ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸಂಭವ ಪರ್ವ
ಅಧ್ಯಾಯ 99
ಸಾರ
ಸತ್ಯವತಿಯು ಭೀಷ್ಮನಿಗೆ ಮದುವೆಗೆ ಮೊದಲು ತನಗೆ ಪರಾಶರ ಮುನಿಯಿಂದ ಹುಟ್ಟಿದ ಮಗನೊಬ್ಬನಿದ್ದಾನೆ ಎಂದು ವಿವರಿಸುತ್ತಾಳೆ (1-16). ಭೀಷ್ಮನ ಒಪ್ಪಿಗೆಯನ್ನು ಪಡೆದು ಸತ್ಯವತಿಯು ಮಗ ವ್ಯಾಸನನ್ನು ಕರೆಯಿಸಿಕೊಳ್ಳುವುದು (17-22). ತಮ್ಮನ ವಿಧವೆಯರಲ್ಲಿ ಕುಲಸಂತಾನವನ್ನು ಪಡೆಯುವಂತೆ ವ್ಯಾಸನಲ್ಲಿ ಕೇಳಿಕೊಳ್ಳುವುದು (23-35). ಒಂದುವರ್ಷ ತಡೆಯಲು ಹೇಳಿದರೂ ಸತ್ಯವತಿಯು ವ್ಯಾಸನನ್ನು ಒತ್ತಾಯಿಸಿ ನಿಯೋಗಕ್ಕೆ ಒಪ್ಪಿಸುವುದು (36-49).
01099001 ಭೀಷ್ಮ ಉವಾಚ।
01099001a ಪುನರ್ಭರತವಂಶಸ್ಯ ಹೇತುಂ ಸಂತಾನವೃದ್ಧಯೇ।
01099001c ವಕ್ಷ್ಯಾಮಿ ನಿಯತಂ ಮಾತಸ್ತನ್ಮೇ ನಿಗದತಃ ಶೃಣು।।
ಭೀಷ್ಮನು ಹೇಳಿದನು: “ಮಾತಾ! ಭರತವಂಶದ ಪುನಃ ಸಂತಾನ ವೃದ್ಧಿಯನ್ನು ಹೇಗೆ ಮುಂದುವರಿಸಿಕೊಂಡು ಹೋಗಬಹುದೆಂದು ಹೇಳುತ್ತೇನೆ. ಕೇಳು.
01099002a ಬ್ರಾಹ್ಮಣೋ ಗುಣವಾನ್ಕಶ್ಚಿದ್ಧನೇನೋಪನಿಮಂತ್ರ್ಯತಾಂ।
01099002c ವಿಚಿತ್ರವೀರ್ಯಕ್ಷೇತ್ರೇಷು ಯಃ ಸಮುತ್ಪಾದಯೇತ್ಪ್ರಜಾಃ।।
ಯಾರಾದರೂ ಗುಣವಂತ ಬ್ರಾಹ್ಮಣನಿಗೆ ಧನವನ್ನಿತ್ತು, ವಿಚಿತ್ರವೀರ್ಯನ ಪತ್ನಿಯರಲ್ಲಿ ಮಕ್ಕಳನ್ನು ಪಡೆಯಲು ಕರೆಯಿಸು.””
01099003 ವೈಶಂಪಾಯನ ಉವಾಚ।
01099003a ತತಃ ಸತ್ಯವತೀ ಭೀಷ್ಮಂ ವಾಚಾ ಸಂಸಜ್ಜಮಾನಯಾ।
01099003c ವಿಹಸಂತೀವ ಸವ್ರೀಡಮಿದಂ ವಚನಮಬ್ರವೀತ್।।
ವೈಶಂಪಾಯನನು ಹೇಳಿದನು: “ಆಗ ಸತ್ಯವತಿಯು ನಾಚಿಕೊಂಡು ಮುಗುಳ್ನಗುತ್ತಾ ನಡುಗುತ್ತಿರುವ ದನಿಯಲ್ಲಿ ಭೀಷ್ಮನಿಗೆ ಹೇಳಿದಳು:
01099004a ಸತ್ಯಮೇತನ್ಮಹಾಬಾಹೋ ಯಥಾ ವದಸಿ ಭಾರತ।
01099004c ವಿಶ್ವಾಸಾತ್ತೇ ಪ್ರವಕ್ಷ್ಯಾಮಿ ಸಂತಾನಾಯ ಕುಲಸ್ಯ ಚ।
01099004e ನ ತೇ ಶಕ್ಯಮನಾಖ್ಯಾತುಮಾಪದ್ಧೀಯಂ ತಥಾವಿಧಾ।।
“ಮಹಾಬಾಹು ಭಾರತ! ನೀನು ಸತ್ಯವನ್ನೇ ಹೇಳಿದ್ದೀಯೆ. ನಿನ್ನ ಮೇಲೆ ನನಗೆ ವಿಶ್ವಾಸವಿದೆ. ಕುಲದ ಸಂತಾನಕ್ಕಾಗಿ ನಾನು ಹೇಳುತ್ತೇನೆ. ಈ ಆಪತ್ತಿನ ಸಮಯದಲ್ಲಿ ಈ ವಿಧಿಯನ್ನು ನಿನಗೆ ಹೇಳಲು ನನಗೆ ಯಾವುದೇ ರೀತಿಯ ಶಂಕೆಯೂ ಆಗುತ್ತಿಲ್ಲ.
01099005a ತ್ವಮೇವ ನಃ ಕುಲೇ ಧರ್ಮಸ್ತ್ವಂ ಸತ್ಯಂ ತ್ವಂ ಪರಾ ಗತಿಃ।
01099005c ತಸ್ಮಾನ್ನಿಃಸಂಶಮ್ಯ ವಾಕ್ಯಂ ಮೇ ಕುರುಷ್ವ ಯದನಂತರಂ।।
ನೀನೇ ಈ ಕುಲದ ಧರ್ಮ, ಸತ್ಯ ಮತ್ತು ಪರಮ ಗತಿ. ಆದುದರಿಂದ ನನ್ನ ಈ ಮಾತುಗಳನ್ನು ಕೇಳಿದ ನಂತರ ನಿನಗೆ ಸರಿಯೆನಿಸಿದುದನ್ನು ಮಾಡು.
01099006a ಧರ್ಮಯುಕ್ತಸ್ಯ ಧರ್ಮಾತ್ಮನ್ಪಿತುರಾಸೀತ್ತರೀ ಮಮ।
01099006c ಸಾ ಕದಾ ಚಿದಹಂ ತತ್ರ ಗತಾ ಪ್ರಥಮಯೌವನೇ।।
ಧರ್ಮಯುಕ್ತ ಧರ್ಮಾತ್ಮ ನನ್ನ ತಂದೆಯು ಒಂದು ದೋಣಿಯನ್ನು ಹೊಂದಿದ್ದನು. ನಾನು ಯೌವನವನ್ನು ಪಡೆದ ಮೊದಲ ದಿನಗಳಲ್ಲಿ ಒಮ್ಮೆ ಅದನ್ನು ನಡೆಸಲು ಹೋಗಿದ್ದೆ.
01099007a ಅಥ ಧರ್ಮಭೃತಾಂ ಶ್ರೇಷ್ಠಃ ಪರಮರ್ಷಿಃ ಪರಾಶರಃ।
01099007c ಆಜಗಾಮ ತರೀಂ ಧೀಮಾಂಸ್ತರಿಷ್ಯನ್ಯಮುನಾಂ ನದೀಂ।।
ಆಗ ಧರ್ಮಭೃತರಲ್ಲಿ ಶ್ರೇಷ್ಠ ಪರಮರ್ಷಿ ಧೀಮಾನ್ ಪರಾಶರನು ಯಮುನಾ ನದಿಯನ್ನು ದಾಟಲು ಬಯಸಿ ನನ್ನ ದೋಣಿಯ ಬಳಿ ಬಂದನು.
01099008a ಸ ತಾರ್ಯಮಾಣೋ ಯಮುನಾಂ ಮಾಮುಪೇತ್ಯಾಬ್ರವೀತ್ತದಾ।
01099008c ಸಾಂತ್ವಪೂರ್ವಂ ಮುನಿಶ್ರೇಷ್ಠಃ ಕಾಮಾರ್ತೋ ಮಧುರಂ ಬಹು।।
ಯಮುನಾ ನದಿಯನ್ನು ದಾಟಿಸುತ್ತಿರುವಾಗ ಆ ಕಾಮಾರ್ತ ಮುನಿಶ್ರೇಷ್ಠನು ನನ್ನಲ್ಲಿ ಬಂದು ಸಾಂತ್ವನದ ಮಧುರ ಮಾತುಗಳನ್ನಾಡಿದನು.
01099009a ತಮಹಂ ಶಾಪಭೀತಾ ಚ ಪಿತುರ್ಭೀತಾ ಚ ಭಾರತ।
01099009c ವರೈರಸುಲಭೈರುಕ್ತಾ ನ ಪ್ರತ್ಯಾಖ್ಯಾತುಮುತ್ಸಹೇ।।
ಭಾರತ! ಅವನ ಶಾಪದ ಭೀತಿಯಿಂದ, ನನ್ನ ತಂದೆಯ ಭೀತಿಯಿಂದ ಮತ್ತು ಸುಲಭವಾಗಿ ದೊರೆಯದಿರುವ ವರಗಳಿಗೋಸ್ಕರ ನಾನು ಅವನನ್ನು ತಿರಸ್ಕರಿಸಲಾರದೇ ಹೋದೆ.
01099010a ಅಭಿಭೂಯ ಸ ಮಾಂ ಬಾಲಾಂ ತೇಜಸಾ ವಶಮಾನಯತ್।
01099010c ತಮಸಾ ಲೋಕಮಾವೃತ್ಯ ನೌಗತಾಮೇವ ಭಾರತ।।
ಭಾರತ! ತನ್ನ ತೇಜಸ್ಸಿನಿಂದ ಸುತ್ತಲೂ ಕತ್ತಲೆಯು ಆವರಿಸುವಂತೆ ಮಾಡಿ ಬಾಲಕಿ ನನ್ನನ್ನು ಆ ನೌಕೆಯಲ್ಲಿಯೇ ವಶೀಕರಿಸಿ ತನ್ನವಳನ್ನಾಗಿ ಮಾಡಿಕೊಂಡನು.
01099011a ಮತ್ಸ್ಯಗಂಧೋ ಮಹಾನಾಸೀತ್ಪುರಾ ಮಮ ಜುಗುಪ್ಸಿತಃ।
01099011c ತಮಪಾಸ್ಯ ಶುಭಂ ಗಂಧಮಿಮಂ ಪ್ರಾದಾತ್ಸ ಮೇ ಮುನಿಃ।।
ಅದರ ಹಿಂದೆ ನನಗೆ ಜಿಗುಪ್ಸೆಯನ್ನು ತರುತ್ತಿದ್ದ ಅತಿ ತೀಕ್ಷ್ಣ ಮೀನಿನ ವಾಸನೆಯಿತ್ತು. ಅದನ್ನು ಹಿಂತೆಗೆದುಕೊಂಡು ಆ ಮುನಿಯು ನನಗೆ ಈ ಶುಭ ಸುಗಂಧವನ್ನಿತ್ತನು.
01099012a ತತೋ ಮಾಮಾಹ ಸ ಮುನಿರ್ಗರ್ಭಮುತ್ಸೃಜ್ಯ ಮಾಮಕಂ।
01099012c ದ್ವೀಪೇಽಸ್ಯಾ ಏವ ಸರಿತಃ ಕನ್ಯೈವ ತ್ವಂ ಭವಿಷ್ಯಸಿ।।
ಅವನ ಮಗುವನ್ನು ನಾನು ನದಿಯ ಮದ್ಯದ ಒಂದು ದ್ವೀಪದಲ್ಲಿ ಹೆತ್ತ ನಂತರವೂ ನಾನು ಕನ್ಯೆಯಾಗಿಯೇ ಉಳಿಯುತ್ತೇನೆ ಎಂದೂ ಆ ಮುನಿಯು ಹೇಳಿದನು.
01099013a ಪಾರಾಶರ್ಯೋ ಮಹಾಯೋಗೀ ಸ ಬಭೂವ ಮಹಾನೃಷಿಃ।
01099013c ಕನ್ಯಾಪುತ್ರೋ ಮಮ ಪುರಾ ದ್ವೈಪಾಯನ ಇತಿ ಸ್ಮೃತಃ।।
01099014a ಯೋ ವ್ಯಸ್ಯ ವೇದಾಂಶ್ಚತುರಸ್ತಪಸಾ ಭಗವಾನೃಷಿಃ।
01099014c ಲೋಕೇ ವ್ಯಾಸತ್ವಮಾಪೇದೇ ಕಾರ್ಷ್ಣ್ಯಾತ್ಕೃಷ್ಣತ್ವಮೇವ ಚ।।
ಈ ರೀತಿ ಮಹಾಯೋಗಿ ಮಹಾನ್ ಋಷಿ ಪಾರಶರ್ಯನು ನನ್ನ ಕನ್ಯಾಪುತ್ರನಾಗಿ ಹುಟ್ಟಿದನು ಮತ್ತು ದ್ವೈಪಾಯನನೆಂದು ಖ್ಯಾತನಾದನು. ತನ್ನ ತಪಸ್ಸಿನಿಂದ ಆ ಭಗವಾನ್ ಋಷಿಯು ನಾಲ್ಕೂ ವೇದಗಳನ್ನು ವಿಂಗಡಿಸಿದನು. ಇದರಿಂದ ಅವನಿಗೆ ವ್ಯಾಸನೆಂಬ ಹೆಸರು ಬಂದಿತು. ಕಪ್ಪಾದ ಅವನನ್ನು ಕೃಷ್ಣ ಎಂದೂ ಕರೆಯುತ್ತಾರೆ.
01099015a ಸತ್ಯವಾದೀ ಶಮಪರಸ್ತಪಸ್ವೀ ದಗ್ಧಕಿಲ್ಬಿಷಃ।
01099015c ಸ ನಿಯುಕ್ತೋ ಮಯಾ ವ್ಯಕ್ತಂ ತ್ವಯಾ ಚ ಅಮಿತದ್ಯುತೇ।
01099015e ಭ್ರಾತುಃ ಕ್ಷೇತ್ರೇಷು ಕಲ್ಯಾಣಮಪತ್ಯಂ ಜನಯಿಷ್ಯತಿ।।
ಸತ್ಯವಾದಿಯೂ, ಶಮಪರ ತಪಸ್ವಿಯೂ, ದಗ್ಧಕಿಲ್ಬಿಷನೂ ಅಮಿತದ್ಯುತಿಯೂ ಆದ ಅವನು, ನಾನು ಮತ್ತು ನೀನು ಕೇಳಿಕೊಂಡರೆ, ನಿನ್ನ ತಮ್ಮನ ಪತ್ನಿಯರಲ್ಲಿ ಕಲ್ಯಾಣವನ್ನು ತರುವ ಮಕ್ಕಳನ್ನು ಪಡೆಯಬಹುದು.
01099016a ಸ ಹಿ ಮಾಮುಕ್ತವಾಂಸ್ತತ್ರ ಸ್ಮರೇಃ ಕೃತ್ಯೇಷು ಮಾಮಿತಿ।
01099016c ತಂ ಸ್ಮರಿಷ್ಯೇ ಮಹಾಬಾಹೋ ಯದಿ ಭೀಷ್ಮ ತ್ವಮಿಚ್ಛಸಿ।।
“ಏನಾದರೂ ಆಗಬೇಕೆಂದಿದ್ದಾಗ ನನ್ನನ್ನು ನೆನಪಿಸಿಕೋ. ಬರುತ್ತೇನೆ!” ಎಂದು ಅವನು ಮಾತುಕೊಟ್ಟಿದ್ದಾನೆ. ಮಹಾಬಾಹು ಭೀಷ್ಮ! ನೀನು ಬೇಕೆಂದರೆ ಈಗಲೇ ನಾನು ಅವನನ್ನು ಸ್ಮರಿಸುತ್ತೇನೆ.
01099017a ತವ ಹ್ಯನುಮತೇ ಭೀಷ್ಮ ನಿಯತಂ ಸ ಮಹಾತಪಾಃ।
01099017c ವಿಚಿತ್ರವೀರ್ಯಕ್ಷೇತ್ರೇಷು ಪುತ್ರಾನುತ್ಪಾದಯಿಷ್ಯತಿ।।
ಭೀಷ್ಮ! ನಿನ್ನ ಅನುಮತಿಯ ನಂತರವೇ ಆ ಮಹಾತಪಸ್ವಿಯು ವಿಚಿತ್ರವೀರ್ಯನ ಪತ್ನಿಯರಲ್ಲಿ ಪುತ್ರರನ್ನು ಪಡೆಯಬಹುದು.”
01099018a ಮಹರ್ಷೇಃ ಕೀರ್ತನೇ ತಸ್ಯ ಭೀಷ್ಮಃ ಪ್ರಾಂಜಲಿರಬ್ರವೀತ್।
01099018c ಧರ್ಮಮರ್ಥಂ ಚ ಕಾಮಂ ಚ ತ್ರೀನೇತಾನ್ಯೋಽನುಪಶ್ಯತಿ।।
01099019a ಅರ್ಥಮರ್ಥಾನುಬಂಧಂ ಚ ಧರ್ಮಂ ಧರ್ಮಾನುಬಂಧನಂ।
01099019c ಕಾಮಂ ಕಾಮಾನುಬಂಧಂ ಚ ವಿಪರೀತಾನ್ ಪೃಥಕ್ ಪೃಥಕ್।
01099019e ಯೋ ವಿಚಿಂತ್ಯ ಧಿಯಾ ಸಮ್ಯಗ್ವ್ಯವಸ್ಯತಿ ಸ ಬುದ್ಧಿಮಾನ್।।
ಮಹರ್ಷಿಯ ಕುರಿತು ಹೇಳಿದ್ದುದನ್ನು ಕೇಳಿದ ಭೀಷ್ಮನು ಕೈಮುಗಿದು ಹೇಳಿದನು: “ಧರ್ಮ, ಅರ್ಥ, ಕಾಮ ಈ ಮೂರನ್ನೂ ಯಾರು ನೋಡಿಕೊಳ್ಳುತ್ತಾನೋ, ಅರ್ಥ-ಅರ್ಥಾನುಬಂಧಗಳನ್ನೂ, ಧರ್ಮ-ಧರ್ಮಾನುಬಂಧಗಳನ್ನೂ, ಕಾಮ-ಕಾಮಾನುಬಂಧಗಳನ್ನೂ ಮತ್ತು ಇವುಗಳ ವಿಪರೀತಗಳ ಕುರಿತು ಪುನಃ ಪುನಃ ಬುದ್ಧಿಪೂರ್ವಕವಾಗಿ ಚಿಂತಿಸಿ ಒಳ್ಳೆಯ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಾನೋ ಅವನು ಬುದ್ಧಿವಂತನೇ ಸರಿ.
01099020a ತದಿದಂ ಧರ್ಮಯುಕ್ತಂ ಚ ಹಿತಂ ಚೈವ ಕುಲಸ್ಯ ನಃ।
01099020c ಉಕ್ತಂ ಭವತ್ಯಾ ಯತ್ ಶ್ರೇಯಃ ಪರಮಂ ರೋಚತೇ ಮಮ।।
ನೀನು ಹೇಳಿದ್ದುದು ಧರ್ಮಯುಕ್ತವೂ ಹೌದು ಮತ್ತು ನಮ್ಮ ಕುಲಕ್ಕೆ ಹಿತಕಾರಿಯೂ ಹೌದು. ಇದು ಶ್ರೇಯಕಾರಕವಾದುದು. ನನಗೆ ಇದು ತುಂಬಾ ಇಷ್ಟವಾಯಿತು.”
01099021a ತತಸ್ತಸ್ಮಿನ್ಪ್ರತಿಜ್ಞಾತೇ ಭೀಷ್ಮೇಣ ಕುರುನಂದನ।
01099021c ಕೃಷ್ಣದ್ವೈಪಾಯನಂ ಕಾಲೀ ಚಿಂತಯಾಮಾಸ ವೈ ಮುನಿಂ।।
ಕುರುನಂದನ ಭೀಷ್ಮನ ಒಪ್ಪಿಗೆಯನ್ನು ಪಡೆದ ಆ ಕಪ್ಪುವರ್ಣದವಳು ಮುನಿ ಕೃಷ್ಣದ್ವೈಪಾಯನನನ್ನು ಸ್ಮರಿಸಿದಳು.
01099022a ಸ ವೇದಾನ್ವಿಬ್ರುವನ್ಧೀಮಾನ್ಮಾತುರ್ವಿಜ್ಞಾಯ ಚಿಂತಿತಂ।
01099022c ಪ್ರಾದುರ್ಬಭೂವಾವಿದಿತಃ ಕ್ಷಣೇನ ಕುರುನಂದನ।।
ಕುರುನಂದನ! ವೇದಾಧ್ಯಯನಮಾಡುತ್ತಿದ್ದ ಆ ಧೀಮಂತನು ತಾಯಿಯು ಸ್ಮರಿಸುತ್ತಿರುವುದನ್ನು ತಿಳಿದು ಅದೇ ಕ್ಷಣದಲ್ಲಿ ಯಾರಿಗೂ ತಿಳಿಯದ ರೀತಿಯಲ್ಲಿ ಅವಳ ಎದಿರು ಕಾಣಿಸಿಕೊಂಡನು.
01099023a ತಸ್ಮೈ ಪೂಜಾಂ ತದಾ ದತ್ತ್ವಾ ಸುತಾಯ ವಿಧಿಪೂರ್ವಕಂ।
01099023c ಪರಿಷ್ವಜ್ಯ ಚ ಬಾಹುಭ್ಯಾಂ ಪ್ರಸ್ನವೈರಭಿಷಿಚ್ಯ ಚ।
01099023e ಮುಮೋಚ ಬಾಷ್ಪಂ ದಾಶೇಯೀ ಪುತ್ರಂ ದೃಷ್ಟ್ವಾ ಚಿರಸ್ಯ ತಂ।।
ಸುತನಿಗೆ ವಿಧಿಪೂರ್ವಕ ಪೂಜೆಯನ್ನಿತ್ತು, ಬಾಹುಗಳಿಂದ ಬಿಗಿದಪ್ಪಿ, ಕಣ್ಣೀರಿನಿಂದ ತೋಯಿಸಿದಳು. ಬಹಳ ಕಾಲದ ನಂತರ ಪುತ್ರನನ್ನು ಕಂಡ ಆ ದಾಶೇಯಿಯು ಕಣ್ಣೀರು ಸುರಿಸಿದಳು.
01099024a ತಾಮದ್ಭಿಃ ಪರಿಷಿಚ್ಯಾರ್ತಾಂ ಮಹರ್ಷಿರಭಿವಾದ್ಯ ಚ।
01099024c ಮಾತರಂ ಪೂರ್ವಜಃ ಪುತ್ರೋ ವ್ಯಾಸೋ ವಚನಮಬ್ರವೀತ್।।
ಹಿರಿಯ ಪುತ್ರ ಮಹರ್ಷಿ ವ್ಯಾಸನು ತನ್ನ ಆರ್ತ ತಾಯಿಯನ್ನು ನೀರಿನಿಂದ ಪರಿಶಿಂಚಿಸಿ ನಮಸ್ಕರಿಸಿ, ಈ ಮಾತುಗಳನ್ನಾಡಿದನು:
01099025a ಭವತ್ಯಾ ಯದಭಿಪ್ರೇತಂ ತದಹಂ ಕರ್ತುಮಾಗತಃ।
01099025c ಶಾಧಿ ಮಾಂ ಧರ್ಮತತ್ತ್ವಜ್ಞೇ ಕರವಾಣಿ ಪ್ರಿಯಂ ತವ।।
“ನಿನ್ನ ಮನಸ್ಸಿನಲ್ಲಿರುವುದನ್ನು ನಡೆಸಿಕೊಡಲು ಇಲ್ಲಿಗೆ ಬಂದಿದ್ದೇನೆ. ಧರ್ಮತತ್ವಜ್ಞಳಾಗಿದ್ದೀಯೆ. ನಿನಗೆ ಪ್ರಿಯವಾದ ಏನನ್ನು ಮಾಡಬೇಕು. ಅಪ್ಪಣೆ ಕೊಡು.”
01099026a ತಸ್ಮೈ ಪೂಜಾಂ ತತೋಽಕಾರ್ಷೀತ್ಪುರೋಧಾಃ ಪರಮರ್ಷಯೇ।
01099026c ಸ ಚ ತಾಂ ಪ್ರತಿಜಗ್ರಾಹ ವಿಧಿವನ್ಮಂತ್ರಪೂರ್ವಕಂ।।
ಕುಲ ಪುರೋಹಿತರು ಆ ಪರಮ ಋಷಿಯನ್ನು ಬರಮಾಡಿಕೊಂಡು ವಿಧಿವತ್ತಾಗಿ ಮಂತ್ರಪೂರಕ ಪೂಜೆ ಸತ್ಕಾರಗಳನ್ನು ಸಲ್ಲಿಸಿದರು.
01099027a ತಮಾಸನಗತಂ ಮಾತಾ ಪೃಷ್ಟ್ವಾ ಕುಶಲಮವ್ಯಯಂ।
01099027c ಸತ್ಯವತ್ಯಭಿವೀಕ್ಷ್ಯೈನಮುವಾಚೇದಮನಂತರಂ।।
ಅವನು ಆಸನವನ್ನು ಸ್ವೀಕರಿಸಿದ ನಂತರ ತಾಯಿಯು ಅವನ ಅವ್ಯಯ ಕುಶಲತೆಯ ಕುರಿತು ಪ್ರಶ್ನಿಸಿದಳು. ನಂತರ ಸತ್ಯವತಿಯು ಅವನನ್ನೇ ನೋಡುತ್ತಾ ಹೇಳಿದಳು:
01099028a ಮಾತಾಪಿತ್ರೋಃ ಪ್ರಜಾಯಂತೇ ಪುತ್ರಾಃ ಸಾಧಾರಣಾಃ ಕವೇ।
01099028c ತೇಷಾಂ ಪಿತಾ ಯಥಾ ಸ್ವಾಮೀ ತಥಾ ಮಾತಾ ನ ಸಂಶಯಃ।।
“ಕವಿಯೇ! ಪುತ್ರರು ತಂದೆ ಮತ್ತು ತಾಯಿ ಇಬ್ಬರದ್ದೂ ಆಗಿ ಹುಟ್ಟಿರುತ್ತಾರೆ. ಅವರ ಮೇಲೆ ತಂದೆಗೆ ಎಷ್ಟು ಅಧಿಕಾರವಿದೆಯೋ ಅಷ್ಟೇ ತಾಯಿಗೂ ಇದೆ ಎನ್ನುವುದರಲ್ಲಿ ಸಂಶಯವಿಲ್ಲ.
01099029a ವಿಧಾತೃವಿಹಿತಃ ಸ ತ್ವಂ ಯಥಾ ಮೇ ಪ್ರಥಮಃ ಸುತಃ।
01099029c ವಿಚಿತ್ರವೀರ್ಯೋ ಬ್ರಹ್ಮರ್ಷೇ ತಥಾ ಮೇಽವರಜಃ ಸುತಃ।।
ಬ್ರಹ್ಮರ್ಷಿ! ನೀನು ಹೇಗೆ ನನ್ನ ವಿಧಾತವಿಹಿತ ಪ್ರಥಮ ಸುತನೋ ಹಾಗೆಯೇ ವಿಚಿತ್ರವೀರ್ಯನು ನನ್ನ ಕೊನೆಯ ಮಗ.
01099030a ಯಥೈವ ಪಿತೃತೋ ಭೀಷ್ಮಸ್ತಥಾ ತ್ವಮಪಿ ಮಾತೃತಃ।
01099030c ಭ್ರಾತಾ ವಿಚಿತ್ರವೀರ್ಯಸ್ಯ ಯಥಾ ವಾ ಪುತ್ರ ಮನ್ಯಸೇ।।
ಪುತ್ರ! ನೀನು ಒಪ್ಪಿಕೊಳ್ಳುವೆಯಾದರೆ, ತಂದೆಯ ಕಡೆಯಿಂದ ಅವನಿಗೆ ಭೀಷ್ಮನು ಹೇಗೆ ಅಣ್ಣನಾಗುತ್ತಾನೋ ಹಾಗೆ ನೀನು ಅವನಿಗೆ ತಾಯಿಯ ಕಡೆಯಿಂದ ಅಣ್ಣನಾಗುತ್ತೀಯೆ.
01099031a ಅಯಂ ಶಾಂತನವಃ ಸತ್ಯಂ ಪಾಲಯನ್ಸತ್ಯವಿಕ್ರಮಃ।
01099031c ಬುದ್ಧಿಂ ನ ಕುರುತೇಽಪತ್ಯೇ ತಥಾ ರಾಜ್ಯಾನುಶಾಸನೇ।।
ಸತ್ಯವಿಕ್ರಮ ಈ ಶಾಂತನುವು ಸತ್ಯವನ್ನು ಪರಿಪಾಲಿಸಿ ರಾಜ್ಯಾನುಶಾಸನಕ್ಕಾಗಿ ಮಕ್ಕಳನ್ನು ಪಡೆಯುವ ಮನಸ್ಸನ್ನು ಮಾಡುತ್ತಿಲ್ಲ.
01099032a ಸ ತ್ವಂ ವ್ಯಪೇಕ್ಷಯಾ ಭ್ರಾತುಃ ಸಂತಾನಾಯ ಕುಲಸ್ಯ ಚ।
01099032c ಭೀಷ್ಮಸ್ಯ ಚಾಸ್ಯ ವಚನಾನ್ನಿಯೋಗಾಚ್ಚ ಮಮಾನಘ।।
01099033a ಅನುಕ್ರೋಶಾಚ್ಚ ಭೂತಾನಾಂ ಸರ್ವೇಷಾಂ ರಕ್ಷಣಾಯ ಚ।
01099033c ಆನೃಶಂಸ್ಯೇನ ಯದ್ಬ್ರೂಯಾಂ ತತ್ ಶ್ರುತ್ವಾ ಕರ್ತುಮರ್ಹಸಿ।।
ಅನಘ! ಈಗ ನೀನು ನಿನ್ನ ತಮ್ಮನ ಮೇಲಿನ ಗೌರವದಿಂದ, ಕುಲಸಂತಾನಕ್ಕಾಗಿ, ನನ್ನ ಮತ್ತು ಭೀಷ್ಮನ ವಚನ ನಿಯೋಗದಂತೆ, ಜೀವಿಗಳ ಮೇಲಿನ ಅನುಕಂಪದಿಂದ, ಸರ್ವರ ರಕ್ಷಣೆಗೋಸ್ಕರ, ಯಾವುದೇ ರೀತಿಯ ಬೇಸರವಿಲ್ಲದೆ ನಾನು ಹೇಳುವುದನ್ನು ಮಾಡಬೇಕು.
01099034a ಯವೀಯಸಸ್ತವ ಭ್ರಾತುರ್ಭಾರ್ಯೇ ಸುರಸುತೋಪಮೇ।
01099034c ರೂಪಯೌವನಸಂಪನ್ನೇ ಪುತ್ರಕಾಮೇ ಚ ಧರ್ಮತಃ।।
ನಿನ್ನ ತಮ್ಮನ ಸುರಸುತೆಯರಂತಿರುವ ರೂಪಯೌವನಸಂಪನ್ನ ಭಾರ್ಯೆಯರು ಧರ್ಮಪೂರ್ವಕವಾಗಿ ಪುತ್ರರನ್ನು ಪಡೆಯಲು ಬಯಸುತ್ತಿದ್ದಾರೆ.
01099035a ತಯೋರುತ್ಪಾದಯಾಪತ್ಯಂ ಸಮರ್ಥೋ ಹ್ಯಸಿ ಪುತ್ರಕ।
01099035c ಅನುರೂಪಂ ಕುಲಸ್ಯಾಸ್ಯ ಸಂತತ್ಯಾಃ ಪ್ರಸವಸ್ಯ ಚ।।
ಪುತ್ರಕ! ಅವರಲ್ಲಿ ನೀನು ಈ ಕುಲಕ್ಕೆ ಅನುರೂಪರಾದ ಈ ಸಂತತಿಯನ್ನು ಮುಂದುವರೆಸಿಕೊಂಡು ಹೋಗಬಲ್ಲ ಮಕ್ಕಳನ್ನು ಪಡೆ. ಇದಕ್ಕೆ ನೀನು ಸಮರ್ಥನಾಗಿದ್ದೀಯೆ.”
01099036 ವ್ಯಾಸ ಉವಾಚ।
01099036a ವೇತ್ಥ ಧರ್ಮಂ ಸತ್ಯವತಿ ಪರಂ ಚಾಪರಮೇವ ಚ।
01099036c ಯಥಾ ಚ ತವ ಧರ್ಮಜ್ಞೇ ಧರ್ಮೇ ಪ್ರಣಿಹಿತಾ ಮತಿಃ।।
01099037a ತಸ್ಮಾದಹಂ ತ್ವನ್ನಿಯೋಗಾದ್ಧರ್ಮಮುದ್ದಿಶ್ಯ ಕಾರಣಂ।
01099037c ಈಪ್ಸಿತಂ ತೇ ಕರಿಷ್ಯಾಮಿ ದೃಷ್ಟಂ ಹ್ಯೇತತ್ಪುರಾತನಂ।।
ವ್ಯಾಸನು ಹೇಳಿದನು: “ಸತ್ಯವತಿ! ನೀನು ಪರ ಮತ್ತು ಅಪರ ಧರ್ಮಗಳೆರಡನ್ನೂ ತಿಳಿದಿರುವೆ. ಧರ್ಮಜ್ಞಳಾದ ನಿನ್ನ ಮನಸ್ಸು ಸದಾ ಧರ್ಮದಲ್ಲಿಯೇ ನಿರತವಾಗಿದೆ. ಆದುದರಿಂದ ನಿನ್ನ ನಿಯೋಗದಂತೆ, ಧರ್ಮವನ್ನು ಗೌರವಿಸುವ ಕಾರಣದಿಂದ, ನಿನ್ನ ಇಷ್ಟದಂತೆ ಮಾಡುತ್ತೇನೆ. ಇದು ಒಂದು ಪುರಾತನ ಪದ್ಧತಿಯಾಗಿದೆ.
01099038a ಭ್ರಾತುಃ ಪುತ್ರಾನ್ಪ್ರದಾಸ್ಯಾಮಿ ಮಿತ್ರಾವರುಣಯೋಃ ಸಮಾನ್।
01099038c ವ್ರತಂ ಚರೇತಾಂ ತೇ ದೇವ್ಯೌ ನಿರ್ದಿಷ್ಟಮಿಹ ಯನ್ಮಯಾ।।
01099039a ಸಂವತ್ಸರಂ ಯಥಾನ್ಯಾಯಂ ತತಃ ಶುದ್ಧೇ ಭವಿಷ್ಯತಃ।
01099039c ನ ಹಿ ಮಾಮವ್ರತೋಪೇತಾ ಉಪೇಯಾತ್ಕಾ ಚಿದಂಗನಾ।।
ನನ್ನ ತಮ್ಮನಿಗೆ ಮಿತ್ರ-ವರುಣರ ಸಮಾನ ಪುತ್ರರನ್ನು ನೀಡುತ್ತೇನೆ. ಆ ದೇವಿಯರೀರ್ವರೂ ಒಂದು ಸಂವತ್ಸರ ಪರ್ಯಂತ ನಾನು ಹೇಳಿದ ನಿರ್ದಿಷ್ಟ ವ್ರತವನ್ನು ಪಾಲಿಸಿ ಶುದ್ಧರಾಗಬೇಕು. ಯಾಕೆಂದರೆ ಆ ವ್ರತವನ್ನು ಮಾಡದ ಯಾವ ಸ್ತ್ರೀಗೂ ನನ್ನೊಡನೆ ಕೂಡಲಿಕ್ಕಾಗದು.”
01099040 ಸತ್ಯವತ್ಯುವಾಚ।
01099040a ಯಥಾ ಸದ್ಯಃ ಪ್ರಪದ್ಯೇತ ದೇವೀ ಗರ್ಭಂ ತಥಾ ಕುರು।
01099040c ಅರಾಜಕೇಷು ರಾಷ್ಟ್ರೇಷು ನಾಸ್ತಿ ವೃಷ್ಟಿರ್ನ ದೇವತಾಃ।।
ಸತ್ಯವತಿಯು ಹೇಳಿದಳು: “ಈಗ ಸದ್ಯದಲ್ಲಿಯೇ ದೇವಿಯು ಗರ್ಭವತಿಯಾಗುವ ಹಾಗೆ ಮಾಡು. ಯಾಕೆಂದರೆ, ರಾಜನಿಲ್ಲದ ರಾಷ್ಟ್ರದಲ್ಲಿ ಮಳೆಯೂ ದೇವತೆಗಳೂ ಬರುವುದಿಲ್ಲ.
01099041a ಕಥಮರಾಜಕಂ ರಾಷ್ಟ್ರಂ ಶಕ್ಯಂ ಧಾರಯಿತುಂ ಪ್ರಭೋ।
01099041c ತಸ್ಮಾದ್ಗರ್ಭಂ ಸಮಾಧತ್ಸ್ವ ಭೀಷ್ಮಸ್ತಂ ವರ್ಧಯಿಷ್ಯತಿ।।
ಪ್ರಭು! ರಾಜನಿಲ್ಲದ ರಾಷ್ಟ್ರವನ್ನು ಹೇಗೆ ತಾನೇ ಕಾಪಾಡಿಕೊಂಡು ಬರಲು ಸಾದ್ಯ? ಆದುದರಿಂದ ಗರ್ಭವನ್ನು ನೀಡು. ಅದರ ಬೆಳವಣಿಗೆಯನ್ನು ಭೀಷ್ಮನು ನೋಡಿಕೊಳ್ಳುತ್ತಾನೆ.”
01099042 ವ್ಯಾಸ ಉವಾಚ।
01099042a ಯದಿ ಪುತ್ರಃ ಪ್ರದಾತವ್ಯೋ ಮಯಾ ಕ್ಷಿಪ್ರಮಕಾಲಿಕಂ।
01099042c ವಿರೂಪತಾಂ ಮೇ ಸಹತಾಮೇತದಸ್ಯಾಃ ಪರಂ ವ್ರತಂ।।
ವ್ಯಾಸನು ಹೇಳಿದನು: “ತಕ್ಷಣವೇ ಕಾಲಬರುವ ಮೊದಲೇ ಪುತ್ರರನ್ನು ನೀಡಬೇಕಾದರೆ ನನ್ನ ವಿರೂಪವನ್ನು ಸಹಿಸುವುದೇ ಅವಳಿಗೆ ಒಂದು ಪರಮ ವ್ರತ.
01099043a ಯದಿ ಮೇ ಸಹತೇ ಗಂಧಂ ರೂಪಂ ವೇಷಂ ತಥಾ ವಪುಃ।
01099043c ಅದ್ಯೈವ ಗರ್ಭಂ ಕೌಸಲ್ಯಾ ವಿಶಿಷ್ಟಂ ಪ್ರತಿಪದ್ಯತಾಂ।।
ಒಂದುವೇಳೆ ಅವಳು ನನ್ನ ಈ ವಾಸನೆ, ರೂಪ, ವೇಷ, ಮತ್ತು ದೇಹವನ್ನು ಸಹಿಸುತ್ತಾಳಾದರೆ, ಕೌಸಲ್ಯೆಗೆ ಇಂದೇ ವಿಶಿಷ್ಠ ಗರ್ಭವನ್ನು ನೀಡುತ್ತೇನೆ.””
01099044 ವೈಶಂಪಾಯನ ಉವಾಚ।
01099044a ಸಮಾಗಮನಮಾಕಾಂಕ್ಷನ್ನಿತಿ ಸೋಽಂತರ್ಹಿತೋ ಮುನಿಃ।
01099044c ತತೋಽಭಿಗಮ್ಯ ಸಾ ದೇವೀ ಸ್ನುಷಾಂ ರಹಸಿ ಸಂಗತಾಂ।
01099044e ಧರ್ಮ್ಯಮರ್ಥಸಮಾಯುಕ್ತಮುವಾಚ ವಚನಂ ಹಿತಂ।।
ವೈಶಂಪಾಯನನು ಹೇಳಿದನು: “ಸಮಾಗಮಕ್ಕೆ ಕಾಯುತ್ತಿರಲಿ” ಎಂದು ಹೇಳಿ ಆ ಮುನಿಯು ಅಂತರ್ಗತನಾದನು. ನಂತರ ಆ ದೇವಿಯು ತನ್ನ ಸೊಸೆಯನ್ನು ಗೌಪ್ಯವಾಗಿ ಭೆಟ್ಟಿಯಾಗಿ ಧರ್ಮಾರ್ಥಸಮಾಯುಕ್ತ ಈ ಹಿತನುಡಿಗಳನ್ನಾಡಿದಳು:
01099045a ಕೌಸಲ್ಯೇ ಧರ್ಮತಂತ್ರಂ ಯದ್ಬ್ರವೀಮಿ ತ್ವಾಂ ನಿಬೋಧ ಮೇ।
01099045c ಭರತಾನಾಂ ಸಮುಚ್ಛೇದೋ ವ್ಯಕ್ತಂ ಮದ್ಭಾಗ್ಯಸಂಕ್ಷಯಾತ್।।
“ಕೌಸಲ್ಯಾ! ನಾನು ಹೇಳುವ ಈ ಧರ್ಮತಂತ್ರವನ್ನು ಕೇಳು. ಭರತ ಕುಲವು ನಿಂತುಹೋಗಿರುವುದು ನನ್ನ ದುರ್ಭಾಗ್ಯ.
01099046a ವ್ಯಥಿತಾಂ ಮಾಂ ಚ ಸಂಪ್ರೇಕ್ಷ್ಯ ಪಿತೃವಂಶಂ ಚ ಪೀಡಿತಂ।
01099046c ಭೀಷ್ಮೋ ಬುದ್ಧಿಮದಾನ್ಮೇಽತ್ರ ಧರ್ಮಸ್ಯ ಚ ವಿವೃದ್ಧಯೇ।।
ಭೀಷ್ಮನು ನನ್ನ ಈ ವ್ಯಥೆಯನ್ನು ಮತ್ತು ಅವನ ಪಿತೃವಂಶದ ಪೀಡನೆಯನ್ನು ಗಮನಿಸಿ, ಧರ್ಮವನ್ನು ವೃದ್ಧಿಸುವ ಬುದ್ಧಿವಂತ ಮಾರ್ಗವನ್ನು ತೋರಿಸಿದ್ದಾನೆ.
01099047a ಸಾ ಚ ಬುದ್ಧಿಸ್ತವಾಧೀನಾ ಪುತ್ರಿ ಜ್ಞಾತಂ ಮಯೇತಿ ಹ।
01099047c ನಷ್ಟಂ ಚ ಭಾರತಂ ವಂಶಂ ಪುನರೇವ ಸಮುದ್ಧರ।।
ಪುತ್ರಿ! ಆದರೆ ಇದು ನಿನ್ನ ಮನಸ್ಸನ್ನು ಅವಲಂಬಿಸಿದೆ ಎಂದು ನನಗೆ ತಿಳಿದಿದೆ. ನಷ್ಟವಾಗುತ್ತಿರುವ ಭರತ ವಂಶವನ್ನು ಪುನಃ ಉದ್ಧರಿಸು.
01099048a ಪುತ್ರಂ ಜನಯ ಸುಶ್ರೋಣಿ ದೇವರಾಜಸಮಪ್ರಭಂ।
01099048c ಸ ಹಿ ರಾಜ್ಯಧುರಂ ಗುರ್ವೀಮುದ್ವಕ್ಷ್ಯತಿ ಕುಲಸ್ಯ ನಃ।।
ಸುಶ್ರೋಣಿ! ದೇವರಾಜಸಮಪ್ರಭ ಪುತ್ರನಿಗೆ ಜನ್ಮನೀಡು. ಅವನೇ ಈ ಕುಲ ಮತ್ತು ರಾಜ್ಯಭಾರಗಳೆರಡರ ಭಾರವನ್ನೂ ಹೊರುತ್ತಾನೆ.”
01099049a ಸಾ ಧರ್ಮತೋಽನುನೀಯೈನಾಂ ಕಥಂ ಚಿದ್ಧರ್ಮಚಾರಿಣೀಂ।
01099049c ಭೋಜಯಾಮಾಸ ವಿಪ್ರಾಂಶ್ಚ ದೇವರ್ಷೀನತಿಥೀಂಸ್ತಥಾ।।
ಆ ಧರ್ಮಚಾರಿಣಿಯನ್ನು ಹೇಗಾದರೂ ಮಾಡಿ ಧರ್ಮದೆಡೆಗೆ ಕೊಂಡೊಯ್ಯುವುದರಲ್ಲಿ ಯಶಸ್ವಿಯಾದ ಅವಳು ವಿಪ್ರರಿಗೂ ದೇವರ್ಷಿಗಳಿಗೂ ಅತಿಥಿಗಳಿಗೂ ಭೋಜನವನ್ನು ನೀಡಿದಳು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಸತ್ಯವತ್ಯುಪದೇಶೇ ನವನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಸತ್ಯವತೀ ಉಪದೇಶ ವಿಷಯಕ ತೊಂಭತ್ತೊಂಭತ್ತನೆಯ ಅಧ್ಯಾಯವು.