106 ವಿದುರಪರಿಣಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 106

ಸಾರ

ಬೇಟೆಯಲ್ಲಿ ಆಸಕ್ತಿ ಹೊಂದಿದ್ದ ಪಾಂಡುವು ಪತ್ನಿಯರೊಂದಿಗೆ ಅರಣ್ಯದಲ್ಲಿ ವಾಸಿಸಿದುದು (1-11). ಭೀಷ್ಮನು ರಾಜ ದೇವಕನ ಮಗಳನ್ನು ವಿದುರನಿಗೆ ಕೊಡಿಸಿ ಮದುವೆ ಮಾಡಿಸುವುದು (12-13).

01106001 ವೈಶಂಪಾಯನ ಉವಾಚ।
01106001a ಧೃತರಾಷ್ಟ್ರಾಭ್ಯನುಜ್ಞಾತಃ ಸ್ವಬಾಹುವಿಜಿತಂ ಧನಂ।
01106001c ಭೀಷ್ಮಾಯ ಸತ್ಯವತ್ಯೈ ಚ ಮಾತ್ರೇ ಚೋಪಜಹಾರ ಸಃ।।

ವೈಶಂಪಾಯನನು ಹೇಳಿದನು: “ಧೃತರಾಷ್ಟ್ರನ ಅನುಜ್ಞೆಯಂತೆ ಪಾಂಡುವು ತನ್ನ ಬಾಹುಬಲದಿಂದ ಗೆದ್ದಿದ್ದ ಧನವನ್ನು ಭೀಷ್ಮ, ಸತ್ಯವತಿ ಮತ್ತು ತಾಯಂದಿರಿಗೆ ಸಮರ್ಪಿಸಿದನು.

01106002a ವಿದುರಾಯ ಚ ವೈ ಪಾಂಡುಃ ಪ್ರೇಷಯಾಮಾಸ ತದ್ಧನಂ।
01106002c ಸುಹೃದಶ್ಚಾಪಿ ಧರ್ಮಾತ್ಮಾ ಧನೇನ ಸಮತರ್ಪಯತ್।।

ಪಾಂಡುವು ಆ ಧನವನ್ನು ವಿದುರನಿಗೂ ಕಳುಹಿಸಿಕೊಟ್ಟನು. ಆ ಧರ್ಮಾತ್ಮನು ಧನವನ್ನಿತ್ತು ತನ್ನ ಸುಹೃದಯರನ್ನೂ ತೃಪ್ತಿಗೊಳಿಸಿದನು.

01106003a ತತಃ ಸತ್ಯವತೀಂ ಭೀಷ್ಮಃ ಕೌಸಲ್ಯಾಂ ಚ ಯಶಸ್ವಿನೀಂ।
01106003c ಶುಭೈಃ ಪಾಂಡುಜಿತೈ ರತ್ನೈಸ್ತೋಷಯಾಮಾಸ ಭಾರತ।।

ಭಾರತ! ನಂತರ ಭೀಷ್ಮನು ಪಾಂಡುವು ಗೆದ್ದು ತಂದಿದ್ದ ರತ್ನಗಳಿಂದ ಸತ್ಯವತಿ ಮತ್ತು ಯಶಸ್ವಿನಿ ಶುಭೆ ಕೌಸಲ್ಯೆಯರನ್ನೂ ಸಂತುಷ್ಟಗೊಳಿಸಿದನು.

01106004a ನನಂದ ಮಾತಾ ಕೌಸಲ್ಯಾ ತಮಪ್ರತಿಮತೇಜಸಂ।
01106004c ಜಯಂತಮಿವ ಪೌಲೋಮೀ ಪರಿಷ್ವಜ್ಯ ನರರ್ಷಭಂ।।

ಆನಂದಿತ ತಾಯಿ ಕೌಸಲ್ಯೆಯು ಆ ನರರ್ಷಭ ಅಪ್ರತಿಮ ತೇಜಸ್ವಿಯನ್ನು ಪೌಲೋಮಿಯು ಜಯಂತನನ್ನು ಹೇಗೋ ಹಾಗೆ ಆಲಂಗಿಸಿದಳು.

01106005a ತಸ್ಯ ವೀರಸ್ಯ ವಿಕ್ರಾಂತೈಃ ಸಹಸ್ರಶತದಕ್ಷಿಣೈಃ।
01106005c ಅಶ್ವಮೇಧಶತೈರೀಜೇ ಧೃತರಾಷ್ಟ್ರೋ ಮಹಾಮಖೈಃ।।

ಆ ವೀರ ವಿಕ್ರಾಂತನು ಗೆದ್ದು ಬಂದಿದ್ದ ಧನದಿಂದ ಧೃತರಾಷ್ಟ್ರನು ನೂರು ಸಾವಿರ ದಕ್ಷಿಣೆಗಳನ್ನೊಡಗೂಡಿದ, ನೂರು ಅಶ್ವಮೇಧ ಯಜ್ಞಗಳಿಗೆ ಸರಿಸಾಟಿ ಮಹಾ ಯಜ್ಞಗಳನ್ನು ನೆರವೇರಿಸಿದನು.

01106006a ಸಂಪ್ರಯುಕ್ತಶ್ಚ ಕುಂತ್ಯಾ ಚ ಮಾದ್ರ್ಯಾ ಚ ಭರತರ್ಷಭ।
01106006c ಜಿತತಂದ್ರೀಸ್ತದಾ ಪಾಂಡುರ್ಬಭೂವ ವನಗೋಚರಃ।।

ಬಿಡುವಿನ ವೇಳೆಯನ್ನು ಗಳಿಸಿದ್ದ ಭರತರ್ಷಭ ಪಾಂಡುವು ಕುಂತಿ ಮತ್ತು ಮಾದ್ರಿಗಳ ಜೊತೆ ವನವಿಹಾರಕ್ಕೆಂದು ಹೋದನು.

01106007a ಹಿತ್ವಾ ಪ್ರಾಸಾದನಿಲಯಂ ಶುಭಾನಿ ಶಯನಾನಿ ಚ।
01106007c ಅರಣ್ಯನಿತ್ಯಃ ಸತತಂ ಬಭೂವ ಮೃಗಯಾಪರಃ।।

ಬೇಟೆಯಲ್ಲಿ ಆಸಕ್ತಿಯನ್ನು ಹೊಂದಿದ್ದ ಅವನು ಅರಮನೆ ಮತ್ತು ಸುಂದರ ಶಯನಗಳನ್ನು ಪರಿತ್ಯಜಿಸಿ, ಅರಣ್ಯದಲ್ಲಿಯೇ ವಾಸಿಸಿ ನಿತ್ಯವೂ ಬೇಟೆಯಾಡುತ್ತಿದ್ದನು.

01106008a ಸ ಚರನ್ದಕ್ಷಿಣಂ ಪಾರ್ಶ್ವಂ ರಮ್ಯಂ ಹಿಮವತೋ ಗಿರೇಃ।
01106008c ಉವಾಸ ಗಿರಿಪೃಷ್ಠೇಷು ಮಹಾಶಾಲವನೇಷು ಚ।।

ಅವನು ರಮ್ಯ ಹಿಮಾಲಯ ಗಿರಿಯ ದಕ್ಷಿಣ ಇಳುಕಲಿನಲ್ಲಿ, ಗಿರಿಪೃಷ್ಟಗಳಲ್ಲಿ, ಮಹಾಶಾಲಗಳ ವನಗಳಲ್ಲಿ ವಾಸಿಸತೊಡಗಿದನು.

01106009a ರರಾಜ ಕುಂತ್ಯಾ ಮಾದ್ರ್ಯಾ ಚ ಪಾಂಡುಃ ಸಹ ವನೇ ವಸನ್।
01106009c ಕರೇಣ್ವೋರಿವ ಮಧ್ಯಸ್ಥಃ ಶ್ರೀಮಾನ್ಪೌರಂದರೋ ಗಜಃ।।

ಆ ವನದಲ್ಲಿ ಕುಂತಿ ಮತ್ತು ಮಾದ್ರಿಗಳೊಡನೆ ವಾಸಿಸುತ್ತಿದ್ದ ಪಾಂಡುವು ಎರಡು ಹೆಣ್ಣಾನೆಗಳ ಮದ್ಯೆ ಇರುವ ಶ್ರೀಮಾನ್ ಗಜೇಂದ್ರನಂತೆ ರಂಜಿಸಿದನು.

01106010a ಭಾರತಂ ಸಹ ಭಾರ್ಯಾಭ್ಯಾಂ ಬಾಣಖಡ್ಗಧನುರ್ಧರಂ।
01106010c ವಿಚಿತ್ರಕವಚಂ ವೀರಂ ಪರಮಾಸ್ತ್ರವಿದಂ ನೃಪಂ।
01106010e ದೇವೋಽಯಮಿತ್ಯಮನ್ಯಂತ ಚರಂತಂ ವನವಾಸಿನಃ।।

ಬಾಣ-ಖಡ್ಗ-ಧನುರ್ಧರನಾಗಿ, ವಿಚಿತ್ರಕವಚಧಾರಿಯಾಗಿ ದೇವನಂತೆ ತನ್ನ ಪತ್ನಿಯರೊಂದಿಗೆ ಚಲಿಸುತ್ತಿರುವ ಆ ವೀರ, ಪರಮಾಸ್ತ್ರಕೋವಿದ ನೃಪ ಭಾರತನನ್ನು ವನವಾಸಿಗಳು ಕಂಡರು.

01106011a ತಸ್ಯ ಕಾಮಾಂಶ್ಚ ಭೋಗಾಂಶ್ಚ ನರಾ ನಿತ್ಯಮತಂದ್ರಿತಾಃ।
01106011c ಉಪಜಹ್ರುರ್ವನಾಂತೇಷು ಧೃತರಾಷ್ಟ್ರೇಣ ಚೋದಿತಾಃ।।

ಅವನ ಕಾಮ-ಭೋಗಗಳಿಗೆ ಬೇಕಾದುದೆಲ್ಲವನ್ನೂ, ಧೃತರಾಷ್ಟ್ರನ ಹೇಳಿಕೆಯಂತೆ, ಸ್ವಲ್ಪವೂ ಆಯಾಸ ಹೊಂದದ ಜನರು ನಿತ್ಯವೂ ಆ ವನಪ್ರದೇಶಕ್ಕೆ ತಂದು ಕೊಡುತ್ತಿದ್ದರು.

01106012a ಅಥ ಪಾರಶವೀಂ ಕನ್ಯಾಂ ದೇವಕಸ್ಯ ಮಹೀಪತೇಃ।
01106012c ರೂಪಯೌವನಸಂಪನ್ನಾಂ ಸ ಶುಶ್ರಾವಾಪಗಾಸುತಃ।।

ಆಗ ಆಪಗಸುತ ಭೀಷ್ಮನು ಮಹೀಪತಿ ದೇವಕನಿಗೆ ಬೇರೆಯವಳಲ್ಲಿ ಹುಟ್ಟಿದ್ದ ರೂಪಯೌವನಸಂಪನ್ನ ಕನ್ಯೆಯ ಕುರಿತು ಕೇಳಿದನು.

01106013a ತತಸ್ತು ವರಯಿತ್ವಾ ತಾಮಾನಾಯ್ಯ ಪುರುಷರ್ಷಭಃ।
01106013c ವಿವಾಹಂ ಕಾರಯಾಮಾಸ ವಿದುರಸ್ಯ ಮಹಾಮತೇಃ।।

ಆ ಪುರುಷರ್ಷಭನು ಅವಳನ್ನು ವರಿಸಿ ಕರೆದುಕೊಂಡು ಬಂದು ಮಹಾಮತಿ ವಿದುರನಿಗೆ ವಿವಾಹ ಮಾಡಿಸಿದನು.

01106014a ತಸ್ಯಾಂ ಚೋತ್ಪಾದಯಾಮಾಸ ವಿದುರಃ ಕುರುನಂದನಃ।
01106014c ಪುತ್ರಾನ್ವಿನಯಸಂಪನ್ನಾನಾತ್ಮನಃ ಸದೃಶಾನ್ಗುಣೈಃ।।

ಕುರುನಂದನ ವಿದುರನು ಅವಳಲ್ಲಿ, ಗುಣಗಳಲ್ಲಿ ತನ್ನ ಹಾಗೆಯೇ ಇದ್ದ, ವಿನಯಸಂಪನ್ನ ಪುತ್ರರಿಗೆ ಜನ್ಮವಿತ್ತನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ವಿದುರಪರಿಣಯೇ ಷಡಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ವಿದುರಪರಿಣಯ ಎನ್ನುವ ನೂರಾಆರನೆಯ ಅಧ್ಯಾಯವು.