ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸಂಭವ ಪರ್ವ
ಅಧ್ಯಾಯ 100
ಸಾರ
ಅಂಬಿಕೆಯಲ್ಲಿ ವ್ಯಾಸನಿಂದ ಕುರುಡ ಧೃತರಾಷ್ಟ್ರನ ಜನನ (1-13). ಅಂಬಾಲಿಕೆಯಲ್ಲಿ ಪಾಂಡುವಿನ ಜನನ (14-21). ಅಂಬಿಕೆಯ ದಾಸಿಯಲ್ಲಿ ವ್ಯಾಸಪುತ್ರ ವಿದುರನ ಜನನ (22-30).
01100001 ವೈಶಂಪಾಯನ ಉವಾಚ।
01100001a ತತಃ ಸತ್ಯವತೀ ಕಾಲೇ ವಧೂಂ ಸ್ನಾತಾಂ ಋತೌ ತದಾ।
01100001c ಸಂವೇಶಯಂತೀ ಶಯನೇ ಶನಕೈರ್ವಾಕ್ಯಮಬ್ರವೀತ್।।
ವೈಶಂಪಾಯನನು ಹೇಳಿದನು: “ಸೊಸೆಯು ಋತುಮತಿಯಾಗಿ ಸ್ನಾನಮುಗಿಸಿದ ನಂತರ ಸತ್ಯವತಿಯು ಅವಳನ್ನು ಹಾಸಿಗೆಯಲ್ಲಿ ಮಲಗಿಸಿ ಮೆಲ್ಲನೆ ಈ ಮಾತುಗಳನ್ನಾಡಿದಳು:
01100002a ಕೌಸಲ್ಯೇ ದೇವರಸ್ತೇಽಸ್ತಿ ಸೋಽದ್ಯ ತ್ವಾನುಪ್ರವೇಕ್ಷ್ಯತಿ।
01100002c ಅಪ್ರಮತ್ತಾ ಪ್ರತೀಕ್ಷೈನಂ ನಿಶೀಥೇ ಆಗಮಿಷ್ಯತಿ।।
“ಕೌಸಲ್ಯೆ! ನಿನಗೊಬ್ಬ ಬಾವನಿದ್ದಾನೆ. ಅವನು ಈ ರಾತ್ರಿ ನಿನ್ನಲ್ಲಿಗೆ ಬರುತ್ತಾನೆ. ಎಚ್ಚರವಿದ್ದು ಅವನಿಗೆ ಕಾಯಿ. ಅವನು ದಟ್ಟ ರಾತ್ರಿಯಲ್ಲಿ ಬರುತ್ತಾನೆ.”
01100003a ಶ್ವಶ್ರ್ವಾಸ್ತದ್ವಚನಂ ಶ್ರುತ್ವಾ ಶಯಾನಾ ಶಯನೇ ಶುಭೇ।
01100003c ಸಾಚಿಂತಯತ್ತದಾ ಭೀಷ್ಮಮನ್ಯಾಂಶ್ಚ ಕುರುಪುಂಗವಾನ್।।
ಅತ್ತೆಯು ಹೇಳಿದ ಮಾತುಗಳನ್ನು ಕೇಳಿದ ಶುಭೆಯು ಹಾಸಿಗೆಯಲ್ಲಿ ಮಲಗಿಕೊಂಡು ಅವನು ಕುರುಪುಂಗವ ಭೀಷ್ಮನೇ ಇರಬೇಕೆಂದು ಯೋಚಿಸತೊಡಗಿದಳು.
01100004a ತತೋಽಂಬಿಕಾಯಾಂ ಪ್ರಥಮಂ ನಿಯುಕ್ತಃ ಸತ್ಯವಾಗೃಷಿಃ।
01100004c ದೀಪ್ಯಮಾನೇಷು ದೀಪೇಷು ಶಯನಂ ಪ್ರವಿವೇಶ ಹ।।
ಮೊದಲು ಅಂಬಿಕೆಯ ಬಳಿ ಹೋಗಲು ಸತ್ಯವಾನ್ ಋಷಿಯು ದೀಪಗಳು ಇನ್ನೂ ಉರಿಯುತ್ತಿರುವಾಗಲೇ ಶಯನವನ್ನು ಪ್ರವೇಶಿಸಿದನು.
01100005a ತಸ್ಯ ಕೃಷ್ಣಸ್ಯ ಕಪಿಲಾ ಜಟಾ ದೀಪ್ತೇ ಚ ಲೋಚನೇ।
01100005c ಬಭ್ರೂಣಿ ಚೈವ ಶ್ಮಶ್ರೂಣಿ ದೃಷ್ಟ್ವಾ ದೇವೀ ನ್ಯಮೀಲಯತ್।।
ಆ ಕೃಷ್ಣನ ಕಪಿಲ ಜಟೆ, ಪ್ರಜ್ವಲಿಸುತ್ತಿರುವ ಕಣ್ಣುಗಳು ಮತ್ತು ಕೆಂಪು ಗಡ್ಡವನ್ನು ನೋಡಿದ ಆ ದೇವಿಯು ಕಣ್ಣುಗಳನ್ನು ಮುಚ್ಚಿಬಿಟ್ಟಳು.
01100006a ಸಂಬಭೂವ ತಯಾ ರಾತ್ರೌ ಮಾತುಃ ಪ್ರಿಯಚಿಕೀರ್ಷಯಾ।
01100006c ಭಯಾತ್ಕಾಶಿಸುತಾ ತಂ ತು ನಾಶಕ್ನೋದಭಿವೀಕ್ಷಿತುಂ।।
ತಾಯಿಯು ಬಯಸಿದ್ದುದನ್ನು ನೆರವೇರಿಸಲು ಬಂದಿದ್ದ ಅವನು ಅವಳೊಂದಿಗೆ ಇಡೀ ರಾತ್ರಿಯನ್ನು ಕಳೆದರೂ ಹೆದರಿಕೆಯಿಂದ ಅವಳು ಅವನ ಕಡೆ ನೋಡಲೇ ಇಲ್ಲ.
01100007a ತತೋ ನಿಷ್ಕ್ರಾಂತಮಾಸಾದ್ಯ ಮಾತಾ ಪುತ್ರಮಥಾಬ್ರವೀತ್।
01100007c ಅಪ್ಯಸ್ಯಾಂ ಗುಣವಾನ್ಪುತ್ರ ರಾಜಪುತ್ರೋ ಭವಿಷ್ಯತಿ।।
ಅವನು ಹೊರಬಂದಾಗ ಭೆಟ್ಟಿಯಾದ ತಾಯಿಯು ಮಗನಲ್ಲಿ ಕೇಳಿದಳು: “ಮಗನೇ! ಅವಳಲ್ಲಿ ಗುಣವಂತ ರಾಜಪುತ್ರನಾಗುತ್ತಾನೆಯೇ?”
01100008a ನಿಶಮ್ಯ ತದ್ವಚೋ ಮಾತುರ್ವ್ಯಾಸಃ ಪರಮಬುದ್ಧಿಮಾನ್।
01100008c ಪ್ರೋವಾಚಾತೀಂದ್ರಿಯಜ್ಞಾನೋ ವಿಧಿನಾ ಸಂಪ್ರಚೋದಿತಃ।।
ತಾಯಿಯ ಈ ಪ್ರಶ್ನೆಯನ್ನು ಕೇಳಿ ಪರಮಬುದ್ಧಿಶಾಲಿ ಅತೀಂದ್ರಿಯ ಜ್ಞಾನಿ ವ್ಯಾಸನು ಸ್ವಲ್ಪ ಯೋಚಿಸಿ ವಿಧಿ ಪ್ರಚೋದಿತನಾಗಿ ಹೇಳಿದನು:
01100009a ನಾಗಾಯುತಸಮಪ್ರಾಣೋ ವಿದ್ವಾನ್ರಾಜರ್ಷಿಸತ್ತಮಃ।
01100009c ಮಹಾಭಾಗೋ ಮಹಾವೀರ್ಯೋ ಮಹಾಬುದ್ಧಿರ್ಭವಿಷ್ಯತಿ।।
01100010a ತಸ್ಯ ಚಾಪಿ ಶತಂ ಪುತ್ರಾ ಭವಿಷ್ಯಂತಿ ಮಹಾಬಲಾಃ।
01100010c ಕಿಂ ತು ಮಾತುಃ ಸ ವೈಗುಣ್ಯಾದಂಧ ಏವ ಭವಿಷ್ಯತಿ।।
“ಸಾವಿರ ಆನೆಗಳಷ್ಟು ಶಕ್ತಿಯುತ, ವಿದ್ವಾಂಸ, ರಾಜರ್ಷಿಸತ್ತಮ, ಮಹಾಭಾಗ, ಮಹಾವೀರ್ಯವಂತ, ಮಹಾಬುದ್ಧಿಶಾಲಿಯು ಜನಿಸುತ್ತಾನೆ. ಅವನಿಗೆ ನೂರು ಮಹಾಬಲಶಾಲಿ ಪುತ್ರರು ಜನಿಸುತ್ತಾರೆ. ಆದರೆ ತನ್ನ ತಾಯಿಯ ಗುಣದೋಷದಿಂದ ಕುರುಡನಾಗಿ ಜನಿಸುತ್ತಾನೆ.”
01100011a ತಸ್ಯ ತದ್ವಚನಂ ಶ್ರುತ್ವಾ ಮಾತಾ ಪುತ್ರಮಥಾಬ್ರವೀತ್।
01100011c ನಾಂಧಃ ಕುರೂಣಾಂ ನೃಪತಿರನುರೂಪಸ್ತಪೋಧನ।।
ಅವನ ಆ ಮಾತುಗಳನ್ನು ಕೇಳಿದ ಮಾತೆಯು ಪುತ್ರನಿಗೆ ಹೇಳಿದಳು: “ತಪೋಧನ! ಅಂಧ ನೃಪತಿಯು ಕುರುಗಳಿಗೆ ಅನುರೂಪನಲ್ಲ!
01100012a ಜ್ಞಾತಿವಂಶಸ್ಯ ಗೋಪ್ತಾರಂ ಪಿತೄಣಾಂ ವಂಶವರ್ಧನಂ।
01100012c ದ್ವಿತೀಯಂ ಕುರುವಂಶಸ್ಯ ರಾಜಾನಂ ದಾತುಮರ್ಹಸಿ।।
ನಿನ್ನ ಜಾತಿವಂಶ ಗೋಪ್ತಾರನಾಗುವ, ಪಿತೃವಂಶವರ್ಧನ ಕುರುವಂಶದ ಎರಡನೆಯ ರಾಜನನ್ನು ಕೊಡಬೇಕು.”
01100013a ಸ ತಥೇತಿ ಪ್ರತಿಜ್ಞಾಯ ನಿಶ್ಚಕ್ರಾಮ ಮಹಾತಪಾಃ।
01100013c ಸಾಪಿ ಕಾಲೇನ ಕೌಸಲ್ಯಾ ಸುಷುವೇಽಮ್ಧಂ ತಮಾತ್ಮಜಂ।।
“ಹಾಗೆಯೇ ಆಗಲಿ” ಎಂದು ಭರವಸೆಯನ್ನಿತ್ತ ಆ ಮಹಾತಪಸ್ವಿಯು ಹಿಂತೆರಳಿದನು. ಸಮಯ ಕಳೆದನಂತರ ಕೌಸಲ್ಯೆಯು ಕುರುಡು ಮಗನಿಗೆ ಜನ್ಮವಿತ್ತಳು.
01100014a ಪುನರೇವ ತು ಸಾ ದೇವೀ ಪರಿಭಾಷ್ಯ ಸ್ನುಷಾಂ ತತಃ।
01100014c ಋಷಿಮಾವಾಹಯತ್ಸತ್ಯಾ ಯಥಾಪೂರ್ವಮನಿಂದಿತಾ।।
ದೇವಿ ಅನಿಂದಿತೆ ಸತ್ಯವತಿಯು ತನ್ನ ಇನ್ನೊಬ್ಬ ಸೊಸೆಯನ್ನು ಮನವೊಲಿಸಿ ಹಿಂದಿನಂತೆಯೇ ಋಷಿಯನ್ನು ಬರಮಾಡಿಕೊಂಡಳು.
01100015a ತತಸ್ತೇನೈವ ವಿಧಿನಾ ಮಹರ್ಷಿಸ್ತಾಮಪದ್ಯತ।
01100015c ಅಂಬಾಲಿಕಾಮಥಾಭ್ಯಾಗಾದೃಷಿಂ ದೃಷ್ಟ್ವಾ ಚ ಸಾಪಿ ತಂ।
01100015e ವಿಷಣ್ಣಾ ಪಾಂಡುಸಂಕಾಶಾ ಸಮಪದ್ಯತ ಭಾರತ।।
ಭಾರತ! ಅದೇರೀತಿಯಲ್ಲಿ ಮಹರ್ಷಿಯು ಅವಳ ಬಳಿ ಹೋದನು. ಅಂಬಾಲಿಕೆಯೂ ಕೂಡ ಬಂದೊಡನೆ ಋಷಿಯನ್ನು ನೋಡಿ ವಿಷಣ್ಣಳಾಗಿ ಪಾಂಡುವರ್ಣವನ್ನು ತಾಳಿದಳು.
01100016a ತಾಂ ಭೀತಾಂ ಪಾಂಡುಸಂಕಾಶಾಂ ವಿಷಣ್ಣಾಂ ಪ್ರೇಕ್ಷ್ಯ ಪಾರ್ಥಿವ।
01100016c ವ್ಯಾಸಃ ಸತ್ಯವತೀಪುತ್ರ ಇದಂ ವಚನಮಬ್ರವೀತ್।।
ಪಾರ್ಥಿವ! ಭೀತಳಾಗಿ ಪಾಂಡುವರ್ಣವನ್ನು ತಾಳಿ ವಿಷಣ್ಣಳಾದ ಅವಳನ್ನು ನೋಡಿದ ಸತ್ಯವತೀ ಪುತ್ರ ವ್ಯಾಸನು ಹೇಳಿದನು:
01100017a ಯಸ್ಮಾತ್ಪಾಂಡುತ್ವಮಾಪನ್ನಾ ವಿರೂಪಂ ಪ್ರೇಕ್ಷ್ಯ ಮಾಮಪಿ।
01100017c ತಸ್ಮಾದೇಷ ಸುತಸ್ತುಭ್ಯಂ ಪಾಂಡುರೇವ ಭವಿಷ್ಯತಿ।।
01100018a ನಾಮ ಚಾಸ್ಯ ತದೇವೇಹ ಭವಿಷ್ಯತಿ ಶುಭಾನನೇ।
01100018c ಇತ್ಯುಕ್ತ್ವಾ ಸ ನಿರಾಕ್ರಾಮದ್ಭಗವಾನೃಷಿಸತ್ತಮಃ।।
“ನನ್ನ ಈ ವಿರೂಪವನ್ನು ನೋಡಿ ಪಾಂಡುತ್ವವನ್ನು ಪಡೆದ ನಿನ್ನ ಈ ದೋಷದಿಂದ ನಿನ್ನ ಮಗನು ಪಾಂಡುವೇ ಆಗುತ್ತಾನೆ. ಶುಭಾನನೆ! ಅವನ ಹೆಸರೂ ಕೂಡ ಅದೇ ಆಗುತ್ತದೆ.” ಹೀಗೆ ಹೇಳಿ ಭಗವಾನ್ ಋಷಿಸತ್ತಮನು ಹೊರ ಬಂದನು.
01100019a ತತೋ ನಿಷ್ಕ್ರಾಂತಮಾಲೋಕ್ಯ ಸತ್ಯಾ ಪುತ್ರಮಭಾಷತ।
01100019c ಶಶಂಸ ಸ ಪುನರ್ಮಾತ್ರೇ ತಸ್ಯ ಬಾಲಸ್ಯ ಪಾಂಡುತಾಂ।।
01100020a ತಂ ಮಾತಾ ಪುನರೇವಾನ್ಯಮೇಕಂ ಪುತ್ರಮಯಾಚತ।
01100020c ತಥೇತಿ ಚ ಮಹರ್ಷಿಸ್ತಾಂ ಮಾತರಂ ಪ್ರತ್ಯಭಾಷತ।।
ಅವನು ಹೊರಬರುವುದನ್ನು ನೋಡಿದ ಸತ್ಯವತಿಯು ಪುತ್ರನಲ್ಲಿ ಕೇಳಿದಾಗ, ಅವನು ಬಾಲಕನ ಪಾಂಡುತ್ವದ ಕುರಿತು ಹೇಳಿದನು. ಅವನ ತಾಯಿಯು ಪುನಃ ಇನ್ನೊಬ್ಬ ಪುತ್ರನನ್ನು ಕೇಳಿದಾಗ ಮಹರ್ಷಿಯು ತನ್ನ ತಾಯಿಗೆ “ಹಾಗೆಯೇ ಆಗಲಿ!” ಎಂದು ಉತ್ತರಿಸಿದನು.
01100021a ತತಃ ಕುಮಾರಂ ಸಾ ದೇವೀ ಪ್ರಾಪ್ತಕಾಲಮಜೀಜನತ್।
01100021c ಪಾಂಡುಂ ಲಕ್ಷಣಸಂಪನ್ನಂ ದೀಪ್ಯಮಾನಮಿವ ಶ್ರಿಯಾ।
01100021e ತಸ್ಯ ಪುತ್ರಾ ಮಹೇಷ್ವಾಸಾ ಜಜ್ಞಿರೇ ಪಂಚ ಪಾಂಡವಾಃ।।
ಕಾಲವು ಬಂದಾಗ ಆ ದೇವಿಯು ಪಾಂಡುವರ್ಣದ, ಶ್ರೀಯಂತೆ ಬೆಳಗುತ್ತಿರುವ ಲಕ್ಷಣಸಂಪನ್ನ ಕುಮಾರನಿಗೆ ಜನ್ಮವಿತ್ತಳು. ಅವನಿಗೆ ಮಹೇಷ್ವಾಸ ಪಂಚ ಪಾಂಡವರು ಪುತ್ರರಾಗಿ ಜನಿಸಿದರು.
01100022a ಋತುಕಾಲೇ ತತೋ ಜ್ಯೇಷ್ಠಾಂ ವಧೂಂ ತಸ್ಮೈ ನ್ಯಯೋಜಯತ್।
01100022c ಸಾ ತು ರೂಪಂ ಚ ಗಂಧಂ ಚ ಮಹರ್ಷೇಃ ಪ್ರವಿಚಿಂತ್ಯ ತಂ।
01100022e ನಾಕರೋದ್ವಚನಂ ದೇವ್ಯಾ ಭಯಾತ್ಸುರಸುತೋಪಮಾ।।
ಹಿರಿಯ ಸೊಸೆಯು ಪುನಃ ಋತುಕಾಲವನ್ನು ಹೊಂದಿದಾಗ ಪುನಃ ಅವನನ್ನು ಸೇರುವಂತೆ ಹೇಳಿದಳು. ಸುರಸುತೆಯಂತಿದ್ದ ಅವಳಾದರೂ ಮಹರ್ಷಿಯ ರೂಪ ಮತ್ತು ವಾಸನೆಯನ್ನು ನೆನಪಿಸಿಕೊಂಡು ಭಯದಿಂದ ದೇವಿಯ ವಚನದಂತೆ ನಡೆದುಕೊಳ್ಳಲಿಲ್ಲ.
01100023a ತತಃ ಸ್ವೈರ್ಭೂಷಣೈರ್ದಾಸೀಂ ಭೂಷಯಿತ್ವಾಪ್ಸರೋಪಮಾಂ।
01100023c ಪ್ರೇಷಯಾಮಾಸ ಕೃಷ್ಣಾಯ ತತಃ ಕಾಶಿಪತೇಃ ಸುತಾ।।
ಆ ಕಾಶಿಪತಿಯ ಮಗಳು ತನ್ನ ದಾಸಿಯೊಬ್ಬಳನ್ನು ಸರ್ವಭೂಷಣಗಳಿಂದ ಅಪ್ಸರೆಯಂತೆ ಸಿಂಗರಿಸಿ ಕೃಷ್ಣನಲ್ಲಿಗೆ ಕಳುಹಿಸಿದಳು.
01100024a ದಾಸೀ ಋಷಿಮನುಪ್ರಾಪ್ತಂ ಪ್ರತ್ಯುದ್ಗಮ್ಯಾಭಿವಾದ್ಯ ಚ।
01100024c ಸಂವಿವೇಶಾಭ್ಯನುಜ್ಞಾತಾ ಸತ್ಕೃತ್ಯೋಪಚಚಾರ ಹ।।
ಋಷಿಯು ಬಂದಕೂಡಲೇ ಆ ದಾಸಿಯು ಮೇಲೆದ್ದು ಅಭಿನಂದಿಸಿ, ಅನುಜ್ಞೆಯಂತೆ ಅವನ ಸತ್ಕಾರ ಉಪಚಾರಗಳನ್ನು ಮಾಡಿದಳು.
01100025a ಕಾಮೋಪಭೋಗೇನ ತು ಸ ತಸ್ಯಾಂ ತುಷ್ಟಿಮಗಾದೃಷಿಃ।
01100025c ತಯಾ ಸಹೋಷಿತೋ ರಾತ್ರಿಂ ಮಹರ್ಷಿಃ ಪ್ರೀಯಮಾಣಯಾ।।
ಕಾಮಭೋಗದಿಂದ ಅವಳಲ್ಲಿ ಋಷಿಯು ಸಂತುಷ್ಟನಾದನು. ಆ ಮಹರ್ಷಿಯು ಸಂತೋಷಗೊಂಡು ಅವಳೊಂದಿಗೆ ಪ್ರೀತಿಯಿಂದ ಇಡೀ ರಾತ್ರಿಯನ್ನು ಕಳೆದನು.
01100026a ಉತ್ತಿಷ್ಠನ್ನಬ್ರವೀದೇನಾಮಭುಜಿಷ್ಯಾ ಭವಿಷ್ಯಸಿ।
01100026c ಅಯಂ ಚ ತೇ ಶುಭೇ ಗರ್ಭಃ ಶ್ರೀಮಾನುದರಮಾಗತಃ।
01100026e ಧರ್ಮಾತ್ಮಾ ಭವಿತಾ ಲೋಕೇ ಸರ್ವಬುದ್ಧಿಮತಾಂ ವರಃ।।
ಮೇಲೆದ್ದಾಗ ಅವನು ಅವಳಿಗೆ ಹೇಳಿದನು: “ನಿನ್ನ ದಾಸಿತ್ವವು ಇಂದಿಗೆ ಮುಗಿಯಿತು. ಶುಭೇ! ಇಂದು ಓರ್ವ ಶ್ರೀಮಂತನು ನಿನ್ನ ಉದರ ಗರ್ಭದಲ್ಲಿ ಬಂದಿದ್ದಾನೆ. ಅವನು ಲೋಕದಲ್ಲಿಯೇ ಶ್ರೇಷ್ಠನೂ ಧರ್ಮಾತ್ಮನೂ ಸರ್ವ ಬುದ್ಧಿವಂತನೂ ಆಗುತ್ತಾನೆ.”
01100027a ಸ ಜಜ್ಞೇ ವಿದುರೋ ನಾಮ ಕೃಷ್ಣದ್ವೈಪಾಯನಾತ್ಮಜಃ।
01100027c ಧೃತರಾಷ್ಟ್ರಸ್ಯ ಚ ಭ್ರಾತಾ ಪಾಂಡೋಶ್ಚಾಮಿತಬುದ್ಧಿಮಾನ್।।
ಹೀಗೆ ಧೃತರಾಷ್ಟ್ರ ಮತ್ತು ಪಾಂಡುಗಳ ತಮ್ಮ ಅಮಿತ ಬುದ್ಧಿವಂತ ವಿದುರನೆಂಬ ಹೆಸರಿನ ಕೃಷ್ಣದ್ವೈಪಾಯನನ ಮಗನು ಜನಿಸಿದನು.
01100028a ಧರ್ಮೋ ವಿದುರರೂಪೇಣ ಶಾಪಾತ್ತಸ್ಯ ಮಹಾತ್ಮನಃ।
01100028c ಮಾಂಡವ್ಯಸ್ಯಾರ್ಥತತ್ತ್ವಜ್ಞಃ ಕಾಮಕ್ರೋಧವಿವರ್ಜಿತಃ।।
ಮಹಾತ್ಮ ಮಾಂಡವ್ಯನ ಶಾಪದಿಂದಾಗಿ ಧರ್ಮನೇ ಕಾಮಕ್ರೋಧವಿವರ್ಜಿತ ಅರ್ಥತತ್ವಜ್ಞ ವಿದುರನ ರೂಪದಲ್ಲಿ ಜನಿಸಿದನು.
01100029a ಸ ಧರ್ಮಸ್ಯಾನೃಣೋ ಭೂತ್ವಾ ಪುನರ್ಮಾತ್ರಾ ಸಮೇತ್ಯ ಚ।
01100029c ತಸ್ಯೈ ಗರ್ಭಂ ಸಮಾವೇದ್ಯ ತತ್ರೈವಾಂತರಧೀಯತ।।
ಈ ರೀತಿ ಧರ್ಮನ ಋಣವನ್ನು ತೀರಿಸಿದ ಅವನು ತನ್ನ ತಾಯಿಯನ್ನು ಭೇಟಿಯಾಗಿ “ಅವಳು ಗರ್ಭವತಿಯಾಗಿದ್ದಾಳೆ” ಎಂದು ಹೇಳಿ ಅಂತರ್ಧಾನನಾದನು.
01100030a ಏವಂ ವಿಚಿತ್ರವೀರ್ಯಸ್ಯ ಕ್ಷೇತ್ರೇ ದ್ವೈಪಾಯನಾದಪಿ।
01100030c ಜಜ್ಞಿರೇ ದೇವಗರ್ಭಾಭಾಃ ಕುರುವಂಶವಿವರ್ಧನಾಃ।।
ಈ ರೀತಿ ವಿಚಿತ್ರವೀರ್ಯನ ಪತ್ನಿಯರಲ್ಲಿ ದ್ವೈಪಾಯನನಿಂದ ದೇವಗರ್ಭಗಳಂತೆ ಬೆಳಗುತ್ತಿರುವ ಕುರುವಂಶವಿವರ್ಧನರು ಜನಿಸಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ವಿಚಿತ್ರವೀರ್ಯಸುತೋತ್ಪತ್ತೌ ಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ವಿಚಿತ್ರವೀರ್ಯಸುತೋತ್ಪತ್ತಿ ಎನ್ನುವ ನೂರನೆಯ ಅಧ್ಯಾಯವು.