094 ಸತ್ಯವತೀಲಾಭೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 94

ಸಾರ

ಶಂತನುವಿನ ರಾಜ್ಯಭಾರ ವರ್ಣನೆ (1-20). ಗಂಗೆಯು ಸಕಲ ವಿದ್ಯಾಪಾರಂಗತನನ್ನಾಗಿಸಿದ ದೇವವ್ರತನನ್ನು ಶಂತನುವಿಗೆ ಒಪ್ಪಿಸಿದುದು (21-40). ಶಂತನುವು ಸತ್ಯವತಿಯನ್ನು ಕಂಡು ವಿವಾಹಕ್ಕೆ ಕೇಳಲು, ಅವಳ ತಂದೆ ದಾಶನು ಹಾಕಿದ ನಿಬಂಧನೆಗಳನ್ನು ನಿರಾಕರಿಸಿ ಶಂತನುವು ದುಃಖದಲ್ಲಿ ಮುಳುಗಿದುದು (41-53). ದೇವವ್ರತನು ತಂದೆಯ ದುಃಖಕ್ಕೆ ಕಾರಣವನ್ನು ಕೇಳಿ ತಿಳಿದುಕೊಂಡು, ದಾಶನ ಬಳಿಬಂದು ಘೋರ ಪ್ರತಿಜ್ಞೆಗಳನ್ನು ಮಾಡಿ ಭೀಷ್ಮನೆನಿಸಿಕೊಳ್ಳುವುದು (54-90). ಸತ್ಯವತಿ-ಶಾಂತನು ವಿವಾಹ, ಭೀಷ್ಮನಿಗೆ ಸ್ವಚ್ಛಂದ ಮರಣದ ವರ (91-94).

01094001 ವೈಶಂಪಾಯನ ಉವಾಚ।
01094001a ಸ ಏವಂ ಶಂತನುರ್ಧೀಮಾನ್ದೇವರಾಜರ್ಷಿಸತ್ಕೃತಃ।
01094001c ಧರ್ಮಾತ್ಮಾ ಸರ್ವಲೋಕೇಷು ಸತ್ಯವಾಗಿತಿ ವಿಶ್ರುತಃ।।

ವೈಶಂಪಾಯನ ಉವಾಚ: “ದೇವರಾಜರ್ಷಿಸತ್ಕೃತ ದೀಮಾನ್ ಧರ್ಮಾತ್ಮ ಶಂತನುವು ಸರ್ವಲೋಕಗಳಲ್ಲಿ ಸತ್ಯವಾದಿಯೆಂದು ವಿಶ್ರುತನಾದನು.

01094002a ದಮೋ ದಾನಂ ಕ್ಷಮಾ ಬುದ್ಧಿರ್ಹ್ರೀರ್ಧೃತಿಸ್ತೇಜ ಉತ್ತಮಂ।
01094002c ನಿತ್ಯಾನ್ಯಾಸನ್ಮಹಾಸತ್ತ್ವೇ ಶಂತನೌ ಪುರುಷರ್ಷಭೇ।।

ದಮ, ದಾನ, ಕ್ಷಮೆ, ಬುದ್ಧಿ, ಧೃತಿ, ತೇಜಸ್ಸು ಮುಂತಾದ ಉತ್ತಮ ಮಹಾಸತ್ವಗಳು ಪುರುಷರ್ಷಭ ಶಂತನುವಿನಲ್ಲಿ ನಿತ್ಯವೂ ವಾಸಿಸಿದ್ದವು.

01094003a ಏವಂ ಸ ಗುಣಸಂಪನ್ನೋ ಧರ್ಮಾರ್ಥಕುಶಲೋ ನೃಪಃ।
01094003c ಆಸೀದ್ಭರತವಂಶಸ್ಯ ಗೋಪ್ತಾ ಸಾಧುಜನಸ್ಯ ಚ।।

ಈ ರೀತಿ ಗುಣಸಂಪನ್ನನಾದ, ಧರ್ಮಾರ್ಥಕುಶಲನಾದ ನೃಪನು ಭರತವಂಶದ ಮತ್ತು ಸಾಧುಜನರ ನಾಯಕನಾಗಿದ್ದನು.

01094004a ಕಂಬುಗ್ರೀವಃ ಪೃಥುವ್ಯಂಸೋ ಮತ್ತವಾರಣವಿಕ್ರಮಃ।
01094004c ಧರ್ಮ ಏವ ಪರಃ ಕಾಮಾದರ್ಥಾಚ್ಚೇತಿ ವ್ಯವಸ್ಥಿತಃ।।
01094005a ಏತಾನ್ಯಾಸನ್ಮಹಾಸತ್ತ್ವೇ ಶಂತನೌ ಭರತರ್ಷಭ।
01094005c ನ ಚಾಸ್ಯ ಸದೃಶಃ ಕಶ್ಚಿತ್ ಕ್ಷತ್ರಿಯೋ ಧರ್ಮತೋಽಭವತ್।।

ಶಂಖದಂತ ಕುತ್ತಿಗೆ, ವಿಸ್ತಾರವಾದ ಹೆಗಲು, ಮದಿಸಿದ ಆನೆಯ ಪರಾಕ್ರಮ, ಕಾಮ ಮತ್ತು ಅರ್ಥಕ್ಕಿಂತಲೂ ಧರ್ಮವೇ ಶ್ರೇಷ್ಠವೆಂಬ ನಿಲುವು, ಈ ಎಲ್ಲ ಮಹಾಸತ್ವಗಳನ್ನೊಳಗೊಂಡ ಭರತರ್ಷಭ ಧರ್ಮಿ ಶಂತನುವಿನ ಸದೃಶ ಬೇರೊಬ್ಬ ಕ್ಷತ್ರಿಯನು ಎಲ್ಲಿಯೂ ಇರಲಿಲ್ಲ.

01094006a ವರ್ತಮಾನಂ ಹಿ ಧರ್ಮೇ ಸ್ವೇ ಸರ್ವಧರ್ಮವಿದಾಂ ವರಂ।
01094006c ತಂ ಮಹೀಪಾ ಮಹೀಪಾಲಂ ರಾಜರಾಜ್ಯೇಽಭ್ಯಷೇಚಯನ್।।

ಸ್ವಯಂ ಧರ್ಮದಲ್ಲಿ ನಡೆಯುತ್ತಿದ್ದು ಸರ್ವಧರ್ಮವಿದ್ವಾಂಸರಲ್ಲಿ ಶ್ರೇಷ್ಠನೆಂದೆನಿಸಿಕೊಂಡ ಆ ಮಹೀಪಾಲನನ್ನು ಭೂಮಿಯ ರಾಜರೆಲ್ಲರೂ ರಾಜ ರಾಜನೆಂದು ಅಭೀಷೇಕಿಸಿದ್ದರು.

01094007a ವೀತಶೋಕಭಯಾಬಾಧಾಃ ಸುಖಸ್ವಪ್ನವಿಬೋಧನಾಃ।
01094007c ಪ್ರತಿ ಭಾರತಗೋಪ್ತಾರಂ ಸಮಪದ್ಯಂತ ಭೂಮಿಪಾಃ।।

ಆ ಭಾರತನನ್ನು ನಾಯಕನನ್ನಾಗಿ ಪಡೆದ ಭೂಮಿಪರೆಲ್ಲರೂ ವೀತಶೋಕಭಯಾಬಾಧರಾಗಿ, ಸುಖಸ್ವಪ್ನದೊಂದಿಗೆ ಏಳುತ್ತಿದ್ದರು.

01094008a ಶಂತನುಪ್ರಮುಖೈರ್ಗುಪ್ತೇ ಲೋಕೇ ನೃಪತಿಭಿಸ್ತದಾ।
01094008c ನಿಯಮಾತ್ಸರ್ವವರ್ಣಾನಾಂ ಬ್ರಹ್ಮೋತ್ತರಮವರ್ತತ।।

ಲೋಕದ ನೃಪತಿಯರೆಲ್ಲರಿಗೂ ಶಂತನುವು ಪ್ರಮುಖನಾಗಿದ್ದಾಗ ಸರ್ವ ವರ್ಣಗಳನ್ನೂ ಹಿಡಿತದಲ್ಲಿಟ್ಟಿದ್ದ ಬ್ರಾಹ್ಮಣತ್ವವು ಉನ್ನತ ಸ್ಥಾನವನ್ನು ಪಡೆದಿತ್ತು.

01094009a ಬ್ರಹ್ಮ ಪರ್ಯಚರತ್ಕ್ಷತ್ರಂ ವಿಶಃ ಕ್ಷತ್ರಮನುವ್ರತಾಃ।
01094009c ಬ್ರಹ್ಮಕ್ಷತ್ರಾನುರಕ್ತಾಶ್ಚ ಶೂದ್ರಾಃ ಪರ್ಯಚರನ್ವಿಶಃ।।

ಕ್ಷತ್ರಿಯರು ಬ್ರಾಹ್ಮಣರ ಪರಿಚಾರಕರಾಗಿದ್ದರು, ವೈಶ್ಯರು ಕ್ಷತ್ರಿಯರನ್ನು ಅನುಸರಿಸುತ್ತಿದ್ದರು ಮತ್ತು ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರನ್ನು ಶೂದ್ರರು ಪರಿಚರಿಸುತ್ತಿದ್ದರು.

01094010a ಸ ಹಾಸ್ತಿನಪುರೇ ರಮ್ಯೇ ಕುರೂಣಾಂ ಪುಟಭೇದನೇ।
01094010c ವಸನ್ಸಾಗರಪರ್ಯಂತಾಮನ್ವಶಾದ್ವೈ ವಸುಂಧರಾಂ।।

ಕುರುಗಳ ಕೇಂದ್ರಬಿಂದು ರಮ್ಯ ಹಸ್ತಿನಾಪುರದಲ್ಲಿ ವಾಸಿಸುತ್ತಾ, ಅವನು ಸಾಗರಪರ್ಯಂತ ಇಡೀ ಭೂಮಿಯನ್ನು ಆಳಿದನು.

01094011a ಸ ದೇವರಾಜಸದೃಶೋ ಧರ್ಮಜ್ಞಃ ಸತ್ಯವಾಗೃಜುಃ।
01094011c ದಾನಧರ್ಮತಪೋಯೋಗಾತ್ ಶ್ರಿಯಾ ಪರಮಯಾ ಯುತಃ।।

ಧರ್ಮಜ್ಞನೂ, ಸತ್ಯವಾಗ್ಮಿಯೂ, ಋಜುವೂ ಆಗಿದ್ದ ಅವನು ದೇವರಾಜಸದೃಶನಾಗಿದ್ದನು. ಅವನ ದಾನ-ಧರ್ಮ-ತಪೋಯೋಗಗಳಿಂದ ಅತ್ಯುತ್ತಮ ಸಂಪತ್ತೂ ಅವನದ್ದಾಗಿತ್ತು.

01094012a ಅರಾಗದ್ವೇಷಸಂಯುಕ್ತಃ ಸೋಮವತ್ಪ್ರಿಯದರ್ಶನಃ।
01094012c ತೇಜಸಾ ಸೂರ್ಯಸಂಕಾಶೋ ವಾಯುವೇಗಸಮೋ ಜವೇ।
01094012e ಅಂತಕಪ್ರತಿಮಃ ಕೋಪೇ ಕ್ಷಮಯಾ ಪೃಥಿವೀಸಮಃ।।

ರಾಗದ್ವೇಷಗಳಿಲ್ಲದ, ಚಂದ್ರನಂತೆ ಪ್ರಿಯದರ್ಶನನಾದ, ತೇಜಸ್ಸಿನಲ್ಲಿ ಸೂರ್ಯಸಂಕಾಶನಾದ, ವಾಯುವೇಗಸಮನಾದ, ಅವನು ಕೋಪದಲ್ಲಿ ಯಮನ ಸಮನಾಗಿದ್ದನು ಮತ್ತು ಕ್ಷಮೆಯಲ್ಲಿ ಪೃಥ್ವಿಯ ಸಮನಾಗಿದ್ದನು.

01094013a ವಧಃ ಪಶುವರಾಹಾಣಾಂ ತಥೈವ ಮೃಗಪಕ್ಷಿಣಾಂ।
01094013c ಶಂತನೌ ಪೃಥಿವೀಪಾಲೇ ನಾವರ್ತತ ವೃಥಾ ನೃಪ।।

ಶಂತನುವು ಪೃಥಿವೀಪಾಲನಾಗಿದ್ದಾಗ ಯಾವುದೇ ಪಶುವಾಗಲೀ ವರಾಹವಾಗಲೀ, ಮೃಗಪಕ್ಷಿಗಳಾಗಲೀ ವೃಥಾ ಸಾಯುತ್ತಿರಲಿಲ್ಲ.

01094014a ಧರ್ಮಬ್ರಹ್ಮೋತ್ತರೇ ರಾಜ್ಯೇ ಶಂತನುರ್ವಿನಯಾತ್ಮವಾನ್।
01094014c ಸಮಂ ಶಶಾಸ ಭೂತಾನಿ ಕಾಮರಾಗವಿವರ್ಜಿತಃ।।

ಧರ್ಮ ಮತ್ತು ಬ್ರಾಹ್ಮಣತ್ವಕ್ಕೆ ಪ್ರಾಮುಖ್ಯತೆಯಿದ್ದ ರಾಜ್ಯದಲ್ಲಿ ಶಂತನುವು ಸರ್ವ ಜೀವಿಗಳನ್ನು ಕಾಮರಾಗವಿವರ್ಜಿತನಾಗಿ ತನ್ನ ಸಮಾನರೆಂದು ತಿಳಿದು ಆಳಿದನು.

01094015a ದೇವರ್ಷಿಪಿತೃಯಜ್ಞಾರ್ಥಮಾರಭ್ಯಂತ ತದಾ ಕ್ರಿಯಾಃ।
01094015c ನ ಚಾಧರ್ಮೇಣ ಕೇಷಾಂ ಚಿತ್ಪ್ರಾಣಿನಾಮಭವದ್ವಧಃ।।

ಅವನ ಕಾಲದಲ್ಲಿ ದೇವರ್ಷಿ, ಪಿತೃಗಳ ಯಜ್ಞವು ಸಮಯಕ್ಕೆ ಸರಿಯಾಗಿ ನಡೆಯುತ್ತಿದ್ದವು. ಉಸಿರಾಡುವ ಯಾವ ಪ್ರಾಣಿಗಳೂ ಅಧರ್ಮದಿಂದ ಸಾಯುತ್ತಿರಲಿಲ್ಲ.

01094016a ಅಸುಖಾನಾಮನಾಥಾನಾಂ ತಿರ್ಯಗ್ಯೋನಿಷು ವರ್ತತಾಂ।
01094016c ಸ ಏವ ರಾಜಾ ಭೂತಾನಾಂ ಸರ್ವೇಷಾಮಭವತ್ಪಿತಾ।।

ಅಸುಖಿಗಳಿಗೆ, ಅನಾಥರಿಗೆ, ಮತ್ತು ಪ್ರಾಣಿಯೋನಿಯಲ್ಲಿ ಜಸಿಸಿದ ಎಲ್ಲವಕ್ಕೂ ಎಲ್ಲ ಜೀವಿಗಳಿಗೂ ರಾಜನೇ ತಂದೆಯಂತಿದ್ದನು.

01094017a ತಸ್ಮಿನ್ಕುರುಪತಿಶ್ರೇಷ್ಠೇ ರಾಜರಾಜೇಶ್ವರೇ ಸತಿ।
01094017c ಶ್ರಿತಾ ವಾಗಭವತ್ಸತ್ಯಂ ದಾನಧರ್ಮಾಶ್ರಿತಂ ಮನಃ।।

ಆ ಕುರುಪತಿಶ್ರೇಷ್ಠ ರಾಜರಾಜೇಶ್ವರನ ಕಾಲದಲ್ಲಿ ಮಾತು ಸತ್ಯಕ್ಕೇ ಹೊಂದಿಕೊಂಡಿತ್ತು ಮತ್ತು ಮನಸ್ಸು ದಾನ-ಧರ್ಮಗಳಲ್ಲಿ ನೆಲಸಿತ್ತು.

01094018a ಸ ಸಮಾಃ ಷೋಡಶಾಷ್ಟೌ ಚ ಚತಸ್ರೋಽಷ್ಟೌ ತಥಾಪರಾಃ।
01094018c ರತಿಮಪ್ರಾಪ್ನುವನ್ ಸ್ತ್ರೀಷು ಬಭೂವ ವನಗೋಚರಃ।।

ಅವನು ಒಬ್ಬೊಬ್ಬರಲ್ಲಿ ಎಂಟುವರ್ಷಗಳಂತೆ ೩೨ ವರ್ಷಗಳು ಸ್ತ್ರೀಯರಲ್ಲಿ ರತಿಸುಖವನ್ನು ಹೊಂದಿ ವನವನ್ನು ತೆರಳಿದನು.

01094019a ತಥಾರೂಪಸ್ತಥಾಚಾರಸ್ತಥಾವೃತ್ತಸ್ತಥಾಶ್ರುತಃ।
01094019c ಗಾಂಗೇಯಸ್ತಸ್ಯ ಪುತ್ರೋಽಭೂನ್ನಾಮ್ನಾ ದೇವವ್ರತೋ ವಸುಃ।।
01094020a ಸರ್ವಾಸ್ತ್ರೇಷು ಸ ನಿಷ್ಣಾತಃ ಪಾರ್ಥಿವೇಷ್ವಿತರೇಷು ಚ।
01094020c ಮಹಾಬಲೋ ಮಹಾಸತ್ತ್ವೋ ಮಹಾವೀರ್ಯೋ ಮಹಾರಥಃ।।

ಅವನ ಮಗ ಗಾಂಗೇಯ, ದೇವವ್ರತನೆಂಬ ಹೆಸರು ಪಡೆದ ವಸುವು ರೂಪ, ಆಚಾರ, ಶ್ರೇಷ್ಠತೆ, ಮತ್ತು ವಿದ್ಯೆಗಳಲ್ಲಿ ಅವನಂತೆಯೇ ಇದ್ದನು. ಸರ್ವಾಸ್ತ್ರ ನಿಷ್ಣಾತನಾಗಿ ಇತರ ಎಲ್ಲ ಪಾರ್ಥಿವರಿಗಿಂಥ ಮಹಾಬಲಶಾಲಿಯೂ, ಮಹಾಸತ್ವನೂ, ಮಹಾವೀರನೂ, ಮಹಾರಥಿಯೂ ಆಗಿದ್ದನು.

01094021a ಸ ಕದಾ ಚಿನ್ಮೃಗಂ ವಿದ್ಧ್ವಾ ಗಂಗಾಮನುಸರನ್ನದೀಂ।
01094021c ಭಾಗೀರಥೀಮಲ್ಪಜಲಾಂ ಶಂತನುರ್ದೃಷ್ಟವಾನ್ನೃಪಃ।।

ಒಮ್ಮೆ ಒಂದು ಜಿಂಕೆಯನ್ನು ಹೊಡೆದು ಅದನ್ನು ಅನುಸರಿಸುತ್ತಾ ಗಂಗಾನದೀತೀರದಲ್ಲಿ ಹೋಗುತ್ತಿರುವಾಗ ನೃಪ ಶಾಂತನುವು ಭಾಗಿರಥಿಯಲ್ಲಿನ ನೀರು ತುಂಬಾ ಕಡಿಮೆಯಾದದ್ದನ್ನು ಗಮನಿಸಿದನು.

01094022a ತಾಂ ದೃಷ್ಟ್ವಾ ಚಿಂತಯಾಮಾಸ ಶಂತನುಃ ಪುರುಷರ್ಷಭಃ।
01094022c ಸ್ಯಂದತೇ ಕಿಂ ನ್ವಿಯಂ ನಾದ್ಯ ಸರಿಚ್ಛ್ರೇಷ್ಠಾ ಯಥಾ ಪುರಾ।।

ಅದನ್ನು ನೋಡಿ ಪುರುಷರ್ಷಭ ಶಂತನುವು “ಯಾವ ಕಾರಣದಿಂದಾಗಿ ನದಿಗಳಲ್ಲೆಲ್ಲ ಶ್ರೇಷ್ಠ ನದಿಯು ಮೊದಲಿನ ಹಾಗೆ ಹರಿಯುತ್ತಿಲ್ಲ?” ಎಂದು ಚಿಂತಿಸಿದನು.

01094023a ತತೋ ನಿಮಿತ್ತಮನ್ವಿಚ್ಛನ್ದದರ್ಶ ಸ ಮಹಾಮನಾಃ।
01094023c ಕುಮಾರಂ ರೂಪಸಂಪನ್ನಂ ಬೃಹಂತಂ ಚಾರುದರ್ಶನಂ।।
01094024a ದಿವ್ಯಮಸ್ತ್ರಂ ವಿಕುರ್ವಾಣಂ ಯಥಾ ದೇವಂ ಪುರಂದರಂ।
01094024c ಕೃತ್ಸ್ನಾಂ ಗಂಗಾಂ ಸಮಾವೃತ್ಯ ಶರೈಸ್ತೀಕ್ಷ್ಣೈರವಸ್ಥಿತಂ।।

ಇದರ ಕಾರಣವೇನಿರಬಹುದೆಂದು ಹುಡುಕುತ್ತಿದ್ದ ಆ ಮಹಾಮನನು ಅತಿಗಾತ್ರಿ, ರೂಪಸಂಪನ್ನ, ನೋಡಲು ಸುಂದರನಾದ ಕುಮಾರನೋರ್ವನು ದಿವ್ಯ ಬಿಲ್ಲನ್ನು ಹಿಡಿದು ದೇವ ಪುರಂದರನಂತೆ ತೀಕ್ಷ್ಣ ಶರಗಳಿಂದ ಇಡೀ ಗಂಗೆಯನ್ನೇ ತಡೆಹಿಡಿದಿದ್ದುದನ್ನು ಕಂಡನು.

01094025a ತಾಂ ಶರೈರಾವೃತಾಂ ದೃಷ್ಟ್ವಾ ನದೀಂ ಗಂಗಾಂ ತದಂತಿಕೇ।
01094025c ಅಭವದ್ವಿಸ್ಮಿತೋ ರಾಜಾ ಕರ್ಮ ದೃಷ್ಟ್ವಾತಿಮಾನುಷಂ।।

ಬಾಣಗಳಿಂದ ಆವೃತಗೊಂಡು ತಡೆಹಿಡಿಯಲ್ಪಟ್ಟ ಗಂಗಾನದಿಯನ್ನು ಮತ್ತು ಆ ಅತಿ ಮಾನುಷ ಕರ್ಮವನ್ನು ಕಂಡ ರಾಜನು ವಿಸ್ಮಿತನಾದನು.

01094026a ಜಾತಮಾತ್ರಂ ಪುರಾ ದೃಷ್ಟಂ ತಂ ಪುತ್ರಂ ಶಂತನುಸ್ತದಾ।
01094026c ನೋಪಲೇಭೇ ಸ್ಮೃತಿಂ ಧೀಮಾನಭಿಜ್ಞಾತುಂ ತಮಾತ್ಮಜಂ।।

ಹಿಂದೆ ಹುಟ್ಟಿದಾಗ ಮಾತ್ರ ನೋಡಿದ್ದ ತನ್ನ ಪುತ್ರನನ್ನು ಧೀಮಂತ ಶಂತನುವು ತನ್ನದೇ ಪುತ್ರನೆಂದು ನೆನಪಿಸಿ ಗುರುತಿಸಲು ಅಶಕ್ಯನಾದನು.

01094027a ಸ ತು ತಂ ಪಿತರಂ ದೃಷ್ಟ್ವಾ ಮೋಹಯಾಮಾಸ ಮಾಯಯಾ।
01094027c ಸಮ್ಮೋಹ್ಯ ತು ತತಃ ಕ್ಷಿಪ್ರಂ ತತ್ರೈವಾಂತರಧೀಯತ।।

ಆದರೆ ಅವನ ಮಗನು ತನ್ನ ತಂದೆಯನ್ನು ಕಂಡು ಮಾಯೆಯಿಂದ ಅವನನ್ನು ಮೋಹಿಸಿ ಸಂಮೋಹನನನ್ನಾಗಿ ಮಾಡಿ ತಕ್ಷಣವೇ ಅಲ್ಲಿಂದ ಅಂತರ್ಧಾನನಾದನು.

01094028a ತದದ್ಭುತಂ ತದಾ ದೃಷ್ಟ್ವಾ ತತ್ರ ರಾಜಾ ಸ ಶಂತನುಃ।
01094028c ಶಂಕಮಾನಃ ಸುತಂ ಗಂಗಾಮಬ್ರವೀದ್ದರ್ಶಯೇತಿ ಹ।।

ಆ ಅದ್ಭುತವನ್ನು ಕಂಡ ರಾಜ ಶಂತನುವು ಅನುಮಾನಗೊಂಡು “ಮಗನನ್ನು ತೋರಿಸು!”ಎಂದು ಗಂಗೆಗೆ ಹೇಳಿದನು.

01094029a ದರ್ಶಯಾಮಾಸ ತಂ ಗಂಗಾ ಬಿಭ್ರತೀ ರೂಪಮುತ್ತಮಂ।
01094029c ಗೃಹೀತ್ವಾ ದಕ್ಷಿಣೇ ಪಾಣೌ ತಂ ಕುಮಾರಮಲಂಕೃತಂ।।

ಉತ್ತಮ ರೂಪದಿಂದ ಹೊಳೆಯುತ್ತಾ ಅಲಂಕೃತ ಕುಮಾರನ ಕೈಗಳನ್ನು ತನ್ನ ಬಲಗೈಯಲ್ಲಿ ಹಿಡಿದು ಗಂಗೆಯು ಕಾಣಿಸಿಕೊಂಡಳು.

01094030a ಅಲಂಕೃತಾಮಾಭರಣೈರರಜೋಂಬರಧಾರಿಣೀಂ।
01094030c ದೃಷ್ಟಪೂರ್ವಾಮಪಿ ಸತೀಂ ನಾಭ್ಯಜಾನಾತ್ಸ ಶಂತನುಃ।।

ಆಭರಣಗಳಿಂದ ಅಲಂಕೃತಳಾದ, ಧೂಳೇ ಇಲ್ಲದ ವಸ್ತ್ರಗಳನ್ನು ಧರಿಸಿದ ಸತಿಯನ್ನು ಹಿಂದೆ ನೋಡಿದ್ದರೂ ಸಹ ಶಂತನುವಿಗೆ ಗುರುತಿಸಲಾಗಲಿಲ್ಲ.

01094031 ಗಂಗೋವಾಚ।
01094031a ಯಂ ಪುತ್ರಮಷ್ಟಮಂ ರಾಜಂಸ್ತ್ವಂ ಪುರಾ ಮಯ್ಯಜಾಯಿಥಾಃ।
01094031c ಸ ತೇಽಯಂ ಪುರುಷವ್ಯಾಘ್ರ ನಯಸ್ವೈನಂ ಗೃಹಾಂತಿಕಂ।।

ಗಂಗೆಯು ಹೇಳಿದಳು: “ಪುರುಷವ್ಯಾಘ್ರ ರಾಜನ್! ನನ್ನಲ್ಲಿ ಹಿಂದೆ ಜನಿಸಿದ ನಿನ್ನ ಅಷ್ಟಮ ಪುತ್ರನನ್ನು ನಿನ್ನ ಮನೆಗೆ ಕರೆದುಕೊಂಡು ಹೋಗು.

01094032a ವೇದಾನಧಿಜಗೇ ಸಾಂಗಾನ್ವಸಿಷ್ಠಾದೇವ ವೀರ್ಯವಾನ್।
01094032c ಕೃತಾಸ್ತ್ರಃ ಪರಮೇಷ್ವಾಸೋ ದೇವರಾಜಸಮೋ ಯುಧಿ।।

ಇವನು ವಸಿಷ್ಠನಿಂದ ಶಾಖೆಗಳ ಸಹಿತ ವೇದಗಳನ್ನು ಕಲಿತಿದ್ದಾನೆ ಮತ್ತು ಯುದ್ಧದಲ್ಲಿ ದೇವರಾಜನಿಗೆ ಸಮನಾದ ಕೃತಾಸ್ತ್ರನೂ ಪರಮೇಷ್ವಾಸನೂ ಆಗಿದ್ದಾನೆ.

01094033a ಸುರಾಣಾಂ ಸಮ್ಮತೋ ನಿತ್ಯಮಸುರಾಣಾಂ ಚ ಭಾರತ।
01094033c ಉಶನಾ ವೇದ ಯಚ್ಛಾಸ್ತ್ರಮಯಂ ತದ್ವೇದ ಸರ್ವಶಃ।।

ಭಾರತ! ಸುರ-ಅಸುರರಿಂದ ನಿತ್ಯವೂ ಗೌರವಿಸಲ್ಪಟ್ಟ ಉಶಾನನಲ್ಲಿದ್ದ ಸರ್ವ ವೇದ ಶಾಸ್ತ್ರಗಳೂ ಇವನಲ್ಲಿವೆ.

01094034a ತಥೈವಾಂಗಿರಸಃ ಪುತ್ರಃ ಸುರಾಸುರನಮಸ್ಕೃತಃ।
01094034c ಯದ್ವೇದ ಶಾಸ್ತ್ರಂ ತಚ್ಚಾಪಿ ಕೃತ್ಸ್ನಮಸ್ಮಿನ್ಪ್ರತಿಷ್ಠಿತಂ।
01094034e ತವ ಪುತ್ರೇ ಮಹಾಬಾಹೌ ಸಾಂಗೋಪಾಂಗಂ ಮಹಾತ್ಮನಿ।।

ಮಹಾಬಾಹುವೂ ಮಹಾತ್ಮನೂ ಆದ ನಿನ್ನ ಈ ಪುತ್ರನಲ್ಲಿ ಸುರಾಸುರನಮಸ್ಕೃತ ಆಂಗಿರಸ ಪುತ್ರನು ತಿಳಿದಿರುವ ವೇದ ಶಾಸ್ತ್ರಗಳೆಲ್ಲವೂ ಸಹ ಇವೆ.

01094035a ಋಷಿಃ ಪರೈರನಾಧೃಷ್ಯೋ ಜಾಮದಗ್ನ್ಯಃ ಪ್ರತಾಪವಾನ್।
01094035c ಯದಸ್ತ್ರಂ ವೇದ ರಾಮಶ್ಚ ತದಪ್ಯಸ್ಮಿನ್ಪ್ರತಿಷ್ಠಿತಂ।।

ಯಾರಿಂದಲೂ ಅಪರಾಜಿತನಾಗದೇ ಇದ್ದ ಪ್ರತಾಪವಾನ್ ಜಮದಗ್ನಿಯ ಮಗ ಋಷಿ ರಾಮನಿಗೆ ತಿಳಿದಿದ್ದ ಎಲ್ಲ ಅಸ್ತ್ರಗಳೂ ಇವನಲ್ಲಿವೆ.

01094036a ಮಹೇಷ್ವಾಸಮಿಮಂ ರಾಜನ್ರಾಜಧರ್ಮಾರ್ಥಕೋವಿದಂ।
01094036c ಮಯಾ ದತ್ತಂ ನಿಜಂ ಪುತ್ರಂ ವೀರಂ ವೀರ ಗೃಹಾನ್ನಯ।।

ರಾಜನ್! ರಾಜಧರ್ಮಾರ್ಥಕೋವಿದ ಈ ಮಹೇಷ್ವಾಸನು ನಾನು ನಿನಗಿತ್ತ ನಿಜ ಪುತ್ರ. ವೀರ! ಈ ವೀರನನ್ನು ಮನೆಗೆ ಕರೆದುಕೊಂಡು ಹೋಗು.””

01094037 ವೈಶಂಪಾಯನ ಉವಾಚ।
01094037a ತಯೈವಂ ಸಮನುಜ್ಞಾತಃ ಪುತ್ರಮಾದಾಯ ಶಂತನುಃ।
01094037c ಭ್ರಾಜಮಾನಂ ಯಥಾದಿತ್ಯಮಾಯಯೌ ಸ್ವಪುರಂ ಪ್ರತಿ।।

ವೈಶಂಪಾಯನನು ಹೇಳಿದನು: “ಈ ರೀತಿ ಅವಳಿಂದ ಅನುಜ್ಞೆಯನ್ನು ಪಡೆದ ಶಂತನುವು ಆದಿತ್ಯನಂತೆ ಬೆಳಗುತ್ತಿರುವ ಪುತ್ರನನ್ನು ಕರೆದುಕೊಂಡು ತನ್ನ ನಗರವನ್ನು ಸೇರಿದನು.

01094038a ಪೌರವಃ ಸ್ವಪುರಂ ಗತ್ವಾ ಪುರಂದರಪುರೋಪಮಂ।
01094038c ಸರ್ವಕಾಮಸಮೃದ್ಧಾರ್ಥಂ ಮೇನೇ ಆತ್ಮಾನಮಾತ್ಮನಾ।
01094038e ಪೌರವೇಷು ತತಃ ಪುತ್ರಂ ಯೌವರಾಜ್ಯೇಽಭ್ಯಷೇಚಯತ್।।
01094039a ಪೌರವಾಂಶಂತನೋಃ ಪುತ್ರಃ ಪಿತರಂ ಚ ಮಹಾಯಶಾಃ।
01094039c ರಾಷ್ಟ್ರಂ ಚ ರಂಜಯಾಮಾಸ ವೃತ್ತೇನ ಭರತರ್ಷಭ।।

ಪುರಂದರಪುರದಂತಿದ್ದ ತನ್ನ ನಗರವನ್ನು ಸೇರಿದ ಪೌರವನು ಸರ್ವಕಾಮಗಳೂ ಪೂರೈಸಿದವೆಂದು ತನ್ನಲ್ಲಿಯೇ ಯೋಚಿಸಿದನು. ನಂತರ ತನ್ನ ಪುತ್ರನಿಗೆ ಪೌರವರ ಯುವರಾಜನನ್ನಾಗಿ ಅಭಿಷೇಕವನ್ನು ನೆರವೇರಿಸಿದನು. ಭರತರ್ಷಭ! ಆ ಪೌರವ ಶಂತನುವಿನ ಮಹಾಯಶಸ್ವಿ ಪುತ್ರನು ತನ್ನ ತಂದೆ, ರಾಷ್ಟ್ರ ಮತ್ತು ಪುರಜನರೆಲ್ಲರನ್ನೂ ರಂಜಿಸಿದನು.

01094040a ಸ ತಥಾ ಸಹ ಪುತ್ರೇಣ ರಮಮಾಣೋ ಮಹೀಪತಿಃ।
01094040c ವರ್ತಯಾಮಾಸ ವರ್ಷಾಣಿ ಚತ್ವಾರ್ಯಮಿತವಿಕ್ರಮಃ।।

ಹೀಗೆ ಅಮಿತವಿಕ್ರಮಿ ಮಹೀಪತಿಯು ತನ್ನ ಪುತ್ರನೊಂದಿಗೆ ಸಂತೋಷದಿಂದ ನಾಲ್ಕು ವರ್ಷಗಳನ್ನು ಕಳೆದನು.

01094041a ಸ ಕದಾ ಚಿದ್ವನಂ ಯಾತೋ ಯಮುನಾಮಭಿತೋ ನದೀಂ।
01094041c ಮಹೀಪತಿರನಿರ್ದೇಶ್ಯಮಾಜಿಘ್ರದ್ಗಂಧಮುತ್ತಮಂ।।

ಒಮ್ಮೆ ಮಹೀಪತಿಯು ಯಮುನಾನದಿಯ ಬಳಿಯ ವನಕ್ಕೆ ಹೋದಾಗ ಒಂದು ಅನಿರ್ದಿಷ್ಟ ಉತ್ತಮ ಸುಗಂಧವನ್ನು ಆಘ್ರಾಣಿಸಿದನು.

01094042a ತಸ್ಯ ಪ್ರಭವಮನ್ವಿಚ್ಛನ್ವಿಚಚಾರ ಸಮಂತತಃ।
01094042c ಸ ದದರ್ಶ ತದಾ ಕನ್ಯಾಂ ದಾಶಾನಾಂ ದೇವರೂಪಿಣೀಂ।।

ಅದರ ಮೂಲವನ್ನು ಅರಸುತ್ತಾ ಎಲ್ಲೆಡೆಯೂ ಅಲೆದಾಡಿ ದೇವರೂಪಿಣಿ ದಾಶ ಕನ್ಯೆಯೋರ್ವಳನ್ನು ಕಂಡನು.

01094043a ತಾಮಪೃಚ್ಛತ್ಸ ದೃಷ್ಟ್ವೈವ ಕನ್ಯಾಮಸಿತಲೋಚನಾಂ।
01094043c ಕಸ್ಯ ತ್ವಮಸಿ ಕಾ ಚಾಸಿ ಕಿಂ ಚ ಭೀರು ಚಿಕೀರ್ಷಸಿ।।

ಆ ಅಸಿತಲೋಚನೆ ಕನ್ಯೆಯನ್ನು ನೋಡಿದಾಕ್ಷಣವೇ ಅವಳಲ್ಲಿ ಕೇಳಿದನು: “ಭೀರು! ನೀನು ಯಾರವಳು ಮತ್ತು ನೀನು ಇಲ್ಲಿ ಏನು ಮಾಡುತ್ತಿರುವೆ?”

01094044a ಸಾಬ್ರವೀದ್ದಾಶಕನ್ಯಾಸ್ಮಿ ಧರ್ಮಾರ್ಥಂ ವಾಹಯೇ ತರೀಂ।
01094044c ಪಿತುರ್ನಿಯೋಗಾದ್ಭದ್ರಂ ತೇ ದಾಶರಾಜ್ಞೋ ಮಹಾತ್ಮನಃ।।

ಅವಳು ಹೇಳಿದಳು: “ನಾನು ಓರ್ವ ದಾಶಕನ್ಯೆ. ನನ್ನ ತಂದೆ ಮಹಾತ್ಮ ದಾಶರಾಜನ ಆದೇಶದಂತೆ ಧರ್ಮಾರ್ಥ ದೋಣಿಯನ್ನು ನಡೆಸುತ್ತಿದ್ದೇನೆ. ನಿನಗೆ ಮಂಗಳವಾಗಲಿ.”

01094045a ರೂಪಮಾಧುರ್ಯಗಂಧೈಸ್ತಾಂ ಸಂಯುಕ್ತಾಂ ದೇವರೂಪಿಣೀಂ।
01094045c ಸಮೀಕ್ಷ್ಯ ರಾಜಾ ದಾಶೇಯೀಂ ಕಾಮಯಾಮಾಸ ಶಂತನುಃ।।

ರೂಪ, ಮಾಧುರ್ಯ, ಮತ್ತು ಸುಗಂಧ ಸಂಯುಕ್ತೆ ಆ ದೇವರೂಪಿಣಿ ದಾಶೇಯಿಯನ್ನು ನೋಡಿದ ರಾಜ ಶಂತನುವು ಅವಳನ್ನು ಬಯಸಿದನು.

01094046a ಸ ಗತ್ವಾ ಪಿತರಂ ತಸ್ಯಾ ವರಯಾಮಾಸ ತಾಂ ತದಾ।
01094046c ಪರ್ಯಪೃಚ್ಛತ್ತತಸ್ತಸ್ಯಾಃ ಪಿತರಂ ಚಾತ್ಮಕಾರಣಾತ್।।

ಅವಳ ತಂದೆಯಲ್ಲಿಗೆ ಹೋಗಿ ಅವಳನ್ನು ತನಗಾಗಿ ಅವಳ ತಂದೆಯಿಂದ ಕೇಳಿದನು.

01094047a ಸ ಚ ತಂ ಪ್ರತ್ಯುವಾಚೇದಂ ದಾಶರಾಜೋ ಮಹೀಪತಿಂ।
01094047c ಜಾತಮಾತ್ರೈವ ಮೇ ದೇಯಾ ವರಾಯ ವರವರ್ಣಿನೀ।
01094047e ಹೃದಿ ಕಾಮಸ್ತು ಮೇ ಕಶ್ಚಿತ್ತಂ ನಿಬೋಧ ಜನೇಶ್ವರ।।

ಆಗ ದಾಶರಾಜನು ಮಹೀಪತಿಗೆ ಹೇಳಿದನು: “ಜನೇಶ್ವರ! ಇವಳು ಹುಟ್ಟಿದಾಗಲೇ ಈ ವರವರ್ಣಿನಿಯನ್ನು ವರನೋರ್ವನಿಗೆ ಕೊಡಲೇ ಬೇಕು ಎನ್ನುವುದನ್ನು ತಿಳಿದಿದ್ದೆ. ಆದರೆ ಆಗಲೇ ನನ್ನ ಹೃದಯದಲ್ಲಿ ಯಾರಿಗೂ ಹೇಳದ ಆಸೆಯೊಂದಿತ್ತು. ಅದನ್ನು ಕೇಳು.

01094048a ಯದೀಮಾಂ ಧರ್ಮಪತ್ನೀಂ ತ್ವಂ ಮತ್ತಃ ಪ್ರಾರ್ಥಯಸೇಽನಘ।
01094048c ಸತ್ಯವಾಗಸಿ ಸತ್ಯೇನ ಸಮಯಂ ಕುರು ಮೇ ತತಃ।।

ಅನಘ! ಒಂದುವೇಳೆ ನೀನು ಇವಳನ್ನು ನಿನ್ನ ಧರ್ಮಪತ್ನಿಯಾಗಿ ಕೇಳುತ್ತಿರುವೆಯಾದರೆ ಸತ್ಯವಂತನಾಗಿ ನನ್ನಲ್ಲಿ ನಿಜವಾದ ಒಪ್ಪಂದವೊಂದನ್ನು ಮಾಡಿಕೋ.

01094049a ಸಮಯೇನ ಪ್ರದದ್ಯಾಂ ತೇ ಕನ್ಯಾಮಹಮಿಮಾಂ ನೃಪ।
01094049c ನ ಹಿ ಮೇ ತ್ವತ್ಸಮಃ ಕಶ್ಚಿದ್ವರೋ ಜಾತು ಭವಿಷ್ಯತಿ।।

ನೃಪ! ಒಪ್ಪಂದವಾದರೆ ಈ ಕನ್ಯೆಯನ್ನು ನಿನಗೆ ಕೊಡುತ್ತೇನೆ. ನನಗೆ ನಿನ್ನಂಥ ವರನು ಎಂದೂ ದೊರೆಯಲಿಕ್ಕಿಲ್ಲ.”

01094050 ಶಂತನುರುವಾಚ।
01094050a ಶ್ರುತ್ವಾ ತವ ವರಂ ದಾಶ ವ್ಯವಸ್ಯೇಯಮಹಂ ನ ವಾ।
01094050c ದಾತವ್ಯಂ ಚೇತ್ಪ್ರದಾಸ್ಯಾಮಿ ನ ತ್ವದೇಯಂ ಕಥಂ ಚನ।।

ಶಂತನುವು ಹೇಳಿದನು: “ದಾಶ! ನೀನು ಕೇಳುವ ವರವನ್ನು ಕೇಳಿದ ನಂತರವೇ ಅದರ ಪರವಾಗಿ ಅಥವಾ ವಿರುದ್ಧವಾಗಿ ನಿಶ್ಚಯಿಸುತ್ತೇನೆ. ಕೊಡುವಂಥಹುದಾದರೆ ಕೊಡುತ್ತೇನೆ. ಕೊಡುವಂಥಹುದಲ್ಲದಿದ್ದರೆ ಖಂಡಿತವಾಗಿಯೂ ಕೊಡುವುದಿಲ್ಲ.”

01094051 ದಾಶ ಉವಾಚ।
01094051a ಅಸ್ಯಾಂ ಜಾಯೇತ ಯಃ ಪುತ್ರಃ ಸ ರಾಜಾ ಪೃಥಿವೀಪತಿಃ।
01094051c ತ್ವದೂರ್ಧ್ವಮಭಿಷೇಕ್ತವ್ಯೋ ನಾನ್ಯಃ ಕಶ್ಚನ ಪಾರ್ಥಿವ।।

ದಾಶನು ಹೇಳಿದನು: “ಪೃಥಿವೀಪತಿ ಪಾರ್ಥಿವ! ಇವಳಲ್ಲಿ ಯಾರು ಪುತ್ರನಾಗಿ ಹುಟ್ಟುತ್ತಾನೋ ಅವನನ್ನೇ ನಿನ್ನ ನಂತರದ ರಾಜನನ್ನಾಗಿ ಅಭಿಷೇಕಿಸಬೇಕು. ಬೇರೆ ಯಾರೂ ಎಂದೂ ರಾಜನಾಗಬಾರದು.””

01094052 ವೈಶಂಪಾಯನ ಉವಾಚ।
01094052a ನಾಕಾಮಯತ ತಂ ದಾತುಂ ವರಂ ದಾಶಾಯ ಶಂತನುಃ।
01094052c ಶರೀರಜೇನ ತೀವ್ರೇಣ ದಹ್ಯಮಾನೋಽಪಿ ಭಾರತ।।

ವೈಶಂಪಾಯನನು ಹೇಳಿದನು: “ಭಾರತ! ಶರೀರಜ್ವರದಿಂದ ತೀವ್ರವಾಗಿ ಸುಡುತ್ತಿದ್ದರೂ ಶಂತನುವು ದಾಶನಿಗೆ ಆ ವರವನ್ನು ಕೊಡಲು ಇಷ್ಟಪಡಲಿಲ್ಲ.

01094053a ಸ ಚಿಂತಯನ್ನೇವ ತದಾ ದಾಶಕನ್ಯಾಂ ಮಹೀಪತಿಃ।
01094053c ಪ್ರತ್ಯಯಾದ್ಧಾಸ್ತಿನಪುರಂ ಶೋಕೋಪಹತಚೇತನಃ।।

ದಾಶಕನ್ಯೆಯ ಕುರಿತೇ ಯೋಚಿಸುತ್ತಾ ಶೋಕದಿಂದ ಹತಚೇತನನಾಗಿ ಮಹೀಪತಿಯು ಹಸ್ತಿನಾಪುರಕ್ಕೆ ಹಿಂದಿರುಗಿದನು.

01094054a ತತಃ ಕದಾ ಚಿತ್ ಶೋಚಂತಂ ಶಂತನುಂ ಧ್ಯಾನಮಾಸ್ಥಿತಂ।
01094054c ಪುತ್ರೋ ದೇವವ್ರತೋಽಭ್ಯೇತ್ಯ ಪಿತರಂ ವಾಕ್ಯಮಬ್ರವೀತ್।।

ಒಮ್ಮೆ ಪುತ್ರ ದೇವವ್ರತನು ಚಿಂತೆ-ಶೋಕಗಳಿಂದ ಯೋಚನಾ ಮಗ್ನನಾಗಿದ್ದ ಶಂತನುವಿನ ಬಳಿಬಂದು ತಂದೆಯನ್ನುದ್ದೇಶಿಸಿ ಹೇಳಿದನು:

01094055a ಸರ್ವತೋ ಭವತಃ ಕ್ಷೇಮಂ ವಿಧೇಯಾಃ ಸರ್ವಪಾರ್ಥಿವಾಃ।
01094055c ತತ್ಕಿಮರ್ಥಮಿಹಾಭೀಕ್ಷ್ಣಂ ಪರಿಶೋಚಸಿ ದುಃಖಿತಃ।
01094055e ಧ್ಯಾಯನ್ನಿವ ಚ ಕಿಂ ರಾಜನ್ನಾಭಿಭಾಷಸಿ ಕಿಂ ಚನ।।

“ಎಲ್ಲ ಕಡೆಯಿಂದಲೂ ನೀನು ಕ್ಷೇಮದಿಂದಿದ್ದೀಯೆ. ಸರ್ವ ಪಾರ್ಥಿವರೂ ನಿನಗೆ ವಿಧೇಯರಾಗಿದ್ದಾರೆ. ಹೀಗಿರುವಾಗ ಯಾವ ಕಾರಣದಿಂದ ನೀನು ಈ ರೀತಿ ತುಂಬಾ ನೋವಿನಿಂದಿರುವಂತೆ ದುಃಖಿತನಾಗಿ ಚಿಂತಿಸುತ್ತಿರುವೆ? ರಾಜನ್! ಏನೂ ಮಾತನಾಡದೇ ಯಾವುದರ ಧ್ಯಾನದಲ್ಲಿ ತೊಡಗಿದ್ದೀಯೆ?”

01094056a ಏವಮುಕ್ತಃ ಸ ಪುತ್ರೇಣ ಶಂತನುಃ ಪ್ರತ್ಯಭಾಷತ।
01094056c ಅಸಂಶಯಂ ಧ್ಯಾನಪರಂ ಯಥಾ ಮಾತ್ಥ ತಥಾಸ್ಮ್ಯುತ।।

ಈ ರೀತಿ ಕೇಳಿದ ಪುತ್ರನಿಗೆ ಶಂತನುವು ಉತ್ತರಿಸಿದನು: “ನೀನು ಹೇಳಿದ ಹಾಗೆ ನಿಸ್ಸಂಶಯವಾಗಿಯೂ ನಾನು ಏನನ್ನೋ ಯೋಚಿಸುತ್ತಿದ್ದೇನೆ.

01094057a ಅಪತ್ಯಂ ನಸ್ತ್ವಮೇವೈಕಃ ಕುಲೇ ಮಹತಿ ಭಾರತ।
01094057c ಅನಿತ್ಯತಾ ಚ ಮರ್ತ್ಯಾನಾಮತಃ ಶೋಚಾಮಿ ಪುತ್ರಕ।।

ಭಾರತ! ಈ ಮಹಾಕುಲದಲ್ಲಿ ನೀನೊಬ್ಬನೇ ನನ್ನ ಮಗ. ಪುತ್ರಕ! ನಮ್ಮಂಥಹ ಮರ್ತ್ಯರ ಅನಿತ್ಯತೆಯ ಕುರಿತು ಶೋಕಿಸುತ್ತಿದ್ದೇನೆ.

01094058a ಕಥಂ ಚಿತ್ತವ ಗಾಂಗೇಯ ವಿಪತ್ತೌ ನಾಸ್ತಿ ನಃ ಕುಲಂ।
01094058c ಅಸಂಶಯಂ ತ್ವಮೇವೈಕಃ ಶತಾದಪಿ ವರಃ ಸುತಃ।।
01094059a ನ ಚಾಪ್ಯಹಂ ವೃಥಾ ಭೂಯೋ ದಾರಾನ್ಕರ್ತುಮಿಹೋತ್ಸಹೇ।
01094059c ಸಂತಾನಸ್ಯಾವಿನಾಶಾಯ ಕಾಮಯೇ ಭದ್ರಮಸ್ತು ತೇ।
01094059e ಅನಪತ್ಯತೈಕಪುತ್ರತ್ವಮಿತ್ಯಾಹುರ್ಧರ್ಮವಾದಿನಃ।।

ಗಾಂಗೇಯ! ನಿನಗೇನಾದರೂ ವಿಪತ್ತು ಬಂದರೆ ಈ ಕುಲವೇ ಇಲ್ಲವಾಗುತ್ತದೆ. ನಿಸ್ಸಂಶಯವಾಗಿಯೂ ನೀನೊಬ್ಬನೇ ನೂರು ಪುತ್ರರಿಗಿಂತಲೂ ಶ್ರೇಷ್ಠ. ನಾನೂ ಕೂಡ ವೃಥಾ ಇನ್ನೊಬ್ಬಳು ಪತ್ನಿಯನ್ನು ಮಾಡಿಕೊಳ್ಳಲು ಉತ್ಸುಕನಾಗಿಲ್ಲ. ಆದರೂ ನಾನು ಸಂತಾನವು ವಿನಾಶವಾಗಬಾರದೆಂದು ಬಯಸುತ್ತೇನೆ. ನಿನಗೆ ಮಂಗಳವಾಗಲಿ. ಒಂದೇ ಮಗನನ್ನು ಹೊಂದಿರುವುದು ಮತ್ತು ಮಕ್ಕಳನ್ನೇ ಪಡೆಯದಿರುವುದು ಇವೆರಡೂ ಒಂದೇ ಎಂದು ಧರ್ಮವಾದಿಗಳು ಹೇಳುತ್ತಾರೆ.

01094060a ಅಗ್ನಿಹೋತ್ರಂ ತ್ರಯೋ ವೇದಾ ಯಜ್ಞಾಶ್ಚ ಸಹದಕ್ಷಿಣಾಃ।
01094060c ಸರ್ವಾಣ್ಯೇತಾನ್ಯಪತ್ಯಸ್ಯ ಕಲಾಂ ನಾರ್ಹಂತಿ ಷೋಡಶೀಂ।।

ಅಗ್ನಿಹೋತ್ರ, ಮೂರು ವೇದಗಳು, ಮತ್ತು ದಕ್ಷಿಣೆಯುಕ್ತ ಯಜ್ಞ ಇವುಗಳೆಲ್ಲವನ್ನೂ ಸೇರಿಸಿದರೂ ಮಗನ ಹದಿನಾರರ ಒಂದಂಶದ ಯೋಗ್ಯತೆಯನ್ನು ಪಡೆಯುವುದಿಲ್ಲ.

01094061a ಏವಮೇವ ಮನುಷ್ಯೇಷು ಸ್ಯಾಚ್ಚ ಸರ್ವಪ್ರಜಾಸ್ವಪಿ।
01094061c ಯದಪತ್ಯಂ ಮಹಾಪ್ರಾಜ್ಞ ತತ್ರ ಮೇ ನಾಸ್ತಿ ಸಂಶಯಃ।
01094061e ಏಷಾ ತ್ರಯೀ ಪುರಾಣಾನಾಮುತ್ತಮಾನಾಂ ಚ ಶಾಶ್ವತೀ।।

ಮಹಾಪ್ರಾಜ್ಞ! ಪುತ್ರನನ್ನು ಹೊಂದುವುದು ಸರ್ವ ಪ್ರಜೆಗಳಲ್ಲಿದ್ದಂತೆ ಮನುಷ್ಯನಲ್ಲಿಯೂ ಕೂಡ ಇದೆ ಎನ್ನುವುದರಲ್ಲಿ ನನಗೆ ಸ್ವಲ್ಪವೂ ಸಂಶಯವಿಲ್ಲ. ಇದು ಪುರಾಣಗಳಲ್ಲಿರುವ ಅನುತ್ತಮ ಶಾಶ್ವತ ವಿಚಾರ.

01094062a ತ್ವಂ ಚ ಶೂರಃ ಸದಾಮರ್ಷೀ ಶಸ್ತ್ರನಿತ್ಯಶ್ಚ ಭಾರತ।
01094062c ನಾನ್ಯತ್ರ ಶಸ್ತ್ರಾತ್ತಸ್ಮಾತ್ತೇ ನಿಧನಂ ವಿದ್ಯತೇಽನಘ।।

ಭಾರತ! ನೀನಾದರೂ ಶೂರ, ಸದಾಮರ್ಷಿ ಮತ್ತು ಶಸ್ತ್ರನಿತ್ಯ. ಅನಘ! ಶಸ್ತ್ರದ ಹೊರತು ಬೇರೆ ಯಾವುದರಿಂದಲೂ ನಿನಗೆ ಸಾವಾಗಲಾರದು.

01094063a ಸೋಽಸ್ಮಿ ಸಂಶಯಮಾಪನ್ನಸ್ತ್ವಯಿ ಶಾಂತೇ ಕಥಂ ಭವೇತ್।
01094063c ಇತಿ ತೇ ಕಾರಣಂ ತಾತ ದುಃಖಸ್ಯೋಕ್ತಮಶೇಷತಃ।।

ನಿನಗೇನಾದರೂ ಆಪತ್ತಾಗಬಹುದೆಂಬ ಸಂಶವಿದ್ದಾಗ ನಾನು ಹೇಗೆ ತಾನೆ ಶಾಂತನಾಗಿರಲಿ? ಮಗೂ ಇದೇ ನನ್ನ ದುಃಖದ ಸಂಪೂರ್ಣ ಕಾರಣ.”

01094064a ತತಸ್ತತ್ಕಾರಣಂ ಜ್ಞಾತ್ವಾ ಕೃತ್ಸ್ನಂ ಚೈವಮಶೇಷತಃ।
01094064c ದೇವವ್ರತೋ ಮಹಾಬುದ್ಧಿಃ ಪ್ರಯಯಾವನುಚಿಂತಯನ್।।

ಇದೇ ಸಂಪೂರ್ಣಕಾರಣವೆಂದು ತಿಳಿದ ಮಹಾಬುದ್ಧಿ ದೇವವ್ರತನು ಪುನರಾಲೋಚನೆಯನ್ನು ಮಾಡುತ್ತಾ ಹಿಂದಿರುಗಿದನು.

01094065a ಅಭ್ಯಗಚ್ಛತ್ತದೈವಾಶು ವೃದ್ಧಾಮಾತ್ಯಂ ಪಿತುರ್ಹಿತಂ।
01094065c ತಮಪೃಚ್ಛತ್ತದಾಭ್ಯೇತ್ಯ ಪಿತುಸ್ತತ್ ಶೋಕಕಾರಣಂ।।

ತಕ್ಷಣವೇ ತನ್ನ ತಂದೆಯ ಹಿತೈಷಿ ವೃದ್ಧ ಅಮಾತ್ಯನೋರ್ವನ ಬಳಿಬಂದು ಅವನಲ್ಲಿ ತಂದೆಯ ಶೋಕಕ್ಕೆ ಕಾರಣವನ್ನು ಕೇಳಿದನು.

01094066a ತಸ್ಮೈ ಸ ಕುರುಮುಖ್ಯಾಯ ಯಥಾವತ್ಪರಿಪೃಚ್ಛತೇ।
01094066c ವರಂ ಶಶಂಸ ಕನ್ಯಾಂ ತಾಮುದ್ದಿಶ್ಯ ಭರತರ್ಷಭ।।

ಭರತರ್ಷಭ! ಈ ರೀತಿ ಕೇಳಿದಾಗ ಅವನು ಕುರುಮುಖ್ಯನಿಗೆ ಕನ್ಯೆಯು ಕೇಳಿದ ವರದ ಕುರಿತು ಎಲ್ಲವನ್ನೂ ಹೇಳಿದನು.

01094067a ತತೋ ದೇವವ್ರತೋ ವೃದ್ಧೈಃ ಕ್ಷತ್ರಿಯೈಃ ಸಹಿತಸ್ತದಾ।
01094067c ಅಭಿಗಮ್ಯ ದಾಶರಾಜಾನಂ ಕನ್ಯಾಂ ವವ್ರೇ ಪಿತುಃ ಸ್ವಯಂ।।

ನಂತರ ದೇವವ್ರತನು ಆ ವೃದ್ಧ ಕತ್ರಿಯನ ಜೊತೆಗೂಡಿ ದಾಶರಾಜನಲ್ಲಿಗೆ ಹೋಗಿ ತಾನೇ ತನ್ನ ತಂದೆಗೆ ಆ ಕನ್ಯೆಯನ್ನು ಕೇಳಿದನು.

01094068a ತಂ ದಾಶಃ ಪ್ರತಿಜಗ್ರಾಹ ವಿಧಿವತ್ಪ್ರತಿಪೂಜ್ಯ ಚ।
01094068c ಅಬ್ರವೀಚ್ಚೈನಮಾಸೀನಂ ರಾಜಸಂಸದಿ ಭಾರತ।।

ಭಾರತ! ದಾಶನು ಅವನನ್ನು ಸ್ವಾಗತಿಸಿ ವಿಧಿವತ್ತಾಗಿ ಪೂಜಿಸಿ, ರಾಜಸಂಸದಿಯಲ್ಲಿ ಕುಳಿತಿದ್ದಾಗ ಹೇಳಿದನು:

01094069a ತ್ವಮೇವ ನಾಥಃ ಪರ್ಯಾಪ್ತಃ ಶಂತನೋಃ ಪುರುಷರ್ಷಭ।
01094069c ಪುತ್ರಃ ಪುತ್ರವತಾಂ ಶ್ರೇಷ್ಠಃ ಕಿಂ ನು ವಕ್ಷ್ಯಾಮಿ ತೇ ವಚಃ।।

“ಪುರುಷರ್ಷಭ! ನೀನು ಶಂತನುವಿಗೆ ಪರ್ಯಾಪ್ತ ನಾಥ. ಪುತ್ರವಂತರಲ್ಲಿ ಶ್ರೇಷ್ಠನಾದವನ ಪುತ್ರ. ನಿನ್ನ ಮಾತನ್ನು ನಾನು ಹೇಗೆ ವಿರೋಧಿಸಲಿ?

01094070a ಕೋ ಹಿ ಸಂಬಂಧಕಂ ಶ್ಲಾಘ್ಯಮೀಪ್ಸಿತಂ ಯೌನಮೀದೃಶಂ।
01094070c ಅತಿಕ್ರಾಮನ್ನ ತಪ್ಯೇತ ಸಾಕ್ಷಾದಪಿ ಶತಕ್ರತುಃ।।

ಯಾರುತಾನೇ ಸಾಕ್ಷಾತ್ ಶತಕ್ರತುವಿನಂತಿರುವ, ಶ್ಲಾಘನೀಯ, ಬಯಸಿದ್ದ ಕುಲದೊಂದಿಗೆ ಸಂಬಂಧವನ್ನು ಅತಿಕ್ರಮಿಸಿ ಪಶ್ಚಾತ್ತಾಪ ಹೊಂದುವುದಿಲ್ಲ?

01094071a ಅಪತ್ಯಂ ಚೈತದಾರ್ಯಸ್ಯ ಯೋ ಯುಷ್ಮಾಕಂ ಸಮೋ ಗುಣೈಃ।
01094071c ಯಸ್ಯ ಶುಕ್ರಾತ್ಸತ್ಯವತೀ ಪ್ರಾದುರ್ಭೂತಾ ಯಶಸ್ವಿನೀ।।

ಗುಣಗಳಲ್ಲಿ ನಿಮ್ಮಂಥಹ ಆರ್ಯನ ಮಗಳಿವಳು. ಅವನ ವೀರ್ಯದಿಂದ ಈ ಯಶಸ್ವಿನೀ ಸತ್ಯವತಿಯು ಜನಿಸಿದಳು.

01094072a ತೇನ ಮೇ ಬಹುಶಸ್ತಾತ ಪಿತಾ ತೇ ಪರಿಕೀರ್ತಿತಃ।
01094072c ಅರ್ಹಃ ಸತ್ಯವತೀಂ ವೋದುಂ ಸರ್ವರಾಜಸು ಭಾರತ।।

ಭಾರತ! ಮಗು! ಅವನು ನನಗೆ ಅನೇಕ ಬಾರಿ ಸರ್ವರಾಜರುಗಳಲ್ಲಿ “ಅವನೇ ಸತ್ಯವತಿಯನ್ನು ವಿವಾಹವಾಗಲು ಅರ್ಹ!” ಎಂದು ನಿನ್ನ ತಂದೆಯನ್ನು ಪ್ರಶಂಸಿಸುತ್ತಿದ್ದನು.

01094073a ಅಸಿತೋ ಹ್ಯಪಿ ದೇವರ್ಷಿಃ ಪ್ರತ್ಯಾಖ್ಯಾತಃ ಪುರಾ ಮಯಾ।
01094073c ಸತ್ಯವತ್ಯಾ ಭೃಶಂ ಹ್ಯರ್ಥೀ ಸ ಆಸೀದೃಷಿಸತ್ತಮಃ।।

ಹಿಂದೆ ಋಷಿಸತ್ತಮ ದೇವರ್ಷಿ ಅಸಿತನೂ ಕೂಡ ಸತ್ಯವತಿಯನ್ನು ತುಂಬಾ ಕೇಳಿಕೊಂಡು ಬಂದಿದ್ದ. ಆದರೆ ಅವನನ್ನೂ ನಾನು ತಿರಸ್ಕರಿಸಿದ್ದೆ.

01094074a ಕನ್ಯಾಪಿತೃತ್ವಾತ್ಕಿಂ ಚಿತ್ತು ವಕ್ಷ್ಯಾಮಿ ಭರತರ್ಷಭ।
01094074c ಬಲವತ್ಸಪತ್ನತಾಮತ್ರ ದೋಷಂ ಪಶ್ಯಾಮಿ ಕೇವಲಂ।।

ಭರತರ್ಷಭ! ಕನ್ಯೆಯ ತಂದೆಯಾಗಿ ನಾನು ನಿನ್ನಲ್ಲಿ ಕೆಲವನ್ನು ಹೇಳಬೇಕು. ಬಲವನ್! ಇಲ್ಲಿ ನಾನು ಕೇವಲ ಸಪತ್ನತ್ವದ (ದಾಯವಾದಿತ್ವದ ಅಥವಾ ಸ್ಪರ್ಧೆಯ) ದೋಷವನ್ನು ಮಾತ್ರ ಕಾಣುತ್ತಿದ್ದೇನೆ.

01094075a ಯಸ್ಯ ಹಿ ತ್ವಂ ಸಪತ್ನಃ ಸ್ಯಾ ಗಂಧರ್ವಸ್ಯಾಸುರಸ್ಯ ವಾ।
01094075c ನ ಸ ಜಾತು ಸುಖಂ ಜೀವೇತ್ತ್ವಯಿ ಕ್ರುದ್ಧೇ ಪರಂತಪ।।

ಪರಂತಪ! ನಿನಗೆ ಎದುರಾದವನು ಗಂಧರ್ವ ಅಸುರ ಯಾರೇ ಇರಲಿ, ನೀನು ಸಿಟ್ಟಾದೆಯೆಂದರೆ ಅವನು ಎಂದೂ ಸುಖದಿಂದಿರಲು ಸಾಧ್ಯವಿಲ್ಲ.

01094076a ಏತಾವಾನತ್ರ ದೋಷೋ ಹಿ ನಾನ್ಯಃ ಕಶ್ಚನ ಪಾರ್ಥಿವ।
01094076c ಏತಜ್ಜಾನೀಹಿ ಭದ್ರಂ ತೇ ದಾನಾದಾನೇ ಪರಂತಪ।।

ಪಾರ್ಥಿವ! ಇಷ್ಟೇ ದೋಷವು ನನಗೆ ತೋರುತ್ತಿದೆ. ಬೇರೆ ಏನೂ ಇಲ್ಲ. ಪರಂತಪ! ಕೊಡುವುದು ತೆಗೆದುಕೊಳ್ಳುವುದರಲ್ಲಿ ನಿನಗೆ ಮಂಗಳವಾಗಲಿ.”

01094077a ಏವಮುಕ್ತಸ್ತು ಗಾಂಗೇಯಸ್ತದ್ಯುಕ್ತಂ ಪ್ರತ್ಯಭಾಷತ।
01094077c ಶೃಣ್ವತಾಂ ಭೂಮಿಪಾಲಾನಾಂ ಪಿತುರರ್ಥಾಯ ಭಾರತ।।

ಭಾರತ! ಈ ಮಾತುಗಳಿಗೆ ಗಾಂಗೇಯನು ತನ್ನ ತಂದೆಗೋಸ್ಕರವಾಗಿ, ಭೂಮಿಪಾಲರೆಲ್ಲರೂ ಕೇಳುತ್ತಿದಂತೆ, ಯಥೋಕ್ತ ಉತ್ತರವನ್ನಿತ್ತನು:

01094078a ಇದಂ ಮೇ ಮತಮಾದತ್ಸ್ವ ಸತ್ಯಂ ಸತ್ಯವತಾಂ ವರ।
01094078c ನೈವ ಜಾತೋ ನ ವಾಜಾತ ಈದೃಶಂ ವಕ್ತುಮುತ್ಸಹೇತ್।।

“ಸತ್ಯವಂತರಲ್ಲಿ ಶ್ರೇಷ್ಠ! ನನ್ನ ಮನಸ್ಸಿನ ಈ ಸತ್ಯವನ್ನು ಕೇಳು. ಇದೇ ರೀತಿ ಉತ್ಸಾಹದಿಂದ ಹೇಳುವ ಇನ್ನೊಬ್ಬನು ಹುಟ್ಟಿಲ್ಲ ಮುಂದೆ ಹುಟ್ಟುವುದೂ ಇಲ್ಲ.

01094079a ಏವಮೇತತ್ಕರಿಷ್ಯಾಮಿ ಯಥಾ ತ್ವಮನುಭಾಷಸೇ।
01094079c ಯೋಽಸ್ಯಾಂ ಜನಿಷ್ಯತೇ ಪುತ್ರಃ ಸ ನೋ ರಾಜಾ ಭವಿಷ್ಯತಿ।।

ನೀನು ಹೇಳುವ ಹಾಗೆಯೇ ಮಾಡುತ್ತೇನೆ. ಇವಳಲ್ಲಿ ಹುಟ್ಟಿದ ಪುತ್ರನೇ ರಾಜನಾಗುತ್ತಾನೆ.”

01094080a ಇತ್ಯುಕ್ತಃ ಪುನರೇವಾಥ ತಂ ದಾಶಃ ಪ್ರತ್ಯಭಾಷತ।
01094080c ಚಿಕೀರ್ಷುರ್ದುಷ್ಕರಂ ಕರ್ಮ ರಾಜ್ಯಾರ್ಥೇ ಭರತರ್ಷಭ।।
01094081a ತ್ವಮೇವ ನಾಥಃ ಪರ್ಯಾಪ್ತಃ ಶಂತನೋರಮಿತದ್ಯುತೇಃ।
01094081c ಕನ್ಯಾಯಾಶ್ಚೈವ ಧರ್ಮಾತ್ಮನ್ಪ್ರಭುರ್ದಾನಾಯ ಚೇಶ್ವರಃ।।

ಇದನ್ನು ಕೇಳಿದ ದಾಶನು ಪುನಃ ಉತ್ತರಿಸಿದನು: “ಭರತರ್ಷಭ! ರಾಜ್ಯಕ್ಕಾಗಿ ದುಷ್ಕರ ಕರ್ಮವನ್ನೇ ಮಾಡಿದ್ದೀಯೆ. ಅಮಿತದ್ಯುತಿ ಶಂತನುವಿಗೆ ಪರ್ಯಾಪ್ತ ನಾಥನೇ ನೀನು. ಧರ್ಮಾತ್ಮ! ಕನ್ಯೆಯ ಪ್ರಭುವೂ ಮತ್ತು ಕೊಡುವವನ ಈಶ್ವರನೂ ನೀನೆ.

01094082a ಇದಂ ತು ವಚನಂ ಸೌಮ್ಯ ಕಾರ್ಯಂ ಚೈವ ನಿಬೋಧ ಮೇ।
01094082c ಕೌಮಾರಿಕಾಣಾಂ ಶೀಲೇನ ವಕ್ಷ್ಯಾಮ್ಯಹಮರಿಂದಮ।।

ಅರಿಂದಮ! ಮಗಳನ್ನು ಪ್ರೀತಿಸುವವನಂತೆ ಇನ್ನೂ ಮಾಡಬೇಕಾದುದರ ಕುರಿತಾದ ನನ್ನ ಒಂದು ಮಾತನ್ನು ಕೇಳು.

01094083a ಯತ್ತ್ವಯಾ ಸತ್ಯವತ್ಯರ್ಥೇ ಸತ್ಯಧರ್ಮಪರಾಯಣ।
01094083c ರಾಜಮಧ್ಯೇ ಪ್ರತಿಜ್ಞಾತಮನುರೂಪಂ ತವೈವ ತತ್।।

ಈ ರಾಜರ ಮಧ್ಯದಲ್ಲಿ ಸತ್ಯಧರ್ಮಪರಾಯಣನಾದ ನೀನು ಸತ್ಯವತಿಗಾಗಿ ಮಾಡಿದ ಪ್ರತಿಜ್ಞೆಯು ನಿನಗೆ ಅನುರೂಪವಾಗಿಯೇ ಇದೆ.

01094084a ನಾನ್ಯಥಾ ತನ್ಮಹಾಬಾಹೋ ಸಂಶಯೋಽತ್ರ ನ ಕಶ್ಚನ।
01094084c ತವಾಪತ್ಯಂ ಭವೇದ್ಯತ್ತು ತತ್ರ ನಃ ಸಂಶಯೋ ಮಹಾನ್।।

ಮಹಾಬಾಹು! ಅದರಂತೆಯೇ ಆಗುತ್ತದೆ ಎನ್ನುವುದರಲ್ಲಿ ಸ್ವಲ್ಪವೂ ಸಂಶಯವಿಲ್ಲ. ಆದರೆ ನಿನ್ನಲ್ಲಿ ಆಗುವ ಮಕ್ಕಳಲ್ಲಿ ಮಹಾ ಸಂಶಯವಿದೆ.”

01094085a ತಸ್ಯ ತನ್ಮತಮಾಜ್ಞಾಯ ಸತ್ಯಧರ್ಮಪರಾಯಣಃ।
01094085c ಪ್ರತ್ಯಜಾನಾತ್ತದಾ ರಾಜನ್ಪಿತುಃ ಪ್ರಿಯಚಿಕೀರ್ಷಯಾ।।

ರಾಜನ್! ಅವನ ಮತವೇನೆಂದು ತಿಳಿದ ಆ ಸತ್ಯಧರ್ಮಪರಾಯಣನು ತನ್ನ ತಂದೆಗೆ ಪ್ರಿಯವಾದುದನ್ನು ಮಾಡಲೋಸುಗ ಈ ಭರವಸೆಯನ್ನಿತ್ತನು.

01094086 ದೇವವ್ರತ ಉವಾಚ।
01094086a ದಾಶರಾಜ ನಿಬೋಧೇದಂ ವಚನಂ ಮೇ ನೃಪೋತ್ತಮ।
01094086c ಶೃಣ್ವತಾಂ ಭೂಮಿಪಾಲಾನಾಂ ಯದ್ಬ್ರವೀಮಿ ಪಿತುಃ ಕೃತೇ।।

ದೇವವ್ರತನು ಹೇಳಿದನು: “ನೃಪೋತ್ತಮ! ದಾಶರಾಜ! ನನ್ನ ತಂದೆಗೋಸ್ಕರ ಈ ಭೂಮಿಪಾಲರು ಕೇಳುವಂತೆ ಹೇಳುವ ಈ ಮಾತುಗಳನ್ನು ಆಲಿಸು.

01094087a ರಾಜ್ಯಂ ತಾವತ್ಪೂರ್ವಮೇವ ಮಯಾ ತ್ಯಕ್ತಂ ನರಾಧಿಪ।
01094087c ಅಪತ್ಯಹೇತೋರಪಿ ಚ ಕರೋಮ್ಯೇಷ ವಿನಿಶ್ಚಯಂ।।

ನರಾಧಿಪ! ರಾಜ್ಯವನ್ನು ನಾನು ಮೊದಲೇ ಪರಿತ್ಯಜಿಸಿದ್ದೇನೆ. ಈಗ ನಾನು ನನ್ನ ಮಕ್ಕಳ ಕುರಿತೂ ನಿಶ್ಚಯಿಸುತ್ತೇನೆ.

01094088a ಅದ್ಯ ಪ್ರಭೃತಿ ಮೇ ದಾಶ ಬ್ರಹ್ಮಚರ್ಯಂ ಭವಿಷ್ಯತಿ।
01094088c ಅಪುತ್ರಸ್ಯಾಪಿ ಮೇ ಲೋಕಾ ಭವಿಷ್ಯಂತ್ಯಕ್ಷಯಾ ದಿವಿ।।

ದಾಶ! ಈ ದಿನದಿಂದ ನಾನು ಬ್ರಹ್ಮಚಾರಿಯಾಗಿಯೇ ಇರುತ್ತೇನೆ. ಮಕ್ಕಳಿಲ್ಲದಿದ್ದರೂ ನನಗೆ ಅಕ್ಷಯ ದೇವಲೋಕವು ದೊರೆಯುತ್ತದೆ.””

01094089 ವೈಶಂಪಾಯನ ಉವಾಚ।
01094089a ತಸ್ಯ ತದ್ವಚನಂ ಶ್ರುತ್ವಾ ಸಂಪ್ರಹೃಷ್ಟತನೂರುಹಃ।
01094089c ದದಾನೀತ್ಯೇವ ತಂ ದಾಶೋ ಧರ್ಮಾತ್ಮಾ ಪ್ರತ್ಯಭಾಷತ।।

ವೈಶಂಪಾಯನನು ಹೇಳಿದನು: “ಅವನ ಈ ಮಾತುಗಳನ್ನು ಕೇಳಿ ಹರ್ಷದಿಂದ ನಡುಗುತ್ತಿದ್ದ ಧರ್ಮಾತ್ಮ ದಾಶನು “ಕೊಡುತ್ತೇನೆ!” ಎಂದು ಉತ್ತರಿಸಿದನು.

01094090a ತತೋಽಂತರಿಕ್ಷೇಽಪ್ಸರಸೋ ದೇವಾಃ ಸರ್ಷಿಗಣಾಸ್ತಥಾ।
01094090c ಅಭ್ಯವರ್ಷಂತ ಕುಸುಮೈರ್ಭೀಷ್ಮೋಽಯಮಿತಿ ಚಾಬ್ರುವನ್।।

ಆಗ ಅಂತರಿಕ್ಷದಲ್ಲಿ ಅಪ್ಸರೆಯರು, ದೇವತೆಗಳು, ಋಷಿಗಣಗಳು “ಭೀಷ್ಮ! ಭೀಷ್ಮ!” ಎನ್ನುತ್ತಾ ಹೂಮಳೆಯನ್ನು ಸುರಿಸಿದರು.

01094091a ತತಃ ಸ ಪಿತುರರ್ಥಾಯ ತಾಮುವಾಚ ಯಶಸ್ವಿನೀಂ।
01094091c ಅಧಿರೋಹ ರಥಂ ಮಾತರ್ಗಚ್ಛಾವಃ ಸ್ವಗೃಹಾನಿತಿ।।

ಅನಂತರ ತನ್ನ ತಂದೆಗೋಸ್ಕರಳಾದ ಆ ಯಶಸ್ವಿನಿಗೆ ಹೇಳಿದನು: “ಮಾತೆ! ರಥವನ್ನೇರು! ನಮ್ಮ ಮನೆಗೆ ಹೋಗೋಣ.”

01094092a ಏವಮುಕ್ತ್ವಾ ತು ಭೀಷ್ಮಸ್ತಾಂ ರಥಮಾರೋಪ್ಯ ಭಾಮಿನೀಂ।
01094092c ಆಗಮ್ಯ ಹಾಸ್ತಿನಪುರಂ ಶಂತನೋಃ ಸಂನ್ಯವೇದಯತ್।।

ಹೀಗೆ ಹೇಳಿದ ಭೀಷ್ಮನು ಆ ಭಾಮಿನಿಯನ್ನು ರಥದಲ್ಲಿ ಕುಳಿಸಿ ಹಸ್ತಿನಾಪುರಕ್ಕೆ ಬಂದು ಶಂತನುವಿಗೆ ಒಪ್ಪಿಸಿದನು.

01094093a ತಸ್ಯ ತದ್ದುಷ್ಕರಂ ಕರ್ಮ ಪ್ರಶಶಂಸುರ್ನರಾಧಿಪಾಃ।
01094093c ಸಮೇತಾಶ್ಚ ಪೃಥಕ್ಚೈವ ಭೀಷ್ಮೋಽಯಮಿತಿ ಚಾಬ್ರುವನ್।।

ಅವನ ಈ ದುಷ್ಕರ ಕರ್ಮವನ್ನು ಪ್ರಶಂಸಿಸುತ್ತಾ ನರಾಧಿಪರು ಒಟ್ಟಾಗಿ ಒಂದೇ ವಾಖ್ಯದಲ್ಲಿ ಪುನಃ ಪುನಃ “ಇವನು ಭೀಷ್ಮ!” ಎಂದು ಉದ್ಗರಿಸಿದರು.

01094094a ತದ್ದೃಷ್ಟ್ವಾ ದುಷ್ಕರಂ ಕರ್ಮ ಕೃತಂ ಭೀಷ್ಮೇಣ ಶಂತನುಃ।
01094094c ಸ್ವಚ್ಛಂದಮರಣಂ ತಸ್ಮೈ ದದೌ ತುಷ್ಟಃ ಪಿತಾ ಸ್ವಯಂ।।

ಭೀಷ್ಮನು ಮಾಡಿದ ಈ ದುಷ್ಕರ ಕೃತ್ಯವನ್ನು ಸ್ವಯಂ ನೋಡಿ ಸಂತುಷ್ಟನಾದ ತಂದೆ ಶಂತನುವು “ನಿನಗೆ ಸ್ವಚ್ಛಂದಮರಣವಿರಲಿ!” ಎಂದು ವರವನ್ನಿತ್ತನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಸತ್ಯವತೀಲಾಭೋಪಾಖ್ಯಾನೇ ಚತುರ್ನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಸತ್ಯವತೀಲಾಭೋಪಾಖ್ಯಾನದಲ್ಲಿ ತೊಂಭತ್ತ್ನಾಲ್ಕನೆಯ ಅಧ್ಯಾಯವು.

[^]: ಸಹಿತಃ ಎಂಬ ಪಾಠಾಂತರವಿದೆ (ನೀಲಕಂಠ).