101 ಅಣಿಮಾಂಡವ್ಯೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 101

ಸಾರ

ಜನಮೇಜಯನು ಕೇಳಲು ವೈಶಂಪಾಯನನು ಅಣಿಮಾಂಡವ್ಯನು ಧರ್ಮನನ್ನು ಶೂದ್ರಯೋನಿಯಲ್ಲಿ ಜನಿಸುವಂತೆ ಶಪಿಸಿದ ಅಣಿಮಾಂಡವ್ಯೋಪಾಖ್ಯಾನವನ್ನು ಹೇಳಿದುದು (1-28).

01101001 ಜನಮೇಜಯ ಉವಾಚ।
01101001a ಕಿಂ ಕೃತಂ ಕರ್ಮ ಧರ್ಮೇಣ ಯೇನ ಶಾಪಮುಪೇಯಿವಾನ್।
01101001c ಕಸ್ಯ ಶಾಪಾಚ್ಚ ಬ್ರಹ್ಮರ್ಷೇ ಶೂದ್ರಯೋನಾವಜಾಯತ।।

ಜನಮೇಜಯನು ಹೇಳಿದನು: “ಈ ಶಾಪವನ್ನು ಪಡೆಯಲು ಧರ್ಮನಿಂದ ಯಾವ ಕರ್ಮವು ನಡೆದುಹೋಯಿತು? ಬ್ರಹ್ಮರ್ಷಿ! ಯಾರ ಶಾಪದಿಂದ ಅವನು ಶೂದ್ರಯೋನಿಯಲ್ಲಿ ಜನಿಸಬೇಕಾಯಿತು?”

01101002 ವೈಶಂಪಾಯನ ಉವಾಚ।
01101002a ಬಭೂವ ಬ್ರಾಹ್ಮಣಃ ಕಶ್ಚಿನ್ಮಾಂಡವ್ಯ ಇತಿ ವಿಶ್ರುತಃ।
01101002c ಧೃತಿಮಾನ್ಸರ್ವಧರ್ಮಜ್ಞಃ ಸತ್ಯೇ ತಪಸಿ ಚ ಸ್ಥಿತಃ।।

ವೈಶಂಪಾಯನನು ಹೇಳಿದನು: “ಒಮ್ಮೆ ಮಾಂಡವ್ಯ ಎಂಬ ವಿಶೃತ ಬ್ರಾಹ್ಮಣನಿದ್ದನು. ಆ ಧೃತಿವಂತ ಸರ್ವಧರ್ಮಜ್ಞನು ಸತ್ಯ ಮತ್ತು ತಪಸ್ಸಿನಲ್ಲಿ ನಿರತನಾಗಿದ್ದನು.

01101003a ಸ ಆಶ್ರಮಪದದ್ವಾರಿ ವೃಕ್ಷಮೂಲೇ ಮಹಾತಪಾಃ।
01101003c ಊರ್ಧ್ವಬಾಹುರ್ಮಹಾಯೋಗೀ ತಸ್ಥೌ ಮೌನವ್ರತಾನ್ವಿತಃ।।

ಆ ಮಹಾತಪಸ್ವಿ ಮಹಾಯೋಗಿಯು ತನ್ನ ಆಶ್ರಮದ ಬಳಿಯ ಒಂದು ವೃಕ್ಷದ ಕೆಳಗೆ ಬಾಹುಗಳನ್ನು ಮೇಲೆತ್ತಿ ನಿಂತು ಮೌನವ್ರತ ತಾಳಿ ತಪಸ್ಸನ್ನು ಮಾಡುತ್ತಿದ್ದನು.

01101004a ತಸ್ಯ ಕಾಲೇನ ಮಹತಾ ತಸ್ಮಿಂಸ್ತಪಸಿ ತಿಷ್ಠತಃ।
01101004c ತಮಾಶ್ರಮಪದಂ ಪ್ರಾಪ್ತಾ ದಸ್ಯವೋ ಲೋಪ್ತ್ರಹಾರಿಣಃ।
01101004e ಅನುಸಾರ್ಯಮಾಣಾ ಬಹುಭೀ ರಕ್ಷಿಭಿರ್ಭರತರ್ಷಭ।।

ಅವನು ಬಹಳ ಕಾಲದಿಂದ ಹಾಗೆ ತಪಸ್ಸಿನಲ್ಲಿ ನಿರತನಾಗಿದ್ದನು. ಭರತರ್ಷಭ! ಒಮ್ಮೆ ಬೆನ್ನಟ್ಟಿ ಬರುತ್ತಿದ್ದ ಬಹಳ ಸೈನಿಕರಿಂದ ಪಲಾಯನಮಾಡುತ್ತಿದ್ದ ದಸ್ಯುಗಳು ತಾವು ಕದ್ದಿದ್ದ ಸಂಪತ್ತನ್ನು ಹೊತ್ತುಕೊಂಡು ಆ ಆಶ್ರಮವನ್ನು ತಲುಪಿದರು.

01101005a ತೇ ತಸ್ಯಾವಸಥೇ ಲೋಪ್ತ್ರಂ ನಿದಧುಃ ಕುರುಸತ್ತಮ।
01101005c ನಿಧಾಯ ಚ ಭಯಾಲ್ಲೀನಾಸ್ತತ್ರೈವಾನ್ವಾಗತೇ ಬಲೇ।।

ಕುರುಸತ್ತಮ! ಅವರು ಆ ದ್ರವ್ಯಗಳನ್ನು ಅವನ ಮನೆಯಲ್ಲಿಯೇ ಹುಗಿದಿಟ್ಟು ಸೇನೆಯ ಭಯದಿಂದ ಅಲ್ಲಿಯೇ ಅಡಗಿಕೊಂಡರು.

01101006a ತೇಷು ಲೀನೇಷ್ವಥೋ ಶೀಘ್ರಂ ತತಸ್ತದ್ರಕ್ಷಿಣಾಂ ಬಲಂ।
01101006c ಆಜಗಾಮ ತತೋಽಪಶ್ಯಂಸ್ತಂ ಋಷಿಂ ತಸ್ಕರಾನುಗಾಃ।।

ಅವರು ಹೊರಟು ಹೋದ ತಕ್ಷಣವೇ ಕಳ್ಳರನ್ನು ಓಡಿಸಿಕೊಂಡು ಬಂದ ಸೈನಿಕರ ಬಲವು ಅಲ್ಲಿಗೆ ಬಂದು ಋಷಿಯನ್ನು ನೋಡಿತು.

01101007a ತಮಪೃಚ್ಛಂಸ್ತತೋ ರಾಜಂಸ್ತಥಾವೃತ್ತಂ ತಪೋಧನಂ।
01101007c ಕತರೇಣ ಪಥಾ ಯಾತಾ ದಸ್ಯವೋ ದ್ವಿಜಸತ್ತಮ।
01101007e ತೇನ ಗಚ್ಛಾಮಹೇ ಬ್ರಹ್ಮನ್ಪಥಾ ಶೀಘ್ರತರಂ ವಯಂ।।

ರಾಜನ್! ಅದೇ ರೀತಿ ನಿಂತಿದ್ದ ಆ ತಪೋಧನನ್ನು ಅವರು ಪ್ರಶ್ನಿಸಿದರು: “ದ್ವಿಜಸತ್ತಮ! ದಸ್ಯುಗಳು ಯಾವ ಕಡೆ ಹೋದರು? ಬ್ರಹ್ಮನ್! ನಾವೂ ಕೂಡ ಅವರು ಹೋದ ಕಡೆ ಬೇಗ ಹೋಗುತ್ತೇವೆ.”

01101008a ತಥಾ ತು ರಕ್ಷಿಣಾಂ ತೇಷಾಂ ಬ್ರುವತಾಂ ಸ ತಪೋಧನಃ।
01101008c ನ ಕಿಂ ಚಿದ್ವಚನಂ ರಾಜನ್ನವದತ್ಸಾಧ್ವಸಾಧು ವಾ।।

ರಾಜನ್! ಆ ತಪೋಧನನು ಕಾವಲುಗಾರರೊಂದಿಗೆ ಒಳ್ಳೆಯದಾಗಲೀ ಕೆಟ್ಟದ್ದಾಗಲೀ ಏನನ್ನೂ ಮಾತನಾಡಲಿಲ್ಲ.

01101009a ತತಸ್ತೇ ರಾಜಪುರುಷಾ ವಿಚಿನ್ವಾನಾಸ್ತದಾಶ್ರಮಂ।
01101009c ದದೃಶುಸ್ತತ್ರ ಸಂಲೀನಾಂಸ್ತಾಂಶ್ಚೋರಾನ್ದ್ರವ್ಯಮೇವ ಚ।।

ಆಗ ಆ ರಾಜಪುರುಷರು ಅವನ ಆಶ್ರಮವನ್ನೆಲ್ಲಾ ಹುಡುಕಾಡಿ ಅಲ್ಲಿ ಅಡಗಿದ್ದ ಕಳ್ಳರನ್ನೂ ಮತ್ತು ಅವರು ಅಡಗಿಸಿಟ್ಟಿದ್ದ ದ್ರವ್ಯವನ್ನೂ ಕಂಡರು.

01101010a ತತಃ ಶಂಕಾ ಸಮಭವದ್ರಕ್ಷಿಣಾಂ ತಂ ಮುನಿಂ ಪ್ರತಿ।
01101010c ಸಮ್ಯಮ್ಯೈನಂ ತತೋ ರಾಜ್ಞೇ ದಸ್ಯೂಂಶ್ಚೈವ ನ್ಯವೇದಯನ್।।

ಆಗ ಕಾವಲುಗಾರರಿಗೆ ಆ ಮುನಿಯ ಕುರಿತು ಅನುಮಾನವುಂಟಾಯಿತು. ಅವನನ್ನೂ ದಸ್ಯುಗಳನ್ನೂ ಹಿಡಿದು ರಾಜನಲ್ಲಿಗೆ ಕರೆತಂದರು.

01101011a ತಂ ರಾಜಾ ಸಹ ತೈಶ್ಚೋರೈರನ್ವಶಾದ್ವಧ್ಯತಾಮಿತಿ।
01101011c ಸ ವಧ್ಯಘಾತೈರಜ್ಞಾತಃ ಶೂಲೇ ಪ್ರೋತೋ ಮಹಾತಪಾಃ।।

ರಾಜನು ಕಳ್ಳರೊಡನೆ ಅವನಿಗೂ “ಇವರನ್ನು ಕೊಲ್ಲಿರಿ!””ಎಂದು ತೀರ್ಮಾನವಿತ್ತನು. ಮುಗ್ಧ ಕೊಲೆಗಾರರು ಆ ಮಹಾತಪಸ್ವಿಯನ್ನು ಶೂಲಕ್ಕೇರಿಸಿದರು.

01101012a ತತಸ್ತೇ ಶೂಲಮಾರೋಪ್ಯ ತಂ ಮುನಿಂ ರಕ್ಷಿಣಸ್ತದಾ।
01101012c ಪ್ರತಿಜಗ್ಮುರ್ಮಹೀಪಾಲಂ ಧನಾನ್ಯಾದಾಯ ತಾನ್ಯಥ।।

ಆ ಮುನಿಯನ್ನು ಶೂಲಕ್ಕೇರಿಸಿ ಕಾವಲುಗಾರರು ಕದ್ದಿದ್ದ ಧನವನ್ನು ರಾಜನಿಗೆ ತಂದೊಪ್ಪಿಸಿದರು.

01101013a ಶೂಲಸ್ಥಃ ಸ ತು ಧರ್ಮಾತ್ಮಾ ಕಾಲೇನ ಮಹತಾ ತತಃ।
01101013c ನಿರಾಹಾರೋಽಪಿ ವಿಪ್ರರ್ಷಿರ್ಮರಣಂ ನಾಭ್ಯುಪಾಗಮತ್।
01101013e ಧಾರಯಾಮಾಸ ಚ ಪ್ರಾಣಾನೃಷೀಂಶ್ಚ ಸಮುಪಾನಯತ್।।

ಆ ಧರ್ಮಾತ್ಮ ವಿಪ್ರರ್ಷಿಯು ನಿರಾಹಾರಿಯಾಗಿ ಆ ಶೂಲದ ಮೇಲೆ ಬಹಳ ಕಾಲದವರೆಗೆ ಇದ್ದರೂ ಸಾಯಲಿಲ್ಲ. ತನ್ನ ಪ್ರಾಣವನ್ನು ಹಿಡಿದುಕೊಂಡೇ ಇದ್ದ ಅವನು ಇತರ ಋಷಿಗಳನ್ನು ಕರೆಯಿಸಿಕೊಂಡನು.

01101014a ಶೂಲಾಗ್ರೇ ತಪ್ಯಮಾನೇನ ತಪಸ್ತೇನ ಮಹಾತ್ಮನಾ।
01101014c ಸಂತಾಪಂ ಪರಮಂ ಜಗ್ಮುರ್ಮುನಯೋಽಥ ಪರಂತಪ।।

ಪರಂತಪ! ಶೂಲದ ಮೇಲೆಯೇ ತಪಸ್ಸನ್ನು ಮಾಡುತ್ತಿದ್ದ ಆ ಮಹಾತ್ಮನನ್ನು ನೋಡಿದ ಅವರು ಪರಮ ಸಂತಪ್ತರಾಗಿ ಹಿಂದಿರುಗಿದರು.

01101015a ತೇ ರಾತ್ರೌ ಶಕುನಾ ಭೂತ್ವಾ ಸಂನ್ಯವರ್ತಂತ ಸರ್ವತಃ।
01101015c ದರ್ಶಯಂತೋ ಯಥಾಶಕ್ತಿ ತಮಪೃಚ್ಛನ್ದ್ವಿಜೋತ್ತಮಂ।
01101015e ಶ್ರೋತುಮಿಚ್ಛಾಮಹೇ ಬ್ರಹ್ಮನ್ಕಿಂ ಪಾಪಂ ಕೃತವಾನಸಿ।।

ಅವರೆಲ್ಲರೂ ರಾತ್ರಿ ಬಾವಲಿಗಳಾಗಿ ಎಲ್ಲ ಕಡೆಗಳಿಂದಲೂ ಬಂದು ಯಥಾಶಕ್ತಿ ತಮ್ಮ ಬಲವನ್ನು ತೋರಿಸಿ ಆ ದ್ವಿಜೋತ್ತಮನನ್ನು ಪ್ರಶ್ನಿಸಿದರು: “ಬ್ರಾಹ್ಮಣ! ನೀನು ಯಾವ ಪಾಪವನ್ನು ಮಾಡಿದ್ದೀಯೆ ಎಂದು ಕೇಳ ಬಯಸುತ್ತೇವೆ.”

01101016a ತತಃ ಸ ಮುನಿಶಾರ್ದೂಲಸ್ತಾನುವಾಚ ತಪೋಧನಾನ್।
01101016c ದೋಷತಃ ಕಂ ಗಮಿಷ್ಯಾಮಿ ನ ಹಿ ಮೇಽನ್ಯೋಽಪರಾಧ್ಯತಿ।।

ಆಗ ಆ ಮುನಿಶಾರ್ದೂಲನು ತಪೋಧನರಿಗೆ ಹೇಳಿದನು: “ನಾನು ಯಾರನ್ನು ದೋಷಿತರೆಂದು ಹೇಳಲಿ? ಇದು ನನ್ನದೇ ಅಪರಾಧ.”

01101017a ರಾಜಾ ಚ ತಂ ಋಷಿಂ ಶ್ರುತ್ವಾ ನಿಷ್ಕ್ರಮ್ಯ ಸಹ ಮಂತ್ರಿಭಿಃ।
01101017c ಪ್ರಸಾದಯಾಮಾಸ ತದಾ ಶೂಲಸ್ಥಂ ಋಷಿಸತ್ತಮಂ।।

ಅವನು ಋಷಿಯೆಂದು ಕೇಳಿದ ರಾಜನು ಮಂತ್ರಿಗಳನ್ನೊಡಗೂಡಿ ಶೂಲದ ಮೇಲಿದ್ದ ಆ ಋಷಿಸತ್ತಮನ ಬಳಿ ಬಂದನು.

01101018a ಯನ್ಮಯಾಪಕೃತಂ ಮೋಹಾದಜ್ಞಾನಾದೃಷಿಸತ್ತಮ।
01101018c ಪ್ರಸಾದಯೇ ತ್ವಾಂ ತತ್ರಾಹಂ ನ ಮೇ ತ್ವಂ ಕ್ರೋದ್ಧುಮರ್ಹಸಿ।।

“ಋಷಿಸತ್ತಮ! ನನ್ನ ಅಜ್ಞಾನ ಮತ್ತು ಮೋಹದಿಂದ ಈ ಅಪಕೃತವು ನಡೆದುಹೋಯಿತು. ನನ್ನ ಮೇಲೆ ಸಿಟ್ಟಾಗಬೇಡ. ನನ್ನನ್ನು ಅನುಗ್ರಹಿಸು.”

01101019a ಏವಮುಕ್ತಸ್ತತೋ ರಾಜ್ಞಾ ಪ್ರಸಾದಮಕರೋನ್ಮುನಿಃ।
01101019c ಕೃತಪ್ರಸಾದೋ ರಾಜಾ ತಂ ತತಃ ಸಮವತಾರಯತ್।।

ರಾಜನು ಹೀಗೆ ಹೇಳಿದಾಗ ಮುನಿಯು ಶಾಂತನಾದನು. ಅನುಗ್ರಹಿತ ರಾಜನು ಅವನನ್ನು ಕೆಳಕ್ಕಿಳಿಸಿದನು.

01101020a ಅವತಾರ್ಯ ಚ ಶೂಲಾಗ್ರಾತ್ತಚ್ಶೂಲಂ ನಿಶ್ಚಕರ್ಷ ಹ।
01101020c ಅಶಕ್ನುವಂಶ್ಚ ನಿಷ್ಕ್ರಷ್ಟುಂ ಶೂಲಂ ಮೂಲೇ ಸ ಚಿಚ್ಛಿದೇ।।

ಅವನನ್ನು ಶೂಲದ ಮೇಲಿನಿಂದ ಕೆಳಗಿಳಿಸಿ ಅವನಿಂದ ಆ ಶೂಲವನ್ನು ಕೀಳಲು ಪ್ರಯತ್ನಿಸಿದಾಗ ಅದು ಬರಲೇ ಇಲ್ಲ. ಆಗ ಆ ಶೂಲವನ್ನು ಬುಡದಲ್ಲಿಯೇ ಕತ್ತರಿಸಿದನು.

01101021a ಸ ತಥಾಂತರ್ಗತೇನೈವ ಶೂಲೇನ ವ್ಯಚರನ್ಮುನಿಃ।
01101021c ಸ ತೇನ ತಪಸಾ ಲೋಕಾನ್ವಿಜಿಗ್ಯೇ ದುರ್ಲಭಾನ್ಪರೈಃ।
01101021e ಅಣೀಮಾಂಡವ್ಯ ಇತಿ ಚ ತತೋ ಲೋಕೇಷು ಕಥ್ಯತೇ।।

ಹೀಗೆ ಆ ಮುನಿಯು ತನ್ನ ಒಳಗೆ ಶೂಲವನ್ನು ಇಟ್ಟುಕೊಂಡೇ ಓಡಾಡುತ್ತಿದ್ದನು. ಮತ್ತು ತನ್ನ ತಪಸ್ಸಿನ ಮೂಲಕ ದುರ್ಲಭ ಪರ ಲೋಕವನ್ನು ಜಯಿಸಿದನು. ಅವನನ್ನು ಅಣೀಮಾಂಡವ್ಯನೆಂದು ಲೋಕಗಳಲ್ಲಿ ಕರೆಯುತ್ತಾರೆ.

01101022a ಸ ಗತ್ವಾ ಸದನಂ ವಿಪ್ರೋ ಧರ್ಮಸ್ಯ ಪರಮಾರ್ಥವಿತ್।
01101022c ಆಸನಸ್ಥಂ ತತೋ ಧರ್ಮಂ ದೃಷ್ಟ್ವೋಪಾಲಭತ ಪ್ರಭುಃ।।

ಆ ಪರಮಾರ್ಥವಿದುಷಿ ವಿಪ್ರನು ಧರ್ಮಸದನವನ್ನು ಸೇರಿ ಆಸನಸ್ಥ ಪ್ರಭು ಧರ್ಮನನ್ನು ಕಂಡು ಪ್ರಶ್ನಿಸಿದನು:

01101023a ಕಿಂ ನು ತದ್ದುಷ್ಕೃತಂ ಕರ್ಮ ಮಯಾ ಕೃತಮಜಾನತಾ।
01101023c ಯಸ್ಯೇಯಂ ಫಲನಿರ್ವೃತ್ತಿರೀದೃಶ್ಯಾಸಾದಿತಾ ಮಯಾ।
01101023e ಶೀಘ್ರಮಾಚಕ್ಷ್ವ ಮೇ ತತ್ತ್ವಂ ಪಶ್ಯ ಮೇ ತಪಸೋ ಬಲಂ।।

“ನನಗೆ ತಿಳಿಯದ ಯಾವ ದುಷ್ಕೃತ್ಯವನ್ನು ನಾನು ಮಾಡಿದ್ದೆನೆಂದು ನನಗೆ ಅಂಥಹ ಫಲವನ್ನು ಅನುಭವಿಸಬೇಕಾಯಿತು? ಶೀಘ್ರದಲ್ಲಿಯೇ ಇದಕ್ಕೆ ಉತ್ತರವನ್ನು ನೀಡಿ ನನ್ನ ತಪೋಬಲವನ್ನು ನೋಡು.”

01101024 ಧರ್ಮ ಉವಾಚ।
01101024a ಪತಂಗಕಾನಾಂ ಪುಚ್ಛೇಷು ತ್ವಯೇಷೀಕಾ ಪ್ರವೇಶಿತಾ।
01101024c ಕರ್ಮಣಸ್ತಸ್ಯ ತೇ ಪ್ರಾಪ್ತಂ ಫಲಮೇತತ್ತಪೋಧನ।।

ಧರ್ಮನು ಹೇಳಿದನು: “ತಪೋಧನ! ನೀನು ಚಿಟ್ಟೆಗಳ ಬಾಲಗಳಿಗೆ ಹುಲ್ಲಿನ ಕಡ್ಡಿಗಳನ್ನು ಸುಚ್ಚಿದ್ದೆ. ಆ ಕರ್ಮಕ್ಕೆ ಈ ಫಲವು ಪ್ರಾಪ್ತಿಯಾಗಿದೆ.”

01101025 ಅಣೀಮಾಂಡವ್ಯ ಉವಾಚ।
01101025a ಅಲ್ಪೇಽಪರಾಧೇ ವಿಪುಲೋ ಮಮ ದಂಡಸ್ತ್ವಯಾ ಕೃತಃ।
01101025c ಶೂದ್ರಯೋನಾವತೋ ಧರ್ಮ ಮಾನುಷಃ ಸಂಭವಿಷ್ಯಸಿ।।

“ಧರ್ಮ! ಆ ಅಲ್ಪ ಅಪರಾಧಕ್ಕೆ ಇಷ್ಟೊಂದು ವಿಪುಲ ದಂಡವನ್ನಿತ್ತಿದ್ದೀಯೆ. ಆದುದರಿಂದ ನೀನು ಶೂದ್ರಯೋನಿಯಲ್ಲಿ ಮನುಷ್ಯನಾಗಿ ಜನಿಸುತ್ತೀಯೆ.

01101026a ಮರ್ಯಾದಾಂ ಸ್ಥಾಪಯಾಂಯದ್ಯ ಲೋಕೇ ಧರ್ಮಫಲೋದಯಾಂ।
01101026c ಆ ಚತುರ್ದಶಮಾದ್ವರ್ಷಾನ್ನ ಭವಿಷ್ಯತಿ ಪಾತಕಂ।
01101026e ಪರೇಣ ಕುರ್ವತಾಮೇವಂ ದೋಷ ಏವ ಭವಿಷ್ಯತಿ।।

ಇಂದು ನಾನು ಧರ್ಮಫಲಗಳ ಕುರಿತು ಒಂದು ನಿಯಮವನ್ನು ಹಾಕುತ್ತೇನೆ. ಹದಿನಾಲ್ಕು ವರ್ಷಗಳ ಪರ್ಯಂತ ಮಾಡಿದುದು ಪಾತಕವೆನಿಸುವುದಿಲ್ಲ. ಆದರೆ ಅದರ ನಂತರ ಮಾಡಿದುದೆಲ್ಲವೂ ದೋಷವೆಂದು ಪರಿಗಣಿಸಲ್ಪಡುತ್ತದೆ.””

01101027 ವೈಶಂಪಾಯನ ಉವಾಚ।
01101027a ಏತೇನ ತ್ವಪರಾಧೇನ ಶಾಪಾತ್ತಸ್ಯ ಮಹಾತ್ಮನಃ।
01101027c ಧರ್ಮೋ ವಿದುರರೂಪೇಣ ಶೂದ್ರಯೋನಾವಜಾಯತ।।

ವೈಶಂಪಾಯನನು ಹೇಳಿದನು: “ಈ ಅಪರಾಧಕ್ಕಾಗಿ ಮಹಾತ್ಮನಿಂದ ಶಪಿತ ಧರ್ಮನು ವಿದುರನ ರೂಪದಲ್ಲಿ ಶೂದ್ರಯೋನಿಯಲ್ಲಿ ಜನಿಸಿದನು.

01101028a ಧರ್ಮೇ ಚಾರ್ಥೇ ಚ ಕುಶಲೋ ಲೋಭಕ್ರೋಧವಿವರ್ಜಿತಃ।
01101028c ದೀರ್ಘದರ್ಶೀ ಶಮಪರಃ ಕುರೂಣಾಂ ಚ ಹಿತೇ ರತಃ।।

ಅವನು ಧರ್ಮಾರ್ಥಗಳಲ್ಲಿ ಕುಶಲನಾಗಿದ್ದು ಲೋಭಕ್ರೋಧಗಳಿಂದ ವಿವರ್ಜಿತನಾಗಿದ್ದನು. ದೀರ್ಘದರ್ಶಿಯೂ, ಶಮಪರನೂ ಆದ ಅವನು ಕುರುಗಳ ಹಿತದಲ್ಲಿಯೇ ನಿರತನಾಗಿದ್ದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಅಣಿಮಾಂಡವ್ಯೋಪಾಖ್ಯಾನೇ ಏಕಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಅಣಿಮಾಂಡವ್ಯೋಪಾಖ್ಯಾನ ಎನ್ನುವ ನೂರಾಒಂದನೆಯ ಅಧ್ಯಾಯವು.