ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸಂಭವ ಪರ್ವ
ಅಧ್ಯಾಯ 104
ಸಾರ
ಯಾದವರ ಅರಸ ಶೂರನು ತನ್ನ ಮಗಳು, ವಸುದೇವನ ತಂಗಿ, ಪೃಥೆಯನ್ನು ತಂಗಿಯ ಮಗ ಕುಂತೀಭೋಜನಿಗೆ ಕೊಟ್ಟಿದ್ದುದು (1-3). ಕುಂತೀಭೋಜನ ಮನೆಯಲ್ಲಿ ದುರ್ವಾಸನ ಆತಿಥ್ಯವನ್ನು ಮಾಡಿ, ಅವನಿಂದ ಮಂತ್ರಗಳನ್ನು ಕುಂತಿಯು ಪಡೆದುದು (4-7). ಕುತೂಹಲದಿಂದ ಸೂರ್ಯನನ್ನು ಆಹ್ವಾನಿಸಲು ಅವನಿಂದ ಮಗ ಕರ್ಣನನ್ನು ಪಡೆದುದು (8-12). ನೀರಿನಲ್ಲಿ ಬಿಡಲ್ಪಟ್ಟ ಕರ್ಣನು ಸೂತನಂದನನೆಂದೂ, ವಸುಷೇಣನೆಂದೂ, ವೈಕರ್ತನನೆಂದೂ ಕರೆಯಿಸಿಕೊಂಡಿದುದು (13-21).
01104001 ವೈಶಂಪಾಯನ ಉವಾಚ।
01104001a ಶೂರೋ ನಾಮ ಯದುಶ್ರೇಷ್ಠೋ ವಸುದೇವಪಿತಾಭವತ್।
01104001c ತಸ್ಯ ಕನ್ಯಾ ಪೃಥಾ ನಾಮ ರೂಪೇಣಾಸದೃಶೀ ಭುವಿ।।
ವೈಶಂಪಾಯನನು ಹೇಳಿದನು: “ವಸುದೇವನ ತಂದೆ ಶೂರ ಎಂಬ ಹೆಸರಿನ ಯದುಶ್ರೇಷ್ಠನಿದ್ದನು. ಅವನಿಗೆ ಭುವಿಯಲ್ಲಿಯೆ ರೂಪದಲ್ಲಿ ಅಸದೃಶ ಪೃಥಾ ಎಂಬ ಹೆಸರಿನ ಮಗಳಿದ್ದಳು.
01104002a ಪೈತೃಷ್ವಸೇಯಾಯ ಸ ತಾಮನಪತ್ಯಾಯ ವೀರ್ಯವಾನ್।
01104002c ಅಗ್ರ್ಯಮಗ್ರೇ ಪ್ರತಿಜ್ಞಾಯ ಸ್ವಸ್ಯಾಪತ್ಯಸ್ಯ ವೀರ್ಯವಾನ್।।
ಆ ವೀರ್ಯವಂತನು ಮಕ್ಕಳನ್ನು ಹೊಂದಿರದಿದ್ದ ತಂದೆಯ ತಂಗಿಯ ಮಗನಿಗೆ ತನ್ನ ಮೊದಲ ಮಗುವನ್ನು ಕೊಡುತ್ತೇನೆಂದು ಪ್ರತಿಜ್ಞೆ ಮಾಡಿಕೊಂಡಿದ್ದನು.
01104003a ಅಗ್ರಜಾತೇತಿ ತಾಂ ಕನ್ಯಾಮಗ್ರ್ಯಾನುಗ್ರಹಕಾಂಕ್ಷಿಣೇ।
01104003c ಪ್ರದದೌ ಕುಂತಿಭೋಜಾಯ ಸಖಾ ಸಖ್ಯೇ ಮಹಾತ್ಮನೇ।।
ಆ ಹಿರಿಯ ಮಗಳನ್ನು ಪಡೆಯಲು ಬಯಸಿದ ಸಖ ಮಹಾತ್ಮ ಕುಂತಿಭೋಜನಿಗೆ ಕೊಟ್ಟನು.
01104004a ಸಾ ನಿಯುಕ್ತಾ ಪಿತುರ್ಗೇಹೇ ದೇವತಾತಿಥಿಪೂಜನೇ।
01104004c ಉಗ್ರಂ ಪರ್ಯಚರದ್ಘೋರಂ ಬ್ರಾಹ್ಮಣಂ ಸಂಶಿತವ್ರತಂ।।
01104005a ನಿಗೂಡನಿಶ್ಚಯಂ ಧರ್ಮೇ ಯಂ ತಂ ದುರ್ವಾಸಸಂ ವಿದುಃ।
01104005c ತಮುಗ್ರಂ ಸಂಶಿತಾತ್ಮಾನಂ ಸರ್ವಯತ್ನೈರತೋಷಯತ್।।
01104006a ತಸ್ಯೈ ಸ ಪ್ರದದೌ ಮಂತ್ರಮಾಪದ್ಧರ್ಮಾನ್ವವೇಕ್ಷಯಾ।
01104006c ಅಭಿಚಾರಾಭಿಸಂಯುಕ್ತಮಬ್ರವೀಚ್ಚೈವ ತಾಂ ಮುನಿಃ।।
ಹೊಸ ತಂದೆಯ ಮನೆಯಲ್ಲಿ ಅವಳು ದೇವತೆ ಮತ್ತು ಅತಿಥಿಪೂಜನೆಯಲ್ಲಿ ನಿರತಳಾಗಿದ್ದಳು. ಹೀಗಿರುವಾಗ ಒಮ್ಮೆ ಅವಳು ಪರ್ಯಟಿಸುತ್ತಾ ಬಂದ ಸಂಶಿತವ್ರತ, ನಿಗೂಢ ಧರ್ಮನಿಶ್ಚಯಿ, ಉಗ್ರ, ಘೋರ ಬ್ರಾಹ್ಮಣ ದುರ್ವಾಸನನ್ನು ಸತ್ಕರಿಸುವ ಅವಕಾಶವನ್ನು ಪಡೆದುಕೊಂಡಳು. ಆ ಉಗ್ರ ಸಂಶಿತಾತ್ಮನನ್ನು ಸರ್ವಯತ್ನಗಳಿಂದ ತೃಪ್ತಿಗೊಳಿಸಿದಳು. ಮುಂದೆ ಬರಬಹುದಾದ ಆಪತ್ತನ್ನು ಕಂಡ ಆ ಮುನಿಯು ಅವಳಿಗೆ ಅಭಿಚಾರ ಸಂಯುಕ್ತ ಮಂತ್ರಗಳನ್ನಿತ್ತು ಹೇಳಿದನು:
01104007a ಯಂ ಯಂ ದೇವಂ ತ್ವಮೇತೇನ ಮಂತ್ರೇಣಾವಾಹಯಿಷ್ಯಸಿ।
01104007c ತಸ್ಯ ತಸ್ಯ ಪ್ರಸಾದೇನ ಪುತ್ರಸ್ತವ ಭವಿಷ್ಯತಿ।।
“ಈ ಮಂತ್ರಗಳಿಂದ ನೀನು ಯಾವ ಯಾವ ದೇವತೆಯನ್ನು ಆಹ್ವಾನಿಸುತ್ತೀಯೋ ಆಯಾ ದೇವತೆಗಳ ಪ್ರಸಾದದಿಂದ ನಿನಗೆ ಪುತ್ರರಾಗುತ್ತಾರೆ.”
01104008a ತಥೋಕ್ತಾ ಸಾ ತು ವಿಪ್ರೇಣ ತೇನ ಕೌತೂಹಲಾತ್ತದಾ।
01104008c ಕನ್ಯಾ ಸತೀ ದೇವಮರ್ಕಮಾಜುಹಾವ ಯಶಸ್ವಿನೀ।।
ವಿಪ್ರನ ಈ ಮಾತುಗಳನ್ನು ಕೇಳಿ ಕುತೂಹಲಗೊಂಡ ಆ ಯಶಸ್ವಿನೀ ಸತಿ ಕನ್ಯೆಯು ಅರ್ಕದೇವನನ್ನು ಅಹ್ವಾನಿಸಿದಳು.
01104009a ಸಾ ದದರ್ಶ ತಮಾಯಾಂತಂ ಭಾಸ್ಕರಂ ಲೋಕಭಾವನಂ।
01104009c ವಿಸ್ಮಿತಾ ಚಾನವದ್ಯಾಂಗೀ ದೃಷ್ಟ್ವಾ ತನ್ಮಹದದ್ಭುತಂ।।
ಆಗ ಅಲ್ಲಿ ಅವಳು ಲೋಕಭಾವನ ಭಾಸ್ಕರನು ಬರುತ್ತಿರುವುದನ್ನು ನೋಡಿದಳು. ಆ ಮಹದದ್ಭುತವನ್ನು ನೋಡಿದ ಆ ಅನವದ್ಯಾಂಗಿಯು ವಿಸ್ಮಿತಳಾದಳು.
01104010a ಪ್ರಕಾಶಕರ್ಮಾ ತಪನಸ್ತಸ್ಯಾಂ ಗರ್ಭಂ ದಧೌ ತತಃ।
01104010c ಅಜೀಜನತ್ತತೋ ವೀರಂ ಸರ್ವಶಸ್ತ್ರಭೃತಾಂ ವರಂ।
01104010e ಆಮುಕ್ತಕವಚಃ ಶ್ರೀಮಾನ್ದೇವಗರ್ಭಃ ಶ್ರಿಯಾವೃತಃ।।
ಆ ಪ್ರಕಾಶಕರ್ಮಿ ತಪನನು ಅವಳಿಗೆ ಗರ್ಭವನ್ನಿತ್ತನು. ಅವನಿಂದ ಸರ್ವಶಸ್ತ್ರಿಗಳಲ್ಲಿ ಶ್ರೇಷ್ಠ, ಕವಚಧಾರಿ, ಶ್ರಿಯಾವೃತ, ಶ್ರೀಮಾನ್ ದೇವಗರ್ಭ ವೀರನನ್ನು ಪಡೆದಳು.
01104011a ಸಹಜಂ ಕವಚಂ ಬಿಭ್ರತ್ಕುಂಡಲೋದ್ದ್ಯೋತಿತಾನನಃ।
01104011c ಅಜಾಯತ ಸುತಃ ಕರ್ಣಃ ಸರ್ವಲೋಕೇಷು ವಿಶ್ರುತಃ।।
ಸರ್ವ ಲೋಕಗಳಲ್ಲಿ ಕರ್ಣನೆಂದು ವಿಶ್ರುತ ಈ ಮಗನು ಸಹಜ ಕವಚ ಮತ್ತು ಮುಖವನ್ನು ಬೆಳಗಿಸುತ್ತಿದ್ದ ಹೊಳೆಯುವ ಕುಂಡಲಗಳನ್ನು ಧರಿಸಿಯೇ ಹುಟ್ಟಿದನು.
01104012a ಪ್ರಾದಾಚ್ಚ ತಸ್ಯಾಃ ಕನ್ಯಾತ್ವಂ ಪುನಃ ಸ ಪರಮದ್ಯುತಿಃ।
01104012c ದತ್ತ್ವಾ ಚ ದದತಾಂ ಶ್ರೇಷ್ಠೋ ದಿವಮಾಚಕ್ರಮೇ ತತಃ।।
ಆ ಪರಮದ್ಯುತಿಯು ಕೊಡುವುದರಲ್ಲೆಲ್ಲಾ ಶ್ರೇಷ್ಠ ಕೊಡುಗೆಯನ್ನಿತ್ತು ಅವಳ ಕನ್ಯತ್ವವನ್ನು ಪುನಃ ಹಿಂದಿರುಗಿಸಿ ಆಕಾಶವನ್ನು ಸೇರಿದನು.
01104013a ಗೂಹಮಾನಾಪಚಾರಂ ತಂ ಬಂಧುಪಕ್ಷಭಯಾತ್ತದಾ।
01104013c ಉತ್ಸಸರ್ಜ ಜಲೇ ಕುಂತೀ ತಂ ಕುಮಾರಂ ಸಲಕ್ಷಣಂ।।
ಬಂಧುಪಕ್ಷಗಳ ಭಯದಿಂದ ಮತ್ತು ಅಪಚಾರವನ್ನು ಮುಚ್ಚಿಡುವುದಕ್ಕಾಗಿ ಕುಂತಿಯು ಆ ಸಲಕ್ಷಣ ಕುಮಾರನನ್ನು ನೀರಿನಲ್ಲಿ ಬಿಟ್ಟಳು.
01104014a ತಮುತ್ಸೃಷ್ಟಂ ತದಾ ಗರ್ಭಂ ರಾಧಾಭರ್ತಾ ಮಹಾಯಶಾಃ।
01104014c ಪುತ್ರತ್ವೇ ಕಲ್ಪಯಾಮಾಸ ಸಭಾರ್ಯಃ ಸೂತನಂದನಃ।।
ಬಿಸುಟಲ್ಪಟ್ಟ ಆ ಮಗುವನ್ನು ಮಹಾಯಶಸ್ವಿ ರಾಧೆಯ ಪತಿಯು ತನ್ನ ಪತ್ನಿಯೊಂದಿಗೆ ತಮ್ಮದೇ ಮಗನೆಂದು ಸ್ವೀಕರಿಸಿದನು. ಹೀಗೆ ಅವನು ಸೂತನಂದನನೆಂದು ತಿಳಿಯಲ್ಪಟ್ಟನು.
01104015a ನಾಮಧೇಯಂ ಚ ಚಕ್ರಾತೇ ತಸ್ಯ ಬಾಲಸ್ಯ ತಾವುಭೌ।
01104015c ವಸುನಾ ಸಹ ಜಾತೋಽಯಂ ವಸುಷೇಣೋ ಭವತ್ವಿತಿ।।
ವಸುವಿನ ಸಹಿತ ಹುಟ್ಟಿದ ಇವನು ವಸುಷೇಣನೆಂದಾಗಲಿ ಎಂದು ಅವರು ಆ ಬಾಲಕನಿಗೆ ಹೆಸರನ್ನಿಟ್ಟರು.
01104016a ಸ ವರ್ಧಮಾನೋ ಬಲವಾನ್ಸರ್ವಾಸ್ತ್ರೇಷೂದ್ಯತೋಽಭವತ್।
01104016c ಆ ಪೃಷ್ಠತಾಪಾದಾದಿತ್ಯಮುಪತಸ್ಥೇ ಸ ವೀರ್ಯವಾನ್।।
01104017a ಯಸ್ಮಿನ್ಕಾಲೇ ಜಪನ್ನಾಸ್ತೇ ಸ ವೀರಃ ಸತ್ಯಸಂಗರಃ।
01104017c ನಾದೇಯಂ ಬ್ರಾಹ್ಮಣೇಷ್ವಾಸೀತ್ತಸ್ಮಿನ್ಕಾಲೇ ಮಹಾತ್ಮನಃ।।
ದೊಡ್ಡವನಾಗುತ್ತಿದ್ದಂತೆ ಅವನು ಸರ್ವಶಸ್ತ್ರಗಳಿಂದಲೂ ಹೋರಾಡುವ ಬಲಶಾಲಿಯಾದನು. ಆ ವೀರ್ಯವಂತನು ತನ್ನ ಬೆನ್ನು ಸುಡುವವರೆಗೂ ಆದಿತ್ಯನನ್ನು ಉಪಾಸಿಸುತ್ತಿದ್ದನು. ಜಪವನ್ನಾಚರಿಸುತ್ತಿದ್ದ ಸಮಯದಲ್ಲಿ ಆ ಸತ್ಯಸಂಗರ ಮಹಾತ್ಮ ವೀರನು ಬ್ರಾಹ್ಮಣರಿಗೆ ಏನನ್ನೂ ನಿರಾಕರಿಸುತ್ತಿರಲಿಲ್ಲ.
01104018a ತಮಿಂದ್ರೋ ಬ್ರಾಹ್ಮಣೋ ಭೂತ್ವಾ ಭಿಕ್ಷಾರ್ಥಂ ಭೂತಭಾವನಃ।
01104018c ಕುಂಡಲೇ ಪ್ರಾರ್ಥಯಾಮಾಸ ಕವಚಂ ಚ ಮಹಾದ್ಯುತಿಃ।।
ಒಮ್ಮೆ ಭೂತಭಾವನ ಇಂದ್ರನು ಬ್ರಾಹ್ಮಣನಾಗಿ ಬಂದು ಭಿಕ್ಷೆಯಾಗಿ ಆ ಮಹಾದ್ಯುತಿಯ ಕವಚ ಕುಂಡಲಗಳನ್ನು ಪ್ರಾರ್ಥಿಸಿದನು.
01104019a ಉತ್ಕೃತ್ಯ ವಿಮನಾಃ ಸ್ವಾಂಗಾತ್ಕವಚಂ ರುಧಿರಸ್ರವಂ।
01104019c ಕರ್ಣಸ್ತು ಕುಂಡಲೇ ಚಿತ್ತ್ವಾ ಪ್ರಾಯಚ್ಛತ್ಸ ಕೃತಾಂಜಲಿಃ।।
ಏನನ್ನೂ ಯೋಚಿಸದೇ ಖಡ್ಗದಿಂದ ರಕ್ತಸುರಿಯುತ್ತಿರುವ ಕವಚವನ್ನು ಕಡಿದು, ಕರ್ಣಗಳಿಂದ ಕುಂಡಲಗಳನ್ನು ಕಿತ್ತು ಅವನಿಗೆ ಅಂಜಲೀ ಬದ್ಧನಾಗಿ ಕೊಟ್ಟನು.
01104020a ಶಕ್ತಿಂ ತಸ್ಮೈ ದದೌ ಶಕ್ರಃ ವಿಸ್ಮಿತೋ ವಾಕ್ಯಮಬ್ರವೀತ್।
01104020c ದೇವಾಸುರಮನುಷ್ಯಾಣಾಂ ಗಂಧರ್ವೋರಗರಕ್ಷಸಾಂ।
01104020e ಯಸ್ಮೈ ಕ್ಷೇಪ್ಸ್ಯಸಿ ರುಷ್ಟಃ ಸನ್ಸೋಽನಯಾ ನ ಭವಿಷ್ಯತಿ।।
ವಿಸ್ಮಿತ ಶಕ್ರನು ಅವನಿಗೆ ಶಕ್ತಿಯನ್ನಿತ್ತು ಹೇಳಿದನು: “ದೇವ, ಅಸುರ, ಮನುಷ್ಯ ಅಥವಾ ಗಂಧರ್ವ-ಉರಗ-ರಾಕ್ಷಸರು ಯಾರ ಮೇಲೆ ನೀನು ಇದನ್ನು ಎಸೆಯುತ್ತೀಯೋ ಅವರು ಗಾಯಗೊಂಡು ಸಾಯುತ್ತಾರೆ.”
01104021a ಪುರಾ ನಾಮ ತು ತಸ್ಯಾಸೀದ್ವಸುಷೇಣ ಇತಿ ಶ್ರುತಂ।
01104021c ತತೋ ವೈಕರ್ತನಃ ಕರ್ಣಃ ಕರ್ಮಣಾ ತೇನ ಸೋಽಭವತ್।।
ಅವನ ಮೊದಲನೆಯ ಹೆಸರು ವಸುಷೇಣ ಎಂದು ಇತ್ತು. ಆದರೆ ಅವನ ಕರ್ಮದಿಂದ ಅವನು ವೈಕರ್ತನ ಕರ್ಣನಾದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಕರ್ಣಸಂಭವೇ ಚತುರಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಕರ್ಣಸಂಭವ ಎನ್ನುವ ನೂರಾನಾಲ್ಕನೆಯ ಅಧ್ಯಾಯವು.