109 ಪಾಂಡುಮೃಗಶಾಪಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 109

ಸಾರ

ಜನಮೇಜಯನು ಪಾಂಡವರ ಜನನದ ಕುರಿತು ಕೇಳುವುದು (1-5). ಜಿಂಕೆಯ ರೂಪದಲ್ಲಿ ರತಿಸುಖವನ್ನು ಪಡೆಯುತಿದ್ದ ಮುನಿ ಕಿಂದಮ ದಂಪತಿಗಳನ್ನು ಹೊಡೆದುದಕ್ಕೆ, ಸಂಭೋಗದ ಸಮಯದಲ್ಲಿ ಮೃತ್ಯುವೆಂದು ಪಾಂಡುವಿಗೆ ಶಾಪ (6-31).

01109001 ಜನಮೇಜಯ ಉವಾಚ।
01109001a ಕಥಿತೋ ಧಾರ್ತರಾಷ್ಟ್ರಾಣಾಮಾರ್ಷಃ ಸಂಭವ ಉತ್ತಮಃ।
01109001c ಅಮಾನುಷೋ ಮಾನುಷಾಣಾಂ ಭವತಾ ಬ್ರಹ್ಮವಿತ್ತಮ।।

ಜನಮೇಜಯನು ಹೇಳಿದನು: “ಬ್ರಹ್ಮವಿತ್ತಮ! ಮನುಷ್ಯ ಧಾರ್ತರಾಷ್ಟ್ರರ ಘೋರ, ಉತ್ತಮ, ಅಮಾನುಷ ಜನ್ಮದ ಕುರಿತು ಹೇಳಿದೆ.

01109002a ನಾಮಧೇಯಾನಿ ಚಾಪ್ಯೇಷಾಂ ಕಥ್ಯಮಾನಾನಿ ಭಾಗಶಃ।
01109002c ತ್ವತ್ತಃ ಶ್ರುತಾನಿ ಮೇ ಬ್ರಹ್ಮನ್ಪಾಂಡವಾನಾಂ ತು ಕೀರ್ತಯ।।

ಅವರ ಹೆಸರುಗಳನ್ನೂ ಕೂಡ ನೀನು ನನಗೆ ಸಂಪೂರ್ಣವಾಗಿ ತಿಳಿಸಿದ್ದೀಯೆ. ಬ್ರಹ್ಮನ್! ಈಗ ಪಾಂಡವರ ಕುರಿತು ಹೇಳು.

01109003a ತೇ ಹಿ ಸರ್ವೇ ಮಹಾತ್ಮಾನೋ ದೇವರಾಜಪರಾಕ್ರಮಾಃ।
01109003c ತ್ವಯೈವಾಂಶಾವತರಣೇ ದೇವಭಾಗಾಃ ಪ್ರಕೀರ್ತಿತಾಃ।।

ಈ ಸರ್ವ ಮಹಾತ್ಮರೂ ದೇವರಾಜನಂತೆ ಪರಾಕ್ರಮಿಗಳಾಗಿದ್ದು ದೇವತೆಗಳ ಅಂಶಗಳೆಂದು ಅಂಶಾವತರಣದಲ್ಲಿ ನೀನೇ ಹೇಳಿದ್ದೆ.

01109004a ತಸ್ಮಾದಿಚ್ಛಾಮ್ಯಹಂ ಶ್ರೋತುಮತಿಮಾನುಷಕರ್ಮಣಾಂ।
01109004c ತೇಷಾಮಾಜನನಂ ಸರ್ವಂ ವೈಶಂಪಾಯನ ಕೀರ್ತಯ।।

ವೈಶಂಪಾಯನ! ಈ ಅತಿಮಾನುಷಕರ್ಮಿಗಳ ಜನನದ ಕುರಿತು ಸರ್ವವನ್ನೂ ಕೇಳಬಯಸುತ್ತೇನೆ. ಹೇಳು.”

01109005 ವೈಶಂಪಾಯನ ಉವಾಚ।
01109005a ರಾಜಾ ಪಾಂಡುರ್ಮಹಾರಣ್ಯೇ ಮೃಗವ್ಯಾಲನಿಷೇವಿತೇ।
01109005c ವನೇ ಮೈಥುನಕಾಲಸ್ಥಂ ದದರ್ಶ ಮೃಗಯೂಥಪಂ।।

ವೈಶಂಪಾಯನನು ಹೇಳಿದನು: “ಒಮ್ಮೆ ರಾಜ ಪಾಂಡುವು ಜಿಂಕೆ ಮತ್ತು ಕ್ರೂರ ಮೃಗಗಳಿಂದೊಡಗೂಡಿದ ಮಹಾರಣ್ಯದಲ್ಲಿ ಸಂಭೋಗ ನಿರತ ಜಿಂಕೆಯ ಜೋಡಿಯನ್ನು ಕಂಡನು.

01109006a ತತಸ್ತಾಂ ಚ ಮೃಗೀಂ ತಂ ಚ ರುಕ್ಮಪುಂಖೈಃ ಸುಪತ್ರಿಭಿಃ।
01109006c ನಿರ್ಬಿಭೇದ ಶರೈಸ್ತೀಕ್ಷ್ಣೈಃ ಪಾಂಡುಃ ಪಂಚಭಿರಾಶುಗೈಃ।।

ಆಗ ಪಾಂಡುವು ಗಂಡು ಮತ್ತು ಹೆಣ್ಣುಜಿಂಕೆಗಳೆರಡನ್ನೂ ಅತಿವೇಗದಲ್ಲಿ ಚಲಿಸುತ್ತಿದ್ದ, ಬಂಗಾರದ ಬಣ್ಣದ, ಐದು ಸುಂದರ ತೀಕ್ಷ್ಣಬಾಣಗಳಿಂದ ಹೊಡೆದನು.

01109007a ಸ ಚ ರಾಜನ್ಮಹಾತೇಜಾ ಋಷಿಪುತ್ರಸ್ತಪೋಧನಃ।
01109007c ಭಾರ್ಯಯಾ ಸಹ ತೇಜಸ್ವೀ ಮೃಗರೂಪೇಣ ಸಂಗತಃ।।

ರಾಜನ್! ಅವನು ತಪೋಧನ ಋಷಿಯೋರ್ವನ ಪುತ್ರನಾಗಿದ್ದು ಮಹಾತೇಜಸ್ವಿಯಾಗಿದ್ದನು. ಆ ತೇಜಸ್ವಿಯು ಜಿಂಕೆಯ ರೂಪದಲ್ಲಿ ತನ್ನ ಪತ್ನಿಯೊಡನೆ ಕೂಡುತ್ತಿದ್ದನು.

01109008a ಸಂಸಕ್ತಸ್ತು ತಯಾ ಮೃಗ್ಯಾ ಮಾನುಷೀಮೀರಯನ್ಗಿರಂ।
01109008c ಕ್ಷಣೇನ ಪತಿತೋ ಭೂಮೌ ವಿಲಲಾಪಾಕುಲೇಂದ್ರಿಯಃ।।

ಹೆಣ್ಣು ಜಿಂಕೆಯೊಡನೆ ಕೂಡಿಕೊಂಡಿದ್ದ ಅವನು ತಕ್ಷಣವೇ ಭೂಮಿಯ ಮೇಲೆ ಬಿದ್ದು ಶಕ್ತಿಯು ಕ್ಷೀಣಿಸುತ್ತಿದ್ದಂತೆಯೇ ಮಾನವ ಧ್ವನಿಯಲ್ಲಿ ವಿಲಪಿಸಿದನು.

01109009 ಮೃಗ ಉವಾಚ।
01109009a ಕಾಮಮನ್ಯುಪರೀತಾಪಿ ಬುದ್ಧ್ಯಂಗರಹಿತಾಪಿ ಚ।
01109009c ವರ್ಜಯಂತಿ ನೃಶಂಸಾನಿ ಪಾಪೇಷ್ವಭಿರತಾ ನರಾಃ।।

ಮೃಗವು ಹೇಳಿತು: “ಪಾಪದಲ್ಲಿಯೇ ರುಚಿಹೊಂದಿದ ನರರು ಬುದ್ಧಿರಹಿತರಾದರೂ ಕೂಡ ಕಾಮ-ಕ್ರೋಧಗಳಿಂದ ಆವೃತರಾದವರನ್ನು ಕೊಲ್ಲುವುದಿಲ್ಲ.

01109010a ನ ವಿಧಿಂ ಗ್ರಸತೇ ಪ್ರಜ್ಞಾ ಪ್ರಜ್ಞಾಂ ತು ಗ್ರಸತೇ ವಿಧಿಃ।
01109010c ವಿಧಿಪರ್ಯಾಗತಾನರ್ಥಾನ್ ಪ್ರಜ್ಞಾ ನ ಪ್ರತಿಪದ್ಯತೇ।।

ಪ್ರಜ್ಞೆಯು ವಿಧಿಯನ್ನು ಹಿಡಿತದಲ್ಲಿಟ್ಟುಕೊಳ್ಳುವುದಿಲ್ಲ. ವಿಧಿಯೇ ಪ್ರಜ್ಞೆಯನ್ನು ಹಿಡಿತದಲ್ಲಿಟ್ಟುಕೊಂಡಿರುತ್ತದೆ. ವಿಧಿ ನಿಶೇಧಿಸಿದ ಏನನ್ನೂ ಪ್ರಜ್ಞೆಯು ಪಡೆಯಲು ಸಾಧ್ಯವಿಲ್ಲ.

01109011a ಶಶ್ವದ್ಧರ್ಮಾತ್ಮನಾಂ ಮುಖ್ಯೇ ಕುಲೇ ಜಾತಸ್ಯ ಭಾರತ।
01109011c ಕಾಮಲೋಭಾಭಿಭೂತಸ್ಯ ಕಥಂ ತೇ ಚಲಿತಾ ಮತಿಃ।।

ಭಾರತ! ನೀನು ಸದ್ಧರ್ಮಾತ್ಮರ ಮುಖ್ಯ ಕುಲದಲ್ಲಿ ಜನಿಸಿದರೂ ಕೂಡ ಹೇಗೆ ನಿನ್ನ ಬುದ್ಧಿಯನ್ನು ಕಾಮಲೋಭದಲ್ಲಿ ತೊಡಗಿಸಿದೆ?”

01109012 ಪಾಂಡುರುವಾಚ।
01109012a ಶತ್ರೂಣಾಂ ಯಾ ವಧೇ ವೃತ್ತಿಃ ಸಾ ಮೃಗಾಣಾಂ ವಧೇ ಸ್ಮೃತಾ।
01109012c ರಾಜ್ಞಾಂ ಮೃಗ ನ ಮಾಂ ಮೋಹಾತ್ತ್ವಂ ಗರ್ಹಯಿತುಮರ್ಹಸಿ।।

ಪಾಂಡುವು ಹೇಳಿದನು: “ಶತೃಗಳನ್ನು ವಧಿಸುವಂತೆ ಮೃಗಗಳನ್ನೂ ವಧಿಸುವುದು ರಾಜ ಪ್ರವೃತ್ತಿಯೆಂದೇ ಹೇಳುತ್ತಾರೆ. ಜಿಂಕೆಯೇ! ಮೋಹದಲ್ಲಿದ್ದ ನೀನು ನನ್ನನ್ನು ದೂರುವುದು ಸರಿಯಲ್ಲ.

01109013a ಅಚ್ಛದ್ಮನಾಮಾಯಯಾ ಚ ಮೃಗಾಣಾಂ ವಧ ಇಷ್ಯತೇ।
01109013c ಸ ಏವ ಧರ್ಮೋ ರಾಜ್ಞಾಂ ತು ತದ್ವಿದ್ವಾನ್ಕಿಂ ನು ಗರ್ಹಸೇ।।

ಮರೆಯಲ್ಲಿದ್ದುಕೊಂಡು ಅಥವಾ ಮಾಯೆಯಿಂದ ಮೃಗಗಳನ್ನು ಕೊಲ್ಲಬಾರದು ಎನ್ನುವುದು ರಾಜರ ಧರ್ಮ. ಇದು ನಿನಗೆ ತಿಳಿದಿದೆ. ಆದರೂ ನನ್ನನ್ನು ಏಕೆ ದೂರುತ್ತಿರುವೆ?

01109014a ಅಗಸ್ತ್ಯಃ ಸತ್ರಮಾಸೀನಶ್ಚಚಾರ ಮೃಗಯಾಂ ಋಷಿಃ।
01109014c ಆರಣ್ಯಾನ್ಸರ್ವದೈವತ್ಯಾನ್ಮೃಗಾನ್ಪ್ರೋಕ್ಷ್ಯ ಮಹಾವನೇ।।

ಸತ್ರನಿರತ ಋಷಿ ಅಗಸ್ತ್ಯನು ಬೇಟೆಯಾಡಲು ಅರಣ್ಯಕ್ಕೆ ಹೋದನು. ಆ ಮಹಾವನದಲ್ಲಿ ಅವನು ದೇವತೆಗಳಿಗಾಗಿ ಎಲ್ಲೆಡೆಯಲ್ಲಿಯೂ ಜಿಂಕೆಗಳ ಪ್ರೋಕ್ಷಣೆಯನ್ನೇ ಮಾಡಿದನು.

01109015a ಪ್ರಮಾಣದೃಷ್ಟಧರ್ಮೇಣ ಕಥಮಸ್ಮಾನ್ವಿಗರ್ಹಸೇ।
01109015c ಅಗಸ್ತ್ಯಸ್ಯಾಭಿಚಾರೇಣ ಯುಷ್ಮಾಕಂ ವೈ ವಪಾ ಹುತಾ।।

ಪ್ರಮಾಣದೃಷ್ಟ ಧರ್ಮದ ಪ್ರಕಾರ ನನ್ನನ್ನು ಹೇಗೆ ದೂರುತ್ತೀಯೆ? ಅಗಸ್ತ್ಯನ ಅಭಿಚಾರಣೆಯಿಂದ ನೀವೆಲ್ಲರೂ ಈಗಾಗಲೇ ಆಹುತಿಗಳಾಗಿಬಿಟ್ಟಿದ್ದೀರಿ.”

01109016 ಮೃಗ ಉವಾಚ।
01109016a ನ ರಿಪೂನ್ವೈ ಸಮುದ್ದಿಶ್ಯ ವಿಮುಂಚಂತಿ ಪುರಾ ಶರಾನ್।
01109016c ರಂಧ್ರ ಏಷಾಂ ವಿಶೇಷೇಣ ವಧಕಾಲಃ ಪ್ರಶಸ್ಯತೇ।।

ಮೃಗವು ಹೇಳಿತು: “ಬಾಣಗಳನ್ನು ಬಿಡುವುದರ ಮೊದಲು ನಿನ್ನ ಶತ್ರುವಿನ ಕುರಿತು ಸ್ವಲ್ಪ ಯೋಚಿಸಬೇಕಿತ್ತು. ಅವರ ಶಕ್ತಿ ಕ್ಷೀಣಿಸುತ್ತಿರುವಾಗ ಕೊಲ್ಲುವುದು ವಿಶೇಷ ಕಾಲವೆಂದು ಹೇಳುತ್ತಾರೆ.”

01109017 ಪಾಂಡುರುವಾಚ।
01109017a ಪ್ರಮತ್ತಮಪ್ರಮತ್ತಂ ವಾ ವಿವೃತಂ ಘ್ನಂತಿ ಚೌಜಸಾ।
01109017c ಉಪಾಯೈರಿಷುಭಿಸ್ತೀಕ್ಷ್ಣೈಃ ಕಸ್ಮಾನ್ಮೃಗ ವಿಗರ್ಹಸೇ।।

ಪಾಂಡುವು ಹೇಳಿದನು: “ಪ್ರಮತ್ತನಾಗಿರಲಿ ಅಥವಾ ಅಪ್ರಮತ್ತನಾಗಿರಲಿ, ಹೊರಗೆ ಕಂಡಾಗ ಅವನನ್ನು ಬಲ-ಉಪಾಯಗಳೊಂದಿಗೆ ತೀಕ್ಷ್ಣ ಬಾಣಗಳಿಂದ ಕೊಲ್ಲುತ್ತಾರೆ. ಜಿಂಕೆಯೇ! ಹೀಗಿದ್ದಾಗ ನನ್ನನ್ನೇಕೆ ದೂರುತ್ತಿದ್ದೀಯೆ?”

01109018 ಮೃಗ ಉವಾಚ।
01109018a ನಾಹಂ ಘ್ನಂತಂ ಮೃಗಾನ್ರಾಜನ್ವಿಗರ್ಹೇ ಆತ್ಮಕಾರಣಾತ್।
01109018c ಮೈಥುನಂ ತು ಪ್ರತೀಕ್ಷ್ಯಂ ಮೇ ಸ್ಯಾತ್ತ್ವಯೇಹಾನೃಶಂಸತಃ।।

ಮೃಗವು ಹೇಳಿತು: “ರಾಜನ್! ನೀನು ಮೃಗವನ್ನು ಕೊಂದದ್ದಕ್ಕೆ ನನ್ನನ್ನೇ ಕಾರಣವನಾಗಿಟ್ಟುಕೊಂಡು ದೂರುತ್ತಿಲ್ಲ. ಸಂಭೋಗದಲ್ಲಿ ತೊಡಗಿದ್ದ ನಾನು ಮುಗಿಸುವವರೆಗೆ ಕಾದು ನಂತರ ಹೊಡೆಯಬಹುದಿತ್ತಲ್ಲ!

01109019a ಸರ್ವಭೂತಹಿತೇ ಕಾಲೇ ಸರ್ವಭೂತೇಪ್ಸಿತೇ ತಥಾ।
01109019c ಕೋ ಹಿ ವಿದ್ವಾನ್ಮೃಗಂ ಹನ್ಯಾಚ್ಚರಂತಂ ಮೈಥುನಂ ವನೇ।

ಸರ್ವ ಜೀವಿಗಳಿಗೂ ಹಿತಕರವಾದ ಮತ್ತು ಸರ್ವ ಜೀವಿಗಳೂ ಬಯಸುವ ಮೈಥುನ ಕಾಲದಲ್ಲಿರುವ ವನ್ಯ ಮೃಗಗಳನ್ನು ತಿಳಿದ ಯಾರು ತಾನೆ ಕೊಂದಾರು?

01109019e ಪುರುಷಾರ್ಥಫಲಂ ಕಾಂತಂ ಯತ್ತ್ವಯಾ ವಿತಥಂ ಕೃತಂ।।
01109020a ಪೌರವಾಣಾಂ ಋಷೀಣಾಂ ಚ ತೇಷಾಮಕ್ಲಿಷ್ಟಕರ್ಮಣಾಂ।
01109020c ವಂಶೇ ಜಾತಸ್ಯ ಕೌರವ್ಯ ನಾನುರೂಪಮಿದಂ ತವ।।

ಅಕ್ಲಿಷ್ಟಕರ್ಮಿ ಋಷಿ ಪೌರವರ ವಂಶದಲ್ಲಿ ಹುಟ್ಟಿದ ಕೌರವ್ಯ! ಓರ್ವನು ಬಯಸಿದ ಪುರುಷಾರ್ಥಫಲವು ದೊರೆಯದಂತೆ ಮಾಡಿದ ನಿನ್ನ ಈ ಕೃತ್ಯವು ನಿನಗೆ ಅನುರೂಪವಲ್ಲ.

01109021a ನೃಶಂಸಂ ಕರ್ಮ ಸುಮಹತ್ಸರ್ವಲೋಕವಿಗರ್ಹಿತಂ।
01109021c ಅಸ್ವರ್ಗ್ಯಮಯಶಸ್ಯಂ ಚ ಅಧರ್ಮಿಷ್ಠಂ ಚ ಭಾರತ।।

ಭಾರತ! ಈ ಅಸ್ವರ್ಗ್ಯ, ಅಯಶಸ್ವಿ, ಅಧರ್ಮಿಷ್ಠ ಕ್ರೂರ ಕರ್ಮವನ್ನು ಸರ್ವಲೋಕವೂ ಅಲ್ಲಗಳೆಯುತ್ತದೆ.

01109022a ಸ್ತ್ರೀಭೋಗಾನಾಂ ವಿಶೇಷಜ್ಞಃ ಶಾಸ್ತ್ರಧರ್ಮಾರ್ಥತತ್ತ್ವವಿತ್।
01109022c ನಾರ್ಹಸ್ತ್ವಂ ಸುರಸಂಕಾಶ ಕರ್ತುಮಸ್ವರ್ಗ್ಯಮೀದೃಶಂ।।

ಸ್ತ್ರೀಭೋಗಗಳ ಕುರಿತು ವಿಶೇಷವಾಗಿ ತಿಳಿದ, ಶಾಸ್ತ್ರ-ಧರ್ಮಾರ್ಥಗಳ ತತ್ವಗಳನ್ನು ತಿಳಿದ, ಸುರಸಂಕಾಶ ನೀನು ಈ ರೀತಿ ಅಸ್ವರ್ಗ್ಯ ಕೃತ್ಯವನ್ನು ಮಾಡಬಾರದಾಗಿತ್ತು.

01109023a ತ್ವಯಾ ನೃಶಂಸಕರ್ತಾರಃ ಪಾಪಾಚಾರಾಶ್ಚ ಮಾನವಾಃ।
01109023c ನಿಗ್ರಾಹ್ಯಾಃ ಪಾರ್ಥಿವಶ್ರೇಷ್ಠ ತ್ರಿವರ್ಗಪರಿವರ್ಜಿತಾಃ।।

ಪಾರ್ಥಿವಶ್ರೇಷ್ಠ! ನೀನೇ ಕ್ರೂರಕರ್ಮಿ, ಪಾಪಾಚಾರಿ ಮತ್ತು ತ್ರಿವರ್ಗಪರಿವರ್ಜಿತ ಮನುಷ್ಯರನ್ನು ನಿಗ್ರಹಿಸುವವನು.

01109024a ಕಿಂ ಕೃತಂ ತೇ ನರಶ್ರೇಷ್ಠ ನಿಘ್ನತೋ ಮಾಮನಾಗಸಂ।
01109024c ಮುನಿಂ ಮೂಲಫಲಾಹಾರಂ ಮೃಗವೇಷಧರಂ ನೃಪ।
01109024e ವಸಮಾನಮರಣ್ಯೇಷು ನಿತ್ಯಂ ಶಮಪರಾಯಣಂ।।

ನರಶ್ರೇಷ್ಠ! ನೃಪ! ಗಡ್ಡೆ-ಫಲಗಳನ್ನು ತಿಂದು ನಿತ್ಯವೂ ಶಮಪರಾಯಣನಾಗಿ ಅರಣ್ಯದಲ್ಲಿ ವಾಸಿಸುವ, ಮೃಗವೇಷಧರ, ಅನಾಗಸ ಮುನಿ ನನ್ನನ್ನು ಕೊಂದು ನಿನಗೆ ಏನು ದೊರೆಯಿತು?

01109025a ತ್ವಯಾಹಂ ಹಿಂಸಿತೋ ಯಸ್ಮಾತ್ತಸ್ಮಾತ್ತ್ವಾಮಪ್ಯಸಂಶಯಂ।
01109025c ದ್ವಯೋರ್ನೃಶಂಸಕರ್ತಾರಮವಶಂ ಕಾಮಮೋಹಿತಂ।
01109025e ಜೀವಿತಾಂತಕರೋ ಭಾವ ಏವಮೇವಾಗಮಿಷ್ಯತಿ।।

ಮೋಹಪರವಶರಾದ ಈ ನಮ್ಮ ಜೋಡಿಯನ್ನು ಹೇಗೆ ಹಿಂಸಿಸಿದ್ದೀಯೋ ಹಾಗೆ ನೀನೂ ಕೂಡ ಕಾಮ ಮೋಹಿತನಾದಾಗ ನಿನ್ನ ಜೀವವು ಕೊನೆಗೊಳ್ಳುತ್ತದೆ. ನಿಸ್ಸಂಶಯವಾಗಿಯೂ ಹೀಗೆಯೇ ಆಗುತ್ತದೆ.

01109026a ಅಹಂ ಹಿ ಕಿಂದಮೋ ನಾಮ ತಪಸಾಪ್ರತಿಮೋ ಮುನಿಃ।
01109026c ವ್ಯಪತ್ರಪನ್ಮನುಷ್ಯಾಣಾಂ ಮೃಗ್ಯಾಂ ಮೈಥುನಮಾಚರಂ।।
01109027a ಮೃಗೋ ಭೂತ್ವಾ ಮೃಗೈಃ ಸಾರ್ಧಂ ಚರಾಮಿ ಗಹನೇ ವನೇ।
01109027c ನ ತು ತೇ ಬ್ರಹ್ಮಹತ್ಯೇಯಂ ಭವಿಷ್ಯತ್ಯವಿಜಾನತಃ।
01109027e ಮೃಗರೂಪಧರಂ ಹತ್ವಾ ಮಾಮೇವಂ ಕಾಮಮೋಹಿತಂ।।

ನಾನು ಕಿಂದಮ ಎಂಬ ಹೆಸರಿನ ಅಪ್ರತಿಮ ತಪಸ್ವಿ ಮುನಿ. ಮನುಷ್ಯರಿಂದ ನಾಚಿಕೊಂಡು ನಾನು ಮೃಗರೂಪದಲ್ಲಿ ಮೈಥುನದಲ್ಲಿ ತೊಡಗಿದ್ದೆ. ಜಿಂಕೆಯಾಗಿ ಜಿಂಕೆಯೊಡನೆ ಈ ದಟ್ಟ ವನದಲ್ಲಿ ಸಂಚರಿಸುತ್ತೇನೆ. ಜಿಂಕೆಯ ರೂಪವನ್ನು ಧರಿಸಿ ಕಾಮಮೋಹಿತನಾದ ನನ್ನನ್ನು ತಿಳಿಯದೆಯೇ ನೀನು ಕೊಂದಿದ್ದುದರಿಂದ ನಿನಗೆ ಬ್ರಹ್ಮಹತ್ಯಾ ದೋಷವು ತಗಲುವುದಿಲ್ಲ.

01109028a ಅಸ್ಯ ತು ತ್ವಂ ಫಲಂ ಮೂದ ಪ್ರಾಪ್ಸ್ಯಸೀದೃಶಮೇವ ಹಿ।
01109028c ಪ್ರಿಯಯಾ ಸಹ ಸಂವಾಸಂ ಪ್ರಾಪ್ಯ ಕಾಮವಿಮೋಹಿತಃ।
01109028e ತ್ವಮಪ್ಯಸ್ಯಾಮವಸ್ಥಾಯಾಂ ಪ್ರೇತಲೋಕಂ ಗಮಿಷ್ಯಸಿ।।

ಮೂಢ! ಆದರೆ ನೀನೂ ಕೂಡ ಇದೇ ಫಲವನ್ನು ಪಡೆಯುತ್ತೀಯೆ. ಕಾಮವಿಮೋಹಿತನಾಗಿ ಪ್ರಿಯೆಯ ಜೊತೆ ಸಂಭೋಗ ಮಾಡುವಾಗ ನೀನೂ ಕೂಡ ಇದೇ ಅವಸ್ಥೆಯಲ್ಲಿ ಪ್ರೇತಲೋಕವನ್ನು ಸೇರುತ್ತೀಯೆ.

01109029a ಅಂತಕಾಲೇ ಚ ಸಂವಾಸಂ ಯಯಾ ಗಂತಾಸಿ ಕಾಂತಯಾ।
01109029c ಪ್ರೇತರಾಜವಶಂ ಪ್ರಾಪ್ತಂ ಸರ್ವಭೂತದುರತ್ಯಯಂ।
01109029e ಭಕ್ತ್ಯಾ ಮತಿಮತಾಂ ಶ್ರೇಷ್ಠ ಸೈವ ತ್ವಾಮನುಯಾಸ್ಯತಿ।।

ಮತಿವಂತರಲ್ಲಿ ಶ್ರೇಷ್ಠ! ಅಂತ್ಯಕಾಲದಲ್ಲಿ ಯಾವ ಕಾಂತೆಯೊಡನೆ ಸಂಭೋಗದಲ್ಲಿ ತೊಡಗಿರುತ್ತೀಯೋ ಅವಳೂ ಕೂಡ ನಿನ್ನ ಮೇಲಿನ ಭಕ್ತಿಯಿಂದಾಗಿ ನಿನ್ನನ್ನೇ ಅನುಸರಿಸಿ ಸರ್ವಭೂತ ದುರತ ಪ್ರೇತರಾಜನ ವಶವನ್ನು ಹೊಂದುತ್ತಾಳೆ.

01109030a ವರ್ತಮಾನಃ ಸುಖೇ ದುಃಖಂ ಯಥಾಹಂ ಪ್ರಾಪಿತಸ್ತ್ವಯಾ।
01109030c ತಥಾ ಸುಖಂ ತ್ವಾಂ ಸಂಪ್ರಾಪ್ತಂ ದುಃಖಮಭ್ಯಾಗಮಿಷ್ಯತಿ।।

ಸುಖವನ್ನು ಅನುಭವಿಸುತ್ತಿರುವಾಗ ನಿನ್ನಿಂದ ಹೇಗೆ ದುಃಖವನ್ನು ಹೊಂದಿದೆನೋ ಅದೇ ರೀತಿ ನೀನು ಸುಖವನ್ನು ಹೊಂದಿದಾಗ ಇದೇ ದುಃಖವು ನಿನಗೂ ದೊರೆಯುತ್ತದೆ.””

01109031 ವೈಶಂಪಾಯನ ಉವಾಚ।
01109031a ಏವಮುಕ್ತ್ವಾ ಸುದುಃಖಾರ್ತೋ ಜೀವಿತಾತ್ಸ ವ್ಯಯುಜ್ಯತ।
01109031c ಮೃಗಃ ಪಾಂಡುಶ್ಚ ಶೋಕಾರ್ತಃ ಕ್ಷಣೇನ ಸಮಪದ್ಯತ।।

ವೈಶಂಪಾಯನನು ಹೇಳಿದನು: “ದುಃಖಾರ್ತನಾಗಿ ಹೀಗೆ ಹೇಳಿದ ಆ ಮೃಗವು ತನ್ನ ಜೀವವನ್ನು ತ್ಯಜಿಸಿತು. ಪಾಂಡುವಾದರೂ ಶೋಕಾರ್ತನಾಗಿ ಒಂದು ಕ್ಷಣ ಹಾಗೆಯೇ ನಿಂತುಕೊಂಡನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಪಾಂಡುಮೃಗಶಾಪೇ ನವಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಪಾಂಡುಮೃಗಶಾಪ ಎನ್ನುವ ನೂರಾಒಂಭತ್ತನೆಯ ಅಧ್ಯಾಯವು.