096 ವಿಚಿತ್ರವೀರ್ಯೋಪರಮಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 96

ಸಾರ

ಬಾಲಕ ತಮ್ಮನಿಗೆಂದು ಭೀಷ್ಮನು ಕಾಶೀರಾಜಪುತ್ರಿಯರಾದ ಅಂಬೆ, ಅಂಬಿಕೆ, ಅಂಬಾಲಿಕೆಯರನ್ನು ಸ್ವಯಂವರಕ್ಕೆ ಹೋಗಿ ಬಲವಂತವಾಗಿ ಎತ್ತಿ ರಥದಲ್ಲಿ ಕುಳ್ಳಿರಿಸಿಕೊಂಡಿದುದು (1-13). ಸ್ವಯುಂವರಕ್ಕೆ ಬಂದಿದ್ದ ರಾಜರನ್ನು ಭೀಷ್ಮನು ಯುದ್ಧದಲ್ಲಿ ಪರಾಭವಗೊಳಿಸಿದುದು (14-26). ಭೀಷ್ಮ-ಶಾಲ್ವರ ಯುದ್ಧ (27-40). ಅಂಬೆಯು ಶಾಲ್ವನನ್ನು ಪ್ರೀತಿಸಿರುವುದಾಗಿ ಹೇಳಲು ಅವಳಿಗೆ ಹೋಗಲು ಭೀಷ್ಮನು ಅನುಮತಿಯಿತ್ತುದು (41-50). ಮಕ್ಕಳಿಲ್ಲದೇ ವಿಚಿತ್ರವೀರ್ಯನ ಅಕಾಲ ಮರಣ (51-59).

01096001 ವೈಶಂಪಾಯನ ಉವಾಚ।
01096001a ಹತೇ ಚಿತ್ರಾಂಗದೇ ಭೀಷ್ಮೋ ಬಾಲೇ ಭ್ರಾತರಿ ಚಾನಘ।
01096001c ಪಾಲಯಾಮಾಸ ತದ್ರಾಜ್ಯಂ ಸತ್ಯವತ್ಯಾ ಮತೇ ಸ್ಥಿತಃ।।

ವೈಶಂಪಾಯನನು ಹೇಳಿದನು: “ಚಿತ್ರಾಂಗದನು ಹತನಾದ ನಂತರ ಅನಘ ಭೀಷ್ಮನು, ಸತ್ಯವತಿಯ ಮತದಂತೆ, ತನ್ನ ಬಾಲಕ ತಮ್ಮನ ಮೂಲಕ ಆ ರಾಜ್ಯವನ್ನು ಪಾಲಿಸಿದನು.

01096002a ಸಂಪ್ರಾಪ್ತಯೌವನಂ ಪಶ್ಯನ್ಭ್ರಾತರಂ ಧೀಮತಾಂ ವರಂ।
01096002c ಭೀಷ್ಮೋ ವಿಚಿತ್ರವೀರ್ಯಸ್ಯ ವಿವಾಹಾಯಾಕರೋನ್ಮತಿಂ।।

ತನ್ನ ತಮ್ಮನಿಗೆ ಯೌವನಪ್ರಾಪ್ತಿಯಾದುದನ್ನು ಕಂಡ ಧೀಮಂತರಲ್ಲಿ ಶ್ರೇಷ್ಠ ಭೀಷ್ಮನು ವಿಚಿತ್ರವೀರ್ಯನ ವಿವಾಹಮಾಡಬೇಕೆಂದು ನಿರ್ಧರಿಸಿದನು.

01096003a ಅಥ ಕಾಶಿಪತೇರ್ಭೀಷ್ಮಃ ಕನ್ಯಾಸ್ತಿಸ್ರೋಽಪ್ಸರಃಸಮಾಃ।
01096003c ಶುಶ್ರಾವ ಸಹಿತಾ ರಾಜನ್ವೃಣ್ವತೀರ್ವೈ ಸ್ವಯಂ ವರಂ।।

ರಾಜನ್! ಆಗ ಭೀಷ್ಮನು ಕಾಶಿಪತಿಗೆ ಮೂವರು ಅಪ್ಸರಸಮ ಕನ್ಯೆಯರಿದ್ದಾರೆ ಮತ್ತು ಅವರು ಒಟ್ಟಿಗೇ ಸ್ವಯಂವರದಲ್ಲಿ ವರರನ್ನು ಆರಿಸುವವರಿದ್ದಾರೆ ಎಂದು ಕೇಳಿದನು.

01096004a ತತಃ ಸ ರಥಿನಾಂ ಶ್ರೇಷ್ಠೋ ರಥೇನೈಕೇನ ವರ್ಮಭೃತ್।
01096004c ಜಗಾಮಾನುಮತೇ ಮಾತುಃ ಪುರೀಂ ವಾರಾಣಸೀಂ ಪ್ರತಿ।।

ತಾಯಿಯ ಅನುಮತಿಯನ್ನು ಪಡೆದು, ಆ ರಥಿಗಳಲ್ಲಿ ಶ್ರೇಷ್ಠನು, ಆಯುಧ-ಕವಚಗಳನ್ನು ಧರಿಸಿ, ರಥವನ್ನೇರಿ ಒಬ್ಬನೇ ವಾರಣಾಸೀ ಪುರಕ್ಕೆ ಹೋದನು.

01096005a ತತ್ರ ರಾಜ್ಞಃ ಸಮುದಿತಾನ್ಸರ್ವತಃ ಸಮುಪಾಗತಾನ್।
01096005c ದದರ್ಶ ಕನ್ಯಾಸ್ತಾಶ್ಚೈವ ಭೀಷ್ಮಃ ಶಂತನುನಂದನಃ।।

ಅಲ್ಲಿ ಶಂತನುನಂದನ ಭೀಷ್ಮನು ಎಲ್ಲಕಡೆಯಿಂದಲೂ ಬಂದು ಸೇರಿದ್ದ ಶ್ರೀಮಂತ ರಾಜಕುಮಾರರ ಮಧ್ಯೆ ಮೂವರು ಕನ್ಯೆಯರನ್ನು ನೋಡಿದನು.

01096006a ಕೀರ್ತ್ಯಮಾನೇಷು ರಾಜ್ಞಾಂ ತು ನಾಮಸ್ವಥ ಸಹಸ್ರಶಃ।
01096006c ಭೀಷ್ಮಃ ಸ್ವಯಂ ತದಾ ರಾಜನ್ವರಯಾಮಾಸ ತಾಃ ಪ್ರಭುಃ।।

ರಾಜನ್! ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದ ರಾಜರುಗಳ ಹೆಸರುಗಳನ್ನು ಹೇಳುತ್ತಿದ್ದ ಹಾಗೆಯೇ ಆ ಪ್ರಭು ಭೀಷ್ಮನು ಅವರನ್ನು ವರಿಸಿದನು.

01096007a ಉವಾಚ ಚ ಮಹೀಪಾಲಾನ್ರಾಜಂಜಲದನಿಃಸ್ವನಃ।
01096007c ರಥಮಾರೋಪ್ಯ ತಾಃ ಕನ್ಯಾ ಭೀಷ್ಮಃ ಪ್ರಹರತಾಂ ವರಃ।।

ರಾಜನ್! ಖಡ್ಗಧಾರಿಗಳಲ್ಲಿ ಶ್ರೇಷ್ಠ ಭೀಷ್ಮನು ಆ ಕನ್ಯೆಯರನ್ನು ರಥದ ಮೇಲೇರಿಸುತ್ತಾ ಮಹೀಪಾಲರನ್ನುದ್ದೇಶಿಸಿ ಗುಡುಗಿನ ಸ್ವರದಲ್ಲಿ ಕೂಗಿ ಹೇಳಿದನು:

01096008a ಆಹೂಯ ದಾನಂ ಕನ್ಯಾನಾಂ ಗುಣವದ್ಭ್ಯಃ ಸ್ಮೃತಂ ಬುಧೈಃ।
01096008c ಅಲಂಕೃತ್ಯ ಯಥಾಶಕ್ತಿ ಪ್ರದಾಯ ಚ ಧನಾನ್ಯಪಿ।।

“ಗುಣವಂತರನ್ನು ಆಮಂತ್ರಿಸಿ ಕನ್ಯೆಯನ್ನು ದಾನವಾಗಿ ಕೊಡಬೇಕು ಎಂದು ತಿಳಿದವರು ಹೇಳುತ್ತಾರೆ. ಅಥವಾ ಅವರನ್ನು ಯಥಾಶಕ್ತಿ ಅಲಂಕರಿಸಿ ಧನವನ್ನಿತ್ತು ಕೊಡಬೇಕು ಎನ್ನುತ್ತಾರೆ.

01096009a ಪ್ರಯಚ್ಛಂತ್ಯಪರೇ ಕನ್ಯಾಂ ಮಿಥುನೇನ ಗವಾಮಪಿ।
01096009c ವಿತ್ತೇನ ಕಥಿತೇನಾನ್ಯೇ ಬಲೇನಾನ್ಯೇಽನುಮಾನ್ಯ ಚ।।

ಕೆಲವರು ತಮ್ಮ ಕನ್ಯೆಯರನ್ನು ಗೋವಿನ ಜೋಡಿಗೂ ಮದುವೆ ಮಾಡಿ ಕೊಡುತ್ತಾರೆ. ಅನ್ಯರು ವಿತ್ತದ ಕುರಿತು ಮಾತನಾಡಿ ಒಯ್ಯುತ್ತಾರಾದರೆ ಇನ್ನು ಕೆಲವರು ಬಲವಂತದಿಂದ ಕರೆದೊಯ್ಯುತ್ತಾರೆ.

01096010a ಪ್ರಮತ್ತಾಮುಪಯಾಂತ್ಯನ್ಯೇ ಸ್ವಯಮನ್ಯೇ ಚ ವಿಂದತೇ।
01096010c ಅಷ್ಟಮಂ ತಮಥೋ ವಿತ್ತ ವಿವಾಹಂ ಕವಿಭಿಃ ಸ್ಮೃತಂ।।
01096011a ಸ್ವಯಂವರಂ ತು ರಾಜನ್ಯಾಃ ಪ್ರಶಂಸಂತ್ಯುಪಯಾಂತಿ ಚ।
01096011c ಪ್ರಮಥ್ಯ ತು ಹೃತಾಮಾಹುರ್ಜ್ಯಾಯಸೀಂ ಧರ್ಮವಾದಿನಃ।।

ಕೆಲವರು ಪ್ರಮತ್ತರಾದಾಗ ಮದುವೆಯಾಗುತ್ತಾರೆ. ಇನ್ನು ಕೆಲವರು ಸ್ವಯಂ ಹುಡುಕಿ ಮದುವೆಯಾಗುತ್ತಾರೆ. ಕವಿಗಳು ಹೇಳಿದ, ರಾಜರಲ್ಲಿ ಪ್ರಶಂಸನೀಯ ರೂಢಿಯಲ್ಲಿರುವ ಸ್ವಯಂವರವು ಎಂಟನೆಯ ವಿವಾಹ ವಿಧಿಯೆಂದು ತಿಳಿಯಿರಿ. ಆದರೆ ಧರ್ಮವಾದಿಗಳು ಅಪಹರಿಸಿ ಮದುವೆಯಾಗುವುದೇ ಶ್ರೇಷ್ಠವೆಂದು ಹೇಳುತ್ತಾರೆ.

01096012a ತಾ ಇಮಾಃ ಪೃಥಿವೀಪಾಲಾ ಜಿಹೀರ್ಷಾಮಿ ಬಲಾದಿತಃ।
01096012c ತೇ ಯತಧ್ವಂ ಪರಂ ಶಕ್ತ್ಯಾ ವಿಜಯಾಯೇತರಾಯ ವಾ।
01096012e ಸ್ಥಿತೋಽಹಂ ಪೃಥಿವೀಪಾಲಾ ಯುದ್ಧಾಯ ಕೃತನಿಶ್ಚಯಃ।।

ಇಲ್ಲಿರುವ ಪೃಥಿವೀಪಾಲರೇ! ನಾನು ಇವರನ್ನು ಬಲತ್ಕಾರವಾಗಿ ಕೊಂಡೊಯ್ಯುತ್ತಿದ್ದೇನೆ. ಯಾರಿಗಾದರೂ ಪರಮ ಶಕ್ತಿಯಿದ್ದರೆ ಬನ್ನಿ. ನನ್ನನ್ನು ಸೋಲಿಸಿ ಅಥವಾ ನನ್ನಿಂದ ಸೋಲನ್ನು ಹೊಂದಿ. ಪೃಥಿವೀಪಾಲರೇ! ಯುದ್ಧದ ನಿಶ್ಚಯಮಾಡಿಯೇ ನಾನಿಲ್ಲಿ ಬಂದಿದ್ದೇನೆ.”

01096013a ಏವಮುಕ್ತ್ವಾ ಮಹೀಪಾಲಾನ್ಕಾಶಿರಾಜಂ ಚ ವೀರ್ಯವಾನ್।
01096013c ಸರ್ವಾಃ ಕನ್ಯಾಃ ಸ ಕೌರವ್ಯೋ ರಥಮಾರೋಪಯತ್ಸ್ವಕಂ।
01096013e ಆಮಂತ್ರ್ಯ ಚ ಸ ತಾನ್ಪ್ರಾಯಾತ್ ಶೀಘ್ರಂ ಕನ್ಯಾಃ ಪ್ರಗೃಹ್ಯ ತಾಃ।।

ಈ ರೀತಿ ಕಾಶಿರಾಜ ಮತ್ತು ಮಹೀಪಾಲರಿಗೆ ಹೇಳಿ ಎಲ್ಲ ಕನ್ಯೆಯರನ್ನೂ ಸ್ವತಃ ತಾನೇ ರಥದಲ್ಲೇರಿಸಿ, ಅವರೆಲ್ಲರನ್ನೂ ಆಮಂತ್ರಿಸುತ್ತಾ ಆ ಕೌರವ್ಯನು ಕನ್ಯೆಯರನ್ನು ಎತ್ತಿಕೊಂಡು ಶೀಘ್ರವಾಗಿ ರಥವನ್ನೋಡಿಸಿದನು.

01096014a ತತಸ್ತೇ ಪಾರ್ಥಿವಾಃ ಸರ್ವೇ ಸಮುತ್ಪೇತುರಮರ್ಷಿತಾಃ।
01096014c ಸಂಸ್ಪೃಶಂತಃ ಸ್ವಕಾನ್ಬಾಹೂನ್ದಶಂತೋ ದಶನಚ್ಛದಾನ್।।

ಆಗ ಸರ್ವ ಪಾರ್ಥಿವರೂ ರೋಷಗೊಂಡು, ತಮ್ಮ ಬಾಹುಗಳನ್ನು ಉಬ್ಬಿಸಿ ಹಲ್ಲು ಕಡಿಯುತ್ತಾ ಮೇಲೆದ್ದರು.

01096015a ತೇಷಾಮಾಭರಣಾನ್ಯಾಶು ತ್ವರಿತಾನಾಂ ವಿಮುಂಚತಾಂ।
01096015c ಆಮುಂಚತಾಂ ಚ ವರ್ಮಾಣಿ ಸಂಭ್ರಮಃ ಸುಮಹಾನಭೂತ್।।

ಅವರವರ ಆಭರಣಗಳನ್ನು ಎಸೆದು ಅಸ್ತ್ರ ಕವಚಗಳನ್ನು ಧರಿಸುವಾಗ ಎಲ್ಲೆಡೆಯೂ ಅತಿ ಸಂಭ್ರಮದ ಗದ್ದಲವಾಯಿತು.

01096016a ತಾರಾಣಾಮಿವ ಸಂಪಾತೋ ಬಭೂವ ಜನಮೇಜಯ।
01096016c ಭೂಷಣಾನಾಂ ಚ ಶುಭ್ರಾಣಾಂ ಕವಚಾನಾಂ ಚ ಸರ್ವಶಃ।।

ಜನಮೇಜಯ! ಶುಭ್ರ ಭೂಷಣ-ಕವಚಗಳು ಎಲ್ಲೆಡೆಯಿಂದ ತಾರೆಗಳಂತೆ ಬಿದ್ದವು.

01096017a ಸವರ್ಮಭಿರ್ಭೂಷಣೈಸ್ತೇ ದ್ರಾಗ್ಭ್ರಾಜದ್ಭಿರಿತಸ್ತತಃ।
01096017c ಸಕ್ರೋಧಾಮರ್ಷಜಿಹ್ಮಭ್ರೂಸಕಷಾಯದೃಶಸ್ತಥಾ।।
01096018a ಸೂತೋಪಕ್ಷ್ತಾನ್ರುಚಿರಾನ್ಸದಶ್ವೋದ್ಯತಧೂರ್ಗತಾನ್।
01096018c ರಥಾನಾಸ್ಥಾಯ ತೇ ವೀರಾಃ ಸರ್ವಪ್ರಹರಣಾನ್ವಿತಾಃ।
01096018e ಪ್ರಯಾಂತಮೇಕಂ ಕೌರವ್ಯಮನುಸಸ್ರುರುದಾಯುಧಾಃ।।
01096019a ತತಃ ಸಮಭವದ್ಯುದ್ಧಂ ತೇಷಾಂ ತಸ್ಯ ಚ ಭಾರತ।
01096019c ಏಕಸ್ಯ ಚ ಬಹೂನಾಂ ಚ ತುಮುಲಂ ಲೋಮಹರ್ಷಣಂ।।

ಆ ವೀರರೆಲ್ಲರೂ ಆಭರಣ ಭೂಷಣ ಮತ್ತು ಮುತ್ತು-ರತ್ನಗಳನ್ನು ಉದುರಿಸುತ್ತಾ, ರೋಷದಿಂದ ಹುಬ್ಬು ಕಟ್ಟಿ, ಮುಖ ಕೆಂಪುಮಾಡಿಕೊಂಡು, ಸಾರಥಿಗಳು ಸರ್ವ ಅಸ್ತ್ರಗಳನ್ನೂ ಹೇರಿಸಿ ತಯಾರುಮಾಡಿ ನಿಲ್ಲಿಸಿದ್ದ ರಥಗಳನ್ನು ಏರಿದರು. ಆಯುಧಗಳನ್ನು ಮೇಲೆತ್ತಿ ಅವರೆಲ್ಲರೂ ಏಕಾಂಗಿ ಕೌರವ್ಯನನ್ನು ಬೆನ್ನುಹತ್ತಿದರು. ಭಾರತ! ಆಗ ಆ ಏಕಾಂಗಿ ಮತ್ತು ಬಹುಸಂಖ್ಯೆಯಲ್ಲಿದ್ದ ಅವರ ನಡುವೆ ಘೋರ ಲೋಮಹರ್ಷಣ ತುಮುಲ ಯುದ್ಧವು ನಡೆಯಿತು.

01096020a ತೇ ತ್ವಿಷೂನ್ದಶಸಾಹಸ್ರಾಂಸ್ತಸ್ಮೈ ಯುಗಪದಾಕ್ಷಿಪನ್।
01096020c ಅಪ್ರಾಪ್ತಾಂಶ್ಚೈವ ತಾನಾಶು ಭೀಷ್ಮಃ ಸರ್ವಾಂಸ್ತದಾಚ್ಛಿನತ್।।

ಅವರು ದಶಸಹಸ್ರ ಬಾಣಗಳನ್ನು ಒಂದೇ ಕ್ಷಣದಲ್ಲಿ ಬಿಟ್ಟರೆ ಅವು ತನ್ನನ್ನು ಹೊಡೆಯುವುದರೊಳಗೇ ಭೀಷ್ಮನು ತುಂಡುಮಾಡಿದನು.

01096021a ತತಸ್ತೇ ಪಾರ್ಥಿವಾಃ ಸರ್ವೇ ಸರ್ವತಃ ಪರಿವಾರಯನ್।
01096021c ವವರ್ಷುಃ ಶರವರ್ಷೇಣ ವರ್ಷೇಣೇವಾದ್ರಿಮಂಬುದಾಃ।।

ಆಗ ಸರ್ವ ಪಾರ್ಥಿವರೂ ಅವನನ್ನು ಎಲ್ಲಾ ಕಡೆಯಿಂದಲೂ ಸುತ್ತುವರೆದು ಮೋಡಗಳು ಪರ್ವತದ ಮೇಲೆ ಮಳೆಸುರಿಸುವಂತೆ ಬಾಣಗಳ ಮಳೆಯನ್ನೇ ಸುರಿಸಿದರು.

01096022a ಸ ತದ್ಬಾಣಮಯಂ ವರ್ಷಂ ಶರೈರಾವಾರ್ಯ ಸರ್ವತಃ।
01096022c ತತಃ ಸರ್ವಾನ್ಮಹೀಪಾಲಾನ್ಪ್ರತ್ಯವಿಧ್ಯತ್ತ್ರಿಭಿಸ್ತ್ರಿಭಿಃ।।

ಅವನಾದರೂ ಆ ಬಾಣಗಳ ಮಳೆಯನ್ನು ತನ್ನದೇ ಬಾಣದಿಂದ ನಿವಾರಿಸಿದನು ಮತ್ತು ಎಲ್ಲಕಡೆಗೂ ಎಲ್ಲ ಮಹೀಪಾಲರಿಗೂ ಅವರವರ ಒಂದೊಂದು ಬಾಣಕ್ಕೂ ಮೂರುಬಾಣಗಳನ್ನು ಬಿಟ್ಟನು.

01096023a ತಸ್ಯಾತಿ ಪುರುಷಾನನ್ಯಾಽಲ್ಲಾಘವಂ ರಥಚಾರಿಣಃ।
01096023c ರಕ್ಷಣಂ ಚಾತ್ಮನಃ ಸಂಖ್ಯೇ ಶತ್ರವೋಽಪ್ಯಭ್ಯಪೂಜಯನ್।।

ಅನ್ಯ ರಥಚಾರಿಗಳಿಗೆ ಹೋಲಿಸಿದರೆ ಆ ಪುರುಷನಲ್ಲಿ ಲಘುತ್ವವಿತ್ತು. ಅವನು ತನ್ನನ್ನು ತಾನು ರಕ್ಷಣೆಮಾಡಿ ಕೊಳ್ಳುತ್ತಿರುವ ರೀತಿಯನ್ನು ನೋಡಿದ ಬಹಳಷ್ಟು ಶತ್ರುಗಳೂ ಅವನನ್ನು ಹೊಗಳತೊಡಗಿದರು.

01096024a ತಾನ್ವಿನಿರ್ಜಿತ್ಯ ತು ರಣೇ ಸರ್ವಶಸ್ತ್ರವಿಶಾರದಃ।
01096024c ಕನ್ಯಾಭಿಃ ಸಹಿತಃ ಪ್ರಾಯಾದ್ಭಾರತೋ ಭಾರತಾನ್ಪ್ರತಿ।।

ಅವರೆಲ್ಲರನ್ನೂ ರಣದಲ್ಲಿ ಸೋಲಿಸಿದ ಆ ಸರ್ವಶಸ್ತ್ರವಿಶಾರದ ಭರತನು ಕನ್ಯೆಗಳ ಸಹಿತ ಭಾರತನಗರದ ಕಡೆ ಹೊರಟನು.

01096025a ತತಸ್ತಂ ಪೃಷ್ಠತೋ ರಾಜಂಶಾಲ್ವರಾಜೋ ಮಹಾರಥಃ।
01096025c ಅಭ್ಯಾಹನದಮೇಯಾತ್ಮಾ ಭೀಷ್ಮಂ ಶಾಂತನವಂ ರಣೇ।।
01096026a ವಾರಣಂ ಜಘನೇ ನಿಘ್ನನ್ದಂತಾಭ್ಯಾಮಪರೋ ಯಥಾ।
01096026c ವಾಶಿತಾಮನುಸಂಪ್ರಾಪ್ತೋ ಯೂಥಪೋ ಬಲಿನಾಂ ವರಃ।।

ಅದೇ ಸಮಯದಲ್ಲಿ ಮಹಾರಥಿ ರಾಜ ಶಾಲ್ವರಾಜನು ಕಾವಿನಲ್ಲಿರುವ ಗಂಡು ಆನೆಯು ತನ್ನ ಪ್ರೇಯಸಿಯ ಮೇಲೆ ಹತ್ತುತ್ತಿದ್ದ ಪ್ರತಿಸ್ಪರ್ಧಿಯನ್ನು ಹಿಂದಿನಿಂದ ತನ್ನ ದಾಡೆಗಳಿಂದ ಆಕ್ರಮಿಸುವಂತೆ ಭೀಷ್ಮ ಶಾಂತನವನನ್ನು ಆಕ್ರಮಣಿಸಿದನು.

01096027a ಸ್ತ್ರೀಕಾಮ ತಿಷ್ಠ ತಿಷ್ಠೇತಿ ಭೀಷ್ಮಮಾಹ ಸ ಪಾರ್ಥಿವಃ।
01096027c ಶಾಲ್ವರಾಜೋ ಮಹಾಬಾಹುರಮರ್ಷೇಣಾಭಿಚೋದಿತಃ।।

“ಸ್ತ್ರೀ ಕಾಮಿ ಭೀಷ್ಮ! ನಿಲ್ಲು! ನಿಲ್ಲು!” ಎಂದು ಮಹಾಬಾಹು ಪಾರ್ಥಿವ ಶಾಲ್ವರಾಜನು ಸಿಟ್ಟಿನಿಂದ ಜೋರಾಗಿ ಕೂಗಿದನು.

01096028a ತತಃ ಸ ಪುರುಷವ್ಯಾಘ್ರೋ ಭೀಷ್ಮಃ ಪರಬಲಾರ್ದನಃ।
01096028c ತದ್ವಾಕ್ಯಾಕುಲಿತಃ ಕ್ರೋಧಾದ್ವಿಧೂಮೋಽಗ್ನಿರಿವ ಜ್ವಲನ್।।
01096029a ಕ್ಷತ್ರಧರ್ಮಂ ಸಮಾಸ್ಥಾಯ ವ್ಯಪೇತಭಯಸಂಭ್ರಮಃ।
01096029c ನಿವರ್ತಯಾಮಾಸ ರಥಂ ಶಾಲ್ವಂ ಪ್ರತಿ ಮಹಾರಥಃ।।

ಆ ಪುರುಷವ್ಯಾಘ್ರ ಪರಬಲಾರ್ದನ ಭೀಷ್ಮನು ಈ ಮಾತುಗಳನ್ನು ಕೇಳಿ ಕ್ರೋಧದಿಂದ ಹೊಗೆಯಿಲ್ಲದ ಅಗ್ನಿಯಂತೆ ಉರಿಯುತ್ತಾ, ಕ್ಷತ್ರಧರ್ಮವನ್ನು ಅನುಸರಿಸಿ, ಸ್ವಲ್ಪವೂ ಭಯ ಉದ್ವೇಗಳಿಲ್ಲದೇ ತನ್ನ ರಥವನ್ನು ಮಹಾರಥಿ ಶಾಲ್ವನ ಕಡೆ ತಿರುಗಿಸಿದನು.

01096030a ನಿವರ್ತಮಾನಂ ತಂ ದೃಷ್ಟ್ವಾ ರಾಜಾನಃ ಸರ್ವ ಏವ ತೇ।
01096030c ಪ್ರೇಕ್ಷಕಾಃ ಸಮಪದ್ಯಂತ ಭೀಷ್ಮಶಾಲ್ವಸಮಾಗಮೇ।।

ಹಿಂದಿರುಗಿ ಬರುತ್ತಿದ್ದ ಅವನನ್ನು ನೋಡಿದ ಸರ್ವ ರಾಜರೂ ಭೀಷ್ಮ-ಶಾಲ್ವರ ಎದುರಾಟವನ್ನು ನೋಡಲು ಪ್ರೇಕ್ಷಕರಾಗಿ ನಿಂತರು.

01096031a ತೌ ವೃಷಾವಿವ ನರ್ದಂತೌ ಬಲಿನೌ ವಾಶಿತಾಂತರೇ।
01096031c ಅನ್ಯೋನ್ಯಮಭಿವರ್ತೇತಾಂ ಬಲವಿಕ್ರಮಶಾಲಿನೌ।।

ಕಾವಿನಲ್ಲಿದ್ದ ಹಸುವಿನ ಮುಂದೆ ಬಡಿದಾಡುವ ಎರಡು ಬಲಶಾಲಿ ಹೋರಿಗಳಂತೆ ಅವರಿಬ್ಬರೂ ಬಲವಿಕ್ರಮಶಾಲಿಗಳು ಪರಸ್ಪರರ ಮೇಲೆ ಎರಗಿದರು.

01096032a ತತೋ ಭೀಷ್ಮಂ ಶಾಂತನವಂ ಶರೈಃ ಶತಸಹಸ್ರಶಃ।
01096032c ಶಾಲ್ವರಾಜೋ ನರಶ್ರೇಷ್ಠಃ ಸಮವಾಕಿರದಾಶುಗೈಃ।।

ನರಶ್ರೇಷ್ಠ ಶಾಲ್ವರಾಜನು ಭೀಷ್ಮ ಶಾಂತನವನ ಮೇಲೆ ಅತಿವೇಗದ ನೂರಾರು ಸಹಸ್ರಾರು ಬಾಣಗಳನ್ನು ಸುರಿಸಿದನು.

01096033a ಪೂರ್ವಮಭ್ಯರ್ದಿತಂ ದೃಷ್ಟ್ವಾ ಭೀಷ್ಮಂ ಶಾಲ್ವೇನ ತೇ ನೃಪಾಃ।
01096033c ವಿಸ್ಮಿತಾಃ ಸಮಪದ್ಯಂತ ಸಾಧು ಸಾಧ್ವಿತಿ ಚಾಬ್ರುವನ್।।

ಮೊದಲೇ ಭೀಷ್ಮನನ್ನು ಸುತ್ತುವರೆದ ಶಾಲ್ವನನ್ನು ನೋಡಿ ಆ ನೃಪರೆಲ್ಲರು ವಿಸ್ಮಿತರಾಗಿ “ಸಾಧು! ಸಾಧು!” ಎಂದು ಉದ್ಗರಿಸಿ, ಪ್ರಶಂಸಿದರು.

01096034a ಲಾಘವಂ ತಸ್ಯ ತೇ ದೃಷ್ಟ್ವಾ ಸಂಯುಗೇ ಸರ್ವಪಾರ್ಥಿವಾಃ।
01096034c ಅಪೂಜಯಂತ ಸಂಹೃಷ್ಟಾ ವಾಗ್ಭಿಃ ಶಾಲ್ವಂ ನರಾಧಿಪಾಃ।।

ಅವನ ಲಘುತ್ವವನ್ನು ನೋಡಿ, ಅಲ್ಲಿ ಸೇರಿದ್ದ ಸರ್ವ ಪಾರ್ಥಿವರೂ ಹರ್ಷಗೊಂಡು ನರಾಧಿಪ ಶಾಲ್ವನನ್ನು ಹೊಗಳಿ ಪ್ರೋತ್ಸಾಹಿಸಿದರು.

01096035a ಕ್ಷತ್ರಿಯಾಣಾಂ ತದಾ ವಾಚಃ ಶ್ರುತ್ವಾ ಪರಪುರಂಜಯಃ।
01096035c ಕ್ರುದ್ಧಃ ಶಾಂತನವೋ ಭೀಷ್ಮಸ್ತಿಷ್ಠ ತಿಷ್ಠೇತ್ಯಭಾಷತ।।

ಕ್ಷತ್ರಿಯರ ಆ ಕೂಗುಗಗಳನ್ನು ಕೇಳಿ ಕೃದ್ಧನಾದ ಪರಪುರಂಜಯ ಶಾಂತನವ ಭೀಷ್ಮನು “ನಿಲ್ಲು! ನಿಲ್ಲು!” ಎಂದು ಕೂಗಿದನು.

01096036a ಸಾರಥಿಂ ಚಾಬ್ರವೀತ್ಕ್ರುದ್ಧೋ ಯಾಹಿ ಯತ್ರೈಷ ಪಾರ್ಥಿವಃ।
01096036c ಯಾವದೇನಂ ನಿಹನ್ಮ್ಯದ್ಯ ಭುಜಂಗಮಿವ ಪಕ್ಷಿರಾಟ್।।

ಕೃದ್ಧನಾಗಿ ತನ್ನ ಸಾರಥಿಗೆ ಹೇಳಿದನು: “ಪಕ್ಷಿರಾಜನು ಭುಜಂಗಗಳನ್ನು ಕೊಲ್ಲುವಂತೆ ಅವನನ್ನು ಕೊಲ್ಲುತ್ತೇನೆ. ಆ ಪಾರ್ಥಿವನಿದ್ದಲ್ಲಿಗೆ ರಥವನ್ನು ಕೊಂಡೊಯ್ಯಿ!”

01096037a ತತೋಽಸ್ತ್ರಂ ವಾರುಣಂ ಸಮ್ಯಗ್ಯೋಜಯಾಮಾಸ ಕೌರವಃ।
01096037c ತೇನಾಶ್ವಾಂಶ್ಚತುರೋಽಮೃದ್ನಾಚ್ಶಾಲ್ವರಾಜ್ಞೋ ನರಾಧಿಪ।।

ನರಾಧಿಪ! ಆಗ ಆ ಕೌರವನು ವಾರುಣಾಸ್ತ್ರವನ್ನು ಹೂಡಿ ಶಾಲ್ವರಾಜನ ನಾಲ್ಕೂ ಕುದುರೆಗಳನ್ನೂ ಸಂಹರಿಸಿದನು.

01096038a ಅಸ್ತ್ರೈರಸ್ತ್ರಾಣಿ ಸಂವಾರ್ಯ ಶಾಲ್ವರಾಜ್ಞಃ ಸ ಕೌರವಃ।
01096038c ಭೀಷ್ಮೋ ನೃಪತಿಶಾರ್ದೂಲ ನ್ಯವಧೀತ್ತಸ್ಯ ಸಾರಥಿಂ।
01096038e ಅಸ್ತ್ರೇಣ ಚಾಪ್ಯಥೈಕೇನ ನ್ಯವಧೀತ್ತುರಗೋತ್ತಮಾನ್।।

ನಂತರ ಆ ಕೌರವ ನೃಪತಿಶಾರ್ದೂಲ ಭೀಷ್ಮನು ಅಸ್ತ್ರದ ಮೇಲೆ ಅಸ್ತ್ರಗಳನ್ನು ಬಿಟ್ಟು ಶಾಲ್ವರಾಜನ ಸಾರಥಿಯನ್ನು ಕೆಳಗುರುಳಿಸಿದನು. ಮತ್ತು ಒಂದೇ ಒಂದು ಅಸ್ತ್ರದಿಂದ ಅವನ ಉತ್ತಮ ತುರಗಗಳನ್ನೂ ಕೆಳಗುರುಳಿಸಿದನು.

01096039a ಕನ್ಯಾಹೇತೋರ್ನರಶ್ರೇಷ್ಠ ಭೀಷ್ಮಃ ಶಾಂತನವಸ್ತದಾ।
01096039c ಜಿತ್ವಾ ವಿಸರ್ಜಯಾಮಾಸ ಜೀವಂತಂ ನೃಪಸತ್ತಮಂ।
01096039e ತತಃ ಶಾಲ್ವಃ ಸ್ವನಗರಂ ಪ್ರಯಯೌ ಭರತರ್ಷಭ।।
01096040a ರಾಜಾನೋ ಯೇ ಚ ತತ್ರಾಸನ್ಸ್ವಯಂವರದಿದೃಕ್ಷವಃ।
01096040c ಸ್ವಾನ್ಯೇವ ತೇಽಪಿ ರಾಷ್ಟ್ರಾಣಿ ಜಗ್ಮುಃ ಪರಪುರಂಜಯ।।

ನರಶ್ರೇಷ್ಠ ಶಾಂತನವ ಭೀಷ್ಮನು ಕನ್ಯೆಯರಿಗಾಗಿ ಆ ನೃಪಸತ್ತಮನನ್ನು ಗೆದ್ದು ಜೀವಂತ ಉಳಿಸಿ ಕಳುಹಿಸಿದನು. ಭರತರ್ಷಭ! ನಂತರ ಶಾಲ್ವನು ತನ್ನ ನಗರಕ್ಕೆ ಹಿಂದಿರುಗಿದನು. ಪರಪುರಂಜಯ! ಸ್ವಯಂವರವನ್ನು ನೋಡಲು ಬಂದಿದ್ದ ರಾಜರೂ ಕೂಡ ತಮ್ಮ ತಮ್ಮ ನಗರಗಳಿಗೆ ತೆರಳಿದರು.

01096041a ಏವಂ ವಿಜಿತ್ಯ ತಾಃ ಕನ್ಯಾ ಭೀಷ್ಮಃ ಪ್ರಹರತಾಂ ವರಃ।
01096041c ಪ್ರಯಯೌ ಹಾಸ್ತಿನಪುರಂ ಯತ್ರ ರಾಜಾ ಸ ಕೌರವಃ।।

ಖಡ್ಗಪ್ರಹರಿಗಳಲ್ಲಿ ಶ್ರೇಷ್ಠ ಭೀಷ್ಮನು ಕನ್ಯೆಯರನ್ನು ಗೆದ್ದು ರಾಜ ಕೌರವನಿರುವ ಹಸ್ತಿನಾಪುರದ ಕಡೆ ತಿರುಗಿದನು.

01096042a ಸೋಽಚಿರೇಣೈವ ಕಾಲೇನ ಅತ್ಯಕ್ರಾಮನ್ನರಾಧಿಪ।
01096042c ವನಾನಿ ಸರಿತಶ್ಚೈವ ಶೈಲಾಂಶ್ಚ ವಿವಿಧದ್ರುಮಾನ್।।
01096043a ಅಕ್ಷತಃ ಕ್ಷಪಯಿತ್ವಾರೀನ್ಸಂಖ್ಯೇಽಸಂಖ್ಯೇಯವಿಕ್ರಮಃ।
01096043c ಆನಯಾಮಾಸ ಕಾಶ್ಯಸ್ಯ ಸುತಾಃ ಸಾಗರಗಾಸುತಃ।।
01096044a ಸ್ನುಷಾ ಇವ ಸ ಧರ್ಮಾತ್ಮಾ ಭಗಿನ್ಯ ಇವ ಚಾನುಜಾಃ।
01096044c ಯಥಾ ದುಹಿತರಶ್ಚೈವ ಪ್ರತಿಗೃಹ್ಯ ಯಯೌ ಕುರೂನ್।।

ನರಾಧಿಪ! ತನ್ನ ಅಕ್ಷಯ್ಯ ಬಲದಿಂದ ಸಂಖ್ಯೆಯಿಲ್ಲದಷ್ಟು ವೈರಿಗಳನ್ನು ಸೋಲಿಸಿ, ಸ್ವಲ್ಪವೇ ಸಮಯದಲ್ಲಿ ವನ, ನದಿ, ಗಿರಿ ಮತ್ತು ವಿವಿಧ ದ್ರುಮಗಳನ್ನು ಅತಿಕ್ರಮಿಸಿ ಆ ಸಾಗರಗೆಯ ಸುತ ಧರ್ಮಾತ್ಮನು ಕಾಶಿಯ ಕನ್ಯೆಯರೊಡನೆ ತನ್ನ ಸೊಸೆಗಳಂತೆ ಅಥವಾ ತಂಗಿಯರಂತೆ ಅಥವಾ ಮಕ್ಕಳಂತೆ ವ್ಯವಹರಿಸುತ್ತಾ ಅವರನ್ನು ಕರೆದುಕೊಂಡು ಕುರುವಂಶದ ಮನೆಗೆ ಕರೆತಂದನು.

01096045a ತಾಃ ಸರ್ವಾ ಗುಣಸಂಸಪನ್ನಾ ಭ್ರಾತಾ ಭ್ರಾತ್ರೇ ಯವೀಯಸೇ।
01096045c ಭೀಷ್ಮೋ ವಿಚಿತ್ರವೀರ್ಯಾಯ ಪ್ರದದೌ ವಿಕ್ರಮಾಹೃತಾಃ।।

ಬಲವಂತವಾಗಿ ಕರೆತಂದ ಆ ಸರ್ವ ಗುಣಸಂಪನ್ನರನ್ನೂ ಅಣ್ಣ ಭೀಷ್ಮನು ತನ್ನ ತಮ್ಮ ವಿಚಿತ್ರವೀರ್ಯನಿಗೆ ಕೊಡಲು ನಿರ್ಧರಿಸಿದನು.

01096046a ಸತಾಂ ಧರ್ಮೇಣ ಧರ್ಮಜ್ಞಃ ಕೃತ್ವಾ ಕರ್ಮಾತಿಮಾನುಷಂ।
01096046c ಭ್ರಾತುರ್ವಿಚಿತ್ರವೀರ್ಯಸ್ಯ ವಿವಾಹಾಯೋಪಚಕ್ರಮೇ।
01096046e ಸತ್ಯವತ್ಯಾ ಸಹ ಮಿಥಃ ಕೃತ್ವಾ ನಿಶ್ಚಯಮಾತ್ಮವಾನ್।।

ಅಮಾನುಷ ಕೃತ್ಯವನ್ನೆಸಿಗಿದ ಆ ಧರ್ಮಜ್ಞ, ದೃಢನಿಶ್ಚಯಿ ಧರ್ಮನಿರತನು ಸತ್ಯವತಿಯೊಡನೆ ಸಮಾಲೋಚಿಸಿ ತಮ್ಮ ವಿಚಿತ್ರವೀರ್ಯನ ವಿವಾಹ ಸಿದ್ಧತೆಯನ್ನು ನಡೆಸಿದನು.

01096047a ವಿವಾಹಂ ಕಾರಯಿಷ್ಯಂತಂ ಭೀಷ್ಮಂ ಕಾಶಿಪತೇಃ ಸುತಾ।
01096047c ಜ್ಯೇಷ್ಠಾ ತಾಸಾಮಿದಂ ವಾಕ್ಯಮಬ್ರವೀದ್ಧ ಸತೀ ತದಾ।।

ವಿವಾಹದ ತಯಾರಿ ನಡೆಯುತ್ತಿರುವಾಗ ಕಾಶೀಪತಿಯ ಮಕ್ಕಳಲ್ಲಿ ಜ್ಯೇಷ್ಠ ಸತಿಯು ಭೀಷ್ಮನನ್ನು ಉದ್ದೇಶಿಸಿ ಈ ಮಾತುಗಳನ್ನಾಡಿದಳು:

01096048a ಮಯಾ ಸೌಭಪತಿಃ ಪೂರ್ವಂ ಮನಸಾಭಿವೃತಃ ಪತಿಃ।
01096048c ತೇನ ಚಾಸ್ಮಿ ವೃತಾ ಪೂರ್ವಮೇಷ ಕಾಮಶ್ಚ ಮೇ ಪಿತುಃ।।

“ಈ ಹಿಂದೆಯೇ ನಾನು ಸೌಭಪತಿಯನ್ನು ಮನಸಾ ಪತಿಯನ್ನಾಗಿ ವರಿಸಿದ್ದೇನೆ. ಅವನೂ ನನ್ನನ್ನು ವರಿಸಿದ್ದಾನೆ. ಮತ್ತು ಇದು ನನ್ನ ತಂದೆಯ ಬಯಕೆಯೂ ಆಗಿತ್ತು.

01096049a ಮಯಾ ವರಯಿತವ್ಯೋಽಭೂತ್ ಶಾಲ್ವಸ್ತಸ್ಮಿನ್ಸ್ವಯಂವರೇ।
01096049c ಏತದ್ವಿಜ್ಞಾಯ ಧರ್ಮಜ್ಞ ತತಸ್ತ್ವಂ ಧರ್ಮಮಾಚರ।।

ಆ ಸ್ವಯಂವರದಲ್ಲಿ ನಾನು ಶಾಲ್ವನನ್ನು ವರಿಸುವವಳಿದ್ದೆ. ಧರ್ಮಜ್ಞ! ಇದನ್ನು ತಿಳಿದು ಧರ್ಮದ ಪ್ರಕಾರ ಏನು ಮಾಡಬೇಕೋ ಮಾಡು.”

01096050a ಏವಮುಕ್ತಸ್ತಯಾ ಭೀಷ್ಮಃ ಕನ್ಯಯಾ ವಿಪ್ರಸಂಸದಿ।
01096050c ಚಿಂತಾಮಭ್ಯಗಮದ್ವೀರೋ ಯುಕ್ತಾಂ ತಸ್ಯೈವ ಕರ್ಮಣಃ।।

ವಿಪ್ರಸಂಸದಿಯಲ್ಲಿ ಹೇಳಿದ ಕನ್ಯೆಯ ಈ ಮಾತುಗಳನ್ನು ಕೇಳಿ ವೀರ ಭೀಷ್ಮನು ಇದಕ್ಕೆ ತಕ್ಕುದಾಗಿ ಏನು ಮಾಡಬೇಕೆಂದು ಯೋಚಿಸಿದನು.

01096051a ಸ ವಿನಿಶ್ಚಿತ್ಯ ಧರ್ಮಜ್ಞೋ ಬ್ರಾಹ್ಮಣೈರ್ವೇದಪಾರಗೈಃ।
01096051c ಅನುಜಜ್ಞೇ ತದಾ ಜ್ಯೇಷ್ಠಾಮಂಬಾಂ ಕಾಶಿಪತೇಃ ಸುತಾಂ।।

ಬ್ರಾಹ್ಮಣ ವೇದಪಾರಂಗತರೊಡಗೂಡಿ ನಿಶ್ಚಯಿಸಿದ ಆ ಧರ್ಮಜ್ಞನು ಕಾಶಿಪತಿಯ ಜ್ಯೇಷ್ಠ ಪುತ್ರಿ ಅಂಬೆಗೆ ಹೋಗಲು ಅನುಮತಿಯನ್ನಿತ್ತನು.

01096052a ಅಂಬಿಕಾಂಬಾಲಿಕೇ ಭಾರ್ಯೇ ಪ್ರಾದಾದ್ಭ್ರಾತ್ರೇ ಯವೀಯಸೇ।
01096052c ಭೀಷ್ಮೋ ವಿಚಿತ್ರವೀರ್ಯಾಯ ವಿಧಿದೃಷ್ಟೇನ ಕರ್ಮಣಾ।।

ನಂತರ ಭೀಷ್ಮನು ತನ್ನ ತಮ್ಮ ವಿಚಿತ್ರವೀರ್ಯನಿಗೆ ಅಂಬಿಕೆ ಮತ್ತು ಅಂಬಾಲಿಕೆಯರನ್ನು ಪತ್ನಿಯರನ್ನಾಗಿತ್ತು ವಿಧಿಪೂರ್ವಕ ವಿವಾಹ ಕಾರ್ಯವನ್ನು ನೆರವೇರಿಸಿದನು.

01096053a ತಯೋಃ ಪಾಣಿಂ ಗೃಹೀತ್ವಾ ಸ ರೂಪಯೌವನದರ್ಪಿತಃ।
01096053c ವಿಚಿತ್ರವೀರ್ಯೋ ಧರ್ಮಾತ್ಮಾ ಕಾಮಾತ್ಮಾ ಸಮಪದ್ಯತ।।

ಅವರ ಪಾಣಿಗ್ರಹಣ ಮಾಡಿಕೊಂಡ ರೂಪಯೌವನ ದರ್ಪಿತ ಧರ್ಮಾತ್ಮ ವಿಚಿತ್ರವೀರ್ಯನು ಕಾಮಸುಖದಲ್ಲಿಯೇ ತೊಡಗಿದನು.

01096054a ತೇ ಚಾಪಿ ಬೃಹತೀ ಶ್ಯಾಮೇ ನೀಲಕುಂಚಿತಮೂರ್ಧಜೇ।
01096054c ರಕ್ತತುಂಗನಖೋಪೇತೇ ಪೀನಶ್ರೋಣಿಪಯೋಧರೇ।।
01096055a ಆತ್ಮನಃ ಪ್ರತಿರೂಪೋಽಸೌ ಲಬ್ಧಃ ಪತಿರಿತಿ ಸ್ಥಿತೇ।
01096055c ವಿಚಿತ್ರವೀರ್ಯಂ ಕಲ್ಯಾಣಂ ಪೂಜಯಾಮಾಸತುಸ್ತು ತೇ।।

ಎತ್ತರವಾಗಿದ್ದ, ಶ್ಯಾಮವರ್ಣದ, ನೀಲಿ ಗುಂಗುರು ಕೂದಲುಗಳನ್ನು ಹೊಂದಿದ್ದ, ಮೊನಚಾದ ಕೆಂಪು ಉಗುರುಗಳನ್ನು ಹೊಂದಿದ್ದ, ಪೀನಶ್ರೋಣಿ ಪಯೋಧರೆಯರಾದರೂ ತಮಗೆ ಪ್ರತಿರೂಪ ಪತಿಯು ದೊರಕಿದನೆಂದು ತಿಳಿದು ಕಲ್ಯಾಣ ವಿಚಿತ್ರವೀರ್ಯನನ್ನು ಪೂಜಿಸತೊಡಗಿದರು.

01096056a ಸ ಚಾಶ್ವಿರೂಪಸದೃಶೋ ದೇವಸತ್ತ್ವಪರಾಕ್ರಮಃ।
01096056c ಸರ್ವಾಸಾಮೇವ ನಾರೀಣಾಂ ಚಿತ್ತಪ್ರಮಥನೋಽಭವತ್।।

ರೂಪದಲ್ಲಿ ಅಶ್ವಿನಿಯರನ್ನು ಹೋಲುತ್ತಿದ್ದ ಆ ದೇವಸತ್ವಪರಾಕ್ರಮಿಯು ಸರ್ವ ನಾರಿಯರ ಚಿತ್ತಗಳನ್ನು ಕಡೆಯುವಂತಿದ್ದನು.

01096057a ತಾಭ್ಯಾಂ ಸಹ ಸಮಾಃ ಸಪ್ತ ವಿಹರನ್ ಪೃಥಿವೀಪತಿಃ।
01096057c ವಿಚಿತ್ರವೀರ್ಯಸ್ತರುಣೋ ಯಕ್ಷ್ಮಾಣಂ ಸಮಪದ್ಯತ।।

ಆ ತರುಣ ಪೃಥಿವೀಪತಿ ವಿಚಿತ್ರವೀರ್ಯನು ಏಳು ವರ್ಷಗಳ ಪರ್ಯಂತ ಅವರೊಡನೆ ವಿಹರಿಸುತ್ತಿದ್ದು, ರೋಗಕ್ಕೆ ಬಲಿಯಾದನು.

01096058a ಸುಹೃದಾಂ ಯತಮಾನಾನಾಮಾಪ್ತೈಃ ಸಹ ಚಿಕಿತ್ಸಕೈಃ।
01096058c ಜಗಾಮಾಸ್ತಮಿವಾದಿತ್ಯಃ ಕೌರವ್ಯೋ ಯಮಸಾದನಂ।।

ಸುಹೃದಯರು ಮತ್ತು ಆಪ್ತ ಚಿಕಿತ್ಸಕರು ಎಷ್ಟು ಪ್ರಯತ್ನಿಸಿದರೂ ಮುಳುಗುತ್ತಿರುವ ಸೂರ್ಯನಂತೆ ಕೌರವ್ಯನು ಯಮಸಾದನವನ್ನು ಸೇರಿದನು.

01096059a ಪ್ರೇತಕಾರ್ಯಾಣಿ ಸರ್ವಾಣಿ ತಸ್ಯ ಸಂಯಗಕಾರಯತ್।
01096059c ರಾಜ್ಞೋ ವಿಚಿತ್ರವೀರ್ಯಸ್ಯ ಸತ್ಯವತ್ಯಾ ಮತೇ ಸ್ಥಿತಃ।
01096059e ಋತ್ವಿಗ್ಭಿಃ ಸಹಿತೋ ಭೀಷ್ಮಃ ಸರ್ವೈಶ್ಚ ಕುರುಪುಂಗವೈಃ।।

ಸತ್ಯವತಿಯ ಸೂಚನೆಗಳಂತೆ, ಕುರುಪುಂಗವ ಬೀಷ್ಮನು ಸರ್ವ ಋತ್ವಿಗರೊಡಗೂಡಿ ರಾಜ ವಿಚಿತ್ರವೀರ್ಯನ ಪ್ರೇತಕಾರ್ಯಗಳೆಲ್ಲವನ್ನೂ ನೆರವೇರಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ವಿಚಿತ್ರವೀರ್ಯೋಪರಮೇ ಷಣ್ಣವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ವಿಚಿತ್ರವೀರ್ಯನ ನಿಧನ ವಿಷಯಕ ತೊಂಭತ್ತಾರನೆಯ ಅಧ್ಯಾಯವು.