಗೊಂಡರು.

01119013a ಅವಾಪ್ನುವಂತ ವೇದೋಕ್ತಾನ್ಸಂಸ್ಕಾರಾನ್ಪಾಂಡವಾಸ್ತದಾ।
01119013c ಅವರ್ಧಂತ ಚ ಭೋಗಾಂಸ್ತೇ ಭುಂಜಾನಾಃ ಪಿತೃವೇಶ್ಮನಿ।।

ಪಾಂಡವರು ವೇದೋಕ್ತ ಸಂಸ್ಕಾರಗಳನ್ನು ಪಡೆದು ತಂದೆಯ ಮನೆಯಲ್ಲಿ ಸುಖವನ್ನು ಅನುಭವಿಸುತ್ತಾ ಬೆಳೆದರು.

01119014a ಧಾರ್ತರಾಷ್ಟ್ರೈಶ್ಚ ಸಹಿತಾಃ ಕ್ರೀಡಂತಃ ಪಿತೃವೇಶ್ಮನಿ।
01119014c ಬಾಲಕ್ರೀಡಾಸು ಸರ್ವಾಸು ವಿಶಿಷ್ಟಾಃ ಪಾಂಡವಾಭವನ್।।

ತಮ್ಮ ತಂದೆಯ ಮನೆಯಲ್ಲಿ ಒಟ್ಟಿಗೆ ಅಡುತ್ತಿರುವಾಗ ಎಲ್ಲ ಬಾಲಕ್ರೀಡೆಗಳಲ್ಲಿಯೂ ಪಾಂಡವರು ಧೃತರಾಷ್ಟ್ರನ ಮಕ್ಕಳಿಗಿಂತ ವಿಶಿಷ್ಟರಾಗಿದ್ದರು.

01119015a ಜವೇ ಲಕ್ಷ್ಯಾಭಿಹರಣೇ ಭೋಜ್ಯೇ ಪಾಂಸುವಿಕರ್ಷಣೇ।
01119015c ಧಾರ್ತರಾಷ್ಟ್ರಾನ್ಭೀಮಸೇನಃ ಸರ್ವಾನ್ಸ ಪರಿಮರ್ದತಿ।।

ಓಡುವುದರಲ್ಲಿ, ಗುರಿಯನ್ನು ಹೊಡೆಯುವುದರಲ್ಲಿ, ಊಟಮಾಡುವುದರಲ್ಲಿ ಮತ್ತು ಎಳೆದಾಡುವುದರಲ್ಲಿ ಭೀಮಸೇನನು ಧೃತರಾಷ್ಟ್ರನ ಎಲ್ಲ ಮಕ್ಕಳನ್ನೂ ಮೀರಿಸಿದನು.

01119016a ಹರ್ಷಾದೇತಾನ್ ಕ್ರೀಡಮಾನಾನ್ ಗೃಹ್ಯ ಕಾಕನಿಲೀಯನೇ।
01119016c ಶಿರಃಸ್ಸು ಚ ನಿಗೃಃಶೈನಾನ್ಯೋಧಯಾಮಾಸ ಪಾಂಡವಃ।।

ಪಾಂಡವನು ಆಡುತ್ತಿರುವಾಗ ಖುಶಿಯಲ್ಲಿ ಅವರ ಕೂದಲನ್ನು ಹಿಡಿದು ಮೇಲೆತ್ತಿ ಪರಸ್ಪರರ ತಲೆಗಳು ಹೊಡೆದಾಡುವಂತೆ ಮಾಡುತ್ತಿದ್ದನು.

01119017a ಶತಮೇಕೋತ್ತರಂ ತೇಷಾಂ ಕುಮಾರಾಣಾಂ ಮಹೌಜಸಾಂ।
01119017c ಏಕ ಏವ ವಿಮೃದ್ನಾತಿ ನಾತಿಕೃಚ್ಛ್ರಾದ್ವೃಕೋದರಃ।।

ನೂರಾ ಒಂದು ಮಹೌಜಸ ಕುಮಾರರನ್ನೂ ವೃಕೋದರನು ಒಬ್ಬನೇ ಸ್ವಲ್ಪವೂ ಕಷ್ಟವಿಲ್ಲದೇ ಕಾಡುತ್ತಿದ್ದನು.

01119018a ಪಾದೇಷು ಚ ನಿಗೃಃಶೈನಾನ್ವಿನಿಹತ್ಯ ಬಲಾದ್ಬಲೀ।
01119018c ಚಕರ್ಷ ಕ್ರೋಶತೋ ಭೂಮೌ ಘೃಷ್ಟಜಾನುಶಿರೋಕ್ಷಿಕಾನ್।।

ಅವರ ಕಾಲುಗಳನ್ನು ಹಿಡಿದು ಜೋರಾಗಿ ನೆಲದ ಧೂಳಿನಲ್ಲಿ ಬೀಳಿಸಿ ಅವರ ತಲೆ ತೊಡೆಗಳು ನೋವಾಗಿ ಕೂಗುವವರೆಗೆ ಆ ಬಲಿಯು ಅವರ ಮೇಲೆ ಬಿದ್ದು ಉರುಳುತ್ತಿದ್ದನು.

01119019a ದಶ ಬಾಲಾಂಜಲೇ ಕ್ರೀಡನ್ಭುಜಾಭ್ಯಾಂ ಪರಿಗೃಹ್ಯ ಸಃ।
01119019c ಆಸ್ತೇ ಸ್ಮ ಸಲಿಲೇ ಮಗ್ನಃ ಪ್ರಮೃತಾಂಶ್ಚ ವಿಮುಂಚತಿ।।

ನೀರಿನಲ್ಲಿ ಆಡುತ್ತಿರುವಾಗ ತನ್ನ ಭುಜದಿಂದ ಹತ್ತು ಬಾಲಕರನ್ನು ಹಿಡಿದು ನೀರಿನಲ್ಲಿ ಮುಳುಗಿಸಿ ಅವರು ಇನ್ನೇನು ಮುಳುಗಿಹೋಗುತ್ತಾರೆ ಎನ್ನುವಾಗ ಮೇಲೆ ಎತ್ತುತ್ತಿದ್ದನು.

01119020a ಫಲಾನಿ ವೃಕ್ಷಮಾರುಹ್ಯ ಪ್ರಚಿನ್ವಂತಿ ಚ ತೇ ಯದಾ।
01119020c ತದಾ ಪಾದಪ್ರಹಾರೇಣ ಭೀಮಃ ಕಂಪಯತೇ ದ್ರುಮಂ।।
01119021a ಪ್ರಹಾರವೇಗಾಭಿಹತಾದ್ದ್ರುಮಾದ್ವ್ಯಾಘೂರ್ಣಿತಾಸ್ತತಃ।
01119021c ಸಫಲಾಃ ಪ್ರಪತಂತಿ ಸ್ಮ ದ್ರುತಂ ಸ್ರಸ್ತಾಃ ಕುಮಾರಕಾಃ।।

ಅವರು ಹಣ್ಣುಗಳನ್ನು ಕೀಳಲು ಮರ ಏರಿರುವಾಗ ಭೀಮನು ಕಾಲಿನಿಂದ ಮರವನ್ನು ಒದೆದು ಅಲುಗಾಡಿಸಿಸುತ್ತಿದ್ದನು. ಹೊಡೆತದ ಬಲಕ್ಕೆ ಅಲುಗಾಡಿದ ಮರದಿಂದ ಹಣ್ಣುಗಳ ಜೊತೆಗೆ ಕುಮಾರರೂ ಕೆಳಗೆ ಬೀಳುತ್ತಿದ್ದರು.

01119022a ನ ತೇ ನಿಯುದ್ಧೇ ನ ಜವೇ ನ ಯೋಗ್ಯಾಸು ಕದಾ ಚನ।
01119022c ಕುಮಾರಾ ಉತ್ತರಂ ಚಕ್ರುಃ ಸ್ಪರ್ಧಮಾನಾ ವೃಕೋದರಂ।

ಹೊಡೆದಾಟದಲ್ಲಿಯಾಗಲೀ ಓಟದಲ್ಲಿಯಾಗಲೀ ಅಥವಾ ಯೋಗದಲ್ಲಿಯಾಗಲೀ ಸ್ಪರ್ಧಿಸುತ್ತಿರುವ ಕುಮಾರರು ವೃಕೋದರನನ್ನು ಎಂದೂ ಮೀರಿಸಲಿಕ್ಕಾಗುತ್ತಿರಲಿಲ್ಲ.

01119023a ಏವಂ ಸ ಧಾರ್ತರಾಷ್ಟ್ರಾಣಾಂ ಸ್ಪರ್ಧಮಾನೋ ವೃಕೋದರಃ।
01119023c ಅಪ್ರಿಯೇಽತಿಷ್ಠದತ್ಯಂತಂ ಬಾಲ್ಯಾನ್ನ ದ್ರೋಹಚೇತಸಾ।।

ಈ ರೀತಿ ಸ್ಪರ್ಧಿಸುತ್ತಿರುವ - ಬಾಲ್ಯತನದಿಂದ ದ್ರೋಹಭಾವದಿಂದಲ್ಲ - ವೃಕೋದರನು ಧಾರ್ತರಾಷ್ಟ್ರರಿಗೆ ಬಹಳ ಅಪ್ರಿಯನಾದನು.

01119024a ತತೋ ಬಲಮತಿಖ್ಯಾತಂ ಧಾರ್ತರಾಷ್ಟ್ರಃ ಪ್ರತಾಪವಾನ್।
01119024c ಭೀಮಸೇನಸ್ಯ ತಜ್ಜ್ಞಾತ್ವಾ ದುಷ್ಟಭಾವಮದರ್ಶಯತ್।।

ಭೀಮಸೇನನ ಅತಿಖ್ಯಾತ ಬಲವನ್ನು ತಿಳಿದ ಪ್ರತಾಪಿ ಧಾರ್ತರಾಷ್ಟ್ರನು ತನ್ನ ದುಷ್ಟಭಾವವನ್ನು ತೋರಿಸತೊಡಗಿದನು.

01119025a ತಸ್ಯ ಧರ್ಮಾದಾಪೇತಸ್ಯ ಪಾಪಾನಿ ಪರಿಪಶ್ಯತಃ।
01119025c ಮೋಹಾದೈಶ್ವರ್ಯಲೋಭಾಚ್ಚ ಪಾಪಾ ಮತಿರಜಾಯತ।।

ಧರ್ಮವನ್ನು ನಿರ್ಲಕ್ಷಿಸಿ ಪಾಪ ಮಾಡುವುದನ್ನೇ ನೋಡುತ್ತಿದ್ದ ಆ ಐಶ್ವರ್ಯ ಲೋಭ ಮೋಹಿತನ ಮನಸ್ಸಿನಲ್ಲಿ ಕೆಟ್ಟ ವಿಚಾರಗಳು ಹುಟ್ಟಿದವು.

01119026a ಅಯಂ ಬಲವತಾಂ ಶ್ರೇಷ್ಠಃ ಕುಂತೀಪುತ್ರೋ ವೃಕೋದರಃ।
01119026c ಮಧ್ಯಮಃ ಪಾಂಡುಪುತ್ರಾಣಾಂ ನಿಕೃತ್ಯಾ ಸಂನಿಹನ್ಯತಾಂ।।

“ಬಲವಂತರಲ್ಲಿ ಶ್ರೇಷ್ಠ, ಪಾಂಡುಪುತ್ರರ ಮಧ್ಯಮ ಈ ಕುಂತಿಪುತ್ರ ವೃಕೋದರನ್ನು ಮೋಸದಿಂದ ಮಾತ್ರ ಕೊಲ್ಲಬಹುದು.

01119027a ಅಥ ತಸ್ಮಾದವರಜಂ ಜ್ಯೇಷ್ಠಂ ಚೈವ ಯುಧಿಷ್ಠಿರಂ।
01119027c ಪ್ರಸಹ್ಯ ಬಂಧನೇ ಬದ್ಧ್ವಾ ಪ್ರಶಾಸಿಷ್ಯೇ ವಸುಂಧರಾಂ।।

ನಂತರ ಅವನ ತಮ್ಮಂದಿರನ್ನು ಮತ್ತು ಜ್ಯೇಷ್ಠ ಯುಧಿಷ್ಠಿರನನ್ನು ಬಂಧನದಲ್ಲಿ ಬಂಧಿಸಿ ಈ ವಸುಂಧರೆಯ ಪ್ರಶಾಸನ ಮಾಡುತ್ತೇನೆ.”

01119028a ಏವಂ ಸ ನಿಶ್ಚಯಂ ಪಾಪಃ ಕೃತ್ವಾ ದುರ್ಯೋಧನಸ್ತದಾ।
01119028c ನಿತ್ಯಮೇವಾಂತರಪ್ರೇಕ್ಷೀ ಭೀಮಸ್ಯಾಸೀನ್ ಮಹಾತ್ಮನಃ।।

ಈ ರೀತಿ ಪಾಪ ನಿಶ್ಚಯ ಮಾಡಿದ ದುರ್ಯೋಧನನು ಮಹಾತ್ಮ ಭೀಮನನ್ನು ಪಡೆಯಲು ನಿತ್ಯವೂ ಕಾಯುತ್ತಿದ್ದನು.

01119029a ತತೋ ಜಲವಿಹಾರಾರ್ಥಂ ಕಾರಯಾಮಾಸ ಭಾರತ।
01119029c ಚೇಲಕಂಬಲವೇಶ್ಮಾನಿ ವಿಚಿತ್ರಾಣಿ ಮಹಾಂತಿ ಚ।।
01119030a ಪ್ರಮಾಣಕೋಟ್ಯಾಮುದ್ದೇಶಂ ಸ್ಥಲಂ ಕಿಂ ಚಿದುಪೇತ್ಯ ಚ।
01119030c ಕ್ರೀಡಾವಸಾನೇ ಸರ್ವೇ ತೇ ಶುಚಿವಸ್ತ್ರಾಃ ಸ್ವಲಂಕೃತಾಃ।
01119030e ಸರ್ವಕಾಮಸಮೃದ್ಧಂ ತದನ್ನಂ ಬುಭುಜಿರೇ ಶನೈಃ।।

ಭಾರತ! ಜಲವಿಹಾರಾರ್ಥವಾಗಿ ಪ್ರಮಾಣಕೋಟಿಯ ಬಳಿ ನೀರಿನ ಬಳಿಯಲ್ಲಿಯೇ ಬಣ್ಣ ಬಣ್ಣದ ಕಂಬಳಿಯ ಅತಿ ದೊಡ್ಡ ಡೇರೆಯನ್ನು ನಿರ್ಮಿಸಿದನು. ಆಟವಾಡಿ ಎಲ್ಲರೂ ಶುಭ್ರವಸ್ತ್ರಗಳನ್ನು ಧರಿಸಿ ಅಲಂಕೃತರಾಗಿ ಸರ್ವಕಾಮ ಸಮೃದ್ಧ ಭೋಜನವನ್ನು ಸವಿಯುತ್ತಿದ್ದರು.

01119031a ದಿವಸಾಂತೇ ಪರಿಶ್ರಾಂತಾ ವಿಹೃತ್ಯ ಚ ಕುರೂದ್ವಹಾಃ।
01119031c ವಿಹಾರಾವಸಥೇಷ್ವೇವ ವೀರಾ ವಾಸಮರೋಚಯನ್।।

ರಾತ್ರಿಯಾಗುತ್ತಿದ್ದಂತೆ ಪರಿಶ್ರಾಂತ ವೀರ ಕುರುಕುಮಾರರು ಡೇರೆಯ ಹೊರಗೆ ಮಲಗಲು ಬಯಸಿದರು.

01119032a ಖಿನ್ನಸ್ತು ಬಲವಾನ್ಭೀಮೋ ವ್ಯಾಯಾಮಾಭ್ಯಧಿಕಸ್ತದಾ।
01119032c ವಾಹಯಿತ್ವಾ ಕುಮಾರಾಂಸ್ತಾಂಜಲಕ್ರೀಡಾಗತಾನ್ವಿಭುಃ।
01119032e ಪ್ರಮಾಣಕೋಟ್ಯಾಂ ವಾಸಾರ್ಥೀ ಸುಷ್ವಾಪಾರುಹ್ಯ ತತ್ ಸ್ಥಲಂ।।

ಕುಮಾರರನ್ನು ನೀರಿನಲ್ಲಿ ಹೊತ್ತು ಆಡಿಸಿದುದರ ಅಧಿಕ ವ್ಯಾಯಾಮದಿಂದ ಬಳಲಿದ ಬಲವಾನ್ ಭೀಮನು ಪುಣ್ಯಕೋಟಿಯ ದಡವನ್ನು ಸೇರಿ, ಮಲಗಲು ಒಂದು ಸ್ಥಳವನ್ನು ಆರಿಸಿ ಅಲ್ಲಿಯೇ ನಿದ್ರಿಸಿದನು.

01119033a ಶೀತಂ ವಾಸಂ ಸಮಾಸಾದ್ಯ ಶ್ರಾಂತೋ ಮದವಿಮೋಹಿತಃ।
01119033c ನಿಶ್ಚೇಷ್ಟಃ ಪಾಂಡವೋ ರಾಜನ್ಸುಷ್ವಾಪ ಮೃತಕಲ್ಪವತ್।।

ರಾಜನ್! ಬಿಳಿಯ ವಸ್ತ್ರವನ್ನು ಹೊದೆದು ಬಳಲಿದ್ದ ಆ ಪಾಂಡವನು ಸ್ವಲ್ಪವೂ ಅಲುಗಾಡದೇ ಮೃತಶರೀರದಂತೆ ಮಲಗಿದ್ದನು.

01119034a ತತೋ ಬದ್ಧ್ವಾ ಲತಾಪಾಶೈರ್ಭೀಮಂ ದುರ್ಯೋಧನಃ ಶನೈಃ।
01119034c ಗಂಭೀರಂ ಭೀಮವೇಗಂ ಚ ಸ್ಥಲಾಜ್ಜಲಮಪಾತಯತ್।।

ಆಗ ದುರ್ಯೋಧನನು ಅವನನ್ನು ಬಳ್ಳಿಗಳಿಂದ ಮಾಡಿದ ಹಗ್ಗದಿಂದ ನಿಧಾನವಾಗಿ ಕಟ್ಟಿ ದಡದಿಂದ ವೇಗ ಮತ್ತು ಗಂಭೀರವಾಗಿ ಹರಿಯುತ್ತಿದ್ದ ನೀರಿಗೆ ಮೆಲ್ಲನೆ ಉರುಳಿಸಿದನು.

01119035a ತತಃ ಪ್ರಬುದ್ಧಃ ಕೌಂತೇಯಃ ಸರ್ವಂ ಸಂಚಿದ್ಯ ಬಂಧನಂ।
01119035c ಉದತಿಷ್ತಜ್ಜಲಾದ್ಭೂಯೋ ಭೀಮಃ ಪ್ರಹರತಾಂ ವರಃ।।

ಹೋರಾಟಗಾರರಲ್ಲೇ ಶ್ರೇಷ್ಠ ಕೌಂತೇಯ ಭೀಮನು ಎಲ್ಲ ಕಟ್ಟುಗಳನ್ನೂ ಹರಿದು ನೀರಿನಿಂದ ಮೇಲೆದ್ದು ಬಂದನು.

01119036a ಸುಪ್ತಂ ಚಾಪಿ ಪುನಃ ಸರ್ಪೈಸ್ತೀಕ್ಷ್ಣದಂಷ್ಟ್ರೈರ್ಮಹಾವಿಷೈಃ।
01119036c ಕುಪಿತೈರ್ದಂಶಯಾಮಾಸ ಸರ್ವೇಷ್ವೇವಾಂಗಮರ್ಮಸು।।

ಇನ್ನೊಮ್ಮೆ ಮಲಗಿದ್ದಾಗ ಮಹಾ ವಿಷದ ತೀಕ್ಷ ಹಲ್ಲುಗಳ ಸರ್ಪಗಳಿಂದ ಅವನ ಮರ್ಮಾಂಗಗಳಲ್ಲಿ ಕಚ್ಚಿಸಿದನು.

01119037a ದಂಷ್ಟ್ರಾಶ್ಚ ದಂಷ್ಟ್ರಿಣಾಂ ತೇಷಾಂ ಮರ್ಮಸ್ವಪಿ ನಿಪಾತಿತಾಃ।
01119037c ತ್ವಚಂ ನೈವಾಸ್ಯ ಬಿಭಿದುಃ ಸಾರತ್ವಾತ್ಪೃಥುವಕ್ಷಸಃ।।

ಆದರೆ ಆ ಸರ್ಪಗಳ ತೀಕ್ಷ್ಣ ದಂಷ್ಟ್ರಗಳು ಅವನ ಮರ್ಮಸ್ಥಾನಗಳನ್ನು ಕಚ್ಚುತ್ತಿದ್ದರೂ ಆ ಪೃಥುವಕ್ಷಸನ ಚರ್ಮವನ್ನೂ ಹರಿದು ಒಳಗೆ ಹೋಗಲು ಆಗಲಿಲ್ಲ.

01119038a ಪ್ರತಿಬುದ್ಧಸ್ತು ಭೀಮಸ್ತಾನ್ಸರ್ವಾನ್ಸರ್ಪಾನಪೋಥಯತ್।
01119038c ಸಾರಥಿಂ ಚಾಸ್ಯ ದಯಿತಮಪಹಸ್ತೇನ ಜಘ್ನಿವಾನ್।।

ಎಚ್ಚರವಾದಾಗ ಭೀಮನು ಸರ್ವ ಸರ್ಪಗಳನ್ನೂ ಅರೆದು ಕೊಂದನು ಮತ್ತು ತನ್ನ ಪ್ರಿಯ ಸಾರಥಿಯ ಬೆನ್ನಮೇಲೆ ತನ್ನ ಕೈಯಿಂದ ಹೊಡೆದನು.

01119039a ಭೋಜನೇ ಭೀಮಸೇನಸ್ಯ ಪುನಃ ಪ್ರಾಕ್ಷೇಪಯದ್ವಿಷಂ।
01119039c ಕಾಲಕೂಟಂ ನವಂ ತೀಕ್ಷ್ಣಂ ಸಂಭೃತಂ ಲೋಮಹರ್ಷಣಂ।।

ಪುನಃ ಭೀಮಸೇನನ ಭೋಜನದಲ್ಲಿ ನವಿರೇಳಿಸುವ ತೀಕ್ಷ್ಣ ಕಾಲಕೂಟ ವಿಷವನ್ನು ಸೇರಿಸಿದ್ದನು.

01119040a ವೈಶ್ಯಾಪುತ್ರಸ್ತದಾಚಷ್ಟ ಪಾರ್ಥಾನಾಂ ಹಿತಕಾಮ್ಯಯಾ।
01119040c ತಚ್ಚಾಪಿ ಭುಕ್ತ್ವಾಜರಯದವಿಕಾರೋ ವೃಕೋದರಃ।।

ಪಾರ್ಥರ ಹಿತಕಾಮಿ ವೈಶ್ಯಾಪುತ್ರನು ಅವರಿಗೆ ಹೇಳಿದನು. ಆದರೂ ವೃಕೋದರನು ಅದನ್ನು ತಿಂದು ಏನೂ ಕೆಟ್ಟಪರಿಣಾಮವಿಲ್ಲದೆ ಜೀರ್ಣಿಸಿಕೊಂಡನು.

01119041a ವಿಕಾರಂ ನ ಹ್ಯಜನಯತ್ಸುತೀಕ್ಷ್ಣಮಪಿ ತದ್ವಿಷಂ।
01119041c ಭೀಮಸಂಹನನೋ ಭೀಮಸ್ತದಪ್ಯಜರಯತ್ತತಃ।।

ಆ ವಿಷವು ಭೀಮಸಂಹನ ಭೀಮನಲ್ಲಿ ಸ್ವಲ್ಪವೂ ವಿಕಾರಗಳನ್ನುಂಟುಮಾಡಲಿಲ್ಲ; ಅದನ್ನು ಸುಮ್ಮನೇ ಜೀರ್ಣಿಸಿಬಿಟ್ಟನು.

01119042a ಏವಂ ದುರ್ಯೋಧನಃ ಕರ್ಣಃ ಶಕುನಿಶ್ಚಾಪಿ ಸೌಬಲಃ।
01119042c ಅನೇಕೈರಭ್ಯುಪಾಯೈಸ್ತಾಂ ಜಿಘಾಂಸಂತಿ ಸ್ಮ ಪಾಂಡವಾನ್।।

ಈ ರೀತಿ ದುರ್ಯೋಧನ, ಕರ್ಣ ಮತ್ತು ಸೌಬಲ ಶಕುನಿಯರು ಪಾಂಡವರನ್ನು ಕೊಲ್ಲಲು ಅನೇಕ ಪ್ರಯತ್ನಗಳನ್ನು ಮಾಡಿದರು.

01119043a ಪಾಂಡವಾಶ್ಚಾಪಿ ತತ್ಸರ್ವಂ ಪ್ರತ್ಯಜಾನನ್ನರಿಂದಮಾಃ।
01119043c ಉದ್ಭಾವನಮಕುರ್ವಂತೋ ವಿದುರಸ್ಯ ಮತೇ ಸ್ಥಿತಾಃ।।

ಅರಿಂದಮ ಪಾಂಡವರಾದರೂ ಅವೆಲ್ಲವನ್ನೂ ತಿಳಿದಿದ್ದರೂ ವಿದುರನ ಅನುಮತಿಯಂತೆ ಅವುಗಳನ್ನು ಬಹಿರಂಗ ಪಡಿಸಲಿಲ್ಲ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಭೀಮಸೇನರಸಪಾನೇ ಏಕೋನವಿಂಶತ್ಯಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಭೀಮಸೇನರಸಪಾನ ಎನ್ನುವ ನೂರಾಹತ್ತೊಂಭತ್ತನೆಯ ಅಧ್ಯಾಯವು.