115 ಪಾಂಡವೋತ್ಪತ್ತಿಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 115

ಸಾರ

ತನಗೆ ಮಕ್ಕಳಿಲ್ಲವೆಂದು ಮಾದ್ರಿಯು ದುಃಖಿಸಿ, ಈ ವಿಷಯದಲ್ಲಿ ಸಹಾಯುಮಾಡಲು ಕುಂತಿಗೆ ಹೇಳಿ ತಯಾರಿಸಬೇಕೆಂದು ಪಾಂಡುವಿನಲ್ಲಿ ಕೇಳಿಕೊಳ್ಳುವುದು (1-6). ಒಪ್ಪಿ ಪಾಂಡುವು ಮಾದ್ರಿಗೂ ಮಕ್ಕಳನ್ನು ನೀಡಬೇಕೆಂದು ಕುಂತಿಯಲ್ಲಿ ಕೇಳಿಕೊಳ್ಳುವುದು (7-14). ಕುಂತಿಯು ಯಾವುದಾದರೂ ದೇವತೆಯನ್ನು ಒಮ್ಮೆ ಮಾತ್ರ ಯೋಚಿಸೆಂದು ಹೇಳಿ ಮಂತ್ರವನ್ನು ನೀಡಲು ವಿಚಾರಮಾಡಿ ಮಾದ್ರಿಯು ಅಶ್ವಿನೀ ದೇವತೆಗಳಿಂದ ಅವಳಿ ಮಕ್ಕಳು ನಕುಲ ಸಹದೇವರನ್ನು ಪಡೆಯುವುದು (15-21). ಪಾಂಡುವು ಮಾದ್ರಿಯ ಪರವಾಗಿ ಪುನಃ ಕುಂತಿಯಲ್ಲಿ ಕೇಳಲು ಮಾದ್ರಿಯು ವಂಚಿಸಿ ತನ್ನನ್ನು ಹಿಂದೆಹಾಕಬಹುದೆಂಬ ಭಯದಿಂದ ಮಂತ್ರವನ್ನು ನಿರಾಕರಿಸಿದ್ದುದು (22-28).

01115001 ವೈಶಂಪಾಯನ ಉವಾಚ।
01115001a ಕುಂತೀಪುತ್ರೇಷು ಜಾತೇಷು ಧೃತರಾಷ್ಟ್ರಾತ್ಮಜೇಷು ಚ।
01115001c ಮದ್ರರಾಜಸುತಾ ಪಾಂಡುಂ ರಹೋ ವಚನಮಬ್ರವೀತ್।।

ವೈಶಂಪಾಯನನು ಹೇಳಿದನು: “ಕುಂತೀ ಪುತ್ರರು ಮತ್ತು ಧೃತರಾಷ್ಟ್ರಾತ್ಮಜರು ಹುಟ್ಟಿದ ನಂತರ ಮದ್ರರಾಜ ಸುತೆಯು ಏಕಾಂತದಲ್ಲಿ ಪಾಂಡುವಿಗೆ ಈ ಮಾತುಗಳನ್ನು ಹೇಳಿದಳು:

01115002a ನ ಮೇಽಸ್ತಿ ತ್ವಯಿ ಸಂತಾಪೋ ವಿಗುಣೇಽಪಿ ಪರಂತಪ।
01115002c ನಾವರತ್ವೇ ವರಾರ್ಹಾಯಾಃ ಸ್ಥಿತ್ವಾ ಚಾನಘ ನಿತ್ಯದಾ।।

“ಪರಂತಪ! ಅನಘ! ನೀನು ನನ್ನೊಡನೆ ಒಳ್ಳೆಯದಾಗಿ ನಡೆದುಕೊಳ್ಳುತ್ತಿಲ್ಲ ಎಂದಾಗಲೀ ಅಥವಾ ನಾನು ನಿತ್ಯವೂ ನಿನ್ನ ಮೊದಲನೆಯ ಪತ್ನಿಯ ಕೆಳಸ್ಥಾನವನ್ನು ಹೊಂದಿದ್ದೇನೆ ಎಂದಾಗಲೀ ದುಃಖಿಸುತ್ತಿಲ್ಲ.

01115003a ಗಾಂಧಾರ್ಯಾಶ್ಚೈವ ನೃಪತೇ ಜಾತಂ ಪುತ್ರಶತಂ ತಥಾ।
01115003c ಶ್ರುತ್ವಾ ನ ಮೇ ತಥಾ ದುಃಖಮಭವತ್ಕುರುನಂದನ।।

ನೃಪತಿ! ಕುರುನಂದನ! ಗಾಂಧಾರಿಯೂ ಕೂಡ ನೂರು ಪುತ್ರರನ್ನು ಪಡೆದಳೆಂದು ಕೇಳಿಯೂ ನನಗೆ ದುಃಖವಾಗುತ್ತಿಲ್ಲ.

01115004a ಇದಂ ತು ಮೇ ಮಹದ್ದುಃಖಂ ತುಲ್ಯತಾಯಾಮಪುತ್ರತಾ।
01115004c ದಿಷ್ಟ್ಯಾ ತ್ವಿದಾನೀಂ ಭರ್ತುರ್ಮೇ ಕುಂತ್ಯಾಮಪ್ಯಸ್ತಿ ಸಂತತಿಃ।।

ಆದರೆ ನಾನು ಮತ್ತು ಕುಂತಿ ಇಬ್ಬರಿಗೂ ಮಕ್ಕಳಾಗದಂತಿದ್ದರೂ ನೀನು ಅವಳೊಬ್ಬಳಿಂದ ಮಾತ್ರ ಮಕ್ಕಳನ್ನು ಪಡೆಯುವ ಹಾಗೆ ಆಯಿತಲ್ಲ ಎಂದು ಬಹಳ ದುಃಖವಾಗುತ್ತಿದೆ.

01115005a ಯದಿ ತ್ವಪತ್ಯಸಂತಾನಂ ಕುಂತಿರಾಜಸುತಾ ಮಯಿ।
01115005c ಕುರ್ಯಾದನುಗ್ರಹೋ ಮೇ ಸ್ಯಾತ್ತವ ಚಾಪಿ ಹಿತಂ ಭವೇತ್।।

ಕುಂತಿರಾಜಸುತೆಯು ನಾನು ಕೂಡ ಮಕ್ಕಳನ್ನು ಪಡೆಯುವಂತೆ ಮಾಡಿದರೆ ನನಗೆ ಅನುಗ್ರಹವಾದಂತಾಗುತ್ತದೆ ಮತ್ತು ನಿನಗೂ ಹಿತವಾಗುತ್ತದೆ.

01115006a ಸ್ತಂಭೋ ಹಿ ಮೇ ಸಪತ್ನೀತ್ವಾದ್ವಕ್ತುಂ ಕುಂತಿಸುತಾಂ ಪ್ರತಿ।
01115006c ಯದಿ ತು ತ್ವಂ ಪ್ರಸನ್ನೋ ಮೇ ಸ್ವಯಮೇನಾಂ ಪ್ರಚೋದಯ।।

ಅವಳ ಸಪತ್ನಿಯಾದ ನನಗೆ ಕುಂತಿಸುತೆಯಲ್ಲಿ ಈ ಮಾತುಗಳನ್ನು ಹೇಳಲು ಕಷ್ಟವಾಗುತ್ತಿದೆ. ಆದರೆ ನೀನು ನನ್ನ ಮೇಲೆ ಪ್ರಸನ್ನನಾಗಿದ್ದೀಯಾದರೆ ನೀನೇ ಅವಳಿಗೆ ಹೇಳಿ ತಯಾರಿಸು.”

01115007 ಪಾಂಡುರುವಾಚ।
01115007a ಮಮಾಪ್ಯೇಷ ಸದಾ ಮಾದ್ರಿ ಹೃದ್ಯರ್ಥಃ ಪರಿವರ್ತತೇ।
01115007c ನ ತು ತ್ವಾಂ ಪ್ರಸಹೇ ವಕ್ತುಮಿಷ್ಟಾನಿಷ್ಟವಿವಕ್ಷಯಾ।।

ಪಾಂಡುವು ಹೇಳಿದನು: “ಮಾದ್ರಿ! ನಾನೂ ಕೂಡ ಈ ವಿಷಯವನ್ನು ಸದಾ ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೆ. ನಿನಗೆ ಬೇಸರವಾಗಬಹುದೆಂದು ನಾನು ನಿನ್ನಲ್ಲಿ ಹೇಳಿಕೊಳ್ಳಲಾಗಲಿಲ್ಲ.

01115008a ತವ ತ್ವಿದಂ ಮತಂ ಜ್ಞಾತ್ವಾ ಪ್ರಯತಿಷ್ಯಾಮ್ಯತಃ ಪರಂ।
01115008c ಮನ್ಯೇ ಧ್ರುವಮ್ಮಯೋಕ್ತಾ ಸಾ ವಚೋ ಮೇ ಪ್ರತಿಪತ್ಸ್ಯತೇ।।

ಈಗ ನಿನ್ನ ಮನಸ್ಸಿನಲ್ಲಿರುವುದು ನನಗೆ ತಿಳಿದಿದೆಯಾದುದರಿಂದ ಈಗಲೇ ನಾನು ಕಾರ್ಯಗತನಾಗುತ್ತೇನೆ. ನನ್ನ ಮಾತಿನಂತೆಯೇ ಅವಳು ನಡೆಯುತ್ತಾಳೆ ಎಂದು ನನಗೆ ವಿಶ್ವಾಸವಿದೆ.””

01115009 ವೈಶಂಪಾಯನ ಉವಾಚ।
01115009a ತತಃ ಕುಂತೀಂ ಪುನಃ ಪಾಂಡುರ್ವಿವಿಕ್ತ ಇದಮಬ್ರವೀತ್।
01115009c ಕುಲಸ್ಯ ಮಮ ಸಂತಾನಂ ಲೋಕಸ್ಯ ಚ ಕುರು ಪ್ರಿಯಂ।।

ವೈಶಂಪಾಯನನು ಹೇಳಿದನು: “ನಂತರ ಪಾಂಡುವು ಏಕಾಂತದಲ್ಲಿದ್ದಾಗ ಕುಂತಿಯಲ್ಲಿ ಹೇಳಿದನು: “ನನ್ನ ಕುಲಕ್ಕೆ ಸಂತಾನವನ್ನೂ ಮತ್ತು ಲೋಕಕ್ಕೆ ಪ್ರಿಯವಾದುದನ್ನೂ ಮಾಡು.

01115010a ಮಮ ಚಾಪಿಂಡನಾಶಾಯ ಪೂರ್ವೇಷಾಮಪಿ ಚಾತ್ಮನಃ।
01115010c ಮತ್ಪ್ರಿಯಾರ್ಥಂ ಚ ಕಲ್ಯಾಣಿ ಕುರು ಕಲ್ಯಾಣಮುತ್ತಮಂ।।

ಕಲ್ಯಾಣಿ! ನಾನು ಮತ್ತು ನನ್ನ ಪೂರ್ವಜರು ಅಪಿಂಡರಾಗಬಾರದೆಂದು, ನನ್ನ ಪ್ರೀತಿಗೋಸ್ಕರ ಈ ಉತ್ತಮ ಕಲ್ಯಾಣ ಕಾರ್ಯವನ್ನು ಮಾಡು.

01115011a ಯಶಸೋಽರ್ಥಾಯ ಚೈವ ತ್ವಂ ಕುರು ಕರ್ಮ ಸುದುಷ್ಕರಂ।
01115011c ಪ್ರಾಪ್ಯಾಧಿಪತ್ಯಮಿಂದ್ರೇಣ ಯಜ್ಞೈರಿಷ್ಟಂ ಯಶೋರ್ಥಿನಾ।।

ನಿನ್ನ ಯಶಸ್ಸಿಗೋಸ್ಕರವೂ ಒಂದು ದುಷ್ಕರ ಕೆಲಸವನ್ನು ಮಾಡು. ಒಡೆತನವನ್ನು ಪಡೆದ ಇಂದ್ರನೂ ಕೂಡ ತನ್ನ ಯಶಸ್ಸಿಗೋಸ್ಕರ ಯಜ್ಞಗಳನ್ನು ಕೈಗೊಳ್ಳುತ್ತಾನೆ.

01115012a ತಥಾ ಮಂತ್ರವಿದೋ ವಿಪ್ರಾಸ್ತಪಸ್ತಪ್ತ್ವಾ ಸುದುಷ್ಕರಂ।
01115012c ಗುರೂನಭ್ಯುಪಗಚ್ಛಂತಿ ಯಶಸೋಽರ್ಥಾಯ ಭಾಮಿನಿ।।

ಭಾಮಿನಿ! ಹೀಗೆ ಮಂತ್ರಗಳನ್ನು ತಿಳಿದ ದುಷ್ಕರ ತಪಸ್ಸುಗಳನ್ನು ಗೈದ ವಿಪ್ರರೂ ಕೂಡ ತಮ್ಮ ಯಶಸ್ಸಿಗೋಸ್ಕರ ಹೊಸ ಗುರುಗಳನ್ನು ಅರಸಿ ಹೋಗುತ್ತಾರೆ.

01115013a ತಥಾ ರಾಜರ್ಷಯಃ ಸರ್ವೇ ಬ್ರಾಹ್ಮಣಾಶ್ಚ ತಪೋಧನಾಃ।
01115013c ಚಕ್ರುರುಚ್ಚಾವಚಂ ಕರ್ಮ ಯಶಸೋಽರ್ಥಾಯ ದುಷ್ಕರಂ।।

ಹಾಗೆಯೇ ಸರ್ವ ರಾಜರ್ಷಿಗಳೂ, ಬ್ರಾಹ್ಮಣರೂ, ತಪೋಧನರೂ ತಮ್ಮ ಯಶಸ್ಸಿಗೋಸ್ಕರ ಹೆಚ್ಚು ಹೆಚ್ಚು ಮೇಲ್ಮಟ್ಟದ ದುಷ್ಕರ ಕರ್ಮಗಳನ್ನು ಎಸಗುತ್ತಾರೆ.

01115014a ಸಾ ತ್ವಂ ಮಾದ್ರೀಂ ಪ್ಲವೇನೇವ ತಾರಯೇಮಾಮನಿಂದಿತೇ।
01115014c ಅಪತ್ಯಸಂವಿಭಾಗೇನ ಪರಾಂ ಕೀರ್ತಿಮವಾಪ್ನುಹಿ।।

ಅನಿಂದಿತೇ! ನೀನು ಮಾದ್ರಿಯನ್ನು ನಮ್ಮ ಈ ಹಡಗಿನಿಂದ ಪಾರುಮಾಡಿಸಬೇಕು. ಅವಳಿಗೆ ಮಕ್ಕಳನ್ನು ನೀಡುವುದರಿಂದ ನೀನು ಅತ್ಯಂತ ಕೀರ್ತಿಯನ್ನು ಪಡೆಯುತ್ತೀಯೆ.”

01115015a ಏವಮುಕ್ತಾಬ್ರವೀನ್ಮಾದ್ರೀಂ ಸಕೃಚ್ಚಿಂತಯ ದೈವತಂ।
01115015c ತಸ್ಮಾತ್ತೇ ಭವಿತಾಪತ್ಯಮನುರೂಪಮಸಂಶಯಂ।।

ತಕ್ಷಣವೇ ಅವಳು ಮಾದ್ರಿಯನ್ನು ಕರೆದು ಹೇಳಿದಳು: “ಮಾದ್ರಿ! ಯಾರಾದರೂ ದೇವತೆಯನ್ನು ಒಮ್ಮೆ ಮಾತ್ರ ಯೋಚಿಸು. ಅವನಿಂದ ಅನುರೂಪ ಪುತ್ರನನ್ನು ಪಡೆಯುತ್ತೀಯೆ. ಸಂಶಯವೇ ಇಲ್ಲ.”

01115016a ತತೋ ಮಾದ್ರೀ ವಿಚಾರ್ಯೈವ ಜಗಾಮ ಮನಸಾಶ್ವಿನೌ।
01115016c ತಾವಾಗಮ್ಯ ಸುತೌ ತಸ್ಯಾಂ ಜನಯಾಮಾಸತುರ್ಯಮೌ।।
01115017a ನಕುಲಂ ಸಹದೇವಂ ಚ ರೂಪೇಣಾಪ್ರತಿಮೌ ಭುವಿ।
01115017c ತಥೈವ ತಾವಪಿ ಯಮೌ ವಾಗುವಾಚಾಶರೀರಿಣೀ।।

ನಂತರ ಮಾದ್ರಿಯು ವಿಚಾರಮಾಡಿ ಮನಸಾ ಅಶ್ವಿನಿಯರಲ್ಲಿ ಹೋದಳು. ಅವರು ಬಂದು ಅವಳಲ್ಲಿ ರೂಪದಲ್ಲಿ ಭೂಮಿಯಲ್ಲಿಯೇ ಅಪ್ರತಿಮ ನಕುಲ ಸಹದೇವರೆಂಬ ಅವಳಿ ಮಕ್ಕಳನ್ನು ಹುಟ್ಟಿಸಿದರು. ಈ ಅವಳಿ ಮಕ್ಕಳು ಹುಟ್ಟಿದಾಗಲೂ ಅಶರೀರವಾಣಿಯೊಂದು ಹೇಳಿತು:

01115018a ರೂಪಸತ್ತ್ವಗುಣೋಪೇತಾವೇತಾವನ್ಯಾಂಜನಾನತಿ।
01115018c ಭಾಸತಸ್ತೇಜಸಾತ್ಯರ್ಥಂ ರೂಪದ್ರವಿಣಸಂಪದಾ।।

“ಅನ್ಯ ಜನರಿಗಿಂತ ಅಧಿಕ ರೂಪ ಸತ್ವ ಗುಣೋಪೇತರಾದ ಇವರು ಅವರ ತೇಜಸ್ಸು, ರೂಪ ಮತ್ತು ದ್ರವಿಣ ಸಂಪತ್ತಿನಿಂದ ಬೆಳಗುತ್ತಾರೆ!”

01115019a ನಾಮಾನಿ ಚಕ್ರಿರೇ ತೇಷಾಂ ಶತಶೃಂಗನಿವಾಸಿನಃ।
01115019c ಭಕ್ತ್ಯಾ ಚ ಕರ್ಮಣಾ ಚೈವ ತಥಾಶೀರ್ಭಿರ್ವಿಶಾಂ ಪತೇ।।

ವಿಶಾಂಪತೇ! ಶತಶೃಂಗವಾಸಿಗಳು ಅವರಿಗೆ ಹೆಸರುಗಳನ್ನಿತ್ತರು ಮತ್ತು ಭಕ್ತಿ ಕರ್ಮಗಳಿಂದ ಅಶೀರ್ವದಿಸಿದರು.

01115020a ಜ್ಯೇಷ್ಠಂ ಯುಧಿಷ್ಠಿರೇತ್ಯಾಹುರ್ಭೀಮಸೇನೇತಿ ಮಧ್ಯಮಂ।
01115020c ಅರ್ಜುನೇತಿ ತೃತೀಯಂ ಚ ಕುಂತೀಪುತ್ರಾನಕಲ್ಪಯನ್।।

ಜ್ಯೇಷ್ಠನನ್ನು ಯುಧಿಷ್ಠಿರನೆಂದು ಕರೆದರು, ಮಧ್ಯಮನನ್ನು ಭೀಮಸೇನ ಎಂದು, ತೃತೀಯನನ್ನು ಅರ್ಜುನನೆಂದೂ ಹೀಗೆ ಕುಂತೀ ಪುತ್ರರಿಗೆ ಹೆಸರುಗಳನ್ನಿಟ್ಟರು.

01115021a ಪೂರ್ವಜಂ ನಕುಲೇತ್ಯೇವಂ ಸಹದೇವೇತಿ ಚಾಪರಂ।
01115021c ಮಾದ್ರೀಪುತ್ರಾವಕಥಯಂಸ್ತೇ ವಿಪ್ರಾಃ ಪ್ರೀತಮಾನಸಾಃ।
01115021e ಅನುಸಂವತ್ಸರಂ ಜಾತಾ ಅಪಿ ತೇ ಕುರುಸತ್ತಮಾಃ।।

ಪ್ರೀತಮನಸ್ಕ ವಿಪ್ರರು ಮಾದ್ರೀಪುತ್ರರಿಗೂ ಹೆಸರುಗಳನ್ನಿಟ್ಟರು: ಹಿರಿಯವನನ್ನು ನಕುಲನೆಂದೂ ಮತ್ತು ಕಿರಿಯವನನ್ನು ಸಹದೇವನೆಂದೂ ಕರೆದರು. ಈ ಕುರುಸತ್ತಮರು ಒಂದೊಂದು ವರ್ಷದ ಅಂತರದಲ್ಲಿ ಹುಟ್ಟಿದ್ದರು.

01115022a ಕುಂತೀಮಥ ಪುನಃ ಪಾಂಡುರ್ಮಾದ್ರ್ಯರ್ಥೇ ಸಮಚೋದಯತ್।
01115022c ತಮುವಾಚ ಪೃಥಾ ರಾಜನ್ರಹಸ್ಯುಕ್ತಾ ಸತೀ ಸದಾ।।

ಪಾಂಡುವು ಮಾದ್ರಿಯ ಪರವಾಗಿ ಏಕಾಂತದಲ್ಲಿ ರಹಸ್ಯದಲ್ಲಿ ಕುಂತಿಯಲ್ಲಿ ಪುನಃ ಕೇಳಿಕೊಂಡನು. ಆದರೆ ಪೃಥಾಳು ರಾಜನಿಗೆ ಈ ರೀತಿ ಉತ್ತರಿಸಿದಳು:

01115023a ಉಕ್ತಾ ಸಕೃದ್ದ್ವಂದ್ವಮೇಷಾ ಲೇಭೇ ತೇನಾಸ್ಮಿ ವಂಚಿತಾ।
01115023c ಬಿಭೇಮ್ಯಸ್ಯಾಃ ಪರಿಭವಾನ್ನಾರೀಣಾಂ ಗತಿರೀದೃಶೀ।।

“ನಾನು ಅವಳಿಗೆ ಒಂದೇ ಬಾರಿ ಕೊಡುತ್ತೇನೆ ಎಂದರೂ ಅವಳು ಈರ್ವರನ್ನು ಪಡೆದು ನನಗೆ ವಂಚನೆ ಮಾಡಿದಳು. ನನ್ನನ್ನು ಹಿಂದೆಹಾಕುವಳು ಎಂಬ ಭಯವಿದೆ. ನಾರಿಯರ ಸ್ವಭಾವವೇ ಇದು.

01115024a ನಾಜ್ಞಾಸಿಷಮಹಂ ಮೂದಾ ದ್ವಂದ್ವಾಹ್ವಾನೇ ಫಲದ್ವಯಂ।
01115024c ತಸ್ಮಾನ್ನಾಹಂ ನಿಯೋಕ್ತವ್ಯಾ ತ್ವಯೈಷೋಽಸ್ತು ವರೋ ಮಮ।।

ಎರಡು ದೇವತೆಗಳನ್ನು ಕರೆದು ಎರಡು ಮಕ್ಕಳನ್ನು ಪಡೆಯಬಹುದೆಂದು ಮೂಢಳಾದ ನಾನು ತಿಳಿದಿರಲಿಲ್ಲ. ಆದುದರಿಂದ ಇದರ ಕುರಿತು ನನಗೆ ಪುನಃ ಅಪ್ಪಣೆಮಾಡಬೇಡ. ಇದೇ ನಿನ್ನಿಂದ ನನಗೆ ಬೇಕಾದ ವರ.”

01115025a ಏವಂ ಪಾಂಡೋಃ ಸುತಾಃ ಪಂಚ ದೇವದತ್ತಾ ಮಹಾಬಲಾಃ।
01115025c ಸಂಭೂತಾಃ ಕೀರ್ತಿಮಂತಸ್ತೇ ಕುರುವಂಶವಿವರ್ಧನಾಃ।।

ಈ ರೀತಿ ಮಹಾಬಲಶಾಲಿ, ಕುರುವಂಶವಿವರ್ಧನ, ಕೀರ್ತಿವಂತ, ದೇವದತ್ತ ಆ ಐವರು ಸುತರು ಪಾಂಡುವಿಗೆ ಜನಿಸಿದರು.

01115026a ಶುಭಲಕ್ಷಣಸಂಪನ್ನಾಃ ಸೋಮವತ್ಪ್ರಿಯದರ್ಶನಾಃ।
01115026c ಸಿಂಹದರ್ಪಾ ಮಹೇಷ್ವಾಸಾಃ ಸಿಂಹವಿಕ್ರಾಂತಗಾಮಿನಃ।
01115026e ಸಿಂಹಗ್ರೀವಾ ಮನುಷ್ಯೇಂದ್ರಾ ವವೃಧುರ್ದೇವವಿಕ್ರಮಾಃ।।

ಆ ಶುಭಲಕ್ಷಣಸಂಪನ್ನ, ಚಂದ್ರನಂತೆ ಸುಂದರ, ಸಿಂಹದರ್ಪ, ಮಹೇಷ್ವಾಸ, ಸಿಂಗವಿಕ್ರಾಂತಗಾಮಿ, ಸಿಂಹಗ್ರೀವ ಮನುಷ್ಯೇಂದ್ರರು ದೇವ ವಿಕ್ರಮಿಗಳಾಗಿ ಬೆಳೆದರು.

01115027a ವಿವರ್ಧಮಾನಾಸ್ತೇ ತತ್ರ ಪುಣ್ಯೇ ಹೈಮವತೇ ಗಿರೌ।
01115027c ವಿಸ್ಮಯಂ ಜನಯಾಮಾಸುರ್ಮಹರ್ಷೀಣಾಂ ಸಮೇಯುಷಾಂ।।

ಆ ಪುಣ್ಯಕರ ಹಿಮಾಲಯ ಪರ್ವತದಲ್ಲಿ ಬೆಳೆಯುತ್ತಿರುವ ಅವರು ಅಲ್ಲಿ ಸೇರಿದ್ದ ಮಹರ್ಷಿಗಳಿಗೆ ವಿಸ್ಮಯವನ್ನುಂಟುಮಾಡಿದರು.

01115028a ತೇ ಚ ಪಂಚ ಶತಂ ಚೈವ ಕುರುವಂಶವಿವರ್ಧನಾಃ।
01115028c ಸರ್ವೇ ವವೃಧುರಲ್ಪೇನ ಕಾಲೇನಾಪ್ಸ್ವಿವ ನೀರಜಾಃ।।

ಈ ಐವರು ಮತ್ತು ಇತರ ನೂರು ಗುರುವಂಶವಿವರ್ಧನ ಸರ್ವರೂ ಸರೋವರದಲ್ಲಿದ್ದ ಕಮಲಗಳಂತೆ ಸ್ವಲ್ಪ ಕಾಲದಲ್ಲಿಯೇ ಬೆಳೆದು ದೊಡ್ಡವರಾದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಪಾಂಡವೋತ್ಪತ್ತೌ ಪಂಚದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಪಾಂಡವೋತ್ಪತ್ತಿ ಎನ್ನುವ ನೂರಾಹದಿನೈದನೆಯ ಅಧ್ಯಾಯವು.