ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸಂಭವ ಪರ್ವ
ಅಧ್ಯಾಯ 102
ಸಾರ
ರಾಜಪುತ್ರರ ಜನನದಿಂದ ಕುರುರಾಜ್ಯವು ಸಮೃದ್ಧಿಯ ಪಥದಲ್ಲಿ ಹೋಗುವುದು (1-22). ಪಾಂಡುವಿಗೆ ರಾಜ್ಯಪ್ರಾಪ್ತಿ (23).
01102001 ವೈಶಂಪಾಯನ ಉವಾಚ।
01102001a ತೇಷು ತ್ರಿಷು ಕುಮಾರೇಷು ಜಾತೇಷು ಕುರುಜಾಂಗಲಂ।
01102001c ಕುರವೋಽಥ ಕುರುಕ್ಷೇತ್ರಂ ತ್ರಯಮೇತದವರ್ಧತ।।
ವೈಶಂಪಾಯನನು ಹೇಳಿದನು: “ಆ ಮೂವರು ಕುಮಾರರ ಜನ್ಮದಿಂದ ಕುರುಜಂಗಲ, ಕುರುಕ್ಷೇತ್ರ, ಮತ್ತು ಕುರುವಂಶ ಇವು ಮೂರೂ ಅಭಿವೃದ್ಧಿ ಹೊಂದಿದವು.
01102002a ಊರ್ಧ್ವಸಸ್ಯಾಭವದ್ಭೂಮಿಃ ಸಸ್ಯಾನಿ ಫಲವಂತಿ ಚ।
01102002c ಯಥರ್ತುವರ್ಷೀ ಪರ್ಜನ್ಯೋ ಬಹುಪುಷ್ಪಫಲಾ ದ್ರುಮಾಃ।।
01102003a ವಾಹನಾನಿ ಪ್ರಹೃಷ್ಟಾನಿ ಮುದಿತಾ ಮೃಗಪಕ್ಷಿಣಃ।
01102003c ಗಂಧವಂತಿ ಚ ಮಾಲ್ಯಾನಿ ರಸವಂತಿ ಫಲಾನಿ ಚ।।
ಬೆಳೆಗಳು ಎತ್ತರವಾಗಿ ಬೆಳೆದವು. ಭೂಮಿಯು ಸಸ್ಯ-ಫಲಗಳಿಂದ ಭರಿತವಾಯಿತು. ಪರ್ಜನ್ಯನು ಕಾಲಕ್ಕೆ ಸರಿಯಾಗಿ ಮಳೆಸುರಿಸಿದನು. ವೃಕ್ಷಗಳು ಪುಷ್ಪ-ಫಲಗಳಿಂದ ತುಂಬಿಕೊಂಡವು. ಮೃಗಪಕ್ಷಿಗಳೂ ವಾಹನಗಳೂ ಮುದಿತರಾಗಿ ಸಂತಸಗೊಂಡವು. ಮಾಲೆಗಳು ಸುಗಂಧವನ್ನು ಸೂಸುತ್ತಿದ್ದವು. ಫಲಗಳು ರಸಭರಿತವಾಗಿದ್ದವು.
01102004a ವಣಿಗ್ಭಿಶ್ಚಾವಕೀರ್ಯಂತ ನಗರಾಣ್ಯಥ ಶಿಲ್ಪಿಭಿಃ।
01102004c ಶೂರಾಶ್ಚ ಕೃತವಿದ್ಯಾಶ್ಚ ಸಂತಶ್ಚ ಸುಖಿನೋಽಭವನ್।।
ನಗರಗಳು ವರ್ತಕ-ಶಿಲ್ಪಿಗಳಿಂದ ತುಂಬಿತ್ತು. ಜನರು ಶೂರರೂ, ವಿದ್ಯಾವಂತರೂ, ಸಂತರೂ ಮತ್ತು ಸುಖಿಗಳೂ ಆಗಿದ್ದರು.
01102005a ನಾಭವನ್ದಸ್ಯವಃ ಕೇ ಚಿನ್ನಾಧರ್ಮರುಚಯೋ ಜನಾಃ।
01102005c ಪ್ರದೇಶೇಷ್ವಪಿ ರಾಷ್ಟ್ರಾಣಾಂ ಕೃತಂ ಯುಗಮವರ್ತತ।।
ದಸ್ಯುಗಳೇ ಇರಲಿಲ್ಲ. ಅಪರಾಧ ಅಧರ್ಮಗಳಲ್ಲಿ ಅಭಿರುಚಿಯಿದ್ದ ಜನರೇ ಇರಲಿಲ್ಲ. ರಾಷ್ಟ್ರದ ಎಲ್ಲ ಪ್ರದೇಶಗಳೂ ಕೃತಯುಗವೋ ಎಂಬಂತೆ ತೋರುತ್ತಿದ್ದವು.
01102006a ದಾನಕ್ರಿಯಾಧರ್ಮಶೀಲಾ ಯಜ್ಞವ್ರತಪರಾಯಣಾಃ।
01102006c ಅನ್ಯೋನ್ಯಪ್ರೀತಿಸಂಯುಕ್ತಾ ವ್ಯವರ್ಧಂತ ಪ್ರಜಾಸ್ತದಾ।।
ದಾನಕ್ರಿಯೆ ಮತ್ತು ಧರ್ಮಶೀಲ, ಯಜ್ಞವ್ರತಪರಾಯಣ, ಅನ್ಯೋನ್ಯ ಪ್ರೀತಿಸಂಯುಕ್ತ ಪ್ರಜೆಗಳು ವೃದ್ಧಿಸಿದರು.
01102007a ಮಾನಕ್ರೋಧವಿಹೀನಾಶ್ಚ ಜನಾ ಲೋಭವಿವರ್ಜಿತಾಃ।
01102007c ಅನ್ಯೋನ್ಯಮಭ್ಯವರ್ಧಂತ ಧರ್ಮೋತ್ತರಮವರ್ತತ।।
ಮಾನ-ಕ್ರೋಧ ವಿಹೀನ, ಲೋಭವಿವರ್ಜಿತ ಜನರು ಅನ್ಯೋನ್ಯರ ವಿಕಾಸವನ್ನು ಬಯಸುತ್ತಿದ್ದರು. ಧರ್ಮವು ಅತ್ಯುತ್ತಮ ಸ್ಥಾನವನ್ನು ಪಡೆದಿತ್ತು.
01102008a ತನ್ಮಹೋದಧಿವತ್ಪೂರ್ಣಂ ನಗರಂ ವೈ ವ್ಯರೋಚತ।
01102008c ದ್ವಾರತೋರಣನಿರ್ಯೂಹೈರ್ಯುಕ್ತಮಭ್ರಚಯೋಪಮೈಃ।
01102008e ಪ್ರಾಸಾದಶತಸಂಬಾಧಂ ಮಹೇಂದ್ರಪುರಸನ್ನಿಭಂ।।
ತುಂಬಿಹೋಗಿದ್ಡ ನಗರವು ಮಹಾ ಸಾಗರದಂತೆ ತೋರುತ್ತಿತ್ತು. ದ್ವಾರ, ತೋರಣ, ಮೋಡಗಳನ್ನು ಮುಟ್ಟುತ್ತಿವೆಯೋ ಎಂದು ತೋರುವ ನೂರಾರು ಮಹಡಿಗಳ ಎತ್ತರ ಕಟ್ಟಡಗಳಿಂದ ಅದು ಮಹೇಂದ್ರಪುರವನ್ನು ಹೋಲುತ್ತಿತ್ತು.
01102009a ನದೀಷು ವನಖಂಡೇಷು ವಾಪೀಪಲ್ವಲಸಾನುಷು।
01102009c ಕಾನನೇಷು ಚ ರಮ್ಯೇಷು ವಿಜಹ್ರುರ್ಮುದಿತಾ ಜನಾಃ।।
ನದಿಗಳಲ್ಲಿ, ವನಖಂಡಗಳಲ್ಲಿ, ಕೊಳ-ಸರೋವರಗಳಲ್ಲಿ, ಗಿರಿಶಿಖರಗಳ ಮೇಲೆ, ಮತ್ತು ರಮ್ಯ ಕಾನನಗಳಲ್ಲಿ ಜನರು ಮುದಿತರಾಗಿ ವಿಹರಿಸುತ್ತಿದ್ದರು.
01102010a ಉತ್ತರೈಃ ಕುರುಭಿಃ ಸಾರ್ಧಂ ದಕ್ಷಿಣಾಃ ಕುರವಸ್ತದಾ।
01102010c ವಿಸ್ಪರ್ಧಮಾನಾ ವ್ಯಚರಂಸ್ತಥಾ ಸಿದ್ಧರ್ಷಿಚಾರಣೈಃ।
01102010e ನಾಭವತ್ಕೃಪಣಃ ಕಶ್ಚಿನ್ನಾಭವನ್ವಿಧವಾಃ ಸ್ತ್ರಿಯಃ।।
ಆಗಿನ ಕಾಲದಲ್ಲಿ ದಕ್ಷಿಣ ಕುರುಗಳು ಉತ್ತರ ಕುರುಗಳೊಂದಿಗೆ ಸ್ಪರ್ಧಿಸುತ್ತಿರುವರೋ ಎನ್ನುವಂತೆ ಸಿದ್ಧ, ಋಷಿ, ಚಾರಣರೊಂದಿಗೆ ವ್ಯವಹರಿಸುತ್ತಿದ್ದರು. ಯಾರೂ ಬಡವರಿರಲಿಲ್ಲ, ಯಾವ ಸ್ತ್ರೀಯೂ ವಿಧವೆಯಾಗಿರಲಿಲ್ಲ.
01102011a ತಸ್ಮಿಂಜನಪದೇ ರಮ್ಯೇ ಬಹವಃ ಕುರುಭಿಃ ಕೃತಾಃ।
01102011c ಕೂಪಾರಾಮಸಭಾವಾಪ್ಯೋ ಬ್ರಾಹ್ಮಣಾವಸಥಾಸ್ತಥಾ।
01102011e ಭೀಷ್ಮೇಣ ಶಾಸ್ತ್ರತೋ ರಾಜನ್ಸರ್ವತಃ ಪರಿರಕ್ಷಿತೇ।।
01102012a ಬಭೂವ ರಮಣೀಯಶ್ಚ ಚೈತ್ಯಯೂಪಶತಾಂಕಿತಃ।
01102012c ಸ ದೇಶಃ ಪರರಾಷ್ಟ್ರಾಣಿ ಪ್ರತಿಗೃಹ್ಯಾಭಿವರ್ಧಿತಃ।
01102012e ಭೀಷ್ಮೇಣ ವಿಹಿತಂ ರಾಷ್ಟ್ರೇ ಧರ್ಮಚಕ್ರಮವರ್ತತ।।
ರಮ್ಯ ಗ್ರಾಮೀಣಪ್ರದೇಶಗಳಲ್ಲಿ ಕುರುಗಳು ಬಹಳಷ್ಟು ಬಾವಿಗಳನ್ನು, ಸಭೆಗಳನ್ನು, ಕೆರೆಗಳನ್ನು, ಬ್ರಾಹ್ಮಣರಿಗೆ ಮನೆಗಳನ್ನೂ ಕಟ್ಟಿಸಿದರು. ರಾಜನ್! ಭೀಷ್ಮನಿಂದ ಆಳಲ್ಪಟ್ಟ ಆ ರಾಜ್ಯವು ಎಲ್ಲೆಡೆಯಿಂದ ಸುರಕ್ಷಿತವಾಗಿತ್ತು. ರಮಣೀಯ ಚೈತ್ಯ ಯೂಪಗಳಿಂದ ಕೂಡಿದ್ದ ಆ ದೇಶವು ಪರರಾಷ್ಟ್ರಗಳನ್ನೂ ಸೇರಿಸಿಕೊಳ್ಳುತ್ತಾ ಬೆಳೆಯುತ್ತಿತ್ತು. ಭೀಷ್ಮನಿಂದ ಆಳಲ್ಪಟ್ಟ ಆ ರಾಷ್ಟ್ರವು ಧರ್ಮಚಕ್ರದ ಮೇಲೆಯೇ ನಡೆಯುತ್ತಿತ್ತು.
01102013a ಕ್ರಿಯಮಾಣೇಷು ಕೃತ್ಯೇಷು ಕುಮಾರಾಣಾಂ ಮಹಾತ್ಮನಾಂ।
01102013c ಪೌರಜಾನಪದಾಃ ಸರ್ವೇ ಬಭೂವುಃ ಸತತೋತ್ಸವಾಃ।।
ಮಹಾತ್ಮ ಕುಮಾರರು ತಮ್ಮ ತಮ್ಮ ಕೃತ್ಯದಲ್ಲಿ ತೊಡಗಿರುವಾಗ ನಗರ ಮತ್ತು ಗ್ರಾಮೀಣ ಜನರೆಲ್ಲರೂ ಸದಾ ಉತ್ಸವವನ್ನಾಚರಿಸುತ್ತಿದ್ದರು.
01102014a ಗೃಹೇಷು ಕುರುಮುಖ್ಯಾನಾಂ ಪೌರಾಣಾಂ ಚ ನರಾಧಿಪ।
01102014c ದೀಯತಾಂ ಭುಜ್ಯತಾಂ ಚೇತಿ ವಾಚೋಽಶ್ರೂಯಂತ ಸರ್ವಶಃ।।
ನರಾಧಿಪ! ಕುರುಮುಖ್ಯರ ಮತ್ತು ಪೌರರ ಮನೆಗಳಲ್ಲಿ ಕೊಡೋಣ, ಭೋಜನವನ್ನು ನೀಡೋಣ ಎಂಬ ಮಾತುಗಳು ಎಲ್ಲೆಡೆಯೂ ಎಲ್ಲರಿಂದಲೂ ಕೇಳಿಬರುತ್ತಿದ್ದವು.
01102015a ಧೃತರಾಷ್ಟ್ರಶ್ಚ ಪಾಂಡುಶ್ಚ ವಿದುರಶ್ಚ ಮಹಾಮತಿಃ।
01102015c ಜನ್ಮಪ್ರಭೃತಿ ಭೀಷ್ಮೇಣ ಪುತ್ರವತ್ಪರಿಪಾಲಿತಾಃ।।
ಧೃತರಾಷ್ಟ್ರ, ಪಾಂಡು ಮತ್ತು ಮಹಾಮತಿ ವಿದುರರನ್ನು ಹುಟ್ಟಿದಾಗಿನಿಂದ ಭೀಷ್ಮನು ತನ್ನದೇ ಮಕ್ಕಳಂತೆ ಪರಿಪಾಲಿಸಿದನು.
01102016a ಸಂಸ್ಕಾರೈಃ ಸಂಸ್ಕೃತಾಸ್ತೇ ತು ವ್ರತಾಧ್ಯಯನಸಂಯುತಾಃ।
01102016c ಶ್ರಮವ್ಯಾಯಾಮಕುಶಲಾಃ ಸಮಪದ್ಯಂತ ಯೌವನಂ।।
ಸಂಸ್ಕಾರಗಳಿಂದ ಸಂಸ್ಕೃತ, ವ್ರತಾಧ್ಯಯನ ಸಂಯುತ, ಮತ್ತು ಶ್ರಮ ವ್ಯಾಯಾಮ ಕುಶಲರಾದ ಅವರು ಯೌವನವನ್ನು ಪ್ರವೇಶಿಸಿದರು.
01102017a ಧನುರ್ವೇದೇಽಶ್ವಪೃಷ್ಠೇ ಚ ಗದಾಯುದ್ಧೇಽಸಿಚರ್ಮಣಿ।
01102017c ತಥೈವ ಗಜಶಿಕ್ಷಾಯಾಂ ನೀತಿಶಾಸ್ತ್ರೇ ಚ ಪಾರಗಾಃ।।
ಧನುರ್ವೇದ, ಕುದುರೆ ಸವಾರಿ, ಗದಾಯುದ್ಧ, ಖಡ್ಗ ಯುದ್ಧ, ರಾಜಶಿಕ್ಷಣ ಮತ್ತು ನೀತಿ ಶಾಸ್ತ್ರಗಳಲ್ಲಿ ಪಾರಂಗತರಾದರು.
01102018a ಇತಿಹಾಸಪುರಾಣೇಷು ನಾನಾಶಿಕ್ಷಾಸು ಚಾಭಿಭೋ।
01102018c ವೇದವೇದಾಂಗತತ್ತ್ವಜ್ಞಾಃ ಸರ್ವತ್ರ ಕೃತನಿಶ್ರಮಾಃ।।
ಇತಿಹಾಸ ಪುರಾಣಗಳು, ನಾನಾ ಶಿಕ್ಷಣಗಳು, ವೇದವೇದಾಂಗ ತತ್ವಜ್ಞಾನ ಎಲ್ಲವನ್ನೂ ಶ್ರಮಿಸಿ ಕಲಿತುಕೊಂಡರು.
01102019a ಪಾಂಡುರ್ಧನುಷಿ ವಿಕ್ರಾಂತೋ ನರೇಭ್ಯೋಽಭ್ಯಧಿಕೋಽಭವತ್।
01102019c ಅತ್ಯನ್ಯಾನ್ಬಲವಾನಾಸೀದ್ಧೃತರಾಷ್ಟ್ರೋ ಮಹೀಪತಿಃ।।
01102020a ತ್ರಿಷು ಲೋಕೇಷು ನ ತ್ವಾಸೀತ್ಕಶ್ಚಿದ್ವಿದುರಸಮ್ಮಿತಃ।
01102020c ಧರ್ಮನಿತ್ಯಸ್ತತೋ ರಾಜನ್ಧರ್ಮೇ ಚ ಪರಮಂ ಗತಃ।।
ವಿಕ್ರಾಂತ ಪಾಂಡುವು ಧನುರ್ವಿದ್ಯೆಯಲ್ಲಿ ಎಲ್ಲರನ್ನೂ ಮೀರಿಸಿದನು. ಮಹೀಪತಿ ಧೃತರಾಷ್ಟ್ರನು ಬೇರೆ ಎಲ್ಲರಿಗಿಂತ ಬಲಶಾಲಿಯಾಗಿದ್ದನು. ಧರ್ಮನಿತ್ಯತೆ, ರಾಜಧರ್ಮ, ಮತ್ತು ಪರಮ ಗತಿಯಲ್ಲಿ ವಿದುರನ ಸರಿಸಮಾನರಾದವರು ಮೂರೂ ಲೋಕಗಳಲ್ಲಿ ಯಾರೂ ಇರಲಿಲ್ಲ.
01102021a ಪ್ರನಷ್ಟಂ ಶಂತನೋರ್ವಂಶಂ ಸಮೀಕ್ಷ್ಯ ಪುನರುದ್ಧೃತಂ।
01102021c ತತೋ ನಿರ್ವಚನಂ ಲೋಕೇ ಸರ್ವರಾಷ್ಟ್ರೇಷ್ವವರ್ತತ।।
ನಷ್ಟವಾಗುತ್ತಿದ್ದ ಶಂತನುವಿನ ವಂಶವು ಪುನರುತ್ಥಾನವಾದದ್ದನ್ನು ನೋಡಿದ ಸರ್ವರಾಷ್ಟ್ರಗಳ ಜನರಲ್ಲಿ ಒಂದು ಮಾತು ಕೇಳಿಬರುತ್ತಿತ್ತು.
01102022a ವೀರಸೂನಾಂ ಕಾಶಿಸುತೇ ದೇಶಾನಾಂ ಕುರುಜಾಂಗಲಂ।
01102022c ಸರ್ವಧರ್ಮವಿದಾಂ ಭೀಷ್ಮಃ ಪುರಾಣಾಂ ಗಜಸಾಹ್ವಯಂ।।
“ಕಾಶಿಸುತೆಯರ ಮಕ್ಕಳೇ ವೀರರು! ದೇಶಗಳಲ್ಲಿಯೇ ಕುರುಜಂಗಲ! ಸರ್ವಧರ್ಮವಿದರಲ್ಲಿ ಭೀಷ್ಮ ಮತ್ತು ನಗರಗಳಲ್ಲಿ ಗಜಸಾಹ್ವಯ!”
01102023a ಧೃತರಾಷ್ಟ್ರಸ್ತ್ವಚಕ್ಷುಷ್ಟ್ವಾದ್ರಾಜ್ಯಂ ನ ಪ್ರತ್ಯಪದ್ಯತ।
01102023c ಕರಣತ್ವಾಚ್ಚ ವಿದುರಃ ಪಾಂಡುರಾಸೀನ್ಮಹೀಪತಿಃ।।
ತನ್ನ ಕುರುಡತ್ವದಿಂದಾಗಿ ಧೃತರಾಷ್ಟ್ರನು, ಮತ್ತು ಜಾತಿಸಂಕರದಿಂದ ಜನಿಸಿದ ವಿದುರನು ರಾಜ್ಯವನ್ನು ಪಡೆಯಲಿಲ್ಲ. ಪಾಂಡುವು ಮಹೀಪತಿಯಾದನು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಪಾಂಡುರಾಜ್ಯಾಭಿಷೇಕೇ ದ್ವಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಪಾಂಡುರಾಜ್ಯಾಭೀಷೇಕ ಎನ್ನುವ ನೂರಾಎರಡನೆಯ ಅಧ್ಯಾಯವು.