ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸಂಭವ ಪರ್ವ
ಅಧ್ಯಾಯ 107
ಸಾರ
ಕೌರವ-ಪಾಂಡವರ ಕುರಿತು ಜನಮೇಜಯನು ಪ್ರಶ್ನಿಸುವುದು (1-6). ವ್ಯಾಸನಿಂದ ಗಾಂಧಾರಿಗೆ ನೂರು ಪುತ್ರರ ವರದಾನ, ಧೃತರಾಷ್ಟ್ರನಿಂದ ಗರ್ಭವತಿಯಾದುದು (7-8). ಎರಡು ವರ್ಷ ಗರ್ಭವತಿಯಾಗಿದ್ದು, ಕುಂತಿಗೆ ಮಕ್ಕಳಾದವೆಂದು ಕೇಳಿ ತನ್ನ ಹೊಟ್ಟೆಯು ಇನ್ನೂ ಗಟ್ಟಿಯಾಗಿರುವುದನ್ನು ನೋಡಿ ಚಿಂತಿತಳಾಗಿ ಗಾಂಧಾರಿಯು ಗರ್ಭಪಾತ ಮಾಡಿಕೊಂಡು, ಹೊರಬಂದ ಮಾಂಸದ ಮುದ್ದೆಯನ್ನು ಬಿಸಾಡಲು ಹೊರಟಾಗ ವ್ಯಾಸನು ಬಂದು ತಡೆದುದು (9-16). ವ್ಯಾಸನ ಸಲಹೆಯಂತೆ ಪಿಂಡವನ್ನು ನೂರಾಒಂದು ಭಾಗಗಳನ್ನಾಗಿ ಮಾಡಿ ತುಪ್ಪದ ಕೊಡಗಳಲ್ಲಿ ಕಾದಿರಿಸಿದುದು (17-24). ದುರ್ಯೋಧನನ ಜನನ, ಧೃತರಾಷ್ಟ್ರನು ಯುಧಿಷ್ಠಿರನ ನಂತರ ಇವನೇ ರಾಜನಾಗುವನಲ್ಲವೇ ಎಂದು ಕೇಳುವುದು, ಘೋರ ಅಪಶಕುನಗಳು, ಕುಲದ ಅಂತ್ಯಕ್ಕೆ ಕಾರಣನಾಗುವ ಈ ಮಗುವನ್ನು ತ್ಯಜಿಸಲು ವಿದುರನ ಸಲಹೆ, ಧೃತರಾಷ್ಟ್ರನು ಪುತ್ರವಾತ್ಸಲ್ಯದಿಂದ ಮಗನನ್ನು ಇಟ್ಟುಕೊಂಡಿದುದು, ಗಾಂಧಾರಿಯ ಇತರ ಮಕ್ಕಳ ಜನನ (25-34). ಗಾಂಧಾರಿಯು ಗರ್ಭಿಣಿಯಾಗಿರುವಾಗ ವೈಶ್ಯ ಸೇವಕಿಯಲ್ಲಿ ಧೃತರಾಷ್ಟ್ರನ ಮಗ ಯುಯುತ್ಸುವಿನ ಜನನ (35-37).
01107001 ವೈಶಂಪಾಯನ ಉವಾಚ।
01107001a ತತಃ ಪುತ್ರಶತಂ ಜಜ್ಞೇ ಗಾಂಧಾರ್ಯಾಂ ಜನಮೇಜಯ।
01107001c ಧೃತರಾಷ್ಟ್ರಸ್ಯ ವೈಶ್ಯಾಯಾಮೇಕಶ್ಚಾಪಿ ಶತಾತ್ಪರಃ।।
ವೈಶಂಪಾಯನನು ಹೇಳಿದನು: “ಜನಮೇಜಯ! ನಂತರ ಗಾಂಧಾರಿಯಲ್ಲಿ ಧೃತರಾಷ್ಟ್ರನ ನೂರು ಪುತ್ರರು ಮತ್ತು ನೂರಾ ಒಂದನೆಯವನು ವೈಶ್ಯೆಯೊಬ್ಬಳಲ್ಲಿ ಜನಿಸಿದರು.
01107002a ಪಾಂಡೋಃ ಕುಂತ್ಯಾಂ ಚ ಮಾದ್ರ್ಯಾಂ ಚ ಪಂಚ ಪುತ್ರಾ ಮಹಾರಥಾಃ।
01107002c ದೇವೇಭ್ಯಃ ಸಮಪದ್ಯಂತ ಸಂತಾನಾಯ ಕುಲಸ್ಯ ವೈ।।
ಪಾಂಡುವಿಗೆ ಕುಂತಿ ಮತ್ತು ಮಾದ್ರಿಯರಲ್ಲಿ ಕುಲಸಂತಾನಾರ್ಥವಾಗಿ ದೇವತೆಗಳಿಂದ ಐವರು ಮಹಾರಥಿ ಪುತ್ರರು ಜನಿಸಿದರು.”
01107003 ಜನಮೇಜಯ ಉವಾಚ।
01107003a ಕಥಂ ಪುತ್ರಶತಂ ಜಜ್ಞೇ ಗಾಂಧಾರ್ಯಾಂ ದ್ವಿಜಸತ್ತಮ।
01107003c ಕಿಯತಾ ಚೈವ ಕಾಲೇನ ತೇಷಾಮಾಯುಶ್ಚ ಕಿಂ ಪರಂ।।
ಜನಮೇಜಯನು ಹೇಳಿದನು: “ದ್ವಿಜಸತ್ತಮ! ಗಾಂಧಾರಿಯಲ್ಲಿ ನೂರು ಪುತ್ರರು ಹೇಗೆ ಮತ್ತು ಎಷ್ಟು ಸಮಯದಲ್ಲಿ ಜನಿಸಿದರು? ಅವರ ಆಯುಷ್ಯವಾದರೂ ಎಷ್ಟಿತ್ತು?
01107004a ಕಥಂ ಚೈಕಃ ಸ ವೈಶ್ಯಾಯಾಂ ಧೃತರಾಷ್ಟ್ರಸುತೋಽಭವತ್।
01107004c ಕಥಂ ಚ ಸದೃಶೀಂ ಭಾರ್ಯಾಂ ಗಾಂಧಾರೀಂ ಧರ್ಮಚಾರಿಣೀಂ।
01107004e ಆನುಕೂಲ್ಯೇ ವರ್ತಮಾನಾಂ ಧೃತರಾಷ್ಟ್ರೋಽತ್ಯವರ್ತತ।।
ಧೃತರಾಷ್ಟ್ರನಿಗೆ ವೈಶ್ಯೆಯಲ್ಲಿ ಹೇಗೆ ಓರ್ವ ಮಗನು ಜನಿಸಿದನು? ತನ್ನ ಅನುಕೂಲಕ್ಕೆ ತಕ್ಕಂತೆ ವರ್ತಿಸುತ್ತಿದ್ದ ಧರ್ಮಚಾರಿಣಿ ಭಾರ್ಯೆ ಗಾಂಧಾರಿಯನ್ನು ಬಿಟ್ಟು ಧೃತರಾಷ್ಟ್ರನು ಅವಳಲ್ಲಿ ಏಕೆ ಹೋದನು?
01107005a ಕಥಂ ಚ ಶಪ್ತಸ್ಯ ಸತಃ ಪಾಂಡೋಸ್ತೇನ ಮಹಾತ್ಮನಾ।
01107005c ಸಮುತ್ಪನ್ನಾ ದೈವತೇಭ್ಯಃ ಪಂಚ ಪುತ್ರಾ ಮಹಾರಥಾಃ।।
ಶಪಿತ ಮಹಾತ್ಮ ಪಾಂಡುವು ತನ್ನ ಸತಿಯರಲ್ಲಿ ಹೇಗೆ ದೇವತೆಗಳಿಂದ ಮಹಾರಥಿ ಪಂಚ ಪುತ್ರರನ್ನು ಪಡೆದನು?
01107006a ಏತದ್ವಿದ್ವನ್ಯಥಾವೃತ್ತಂ ವಿಸ್ತರೇಣ ತಪೋಧನ।
01107006c ಕಥಯಸ್ವ ನ ಮೇ ತೃಪ್ತಿಃ ಕಥ್ಯಮಾನೇಷು ಬಂಧುಷು।।
ತಪೋಧನ! ಇವೆಲ್ಲವನ್ನೂ ಯಥಾವತ್ತಾಗಿ ವಿಸ್ತಾರವಾಗಿ ತಿಳಿಸು. ನನ್ನ ಬಂಧುಗಳ ಕಥೆಯನ್ನು ಎಷ್ಟು ಕೇಳಿದರೂ ನನಗೆ ತೃಪ್ತಿಯಾಗುತ್ತಿಲ್ಲ.”
01107007 ವೈಶಂಪಾಯನ ಉವಾಚ।
01107007a ಕ್ಷುಚ್ಛ್ರಮಾಭಿಪರಿಗ್ಲಾನಂ ದ್ವೈಪಾಯನಮುಪಸ್ಥಿತಂ।
01107007c ತೋಷಯಾಮಾಸ ಗಾಂಧಾರೀ ವ್ಯಾಸಸ್ತಸ್ಯೈ ವರಂ ದದೌ।।
ವೈಶಂಪಾಯನನು ಹೇಳಿದನು: “ಒಮ್ಮೆ ಹಸಿದು ಬಳಲಿ ಬಂದಿದ್ದ ದ್ವೈಪಾಯನನನ್ನು ಗಾಂಧಾರಿಯು ತೃಪ್ತಿಗೊಳಿಸಿದಳು. ವ್ಯಾಸನು ಅವಳಿಗೆ ವರವನ್ನಿತ್ತನು.
01107008a ಸಾ ವವ್ರೇ ಸದೃಶಂ ಭರ್ತುಃ ಪುತ್ರಾಣಾಂ ಶತಮಾತ್ಮನಃ।
01107008c ತತಃ ಕಾಲೇನ ಸಾ ಗರ್ಭಂ ಧೃತರಾಷ್ಟ್ರಾದಥಾಗ್ರಹೀತ್।।
ಅವಳು ತನಗಾಗಿ ತನ್ನ ಪತಿ ಸಮಾನ ನೂರು ಪುತ್ರರನ್ನು ಕೇಳಿದಳು. ಸ್ವಲ್ಪ ಸಮಯದ ನಂತರ ಅವಳು ಧೃತರಾಷ್ಟ್ರನಿಂದ ಗರ್ಭವತಿಯಾದಳು.
01107009a ಸಂವತ್ಸರದ್ವಯಂ ತಂ ತು ಗಾಂಧಾರೀ ಗರ್ಭಮಾಹಿತಂ।
01107009c ಅಪ್ರಜಾ ಧಾರಯಾಮಾಸ ತತಸ್ತಾಂ ದುಃಖಮಾವಿಶತ್।।
ಎರಡು ವರ್ಷಗಳ ಪರ್ಯಂತ ಮಕ್ಕಳನ್ನು ಹಡೆಯದೆ ಗಾಂಧಾರಿಯು ಗರ್ಭವತಿಯಾಗಿಯೇ ಇದ್ದಳು. ಇದರಿಂದ ಅವಳು ದುಃಖಿತಳಾದಳು.
01107010a ಶ್ರುತ್ವಾ ಕುಂತೀಸುತಂ ಜಾತಂ ಬಾಲಾರ್ಕಸಮತೇಜಸಂ।
01107010c ಉದರಸ್ಯಾತ್ಮನಃ ಸ್ಥೈರ್ಯಮುಪಲಭ್ಯಾನ್ವಚಿಂತಯತ್।।
ಕುಂತಿಗೆ ಬಾಲಾರ್ಕಸಮತೇಜಸ್ವಿ ಸುತನು ಜನಿಸಿದನೆಂದು ಕೇಳಿದ ಅವಳು ತನ್ನ ಹೊಟ್ಟೆಯು ಇನ್ನೂ ಗಟ್ಟಿಯಾಗಿಯೇ ಇರುವುದನ್ನು ನೋಡಿ ಚಿಂತಿಸಿದಳು.
01107011a ಅಜ್ಞಾತಂ ಧೃತರಾಷ್ಟ್ರಸ್ಯ ಯತ್ನೇನ ಮಹತಾ ತತಃ।
01107011c ಸೋದರಂ ಪಾತಯಾಮಾಸ ಗಾಂಧಾರೀ ದುಃಖಮೂರ್ಚ್ಛಿತಾ।।
ಧೃತರಾಷ್ಟ್ರನಿಗೆ ತಿಳಿಯದಂತೆ ಸಾಕಷ್ಟು ಪ್ರಯತ್ನಪಟ್ಟು ತನ್ನ ಗರ್ಭಪಾತ ಮಾಡಿಕೊಂಡು ದುಃಖದಿಂದ ಮೂರ್ಛಿತಳಾದಳು.
01107012a ತತೋ ಜಜ್ಞೇ ಮಾಂಸಪೇಶೀ ಲೋಹಾಷ್ಠೀಲೇವ ಸಂಹತಾ।
01107012c ದ್ವಿವರ್ಷಸಂಭೃತಾಂ ಕುಕ್ಷೌ ತಾಮುತ್ಸ್ರಷ್ಟುಂ ಪ್ರಚಕ್ರಮೇ।।
ಹೆಪ್ಪುಗಟ್ಟಿದ ರಕ್ತದ ಹಾಗಿನ ಒಂದು ಮಾಂಸದ ಮುದ್ದೆಯು ಹೊರಬಂದಿತು. ಎರಡು ವರ್ಷಗಳು ತನ್ನ ಹೊಟ್ಟೆಯಲ್ಲಿ ಹೊತ್ತು ಬಂದಿದ್ದ ಅದನ್ನು ಬಿಸಾಡಲು ಮುಂದಾದಳು.
01107013a ಅಥ ದ್ವೈಪಾಯನೋ ಜ್ಞಾತ್ವಾ ತ್ವರಿತಃ ಸಮುಪಾಗಮತ್।
01107013c ತಾಂ ಸ ಮಾಂಸಮಯೀಂ ಪೇಶೀಂ ದದರ್ಶ ಜಪತಾಂ ವರಃ।।
ಇದನ್ನು ತಿಳಿದ ಜಪಿಗಳಲ್ಲಿ ಶ್ರೇಷ್ಠ ದ್ವೈಪಾಯನನು ತಕ್ಷಣವೇ ಅಲ್ಲಿಗೆ ಬಂದು ಆ ಮಾಂಸದ ಮುದ್ದೆಯನ್ನು ನೋಡಿದನು.
01107014a ತತೋಽಬ್ರವೀತ್ಸೌಬಲೇಯೀಂ ಕಿಮಿದಂ ತೇ ಚಿಕೀರ್ಷಿತಂ।
01107014c ಸಾ ಚಾತ್ಮನೋ ಮತಂ ಸತ್ಯಂ ಶಶಂಸ ಪರಮರ್ಷಯೇ।।
“ಏಕೆ ಹೀಗೆ ಮಾಡಿದೆ?” ಎಂದು ಅವನು ಸೌಬಲೇಯಿಯಲ್ಲಿ ಕೇಳಿದನು. ಅವಳು ತನ್ನ ಮನಸ್ಸಿನಲ್ಲಿದ್ದ ಸತ್ಯವನ್ನು ಆ ಪರಮ ಋಷಿಗೆ ತಿಳಿಸಿದಳು:
01107015a ಜ್ಯೇಷ್ಠಂ ಕುಂತೀಸುತಂ ಜಾತಂ ಶ್ರುತ್ವಾ ರವಿಸಮಪ್ರಭಂ।
01107015c ದುಃಖೇನ ಪರಮೇಣೇದಮುದರಂ ಪಾತಿತಂ ಮಯಾ।।
“ರವಿಸಮಪ್ರಭ ಜ್ಯೇಷ್ಠ ಕುಂತೀಸುತನು ಜನಿಸಿದ್ದುದನ್ನು ಕೇಳಿ ಪರಮ ದುಃಖಗೊಂಡು ನನ್ನ ಗರ್ಭವನ್ನು ಕೆಳಗುರುಳಿಸಿದೆ.
01107016a ಶತಂ ಚ ಕಿಲ ಪುತ್ರಾಣಾಂ ವಿತೀರ್ಣಂ ಮೇ ತ್ವಯಾ ಪುರಾ।
01107016c ಇಯಂ ಚ ಮೇ ಮಾಂಸಪೇಶೀ ಜಾತಾ ಪುತ್ರಶತಾಯ ವೈ।।
ಹಿಂದೆ ನೀನು ನನಗೆ ನೂರು ಪುತ್ರರನ್ನು ವರವಾಗಿ ಕೊಟ್ಟಿದ್ದೆ. ಆದರೆ ಆ ಪುತ್ರಶತರ ಬದಲಾಗಿ ಈ ಮಾಂಸದ ಪಿಂಡಿಯು ಹುಟ್ಟಿದೆ!”
01107017 ವ್ಯಾಸ ಉವಾಚ।
01107017a ಏವಮೇತತ್ಸೌಬಲೇಯಿ ನೈತಜ್ಜಾತ್ವನ್ಯಥಾ ಭವೇತ್।
01107017c ವಿತಥಂ ನೋಕ್ತಪೂರ್ವಂ ಮೇ ಸ್ವೈರೇಷ್ವಪಿ ಕುತೋಽನ್ಯಥಾ।।
ವ್ಯಾಸನು ಹೇಳಿದನು: “ಸೌಬಲೇಯೀ! ಅದು ಹಾಗೆಯೇ ಆಗುತ್ತದೆ. ಬೇರೆ ಯಾವರೀತಿಯೂ ಆಗುವುದಿಲ್ಲ. ಈ ಹಿಂದೆ ತಮಾಷೆಯಾಗಿಯೂ ನಾನು ಸುಳ್ಳನ್ನು ಹೇಳಲಿಲ್ಲ. ಈಗ ತಾನೇ ಹೇಗೆ ಸುಳ್ಳನ್ನು ಹೇಳಲಿ?
01107018a ಘೃತಪೂರ್ಣಂ ಕುಂಡಶತಂ ಕ್ಷಿಪ್ರಮೇವ ವಿಧೀಯತಾಂ।
01107018c ಶೀತಾಭಿರದ್ಭಿರಷ್ಠೀಲಾಮಿಮಾಂ ಚ ಪರಿಷಿಂಚತ।।
ತಕ್ಷಣವೇ ತುಪ್ಪದಿಂದ ತುಂಬಿದ ನೂರು ಕುಂಡಗಳನ್ನು ತರಿಸು. ಮತ್ತು ಈ ಪಿಂಡದ ಮೇಲೆ ತಣ್ಣೀರನ್ನು ಚುಮುಕಿಸು.””
01107019 ವೈಶಂಪಾಯನ ಉವಾಚ।
01107019a ಸಾ ಸಿಚ್ಯಮಾನಾ ಅಷ್ಠೀಲಾ ಅಭವಚ್ಶತಧಾ ತದಾ।
01107019c ಅಂಗುಷ್ಠಪರ್ವಮಾತ್ರಾಣಾಂ ಗರ್ಭಾಣಾಂ ಪೃಥಗೇವ ತು।।
01107020a ಏಕಾಧಿಕಶತಂ ಪೂರ್ಣಂ ಯಥಾಯೋಗಂ ವಿಶಾಂ ಪತೇ।
01107020c ಮಾಂಸಪೇಶ್ಯಾಸ್ತದಾ ರಾಜನ್ಕ್ರಮಶಃ ಕಾಲಪರ್ಯಯಾತ್।।
ವೈಶಂಪಾಯನನು ಹೇಳಿದನು: “ಈ ರೀತಿ ನೀರಿನಿಂದ ತೋಯಿಸಿದಾಗ ಆ ಪಿಂಡವು ಒಂದೊಂದೂ ಒಂದು ಬೆರಳಿನ ಗಾತ್ರದ ಒಂದು ನೂರಾ ಒಂದು ಭ್ರೂಣಗಳಾಗಿ ಒಡೆಯಿತು. ವಿಶಾಂಪತೇ! ರಾಜನ್! ಹೀಗೆ ಒಂದರ ನಂತರ ಇನ್ನೊಂದರಂತೆ ಒಂದುನೂರಾ ಒಂದು ಪೂರ್ಣ ಗರ್ಭಗಳಾದವು.
01107021a ತತಸ್ತಾಂಸ್ತೇಷು ಕುಂಡೇಷು ಗರ್ಭಾನವದಧೇ ತದಾ।
01107021c ಸ್ವನುಗುಪ್ತೇಷು ದೇಶೇಷು ರಕ್ಷಾಂ ಚ ವ್ಯದಧಾತ್ತತಃ।।
ಅವನು ಆ ಗರ್ಭಪಿಂಡಗಳನ್ನು ಪ್ರತ್ಯೇಕ ಕುಂಡಗಳಲ್ಲಿರಿಸಿ ಅವುಗಳನ್ನು ಗುಪ್ತ ಸ್ಥಳಗಳಲ್ಲಿ ಇಟ್ಟು ಕಾವಲಿರಿಸಿದನು.
01107022a ಶಶಾಸ ಚೈವ ಭಗವಾನ್ಕಾಲೇನೈತಾವತಾ ಪುನಃ।
01107022c ವಿಘಟ್ಟನೀಯಾನ್ಯೇತಾನಿ ಕುಂಡಾನೀತಿ ಸ್ಮ ಸೌಬಲೀಂ।।
ಆ ಭಗವಾನನು ಸೌಬಲಿಗೆ ಎಷ್ಟು ಸಮಯದ ನಂತರ ಪುನಃ ಆ ಕುಂಡಗಳನ್ನು ಒಡೆಯ ಬೇಕು ಎನ್ನುವುದನ್ನು ಹೇಳಿ ಕೊಟ್ಟನು.
01107023a ಇತ್ಯುಕ್ತ್ವಾ ಭಗವಾನ್ವ್ಯಾಸಸ್ತಥಾ ಪ್ರತಿವಿಧಾಯ ಚ।
01107023c ಜಗಾಮ ತಪಸೇ ಧೀಮಾನ್ ಹಿಮವಂತಂ ಶಿಲೋಚ್ಛಯಂ।।
ಈ ರೀತಿ ಸೂಚನೆಗಳನ್ನಿತ್ತು ಧೀಮಾನ್ ಭಗವಾನ್ ವ್ಯಾಸನು ಶಿಲೋಚ್ಛಯ ಹಿಮಾಲಯಕ್ಕೆ ತಪಸ್ಸಿಗೆಂದು ಹೋದನು.
01107024a ಜಜ್ಞೇ ಕ್ರಮೇಣ ಚೈತೇನ ತೇಷಾಂ ದುರ್ಯೋಧನೋ ನೃಪಃ।
01107024c ಜನ್ಮತಸ್ತು ಪ್ರಮಾಣೇನ ಜ್ಯೇಷ್ಠೋ ರಾಜಾ ಯುಧಿಷ್ಠಿರಃ।।
ಕ್ರಮೇಣ ಅವುಗಳಿಂದ ನೃಪ ದುರ್ಯೋಧನನು ಜನಿಸಿದನು. ಆದರೆ ಮೊದಲೇ ಹುಟ್ಟಿದ್ದ ಜ್ಯೇಷ್ಠ ಯುಧಿಷ್ಠಿರನು ರಾಜನಾದನು.
01107025a ಜಾತಮಾತ್ರೇ ಸುತೇ ತಸ್ಮಿನ್ಧೃತರಾಷ್ಟ್ರೋಽಬ್ರವೀದಿದಂ।
01107025c ಸಮಾನೀಯ ಬಹೂನ್ವಿಪ್ರಾನ್ಭೀಷ್ಮಂ ವಿದುರಮೇವ ಚ।।
ಆ ಪುತ್ರನು ಜನಿಸಿದಾಕ್ಷಣ ಧೃತರಾಷ್ಟ್ರನು ಬಹಳ ವಿಪ್ರರು ಮತ್ತು ಭೀಷ್ಮ-ವಿದುರರನ್ನು ಕರೆಯಿಸಿ ಹೇಳಿದನು:
01107026a ಯುಧಿಷ್ಠಿರೋ ರಾಜಪುತ್ರೋ ಜ್ಯೇಷ್ಠೋ ನಃ ಕುಲವರ್ಧನಃ।
01107026c ಪ್ರಾಪ್ತಃ ಸ್ವಗುಣತೋ ರಾಜ್ಯಂ ನ ತಸ್ಮಿನ್ವಾಚ್ಯಮಸ್ತಿ ನಃ।।
“ಕುಲವರ್ಧನ ಯುಧಿಷ್ಠಿರನು ಜ್ಯೇಷ್ಠ ರಾಜಪುತ್ರನು. ತನ್ನ ಗುಣಗಳಿಂದಾಗಿ ಅವನು ರಾಜ್ಯವನ್ನು ಪಡೆದರೆ ಅದರಲ್ಲಿ ನಾವು ಏನನ್ನೂ ಹೇಳುವಂತಿಲ್ಲ.
01107027a ಅಯಂ ತ್ವನಂತರಸ್ತಸ್ಮಾದಪಿ ರಾಜಾ ಭವಿಷ್ಯತಿ।
01107027c ಏತದ್ಧಿ ಬ್ರೂತ ಮೇ ಸತ್ಯಂ ಯದತ್ರ ಭವಿತಾ ಧ್ರುವಂ।।
ಆದರೆ ಅವನ ನಂತರ ಇವನು ರಾಜನಾಗುತ್ತಾನಲ್ಲವೇ? ಈ ವಿಷಯದಲ್ಲಿ ನಿಮ್ಮ ಸತ್ಯ ನಿರ್ಧಾರವೇನೆಂಬುದನ್ನು ಹೇಳಿ.”
01107028a ವಾಕ್ಯಸ್ಯೈತಸ್ಯ ನಿಧನೇ ದಿಕ್ಷು ಸರ್ವಾಸು ಭಾರತ।
01107028c ಕ್ರವ್ಯಾದಾಃ ಪ್ರಾಣದನ್ಘೋರಾಃ ಶಿವಾಶ್ಚಾಶಿವಶಂಸಿನಃ।।
ಭಾರತ! ಈ ಮಾತುಗಳನ್ನಾಡಿ ನಿಲ್ಲಿಸುತ್ತಿದ್ದಂತೆಯೇ ಎಲ್ಲ ದಿಕ್ಕುಗಳಲ್ಲಿಯೂ ಹದ್ದು ತೋಳಗಳ ಅಶುಭ ಘೋರ ಆಕ್ರಂದನಗಳು ಕೇಳಿಬಂದವು.
01107029a ಲಕ್ಷಯಿತ್ವಾ ನಿಮಿತ್ತಾನಿ ತಾನಿ ಘೋರಾಣಿ ಸರ್ವಶಃ।
01107029c ತೇಽಬ್ರುವನ್ಬ್ರಾಹ್ಮಣಾ ರಾಜನ್ವಿದುರಶ್ಚ ಮಹಾಮತಿಃ।।
ರಾಜನ್! ಎಲ್ಲೆಡೆಯೂ ಕಂಡು ಬರುತ್ತಿರುವ ಆ ಘೋರ ನಿಮಿತ್ತಗಳನ್ನು ವೀಕ್ಷಿಸಿದ ಬ್ರಾಹ್ಮಣರು ಮತ್ತು ಮಹಾಮತಿ ವಿದುರನು ಹೇಳಿದರು:
01107030a ವ್ಯಕ್ತಂ ಕುಲಾಂತಕರಣೋ ಭವಿತೈಷ ಸುತಸ್ತವ।
01107030c ತಸ್ಯ ಶಾಂತಿಃ ಪರಿತ್ಯಾಗೇ ಪುಷ್ಟ್ಯಾ ತ್ವಪನಯೋ ಮಹಾನ್।।
“ನಿನ್ನ ಈ ಮಗನು ಕುಲದ ಅಂತ್ಯಕ್ಕೆ ಕಾರಣವಾಗುತ್ತಾನೆ ಎಂದು ವ್ಯಕ್ತವಾಗುತ್ತಿದೆ. ಅವನನ್ನು ಪರಿತ್ಯಜಿಸುವುದರಲ್ಲಿ ಶಾಂತಿ ಮತ್ತು ಪಾಲಿಸುವುದರಲ್ಲಿ ಮಹಾ ಆಪತ್ತು ಕಂಡುಬರುತ್ತಿದೆ.
01107031a ಶತಮೇಕೋನಮಪ್ಯಸ್ತು ಪುತ್ರಾಣಾಂ ತೇ ಮಹೀಪತೇ।
01107031c ಏಕೇನ ಕುರು ವೈ ಕ್ಷೇಮಂ ಲೋಕಸ್ಯ ಚ ಕುಲಸ್ಯ ಚ।।
ಮಹೀಪತೇ! ತೊಂಬತ್ತೊಂಭತ್ತು ಪುತ್ರರನ್ನು ನಿನ್ನ ಹತ್ತಿರವೇ ಇಟ್ಟುಕೊಂಡು ಕುರು ಕುಲ ಮತ್ತು ಲೋಕಗಳ ಕ್ಷೇಮಾರ್ಥಕ್ಕಾಗಿ ಇದೊಂದು ಕೆಲಸವನ್ನು ಮಾಡು.
01107032a ತ್ಯಜೇದೇಕಂ ಕುಲಸ್ಯಾರ್ಥೇ ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್।
01107032c ಗ್ರಾಮಂ ಜನಪದಸ್ಯಾರ್ಥೇ ಆತ್ಮಾರ್ಥೇ ಪೃಥಿವೀಂ ತ್ಯಜೇತ್।।
ಕುಲಕ್ಕಾಗಿ ಒಂದು ಪುತ್ರನನ್ನು ತ್ಯಜಿಸು. ಗ್ರಾಮಕ್ಕಾಗಿ ಒಂದು ಕುಲವನ್ನು ತ್ಯಜಿಸು. ಜನಪದಕ್ಕಾಗಿ ಒಂದು ಗ್ರಾಮವನ್ನು ತ್ಯಜಿಸು. ಮತ್ತು ಆತ್ಮದ ಸಲುವಾಗಿ ಪೃಥ್ವಿಯನ್ನೇ ತ್ಯಜಿಸು.”
01107033a ಸ ತಥಾ ವಿದುರೇಣೋಕ್ತಸ್ತೈಶ್ಚ ಸರ್ವೈರ್ದ್ವಿಜೋತ್ತಮೈಃ।
01107033c ನ ಚಕಾರ ತಥಾ ರಾಜಾ ಪುತ್ರಸ್ನೇಹಸಮನ್ವಿತಃ।।
ಈ ರೀತಿ ವಿದುರ ಮತ್ತು ಸರ್ವ ದ್ವಿಜೋತ್ತಮರೂ ಹೇಳಿದರು. ಆದರೆ ಪುತ್ರಸ್ನೇಹಸಮನ್ವಿತ ರಾಜನು ಏನನ್ನೂ ಮಾಡಲಿಲ್ಲ.
01107034a ತತಃ ಪುತ್ರಶತಂ ಸರ್ವಂ ಧೃತರಾಷ್ಟ್ರಸ್ಯ ಪಾರ್ಥಿವ।
01107034c ಮಾಸಮಾತ್ರೇಣ ಸಂಜಜ್ಞೇ ಕನ್ಯಾ ಚೈಕಾ ಶತಾಧಿಕಾ।।
ಪಾರ್ಥಿವ! ಒಂದು ತಿಂಗಳಿನಲ್ಲಿಯೇ ಧೃತರಾಷ್ಟ್ರನ ಎಲ್ಲ ನೂರು ಪುತ್ರರೂ ಮತ್ತು ನೂರಾ ಒಂದನೆಯ ಕನ್ಯೆಯೂ ಜನಿಸಿದರು.
01107035a ಗಾಂಧಾರ್ಯಾಂ ಕ್ಲಿಶ್ಯಮಾನಾಯಾಮುದರೇಣ ವಿವರ್ಧತಾ।
01107035c ಧೃತರಾಷ್ಟ್ರಂ ಮಹಾಬಾಹುಂ ವೈಶ್ಯಾ ಪರ್ಯಚರತ್ಕಿಲ।।
ಗಾಂಧಾರಿಯ ಹೊಟ್ಟೆಯು ಬೆಳೆಯುತ್ತಿದ್ದು ಕಷ್ಟದಲ್ಲಿದ್ದಾಗ ವೈಶ್ಯೆಯೋರ್ವಳು ಮಹಾಬಾಹು ಧೃತರಾಷ್ಟ್ರನ ಸೇವೆಗೈಯುತ್ತಿದ್ದಳು ಎಂದು ಹೇಳುತ್ತಾರೆ.
01107036a ತಸ್ಮಿನ್ಸಂವತ್ಸರೇ ರಾಜನ್ಧೃತರಾಷ್ಟ್ರಾನ್ಮಹಾಯಶಾಃ।
01107036c ಜಜ್ಞೇ ಧೀಮಾಂಸ್ತತಸ್ತಸ್ಯಾಂ ಯುಯುತ್ಸುಃ ಕರಣೋ ನೃಪ।।
ರಾಜನ್! ಅದೇ ವರ್ಷದಲ್ಲಿ ಮಹಾಯಶಸ್ವಿ ನೃಪ ಧೃತರಾಷ್ಟ್ರನಿಗೆ ಆ ಕರಣಿಯಲ್ಲಿ ಧೀಮಂತ ಯುಯುತ್ಸುವು ಜನಿಸಿದನು.
01107037a ಏವಂ ಪುತ್ರಶತಂ ಜಜ್ಞೇ ಧೃತರಾಷ್ಟ್ರಸ್ಯ ಧೀಮತಃ।
01107037c ಮಹಾರಥಾನಾಂ ವೀರಾಣಾಂ ಕನ್ಯಾ ಚೈಕಾಥ ದುಃಶಲಾ।।
ಈ ಪ್ರಕಾರ ಧೀಮಂತ ಧೃತರಾಷ್ಟ್ರನಿಗೆ ನೂರು ಮಹಾರಥಿ ವೀರ ಪುತ್ರರು ಮತ್ತು ಓರ್ವ ಕನ್ಯೆ ದುಃಶಲಾ ಜನಿಸಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಗಾಂಧಾರೀಪುತ್ರೌತ್ಪತ್ತೌ ಸಪ್ತಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಗಾಂಧಾರೀಪುತ್ರೋತ್ಪತ್ತಿ ಎನ್ನುವ ನೂರಾಏಳನೆಯ ಅಧ್ಯಾಯವು.