ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸಂಭವ ಪರ್ವ
ಅಧ್ಯಾಯ 113
ಸಾರ
ಶ್ವೇತಕೇತುವಿನ ಚರಿತ್ರೆಯನ್ನು ಉದಾಹರಿಸಿ ಪಾಂಡುವು ಕುಂತಿಯಲ್ಲಿ ಬೇರೆಯವರಿಂದ ತನಗೆ ಮಕ್ಕಳನ್ನು ಪಡೆಯುವಂತೆ ಕೇಳಿಕೊಳ್ಳುವುದು (1-31). ಕುಂತಿಯು ತನ್ನ ತಂದೆಯ ಮನೆಯಲ್ಲಿ ಮುನಿಯೋರ್ವನಿಂದ ದೊರಕಿದ್ದ ಮಂತ್ರಗುಚ್ಛಗಳ ಕುರಿತು ಹೇಳುವುದು (21-37). ಯಾವ ದೇವತೆಯನ್ನು ಆಹ್ವಾನಿಸಬೇಕೆಂದು ಕೇಳಲು ಪಾಂಡುವು ಕುಂತಿಗೆ ಧರ್ಮನನ್ನು ಕರೆಯುವಂತೆ ಸೂಚಿಸುವುದು (28-43).
01113001 ವೈಶಂಪಾಯನ ಉವಾಚ।
01113001a ಏವಮುಕ್ತಸ್ತಯಾ ರಾಜಾ ತಾಂ ದೇವೀಂ ಪುನರಬ್ರವೀತ್।
01113001c ಧರ್ಮವಿದ್ಧರ್ಮಸಂಯುಕ್ತಮಿದಂ ವಚನಮುತ್ತಮಂ।।
ವೈಶಂಪಾಯನನು ಹೇಳಿದನು: “ಈ ಮಾತುಗಳನ್ನು ಕೇಳಿದ ರಾಜನು ಆ ದೇವಿಗೆ ಧರ್ಮವಿದ್ಧರ್ಮಸಂಯುಕ್ತ ಈ ಉತ್ತಮ ನುಡಿಗಳಿಂದ ಉತ್ತರಿಸಿದನು:
01113002a ಏವಮೇತತ್ಪುರಾ ಕುಂತಿ ವ್ಯುಷಿತಾಶ್ವಶ್ಚಕಾರ ಹ।
01113002c ಯಥಾ ತ್ವಯೋಕ್ತಂ ಕಲ್ಯಾಣಿ ಸ ಹ್ಯಾಸೀದಮರೋಪಮಃ।।
“ಕುಂತಿ! ಕಲ್ಯಾಣೀ! ಹಿಂದೆ ವ್ಯುಷಿತಾಶ್ವನು ನೀನು ಹೇಳಿದ ಹಾಗೆಯೇ ಮಾಡಿದನು. ಅವನು ದೇವ ಸಮನಾಗಿದ್ದನು.
01113003a ಅಥ ತ್ವಿಮಂ ಪ್ರವಕ್ಷ್ಯಾಮಿ ಧರ್ಮಂ ತ್ವೇತಂ ನಿಬೋಧ ಮೇ।
01113003c ಪುರಾಣಂ ಋಷಿಭಿರ್ದೃಷ್ಟಂ ಧರ್ಮವಿದ್ಭಿರ್ಮಹಾತ್ಮಭಿಃ।।
ಈಗ ನಾನು ನಿನಗೆ ಪುರಾಣಗಳಲ್ಲಿ ಋಷಿಗಳು ಕಂಡ, ಮಹಾತ್ಮರು ಧರ್ಮದ ಕುರಿತು ತಿಳಿದುಕೊಂಡಿದ್ದ ಧರ್ಮವನ್ನು ಹೇಳುತ್ತೇನೆ. ನಾನು ಹೇಳುವುದನ್ನು ಕೇಳು.
01113004a ಅನಾವೃತಾಃ ಕಿಲ ಪುರಾ ಸ್ತ್ರಿಯ ಆಸನ್ವರಾನನೇ।
01113004c ಕಾಮಚಾರವಿಹಾರಿಣ್ಯಃ ಸ್ವತಂತ್ರಾಶ್ಚಾರುಲೋಚನೇ।।
ವರಾನನೇ! ಚಾರುಲೋಚನೇ! ಹಿಂದೆ ಸ್ತ್ರೀಯರು ಕಾಮಚಾರ ವಿಹಾರಗಳಲ್ಲಿ ಸ್ವತಂತ್ರರಾಗಿದ್ದು ಯಾವುದೇ ಕಟ್ಟುಪಾಡುಗಳಿಲ್ಲದೇ ಇರುತ್ತಿದ್ದರು.
01113005a ತಾಸಾಂ ವ್ಯುಚ್ಚರಮಾಣಾನಾಂ ಕೌಮಾರಾತ್ಸುಭಗೇ ಪತೀನ್।
01113005c ನಾಧರ್ಮೋಽಭೂದ್ವರಾರೋಹೇ ಸ ಹಿ ಧರ್ಮಃ ಪುರಾಭವತ್।।
ವರಾರೋಹೆ! ಕೌಮಾರ್ಯದಿಂದಲೇ ಅವರು ತಮ್ಮ ಪತಿಗಳಿಗೆ ನಡೆದುಕೊಳ್ಳುತ್ತಿರಲಿಲ್ಲ ಮತ್ತು ಸಾಕಷ್ಟು ಅಧರ್ಮಿಗಳಾಗಿದ್ದರು. ಯಾಕೆಂದರೆ ಹಿಂದಿನ ಆ ಕಾಲದಲ್ಲಿ ಅದೇ ಧರ್ಮವಾಗಿತ್ತು.
01113006a ತಂ ಚೈವ ಧರ್ಮಂ ಪೌರಾಣಂ ತಿರ್ಯಗ್ಯೋನಿಗತಾಃ ಪ್ರಜಾಃ।
01113006c ಅದ್ಯಾಪ್ಯನುವಿಧೀಯಂತೇ ಕಾಮದ್ವೇಷವಿವರ್ಜಿತಾಃ।
01113006e ಪುರಾಣದೃಷ್ಟೋ ಧರ್ಮೋಽಯಂ ಪೂಜ್ಯತೇ ಚ ಮಹರ್ಷಿಭಿಃ।।
01113007a ಉತ್ತರೇಷು ಚ ರಂಭೋರು ಕುರುಷ್ವದ್ಯಾಪಿ ವರ್ತತೇ।
01113007c ಸ್ತ್ರೀಣಾಮನುಗ್ರಹಕರಃ ಸ ಹಿ ಧರ್ಮಃ ಸನಾತನಃ।।
ಈಗಲೂ ಕೂಡ ಹಳೆಯ ಈ ಧರ್ಮವನ್ನು ಕೀಳು ಯೋನಿಗಳಲ್ಲಿ ಹುಟ್ಟಿದವುಗಳು ಕಾಮ ದ್ವೇಷ ವಿವರ್ಜಿತರಾಗಿ ಪರಿಪಾಲಿಸುತ್ತಿವೆ. ಹಿಂದೆ ನೋಡಿದ್ದ ಈ ಧರ್ಮವನ್ನು ಮಹರ್ಷಿಗಳೂ ಗೌರವಿಸುತ್ತಾರೆ. ರಂಭೋರು! ಉತ್ತರ ಕುರುಗಳಲ್ಲಿ ಇದು ಇಂದೂ ನಡೆಯುತ್ತದೆ. ಸ್ತ್ರೀಯರಿಗೆ ಇದೇ ಅನುಗ್ರಹಕಾರಕ ಸನಾತನ ಧರ್ಮ.
01113008a ಅಸ್ಮಿಂಸ್ತು ಲೋಕೇ ನಚಿರಾನ್ಮರ್ಯಾದೇಯಂ ಶುಚಿಸ್ಮಿತೇ।
01113008c ಸ್ಥಾಪಿತಾ ಯೇನ ಯಸ್ಮಾಚ್ಚ ತನ್ಮೇ ವಿಸ್ತರತಃ ಶೃಣು।।
ಆದರೆ ಸ್ವಲ್ಪವೇ ಸಮಯದಲ್ಲಿ ಈಗಿನ ಲೋಕದಲ್ಲಿರುವ ಈ ಕಟ್ಟುಪಾಡುಗಳನ್ನು ರಚಿಸಲಾಯಿತು. ಶುಚಿಸ್ಮಿತೇ! ಈ ಕಟ್ಟುಪಾಡುಗಳನ್ನು ಯಾರು ಸ್ಥಾಪಿಸಿದರು ಮತ್ತು ಏಕೆ ಎನ್ನುವುದನ್ನು ವಿಸ್ತಾರವಾಗಿ ಕೇಳು.
01113009a ಬಭೂವೋದ್ದಾಲಕೋ ನಾಮ ಮಹರ್ಷಿರಿತಿ ನಃ ಶ್ರುತಂ।
01113009c ಶ್ವೇತಕೇತುರಿತಿ ಖ್ಯಾತಃ ಪುತ್ರಸ್ತಸ್ಯಾಭವನ್ಮುನಿಃ।।
ಉದ್ದಾಲಕ ಎಂಬ ಹೆಸರಿನ ಮಹರ್ಷಿಯಿದ್ದ ಎಂದು ಕೇಳಿದ್ದೇವೆ. ಆ ಮುನಿಗೆ ಶ್ವೇತಕೇತು ಎಂದು ವಿಖ್ಯಾತ ಮಗನಿದ್ದನು.
01113010a ಮರ್ಯಾದೇಯಂ ಕೃತಾ ತೇನ ಮಾನುಷೇಷ್ವಿತಿ ನಃ ಶ್ರುತಂ।
01113010c ಕೋಪಾತ್ಕಮಲಪತ್ರಾಕ್ಷಿ ಯದರ್ಥಂ ತನ್ನಿಬೋಧ ಮೇ।।
ಕಮಲಪತ್ರಾಕ್ಷೀ! ಇವನೇ ಕೋಪದಲ್ಲಿ ಮನುಷ್ಯರಲ್ಲಿ ಈ ಕಟ್ಟುಪಾಡನ್ನು ಮಾಡಿದನು ಎಂದು ಕೇಳಿದ್ದೇವೆ. ಯಾಕೆ ಎನ್ನುವುದನ್ನು ಹೇಳುತ್ತೇನೆ ಕೇಳು.
01113011a ಶ್ವೇತಕೇತೋಃ ಕಿಲ ಪುರಾ ಸಮಕ್ಷಂ ಮಾತರಂ ಪಿತುಃ।
01113011c ಜಗ್ರಾಹ ಬ್ರಾಹ್ಮಣಃ ಪಾಣೌ ಗಚ್ಛಾವ ಇತಿ ಚಾಬ್ರವೀತ್।।
ಒಮ್ಮೆ ಶ್ವೇತಕೇತು ಮತ್ತು ಅವನ ತಂದೆಯ ಎದಿರಿನಲ್ಲಿಯೇ ಓರ್ವ ಬ್ರಾಹ್ಮಣನು ಅವನ ತಾಯಿಯ ಕೈ ಹಿಡಿದು “ಹೋಗೋಣ!”ಎಂದು ಹೇಳಿದನು.
01113012a ಋಷಿಪುತ್ರಸ್ತತಃ ಕೋಪಂ ಚಕಾರಾಮರ್ಷಿತಸ್ತದಾ।
01113012c ಮಾತರಂ ತಾಂ ತಥಾ ದೃಷ್ಟ್ವಾ ನೀಯಮಾನಾಂ ಬಲಾದಿವ।।
ಬಲವಂತವೋ ಎನ್ನುವಂತೆ ತನ್ನ ತಾಯಿಯನ್ನು ಕರೆದುಕೊಂಡು ಹೋಗುತ್ತಿರುವುದನ್ನು ನೋಡಿದ ಋಷಿಪುತ್ರನು ಉದ್ವಿಗ್ನನಾಗಿ ಕೋಪಗೊಂಡನು.
01113013a ಕ್ರುದ್ಧಂ ತಂ ತು ಪಿತಾ ದೃಷ್ಟ್ವಾ ಶ್ವೇತಕೇತುಮುವಾಚ ಹ।
01113013c ಮಾ ತಾತ ಕೋಪಂ ಕಾರ್ಷೀಸ್ತ್ವಮೇಷ ಧರ್ಮಃ ಸನಾತನಃ।।
ಕೃದ್ಧನಾದ ಅವನನ್ನು ನೋಡಿದ ಅವನ ತಂದೆಯು ಶ್ವೇತಕೇತುವಿಗೆ “ಮಗು! ಸಿಟ್ಟಾಗಬೇಡ. ಇದೇ ಸನಾತನ ಧರ್ಮ!”ಎಂದನು.
01113014a ಅನಾವೃತಾ ಹಿ ಸರ್ವೇಷಾಂ ವರ್ಣಾನಾಮಂಗನಾ ಭುವಿ।
01113014c ಯಥಾ ಗಾವಃ ಸ್ಥಿತಾಸ್ತಾತ ಸ್ವೇ ಸ್ವೇ ವರ್ಣೇ ತಥಾ ಪ್ರಜಾಃ।।
“ಎಲ್ಲ ವರ್ಣದ ಅಂಗನೆಯರೂ ಈ ಭೂಮಿಯಲ್ಲಿ ಗೋವುಗಳಂತೆ ಅನಾವೃತರಾಗಿದ್ದಾರೆ. ಹೀಗೆ ಅವರವರ ವರ್ಣದ ಪ್ರಜೆಗಳು ನಡೆದುಕೊಳ್ಳುತ್ತಾರೆ.”
01113015a ಋಷಿಪುತ್ರೋಽಥ ತಂ ಧರ್ಮಂ ಶ್ವೇತಕೇತುರ್ನ ಚಕ್ಷಮೇ।
01113015c ಚಕಾರ ಚೈವ ಮರ್ಯಾದಾಮಿಮಾಂ ಸ್ತ್ರೀಪುಂಸಯೋರ್ಭುವಿ।।
01113016a ಮಾನುಷೇಷು ಮಹಾಭಾಗೇ ನ ತ್ವೇವಾನ್ಯೇಷು ಜಂತುಷು।
01113016c ತದಾ ಪ್ರಭೃತಿ ಮರ್ಯಾದಾ ಸ್ಥಿತೇಯಮಿತಿ ನಃ ಶ್ರುತಂ।।
ಋಷಿಪುತ್ರ ಶ್ವೇತಕೇತುವು ಆಗ ಇರುವ ಧರ್ಮವನ್ನು ನಿರ್ಲಕ್ಷಿಸಲಿಲ್ಲ. ಆದರೆ ಈ ಭುವಿಯ ಸ್ತ್ರೀ-ಪುರುಷರಿಗೆ ಮಾತ್ರ ಈ ಕಟ್ಟುನಿಟ್ಟನ್ನು ಮಾಡಿದನು. ಮಹಾಭಾಗೆ! ಇದು ಮನುಷ್ಯರಿಗೆ ಮಾತ್ರ. ಇತರ ಜಂತುಗಳಿಗೆ ಅನ್ವಯಿಸುವುದಿಲ್ಲ. ಅಂದಿನಿಂದ ಈ ಕಟ್ಟುನಿಟ್ಟು ಜಾರಿಯಲ್ಲಿದೆ ಎಂದು ಕೇಳುತ್ತೇವೆ.
01113017a ವ್ಯುಚ್ಚರಂತ್ಯಾಃ ಪತಿಂ ನಾರ್ಯಾ ಅದ್ಯ ಪ್ರಭೃತಿ ಪಾತಕಂ।
01113017c ಭ್ರೂಣಹತ್ಯಾಕೃತಂ ಪಾಪಂ ಭವಿಷ್ಯತ್ಯಸುಖಾವಹಂ।।
“ಇಂದಿನಿಂದ ನಾರಿಯು ತನ್ನ ಪತಿಯನ್ನು ಬಿಟ್ಟು ಬೇರೆಯವರೊಡನೆ ಹೋಗುವುದು ಭ್ರೂಣಹತ್ಯೆಯನ್ನು ಮಾಡುವುದರಿಂದಾಗುವ ಪಾಪಕ್ಕೆ ಸಮನಾಗುತ್ತದೆ. ಇದು ಅತ್ಯಂತ ದುಃಖವನ್ನು ತರುತ್ತದೆ.
01113018a ಭಾರ್ಯಾಂ ತಥಾ ವ್ಯುಚ್ಚರತಃ ಕೌಮಾರೀಂ ಬ್ರಹ್ಮಚಾರಿಣೀಂ।
01113018c ಪತಿವ್ರತಾಮೇತದೇವ ಭವಿತಾ ಪಾತಕಂ ಭುವಿ।।
ಕೌಮಾರಿ ಬ್ರಹ್ಮಚಾರಿಣಿ ಪತಿವ್ರತಾ ಪತ್ನಿಯನ್ನು ಬಯಸುವುದೂ ಕೂಡ ಈ ಭುವಿಯಲ್ಲಿ ಪಾತಕವೆನಿಸಿಕೊಳ್ಳುತ್ತದೆ.
01113019a ಪತ್ಯಾ ನಿಯುಕ್ತಾ ಯಾ ಚೈವ ಪತ್ನ್ಯಪತ್ಯಾರ್ಥಮೇವ ಚ।
01113019c ನ ಕರಿಷ್ಯತಿ ತಸ್ಯಾಶ್ಚ ಭವಿಷ್ಯತ್ಯೇತದೇವ ಹಿ।।
ಮಕ್ಕಳನ್ನು ಪಡೆಯುವ ಉದ್ದೇಶದಿಂದ ಪತಿಯು ಕೂಡಲಿಚ್ಛಿಸಿದಾಗ ಪತ್ನಿಯು ನಿರಾಕರಿಸಿದರೂ ಇದೇ ರೀತಿಯ ಪಾಪವೆನಿಸಿಕೊಳ್ಳುತ್ತದೆ.”
01113020a ಇತಿ ತೇನ ಪುರಾ ಭೀರು ಮರ್ಯಾದಾ ಸ್ಥಾಪಿತಾ ಬಲಾತ್।
01113020c ಉದ್ದಾಲಕಸ್ಯ ಪುತ್ರೇಣ ಧರ್ಮ್ಯಾ ವೈ ಶ್ವೇತಕೇತುನಾ।।
ಭೀರು! ಈ ರೀತಿ ಹಿಂದೆ ಉದ್ದಾಲಕ ಪುತ್ರ ಶ್ವೇತಕೇತುವು ಬಲವಂತವಾಗಿ ಧರ್ಮವನ್ನು ಹೊಂದಿಕೊಂಡೇ ಈ ಕಟ್ಟುನಿಟ್ಟನ್ನು ಸ್ಥಾಪಿಸಿದನು.
01113021a ಸೌದಾಸೇನ ಚ ರಂಭೋರು ನಿಯುಕ್ತಾಪತ್ಯಜನ್ಮನಿ।
01113021c ಮದಯಂತೀ ಜಗಾಮರ್ಷಿಂ ವಸಿಷ್ಠಮಿತಿ ನಃ ಶ್ರುತಂ।।
01113022a ತಸ್ಮಾಲ್ಲೇಭೇ ಚ ಸಾ ಪುತ್ರಮಶ್ಮಕಂ ನಾಮ ಭಾಮಿನೀ।
01113022c ಭಾರ್ಯಾ ಕಲ್ಮಾಷಪಾದಸ್ಯ ಭರ್ತುಃ ಪ್ರಿಯಚಿಕೀರ್ಷಯಾ।।
ರಂಭೋರು! ಸೌದಾಸನು ತನ್ನ ಪತ್ನಿ ಮದಯಂತಿಯನ್ನು ಸಂತಾನಕ್ಕಾಗಿ ನಿಯುಕ್ತಗೊಳಿಸಿದಾಗ, ಅವಳು ಮಹರ್ಷಿ ವಸಿಷ್ಠನ ಬಳಿ ಹೋದಳು ಎಂದು ಕೇಳಿಲ್ಲವೇ? ಅವನಿಂದ ಕಲ್ಮಾಷಪಾದನ ಭಾರ್ಯೆಯು ಅಶ್ಮಕ ಎಂಬ ಹೆಸರಿನ ಪುತ್ರನನ್ನು ಪಡೆದು ತನ್ನ ಪತಿಯನ್ನು ಸಂತೋಷಗೊಳಿಸಿದಳು.
01113023a ಅಸ್ಮಾಕಮಪಿ ತೇ ಜನ್ಮ ವಿದಿತಂ ಕಮಲೇಕ್ಷಣೇ।
01113023c ಕೃಷ್ಣದ್ವೈಪಾಯನಾದ್ಭೀರು ಕುರೂಣಾಂ ವಂಶವೃದ್ಧಯೇ।।
ಕಮಲೇಕ್ಷಣೇ! ಭೀರು! ನಮ್ಮ ಜನ್ಮವೂ ಕೂಡ ಕುರು ವಂಶವೃದ್ಧಿಗೋಸ್ಕರ ಕೃಷ್ಣದ್ವೈಪಾಯನನಿಂದ ಆಯಿತೆಂದು ತಿಳಿದಿದೆ.
01113024a ಅತ ಏತಾನಿ ಸರ್ವಾಣಿ ಕಾರಣಾನಿ ಸಮೀಕ್ಷ್ಯ ವೈ।
01113024c ಮಮೈತದ್ವಚನಂ ಧರ್ಮ್ಯಂ ಕರ್ತುಮರ್ಹಸ್ಯನಿಂದಿತೇ।।
ಅನಿಂದಿತೇ! ಈ ಎಲ್ಲ ಕಾರಣಗಳನ್ನು ಸಮೀಕ್ಷಿಸಿ ನೀನು ಕೂಡ ಧರ್ಮಕ್ಕೆ ಹೊಂದಿಕೊಂಡೇ ಇರುವ ನನ್ನ ಈ ಮಾತುಗಳಂತೆ ಮಾಡುವುದು ಸರಿ.
01113025a ಋತಾವೃತೌ ರಾಜಪುತ್ರಿ ಸ್ತ್ರಿಯಾ ಭರ್ತಾ ಯತವ್ರತೇ।
01113025c ನಾತಿವರ್ತವ್ಯ ಇತ್ಯೇವಂ ಧರ್ಮಂ ಧರ್ಮವಿದೋ ವಿದುಃ।।
ಕಟ್ಟುನಿಟ್ಟು ವ್ರತಾದಿಗಳನ್ನು ಮಾಡುತ್ತಿರುವ ರಾಜಪುತ್ರಿ! ಧರ್ಮವನ್ನು ತಿಳಿದ ಪತಿವ್ರತೆಯರಾದ ಸ್ತ್ರೀಯರು ಪತಿಯ ಮಾತನ್ನು ಉಲ್ಲಂಘಿಸದೇ ಇರುವುದೇ ಧರ್ಮವೆಂದು ತಿಳಿಯುತ್ತಾರೆ.
01113026a ಶೇಷೇಷ್ವನ್ಯೇಷು ಕಾಲೇಷು ಸ್ವಾತಂತ್ರ್ಯಂ ಸ್ತ್ರೀ ಕಿಲಾರ್ಹತಿ।
01113026c ಧರ್ಮಮೇತಂ ಜನಾಃ ಸಂತಃ ಪುರಾಣಂ ಪರಿಚಕ್ಷತೇ।।
ಬೇರೆ ಎಲ್ಲ ಕಾಲದಲ್ಲಿಯೂ ಸ್ತ್ರೀಯು ಸ್ವತಂತ್ರಳಾಗಿದ್ದಾಳೆ ಸರಿ. ಸಂತ ಜನರು ಮತ್ತು ಪುರಾಣಗಳು ಇದನ್ನೇ ಧರ್ಮವೆಂದು ಪರಿಗಣಿಸುತ್ತಾರೆ.
01113027a ಭರ್ತಾ ಭಾರ್ಯಾಂ ರಾಜಪುತ್ರಿ ಧರ್ಮ್ಯಂ ವಾಧರ್ಮ್ಯಮೇವ ವಾ।
01113027c ಯದ್ಬ್ರೂಯಾತ್ತತ್ತಥಾ ಕಾರ್ಯಮಿತಿ ಧರ್ಮವಿದೋ ವಿದುಃ।।
01113028a ವಿಶೇಷತಃ ಪುತ್ರಗೃದ್ಧೀ ಹೀನಃ ಪ್ರಜನನಾತ್ಸ್ವಯಂ।
01113028c ಯಥಾಹಮನವದ್ಯಾಂಗಿ ಪುತ್ರದರ್ಶನಲಾಲಸಃ।।
ರಾಜಪುತ್ರಿ! ಭಾರ್ಯೆಯು ತನ್ನ ಪತಿಯು ಏನು ಹೇಳುತ್ತಾನೋ - ಧರ್ಮವಾಗಿರಲಿ ಅಥವಾ ಅಧರ್ಮವಾಗಿರಲಿ - ಹಾಗೆಯೇ ನಡೆದುಕೊಳ್ಳಬೇಕು ಎಂದು ಧರ್ಮವಿದರು ತಿಳಿದಿದ್ದಾರೆ.
01113029a ತಥಾ ರಕ್ತಾಂಗುಲಿತಲಃ ಪದ್ಮಪತ್ರನಿಭಃ ಶುಭೇ।
01113029c ಪ್ರಸಾದಾರ್ಥಂ ಮಯಾ ತೇಽಯಂ ಶಿರಸ್ಯಭ್ಯುದ್ಯತೋಽಂಜಲಿಃ।।
ಶುಭೇ! ಈ ರೀತಿ ನಾನು ರಕ್ತಾಂಗುಲಿಗಳಡಿಯಲ್ಲಿ ಪದ್ಮಪತ್ರವನ್ನು ಹಿಡಿದಿರುವಂತೆ ನನ್ನ ತಲೆಯ ಮೇಲೆ ಕೈಜೋಡಿಸಿ ನಿನ್ನಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದೇನೆ.
01113030a ಮನ್ನಿಯೋಗಾತ್ಸುಕೇಶಾಂತೇ ದ್ವಿಜಾತೇಸ್ತಪಸಾಧಿಕಾತ್।
01113030c ಪುತ್ರಾನ್ಗುಣಸಮಾಯುಕ್ತಾನುತ್ಪಾದಯಿತುಮರ್ಹಸಿ।
01113030e ತ್ವತ್ಕೃತೇಽಹಂ ಪೃಥುಶ್ರೋಣಿ ಗಚ್ಛೇಯಂ ಪುತ್ರಿಣಾಂ ಗತಿಂ।।
ಸುಕೇಶಾಂತೇ! ನನ್ನ ನಿಯೋಗದಂತೆ ಅಧಿಕ ತಪಸ್ವಿ ದ್ವಿಜನಿಂದ ಗುಣಸಂಪನ್ನ ಯುಕ್ತ ಪುತ್ರರನ್ನು ಪಡೆಯಬೇಕು. ಪೃಥುಶ್ರೋಣಿ! ನಿನ್ನ ಈ ಸಹಾಯದಿಂದ ನಾನು ಮಕ್ಕಳಿರುವವರ ಗತಿಯನ್ನು ಸೇರಬಲ್ಲೆ.”
01113031a ಏವಮುಕ್ತಾ ತತಃ ಕುಂತೀ ಪಾಂಡುಂ ಪರಪುರಂಜಯಂ।
01113031c ಪ್ರತ್ಯುವಾಚ ವರಾರೋಹಾ ಭರ್ತುಃ ಪ್ರಿಯಹಿತೇ ರತಾ।।
ಇದನ್ನು ಕೇಳಿದ ಪ್ರಿಯಹಿತರತೆ ವರಾರೋಹೆ ಕುಂತಿಯು ಪರಪುರಂಜಯ ಪಾಂಡುವಿಗೆ ಈ ರೀತಿ ಉತ್ತರಿಸಿದಳು:
01113032a ಪಿತೃವೇಶ್ಮನ್ಯಹಂ ಬಾಲಾ ನಿಯುಕ್ತಾತಿಥಿಪೂಜನೇ।
01113032c ಉಗ್ರಂ ಪರ್ಯಚರಂ ತತ್ರ ಬ್ರಾಹ್ಮಣಂ ಸಂಶಿತವ್ರತಂ।।
01113033a ನಿಗೂಢನಿಶ್ಚಯಂ ಧರ್ಮೇ ಯಂ ತಂ ದುರ್ವಾಸಸಂ ವಿದುಃ।
01113033c ತಮಹಂ ಸಂಶಿತಾತ್ಮಾನಂ ಸರ್ವಯತ್ನೈರತೋಷಯಂ।।
“ನನ್ನ ತಂದೆಯ ಮನೆಯಲ್ಲಿ ಬಾಲಕಿಯಾಗಿದ್ದಾಗ ಅತಿಥಿ ಪೂಜೆಯಲ್ಲಿ ನಿಯುಕ್ತಗೊಂಡಿದ್ದೆನು. ಆಗ ಅಲ್ಲಿಗೆ ಸಂಶಿತವ್ರತ, ಉಗ್ರ, ಪರ್ಯಚರ, ಧರ್ಮದ ವಿಷಯದಲ್ಲಿ ನಿಗೂಢ ನಿಶ್ಚಯಗಳನ್ನೀಡುವ, ವಿದ್ವಾಂಸ ಬ್ರಾಹ್ಮಣ ದುರ್ವಾಸನು ಬಂದನು. ನಾನು ಆ ಸಂಶಿತಾತ್ಮನನ್ನು ಸರ್ವ ಯತ್ನಗಳಿಂದ ತೃಪ್ತಿಗೊಳಿಸಿದೆನು.
01113034a ಸ ಮೇಽಭಿಚಾರಸಂಯುಕ್ತಮಾಚಷ್ಟ ಭಗವಾನ್ವರಂ।
01113034c ಮಂತ್ರಗ್ರಾಮಂ ಚ ಮೇ ಪ್ರಾದಾದಬ್ರವೀಚ್ಚೈವ ಮಾಮಿದಂ।।
ಸುಲಭವಾಗಿ ತೃಪ್ತಿಗೊಳ್ಳದ ಆ ಶ್ರೇಷ್ಠ ಭಗವಾನನನ್ನು ನನ್ನ ಎಲ್ಲ ಪ್ರಯತ್ನಗಳಿಂದ ಸಂತುಷ್ಠಗೊಳಿಸಿದೆನು. ಅದಕ್ಕೆ ಅವನು ನನಗೆ ಒಂದು ಮಂತ್ರಗ್ರಾಮವನ್ನು ನೀಡಿ ಈ ಮಾತುಗಳನ್ನಾಡಿದನು.
01113035a ಯಂ ಯಂ ದೇವಂ ತ್ವಮೇತೇನ ಮಂತ್ರೇಣಾವಾಹಯಿಷ್ಯಸಿ।
01113035c ಅಕಾಮೋ ವಾ ಸಕಾಮೋ ವಾ ಸ ತೇ ವಶಮುಪೈಷ್ಯತಿ।।
“ಈ ಮಂತ್ರಗಳಿಂದ ನೀನು ಯಾವ ಯಾವ ದೇವತೆಯನ್ನು ಅಹ್ವಾನಿಸುತ್ತೀಯೋ ಅವನು ಇಷ್ಟವಿರಲಿ ಅಥವಾ ಇಷ್ಟವಿಲ್ಲದಿರಲ್ಲಿ ನಿನ್ನ ವಶನಾಗುತ್ತಾನೆ.”
01113036a ಇತ್ಯುಕ್ತಾಹಂ ತದಾ ತೇನ ಪಿತೃವೇಶ್ಮನಿ ಭಾರತ।
01113036c ಬ್ರಾಹ್ಮಣೇನ ವಚಸ್ತಥ್ಯಂ ತಸ್ಯ ಕಾಲೋಽಯಮಾಗತಃ।।
ಭಾರತ! ನನ್ನ ತಂದೆಯ ಮನೆಯಲ್ಲಿ ಅವನು ನನಗೆ ಈ ರೀತಿ ಹೇಳಿದನು. ಬ್ರಾಹ್ಮಣನು ನೀಡಿದ ವಚನವು ಸತ್ಯ ಮತ್ತು ಅದರ ಸಮಯವು ಈಗ ಬಂದೊದಗಿದೆ.
01113037a ಅನುಜ್ಞಾತಾ ತ್ವಯಾ ದೇವಮಾಹ್ವಯೇಯಮಹಂ ನೃಪ।
01113037c ತೇನ ಮಂತ್ರೇಣ ರಾಜರ್ಷೇ ಯಥಾ ಸ್ಯಾನ್ನೌ ಪ್ರಜಾ ವಿಭೋ।।
ರಾಜರ್ಷಿ ನೃಪ! ನಿನ್ನ ಅನುಜ್ಞೆಯಂತೆ ಆ ಮಂತ್ರದಿಂದ ನಾನು ಓರ್ವ ದೇವತೆಯನ್ನು ಕರೆಯುತ್ತೇನೆ. ವಿಭೋ! ಇದರಿಂದ ನಮಗೆ ಮಕ್ಕಳಾಗಬಹುದು.
01113038a ಆವಾಹಯಾಮಿ ಕಂ ದೇವಂ ಬ್ರೂಹಿ ತತ್ತ್ವವಿದಾಂ ವರ।
01113038c ತ್ವತ್ತೋಽನುಜ್ಞಾಪ್ರತೀಕ್ಷಾಂ ಮಾಂ ವಿದ್ಧ್ಯಸ್ಮಿನ್ಕರ್ಮಣಿ ಸ್ಥಿತಾಂ।।
ತತ್ವವಿದರಲ್ಲಿ ಶ್ರೇಷ್ಠ! ಯಾವ ದೇವತೆಯನ್ನು ಆವಾಹಿಸಲಿ ಹೇಳು. ನಿನ್ನ ಅನುಜ್ಞೆಯಿದೆಯೆಂದಾದರೆ ನಾನು ಇದಕ್ಕೆ ಸಿದ್ಧಳಿದ್ದೇನೆ.”
01113039 ಪಾಂಡುರುವಾಚ।
01113039a ಅದ್ಯೈವ ತ್ವಂ ವರಾರೋಹೇ ಪ್ರಯತಸ್ವ ಯಥಾವಿಧಿ।
01113039c ಧರ್ಮಮಾವಾಹಯ ಶುಭೇ ಸ ಹಿ ದೇವೇಷು ಪುಣ್ಯಭಾಕ್।।
ಪಾಂಡುವು ಹೇಳಿದನು: “ವರಾರೋಹೆ! ಇಂದೇ ನೀನು ಯಥಾವಿಧಿಯಾಗಿ ಇದನ್ನು ಪ್ರಯತ್ನಿಸು. ಶುಭೇ! ದೇವತೆಗಳ ಪುಣ್ಯಭಾಗಿ ಧರ್ಮನನ್ನು ಆವಾಹಿಸು.
01113040a ಅಧರ್ಮೇಣ ನ ನೋ ಧರ್ಮಃ ಸಂಯುಜ್ಯೇತ ಕಥಂ ಚನ।
01113040c ಲೋಕಶ್ಚಾಯಂ ವರಾರೋಹೇ ಧರ್ಮೋಽಯಮಿತಿ ಮಂಸ್ಯತೇ।।
ಇದು ಅಧರ್ಮವೆನಿಸಿದರೆ ಧರ್ಮನು ಎಂದೂ ಇದರಲ್ಲಿ ಪಾಲ್ಗೊಳ್ಳುವುದಿಲ್ಲ. ವರಾರೋಹೇ! ಜನರು ಇದನ್ನೇ ಧರ್ಮವೆಂದು ಮನ್ನಿಸುತ್ತಾರೆ.
01113041a ಧಾರ್ಮಿಕಶ್ಚ ಕುರೂಣಾಂ ಸ ಭವಿಷ್ಯತಿ ನ ಸಂಶಯಃ।
01113041c ದತ್ತಸ್ಯಾಪಿ ಚ ಧರ್ಮೇಣ ನಾಧರ್ಮೇ ರಂಸ್ಯತೇ ಮನಃ।।
ಅವನು ನಿಸ್ಸಂಶಯವಾಗಿಯೂ ಕುರುಗಳಿಗೆ ಧರ್ಮದ ದಾರಿದೀಪನಾಗುತ್ತಾನೆ. ಧರ್ಮನಿಂದ ಕೊಡಲ್ಪಟ್ಟ ಅವನ ಮನಸ್ಸು ಅಧರ್ಮದ ಕಡೆ ಹೋಗಲು ಸಾಧ್ಯವೇ ಇಲ್ಲ.
01113042a ತಸ್ಮಾದ್ಧರ್ಮಂ ಪುರಸ್ಕೃತ್ಯ ನಿಯತಾ ತ್ವಂ ಶುಚಿಸ್ಮಿತೇ।
01113042c ಉಪಚಾರಾಭಿಚಾರಾಭ್ಯಾಂ ಧರ್ಮಮಾರಾಧಯಸ್ವ ವೈ।।
ಆದುದರಿಂದ ಶುಚಿಸ್ಮಿತೇ! ಧರ್ಮನನ್ನು ಪುರಸ್ಕರಿಸು. ನಿಯತ್ತು ಮತ್ತು ಉಪಚಾರ ಅಭಿಚಾರಗಳಿಂದ ಧರ್ಮನನ್ನು ಆರಾಧಿಸು.””
01113043 ವೈಶಂಪಾಯನ ಉವಾಚ।
01113043a ಸಾ ತಥೋಕ್ತಾ ತಥೇತ್ಯುಕ್ತ್ವಾ ತೇನ ಭರ್ತ್ರಾ ವರಾಂಗನಾ।
01113043c ಅಭಿವಾದ್ಯಾಭ್ಯನುಜ್ಞಾತಾ ಪ್ರದಕ್ಷಿಣಮವರ್ತತ।।
ವೈಶಂಪಾಯನನು ಹೇಳಿದನು: ““ಹಾಗೆಯೇ ಆಗಲಿ” ಎಂದು ತನ್ನ ಪತಿಗೆ ಹೇಳಿದ ಆ ವರಾಂಗನೆಯು ಅವನಿಗೆ ಪ್ರದಕ್ಷಿಣೆಮಾಡಿ ನಮಸ್ಕರಿಸಿ ಅಪ್ಪಣೆಯನ್ನು ಪಡೆದಳು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಕುಂತೀಪುತ್ರೋತ್ಪನ್ಯನುಜ್ಞಾನೇ ತ್ರಯೋದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಕುಂತೀಪುತ್ರೋತ್ಪನ್ಯನುಜ್ಞಾನ ಎನ್ನುವ ನೂರಾಹದಿಮೂರನೆಯ ಅಧ್ಯಾಯವು.