ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸಂಭವ ಪರ್ವ
ಅಧ್ಯಾಯ 114
ಸಾರ
ಗಾಂಧಾರಿಯು ಒಂದುವರ್ಷ ಗರ್ಭಿಣಿಯಾಗಿರುವಾಗ ಕುಂತಿಯು ಧರ್ಮನಿಂದ ಯುಧಿಷ್ಠಿರನನ್ನು ಪಡೆದುದು, ಅಶರೀರವಾಣಿ (1-7). ದುರ್ಯೋಧನನು ಹುಟ್ಟಿದ ದಿನದಂದೇ ಕುಂತಿಯಲ್ಲಿ ವಾಯುವಿನಿಂದ ಭೀಮಸೇನನ ಜನನ, ಅಶರೀರವಾಣಿ (8-14). ಪಾಂಡುವು ಇಂದ್ರನ ಕುರಿತು ತಪಸ್ಸನ್ನಾಚರಿಸಿ ಅವನಿಂದ ಶ್ರೇಷ್ಠ ಮಗನನ್ನು ಕೊಡುತ್ತೇನೆ ಎಂಬ ವರವನ್ನು ಪಡೆಯುವುದು (15-22). ಇಂದ್ರನಿಂದ ಕುಂತಿಯಲ್ಲಿ ಅರ್ಜುನನ ಜನನ, ಅಶರೀರವಾಣಿ (23-37). ಅರ್ಜುನನ ಜನನದಿಂದಾದ ಪರಮ ಹರ್ಷ (38-63). ಇನ್ನೂ ಅಧಿಕ ಮಕ್ಕಳನ್ನು ಬಯಸಿದ ಪಾಂಡುವಿಗೆ ಕುಂತಿಯು ನಿರಾಕರಿಸಿದ್ದುದು (64-66).
01114001 ವೈಶಂಪಾಯನ ಉವಾಚ।
01114001a ಸಂವತ್ಸರಾಹಿತೇ ಗರ್ಭೇ ಗಾಂಧಾರ್ಯಾ ಜನಮೇಜಯ।
01114001c ಆಹ್ವಯಾಮಾಸ ವೈ ಕುಂತೀ ಗರ್ಭಾರ್ಥಂ ಧರ್ಮಮಚ್ಯುತಂ।।
ವೈಶಂಪಾಯನನು ಹೇಳಿದನು: “ಜನಮೇಜಯ! ಗಾಂಧಾರಿಯು ಒಂದು ವರ್ಷದ ಗರ್ಭಿಣಿಯಾಗಿರುವಾಗ ಕುಂತಿಯು ಗರ್ಭಕ್ಕಾಗಿ ಅಚ್ಯುತ ಧರ್ಮನನ್ನು ಆಹ್ವಾನಿಸಿದಳು.
01114002a ಸಾ ಬಲಿಂ ತ್ವರಿತಾ ದೇವೀ ಧರ್ಮಾಯೋಪಜಹಾರ ಹ।
01114002c ಜಜಾಪ ಜಪ್ಯಂ ವಿಧಿವದ್ದತ್ತಂ ದುರ್ವಾಸಸಾ ಪುರಾ।।
ಆ ದೇವಿಯು ಕೂಡಲೇ ಬಲಿಗಳನ್ನಿತ್ತು ಧರ್ಮನನ್ನು ಪೂಜಿಸಿ ಹಿಂದೆ ದುರ್ವಾಸನು ಕೊಟ್ಟಿದ್ದ ಜಪವನ್ನು ವಿಧಿವತ್ತಾಗಿ ಜಪಿಸಿದಳು.
01114003a ಸಂಗಮ್ಯ ಸಾ ತು ಧರ್ಮೇಣ ಯೋಗಮೂರ್ತಿಧರೇಣ ವೈ।
01114003c ಲೇಭೇ ಪುತ್ರಂ ವರಾರೋಹಾ ಸರ್ವಪ್ರಾಣಭೃತಾಂ ವರಂ।।
01114004a ಐಂದ್ರೇ ಚಂದ್ರಸಮಾಯುಕ್ತೇ ಮುಹೂರ್ತೇಽಭಿಜಿತೇಽಷ್ಟಮೇ।
01114004c ದಿವಾ ಮಧ್ಯಗತೇ ಸೂರ್ಯೇ ತಿಥೌ ಪುಣ್ಯೇಽಭಿಪೂಜಿತೇ।।
ಯೋಗಮೂರ್ತಿಧರ ಧರ್ಮನನ್ನು ಸೇರಿ ಆ ವರಾರೋಹೆಯು ಪುಣ್ಯೋಭಿಪೂಜಿತ ಶುಕ್ಲಪಕ್ಷ ಅಷ್ಟಮಿ ತಿಥಿಯಲ್ಲಿ ಆಕಾಶದಲ್ಲಿ ಸೂರ್ಯನು ಮಧ್ಯಗತಿಯ ಅಭಿಜಿತ್ ಮುಹೂರ್ತದಲ್ಲಿರುವಾಗ ಇಂದ್ರನ ದಿನದಂದು ಉಸಿರಾಡುವ ಎಲ್ಲ ಜೀವಿಗಳಲ್ಲಿಯೂ ಶ್ರೇಷ್ಠ ಪುತ್ರನನ್ನು ಪಡೆದಳು.
01114005a ಸಮೃದ್ಧಯಶಸಂ ಕುಂತೀ ಸುಷಾವ ಸಮಯೇ ಸುತಂ।
01114005c ಜಾತಮಾತ್ರೇ ಸುತೇ ತಸ್ಮಿನ್ವಾಗುವಾಚಾಶರೀರಿಣೀ।।
ಕುಂತಿಯು ಸಮೃದ್ಧ ಯಶಸ್ವಿ ಪುತ್ರನಿಗೆ ಜನ್ಮವಿತ್ತ ವೇಳೆಯಲ್ಲಿ ಮಗನು ಹುಟ್ಟಿದಾಕ್ಷಣವೇ ಅಶರೀರ ವಾಣಿಯೊಂದು ಹೇಳಿತು:
01114006a ಏಷ ಧರ್ಮಭೃತಾಂ ಶ್ರೇಷ್ಠೋ ಭವಿಷ್ಯತಿ ನ ಸಂಶಯಃ।
01114006c ಯುಧಿಷ್ಠಿರ ಇತಿ ಖ್ಯಾತಃ ಪಾಂಡೋಃ ಪ್ರಥಮಜಃ ಸುತಃ।।
“ಇವನು ಧರ್ಮಭೃತರಲ್ಲಿಯೇ ಶ್ರೇಷ್ಠನಾಗುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಪಾಂಡುವಿನ ಪ್ರಥಮ ಸುತನು ಯುಧಿಷ್ಠಿರ ಎಂದು ವಿಖ್ಯಾತನಾಗುತ್ತಾನೆ.
01114007a ಭವಿತಾ ಪ್ರಥಿತೋ ರಾಜಾ ತ್ರಿಷು ಲೋಕೇಷು ವಿಶ್ರುತಃ।
01114007c ಯಶಸಾ ತೇಜಸಾ ಚೈವ ವೃತ್ತೇನ ಚ ಸಮನ್ವಿತಃ।।
ಮೂರೂ ಲೋಕಗಳಲ್ಲಿ ವಿಶ್ರುತ ಯಶಸ್ಸು, ತೇಜಸ್ಸು ಮತ್ತು ಉತ್ತಮ ನಡವಳಿಕೆಗಳನ್ನು ಹೊಂದಿದ ರಾಜನೆಂದು ಪ್ರಥಿತನಾಗುತ್ತಾನೆ.”
01114008a ಧಾರ್ಮಿಕಂ ತಂ ಸುತಂ ಲಬ್ಧ್ವಾ ಪಾಂಡುಸ್ತಾಂ ಪುನರಬ್ರವೀತ್।
01114008c ಪ್ರಾಹುಃ ಕ್ಷತ್ರಂ ಬಲಜ್ಯೇಷ್ಠಂ ಬಲಜ್ಯೇಷ್ಠಂ ಸುತಂ ವೃಣು।।
ಧಾರ್ಮಿಕ ಸುತನನ್ನು ಪಡೆದ ಪಾಂಡುವು ಪುನಃ ಹೇಳಿದನು: “ಕ್ಷತ್ರಿಯನಿಗೆ ಬಲವೇ ಶ್ರೇಷ್ಠವೆಂದು ಹೇಳುತ್ತಾರೆ. ಬಲಜ್ಯೇಷ್ಠ ಪುತ್ರನನ್ನು ಕೇಳು.”
01114009a ತತಸ್ತಥೋಕ್ತಾ ಪತ್ಯಾ ತು ವಾಯುಮೇವಾಜುಹಾವ ಸಾ।
01114009c ತಸ್ಮಾಜ್ಜಜ್ಞೇ ಮಹಾಬಾಹುರ್ಭೀಮೋ ಭೀಮಪರಾಕ್ರಮಃ।।
ಪತಿಯ ಮಾತುಗಳಂತೆ ಅವಳು ವಾಯುವನ್ನು ಆಹ್ವಾನಿಸಿದಳು ಮತ್ತು ಅವನಿಂದ ಭೀಮ ಪರಾಕ್ರಮಿ, ಮಹಾಬಾಹು ಭೀಮನು ಜನಿಸಿದನು.
01114010a ತಮಪ್ಯತಿಬಲಂ ಜಾತಂ ವಾಗಭ್ಯವದದಚ್ಯುತಂ।
01114010c ಸರ್ವೇಷಾಂ ಬಲಿನಾಂ ಶ್ರೇಷ್ಠೋ ಜಾತೋಽಯಮಿತಿ ಭಾರತ।।
ಭಾರತ! ಆ ಅತಿಬಲಶಾಲಿಯು ಹುಟ್ಟಿದಾಗ ಅಶರೀರವಾಣಿಯೊಂದು “ಇವನು ಎಲ್ಲ ಬಲಶಾಲಿಗಳಿಗಿಂಥ ಬಲಶಾಲಿಯಾಗಲು ಜನಿಸಿದ್ದಾನೆ!” ಎಂದು ಹೇಳಿತು.
01114011a ಇದಮತ್ಯದ್ಭುತಂ ಚಾಸೀಜ್ಜಾತಮಾತ್ರೇ ವೃಕೋದರೇ।
01114011c ಯದಂಕಾತ್ಪತಿತೋ ಮಾತುಃ ಶಿಲಾಂ ಗಾತ್ರೈರಚೂರ್ಣಯತ್।।
ವೃಕೋದರನು ಹುಟ್ಟಿದಾಕ್ಷಣವೇ ಒಂದು ಅದ್ಭುತವು ನಡೆಯಿತು. ಅವನು ತಾಯಿಯ ತೊಡೆಯಿಂದ ಉರುಳಿ ಬಿದ್ದಾಗ ದೊಡ್ಡ ಗಾತ್ರದ ಶಿಲೆಯೇ ಪುಡಿಪುಡಿಯಾಯಿತು.
01114012a ಕುಂತೀ ವ್ಯಾಘ್ರಭಯೋದ್ವಿಗ್ನಾ ಸಹಸೋತ್ಪತಿತಾ ಕಿಲ।
01114012c ನಾನ್ವಬುಧ್ಯತ ಸಂಸುಪ್ತಮುತ್ಸಂಗೇ ಸ್ವೇ ವೃಕೋದರಂ।।
ಒಂದು ಹುಲಿಯ ಭಯದಿಂದ ಕುಂತಿಯು ಅವಸರದಲ್ಲಿ ತನ್ನ ತೊಡೆಯ ಮೇಲೆ ಮಲಗಿದ್ದ ವೃಕೋದರನನ್ನು ಮರೆತು ಎದ್ದು ನಿಂತಳು.
01114013a ತತಃ ಸ ವಜ್ರಸಂಘಾತಃ ಕುಮಾರೋಽಭ್ಯಪತದ್ಗಿರೌ।
01114013c ಪತತಾ ತೇನ ಶತಧಾ ಶಿಲಾ ಗಾತ್ರೈರ್ವಿಚೂರ್ಣಿತಾ।
01114013e ತಾಂ ಶಿಲಾಂ ಚೂರ್ಣಿತಾಂ ದೃಷ್ಟ್ವಾ ಪಾಂಡುರ್ವಿಸ್ಮಯಮಾಗಮತ್।।
ಆ ವಜ್ರಸಂಘಾತ ಕುಮಾರನು ಗಿರಿಯ ಮೇಲೆ ಬಿದ್ದನು. ಅವನು ಬೀಳುವಾಗ ಕೆಳಗಿದ್ದ ಶಿಲೆಯು ನೂರಾರು ಚೂರುಗಳಾಗಿ ಒಡೆಯಿತು. ಈ ರೀತಿ ಪುಡಿಯಾದ ಶಿಲೆಯನ್ನು ನೋಡಿದ ಪಾಂಡುವು ವಿಸ್ಮಿತನಾದನು.
01114014a ಯಸ್ಮಿನ್ನಹನಿ ಭೀಮಸ್ತು ಜಜ್ಞೇ ಭರತಸತ್ತಮ।
01114014c ದುರ್ಯೋಧನೋಽಪಿ ತತ್ರೈವ ಪ್ರಜಜ್ಞೇ ವಸುಧಾಧಿಪ।।
ಭರತಸತ್ತಮ! ಯಾವ ದಿನದಂದು ಭೀಮನು ಹುಟ್ಟಿದನೋ ಅದೇ ದಿನದಲ್ಲಿ ವಸುಧಾಧಿಪ ದುರ್ಯೋಧನನೂ ಹುಟ್ಟಿದನು.
01114015a ಜಾತೇ ವೃಕೋದರೇ ಪಾಂಡುರಿದಂ ಭೂಯೋಽನ್ವಚಿಂತಯತ್।
01114015c ಕಥಂ ನು ಮೇ ವರಃ ಪುತ್ರೋ ಲೋಕಶ್ರೇಷ್ಠೋ ಭವೇದಿತಿ।।
ವೃಕೋದರನು ಹುಟ್ಟಿದ ನಂತರದಲ್ಲಿ ಪಾಂಡುವು “ನಾನು ಹೇಗೆ ಉತ್ತಮ, ಲೋಕಶ್ರೇಷ್ಠ ಪುತ್ರನನ್ನು ಪಡೆಯಲಿ?” ಎಂದು ಪುನಃ ಚಿಂತಿಸತೊಡಗಿದನು.
01114016a ದೈವೇ ಪುರುಷಕಾರೇ ಚ ಲೋಕೋಽಯಂ ಹಿ ಪ್ರತಿಷ್ಠಿತಃ।
01114016c ತತ್ರ ದೈವಂ ತು ವಿಧಿನಾ ಕಾಲಯುಕ್ತೇನ ಲಭ್ಯತೇ।।
“ಯಾಕೆಂದರೆ ಈ ಲೋಕವು ದೈವ ಮತ್ತು ಪುರುಷಕರ್ಮ ಇವೆರಡರ ಮೇಲೂ ನಡೆಯುತ್ತದೆ. ಆ ದೈವ ಎನ್ನುವುದು ವಿಧಿ ಮತ್ತು ಕಾಲಗಳು ಸೇರಿ ಬಂದಾಗ ದೊರೆಯುತ್ತದೆ.
01114017a ಇಂದ್ರೋ ಹಿ ರಾಜಾ ದೇವಾನಾಂ ಪ್ರಧಾನ ಇತಿ ನಃ ಶ್ರುತಂ।
01114017c ಅಪ್ರಮೇಯಬಲೋತ್ಸಾಹೋ ವೀರ್ಯವಾನಮಿತದ್ಯುತಿಃ।।
ದೇವತೆಗಳಿಗಳೆಲ್ಲ ಪ್ರಧಾನನಾದವನು ಅಪ್ರಮೇಯ ಬಲೋತ್ಸಾಹಿ, ವೀರ್ಯವಾನ, ಅಮಿತದ್ಯುತಿ ರಾಜ ಇಂದ್ರನೆಂದು ಕೇಳಿಲ್ಲವೇ?
01114018a ತಂ ತೋಷಯಿತ್ವಾ ತಪಸಾ ಪುತ್ರಂ ಲಪ್ಸ್ಯೇ ಮಹಾಬಲಂ।
01114018c ಯಂ ದಾಸ್ಯತಿ ಸ ಮೇ ಪುತ್ರಂ ಸ ವರೀಯಾನ್ಭವಿಷ್ಯತಿ।
01114018e ಕರ್ಮಣಾ ಮನಸಾ ವಾಚಾ ತಸ್ಮಾತ್ತಪ್ಸ್ಯೇ ಮಹತ್ತಪಃ।।
ಅವನನ್ನು ತಪಸ್ಸಿನಿಂದ ತೃಪ್ತಿಗೊಳಿಸಿ ಮಹಾಬಲಶಾಲಿ ಪುತ್ರನನ್ನು ಪಡೆಯುತ್ತೇನೆ. ನನಗೆ ಅವನು ಕೊಡುವ ಪುತ್ರನು ಶ್ರೇಷ್ಠನಾಗುತ್ತಾನೆ. ಆದುದರಿಂದ ನನ್ನ ಕರ್ಮ, ಮನಸ್ಸು ಮತ್ತು ಮಾತುಗಳಿಂದ ಮಹಾತಪಸ್ಸನ್ನು ತಪಿಸುತ್ತೇನೆ.”
01114019a ತತಃ ಪಾಂಡುರ್ಮಹಾತೇಜಾ ಮಂತ್ರಯಿತ್ವಾ ಮಹರ್ಷಿಭಿಃ।
01114019c ದಿದೇಶ ಕುಂತ್ಯಾಃ ಕೌರವ್ಯೋ ವ್ರತಂ ಸಾಂವತ್ಸರಂ ಶುಭಂ।।
ನಂತರ ಮಹಾತೇಜಸ್ವಿ ಕೌರವ್ಯ ಪಾಂಡುವು ಮಹರ್ಷಿಗಳೊಂದಿಗೆ ಸಮಾಲೋಚಿಸಿ, ಕುಂತಿಗೆ ಒಂದು ವರ್ಷಪರ್ಯಂತದ ಶುಭ ವ್ರತವನ್ನನುಸರಿಸಲು ನಿರ್ದೇಶಿಸಿದನು.
01114020a ಆತ್ಮನಾ ಚ ಮಹಾಬಾಹುರೇಕಪಾದಸ್ಥಿತೋಽಭವತ್।
01114020c ಉಗ್ರಂ ಸ ತಪ ಆತಸ್ಥೇ ಪರಮೇಣ ಸಮಾಧಿನಾ।।
ಆ ಮಹಾಬಾಹುವು ಸ್ವತಃ ಒಂದೇ ಕಾಲಮೇಲೆ ನಿಂತು ಹೆಚ್ಚಿನ ಏಕಾಗ್ರತೆಯಿಂದ ಉಗ್ರ ತಪಸ್ಸನ್ನು ಕೈಗೊಂಡನು.
01114021a ಆರಿರಾಧಯಿಷುರ್ದೇವಂ ತ್ರಿದಶಾನಾಂ ತಮೀಶ್ವರಂ।
01114021c ಸೂರ್ಯೇಣ ಸಹ ಧರ್ಮಾತ್ಮಾ ಪರ್ಯವರ್ತತ ಭಾರತ।।
ಭಾರತ! ಆ ಧರ್ಮಾತ್ಮನು ತ್ರಿದಶರ ಈಶ್ವರ ದೇವನನ್ನು ಸೂರ್ಯನನ್ನೇ ಹಿಂಬಾಲಿಸಿ ಆರಾಧಿಸಿದನು.
01114022a ತಂ ತು ಕಾಲೇನ ಮಹತಾ ವಾಸವಃ ಪ್ರತ್ಯಭಾಷತ।
01114022c ಪುತ್ರಂ ತವ ಪ್ರದಾಸ್ಯಾಮಿ ತ್ರಿಷು ಲೋಕೇಷು ವಿಶ್ರುತಂ।।
01114023a ದೇವಾನಾಂ ಬ್ರಾಹ್ಮಣಾನಾಂ ಚ ಸುಹೃದಾಂ ಚಾರ್ಥಸಾಧಕಂ।
01114023c ಸುತಂ ತೇಽಗ್ರ್ಯಂ ಪ್ರದಾಸ್ಯಾಮಿ ಸರ್ವಾಮಿತ್ರವಿನಾಶನಂ।।
ಬಹಳ ಕಾಲದ ನಂತರ ವಾಸವನು ಉತ್ತರಿಸಿದನು: “ಮೂರೂ ಲೋಕಗಳಲ್ಲಿ ವಿಶ್ರುತ ಪುತ್ರನನ್ನು ನಿನಗೆ ಕೊಡುತ್ತೇನೆ. ದೇವತೆಗಳ, ಬ್ರಾಹ್ಮಣರ ಮತ್ತು ಸುಹೃದಯರ ಉದ್ದೇಶಗಳನ್ನು ಸಾಧಿಸುವ, ತನ್ನ ಎಲ್ಲ ಶತ್ರುಗಳನ್ನೂ ನಾಶಪಡಿಸುವ ಶ್ರೇಷ್ಠ ಸುತನನ್ನು ನೀಡುತ್ತೇನೆ.”
01114024a ಇತ್ಯುಕ್ತಃ ಕೌರವೋ ರಾಜಾ ವಾಸವೇನ ಮಹಾತ್ಮನಾ।
01114024c ಉವಾಚ ಕುಂತೀಂ ಧರ್ಮಾತ್ಮಾ ದೇವರಾಜವಚಃ ಸ್ಮರನ್।।
ರಾಜ ಕೌರವನಿಗೆ ಮಹಾತ್ಮ ವಾಸವನು ಈ ರೀತಿ ಹೇಳಿದ ನಂತರ ದೇವರಾಜನ ಮಾತನ್ನು ಸ್ಮರಿಸುತ್ತಾ ಆ ಧರ್ಮಾತ್ಮನು ಕುಂತಿಗೆ ಹೇಳಿದನು:
01114025a ನೀತಿಮಂತಂ ಮಹಾತ್ಮಾನಮಾದಿತ್ಯಸಮತೇಜಸಂ।
01114025c ದುರಾಧರ್ಷಂ ಕ್ರಿಯಾವಂತಮತೀವಾದ್ಭುತದರ್ಶನಂ।।
01114026a ಪುತ್ರಂ ಜನಯ ಸುಶ್ರೋಣಿ ಧಾಮ ಕ್ಷತ್ರಿಯತೇಜಸಾಂ।
01114026c ಲಬ್ಧಃ ಪ್ರಸಾದೋ ದೇವೇಂದ್ರಾತ್ತಮಾಹ್ವಯ ಶುಚಿಸ್ಮಿತೇ।।
“ನೀತಿಮಂತನೂ, ಮಹಾತ್ಮನೂ, ಆದಿತ್ಯಸಮತೇಜಸ್ವಿಯೂ, ದುರಾಧರ್ಷನೂ, ಕ್ರಿಯಾವಂತನೂ, ಅತೀವ ಅದ್ಭುತ ದರ್ಶನನೂ ಆದ ಕ್ಷತ್ರಿಯ ತೇಜಸ್ವಿಗಳ ಧಾಮ ಪುತ್ರನನ್ನು ಪಡೆ ಸುಶ್ರೋಣಿ! ಶುಚಿಸ್ಮಿತೇ! ದೇವೇಂದ್ರನ ಪ್ರಸಾದವಾಗಿದೆ, ಅವನನ್ನು ಆಹ್ವಾನಿಸು.”
01114027a ಏವಮುಕ್ತಾ ತತಃ ಶಕ್ರಮಾಜುಹಾವ ಯಶಸ್ವಿನೀ।
01114027c ಅಥಾಜಗಾಮ ದೇವೇಂದ್ರೋ ಜನಯಾಮಾಸ ಚಾರ್ಜುನಂ।।
ಇದನ್ನು ಕೇಳಿದ ಆ ಯಶಸ್ವಿನಿಯು ಶಕ್ರನನ್ನು ಕರೆದಳು. ಆಗ ದೇವೇಂದ್ರನು ಆಗಮಿಸಿ ಅರ್ಜುನನನ್ನು ಹುಟ್ಟಿಸಿದನು.
01114028a ಜಾತಮಾತ್ರೇ ಕುಮಾರೇ ತು ವಾಗುವಾಚಾಶರೀರಿಣೀ।
01114028c ಮಹಾಗಂಭೀರನಿರ್ಘೋಷಾ ನಭೋ ನಾದಯತೀ ತದಾ।।
ಆ ಕುಮಾರನು ಹುಟ್ಟುತ್ತಿದ್ದಂತೆಯೇ ಅಶರೀರ ವಾಣಿಯೊಂದು ನಭದಲ್ಲೆಲ್ಲಾ ಪ್ರತಿಧ್ವನಿಸಿದ ಮಹಾಗಂಭೀರ ಸ್ವರದಲ್ಲಿ ಈ ರೀತಿ ಘೋಷಿಸಿತು:
01114029a ಕಾರ್ತವೀರ್ಯಸಮಃ ಕುಂತಿ ಶಿಬಿತುಲ್ಯಪರಾಕ್ರಮಃ।
01114029c ಏಷ ಶಕ್ರ ಇವಾಜೇಯೋ ಯಶಸ್ತೇ ಪ್ರಥಯಿಷ್ಯತಿ।।
“ಕುಂತಿ! ವೀರ್ಯದಲ್ಲಿ ಕಾರ್ತಿವೀರ್ಯನ ಸಮ, ಪ್ರರಾಕ್ರಮದಲ್ಲಿ ಶಿಬಿಯನ್ನು ಹೋಲುವ, ಶಕ್ರನಂತೆ ಅಜೇಯನಾಗಿರುವ ಇವನು ನಿನ್ನ ಯಶಸ್ಸನ್ನು ಪಸರಿಸುತ್ತಾನೆ.
01114030a ಅದಿತ್ಯಾ ವಿಷ್ಣುನಾ ಪ್ರೀತಿರ್ಯಥಾಭೂದಭಿವರ್ಧಿತಾ।
01114030c ತಥಾ ವಿಷ್ಣುಸಮಃ ಪ್ರೀತಿಂ ವರ್ಧಯಿಷ್ಯತಿ ತೇಽರ್ಜುನಃ।।
ವಿಷ್ಣುವಿನಿಂದ ಅದಿತಿಯ ಸಂತೋಷವು ಹೇಗೆ ವೃದ್ಧಿಯಾಗಿತ್ತೋ ಹಾಗೆ ವಿಷ್ಣುಸಮನಾದ ಈ ಅರ್ಜುನನು ನಿನ್ನ ಸಂತೋಷವನ್ನೂ ವರ್ಧಿಸುತ್ತಾನೆ.
01114031a ಏಷ ಮದ್ರಾನ್ವಶೇ ಕೃತ್ವಾ ಕುರೂಂಶ್ಚ ಸಹ ಕೇಕಯೈಃ।
01114031c ಚೇದಿಕಾಶಿಕರೂಷಾಂಶ್ಚ ಕುರುಲಕ್ಷ್ಮ ಸುಧಾಸ್ಯತಿ।।
ಇವನು ಮದ್ರ, ಕೇಕಯ, ಕಾಶಿ, ಕರೂಷ, ಇವರೆಲ್ಲರನ್ನೂ ಗೆದ್ದು, ಕುರು ರಾಜ್ಯಕ್ಕೆ ಸೇರಿಸುತ್ತಾನೆ, ಮತ್ತು ಕುರುಗಳ ಸಂಪತ್ತನ್ನು ವೃದ್ಧಿಸುತ್ತಾನೆ.
01114032a ಏತಸ್ಯ ಭುಜವೀರ್ಯೇಣ ಖಾಂಡವೇ ಹವ್ಯವಾಹನಃ।
01114032c ಮೇದಸಾ ಸರ್ವಭೂತಾನಾಂ ತೃಪ್ತಿಂ ಯಾಸ್ಯತಿ ವೈ ಪರಾಂ।।
ಇವನು ತನ್ನ ಭುಜಬಲದಿಂದ ಖಾಂಡವ ವನದಲ್ಲಿರುವ ಸರ್ವಭೂತಗಳ ಕೊಬ್ಬಿನಿಂದ ಹವ್ಯವಾಹನನಿಗೆ ಪರಮ ತೃಪ್ತಿಯನ್ನು ತರುತ್ತಾನೆ.
01114033a ಗ್ರಾಮಣೀಶ್ಚ ಮಹೀಪಾಲಾನೇಷ ಜಿತ್ವಾ ಮಹಾಬಲಃ।
01114033c ಭ್ರಾತೃಭಿಃ ಸಹಿತೋ ವೀರಸ್ತ್ರೀನ್ಮೇಧಾನಾಹರಿಷ್ಯತಿ।।
ಈ ಮಹಾಬಲಶಾಲಿಯು ಮಹೀಪಾಲರನ್ನೆಲ್ಲ ಗೆದ್ದು ಭ್ರಾತೃಗಳ ಸಮೇತ ಮೂರು ಯಜ್ಞಗಳನ್ನು ನೆರವೇರಿಸುತ್ತಾನೆ.
01114034a ಜಾಮದಗ್ನ್ಯಸಮಃ ಕುಂತಿ ವಿಷ್ಣುತುಲ್ಯಪರಾಕ್ರಮಃ।
01114034c ಏಷ ವೀರ್ಯವತಾಂ ಶ್ರೇಷ್ಠೋ ಭವಿಷ್ಯತ್ಯಪರಾಜಿತಃ।।
ಕುಂತಿ! ಜಾಮದಗ್ನಿಯ ಸಮನಾದ, ಪರಾಕ್ರಮದಲ್ಲಿ ವಿಷ್ಣುವನ್ನು ಹೋಲುವ ಈ ವೀರ್ಯವಂತ ಶ್ರೇಷ್ಠನು ಅಪರಾಜಿತನಾಗುತ್ತಾನೆ.
01114035a ತಥಾ ದಿವ್ಯಾನಿ ಚಾಸ್ತ್ರಾಣಿ ನಿಖಿಲಾನ್ಯಾಹರಿಷ್ಯತಿ।
01114035c ವಿಪ್ರನಷ್ಟಾಂ ಶ್ರಿಯಂ ಚಾಯಮಾಹರ್ತಾ ಪುರುಷರ್ಷಭಃ।।
ಅವನಿಗೆ ಎಲ್ಲ ದಿವ್ಯಾಸ್ತ್ರಗಳು ದೊರೆಯುತ್ತವೆ ಮತ್ತು ಈ ಪುರುಷರ್ಷಭನು ಕಳೆದು ಹೋದ ಸಂಪತ್ತನ್ನು ಪುನಃ ಪಡೆಯುತ್ತಾನೆ.”
01114036a ಏತಾಮತ್ಯದ್ಭುತಾಂ ವಾಚಂ ಕುಂತೀಪುತ್ರಸ್ಯ ಸೂತಕೇ।
01114036c ಉಕ್ತವಾನ್ವಾಯುರಾಕಾಶೇ ಕುಂತೀ ಶುಶ್ರಾವ ಚಾಸ್ಯ ತಾಂ।।
ಕುಂತೀಪುತ್ರನ ಜನನ ಸಮಯದಲ್ಲಿ ಈ ಅದ್ಭುತ ಮಾತುಗಳು ಆಕಾಶದಲ್ಲಿ ವಾಯುವಿನಿಂದ ಕೇಳಿಬಂದಿತು. ಕುಂತಿಯು ಈ ಮಾತುಗಳನ್ನು ಅವನಿಂದಲೇ ಕೇಳಿದಳು.
01114037a ವಾಚಮುಚ್ಚಾರಿತಾಮುಚ್ಚೈಸ್ತಾಂ ನಿಶಮ್ಯ ತಪಸ್ವಿನಾಂ।
01114037c ಬಭೂವ ಪರಮೋ ಹರ್ಷಃ ಶತಶೃಂಗನಿವಾಸಿನಾಂ।।
ಆ ಉಚ್ಛಸ್ವರದಲ್ಲಿ ಹೇಳಿದ ಮಾತುಗಳನ್ನು ಶತಶೃಂಗದಲ್ಲಿ ವಾಸಿಸುತ್ತಿದ್ದ ತಪಸ್ವಿಗಳೆಲ್ಲರೂ ಕೇಳಿ ಪರಮ ಹರ್ಷಿತರಾದರು.
01114038a ತಥಾ ದೇವಋಷೀಣಾಂ ಚ ಸೇಂದ್ರಾಣಾಂ ಚ ದಿವೌಕಸಾಂ।
01114038c ಆಕಾಶೇ ದುಂದುಭೀನಾಂ ಚ ಬಭೂವ ತುಮುಲಃ ಸ್ವನಃ।।
ಆಗ ಆಕಾಶದಲ್ಲಿ ದೇವಋಷಿಗಳ, ಇಂದ್ರರ ಮತ್ತು ದಿವೌಕಸರ ದುಂದುಭಿಗಳ ತುಮುಲವು ಕೇಳಿಬಂದಿತು.
01114039a ಉದತಿಷ್ತನ್ಮಹಾಘೋಷಃ ಪುಷ್ಪವೃಷ್ಟಿಭಿರಾವೃತಃ।
01114039c ಸಮವೇತ್ಯ ಚ ದೇವಾನಾಂ ಗಣಾಃ ಪಾರ್ಥಮಪೂಜಯನ್।।
01114040a ಕಾದ್ರವೇಯಾ ವೈನತೇಯಾ ಗಂಧರ್ವಾಪ್ಸರಸಸ್ತಥಾ।
01114040c ಪ್ರಜಾನಾಂ ಪತಯಃ ಸರ್ವೇ ಸಪ್ತ ಚೈವ ಮಹರ್ಷಯಃ।।
01114041a ಭರದ್ವಾಜಃ ಕಶ್ಯಪೋ ಗೌತಮಶ್ಚ ವಿಶ್ವಾಮಿತ್ರೋ ಜಮದಗ್ನಿರ್ವಸಿಷ್ಠಃ।
01114041c ಯಶ್ಚೋದಿತೋ ಭಾಸ್ಕರೇಽಭೂತ್ ಪ್ರನಷ್ಟೇ ಸೋಽಪ್ಯತ್ರಾತ್ರಿರ್ಭಗವಾನಾಜಗಾಮ।।
01114042a ಮರೀಚಿರಂಗಿರಾಶ್ಚೈವ ಪುಲಸ್ತ್ಯಃ ಪುಲಹಃ ಕ್ರತುಃ।
01114042c ದಕ್ಷಃ ಪ್ರಜಾಪತಿಶ್ಚೈವ ಗಂಧರ್ವಾಪ್ಸರಸಸ್ತಥಾ।।
ದೇವಗಣಗಳು ಪಾರ್ಥನನ್ನು ಗೌರವಿಸಲು ನೆರೆದಾಗ ಪುಷ್ಪವೃಷ್ಟಿಗಳಿಂದೊಡಗೂಡಿದ ಮಹಾಘೋಷವು ಕೇಳಿಬಂದಿತು. ಕದ್ರುವಿನ ಮಕ್ಕಳು, ವಿನತೆಯ ಮಕ್ಕಳು, ಗಂಧರ್ವರು, ಅಪ್ಸರೆಯರು, ಸರ್ವ ಪ್ರಜೆಗಳ ನಾಯಕರು, ಮತ್ತು ಸಪ್ತ ಮಹರ್ಷಿಗಳು - ಭರದ್ವಾಜ, ಕಶ್ಯಪ, ಗೌತಮ, ವಿಶ್ವಾಮಿತ್ರ, ಜಮದಗ್ನಿ, ವಸಿಷ್ಠ, ಮತ್ತು ಭಾಸ್ಕರನ ಉದಯದೊಂದಿಗೆ ಕಾಣಿಸಿಕೊಳ್ಳುವ ಮತ್ತು ಅವನ ಅಸ್ತದೊಂದಿಗೆ ಮರೆಯಾಗುವ ಭಗವಾನ ಅತ್ರಿ -–ಎಲ್ಲರೂ ಬಂದು ಸೇರಿದರು.
01114043a ದಿವ್ಯಮಾಲ್ಯಾಂಬರಧರಾಃ ಸರ್ವಾಲಂಕಾರಭೂಷಿತಾಃ।
01114043c ಉಪಗಾಯಂತಿ ಬೀಭತ್ಸುಮುಪನೃತ್ಯಂತಿ ಚಾಪ್ಸರಾಃ।
01114043e ಗಂಧರ್ವೈಃ ಸಹಿತಃ ಶ್ರೀಮಾನ್ಪ್ರಾಗಾಯತ ಚ ತುಂಬುರುಃ।।
ದಿವ್ಯ ಮಾಲಾಂಬರಗಳನ್ನು ಧರಿಸಿ ಸರ್ವಾಲಂಕಾರ ಭೂಷಿತೆ ಅಪ್ಸರೆಯರು ಬೀಭತ್ಸುವನ್ನು ಸುತ್ತುವರೆದು ಹಾಡುತ್ತಾ ನೃತ್ಯಮಾಡಿದರು. ಗಂಧರ್ವರನ್ನೊಡಗೊಂಡು ಶ್ರೀಮಾನ್ ತುಂಬುರುವು ಹಾಡಿದನು.
01114044a ಭೀಮಸೇನೋಗ್ರಸೇನೌ ಚ ಊರ್ಣಾಯುರನಘಸ್ತಥಾ।
01114044c ಗೋಪತಿರ್ಧೃತರಾಷ್ಟ್ರಶ್ಚ ಸೂರ್ಯವರ್ಚಾಶ್ಚ ಸಪ್ತಮಃ।।
01114045a ಯುಗಪಸ್ತೃಣಪಃ ಕಾರ್ಷ್ಣಿರ್ನಂದಿಶ್ಚಿತ್ರರಥಸ್ತಥಾ।
01114045c ತ್ರಯೋದಶಃ ಶಾಲಿಶಿರಾಃ ಪರ್ಜನ್ಯಶ್ಚ ಚತುರ್ದಶಃ।।
01114046a ಕಲಿಃ ಪಂಚದಶಶ್ಚಾತ್ರ ನಾರದಶ್ಚೈವ ಷೋಡಶಃ।
01114046c ಸದ್ವಾ ಬೃಹದ್ವಾ ಬೃಹಕಃ ಕರಾಲಶ್ಚ ಮಹಾಯಶಾಃ।।
01114047a ಬ್ರಹ್ಮಚಾರೀ ಬಹುಗುಣಃ ಸುಪರ್ಣಶ್ಚೇತಿ ವಿಶ್ರುತಃ।
01114047c ವಿಶ್ವಾವಸುರ್ಭುಮನ್ಯುಶ್ಚ ಸುಚಂದ್ರೋ ದಶಮಸ್ತಥಾ।।
01114048a ಗೀತಮಾಧುರ್ಯಸಂಪನ್ನೌ ವಿಖ್ಯಾತೌ ಚ ಹಹಾಹುಹೂ।
01114048c ಇತ್ಯೇತೇ ದೇವಗಂಧರ್ವಾ ಜಗುಸ್ತತ್ರ ನರರ್ಷಭಂ।।
ಈ ಎಲ್ಲ ಗಂಧರ್ವರು ಆ ನರರ್ಷಭನನ್ನು ಹಾಡಿ ಹೊಗಳಿದರು: ಭೀಮಸೇನ, ಉಗ್ರಸೇನ, ಊರ್ಣಾಯು, ಅನಘ, ಗೋಪತಿ, ಧೃತರಾಷ್ಟ್ರ, ಏಳನೆಯ ಸೂರ್ಯವರ್ಚಾಕ್ಷ, ಯುಗಪ, ತೃಣಪ, ಕಾರ್ಷ್ಣಿ, ನಂದಿ, ಚಿತ್ರರಥ, ಹದಿಮೂರನೆಯವನು ಶಾಲಿಶಿರ, ಹದಿನಾಲ್ಕನೆಯವನು ಪರ್ಜ್ಯನ್ಯ, ಹದಿನೈದನೆಯ ಕಲಿ, ಹದಿನಾರನೆಯ ನಾರದ, ಮಹಾಯಶಸ್ವಿ ಸದ್ದಾ, ಬೃಹದಾ, ಬೃಹಕ, ಕರಾಲ, ಬ್ರಹ್ಮಚಾರಿ, ಬಹುಗುಣ, ವಿಶ್ರುತ ಸುಪರ್ಣ, ವಿಶ್ವಾವಸು, ಭುಮನ್ಯು, ಹತ್ತನೆಯ ಸುಚಂದ್ರ, ಮತ್ತು ಗೀತಮಾಧುರ್ಯ ಸಂಪನ್ನ ವಿಖ್ಯಾತ ಹಹ ಮತ್ತು ಆಹುಃ.
01114049a ತಥೈವಾಪ್ಸರಸೋ ಹೃಷ್ಟಾಃ ಸರ್ವಾಲಂಕಾರಭೂಷಿತಾಃ।
01114049c ನನೃತುರ್ವೈ ಮಹಾಭಾಗಾ ಜಗುಶ್ಚಾಯತಲೋಚನಾಃ।।
ಆಯತಲೋಚನೆ ಮಹಾಭಾಗೆ ಅಪ್ಸರೆಯರೂ ಕೂಡ ಸಹರ್ಷದಿಂದ ಸರ್ವಾಲಂಕಾರ ಭೂಷಿತೆಯರಾಗಿ ಹಾಡಿ ಕುಣಿದರು.
01114050a ಅನೂನಾ ಚಾನವದ್ಯಾ ಚ ಪ್ರಿಯಮುಖ್ಯಾ ಗುಣಾವರಾ।
01114050c ಅದ್ರಿಕಾ ಚ ತಥಾ ಸಾಚೀ ಮಿಶ್ರಕೇಶೀ ಅಲಂಬುಸಾ।।
01114051a ಮರೀಚಿಃ ಶಿಚುಕಾ ಚೈವ ವಿದ್ಯುತ್ಪರ್ಣಾ ತಿಲೋತ್ತಮಾ।
01114051c ಅಗ್ನಿಕಾ ಲಕ್ಷಣಾ ಕ್ಷೇಮಾ ದೇವೀ ರಂಭಾ ಮನೋರಮಾ।।
01114052a ಅಸಿತಾ ಚ ಸುಬಾಹುಶ್ಚ ಸುಪ್ರಿಯಾ ಸುವಪುಸ್ತಥಾ।
01114052c ಪುಂಡರೀಕಾ ಸುಗಂಧಾ ಚ ಸುರಥಾ ಚ ಪ್ರಮಾಥಿನೀ।।
01114053a ಕಾಮ್ಯಾ ಶಾರದ್ವತೀ ಚೈವ ನನೃತುಸ್ತತ್ರ ಸಂಘಶಃ।
01114053c ಮೇನಕಾ ಸಹಜನ್ಯಾ ಚ ಪರ್ಣಿಕಾ ಪುಂಜಿಕಸ್ಥಲಾ।।
01114054a ಕ್ರತುಸ್ಥಲಾ ಘೃತಾಚೀ ಚ ವಿಶ್ವಾಚೀ ಪೂರ್ವಚಿತ್ತ್ಯಪಿ।
01114054c ಉಮ್ಲೋಚೇತ್ಯಭಿವಿಖ್ಯಾತಾ ಪ್ರಮ್ಲೋಚೇತಿ ಚ ತಾ ದಶ।
01114054e ಉರ್ವಶ್ಯೇಕಾದಶೀತ್ಯೇತಾ ಜಗುರಾಯತಲೋಚನಾಃ।।
ಅನುನ, ಅನವದ್ಯ, ಪ್ರಿಯಮುಖ್ಯ, ಗುಣವರ, ಅದ್ರಿಕ, ಶಚಿ, ಮಿಶ್ರಕೇಶಿ, ಅಲಂಬುಷ, ಮರೀಚಿ, ಶಿಚುಕ, ವಿದ್ಯುತ್ಪರ್ಣ, ತಿಲೋತ್ತಮ, ಅಗ್ನಿಕ, ಲಕ್ಷಣಾ, ಕ್ಷೇಮ, ದೇವಿ ರಂಭಾ, ಮನೋರಮಾ, ಅಸಿತಾ, ಸುಬಾಹು, ಸುಪ್ರಿಯ, ಸುವಪು, ಪುಂಡರೀಕಾ, ಸುಗಂಧಾ, ಸುರಥಾ, ಪ್ರಮಥಿನೀ, ಕಾಮ್ಯ, ಶರದ್ವತೀ, ಇವರೆಲ್ಲರು ಅಲ್ಲಿ ನೃತ್ಯಗೈದರು. ಮೇನಕಾ, ಸಹಜನ್ಯ, ಪರ್ಣಿಕಾ, ಪುಂಜಿಕಸ್ಥಲಾ, ಕ್ರತುಸ್ಥಲಾ, ಘೃತಾಚೀ, ವಿಶ್ವಾಚೀ, ಪೂರ್ವಚಿತ್ತಾ, ಉಮ್ಲೋಚಾ, ಹತ್ತನೆಯ ಪ್ರಮ್ಲೋಚಾ, ಹನ್ನೊಂದನೆಯ ಊರ್ವಶಿ, ಈ ಎಲ್ಲ ಆಯತಲೋಚನೆಯರೂ ಹಾಡಿ ಕುಣಿದರು.
01114055a ಧಾತಾರ್ಯಮಾ ಚ ಮಿತ್ರಶ್ಚ ವರುಣೋಽಂಶೋ ಭಗಸ್ತಥಾ।
01114055c ಇಂದ್ರೋ ವಿವಸ್ವಾನ್ಪೂಷಾ ಚ ತ್ವಷ್ಟಾ ಚ ಸವಿತಾ ತಥಾ।।
01114056a ಪರ್ಜನ್ಯಶ್ಚೈವ ವಿಷ್ಣುಶ್ಚ ಆದಿತ್ಯಾಃ ಪಾವಕಾರ್ಚಿಷಃ।
01114056c ಮಹಿಮಾನಂ ಪಾಂಡವಸ್ಯ ವರ್ಧಯಂತೋಂಽಬರೇ ಸ್ಥಿತಾಃ।।
ಪಾಂಡವನ ಮಹಿಮೆಯನ್ನು ವರ್ಧಿಸಲೋಸುಗ ಅಂಬರದಲ್ಲಿ ಪಾವಕನನ್ನೂ ಕೂಡಿ ಧಾತಾರ, ಯಮ, ಮಿತ್ರ, ವರುಣ, ಅಂಶ, ಭಗ, ಇಂದ್ರ, ವಿವಸ್ವಾನ್, ಪೂಷ, ತ್ವಷ್ಠಾ, ಸವಿತ, ಪರ್ಜನ್ಯ, ವಿಷ್ಣು ಮೊದಲಾದ ಆದಿತ್ಯರು ನೆರೆದಿದ್ದರು.
01114057a ಮೃಗವ್ಯಾಧಶ್ಚ ಶರ್ವಶ್ಚ ನಿರೃತಿಶ್ಚ ಮಹಾಯಶಾಃ।
01114057c ಅಜೈಕಪಾದಹಿರ್ಬುಧ್ನ್ಯಃ ಪಿನಾಕೀ ಚ ಪರಂತಪಃ।।
01114058a ದಹನೋಽಥೇಶ್ವರಶ್ಚೈವ ಕಪಾಲೀ ಚ ವಿಶಾಂ ಪತೇ।
01114058c ಸ್ಥಾಣುರ್ಭವಶ್ಚ ಭಗವಾನ್ರುದ್ರಾಸ್ತತ್ರಾವತಸ್ಥಿರೇ।।
ವಿಶಾಂಪತೇ! ಅಲ್ಲಿ ಮೃಗವ್ಯಾಧ, ಶರ್ವ, ನಿರೃತಿ, ಮಹಾಯಶಸ್ವಿ ಅಜ, ಏಕಪಾದ, ಬುರ್ಧ್ನ್ಯ, ಪರಂತಪಿ ಪಿನಾಕೀ, ದಹನ, ಈಶ್ವರ, ಕಪಾಲೀ, ಸ್ಥಾಣು, ಭಗವನ್ ಭಾವ, ಮೊದಲಾದ ರುದ್ರರೂ ನೆರೆದಿದ್ದರು.
01114059a ಅಶ್ವಿನೌ ವಸವಶ್ಚಾಷ್ಟೌ ಮರುತಶ್ಚ ಮಹಾಬಲಾಃ।
01114059c ವಿಶ್ವೇದೇವಾಸ್ತಥಾ ಸಾಧ್ಯಾಸ್ತತ್ರಾಸನ್ಪರಿಸಂಸ್ಥಿತಾಃ।।
01114060a ಕರ್ಕೋಟಕೋಽಥ ಶೇಷಶ್ಚ ವಾಸುಕಿಶ್ಚ ಭುಜಂಗಮಃ।
01114060c ಕಚ್ಛಪಶ್ಚಾಪಕುಂಡಶ್ಚ ತಕ್ಷಕಶ್ಚ ಮಹೋರಗಃ।।
01114061a ಆಯಯುಸ್ತೇಜಸಾ ಯುಕ್ತಾ ಮಹಾಕ್ರೋಧಾ ಮಹಾಬಲಾಃ।
01114061c ಏತೇ ಚಾನ್ಯೇ ಚ ಬಹವಸ್ತತ್ರ ನಾಗಾ ವ್ಯವಸ್ಥಿತಾಃ।।
01114062a ತಾರ್ಕ್ಷ್ಯಶ್ಚಾರಿಷ್ಟನೇಮಿಶ್ಚ ಗರುಡಶ್ಚಾಸಿತಧ್ವಜಃ।
01114062c ಅರುಣಶ್ಚಾರುಣಿಶ್ಚೈವ ವೈನತೇಯಾ ವ್ಯವಸ್ಥಿತಾಃ।।
ಅಶ್ವಿನಿ ದೇವತೆಗಳು, ಅಷ್ಟ ವಸುಗಳು, ಮಹಾಬಲಶಾಲಿ ಮರುತರು, ವಿಶ್ವೇದೇವರು, ಮತ್ತು ಸಾಧ್ಯರು ಅಲ್ಲಿ ಸುತ್ತುವರೆದಿದ್ದರು. ಮಹಾಬಲಶಾಲಿ, ಮಹಾಕ್ರೋಧಿ, ತಮ್ಮ ತೇಜಸ್ಸಿನಿಂದ ಸುಡುತ್ತಿದ್ದ ಕಾರ್ಕೋಟಕ, ಶೇಷ, ಭುಜಂಗಮ ವಾಸುಕಿ, ಕಚ್ಛಪ, ಅಪಕುಂಡ, ಮಹೋರಗ ತಕ್ಷಕ ಮೊದಲಾದ ಬಹಳಷ್ಟು ನಾಗಗಳು ಅಲ್ಲಿ ಸೇರಿದ್ದರು. ಅಲ್ಲಿ ವಿನತೆಯ ಮಕ್ಕಳಾದ ತಾರ್ಕ್ಷ್ಯ, ಅರಿಷ್ಠನೇಮಿ, ಗರುಡ, ಅಸಿತಧ್ವಜ, ಅರುಣ ಮತ್ತು ಅರುಣಿಯರೂ ಸೇರಿದ್ದರು.
01114063a ತದ್ದೃಷ್ಟ್ವಾ ಮಹದಾಶ್ಚರ್ಯಂ ವಿಸ್ಮಿತಾ ಮುನಿಸತ್ತಮಾಃ।
01114063c ಅಧಿಕಾಂ ಸ್ಮ ತತೋ ವೃತ್ತಿಮವರ್ತನ್ಪಾಂಡವಾನ್ಪ್ರತಿ।।
ಆ ಮಹದಾಶ್ವರ್ಯವನ್ನು ನೋಡಿ ವಿಸ್ಮಿತರಾದ ಮುನಿಸತ್ತಮರು ಆ ಪಾಂಡವನ ಕುರಿತು ಇನ್ನೂ ಅಧಿಕ ಗೌರವವನ್ನು ತೋರಿಸಿದರು.
01114064a ಪಾಂಡುಸ್ತು ಪುನರೇವೈನಾಂ ಪುತ್ರಲೋಭಾನ್ಮಹಾಯಶಾಃ।
01114064c ಪ್ರಾಹಿಣೋದ್ದರ್ಶನೀಯಾಂಗೀಂ ಕುಂತೀ ತ್ವೇನಮಥಾಬ್ರವೀತ್।।
ಆದರೆ ಮಹಾಯಶಸ್ವಿ ಪುತ್ರರನ್ನು ಪಡೆಯುವ ಆಸೆಯಿಂದ ಪಾಂಡುವು ಪುನಃ ದರ್ಶನೀಯ ಪತ್ನಿ ಕುಂತಿಯನ್ನು ಕೇಳಿದನು. ಆಗ ಅವಳು ಅವನಿಗೆ ಹೇಳಿದಳು:
01114065a ನಾತಶ್ಚತುರ್ಥಂ ಪ್ರಸವಮಾಪತ್ಸ್ವಪಿ ವದಂತ್ಯುತ।
01114065c ಅತಃ ಪರಂ ಚಾರಿಣೀ ಸ್ಯಾತ್ಪಂಚಮೇ ಬಂಧಕೀ ಭವೇತ್।।
“ಆಪತ್ತಿನಲ್ಲಿಯೂ ನಾಲ್ಕನೆಯ ಮಗನ ಕುರಿತು ಮಾತನಾಡುವುದಿಲ್ಲ. ಮೂರು ಮಕ್ಕಳ ನಂತರ ಅವಳು ಚಾರಿಣಿ ಮತ್ತು ನಾಲ್ಕರ ನಂತರ ಬಂಧಕೀ ಎಂದು ಎನ್ನಿಸಿಕೊಳ್ಳುತ್ತಾಳೆ.
01114066a ಸ ತ್ವಂ ವಿದ್ವನ್ಧರ್ಮಮಿಮಂ ಬುದ್ಧಿಗಮ್ಯಂ ಕಥಂ ನು ಮಾಂ।
01114066c ಅಪತ್ಯಾರ್ಥಂ ಸಮುತ್ಕ್ರಮ್ಯ ಪ್ರಮಾದಾದಿವ ಭಾಷಸೇ।।
ಈ ಧರ್ಮವನ್ನು ತಿಳಿದಿರುವ ನೀನು ಅದನ್ನು ಅತಿಕ್ರಮಿಸಿ ಬುದ್ಧಿಗಮ್ಯನಾಗಿ ನನಗೆ ಇನ್ನೂ ಮಕ್ಕಳನ್ನು ಪಡೆಯಲು ಹೇಗೆ ಹೇಳುತ್ತೀಯೆ?””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಪಾಂಡವೋತ್ಪತ್ತೌ ಚತುರ್ದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಪಾಂಡವೋತ್ಪತ್ತಿ ಎನ್ನುವ ನೂರಾಹದಿನಾಲ್ಕನೆಯ ಅಧ್ಯಾಯವು.