ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸಂಭವ ಪರ್ವ
ಅಧ್ಯಾಯ 116
ಸಾರ
ಮಾದ್ರಿಯನ್ನು ಕೂಡಲು ಹೊರಟ ಪಾಂಡುವಿನ ಮರಣ (1-12). ಕುಂತಿಯು ಮಾದ್ರಿಯನ್ನು ನಿಂದಿಸುವುದು (13-22). ಕುಂತಿಯು ತಾನೇ ಪಾಂಡುವನ್ನು ಹಿಂಬಾಲಿಸಿ ಹೋಗುವುದಾಗಿ ಹೇಳಲು ಮಾದ್ರಿಯು ತಾನೇ ಹೋಗುವಳೆಂದು ಹಠಹಿಡಿದು ಪಾಂಡುವಿನ ಚಿತವನ್ನೇರಿದುದು (23-31).
01116001 ವೈಶಂಪಾಯನ ಉವಾಚ।
01116001a ದರ್ಶನೀಯಾಂಸ್ತತಃ ಪುತ್ರಾನ್ಪಾಂಡುಃ ಪಂಚ ಮಹಾವನೇ।
01116001c ತಾನ್ಪಶ್ಯನ್ಪರ್ವತೇ ರೇಮೇ ಸ್ವಬಾಹುಬಲಪಾಲಿತಾನ್।।
ವೈಶಂಪಾಯನನು ಹೇಳಿದನು: “ತನ್ನ ಐವರು ಸುಂದರ ಪುತ್ರರು ಆ ಪರ್ವತದ ಮಹಾವನದಲ್ಲಿ ಬಾಹುಬಲದಿಂದ ರಕ್ಷಿತರಾಗಿ ಬೆಳೆಯುತ್ತಿರುವುದನ್ನು ನೋಡಿದ ಪಾಂಡುವು ಅತ್ಯಂತ ಹರ್ಷಿತನಾದನು.
01116002a ಸುಪುಷ್ಪಿತವನೇ ಕಾಲೇ ಕದಾ ಚಿನ್ಮಧುಮಾಧವೇ।
01116002c ಭೂತಸಮ್ಮೋಹನೇ ರಾಜಾ ಸಭಾರ್ಯೋ ವ್ಯಚರದ್ವನಂ।।
ಒಮ್ಮೆ ಎಲ್ಲ ಜೀವಿಗಳೂ ಸಮ್ಮೋಹನಗೊಂಡಿರುವ, ವನವೆಲ್ಲ ಪುಷ್ಪಭರಿತ ಕಾಲ ಮಧುಮಾಸದಲ್ಲಿ ರಾಜನು ತನ್ನ ಪತ್ನಿಯರೊಂದಿಗೆ ವನದಲ್ಲಿ ಸಂಚರಿಸುತ್ತಿದ್ದನು.
01116003a ಪಲಾಶೈಸ್ತಿಲಕೈಶ್ಚೂತೈಶ್ಚಂಪಕೈಃ ಪಾರಿಭದ್ರಕೈಃ।
01116003c ಅನ್ಯೈಶ್ಚ ಬಹುಭಿರ್ವೃಕ್ಷೈಃ ಫಲಪುಷ್ಪಸಮೃದ್ಧಿಭಿಃ।।
01116004a ಜಲಸ್ಥಾನೈಶ್ಚ ವಿವಿಧೈಃ ಪದ್ಮಿನೀಭಿಶ್ಚ ಶೋಭಿತಂ।
01116004c ಪಾಂಡೋರ್ವನಂ ತು ಸಂಪ್ರೇಕ್ಷ್ಯ ಪ್ರಜಜ್ಞೇ ಹೃದಿ ಮನ್ಮಥಃ।।
ಪಲಾಶ, ತಿಲಕ, ಚೂತ, ಚಂಪಕ, ಪಾರಿಭದ್ರಕ ಮತ್ತು ಇತರ ಬಹು ವೃಕ್ಷಗಳಿಂದ ಫಲಪುಷ್ಪಸಮೃದ್ಧವಾದ, ವಿವಿಧ ಜಲಸ್ಥಾನಗಳಿಂದೊಡಗೂಡಿದ, ಶೋಭನೀಯ ಪದ್ಮಿನಿಗಳಿಂದೊಡಗೂಡಿದ ಆ ವನವನ್ನು ಕಂಡ ಪಾಂಡುವಿನ ಹೃದಯದಲ್ಲಿ ಕಾಮವು ಬೆಳೆಯಿತು.
01116005a ಪ್ರಹೃಷ್ಟಮನಸಂ ತತ್ರ ವಿಹರಂತಂ ಯಥಾಮರಂ।
01116005c ತಂ ಮಾದ್ರ್ಯನುಜಗಾಮೈಕಾ ವಸನಂ ಬಿಭ್ರತೀ ಶುಭಂ।।
ಅಮರನಂತೆ ಪ್ರಹೃಷ್ಟಮನಸ್ಕನಾಗಿ ಅಲ್ಲಿ ವಿಹರಿಸುತ್ತಿರುವ ಅವನನ್ನು ಒಂದೇ ಒಂದು ತುಂಡು ಬಟ್ಟೆಯನ್ನು ಉಟ್ಟ ಸುಂದರಿ ಮಾದ್ರಿಯು ಹಿಂಬಾಲಿಸಿದಳು.
01116006a ಸಮೀಕ್ಷಮಾಣಃ ಸ ತು ತಾಂ ವಯಃಸ್ಥಾಂ ತನುವಾಸಸಂ।
01116006c ತಸ್ಯ ಕಾಮಃ ಪ್ರವವೃಧೇ ಗಹನೇಽಗ್ನಿರಿವೋತ್ಥಿತಃ।।
ತನ್ನ ಆ ಸುಂದರ ದೇಹವನ್ನು ಚಿಕ್ಕ ವಸ್ತ್ರದಿಂದ ಮುಚ್ಚಿಕೊಂಡಿದ್ದ ಅವಳನ್ನು ನೋಡಿ ಅವನಲ್ಲಿ ದಟ್ಟ ಅಗ್ನಿಯಂತೆ ಕಾಮವು ಭುಗಿಲೆದ್ದಿತು.
01116007a ರಹಸ್ಯಾತ್ಮಸಮಾಂ ದೃಷ್ಟ್ವಾ ರಾಜಾ ರಾಜೀವಲೋಚನಾಂ।
01116007c ನ ಶಶಾಕ ನಿಯಂತುಂ ತಂ ಕಾಮಂ ಕಾಮಬಲಾತ್ಕೃತಃ।।
ತನ್ನಹಾಗಿನ ಯೋಚನೆಯಲ್ಲಿಯೇ ಇದ್ದ ಆ ರಾಜೀವಲೋಚನೆಯನ್ನು ನೋಡಿದ ರಾಜನು ತನ್ನ ಕಾಮವನ್ನು ನಿಯಂತ್ರಿಸಲು ಅಸಮರ್ಥನಾಗಲು ಕಾಮ ಬಲವು ಅವನನ್ನು ಆವರಿಸಿತು.
01116008a ತತ ಏನಾಂ ಬಲಾದ್ರಾಜಾ ನಿಜಗ್ರಾಹ ರಹೋಗತಾಂ।
01116008c ವಾರ್ಯಮಾಣಸ್ತಯಾ ದೇವ್ಯಾ ವಿಸ್ಫುರಂತ್ಯಾ ಯಥಾಬಲಂ।।
ಆ ನಿರ್ಜನ ವನದಲ್ಲಿ ರಾಜನು ತನ್ನ ಪತ್ನಿಯನ್ನು ಬಲವಂತವಾಗಿ ಹಿಡಿದು, ಆ ದೇವಿಯು ತನ್ನ ಶಕ್ತಿಯನ್ನು ಬಳಸಿ ಬಿಡಿಸಿಕೊಂಡು ನುಣುಚಿ ಹೋಗಲು ಪ್ರಯತ್ನಿಸಿದರೂ, ಸೇರಿದನು.
01116009a ಸ ತು ಕಾಮಪರೀತಾತ್ಮಾ ತಂ ಶಾಪಂ ನಾನ್ವಬುಧ್ಯತ।
01116009c ಮಾದ್ರೀಂ ಮೈಥುನಧರ್ಮೇಣ ಗಚ್ಛಮಾನೋ ಬಲಾದಿವ।।
ಆ ಕಾಮಪರೀತಾತ್ಮನು ತನ್ನ ಮೇಲಿದ್ದ ಶಾಪವನ್ನು ಮರೆತು ಬಲವಂತವಾಗಿ ಮಾದ್ರಿಯನ್ನು ಸೇರಲು ಹೋದನು.
01116010a ಜೀವಿತಾಂತಾಯ ಕೌರವ್ಯೋ ಮನ್ಮಥಸ್ಯ ವಶಂ ಗತಃ।
01116010c ಶಾಪಜಂ ಭಯಮುತ್ಸೃಜ್ಯ ಜಗಾಮೈವ ಬಲಾತ್ಪ್ರಿಯಾಂ।।
01116011a ತಸ್ಯ ಕಾಮಾತ್ಮನೋ ಬುದ್ಧಿಃ ಸಾಕ್ಷಾತ್ಕಾಲೇನ ಮೋಹಿತಾ।
01116011c ಸಂಪ್ರಮಥ್ಯೇಂದ್ರಿಯಗ್ರಾಮಂ ಪ್ರನಷ್ಟಾ ಸಹ ಚೇತಸಾ।।
ಶಾಪದಿಂದುಂಟಾದ ಭಯವನ್ನು ಕಿತ್ತು ಬಿಸುಟು, ಮನ್ಮಥನ ವಶನಾಗಿ ತನ್ನ ಜೀವನವನ್ನೇ ಅಂತ್ಯಗೊಳಿಸಿಕೊಳ್ಳುವ ಕೌರವ್ಯನು ತನ್ನ ಪ್ರೇಮಿಕೆಯಲ್ಲಿ ಬಲವಂತವಾಗಿ ಹೋದನು. ಆ ಕಾಮಾತ್ಮನ ಬುದ್ಧಿಯು ಸಾಕ್ಷಾತ್ ಕಾಲದಿಂದ ಮೋಹಿತವಾಗಿತ್ತು. ಇಂದ್ರಿಯಗಳಿಂದ ಕಡೆಯಲ್ಪಟ್ಟ ಅವನ ಚೇತನವು ಅಲ್ಲಿಯೇ ನಷ್ಟವಾಯಿತು.
01116012a ಸ ತಯಾ ಸಹ ಸಂಗಮ್ಯ ಭಾರ್ಯಯಾ ಕುರುನಂದನ।
01116012c ಪಾಂಡುಃ ಪರಮಧರ್ಮಾತ್ಮಾ ಯುಯುಜೇ ಕಾಲಧರ್ಮಣಾ।।
ಪರಮ ಧರ್ಮಾತ್ಮ ಕುರುನಂದನ ಪಾಂಡುವು ತನ್ನ ಭಾರ್ಯೆಯನ್ನು ಕೂಡಿ ಕಾಲಧರ್ಮಕ್ಕೊಳಗಾದನು.
01116013a ತತೋ ಮಾದ್ರೀ ಸಮಾಲಿಂಗ್ಯ ರಾಜಾನಂ ಗತಚೇತಸಂ।
01116013c ಮುಮೋಚ ದುಃಖಜಂ ಶಬ್ಧಂ ಪುನಃ ಪುನರತೀವ ಹ।।
ತೀರಿಕೊಂಡ ರಾಜನ ದೇಹವನ್ನು ಆಲಿಂಗಿಸಿ ಮಾದ್ರಿಯು ಪುನಃ ಪುನಃ ದುಃಖಪೂರ್ಣ ಕೂಗನ್ನು ಕೂಗಿದಳು.
01116014a ಸಹ ಪುತ್ರೈಸ್ತತಃ ಕುಂತೀ ಮಾದ್ರೀಪುತ್ರೌ ಚ ಪಾಂಡವೌ।
01116014c ಆಜಗ್ಮುಃ ಸಹಿತಾಸ್ತತ್ರ ಯತ್ರ ರಾಜಾ ತಥಾಗತಃ।।
ತಕ್ಷಣವೇ ಕುಂತಿಯು ತನ್ನ ಪುತ್ರ ಪಾಂಡವರು ಮತ್ತು ಮಾದ್ರಿಯ ಎರಡು ಮಕ್ಕಳನ್ನೊಡಗೂಡಿ ರಾಜನು ತೀರಿಕೊಂಡಿದ್ದ ಸ್ಥಳಕ್ಕೆ ಧಾವಿಸಿದಳು.
01116015a ತತೋ ಮಾದ್ರ್ಯಬ್ರವೀದ್ರಾಜನ್ನಾರ್ತಾ ಕುಂತೀಮಿದಂ ವಚಃ।
01116015c ಏಕೈವ ತ್ವಮಿಹಾಗಚ್ಛ ತಿಷ್ಠಂತ್ವತ್ರೈವ ದಾರಕಾಃ।।
ರಾಜನ್! ಆಗ ಆರ್ತ ಮಾದ್ರಿಯು ಕುಂತಿಗೆ ಕೂಗಿ ಹೇಳಿದಳು: “ಮಕ್ಕಳನ್ನು ಅಲ್ಲಿಯೇ ನಿಲ್ಲಿಸಿ ನೀನೊಬ್ಬಳೇ ಇಲ್ಲಿಗೆ ಬಾ!”
01116016a ತಚ್ಛೃತ್ವಾ ವಚನಂ ತಸ್ಯಾಸ್ತತ್ರೈವಾವಾರ್ಯ ದಾರಕಾನ್।
01116016c ಹತಾಹಮಿತಿ ವಿಕ್ರುಶ್ಯ ಸಹಸೋಪಜಗಾಮ ಹ।।
ಈ ಮಾತುಗಳನ್ನು ಕೇಳಿದ ಅವಳು ಮಕ್ಕಳನ್ನು ಅಲ್ಲಿಯೇ ಬಿಟ್ಟು “ಹತಳಾದೆ!””ಎಂದು ತೀವ್ರವಾಗಿ ಕೂಗುತ್ತಾ ಹತ್ತಿರಕ್ಕೆ ಓಡಿ ಬಂದಳು.
01116017a ದೃಷ್ಟ್ವಾ ಪಾಂಡುಂ ಚ ಮಾದ್ರೀಂ ಚ ಶಯಾನೌ ಧರಣೀತಲೇ।
01116017c ಕುಂತೀ ಶೋಕಪರೀತಾಂಗೀ ವಿಲಲಾಪ ಸುದುಃಖಿತಾ।।
ಧರಣೀತಲದಲ್ಲಿ ಮಲಗಿದ್ದ ಪಾಂಡು ಮತ್ತು ಮಾದ್ರಿಯನ್ನು ನೋಡಿದ ಕುಂತಿಯು ಶೋಕಪರೀತಾಂಗಿಯಾಗಿ ದುಃಖಿತಳಾಗಿ ವಿಲಪಿಸಿದಳು:
01116018a ರಕ್ಷ್ಯಮಾಣೋ ಮಯಾ ನಿತ್ಯಂ ವೀರಃ ಸತತಮಾತ್ಮವಾನ್।
01116018c ಕಥಂ ತ್ವಮಭ್ಯತಿಕ್ರಾಂತಃ ಶಾಪಂ ಜಾನನ್ವನೌಕಸಃ।।
“ನಾನು ನಿತ್ಯವೂ ಈ ವೀರನನ್ನು ರಕ್ಷಿಸುತ್ತಿದ್ದೆ ಮತ್ತು ಅವನೂ ಕೂಡ ಸತತವೂ ತನ್ನನ್ನು ತಾನೇ ನಿಯಂತ್ರಣದಲ್ಲಿಟ್ಟುಕೊಳ್ಳುತ್ತಿದ್ದ. ಹಾಗಿರುವಾಗ, ವನವಾಸಿಯ ಶಾಪವನ್ನು ತಿಳಿದೂ ಕೂಡ ನೀನು ಹೇಗೆ ಅವನನ್ನು ಅತಿಕ್ರಮಿಸಿದೆ?
01116019a ನನು ನಾಮ ತ್ವಯಾ ಮಾದ್ರಿ ರಕ್ಷಿತವ್ಯೋ ಜನಾಧಿಪಃ।
01116019c ಸಾ ಕಥಂ ಲೋಭಿತವತೀ ವಿಜನೇ ತ್ವಂ ನರಾಧಿಪಂ।।
ಮಾದ್ರಿ! ಜನಾಧಿಪನನ್ನು ರಕ್ಷಿಸುವುದು ನಿನ್ನ ಕರ್ತವ್ಯವೂ ಆಗಿರಲಿಲ್ಲವೇ? ಹಾಗಿರುವಾಗ ನೀನು ಹೇಗೆ ಈ ನಿರ್ಜನವನದಲ್ಲಿ ನರಾಧಿಪನನ್ನು ಲೋಭಗೊಳಿಸಿದೆ?
01116020a ಕಥಂ ದೀನಸ್ಯ ಸತತಂ ತ್ವಾಮಾಸಾದ್ಯ ರಹೋಗತಾಂ।
01116020c ತಂ ವಿಚಿಂತಯತಃ ಶಾಪಂ ಪ್ರಹರ್ಷಃ ಸಮಜಾಯತ।।
ಮಾದ್ರಿ! ಜನಾಧಿಪನನ್ನು ರಕ್ಷಿಸುವುದು ನಿನ್ನ ಕರ್ತವ್ಯವೂ ಆಗಿರಲಿಲ್ಲವೇ? ಹಾಗಿರುವಾಗ ನೀನು ಹೇಗೆ ಈ ನಿರ್ಜನವನದಲ್ಲಿ ನರಾಧಿಪನನ್ನು ಲೋಭಗೊಳಿಸಿದೆ?
01116021a ಧನ್ಯಾ ತ್ವಮಸಿ ಬಾಹ್ಲೀಕಿ ಮತ್ತೋ ಭಾಗ್ಯತರಾ ತಥಾ।
01116021c ದೃಷ್ಟವತ್ಯಸಿ ಯದ್ವಕ್ತ್ರಂ ಪ್ರಹೃಷ್ಟಸ್ಯ ಮಹೀಪತೇಃ।।
ಬಾಹ್ಲೀಕಿ! ನೀನೇ ಧನ್ಯೆ ಮತ್ತು ನನಗಿಂತಲೂ ಭಾಗ್ಯವಂತೆ. ಮಹೀಪತಿಯ ಪ್ರಹೃಷ್ಟ ಮುಖವನ್ನು ನೋಡಿಯಾದರೂ ಸಂತಸಗೊಂಡೆ.”
01116022 ಮಾದ್ರ್ಯುವಾಚ।
01116022a ವಿಲೋಭ್ಯಮಾನೇನ ಮಯಾ ವಾರ್ಯಮಾಣೇನ ಚಾಸಕೃತ್।
01116022c ಆತ್ಮಾ ನ ವಾರಿತೋಽನೇನ ಸತ್ಯಂ ದಿಷ್ಟಂ ಚಿಕೀರ್ಷುಣಾ।।
ಮಾದ್ರಿಯು ಹೇಳಿದಳು: “ಅವನೇ ನನ್ನನ್ನು ಪ್ರಚೋದಿಸಿದನು. ನಾನು ಅವನನ್ನು ತಡೆಯಲು ಪುನಃ ಪುನಃ ಪ್ರಯತ್ನಿಸಿದೆ. ಆದರೆ ನಾನು ಅವನಿಂದ ದೂರವಾಗಿರಲು ಸಾದ್ಯವಾಗಲಿಲ್ಲ. ಅವನು ತನಗಿರುವ ಗಂಡಾಂತರವನ್ನು ಸತ್ಯಮಾಡಿಸಲೇ ತೊಡಗಿದ್ದನಂತಿದ್ದನು.”
01116023 ಕುಂತ್ಯುವಾಚ।
01116023a ಅಹಂ ಜ್ಯೇಷ್ಠಾ ಧರ್ಮಪತ್ನೀ ಜ್ಯೇಷ್ಠಂ ಧರ್ಮಫಲಂ ಮಮ।
01116023c ಅವಶ್ಯಂ ಭಾವಿನೋ ಭಾವಾನ್ಮಾ ಮಾಂ ಮಾದ್ರಿ ನಿವರ್ತಯ।।
ಕುಂತಿಯು ಹೇಳಿದಳು: “ನಾನು ಜ್ಯೇಷ್ಠ ಧರ್ಮಪತ್ನಿ ಮತ್ತು ನನಗೇ ಹೆಚ್ಚಿನ ದರ್ಮಫಲವು ದೊರೆಯಬೇಕು. ಅವಶ್ಯವಾಗಿ ಆಗಬೇಕಾದುದು ಆಗಲಿ. ಮಾದ್ರಿ! ನನ್ನನ್ನು ನೀನು ತಡೆಯಬೇಡ!
01116024a ಅನ್ವೇಷ್ಯಾಮೀಹ ಭರ್ತಾರಮಹಂ ಪ್ರೇತವಶಂ ಗತಂ।
01116024c ಉತ್ತಿಷ್ಠ ತ್ವಂ ವಿಸೃಜ್ಯೈನಮಿಮಾನ್ರಕ್ಷಸ್ವ ದಾರಕಾನ್।।
ನನ್ನ ಪ್ರೇತವಶ ಪತಿಯನ್ನು ಇಲ್ಲಿಯೇ ಹಿಂಬಾಲಿಸುತ್ತೇನೆ. ಅವನನ್ನು ಬಿಟ್ಟು ಮೇಲೇಳು. ಈ ಮಕ್ಕಳನ್ನು ನೋಡಿಕೋ.”
01116025 ಮಾದ್ರ್ಯುವಾಚ।
01116025a ಅಹಮೇವಾನುಯಾಸ್ಯಾಮಿ ಭರ್ತಾರಮಪಲಾಯಿನಂ।
01116025c ನ ಹಿ ತೃಪ್ತಾಸ್ಮಿ ಕಾಮಾನಾಂ ತಜ್ಜ್ಯೇಷ್ಠಾ ಅನುಮನ್ಯತಾಂ।।
ಮಾದ್ರಿಯು ಹೇಳಿದಳು: “ಇಲ್ಲ. ಅವನು ಹೋಗುವುದರೊಳಗಾಗಿ ನಾನೇ ನನ್ನ ಪತಿಯನ್ನು ಹಿಂಬಾಲಿಸುತ್ತೇನೆ. ಯಾಕೆಂದರೆ ನನ್ನ ಆಸೆಗಳು ಇನ್ನೂ ತೃಪ್ತವಾಗಿಲ್ಲ. ಹಿರಿಯವಳಾದ ನೀನು ನನಗೆ ಅನುಮತಿ ನೀಡಬೇಕು.
01116026a ಮಾಂ ಚಾಭಿಗಮ್ಯ ಕ್ಷೀಣೋಽಯಂ ಕಾಮಾದ್ಭರತಸತ್ತಮಃ।
01116026c ತಮುಚ್ಛಿಂದ್ಯಾಮಸ್ಯ ಕಾಮಂ ಕಥಂ ನು ಯಮಸಾದನೇ।।
ನನ್ನೊಡನೆ ಮಲಗಿರುವಾಗ ಈ ಭರತಸತ್ತಮನ ಕಾಮಕ್ಷೀಣವಾಯಿತು. ಹಾಗಿರುವಾಗ ಯಮಸದನದಲ್ಲಿ ಅವನ ಕಾಮವನ್ನು ನಾನು ಹೇಗೆ ತಾನೆ ಪೂರೈಸದೇ ಇರಲಿ?
01116027a ನ ಚಾಪ್ಯಹಂ ವರ್ತಯಂತೀ ನಿರ್ವಿಶೇಷಂ ಸುತೇಷು ತೇ।
01116027c ವೃತ್ತಿಮಾರ್ಯೇ ಚರಿಷ್ಯಾಮಿ ಸ್ಪೃಶೇದೇನಸ್ತಥಾ ಹಿ ಮಾಂ।।
ನಾನು ಜೀವಂತವಿದ್ದರೂ ನನ್ನ ಮತ್ತು ನಿನ್ನ ಮಕ್ಕಳನ್ನು ಒಂದೇ ಸಮನಾಗಿ ನೋಡಿಕೊಳ್ಳಲಾರೆ. ಅದರಿಂದಲೂ ನನಗೆ ಪಾಪವು ಬಾರದೇ ಇರುವುದಿಲ್ಲ.
01116028a ತಸ್ಮಾನ್ಮೇ ಸುತಯೋಃ ಕುಂತಿ ವರ್ತಿತವ್ಯಂ ಸ್ವಪುತ್ರವತ್।
01116028c ಮಾಂ ಹಿ ಕಾಮಯಮಾನೋಽಯಂ ರಾಜಾ ಪ್ರೇತವಶಂ ಗತಃ।।
01116029a ರಾಜ್ಞಃ ಶರೀರೇಣ ಸಹ ಮಮಾಪೀದಂ ಕಲೇವರಂ।
01116029c ದಗ್ಧವ್ಯಂ ಸುಪ್ರತಿಚ್ಛನ್ನಮೇತದಾರ್ಯೇ ಪ್ರಿಯಂ ಕುರು।।
ಆದುದರಿಂದ ಕುಂತಿ! ನನ್ನ ಪುತ್ರರನ್ನು ನಿನ್ನ ಮಕ್ಕಳಂತೆಯೇ ನೋಡಿಕೋ. ನನ್ನನ್ನು ಬಯಸುತ್ತಲೇ ರಾಜನು ಪ್ರೇತವಶನಾದನು. ಆರ್ಯೆ! ನನ್ನನ್ನು ಇಷ್ಟೊಂದು ಚೆನ್ನಾಗಿ ಆವರಿಸಿರುವ ರಾಜನ ಶರೀರದ ಜೊತೆ ನನ್ನ ಈ ಶರೀರವನ್ನು ಸುಟ್ಟುಹಾಕಿ ನನಗೊಂದು ಒಳ್ಳೆಯ ಕಾರ್ಯವನ್ನು ಮಾಡಿಕೊಡು.
01116030a ದಾರಕೇಷ್ವಪ್ರಮತ್ತಾ ಚ ಭವೇಥಾಶ್ಚ ಹಿತಾ ಮಮ।
01116030c ಅತೋಽನ್ಯನ್ನ ಪ್ರಪಶ್ಯಾಮಿ ಸಂದೇಷ್ಟವ್ಯಂ ಹಿ ಕಿಂ ಚನ।।
ಮಕ್ಕಳನ್ನು ಸರಿಯಾಗಿ ನೋಡಿಕೋ. ನನ್ನ ಹಿತವನ್ನೇ ಚಿಂತಿಸು. ನಿನ್ನನ್ನು ನಿಂದಿಸುವ ಕಾರಣವೇನೂ ನನಗೆ ತೋರುತ್ತಿಲ್ಲ.””
01116031 ವೈಶಂಪಾಯನ ಉವಾಚ।
01116031a ಇತ್ಯುಕ್ತ್ವಾ ತಂ ಚಿತಾಗ್ನಿಸ್ಥಂ ಧರ್ಮಪತ್ನೀ ನರರ್ಷಭಂ।
01116031c ಮದ್ರರಾಜಾತ್ಮಜಾ ತೂರ್ಣಮನ್ವಾರೋಹದ್ಯಶಸ್ವಿನೀ।।
ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ನರರ್ಷಭನ ಆ ಧರ್ಮಪತ್ನಿ, ಮದ್ರರಾಜನ ಮಗಳು ಯಶಸ್ವಿನಿಯು ಕೂಡಲೇ ಅವನ ಚಿತಾಗ್ನಿಯನ್ನು ಏರಿದಳು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಪಾಂಡೂಪರಮೇ ಶೋಡಷಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಪಾಂಡೂಪರಮ ಎನ್ನುವ ನೂರಾಹದಿನಾರನೆಯ ಅಧ್ಯಾಯವು.
[^]: ಸಹಿತಃ ಎಂಬ ಪಾಠಾಂತರವಿದೆ (ನೀಲಕಂಠ).