118 ಪಾಂಡುದಾಹಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 118

ಸಾರ

ಪಾಂಡು ಮತ್ತು ಮಾದ್ರಿಯರ ಪ್ರೇತಕಾರ್ಯ (1-22). ರಾಜಪರಿವಾರದ ಮತ್ತು ಪೌರಜನರ ಶೋಕ ಸಂತಾಪ (23-30).

01118001 ಧೃತರಾಷ್ಟ್ರ ಉವಾಚ।
01118001a ಪಾಂಡೋರ್ವಿದುರ ಸರ್ವಾಣಿ ಪ್ರೇತಕಾರ್ಯಾಣಿ ಕಾರಯ।
01118001c ರಾಜವದ್ರಾಜಸಿಂಹಸ್ಯ ಮಾದ್ರ್ಯಾಶ್ಚೈವ ವಿಶೇಷತಃ।।

ಧೃತರಾಷ್ಟ್ರನು ಹೇಳಿದನು: “ವಿದುರ! ಪಾಂಡು ಮತ್ತು ಮಾದ್ರಿಯರಿಗೆ ರಾಜಸಿಂಹನಿಗೆ ತಕ್ಕುದಾದ ರಾಜರೀತಿಯ ಸರ್ವ ಪ್ರೇತಕಾರ್ಯಗಳನ್ನೂ ಮಾಡಿಸು.

01118002a ಪಶೂನ್ವಾಸಾಂಸಿ ರತ್ನಾನಿ ಧನಾನಿ ವಿವಿಧಾನಿ ಚ।
01118002c ಪಾಂಡೋಃ ಪ್ರಯಚ್ಛ ಮಾದ್ರ್ಯಾಶ್ಚ ಯೇಭ್ಯೋ ಯಾವಚ್ಚ ವಾಂಚಿತಂ।।

ಪಾಂಡು ಮತ್ತು ಮಾದ್ರಿಯರ ಕಡೆಯಿಂದ ಯಾರ್ಯಾರು ಎಷ್ಟೆಷ್ಟು ಕೇಳುತ್ತಾರೋ ಅಷ್ಟು ವಿವಿಧ ಪಶು, ವಸ್ತ್ರ, ರತ್ನ ಮತ್ತು ಸಂಪತ್ತುಗಳನ್ನು ಕೊಡು.

01118003a ಯಥಾ ಚ ಕುಂತೀ ಸತ್ಕಾರಂ ಕುರ್ಯಾನ್ಮಾದ್ರ್ಯಾಸ್ತಥಾ ಕುರು।
01118003c ಯಥಾ ನ ವಾಯುರ್ನಾದಿತ್ಯಃ ಪಶ್ಯೇತಾಂ ತಾಂ ಸುಸಂವೃತಾಂ।।

ಕುಂತಿಯು ಮಾದ್ರಿಗೆ ಹೇಗೆ ಸತ್ಕಾರ ಮಾಡುವವಳೋ ಹಾಗೆಯೇ ನಡೆಯಲಿ. ವಾಯುವಾಗಲೀ ಆದಿತ್ಯನಾಗಲೀ ನೋಡಲಾರದಂತೆ ಅವಳ ಅಲಂಕಾರವಾಗಲಿ.

01118004a ನ ಶೋಚ್ಯಃ ಪಾಂಡುರನಘಃ ಪ್ರಶಸ್ಯಃ ಸ ನರಾಧಿಪಃ।
01118004c ಯಸ್ಯ ಪಂಚ ಸುತಾ ವೀರಾ ಜಾತಾಃ ಸುರಸುತೋಪಮಾಃ।।

ಅನಘ ಪಾಂಡುವಿಗಾಗಿ ಯಾರೂ ಶೋಕಿಸಬಾರದು. ಸುರಸುತೋಪಮ ವೀರ ಐವರು ಮಕ್ಕಳನ್ನು ಪಡೆದ ಆ ನರಾಧಿಪನಿಗೆ ಪ್ರಶಂಸೆಯೇ ಇರಲಿ.””

01118005 ವೈಶಂಪಾಯನ ಉವಾಚ।
01118005a ವಿದುರಸ್ತಂ ತಥೇತ್ಯುಕ್ತ್ವಾ ಭೀಷ್ಮೇಣ ಸಹ ಭಾರತ।
01118005c ಪಾಂಡುಂ ಸಂಸ್ಕಾರಯಾಮಾಸ ದೇಶೇ ಪರಮಸಂವೃತೇ।।

ವೈಶಂಪಾಯನನು ಹೇಳಿದನು: “ಭಾರತ! ಹೇಳಿದುದೆಲ್ಲವನ್ನೂ ವಿದುರನು ಭೀಷ್ಮನ ಸಹಾಯದಿಂದ ನೆರವೇರಿಸಿದನು. ಎಲ್ಲಕಡೆಯಿಂದಲೂ ರಕ್ಷಿಸಲ್ಪಟ್ಟ ಪ್ರದೇಶದಲ್ಲಿ ಪಾಂಡುವಿಗೆ ಸಂಸ್ಕಾರ ಕಾರ್ಯಗಳನ್ನು ನೆರವೇರಿಸಿದನು.

01118006a ತತಸ್ತು ನಗರಾತ್ತೂರ್ಣಮಾಜ್ಯಹೋಮಪುರಸ್ಕೃತಾಃ।
01118006c ನಿರ್ಹೃತಾಃ ಪಾವಕಾ ದೀಪ್ತಾಃ ಪಾಂಡೋ ರಾಜಪುರೋಹಿತೈಃ।।

ನಂತರ ರಾಜಪುರೋಹಿತರು ಪಾಂಡುವಿಗೆ ನಗರದಿಂದ ಆಜ್ಯಹೋಮಪುರಸ್ಕೃತ ಉರಿಯುತ್ತಿರುವ ಬೆಂಕಿಯನ್ನು ತಂದರು.

01118007a ಅಥೈನಮಾರ್ತವೈರ್ಗಂಧೈರ್ಮಾಲ್ಯೈಶ್ಚ ವಿವಿಧೈರ್ವರೈಃ।
01118007c ಶಿಬಿಕಾಂ ಸಮಲಂಚಕ್ರುರ್ವಾಸಸಾಚ್ಛಾದ್ಯ ಸರ್ವಶಃ।।

ನಂತರ ಅವನನ್ನು ಕಟ್ಟಿಗೆ ರಾಶಿಯ ಮೇಲೆ ಮಲಗಿಸಿ ಎಲ್ಲ ಕಡೆಯಿಂದಲೂ ಬಟ್ಟೆಯನ್ನು ಸುತ್ತಿ, ವಿವಿಧ ಶ್ರೇಷ್ಠ ಗಂಧ-ಮಾಲೆಗಳಿಂದ ಸಿಂಗರಿಸಿದರು.

01118008a ತಾಂ ತಥಾ ಶೋಭಿತಾಂ ಮಾಲ್ಯೈರ್ವಾಸೋಭಿಶ್ಚ ಮಹಾಧನೈಃ।
01118008c ಅಮಾತ್ಯಾ ಜ್ಞಾತಯಶ್ಚೈವ ಸುಹೃದಶ್ಚೋಪತಸ್ಥಿರೇ।।
01118009a ನೃಸಿಂಹಂ ನರಯುಕ್ತೇನ ಪರಮಾಲಂಕೃತೇನ ತಂ।
01118009c ಅವಹನ್ಯಾನಮುಖ್ಯೇನ ಸಹ ಮಾದ್ರ್ಯಾ ಸುಸಂವೃತಂ।।

ಈ ರೀತಿ ಮಾಲೆಗಳಿಂದ ಮತ್ತು ಅಮೂಲ್ಯ ವಸ್ತ್ರಗಳಿಂದ ಸಿಂಗರಿಸಿದ ನಂತರ ಅಮಾತ್ಯರು, ನೆಂಟರಿಷ್ಟರು ಮತ್ತು ಸ್ನೇಹಿತರು ಮಾದ್ರಿಯ ಸಮೇತ ಆ ನರಸಿಂಹನನ್ನು ಸುಂದರವಾಗಿ ಅಲಂಕರಿಸಿದ, ನರರಿಂದ ಎಳೆಯಲ್ಪಟ್ಟ, ಎಲ್ಲಕಡೆಯಿಂದಲೂ ಸುರಕ್ಷಿತವಾದ ಯಾನದಲ್ಲಿರಿಸಿ ಹೊರಟರು.

01118010a ಪಾಂಡುರೇಣಾತಪತ್ರೇಣ ಚಾಮರವ್ಯಜನೇನ ಚ।
01118010c ಸರ್ವವಾದಿತ್ರನಾದೈಶ್ಚ ಸಮಲಂಚಕ್ರಿರೇ ತತಃ।।

ಬಿಳಿ ಛತ್ರ ಮತ್ತು ಚಾಮರಗಳನ್ನು ಅದಕ್ಕೆ ಕಟ್ಟಿದ್ದರು. ಎಲ್ಲ ರೀತಿಯ ವಾದ್ಯಗಳ ನಾದದೊಂದಿಗೆ ಮೆರವಣಿಗೆಯಲ್ಲಿ ಹೊರಟರು.

01118011a ರತ್ನಾನಿ ಚಾಪ್ಯುಪಾದಾಯ ಬಹೂನಿ ಶತಶೋ ನರಾಃ।
01118011c ಪ್ರದದುಃ ಕಾಂಕ್ಷಮಾಣೇಭ್ಯಃ ಪಾಂಡೋಸ್ತತ್ರೌರ್ಧ್ವದೇಹಿಕಂ।।

ಪಾಂಡುವಿನ ದೇಹವನ್ನು ತೆಗೆದು ಕೊಂಡೊಯ್ಯುತ್ತಿರುವಾಗ ಜನರು ನೂರಾರು ಸಂಖ್ಯೆಗಳಲ್ಲಿ ರತ್ನಗಳನ್ನು ಹಿಡಿದು ಬೇಡುವವರಿಗೆ ಕೊಟ್ಟರು.

01118012a ಅಥ ಚತ್ರಾಣಿ ಶುಭ್ರಾಣಿ ಪಾಂಡುರಾಣಿ ಬೃಹಂತಿ ಚ।
01118012c ಆಜಹ್ರುಃ ಕೌರವಸ್ಯಾರ್ಥೇ ವಾಸಾಂಸಿ ರುಚಿರಾಣಿ ಚ।।

ಕೌರವನ ಪರವಾಗಿ ಶುಭ್ರ ಶ್ವೇತ ವರ್ಣದ ಛತ್ರಗಳನ್ನು ಮತ್ತು ಸುಂದರ ವಸ್ತ್ರಗಳನ್ನು ಹಂಚಿದರು.

01118013a ಯಾಜಕೈಃ ಶುಕ್ಲವಾಸೋಭಿರ್ಹೂಯಮಾನಾ ಹುತಾಶನಾಃ।
01118013c ಅಗಚ್ಛನ್ನಗ್ರತಸ್ತಸ್ಯ ದೀಪ್ಯಮಾನಾಃ ಸ್ವಲಂಕೃತಾಃ।।

ಶ್ವೇತವರ್ಣದ ಬಟ್ಟೆಗಳನ್ನು ಧರಿಸಿದ್ದ ಯಾಜಕರು ಸ್ವಲಂಕೃತ ಶರೀರವನ್ನು ಹಾಕುವುದರ ಮೊದಲು ಉರಿಯುತ್ತಿರುವ ಹುತಾಶನನಲ್ಲಿ ಆಹುತಿಯನ್ನು ಹಾಕಿದರು.

01118014a ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾಶ್ಚೈವ ಸಹಸ್ರಶಃ।
01118014c ರುದಂತಃ ಶೋಕಸಂತಪ್ತಾ ಅನುಜಗ್ಮುರ್ನರಾಧಿಪಂ।।

ಶೋಕಸಂತಪ್ತರಾಗಿ ರೋದಿಸುತ್ತಿರುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರು ಸಹಸ್ರಾರು ಸಂಖ್ಯೆಗಳಲ್ಲಿ ನರಾಧಿಪನನ್ನು ಹಿಂಬಾಲಿಸಿದರು.

01118015a ಅಯಮಸ್ಮಾನಪಾಹಾಯ ದುಃಖೇ ಚಾಧಾಯ ಶಾಶ್ವತೇ।
01118015c ಕೃತ್ವಾನಾಥಾನ್ಪರೋ ನಾಥಃ ಕ್ವ ಯಾಸ್ಯತಿ ನರಾಧಿಪಃ।

“ನಮ್ಮೆಲ್ಲರ ಪರೋನಾಥ ನರಾಧಿಪನು ನಮ್ಮೆಲ್ಲರನ್ನೂ ಬಿಟ್ಟು, ಈ ಶಾಶ್ವತ ದುಃಖದಲ್ಲಿ ಮುಳುಗಿಸಿ, ಅನಾಥರನ್ನಾಗಿ ಮಾಡಿ ಎಲ್ಲಿಗೆ ಹೋದನು?”

01118016a ಕ್ರೋಶಂತಃ ಪಾಂಡವಾಃ ಸರ್ವೇ ಭೀಷ್ಮೋ ವಿದುರ ಏವ ಚ।
01118016c ರಮಣೀಯೇ ವನೋದ್ದೇಶೇ ಗಂಗಾತೀರೇ ಸಮೇ ಶುಭೇ।।
01118017a ನ್ಯಾಸಯಾಮಾಸುರಥ ತಾಂ ಶಿಬಿಕಾಂ ಸತ್ಯವಾದಿನಃ।
01118017c ಸಭಾರ್ಯಸ್ಯ ನೃಸಿಂಹಸ್ಯ ಪಾಂಡೋರಕ್ಲಿಷ್ಟಕರ್ಮಣಃ।।

ಕ್ರೋಶಾಂತ ಪಾಂಡವರು, ಭೀಷ್ಮ, ವಿದುರ ಮೊದಲಾದ ಸರ್ವರೂ ಆ ಸತ್ಯವಾದಿ, ಅಕ್ಲಿಷ್ಟಕರ್ಮಿ, ನರಸಿಂಹನ ಮತ್ತು ಅವನ ಪತ್ನಿಯ ಶಿಬಿಕೆಗಳನ್ನು ಶುಭ ಗಂಗಾತೀರದ ರಮಣೀಯ ಸಮತಟ್ಟು ವನಪ್ರದೇಶದಲ್ಲಿ ತಂದಿರಿಸಿದರು.

01118018a ತತಸ್ತಸ್ಯ ಶರೀರಂ ತತ್ಸರ್ವಗಂಧನಿಷೇವಿತಂ।
01118018c ಶುಚಿಕಾಲೀಯಕಾದಿಗ್ಧಂ ಮುಖ್ಯಸ್ನಾನಾಧಿವಾಸಿತಂ।
01118018e ಪರ್ಯಷಿಂಚಜ್ಜಲೇನಾಶು ಶಾತಕುಂಭಮಯೈರ್ಘಟೈಃ।।

ನಂತರ ಅವನ ಶರೀರವನ್ನು ಸರ್ವ ಸುಗಂಧಗಳಿಂದ ಬಳಿದು ಶುಚಿಯಾದ ಕಾಲೀಯಕವನ್ನು ಸವರಿ, ಶ್ರೇಷ್ಠ ತೈಲಗಳನ್ನು ಹಚ್ಚಿ, ಬಂಗಾರದ ಕೊಡಗಳಿಂದ ಶುದ್ಧ ನೀರನ್ನು ಸುರಿಸಿದರು.

01118019a ಚಂದನೇನ ಚ ಮುಖ್ಯೇನ ಶುಕ್ಲೇನ ಸಮಲೇಪಯನ್।
01118019c ಕಾಲಾಗುರುವಿಮಿಶ್ರೇಣ ತಥಾ ತುಂಗರಸೇನ ಚ।।

ಶ್ರೇಷ್ಠ ಬಿಳಿ ಚಂದನ, ಕಾಲಾಗುರು ಮತ್ತು ತುಂಗರಸಗಳ ಮಿಶ್ರಣವನ್ನು ಲೇಪಿಸಿದರು.

01118020a ಅಥೈನಂ ದೇಶಜೈಃ ಶುಕ್ಲೈರ್ವಾಸೋಭಿಃ ಸಮಯೋಜಯನ್।
01118020c ಆಚ್ಛನ್ನಃ ಸ ತು ವಾಸೋಭಿರ್ಜೀವನ್ನಿವ ನರರ್ಷಭಃ।
01118020e ಶುಶುಭೇ ಪುರುಷವ್ಯಾಘ್ರೋ ಮಹಾರ್ಹಶಯನೋಚಿತಃ।।

ನಂತರ ಅವನನ್ನು ಬಿಳಿ ಹತ್ತಿಯ ವಸ್ತ್ರದಿಂದ ಸುತ್ತಿದರು. ವಸ್ತ್ರದಿಂದ ಸುತ್ತಲ್ಪಟ್ಟ ಅ ನರರ್ಷಭ ಪುರುಷವ್ಯಾಘ್ರನು ಅಮೂಲ್ಯ ಶಯನಕ್ಕೆ ಅರ್ಹನಾಗಿ ಜೀವವಿದ್ದವನಂತೆ ಕಂಡನು.

01118021a ಯಾಜಕೈರಭ್ಯನುಜ್ಞಾತಂ ಪ್ರೇತಕರ್ಮಣಿ ನಿಷ್ಠಿತೈಃ।
01118021c ಘೃತಾವಸಿಕ್ತಂ ರಾಜಾನಂ ಸಹ ಮಾದ್ರ್ಯಾ ಸ್ವಲಂಕೃತಂ।।
01118022a ತುಂಗಪದ್ಮಕಮಿಶ್ರೇಣ ಚಂದನೇನ ಸುಗಂಧಿನಾ।
01118022c ಅನ್ಯೈಶ್ಚ ವಿವಿಧೈರ್ಗಂಧೈರನಲ್ಪೈಃ ಸಮದಾಹಯನ್।।

ಪ್ರೇತಕರ್ಮ ನಿರತ ಯಾಜಕರು ಅಪ್ಪಣೆಕೊಟ್ಟ ನಂತರ ತುಂಗ-ಪದ್ಮಕ ಮಿಶ್ರಣ, ಮತ್ತು ಸುಗಂಧಯುಕ್ತ ಚಂದನದಿಂದ ಮತ್ತು ಇತರ ವಿವಿಧ ಗಂಧಗಳಿಂದ ಸ್ವಲಂಕೃತರಾದ ಮಾದ್ರಿ ಸಹಿತ ರಾಜನ ಮೇಲೆ ತುಪ್ಪವನ್ನು ಸುರಿದು ಅಗ್ನಿಯನ್ನಿಟ್ಟರು.

01118023a ತತಸ್ತಯೋಃ ಶರೀರೇ ತೇ ದೃಷ್ಟ್ವಾ ಮೋಹವಶಂ ಗತಾ।
01118023c ಹಾಹಾ ಪುತ್ರೇತಿ ಕೌಸಲ್ಯಾ ಪಪಾತ ಸಹಸಾ ಭುವಿ।।

ಅವರೀರ್ವರ ಶರೀರಗಳನ್ನು ನೋಡಿ ಕೌಸಲ್ಯೆಯು “ಹಾಹಾ ಪುತ್ರ!”ಎಂದು ಮೂರ್ಛಿತಳಾಗಿ ಕೆಳಗೆ ಬಿದ್ದಳು.

01118024a ತಾಂ ಪ್ರೇಕ್ಷ್ಯ ಪತಿತಾಮಾರ್ತಾಂ ಪೌರಜಾನಪದೋ ಜನಃ।
01118024c ರುರೋದ ಸಸ್ವನಂ ಸರ್ವೋ ರಾಜಭಕ್ತ್ಯಾ ಕೃಪಾನ್ವಿತಃ।।

ಕೆಳಗೆ ಬಿದ್ದ ತಾಯಿಯನ್ನು ನೋಡಿದ ನಗರ ಗ್ರಾಮೀಣಪ್ರದೇಶದ ಜನರೆಲ್ಲರೂ ರಾಜಭಕ್ತಿಯಲ್ಲಿ ಕೃಪಾನ್ವಿತರಾಗಿ ಒಂದೇ ಸ್ವರದಲ್ಲಿ ರೋದಿಸಿದರು.

01118025a ಕ್ಲಾಂತಾನೀವಾರ್ತನಾದೇನ ಸರ್ವಾಣಿ ಚ ವಿಚುಕ್ರುಶುಃ।
01118025c ಮಾನುಷೈಃ ಸಹ ಭೂತಾನಿ ತಿರ್ಯಗ್ಯೋನಿಗತಾನ್ಯಪಿ।।

ಮನುಷ್ಯರ ಈ ಆರ್ತನಾದದ ಜೊತೆಗೆ ವನ್ಯಮೃಗಗಳನ್ನೂ ಸೇರಿ ಸರ್ವ ಭೂತಗಳೂ ರೋದಿಸಿದವು.

01118026a ತಥಾ ಭೀಷ್ಮಃ ಶಾಂತನವೋ ವಿದುರಶ್ಚ ಮಹಾಮತಿಃ।
01118026c ಸರ್ವಶಃ ಕೌರವಾಶ್ಚೈವ ಪ್ರಾಣದನ್ಭೃಶದುಃಖಿತಾಃ।।

ಹಾಗೆಯೇ ಶಾಂತನವ ಭೀಷ್ಮನೂ ಮಹಾಮತಿ ವಿದುರನೂ ಮತ್ತು ಸರ್ವ ಕೌರವರೂ ದುಃಖಿತರಾಗಿ ರೋದಿಸಿದರು.

01118027a ತತೋ ಭೀಷ್ಮೋಽಥ ವಿದುರೋ ರಾಜಾ ಚ ಸಹ ಬಂಧುಭಿಃ।
01118027c ಉದಕಂ ಚಕ್ರಿರೇ ತಸ್ಯ ಸರ್ವಾಶ್ಚ ಕುರುಯೋಷಿತಃ।।

ನಂತರ ಭೀಷ್ಮ, ವಿದುರ ಮತ್ತು ರಾಜರು ಎಲ್ಲ ಕುರು ಸ್ತ್ರೀಯರು ಮತ್ತು ಇತರ ಬಂಧುಗಳನ್ನೊಡಗೂಡಿ ಉದಕವನ್ನಿತ್ತರು.

01118028a ಕೃತೋದಕಾಂಸ್ತಾನಾದಾಯ ಪಾಂಡವಾಂಶೋಕಕರ್ಶಿತಾನ್।
01118028c ಸರ್ವಾಃ ಪ್ರಕೃತಯೋ ರಾಜಂಶೋಚಂತ್ಯಃ ಪರ್ಯವಾರಯನ್।।

ಪಾಂಡವನಿಗಾಗಿ ಶೋಕಕರ್ಶಿತರಾದ ಸರ್ವ ಪ್ರಜೆಗಳೂ ಶೋಚಿಸುತ್ತಾ ಉದಕ ಕೊಡುವವರನ್ನು ಆವರಿಸಿದರು.

01118029a ಯಥೈವ ಪಾಂಡವಾ ಭೂಮೌ ಸುಷುಪುಃ ಸಹ ಬಾಂಧವೈಃ।
01118029c ತಥೈವ ನಾಗರಾ ರಾಜಂಶಿಶ್ಯಿರೇ ಬ್ರಾಹ್ಮಣಾದಯಃ।।

ರಾಜನ್! ಪಾಂಡವರು ತಮ್ಮ ಬಂಧುಗಳ ಸಮೇತ ನೆಲದ ಮೇಲೆಯೇ ಮಲಗಿದರು ಮತ್ತು ಅವರಂತೆ ಬ್ರಾಹ್ಮಣರೇ ಮೊದರಾದ ಇತರ ನಾಗರೀಕರೂ ಅಲ್ಲಿಯೇ ಮಲಗಿದರು.

01118030a ತದನಾನಂದಮಸ್ವಸ್ಥಮಾಕುಮಾರಮಹೃಷ್ಟವತ್।
01118030c ಬಭೂವ ಪಾಂಡವೈಃ ಸಾರ್ಧಂ ನಗರಂ ದ್ವಾದಶ ಕ್ಷಪಾಃ।।

ಹನ್ನೆರಡು ರಾತ್ರಿಗಳ ವರೆಗೆ ನಗರದ ಸಣ್ಣ ಬಾಲಕನವರೆಗೆ ಎಲ್ಲರೂ ದುಃಖ ಸಂತಪ್ತರಾಗಿ ಅಸ್ವಸ್ತರಾಗಿದ್ದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಪಾಂಡುದಾಹೇ ಅಷ್ಟಾದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಪಾಂಡುದಾಹ ಎನ್ನುವ ನೂರಾಹದಿನೆಂಟನೆಯ ಅಧ್ಯಾಯವು.

[^]: ಸಹಿತಃ ಎಂಬ ಪಾಠಾಂತರವಿದೆ (ನೀಲಕಂಠ).