ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸಂಭವ ಪರ್ವ
ಅಧ್ಯಾಯ 103
ಸಾರ
ಭೀಷ್ಮ-ವಿದುರರು ಧೃತರಾಷ್ಟ್ರ ಮತ್ತು ಪಾಂಡುವಿನ ವಿವಾಹದ ಕುರಿತು ಯೋಚಿಸಿದುದು (1-8). ನೂರು ಮಕ್ಕಳ ತಾಯಿಯಾಗುವ ವರವನ್ನು ಪಡೆದ ಸೌಬಲನ ಮಗಳು ಗಾಂಧಾರಿಯೊಂದಿಗೆ ಧೃತರಾಷ್ಟ್ರನ ವಿವಾಹ (9-12). ಗಾಂಧಾರಿಯು ಕಣ್ಣಿಗೆ ಪಟ್ಟಿಯನ್ನು ಕಟ್ಟಿಕೊಂಡು ಪಾತಿವ್ರತ್ಯವನ್ನು ಪಾಲಿಸಿದುದು (13-21).
01103001 ಭೀಷ್ಮ ಉವಾಚ।
01103001a ಗುಣೈಃ ಸಮುದಿತಂ ಸಮ್ಯಗಿದಂ ನಃ ಪ್ರಥಿತಂ ಕುಲಂ।
01103001c ಅತ್ಯನ್ಯಾನ್ಪೃಥಿವೀಪಾಲಾನ್ಪೃಥಿವ್ಯಾಮಧಿರಾಜ್ಯಭಾಕ್।।
ಭೀಷ್ಮನು ಹೇಳಿದನು: “ಸುಗುಣಗಳಿಂದ ಸಮುದಿತ ಈ ಪ್ರಖ್ಯಾತ ಕುಲವು ಭೂಮಿಯಲ್ಲಿನ ಅನ್ಯ ಎಲ್ಲ ಪೃಥ್ವೀಪಾಲರಮೇಲೆ ಪ್ರಭುತ್ವವನ್ನು ಸ್ಥಾಪಿಸಿದೆ.
01103002a ರಕ್ಷಿತಂ ರಾಜಭಿಃ ಪೂರ್ವೈರ್ಧರ್ಮವಿದ್ಭಿರ್ಮಹಾತ್ಮಭಿಃ।
01103002c ನೋತ್ಸಾದಮಗಮಚ್ಚೇದಂ ಕದಾ ಚಿದಿಹ ನಃ ಕುಲಂ।।
01103003a ಮಯಾ ಚ ಸತ್ಯವತ್ಯಾ ಚ ಕೃಷ್ಣೇನ ಚ ಮಹಾತ್ಮನಾ।
01103003c ಸಮವಸ್ಥಾಪಿತಂ ಭೂಯೋ ಯುಷ್ಮಾಸು ಕುಲತಂತುಷು।।
ಪೂರ್ವದಲ್ಲಿ ಮಹಾತ್ಮ ಧರ್ಮವಿದ್ವಾಂಸ ರಾಜರಿಂದ ರಕ್ಷಿಸಿಕೊಂಡು ಬಂದ ಈ ಕುಲವು ಎಂದೂ ಅಧೋಗತಿಯನ್ನು ಹೊಂದಿಲ್ಲ. ಇದನ್ನು ಕುಲತಂತುಗಳಾದ ನಿಮ್ಮ ಮೇಲೆ ಸತ್ಯವತಿ, ಮಹಾತ್ಮ ಕೃಷ್ಣ ಮತ್ತು ನಾನು ಹೊರಿಸಿದ್ದೇವೆ.
01103004a ವರ್ಧತೇ ತದಿದಂ ಪುತ್ರ ಕುಲಂ ಸಾಗರವದ್ಯಥಾ।
01103004c ತಥಾ ಮಯಾ ವಿಧಾತವ್ಯಂ ತ್ವಯಾ ಚೈವ ವಿಶೇಷತಃ।।
ಪುತ್ರ! ಈ ಕುಲವು ಸಾಗರದಂತೆ ವರ್ಧಿಸಲು, ನನಗಿಂಥ ಹೆಚ್ಚು, ನೀನು ವಿಶೇಷವಾದ ಕಾಳಜಿಯನ್ನು ತೆಗೆದುಕೊಳ್ಳಬೇಕು.
01103005a ಶ್ರೂಯತೇ ಯಾದವೀ ಕನ್ಯಾ ಅನುರೂಪಾ ಕುಲಸ್ಯ ನಃ।
01103005c ಸುಬಲಸ್ಯಾತ್ಮಜಾ ಚೈವ ತಥಾ ಮದ್ರೇಶ್ವರಸ್ಯ ಚ।।
ನಮ್ಮ ಕುಲಕ್ಕೆ ಅನುರೂಪ ಯಾದವೀ ಕನ್ಯೆಯೊಬ್ಬಳು, ಸುಬಲನ ಮಗಳು ಮತ್ತು ಮದ್ರೇಶ್ವರನ ಮಗಳ ಕುರಿತು ಕೇಳಿದ್ದೇನೆ.
01103006a ಕುಲೀನಾ ರೂಪವತ್ಯಶ್ಚ ನಾಥವತ್ಯಶ್ಚ ಸರ್ವಶಃ।
01103006c ಉಚಿತಾಶ್ಚೈವ ಸಂಬಂಧೇ ತೇಽಸ್ಮಾಕಂ ಕ್ಷತ್ರಿಯರ್ಷಭಾಃ।।
ಇವರೆಲ್ಲರೂ ಕುಲೀನರೂ, ರೂಪವತಿಯರೂ, ರಕ್ಷಣೆಯಲ್ಲಿದ್ದವರೂ ಆಗಿದ್ದು ಆ ಎಲ್ಲ ಕ್ಷತ್ರಿಯರ್ಷಭರೂ ನಮ್ಮೊಡನೆ ಸಂಬಂಧವನ್ನು ಕಲ್ಪಿಸಿಕೊಳ್ಳಲು ಸರಿಯಾದವರೇ ಆಗಿದ್ದಾರೆ.
01103007a ಮನ್ಯೇ ವರಯಿತವ್ಯಾಸ್ತಾ ಇತ್ಯಹಂ ಧೀಮತಾಂ ವರ।
01103007c ಸಂತಾನಾರ್ಥಂ ಕುಲಸ್ಯಾಸ್ಯ ಯದ್ವಾ ವಿದುರ ಮನ್ಯಸೇ।।
ಈ ಕುಲದ ಸಂತಾನಾರ್ಥವಾಗಿ ಇವರನ್ನು ವರಿಸಬೇಕೆಂದು ನನ್ನ ಮತ. ಧೀಮಂತರಲ್ಲಿ ಶ್ರೇಷ್ಠ ವಿದುರ, ಇದರ ಕುರಿತು ನಿನ್ನ ಮತವೇನು?”
01103008 ವಿದುರ ಉವಾಚ।
01103008a ಭವಾನ್ಪಿತಾ ಭವಾನ್ಮಾತಾ ಭವಾನ್ನಃ ಪರಮೋ ಗುರುಃ।
01103008c ತಸ್ಮಾತ್ಸ್ವಯಂ ಕುಲಸ್ಯಾಸ್ಯ ವಿಚಾರ್ಯ ಕುರು ಯದ್ಧಿತಂ।।
ವಿದುರನು ಹೇಳಿದನು: “ನೀನು ನಮ್ಮೆಲ್ಲರ ಪಿತ, ಮಾತ ಮತ್ತು ಪರಮ ಗುರು. ನಮ್ಮ ಈ ಕುಲಕ್ಕೆ ಹಿತವಾದದ್ದನ್ನು ನೀನೇ ಸ್ವಯಂ ವಿಚಾರಿಸಿ ನೆರವೇರಿಸಿಕೊಡು.””
01103009 ವೈಶಂಪಾಯನ ಉವಾಚ।
01103009a ಅಥ ಶುಶ್ರಾವ ವಿಪ್ರೇಭ್ಯೋ ಗಾಂಧಾರೀಂ ಸುಬಲಾತ್ಮಜಾಂ।
01103009c ಆರಾಧ್ಯ ವರದಂ ದೇವಂ ಭಗನೇತ್ರಹರಂ ಹರಂ।
01103009e ಗಾಂಧಾರೀ ಕಿಲ ಪುತ್ರಾಣಾಂ ಶತಂ ಲೇಭೇ ವರಂ ಶುಭಾ।।
ವೈಶಂಪಾಯನನು ಹೇಳಿದನು: “ಆಗ ಸುಬಲಾತ್ಮಜೆ ಶುಭೆ ಗಾಂಧಾರಿಯು ವರದ ದೇವ ಭಗನೇತ್ರಹರ ಹರನನ್ನು ಆರಾಧಿಸಿ ನೂರು ಮಕ್ಕಳ ವರವನ್ನು ಪಡೆದಿದ್ದಾಳೆ ಎಂದು ವಿಪ್ರರ ಮೂಲಕ ಕೇಳಿದನು.
01103010a ಇತಿ ಶ್ರುತ್ವಾ ಚ ತತ್ತ್ವೇನ ಭೀಷ್ಮಃ ಕುರುಪಿತಾಮಹಃ।
01103010c ತತೋ ಗಾಂಧಾರರಾಜಸ್ಯ ಪ್ರೇಷಯಾಮಾಸ ಭಾರತ।।
ಭಾರತ! ಇದನ್ನು ಕೇಳಿದ ಕುರುಪಿತಾಮಹ ಭೀಷ್ಮನು ದೂತನೋರ್ವನನ್ನು ಗಾಂಧಾರರಾಜನಲ್ಲಿಗೆ ಕಳುಹಿಸಿದನು.
01103011a ಅಚಕ್ಷುರಿತಿ ತತ್ರಾಸೀತ್ಸುಬಲಸ್ಯ ವಿಚಾರಣಾ।
01103011c ಕುಲಂ ಖ್ಯಾತಿಂ ಚ ವೃತ್ತಂ ಚ ಬುದ್ಧ್ಯಾ ತು ಪ್ರಸಮೀಕ್ಷ್ಯ ಸಃ।
01103011e ದದೌ ತಾಂ ಧೃತರಾಷ್ಟ್ರಾಯ ಗಾಂಧಾರೀಂ ಧರ್ಮಚಾರಿಣೀಂ।।
ಕುರುಡನೆಂದು ಚಿಂತಿಸಿ ಸುಬಲನು ಹಿಂಜರಿದನು. ಆದರೂ ಕುಲ, ಖ್ಯಾತಿ, ಇತಿಹಾಸವನ್ನು ಬುದ್ಧಿಪೂರ್ವಕ ಸಮೀಕ್ಷಿಸಿ ಅವನು ಧರ್ಮಚಾರಿಣಿ ಗಾಂಧಾರಿಯನ್ನು ಧೃತರಾಷ್ಟ್ರನಿಗೆ ಕೊಟ್ಟನು.
01103012a ಗಾಂಧಾರೀ ತ್ವಪಿ ಶುಶ್ರಾವ ಧೃತರಾಷ್ಟ್ರಮಚಕ್ಷುಷಂ।
01103012c ಆತ್ಮಾನಂ ದಿತ್ಸಿತಂ ಚಾಸ್ಮೈ ಪಿತ್ರಾ ಮಾತ್ರಾ ಚ ಭಾರತ।।
ಭಾರತ! ಗಾಂಧಾರಿಯಾದರೂ ಧೃತರಾಷ್ಟ್ರನು ಕುರುಡ ಮತ್ತು ತಂದೆ ತಾಯಿಯರು ತನ್ನನ್ನು ಅವನಿಗೆ ಕೊಡಲು ಬಯಸುತ್ತಿದ್ದಾರೆಂದು ಕೇಳಿದಳು.
01103013a ತತಃ ಸಾ ಪಟ್ಟಮಾದಾಯ ಕೃತ್ವಾ ಬಹುಗುಣಂ ಶುಭಾ।
01103013c ಬಬಂಧ ನೇತ್ರೇ ಸ್ವೇ ರಾಜನ್ಪತಿವ್ರತಪರಾಯಣಾ।
01103013e ನಾತ್ಯಶ್ನೀಯಾಂ ಪತಿಮಹಮಿತ್ಯೇವಂ ಕೃತನಿಶ್ಚಯಾ।।
ರಾಜನ್! ಆಗ ಆ ಪತಿವ್ರತಾಪರಾಯಣೆ ಶುಭೆಯು ಒಂದು ಪಟ್ಟಿಯನ್ನು ತೆಗೆದುಕೊಂಡು ಅದರಲ್ಲಿ ಹಲವು ಮಡಿಕೆಗಳನ್ನು ಮಾಡಿ ತನ್ನ ಕಣ್ಣುಗಳನ್ನು ಕಟ್ಟಿಕೊಂಡು ತನ್ನ ಪತಿಗಿಂಥ ಅಧಿಕ ಅನುಭವವು ತನಗೆ ಬೇಡ ಎಂಬ ದೃಢನಿಶ್ಚಯ ಮಾಡಿದಳು.
01103014a ತತೋ ಗಾಂಧಾರರಾಜಸ್ಯ ಪುತ್ರಃ ಶಕುನಿರಭ್ಯಯಾತ್।
01103014c ಸ್ವಸಾರಂ ಪರಯಾ ಲಕ್ಷ್ಮ್ಯಾ ಯುಕ್ತಾಮಾದಾಯ ಕೌರವಾನ್।।
ನಂತರ ಗಾಂಧಾರರಾಜ ಪುತ್ರ ಶಕುನಿಯು ಅತ್ಯಂತ ಸಂಪತ್ತಿನೊಡನೆ ತನ್ನ ಅಕ್ಕನನ್ನು ಕೌರವನಿಗೋಸ್ಕರ ಕರೆತಂದನು.
01103015a ದತ್ತ್ವಾ ಸ ಭಗಿನೀಂ ವೀರೋ ಯಥಾರ್ಹಂ ಚ ಪರಿಚ್ಛದಂ।
01103015c ಪುನರಾಯಾತ್ಸ್ವನಗರಂ ಭೀಷ್ಮೇಣ ಪ್ರತಿಪೂಜಿತಃ।।
ತಕ್ಕುದಾದ ಬಳುವಳಿಗಳೊಂದಿಗೆ ತನ್ನ ಅಕ್ಕನನ್ನಿತ್ತು ಭೀಷ್ಮನಿಂದ ಸತ್ಕರಿಸಲ್ಪಟ್ಟು ಆ ವೀರನು ತನ್ನ ನಗರಕ್ಕೆ ಹಿಂದಿರುಗಿದನು.
01103016a ಗಾಂಧಾರ್ಯಪಿ ವರಾರೋಹಾ ಶೀಲಾಚಾರವಿಚೇಷ್ಟಿತೈಃ।
01103016c ತುಷ್ಟಿಂ ಕುರೂಣಾಂ ಸರ್ವೇಷಾಂ ಜನಯಾಮಾಸ ಭಾರತ।।
ಭಾರತ! ವರಾರೋಹೆ ಗಾಂಧಾರಿಯು ಶೀಲಾಚಾರ ವಿಚೇಷ್ಟೆಗಳಿಂದ ಕುರುಗಳೆಲ್ಲರನ್ನೂ ಸಂತುಷ್ಟಗೊಳಿಸಿದಳು.
01103017a ವೃತ್ತೇನಾರಾಧ್ಯ ತಾನ್ಸರ್ವಾನ್ಪತಿವ್ರತಪರಾಯಣಾ।
01103017c ವಾಚಾಪಿ ಪುರುಷಾನನ್ಯಾನ್ಸುವ್ರತಾ ನಾನ್ವಕೀರ್ತಯತ್।।
ಅವರೆಲ್ಲರನ್ನೂ ತನ್ನ ನಡವಳಿಕೆಯಿಂದ ಆರಾಧಿಸಿದಳು. ಅವಳು ಎಷ್ಟು ಪತಿವ್ರತೆಯಾಗಿದ್ದಳೆಂದರೆ ಆ ಸುವ್ರತೆಯು ಅನ್ಯ ಪುರುಷರ ಕುರಿತು ಮಾತನ್ನೂ ಆಡುತ್ತಿರಲಿಲ್ಲ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಧೃತರಾಷ್ಟ್ರವಿವಾಹೇ ತ್ರ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಧೃತರಾಷ್ಟ್ರವಿವಾಹ ಎನ್ನುವ ನೂರಾಮೂರನೆಯ ಅಧ್ಯಾಯವು.