112 ವ್ಯುಷಿತಾಶ್ವೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 112

ಸಾರ

ಪಾಂಡುವೇ ತನ್ನಲ್ಲಿ ಮಕ್ಕಳನ್ನು ಹುಟ್ಟಿಸಬೇಕೆಂದು ಕುಂತಿಯು ಕೇಳಿಕೊಳ್ಳುವುದು (1-5). ರಾಜಾ ವ್ಯುಷಿತಾಶ್ವನ ಚರಿತೆಯನ್ನು ಹೇಳಿ ಕುಂತಿಯು ಪಾಂಡುವೂ ಕೂಡ ತನ್ನ ಯೋಗಬಲದಿಂದ ಮಕ್ಕಳ ತಂದೆಯಾಗಬಹುದೆಂದು ಹೇಳುವುದು (6-34).

01112001 ವೈಶಂಪಾಯನ ಉವಾಚ।
01112001a ಏವಮುಕ್ತಾ ಮಹಾರಾಜ ಕುಂತೀ ಪಾಂಡುಮಭಾಷತ।
01112001c ಕುರೂಣಾಂ ಋಷಭಂ ವೀರಂ ತದಾ ಭೂಮಿಪತಿಂ ಪತಿಂ।।

ವೈಶಂಪಾಯನನು ಹೇಳಿದನು: “ಮಹಾರಾಜ! ಇದನ್ನು ಕೇಳಿದ ಕುಂತಿಯು ಕುರು ಋಷಭ ವೀರ ಭೂಮಿಪತಿ ತನ್ನ ಪತಿ ಪಾಂಡುವಿಗೆ ಹೇಳಿದಳು:

01112002a ನ ಮಾಮರ್ಹಸಿ ಧರ್ಮಜ್ಞ ವಕ್ತುಮೇವಂ ಕಥಂ ಚನ।
01112002c ಧರ್ಮಪತ್ನೀಮಭಿರತಾಂ ತ್ವಯಿ ರಾಜೀವಲೋಚನ।।

“ಧರ್ಮಜ್ಞ! ನೀನು ನನ್ನಲ್ಲಿ ಈ ರೀತಿ ಮಾತನಾಡುವುದು ಯಾವಕಾರಣಕ್ಕೂ ಸರಿಯಲ್ಲ. ರಾಜೀವಲೋಚನ! ನಿನ್ನಲ್ಲಿಯೇ ಅಭಿರತ ಧರ್ಮಪತ್ನಿ ನಾನು.

01112003a ತ್ವಮೇವ ತು ಮಹಾಬಾಹೋ ಮಯ್ಯಪತ್ಯಾನಿ ಭಾರತ।
01112003c ವೀರ ವೀರ್ಯೋಪಪನ್ನಾನಿ ಧರ್ಮತೋ ಜನಯಿಷ್ಯಸಿ।।

ವೀರ ಮಹಾಬಾಹು ಭಾರತ! ಧಾರ್ಮಿಕವಾಗಿ ನೀನೇ ನನ್ನಲ್ಲಿ ವೀರ ಪುತ್ರರನ್ನು ಪಡೆಯುತ್ತೀಯೆ.

01112004a ಸ್ವರ್ಗಂ ಮನುಜಶಾರ್ದೂಲ ಗಚ್ಛೇಯಂ ಸಹಿತಾ ತ್ವಯಾ।
01112004c ಅಪತ್ಯಾಯ ಚ ಮಾಂ ಗಚ್ಛ ತ್ವಮೇವ ಕುರುನಂದನ।।

ಮನುಜಶಾರ್ದೂಲ! ನಾನು ನಿನ್ನೊಡನೆಯೇ ಸ್ವರ್ಗವನ್ನು ಸೇರುತ್ತೇನೆ. ಕುರುನಂದನ! ಮಕ್ಕಳಿಗೋಸ್ಕರ ನೀನೇ ನನ್ನಲ್ಲಿ ಬರಬೇಕು.

01112005a ನ ಹ್ಯಹಂ ಮನಸಾಪ್ಯನ್ಯಂ ಗಚ್ಛೇಯಂ ತ್ವದೃತೇ ನರಂ।
01112005c ತ್ವತ್ತಃ ಪ್ರತಿವಿಶಿಷ್ಟಶ್ಚ ಕೋಽನ್ಯೋಽಸ್ತಿ ಭುವಿ ಮಾನವಃ।।

ನಿನ್ನನ್ನು ಬಿಟ್ಟು ಬೇರೆಯವರೊಂದಿಗೆ ನಾನು ನನ್ನ ಯೋಚನೆಯಲ್ಲಿಯೂ ಹೋಗಲಾರೆ. ಈ ಭೂಮಿಯಲ್ಲಿ ನಿನಗಿಂಥ ಶ್ರೇಷ್ಠ ಬೇರೆ ಯಾವ ಮಾನವನಿದ್ದಾನೆ?

01112006a ಇಮಾಂ ಚ ತಾವದ್ಧರ್ಮ್ಯಾಂ ತ್ವಂ ಪೌರಾಣೀಂ ಶೃಣು ಮೇ ಕಥಾಂ।
01112006c ಪರಿಶ್ರುತಾಂ ವಿಶಾಲಾಕ್ಷ ಕೀರ್ತಯಿಷ್ಯಾಮಿ ಯಾಮಹಂ।।

ವಿಶಾಲಾಕ್ಷ! ಪುರಾಣಗಳಲ್ಲಿ ಕೇಳಿದ ಈ ಧಾರ್ಮಿಕ ಕಥೆಯನ್ನು ಹೇಳುತ್ತೇನೆ ಕೇಳು.

01112007a ವ್ಯುಷಿತಾಶ್ವ ಇತಿ ಖ್ಯಾತೋ ಬಭೂವ ಕಿಲ ಪಾರ್ಥಿವಃ।
01112007c ಪುರಾ ಪರಮಧರ್ಮಿಷ್ಠಃ ಪೂರೋರ್ವಂಶವಿವರ್ಧನಃ।।

ಹಿಂದೆ ಪುರುವಂಶವಿವರ್ಧನ ಪರಮ ಧರ್ಮಿಷ್ಠ ವ್ಯುಷಿತಾಶ್ವ ಎಂಬ ವಿಖ್ಯಾತ ರಾಜನಿದ್ದನೆಂದು ಹೇಳುತ್ತಾರೆ.

01112008a ತಸ್ಮಿಂಶ್ಚ ಯಜಮಾನೇ ವೈ ಧರ್ಮಾತ್ಮನಿ ಮಹಾತ್ಮನಿ।
01112008c ಉಪಾಗಮಂಸ್ತತೋ ದೇವಾಃ ಸೇಂದ್ರಾಃ ಸಹ ಮಹರ್ಷಿಭಿಃ।।

ಆ ಧರ್ಮಾತ್ಮ ಮಹಾತ್ಮನು ಯಜ್ಞವನ್ನು ನಡೆಸಿದಾಗ ಇಂದ್ರನೊಡಗೂಡಿ ದೇವತೆಗಳೂ ಮಹರ್ಷಿಗಳೂ ಅಲ್ಲಿಗೆ ಆಗಮಿಸಿದ್ದರು.

01112009a ಅಮಾದ್ಯದಿಂದ್ರಃ ಸೋಮೇನ ದಕ್ಷಿಣಾಭಿರ್ದ್ವಿಜಾತಯಃ।
01112009c ವ್ಯುಷಿತಾಶ್ವಸ್ಯ ರಾಜರ್ಷೇಸ್ತತೋ ಯಜ್ಞೇ ಮಹಾತ್ಮನಃ।।

ರಾಜರ್ಷಿ ಮಹಾತ್ಮ ವ್ಯುಷಿತಾಶ್ವನ ಆ ಯಜ್ಞದಲ್ಲಿ ಇಂದ್ರನು ಸೋಮವನ್ನು ಕುಡಿದು ಮತ್ತು ದ್ವಿಜರು ದಕ್ಷಿಣೆಗಳಿಂದ ಸಂತೃಪ್ತರಾದರು.

01112010a ವ್ಯುಷಿತಾಶ್ವಸ್ತತೋ ರಾಜನ್ನತಿ ಮರ್ತ್ಯಾನ್ವ್ಯರೋಚತ।
01112010c ಸರ್ವಭೂತಾನ್ಯತಿ ಯಥಾ ತಪನಃ ಶಿಶಿರಾತ್ಯಯೇ।।

ಛಳಿಗಾಲ ಕಳೆದ ನಂತರ ಸೂರ್ಯನು ಹೇಗೆ ಸರ್ವಭೂತಗಳನ್ನೂ ಬೆಳಗುತ್ತಾನೋ ಹಾಗೆ ರಾಜ ವ್ಯುಷಿತಾಶ್ವನು ಮಾನವರಲ್ಲಿ ಬೆಳಗತೊಡಗಿದನು.

01112011a ಸ ವಿಜಿತ್ಯ ಗೃಹೀತ್ವಾ ಚ ನೃಪತೀನ್ರಾಜಸತ್ತಮಃ।
01112011c ಪ್ರಾಚ್ಯಾನುದೀಚ್ಯಾನ್ಮಧ್ಯಾಂಶ್ಚ ದಕ್ಷಿಣಾತ್ಯಾನಕಾಲಯತ್।।

ಆ ರಾಜಸತ್ತಮನು ಪೂರ್ವ, ಉತ್ತರ, ಮಧ್ಯ ಮತ್ತು ದಕ್ಷಿಣ ದಿಕ್ಕುಗಳ ನೃಪತಿಗಳನ್ನು ಜಯಿಸಿ, ಸೆರೆಹಿಡಿದು, ತನ್ನ ಮುಂದೆ ಮೆರವಣಿಗೆ ಮಾಡಿಸಿದನು.

01112012a ಅಶ್ವಮೇಧೇ ಮಹಾಯಜ್ಞೇ ವ್ಯುಷಿತಾಶ್ವಃ ಪ್ರತಾಪವಾನ್।
01112012c ಬಭೂವ ಸ ಹಿ ರಾಜೇಂದ್ರೋ ದಶನಾಗಬಲಾನ್ವಿತಃ।।

ಪ್ರತಾಪಿ ದಶನಾಗಬಲಾನ್ವಿತ ವ್ಯುಷಿತಾಶ್ವನು ಮಹಾಯಜ್ಞ ಅಶ್ವಮೇಧದ ನಂತರ ರಾಜೇಂದ್ರನೆನಿಸಿಕೊಂಡನು.

01112013a ಅಪ್ಯತ್ರ ಗಾಥಾಂ ಗಾಯಂತಿ ಯೇ ಪುರಾಣವಿದೋ ಜನಾಃ।
01112013c ವ್ಯುಷಿತಾಶ್ವಃ ಸಮುದ್ರಾಂತಾಂ ವಿಜಿತ್ಯೇಮಾಂ ವಸುಂಧರಾಂ।
01112013e ಅಪಾಲಯತ್ಸರ್ವವರ್ಣಾನ್ಪಿತಾ ಪುತ್ರಾನಿವೌರಸಾನ್।।

ಪುರಾಣಗಳನ್ನು ತಿಳಿದ ಜನರು ಈಗಲೂ ಅವನ ಬಗ್ಗೆ ಗಾಥೆಯನ್ನು ಹಾಡುತ್ತಾರೆ. ವ್ಯುಷಿತಾಶ್ವನು ಸಮುದ್ರದ ತುದಿಯವರೆಗೂ ವಸುಂಧರೆಯನ್ನು ಗೆದ್ದನು, ಮತ್ತು ತಂದೆಯು ತನ್ನ ಮಕ್ಕಳನ್ನು ಹೇಗೋ ಹಾಗೆ ಎಲ್ಲ ವರ್ಣದವರನ್ನೂ ಪರಿಪಾಲಿಸಿದನು.

01112014a ಯಜಮಾನೋ ಮಹಾಯಜ್ಞೈರ್ಬ್ರಾಹ್ಮಣೇಭ್ಯೋ ದದೌ ಧನಂ।
01112014c ಅನಂತರತ್ನಾನ್ಯಾದಾಯ ಆಜಹಾರ ಮಹಾಕ್ರತೂನ್।
01112014e ಸುಷಾವ ಚ ಬಹೂನ್ಸೋಮಾನ್ಸೋಮಸಂಸ್ಥಾಸ್ತತಾನ ಚ।।

ಮಹಾಯಜ್ಞದ ಯಜಮಾನನಾಗಿ ಬ್ರಾಹ್ಮಣರಿಗೆ ಅನಂತ ರತ್ನ-ಧನಗಳನ್ನಿತ್ತು ಆ ಮಹಾಕ್ರತುವನ್ನು ನೆರವೇರಿಸಿದನು. ಬಹಳ ಸಮಯ ಅವನು ಸೋಮರಸವನ್ನು ಹಿಂಡಿ ಸೋಮ ಯಜ್ಞಗಳನ್ನು ನೆರವೇರಿಸಿದನು.

01112015a ಆಸೀತ್ಕಾಕ್ಷೀವತೀ ಚಾಸ್ಯ ಭಾರ್ಯಾ ಪರಮಸಮ್ಮತಾ।
01112015c ಭದ್ರಾ ನಾಮ ಮನುಷ್ಯೇಂದ್ರ ರೂಪೇಣಾಸದೃಶೀ ಭುವಿ।।

ಮನುಷ್ಯೇಂದ್ರ! ಅವನಿಗೆ ಪರಮಸಮ್ಮತ, ರೂಪದಲ್ಲಿ ಭುವಿಯಲ್ಲಿಯೇ ಆಸದೃಷಿ ಭದ್ರಾ ಕಾಕ್ಷಿವತೀ ಎಂಬ ಹೆಸರಿನ ಪತ್ನಿಯಿದ್ದಳು.

01112016a ಕಾಮಯಾಮಾಸತುಸ್ತೌ ತು ಪರಸ್ಪರಮಿತಿ ಶ್ರುತಿಃ।
01112016c ಸ ತಸ್ಯಾಂ ಕಾಮಸಮ್ಮತ್ತೋ ಯಕ್ಷ್ಮಾಣಂ ಸಮಪದ್ಯತ।।

ಅವರು ಪರಸ್ಪರರನ್ನು ಕಾಮಿಸಿದರು ಎಂದು ಕೇಳುತ್ತೇವೆ. ಅವನು ಅವಳಲ್ಲಿ ಕಾಮಸಮ್ಮತ್ತನಾಗಿ ಯಕ್ಷ್ಮರೋಗವನ್ನು ಹೊಂದಿದನು.

01112017a ತೇನಾಚಿರೇಣ ಕಾಲೇನ ಜಗಾಮಾಸ್ತಮಿವಾಂಶುಮಾನ್।
01112017c ತಸ್ಮಿನ್ಪ್ರೇತೇ ಮನುಷ್ಯೇಂದ್ರೇ ಭಾರ್ಯಾಸ್ಯ ಭೃಶದುಃಖಿತಾ।।

ಸ್ವಲ್ಪವೇ ಕಾಲದಲ್ಲಿ ಮುಳುಗುವ ಸೂರ್ಯನಂತೆ ಅವನು ಹೊರಟುಹೋದನು. ಆ ಮನುಷ್ಯೇಂದ್ರನು ತೀರಿಕೊಂಡನಂತರ ಅವನ ಪತ್ನಿಯು ಶೋಕಸಂತಪ್ತಳಾದಳು.

01112018a ಅಪುತ್ರಾ ಪುರುಷವ್ಯಾಘ್ರ ವಿಲಲಾಪೇತಿ ನಃ ಶ್ರುತಂ।
01112018c ಭದ್ರಾ ಪರಮದುಃಖಾರ್ತಾ ತನ್ನಿಬೋಧ ನರಾಧಿಪ।।

ಪುರಷವ್ಯಾಘ್ರ! ಮಕ್ಕಳಿಲ್ಲದ ಆ ಭದ್ರೆಯು ಪರಮ ದುಃಖಾರ್ತಳಾಗಿ ವಿಲಪಿಸಿದಳೆಂದು ಹೇಳುತ್ತಾರೆ. ನರಾಧಿಪ! ಅದನ್ನು ಹೇಳುತ್ತೇನೆ ಕೇಳು.

01112019a ನಾರೀ ಪರಮಧರ್ಮಜ್ಞ ಸರ್ವಾ ಪುತ್ರವಿನಾಕೃತಾ।
01112019c ಪತಿಂ ವಿನಾ ಜೀವತಿ ಯಾ ನ ಸಾ ಜೀವತಿ ದುಃಖಿತಾ।।

“ಪರಮಧರ್ಮಜ್ಞ! ಯಾವುದೇ ನಾರಿಯು ಪುತ್ರಳಿಲ್ಲದವಳಂತೆ ಮಾಡಿದ ಪತಿಯನ್ನು ಬಿಟ್ಟು ಜೀವಿಸಲಾರಳು; ಅವಳು ಜೀವಿಸಿದರೂ ದುಃಖಿತಳಾಗಿಯೇ ಇರುತ್ತಾಳೆ.

01112020a ಪತಿಂ ವಿನಾ ಮೃತಂ ಶ್ರೇಯೋ ನಾರ್ಯಾಃ ಕ್ಷತ್ರಿಯಪುಂಗವ।
01112020c ತ್ವದ್ಗತಿಂ ಗಂತುಮಿಚ್ಛಾಮಿ ಪ್ರಸೀದಸ್ವ ನಯಸ್ವ ಮಾಂ।।

ಕ್ಷತ್ರಿಯ ಪುಂಗವ! ಪತಿಯಿಲ್ಲದ ನಾರಿಯ ಶ್ರೇಯಸ್ಸು ಕೂಡ ಮೃತಗೊಂಡಂತೆ. ನೀನು ಹೋದಲ್ಲಿಗೆ ಬರಲು ಇಚ್ಛಿಸುತ್ತೇನೆ. ನನ್ನನ್ನೂ ನಿನ್ನ ಜೊತೆ ಕರೆದುಕೊಂಡು ಹೋಗುವ ಕೃಪೆ ಮಾಡು.

01112021a ತ್ವಯಾ ಹೀನಾ ಕ್ಷಣಮಪಿ ನಾಹಂ ಜೀವಿತುಮುತ್ಸಹೇ।
01112021c ಪ್ರಸಾದಂ ಕುರು ಮೇ ರಾಜನ್ನಿತಸ್ತೂರ್ಣಂ ನಯಸ್ವ ಮಾಂ।।

ನನಗೆ ನಿನ್ನನ್ನು ಬಿಟ್ಟು ಒಂದು ಕ್ಷಣವೂ ಜೀವಿಸುವ ಉತ್ಸಾಹವಿಲ್ಲ. ರಾಜನ್! ಇಲ್ಲಿಂದ ನನ್ನನ್ನು ಬೇಗನೆ ಕರೆದುಕೊಂಡು ಹೋಗುವ ಕೃಪೆ ಮಾಡು.

01112022a ಪೃಷ್ಠತೋಽನುಗಮಿಷ್ಯಾಮಿ ಸಮೇಷು ವಿಷಮೇಷು ಚ।
01112022c ತ್ವಾಮಹಂ ನರಶಾರ್ದೂಲ ಗಚ್ಛಂತಮನಿವರ್ತಿನಂ।।

ಸಮ ವಿಷಮ ಪರಿಸ್ಥಿತಿಗಳೆರಡರಲ್ಲೂ ನಾನು ನಿನ್ನನ್ನು ಹಿಂಬಾಲಿಸುತ್ತೇನೆ. ನರಶಾರ್ದೂಲ! ನಿನ್ನನ್ನು ಹಿಂಬಾಲಿಸಿದ ನಾನು ಪುನಃ ಹಿಂತಿರುಗಿಯೂ ನೋಡಲಾರೆ.

01112023a ಚಾಯೇವಾನಪಗಾ ರಾಜನ್ಸತತಂ ವಶವರ್ತಿನೀ।
01112023c ಭವಿಷ್ಯಾಮಿ ನರವ್ಯಾಘ್ರ ನಿತ್ಯಂ ಪ್ರಿಯಹಿತೇ ರತಾ।।

ರಾಜನ್! ನೆರಳಿನಂತೆ ನಿನ್ನನ್ನು ಹಿಂಬಾಲಿಸುವೆ, ಸತತ ನಿನ್ನ ವಶದಲ್ಲಿಯೇ ಇರುವೆ. ನರವ್ಯಾಘ್ರ! ನಿತ್ಯವೂ ನಿನ್ನ ಪ್ರಿಯಹಿತ ನಿರತಳಾಗಿರುವೆ.

01112024a ಅದ್ಯ ಪ್ರಭೃತಿ ಮಾಂ ರಾಜನ್ಕಷ್ಟಾ ಹೃದಯಶೋಷಣಾಃ।
01112024c ಆಧಯೋಽಭಿಭವಿಷ್ಯಂತಿ ತ್ವದೃತೇ ಪುಷ್ಕರೇಕ್ಷಣ।।

ರಾಜನ್! ಪುಷ್ಕರೇಕ್ಷಣ! ನಿನ್ನನ್ನು ಕಳೆದುಕೊಂಡಾಗಿನಿಂದ ನನ್ನನ್ನು ಹೃದಯ ಬತ್ತಿಸುವ ಕಷ್ಟವು ಆವರಿಸಿದೆ.

01112025a ಅಭಾಗ್ಯಯಾ ಮಯಾ ನೂನಂ ವಿಯುಕ್ತಾಃ ಸಹಚಾರಿಣಃ।
01112025c ಸಂಯೋಗಾ ವಿಪ್ರಯುಕ್ತಾ ವಾ ಪೂರ್ವದೇಹೇಷು ಪಾರ್ಥಿವ।।

ಪಾರ್ಥಿವ! ಅಭಾಗ್ಯೆ ನಾನು ನನ್ನ ಹಿಂದಿನ ಜನ್ಮಗಳಲ್ಲಿ ಸಹಚಾರಿಣಿಗಳನ್ನು ಅಲಗಿಸಿರಬಹುದು ಅಥವಾ ಕೂಡಿದವರನ್ನು ಬೇರೆ ಮಾಡಿರಬಹುದು.

01112026a ತದಿದಂ ಕರ್ಮಭಿಃ ಪಾಪೈಃ ಪೂರ್ವದೇಹೇಷು ಸಂಚಿತಂ।
01112026c ದುಃಖಂ ಮಾಮನುಸಂಪ್ರಾಪ್ತಂ ರಾಜಂಸ್ತ್ವದ್ವಿಪ್ರಯೋಗಜಂ।।

ರಾಜನ್! ಪೂರ್ವ ಜನ್ಮಗಳಿಂದ ಸಂಚಿತಗೊಂಡ ಈ ಪಾಪ ಕರ್ಮಗಳಿಂದಲೇ ನಾನು ನಿನ್ನಿಂದ ಅಲಗಿ ಈ ದುಃಖವನ್ನು ಪಡೆದುಕೊಂಡಿದ್ದೇನೆ.

01112027a ಅದ್ಯ ಪ್ರಭೃತ್ಯಹಂ ರಾಜನ್ಕುಶಪ್ರಸ್ತರಶಾಯಿನೀ।
01112027c ಭವಿಷ್ಯಾಮ್ಯಸುಖಾವಿಷ್ಟಾ ತ್ವದ್ದರ್ಶನಪರಾಯಣಾ।।

ರಾಜನ್! ಇಂದಿನಿಂದ ನಾನು ನಿನ್ನ ದರ್ಶನವನ್ನೇ ಕಾಯುತ್ತಾ ದುಃಖಾವಿಷ್ಟಳಾಗಿ ದರ್ಭಾಸನದ ಮೇಲೆ ಮಲಗುತ್ತೇನೆ.

01112028a ದರ್ಶಯಸ್ವ ನರವ್ಯಾಘ್ರ ಸಾಧು ಮಾಮಸುಖಾನ್ವಿತಾಂ।
01112028c ದೀನಾಮನಾಥಾಂ ಕೃಪಣಾಂ ವಿಲಪಂತೀಂ ನರೇಶ್ವರ।।

ನರವ್ಯಾಘ್ರ! ನನಗೆ ಕಾಣುವಂತವನಾಗು. ನರೇಶ್ವರ! ಈ ದುಃಖಾನ್ವಿತ ದೀನ, ಅನಾಥ, ಕೃಪಣ, ವಿಲಪಿಸುತ್ತಿರುವ ನನ್ನನ್ನು ಸಂತವಿಸು.”

01112029a ಏವಂ ಬಹುವಿಧಂ ತಸ್ಯಾಂ ವಿಲಪಂತ್ಯಾಂ ಪುನಃ ಪುನಃ।
01112029c ತಂ ಶವಂ ಸಂಪರಿಷ್ವಜ್ಯ ವಾಕ್ಕಿಲಾಂತರ್ಹಿತಾಬ್ರವೀತ್।।

ಈ ರೀತಿ ಬಹುವಿಧವಾಗಿ ಅವಳು ಪುನಃ ಪುನಃ ಆ ಶವವನ್ನು ಅಪ್ಪಿಕೊಳ್ಳುತ್ತಾ ವಿಲಪಿಸುತ್ತಿರುವಾಗ ಒಂದು ಅಂತರಿಕ್ಷವಾಣಿಯು ನುಡಿಯಿತು:

01112030a ಉತ್ತಿಷ್ಠ ಭದ್ರೇ ಗಚ್ಛ ತ್ವಂ ದದಾನೀಹ ವರಂ ತವ।
01112030c ಜನಯಿಷ್ಯಾಮ್ಯಪತ್ಯಾನಿ ತ್ವಯ್ಯಹಂ ಚಾರುಹಾಸಿನಿ।।

“ಭದ್ರೇ! ಮೇಲೇಳು! ನಿನಗೊಂದು ವರವನ್ನು ಕೊಡುತ್ತೇನೆ. ಹೋಗು. ಚಾರುಹಾಸಿನಿ! ನಿನ್ನಲ್ಲಿ ನಾನು ಮಕ್ಕಳನ್ನು ಹುಟ್ಟಿಸುತ್ತೇನೆ.

01112031a ಆತ್ಮೀಯೇ ಚ ವರಾರೋಹೇ ಶಯನೀಯೇ ಚತುರ್ದಶೀಂ।
01112031c ಅಷ್ಟಮೀಂ ವಾ ಋತುಸ್ನಾತಾ ಸಂವಿಶೇಥಾ ಮಯಾ ಸಹ।।

ವರಾರೋಹೆ! ಶುಕ್ಲಪಕ್ಷದ ಎಂಟನೆಯ ಅಥವಾ ಹದಿನಾಲ್ಕನೆಯ ದಿನ ಋತುಸ್ನಾತಳಾಗಿ ನೀನು ನಿನ್ನ ಹಾಸಿಗೆಯ ಮೇಲೆ ನನ್ನೊಡನೆ ಮಲಗಿಕೋ.”

01112032a ಏವಮುಕ್ತಾ ತು ಸಾ ದೇವೀ ತಥಾ ಚಕ್ರೇ ಪತಿವ್ರತಾ।
01112032c ಯಥೋಕ್ತಮೇವ ತದ್ವಾಕ್ಯಂ ಭದ್ರಾ ಪುತ್ರಾರ್ಥಿನೀ ತದಾ।।

ಆ ಪುತ್ರಾರ್ಥಿನಿ ದೇವಿ ಪತಿವ್ರತೆಯು ಇದನ್ನು ಕೇಳಿ ಆ ವಾಕ್ಯದಲ್ಲಿ ಹೇಳಿದ ಹಾಗೆಯೇ ನಡೆದುಕೊಂಡಳು.

01112033a ಸಾ ತೇನ ಸುಷುವೇ ದೇವೀ ಶವೇನ ಮನುಜಾಧಿಪ।
01112033c ತ್ರೀಂಶಾಲ್ವಾಂಶ್ಚತುರೋ ಮದ್ರಾನ್ಸುತಾನ್ಭರತಸತ್ತಮ।।

ಮನುಜಾಧಿಪ! ಭರತಸತ್ತಮ! ಆ ಶವದಿಂದ ದೇವಿಯು ಮೂವರು ಶಾಲ್ವರನ್ನು ಮತ್ತು ನಾಲ್ವರು ಮದ್ರರನ್ನು ಮಕ್ಕಳಾಗಿ ಪಡೆದಳು.

01112034a ತಥಾ ತ್ವಮಪಿ ಮಯ್ಯೇವ ಮನಸಾ ಭರತರ್ಷಭ।
01112034c ಶಕ್ತೋ ಜನಯಿತುಂ ಪುತ್ರಾಂಸ್ತಪೋಯೋಗಬಲಾನ್ವಯಾತ್।।

ಭರತರ್ಷಭ! ನೀನೂ ಕೂಡ ಹೀಗೆ ನಿನ್ನ ತಪಸ್ಸು ಮತ್ತು ಯೋಗಬಲದಿಂದ ನನ್ನಲ್ಲಿ ನಿನ್ನ ಮನಸ್ಸಿನಿಂದಲೇ ಮಕ್ಕಳನ್ನು ಹುಟ್ಟಿಸಲು ಶಕ್ತನಾಗಿದ್ದೀಯೆ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ವ್ಯುಷಿತಾಶ್ವೋಪಾಖ್ಯಾನೇ ದ್ವಾದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ವ್ಯುಷಿತಾಶ್ವೋಪಾಖ್ಯಾನ ಎನ್ನುವ ನೂರಹನ್ನೆರಡನೆಯ ಅಧ್ಯಾಯವು.