093 ಆಪವೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 93

ಸಾರ

ಗಂಗೆಯು ಶಂತನುವಿಗೆ ವಸುಗಳಿಗೆ ವಸಿಷ್ಠನಿಂದ ದೊರೆತ ಶಾಪ ಮತ್ತು ತಾನು ಅವರಿಗೆ ನೀಡಿದ ವರದ ಕುರಿತು ವಿವರಿಸುವುದು (1-46).

01093001 ಶಂತನುರುವಾಚ।
01093001a ಆಪವೋ ನಾಮ ಕೋ ನ್ವೇಷ ವಸೂನಾಂ ಕಿಂ ಚ ದುಷ್ಕೃತಂ।
01093001c ಯಸ್ಯಾಭಿಶಾಪಾತ್ತೇ ಸರ್ವೇ ಮಾನುಷೀಂ ತನುಮಾಗತಾಃ।।

ಶಂತನುವು ಹೇಳಿದನು: “ಈ ಆಪವನೆಂಬ ಹೆಸರಿನವನು ಯಾರು? ವಸುಗಳು ಮಾಡಿದ ದುಷ್ಕೃತವಾದರೂ ಏನಿತ್ತು?

01093002a ಅನೇನ ಚ ಕುಮಾರೇಣ ಗಂಗಾದತ್ತೇನ ಕಿಂ ಕೃತಂ।
01093002c ಯಸ್ಯ ಚೈವ ಕೃತೇನಾಯಂ ಮಾನುಷೇಷು ನಿವತ್ಸ್ಯತಿ।।

ಮತ್ತು ಈ ಕುಮಾರ ಗಂಗಾದತ್ತನು ಏನು ಮಾಡಿದ್ದಾನೆಂದು ಈಗ ಮನುಷ್ಯರಲ್ಲಿ ಬದುಕಬೇಕು?

01093003a ಈಶಾನಾಃ ಸರ್ವಲೋಕಸ್ಯ ವಸವಸ್ತೇ ಚ ವೈ ಕಥಂ।
01093003c ಮಾನುಷೇಷೂದಪದ್ಯಂತ ತನ್ಮಮಾಚಕ್ಷ್ವ ಜಾಹ್ನವಿ।।

ವಸುಗಳು ಸರ್ವಲೋಕಗಳ ಒಡೆಯರು. ಅಂಥವರು ಏಕೆ ಮನುಷ್ಯರಾಗಿ ಹುಟ್ಟಿದರು ಎನ್ನುವುದನ್ನು ನನಗೆ ಹೇಳು ಜಾಹ್ನವಿ!””

01093004 ವೈಶಂಪಾಯನ ಉವಾಚ।
01093004a ಸೈವಮುಕ್ತಾ ತತೋ ಗಂಗಾ ರಾಜಾನಮಿದಮಬ್ರವೀತ್।
01093004c ಭರ್ತಾರಂ ಜಾಹ್ನವೀ ದೇವೀ ಶಂತನುಂ ಪುರುಷರ್ಷಭಂ।।

ವೈಶಂಪಾಯನನು ಹೇಳಿದನು: “ರಾಜನ ಈ ಮಾತುಗಳಿಗೆ ಉತ್ತರವಾಗಿ ದೇವಿ ಜಹ್ನುಪುತ್ರಿ ಗಂಗೆಯು ಪತಿ ಪುರುಷರ್ಷಭ ಶಂತನುವನ್ನುದ್ದೇಶಿಸಿ ಹೇಳಿದಳು:

01093005a ಯಂ ಲೇಭೇ ವರುಣಃ ಪುತ್ರಂ ಪುರಾ ಭರತಸತ್ತಮ।
01093005c ವಸಿಷ್ಠೋ ನಾಮ ಸ ಮುನಿಃ ಖ್ಯಾತ ಆಪವ ಇತ್ಯುತ।।

“ಭರತಸತ್ತಮ! ಹಿಂದೆ ವರುಣನು ಪುತ್ರನೋರ್ವನನ್ನು ಪಡೆದನು. ಅವನು ವಸಿಷ್ಠನೆಂಬ ಹೆಸರಿನ ಮುನಿ. ಅವನು ಆಪವನೆಂದೂ ಖ್ಯಾತ.

01093006a ತಸ್ಯಾಶ್ರಮಪದಂ ಪುಣ್ಯಂ ಮೃಗಪಕ್ಷಿಗಣಾನ್ವಿತಂ।
01093006c ಮೇರೋಃ ಪಾರ್ಶ್ವೇ ನಗೇಂದ್ರಸ್ಯ ಸರ್ವರ್ತುಕುಸುಮಾವೃತಂ।।

ಅವನ ಪುಣ್ಯ ಆಶ್ರಮ ಸಂಕುಲವು ನಗೇಂದ್ರ ಮೇರುವಿನ ಪಾರ್ಶ್ವದಲ್ಲಿತ್ತು ಮತ್ತು ಅದು ಮೃಗಪಕ್ಷಿಗಣಗಳಿಂದ ಹಾಗೂ ಸದಾಕಾಲ ಕುಸುಮಗಳಿಂದ ತುಂಬಿಕೊಂಡಿತ್ತು.

01093007a ಸ ವಾರುಣಿಸ್ತಪಸ್ತೇಪೇ ತಸ್ಮಿನ್ಭರತಸತ್ತಮ।
01093007c ವನೇ ಪುಣ್ಯಕೃತಾಂ ಶ್ರೇಷ್ಠಃ ಸ್ವಾದುಮೂಲಫಲೋದಕೇ।।

ಭರತಸತ್ತಮ! ಸ್ವಾದಿಷ್ಟವಾದ ಫಲ-ಮೂಲ-ಜಲಗಳಿಂದೊಡಗೂಡಿದ ಆ ವನದಲ್ಲಿ ಪುಣ್ಯಕೃತರಲ್ಲಿ ಶ್ರೇಷ್ಠ ವಾರುಣಿಯು ತಪಸ್ಸಿನಲ್ಲಿ ನಿರತನಾಗಿದ್ದನು.

01093008a ದಕ್ಷಸ್ಯ ದುಹಿತಾ ಯಾ ತು ಸುರಭೀತ್ಯತಿಗರ್ವಿತಾ।
01093008c ಗಾಂ ಪ್ರಜಾತಾ ತು ಸಾ ದೇವೀ ಕಶ್ಯಪಾದ್ಭರತರ್ಷಭ।।
01093009a ಅನುಗ್ರಹಾರ್ಥಂ ಜಗತಃ ಸರ್ವಕಾಮದುಘಾಂ ವರಾಂ।
01093009c ತಾಂ ಲೇಭೇ ಗಾಂ ತು ಧರ್ಮಾತ್ಮಾ ಹೋಮಧೇನುಂ ಸ ವಾರುಣಿಃ।।

ದಕ್ಷನಿಗೆ ಸುರಭಿ ಎನ್ನುವ ಅತಿಗರ್ವಿತೆ ಮಗಳೊಬ್ಬಳಿದ್ದಳು. ಭರತರ್ಷಭ! ಈ ದೇವಿಯು ಜಗತ್ತಿನ ಅನುಗ್ರಹಾರ್ಥಕ್ಕಾಗಿ ಕಶ್ಯಪನಿಂದ ಸರ್ವಕಾಮಗಳನ್ನೂ ಪೂರೈಸುವ ಹಾಲುಳ್ಳ ಶ್ರೇಷ್ಠ ಗೋವೊಂದಕ್ಕೆ ಜನ್ಮವಿತ್ತಳು. ಆ ಹಸುವನ್ನು ತನ್ನ ಹೋಮಧೇನುವಾಗಿ ಧರ್ಮಾತ್ಮ ವಾರುಣಿಯು ಪಡೆದನು.

01093010a ಸಾ ತಸ್ಮಿಂಸ್ತಾಪಸಾರಣ್ಯೇ ವಸಂತೀ ಮುನಿಸೇವಿತೇ।
01093010c ಚಚಾರ ರಮ್ಯೇ ಧರ್ಮ್ಯೇ ಚ ಗೌರಪೇತಭಯಾ ತದಾ।।

ಆ ಹಸುವು ತಪಸ್ವಿಗಳ ಆ ಅರಣ್ಯದಲ್ಲಿ ಮುನಿಗಳಿಂದ ಸೇವಿಸಲ್ಪಡುತ್ತಾ, ರಮ್ಯ ಹುಲ್ಲುಗಾವಲಿನಲ್ಲಿ ನಿರ್ಭಯಳಾಗಿ ಮೇಯುತ್ತಾ ವಾಸಿಸುತ್ತಿದ್ದಳು.

01093011a ಅಥ ತದ್ವನಮಾಜಗ್ಮುಃ ಕದಾ ಚಿದ್ಭರತರ್ಷಭ।
01093011c ಪೃಥ್ವಾದ್ಯಾ ವಸವಃ ಸರ್ವೇ ದೇವದೇವರ್ಷಿಸೇವಿತಂ।।

ಭರತರ್ಷಭ! ಒಮ್ಮೆ ದೇವದೇವರ್ಷಿಸೇವಿತ ಸರ್ವ ವಸುಗಳೂ ಪೃಥುವಿನ ನಾಯಕತ್ವದಲ್ಲಿ ಆ ವನಕ್ಕೆ ಆಗಮಿಸಿದರು.

01093012a ತೇ ಸದಾರಾ ವನಂ ತಚ್ಚ ವ್ಯಚರಂತ ಸಮಂತತಃ।
01093012c ರೇಮಿರೇ ರಮಣೀಯೇಷು ಪರ್ವತೇಷು ವನೇಷು ಚ।।

ತಮ್ಮ ತಮ್ಮ ಪತ್ನಿಗಳೊಂದಿಗೆ ಆ ವನವನ್ನೆಲ್ಲಾ ಸುತ್ತಿದರು ಮತ್ತು ಆ ರಮಣೀಯ ಪರ್ವತ-ವನಗಳಲ್ಲಿ ರಮಿಸಿದರು.

01093013a ತತ್ರೈಕಸ್ಯ ತು ಭಾರ್ಯಾ ವೈ ವಸೋರ್ವಾಸವವಿಕ್ರಮ।
01093013c ಸಾ ಚರಂತೀ ವನೇ ತಸ್ಮಿನ್ಗಾಂ ದದರ್ಶ ಸುಮಧ್ಯಮಾ।
01093013e ಯಾ ಸಾ ವಸಿಷ್ಠಸ್ಯ ಮುನೇಃ ಸರ್ವಕಾಮಧುಗುತ್ತಮಾ।।

ವಾಸವವಿಕ್ರಮ! ಅವರಲ್ಲಿ ಓರ್ವ ವಸುವಿನ ಪತ್ನಿಯು ವನದಲ್ಲಿ ಸಂಚರಿಸುತ್ತಿದ್ದಾಗ ಮುನಿ ವಸಿಷ್ಠನ ಸರ್ವಕಾಮಗಳನ್ನು ಪೂರೈಸಬಲ್ಲ, ಆ ಉತ್ತಮ ಸುಂದರ ಗೋವನ್ನು ಕಂಡಳು.

01093014a ಸಾ ವಿಸ್ಮಯಸಮಾವಿಷ್ಟಾ ಶೀಲದ್ರವಿಣಸಂಪದಾ।
01093014c ದಿವೇ ವೈ ದರ್ಶಯಾಮಾಸ ತಾಂ ಗಾಂ ಗೋವೃಷಭೇಕ್ಷಣ।।
01093015a ಸ್ವಾಪೀನಾಂ ಚ ಸುದೋಗ್ಧ್ರೀಂ ಚ ಸುವಾಲಧಿಮುಖಾಂ ಶುಭಾಂ।
01093015c ಉಪಪನ್ನಾಂ ಗುಣೈಃ ಸರ್ವೈಃ ಶೀಲೇನಾನುತ್ತಮೇನ ಚ।।

ಗೋವೃಷಭೇಕ್ಷಣ! ಆ ಗೋವಿನ ಶೀಲತೆ ಮತ್ತು ದ್ರವಿಣಸಂಪತ್ತನ್ನು ನೋಡಿ ವಿಸ್ಮಿತಳಾದ ಅವಳು ಆ ಉತ್ತಮ, ಶೀಲವಂತ, ಸರ್ವಗುಣೋಪೇತ, ಸುಂದರ, ಸುಂದರ ಬಾಲ ಮತ್ತು ಮುಖಗಳನ್ನು ಹೊಂದಿದ, ಒಳ್ಳೆಯ ಹಾಲನ್ನು ನೀಡುವ ಹಸುವನ್ನು ದ್ಯೌವಿಗೆ ತೋರಿಸಿದಳು.

01093016a ಏವಂಗುಣಸಮಾಯುಕ್ತಾಂ ವಸವೇ ವಸುನಂದಿನೀ।
01093016c ದರ್ಶಯಾಮಾಸ ರಾಜೇಂದ್ರ ಪುರಾ ಪೌರವನಂದನ।।

ರಾಜೇಂದ್ರ! ಪೌರವನಂದನ! ಈ ರೀತಿ ಗುಣಸಮಾಯುಕ್ತ ಹಸುವನ್ನು ವಸುನಂದಿನಿಯು ವಸುವಿಗೆ ತೋರಿಸಿದಳು.

01093017a ದ್ಯೌಸ್ತದಾ ತಾಂ ತು ದೃಷ್ಟ್ವೈವ ಗಾಂ ಗಜೇಂದ್ರೇಂದ್ರವಿಕ್ರಮ।
01093017c ಉವಾಚ ರಾಜಂಸ್ತಾಂ ದೇವೀಂ ತಸ್ಯಾ ರೂಪಗುಣಾನ್ವದನ್।।

ರಾಜ! ಗಜೇಂದ್ರ! ಇಂದ್ರವಿಕ್ರಮ! ಆ ಹಸುವನ್ನು ನೋಡಿದೊಡನೆಯೇ ದ್ಯೌ ಅದರ ರೂಪಗುಣಗಳನ್ನು ಹೊಗಳುತ್ತಾ ತನ್ನ ದೇವಿಗೆ ಹೇಳಿದನು:

01093018a ಏಷಾ ಗೌರುತ್ತಮಾ ದೇವಿ ವಾರುಣೇರಸಿತೇಕ್ಷಣೇ।
01093018c ಋಷೇಸ್ತಸ್ಯ ವರಾರೋಹೇ ಯಸ್ಯೇದಂ ವನಮುತ್ತಮಂ।।

“ವರಾರೋಹೇ! ಈ ಕಪ್ಪು ಕಣ್ಣುಗಳುಳ್ಳ ಉತ್ತಮ ಗೋವು ಈ ಉತ್ತಮ ವನಗಳ ಒಡೆಯ ವಾರುಣಿಗೆ ಸೇರಿದ್ದುದು.

01093019a ಅಸ್ಯಾಃ ಕ್ಷೀರಂ ಪಿಬೇನ್ಮರ್ತ್ಯಃ ಸ್ವಾದು ಯೋ ವೈ ಸುಮಧ್ಯಮೇ।
01093019c ದಶ ವರ್ಷಸಹಸ್ರಾಣಿ ಸ ಜೀವೇತ್ ಸ್ಥಿರಯೌವನಃ।।

ಸುಮಧ್ಯಮೇ! ಇದರ ಸ್ವಾದಿಷ್ಟ ಹಾಲನ್ನು ಕುಡಿದ ಮರ್ತ್ಯನು ಹತ್ತು ಸಾವಿರ ವರ್ಷಗಳ ಪರ್ಯಂತ ಸ್ಥಿರಯೌವನಿಯಾಗಿ ಜೀವಿಸಬಲ್ಲ.”

01093020a ಏತಚ್ಛೃತ್ವಾ ತು ಸಾ ದೇವೀ ನೃಪೋತ್ತಮ ಸುಮಧ್ಯಮಾ।
01093020c ತಮುವಾಚಾನವದ್ಯಾಂಗೀ ಭರ್ತಾರಂ ದೀಪ್ತತೇಜಸಂ।।

ನೃಪೋತ್ತಮ! ಆ ಸುಮಧ್ಯಮೆ ಅನವದ್ಯಾಂಗಿಯು ಈ ಮಾತನ್ನು ಕೇಳಿ ತನ್ನ ದೀಪ್ತತೇಜಸ ಪತಿಯನ್ನುದ್ದೇಶಿಸಿ ಹೇಳಿದಳು:

01093021a ಅಸ್ತಿ ಮೇ ಮಾನುಷೇ ಲೋಕೇ ನರದೇವಾತ್ಮಜಾ ಸಖೀ।
01093021c ನಾಮ್ನಾ ಜಿನವತೀ ನಾಮ ರೂಪಯೌವನಶಾಲಿನೀ।।

“ನನಗೆ ಮನುಷ್ಯಲೋಕದಲ್ಲಿ ರೂಪಯೌವನಶಾಲಿ ನರದೇವಾತ್ಮಜೆ ಜಿನವತಿ ಎಂಬ ಹೆಸರಿನ ಸಖಿಯೊಬ್ಬಳಿದ್ದಾಳೆ.

01093022a ಉಶೀನರಸ್ಯ ರಾಜರ್ಷೇಃ ಸತ್ಯಸಂಧಸ್ಯ ಧೀಮತಃ।
01093022c ದುಹಿತಾ ಪ್ರಥಿತಾ ಲೋಕೇ ಮಾನುಷೇ ರೂಪಸಂಪದಾ।।

ಧೀಮಂತ, ಸತ್ಯಸಂಧ, ರಾಜರ್ಷಿ ಉಶೀನರನ ಮಗಳಾದ ಅವಳು ತನ್ನ ರೂಪ ಸಂಪತ್ತಿನಿಂದ ಮಾನುಷ ಲೋಕದಲ್ಲಿಯೇ ಪ್ರಸಿದ್ಧಳಾಗಿದ್ದಾಳೆ.

01093023a ತಸ್ಯಾ ಹೇತೋರ್ಮಹಾಭಾಗ ಸವತ್ಸಾಂ ಗಾಂ ಮಮೇಪ್ಸಿತಾಂ।
01093023c ಆನಯಸ್ವಾಮರಶ್ರೇಷ್ಠ ತ್ವರಿತಂ ಪುಣ್ಯವರ್ಧನ।।
01093024a ಯಾವದಸ್ಯಾಃ ಪಯಃ ಪೀತ್ವಾ ಸಾ ಸಖೀ ಮಮ ಮಾನದ।
01093024c ಮಾನುಷೇಷು ಭವತ್ವೇಕಾ ಜರಾರೋಗವಿವರ್ಜಿತಾ।।

ಮಹಾಭಾಗ! ಅವಳಿಗೋಸ್ಕರ ಈ ಗೋವು ಮತ್ತು ಅದರ ಕರು ನನಗೆ ಬೇಕು. ಪುಣ್ಯವರ್ಧನ! ಅಮರಶ್ರೇಷ್ಠ! ಬೇಗನೆ ಅದನ್ನು ತೆಗೆದುಕೊಂಡು ಬಾ. ಮಾನದ! ಅದರ ಹಾಲನ್ನು ಕುಡಿದು ನನ್ನ ಸಖಿಯು ಮನುಷ್ಯಲೋಕದಲ್ಲಿ ವೃದ್ಧಾಪ್ಯ ಮತ್ತು ರೋಗ ವರ್ಜಿತಳಾದ ಒಬ್ಬಳೇ ಒಬ್ಬಳೆಂದು ಎನಿಸಿಕೊಳ್ಳುತ್ತಾಳೆ.

01093025a ಏತನ್ಮಮ ಮಹಾಭಾಗ ಕರ್ತುಮರ್ಹಸ್ಯನಿಂದಿತ।
01093025c ಪ್ರಿಯಂ ಪ್ರಿಯತರಂ ಹ್ಯಸ್ಮಾನ್ನಾಸ್ತಿ ಮೇಽನ್ಯತ್ಕಥಂ ಚನ।।

ಮಹಾಭಾಗ! ಅನಿಂದಿತ! ನನಗಾಗಿ ಇದನ್ನೊಂದನ್ನು ನೀನು ಮಾಡಬೇಕು. ಇದನ್ನು ಬಿಟ್ಟು ಬೇರೆ ಏನೂ ನನಗೆ ಸಂತೋಷವನ್ನು ಕೊಡುವುದಿಲ್ಲ.”

01093026a ಏತತ್ ಶ್ರುತ್ವಾ ವಚಸ್ತಸ್ಯಾ ದೇವ್ಯಾಃ ಪ್ರಿಯಚಿಕೀರ್ಷಯಾ।
01093026c ಪೃಥ್ವಾದ್ಯೈರ್ಭ್ರಾತೃಭಿಃ ಸಾರ್ಧಂ ದ್ಯೌಸ್ತದಾ ತಾಂ ಜಹಾರ ಗಾಂ।।

ದೇವಿಯ ಈ ವಚನಗಳನ್ನು ಕೇಳಿದ ದ್ಯೌ ಅವಳಿಗೆ ಪ್ರಿಯವಾದದ್ದನ್ನು ಮಾಡಲೋಸುಗ ಪೃಥುವಿನ ನಾಯಕತ್ವದಲ್ಲಿ ತನ್ನ ಸಹೋದರರನ್ನು ಸೇರಿ ಆ ಹಸುವನ್ನು ಅಪಹರಿಸಿ ತಂದನು.

01093027a ತಯಾ ಕಮಲಪತ್ರಾಕ್ಷ್ಯಾ ನಿಯುಕ್ತೋ ದ್ಯೌಸ್ತದಾ ನೃಪ।
01093027c ಋಷೇಸ್ತಸ್ಯ ತಪಸ್ತೀವ್ರಂ ನ ಶಶಾಕ ನಿರೀಕ್ಷಿತುಂ।
01093027e ಹೃತಾ ಗೌಃ ಸಾ ತದಾ ತೇನ ಪ್ರಪಾತಸ್ತು ನ ತರ್ಕಿತಃ।।

ನೃಪ! ಆ ಕಮಲಪತ್ರಾಕ್ಷಿಯಿಂದ ನಿಯುಕ್ತಗೊಂಡ ದ್ಯೌ ಆ ಋಷಿಯ ತೀವ್ರ ತಪಸ್ಸನ್ನು ನಿರೀಕ್ಷಿಸಲು ಅಸಮರ್ಥನಾದನು ಮತ್ತು ಆ ಹಸುವನ್ನು ಅಪಹರಿಸುವುದರಿಂದಾಗಬಹುದಾದ ತನ್ನ ಅಧೋಗತಿಯ ಕುರಿತು ಯೋಚಿಸಲಿಲ್ಲ.

01093028a ಅಥಾಶ್ರಮಪದಂ ಪ್ರಾಪ್ತಃ ಫಲಾನ್ಯಾದಾಯ ವಾರುಣಿಃ।
01093028c ನ ಚಾಪಶ್ಯತ ಗಾಂ ತತ್ರ ಸವತ್ಸಾಂ ಕಾನನೋತ್ತಮೇ।।

ಫಲಗಳನ್ನು ತೆಗೆದುಕೊಂಡು ಆಶ್ರಮಪದವನ್ನು ಸೇರಿದ ವಾರುಣಿಯು ಆ ಉತ್ತಮ ಕಾನನದಲ್ಲಿ ಕರುವಿನ ಸಹಿತ ಗೋವನ್ನು ಕಾಣಲಿಲ್ಲ.

01093029a ತತಃ ಸ ಮೃಗಯಾಮಾಸ ವನೇ ತಸ್ಮಿಂಸ್ತಪೋಧನಃ।
01093029c ನಾಧ್ಯಗಚ್ಛಚ್ಚ ಮೃಗಯಂಸ್ತಾಂ ಗಾಂ ಮುನಿರುದಾರಧೀಃ।।

ಆ ತಪೋಧನನು ಆಗ ವನವಿಡೀ ಅದನ್ನು ಹುಡುಕಿದನು. ಎಷ್ಟು ಹುಡುಕಿದರೂ ಆ ಉದಾರ ಮನಸ್ಸಿನ ಮುನಿಗೆ ಗೋ ಕಾಣಲಿಲ್ಲ.

01093030a ಜ್ಞಾತ್ವಾ ತಥಾಪನೀತಾಂ ತಾಂ ವಸುಭಿರ್ದಿವ್ಯದರ್ಶನಃ।
01093030c ಯಯೌ ಕ್ರೋಧವಶಂ ಸದ್ಯಃ ಶಶಾಪ ಚ ವಸೂಂಸ್ತದಾ।।

ತನ್ನ ದಿವ್ಯ ದೃಷ್ಠಿಯಿಂದ ಹಸುವು ವಸುಗಳಿಂದ ಅಪಹರಣವಾಗಿದೆ ಎಂದು ತಿಳಿದ ಅವನು ತಕ್ಷಣವೇ ಕ್ರೋಧವಶನಾಗಿ ವಸುಗಳಿಗೆ ಶಾಪವನ್ನಿತ್ತನು.

01093031a ಯಸ್ಮಾನ್ಮೇ ವಸವೋ ಜಹ್ರುರ್ಗಾಂ ವೈ ದೋಗ್ಧ್ರೀಂ ಸುವಾಲಧಿಂ।
01093031c ತಸ್ಮಾತ್ಸರ್ವೇ ಜನಿಷ್ಯಂತಿ ಮಾನುಷೇಷು ನ ಸಂಶಯಃ।।

“ವಸುಗಳು ನನ್ನ ಸುಂದರ ಬಾಲವನ್ನುಳ್ಳ ಹಾಲನ್ನೀಯುವ ಹಸುವನ್ನು ಕದ್ದಿರುವುದರಿಂದ ಅವರೆಲ್ಲರೂ ನಿಸ್ಸಂಶಯವಾಗಿ ಮಾನುಷರಲ್ಲಿ ಜನಿಸುತ್ತಾರೆ!”

01093032a ಏವಂ ಶಶಾಪ ಭಗವಾನ್ವಸೂಂಸ್ತಾನ್ಮುನಿಸತ್ತಮಃ।
01093032c ವಶಂ ಕೋಪಸ್ಯ ಸಂಪ್ರಾಪ್ತ ಆಪವೋ ಭರತರ್ಷಭ।।

ಭರತರ್ಷಭ! ಈ ರೀತಿ ಮುನಿಸತ್ತಮ ಭಗವಾನ್ ಆಪವನು ಕೋಪವಶನಾಗಿ ವಸುಗಳನ್ನು ಶಪಿಸಿದನು.

01093033a ಶಪ್ತ್ವಾ ಚ ತಾನ್ಮಹಾಭಾಗಸ್ತಪಸ್ಯೇವ ಮನೋ ದಧೇ।
01093033c ಏವಂ ಸ ಶಪ್ತವಾನ್ರಾಜನ್ವಸೂನಷ್ಟೌ ತಪೋಧನಃ।
01093033e ಮಹಾಪ್ರಭಾವೋ ಬ್ರಹ್ಮರ್ಷಿರ್ದೇವಾನ್ರೋಷಸಮನ್ವಿತಃ।

ಅವರನ್ನು ಶಪಿಸಿ ಆ ಮಹಾಭಾಗನು ತಪಸ್ಸಿನಲ್ಲಿಯೇ ತನ್ನ ಮನವನ್ನಿತ್ತನು. ರಾಜನ್! ಈ ರೀತಿ ಆ ಎಂಟು ವಸುಗಳು ರೋಷಸಮನ್ವಿತ ತಪೋಧನ, ಮಹಾಪ್ರಭಾವೀ, ಬ್ರಹ್ಮರ್ಷಿ ದೇವನಿಂದ ಶಪಿಸಲ್ಪಟ್ಟರು.

01093034a ಅಥಾಶ್ರಮಪದಂ ಪ್ರಾಪ್ಯ ತಂ ಸ್ಮ ಭೂಯೋ ಮಹಾತ್ಮನಃ।
01093034c ಶಪ್ತಾಃ ಸ್ಮ ಇತಿ ಜಾನಂತ ಋಷಿಂ ತಮುಪಚಕ್ರಮುಃ।।

ಶಪಿಸಲ್ಪಟ್ಟಿದ್ದೇವೆ ಎಂದು ತಿಳಿದ ಆ ಮಹಾತ್ಮರು ಆಶ್ರಮಪದವನ್ನು ತಲುಪಿ ಋಷಿಯ ಬಳಿ ಬಂದರು.

01093035a ಪ್ರಸಾದಯಂತಸ್ತಂ ಋಷಿಂ ವಸವಃ ಪಾರ್ಥಿವರ್ಷಭ।
01093035c ನ ಲೇಭಿರೇ ಚ ತಸ್ಮಾತ್ತೇ ಪ್ರಸಾದಂ ಋಷಿಸತ್ತಮಾತ್।
01093035e ಆಪವಾತ್ಪುರುಷವ್ಯಾಘ್ರ ಸರ್ವಧರ್ಮವಿಶಾರದಾತ್।।

ಪಾರ್ಥಿವರ್ಷಭ! ಪುರುಷವ್ಯಾಘ್ರ! ವಸುಗಳು ಆ ಋಷಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಆದರೂ ಸರ್ವಧರ್ಮ ವಿಶಾರದ ಋಷಿಸತ್ತಮ ಆಪವನಿಂದ ಆಶೀರ್ವಾದವು ದೊರೆಯಲಿಲ್ಲ.

01093036a ಉವಾಚ ಚ ಸ ಧರ್ಮಾತ್ಮಾ ಸಪ್ತ ಯೂಯಂ ಧರಾದಯಃ।
01093036c ಅನು ಸಂವತ್ಸರಾಚ್ಶಾಪಮೋಕ್ಷಂ ವೈ ಸಮವಾಪ್ಸ್ಯಥ।।

ಧರ್ಮಾತ್ಮನು ಹೇಳಿದನು: “ನಿಮ್ಮಲ್ಲಿ ಧರ ಮೊದಲಾದ ಏಳು ಜನರು ಇಂದಿನಿಂದ ಒಂದು ವರ್ಷದೊಳಗೆ ಶಾಪದಿಂದ ವಿಮುಕ್ತರಾಗುತ್ತೀರಿ.

01093037a ಅಯಂ ತು ಯತ್ಕೃತೇ ಯೂಯಂ ಮಯಾ ಶಪ್ತಾಃ ಸ ವತ್ಸ್ಯತಿ।
01093037c ದ್ಯೌಸ್ತದಾ ಮಾನುಷೇ ಲೋಕೇ ದೀರ್ಘಕಾಲಂ ಸ್ವಕರ್ಮಣಾ।।

ಯಾರ ಕೆಲಸದಿಂದ ನೀವೆಲ್ಲರೂ ನನ್ನಿಂದ ಶಪಿಸಲ್ಪಟ್ಟಿದ್ದೀರೋ ಆ ದ್ಯೌ ಮಾತ್ರ ತನ್ನ ಕರ್ಮದಿಂದಾಗಿ ಮನುಷ್ಯ ಲೋಕದಲ್ಲಿ ದೀರ್ಘಕಾಲ ವಾಸಿಸುತ್ತಾನೆ.

01093038a ನಾನೃತಂ ತಚ್ಚಿಕೀರ್ಷಾಮಿ ಯುಷ್ಮಾನ್ಕ್ರುದ್ಧೋ ಯದಬ್ರುವಂ।
01093038c ನ ಪ್ರಜಾಸ್ಯತಿ ಚಾಪ್ಯೇಷ ಮಾನುಷೇಷು ಮಹಾಮನಾಃ।।

ನಿಮ್ಮ ಮೇಲಿನ ಕ್ರೋಧದಿಂದಾಗಲೀ ಅಥವಾ ಸುಳ್ಳನ್ನು ಹೇಳಲೋಸುಗ ಈ ಮಾತನ್ನು ಹೇಳುತ್ತಿಲ್ಲ. ಆ ಮಹಾತ್ಮನು ಮನುಷ್ಯ ಲೋಕದಲ್ಲಿ ಸಂತತಿಯನ್ನು ಪಡೆಯುವುದಿಲ್ಲ.

01093039a ಭವಿಷ್ಯತಿ ಚ ಧರ್ಮಾತ್ಮಾ ಸರ್ವಶಾಸ್ತ್ರವಿಶಾರದಃ।
01093039c ಪಿತುಃ ಪ್ರಿಯಹಿತೇ ಯುಕ್ತಃ ಸ್ತ್ರೀಭೋಗಾನ್ವರ್ಜಯಿಷ್ಯತಿ।
01093039e ಏವಮುಕ್ತ್ವಾ ವಸೂನ್ಸರ್ವಾನ್ ಜಗಾಮ ಭಗವಾನೃಷಿಃ।।

ಅವನೊಬ್ಬ ಧರ್ಮಾತ್ಮನೂ, ಸರ್ವಶಾಸ್ತ್ರವಿಶಾರದನೂ, ಪಿತನ ಪ್ರಿಯಕಾರ್ಯ ನಿರತನೂ, ಆಗಿ ಸ್ತ್ರೀಭೋಗವನ್ನು ವರ್ಜಿಸುತ್ತಾನೆ.” ಎಲ್ಲ ವಸುಗಳಿಗೂ ಈ ರೀತಿ ಹೇಳಿದ ಭಗವಾನ್ ಋಷಿಯು ತೆರಳಿದನು.

01093040a ತತೋ ಮಾಮುಪಜಗ್ಮುಸ್ತೇ ಸಮಸ್ತಾ ವಸವಸ್ತದಾ।
01093040c ಅಯಾಚಂತ ಚ ಮಾಂ ರಾಜನ್ವರಂ ಸ ಚ ಮಯಾ ಕೃತಃ।
01093040e ಜಾತಾಂ ಜಾತಾನ್ಪ್ರಕ್ಷಿಪಾಸ್ಮಾನ್ಸ್ವಯಂ ಗಂಗೇ ತ್ವಮಂಭಸಿ।।

ಆನಂತರ, ಸಮಸ್ತ ವಸುಗಳೂ ನನ್ನ ಬಳಿ ಬಂದಾಗ ನಾನು ಅವರಿಗೆ ಒಂದು ವರವನ್ನು ಇತ್ತೆ. ಆಗ ಅವರು “ಗಂಗೇ! ನಾವು ಹುಟ್ಟಿದಾಕ್ಷಣವೇ ಸ್ವಯಂ ನೀನು ನೀರಿನಲ್ಲಿ ಹಾಕಿಬಿಡು!” ಎಂದು ಯಾಚಿಸಿದರು.

01093041a ಏವಂ ತೇಷಾಮಹಂ ಸಮ್ಯಕ್ಶಪ್ತಾನಾಂ ರಾಜಸತ್ತಮ।
01093041c ಮೋಕ್ಷಾರ್ಥಂ ಮಾನುಷಾಲ್ಲೋಕಾದ್ಯಥಾವತ್ಕೃತವತ್ಯಹಂ।।

ರಾಜಸತ್ತಮ! ಶಪಿತ ಆ ದೇವತೆಗಳನ್ನು ಮನುಷ್ಯ ಲೋಕದಿಂದ ಮುಕ್ತಿ ನೀಡಲೋಸುಗವೇ ನಾನು ಇದನ್ನೆಲ್ಲ ಮಾಡಿದೆ.

01093042a ಅಯಂ ಶಾಪಾದೃಷೇಸ್ತಸ್ಯ ಏಕ ಏವ ನೃಪೋತ್ತಮ।
01093042c ದ್ಯೌ ರಾಜನ್ಮಾನುಷೇ ಲೋಕೇ ಚಿರಂ ವತ್ಸ್ಯತಿ ಭಾರತ।।

ಆದರೆ, ನೃಪೋತ್ತಮ! ರಾಜನ್! ಭಾರತ! ಈ ದ್ಯೌ ಒಬ್ಬನು ಮಾತ್ರ ಋಷಿಯ ಶಾಪದಂತೆ ಮನುಷ್ಯ ಲೋಕದಲ್ಲಿ ದೀರ್ಘಕಾಲ ವಾಸಿಸುತ್ತಾನೆ.”

01093043a ಏತದಾಖ್ಯಾಯ ಸಾ ದೇವೀ ತತ್ರೈವಾಂತರಧೀಯತ।
01093043c ಆದಾಯ ಚ ಕುಮಾರಂ ತಂ ಜಗಾಮಾಥ ಯಥೇಪ್ಸಿತಂ।।

ಈ ರೀತಿ ಕಥೆಯನ್ನು ಹೇಳಿದ ದೇವಿಯು ಅಲ್ಲಿಯೇ ಅಂತರ್ಧಾನಳಾದಳು. ಹೋಗುವಾಗ ಆ ಕುಮಾರನನ್ನೂ ಕರೆದುಕೊಂಡು ಹೋದಳು.

01093044a ಸ ತು ದೇವವ್ರತೋ ನಾಮ ಗಾಂಗೇಯ ಇತಿ ಚಾಭವತ್।
01093044c ದ್ವಿನಾಮಾ ಶಂತನೋಃ ಪುತ್ರಃ ಶಂತನೋರಧಿಕೋ ಗುಣೈಃ।।

ಗುಣಗಳಲ್ಲಿ ಶಂತನುವನ್ನೂ ಮೀರಿದ ಶಂತನು ಪುತ್ರನು ಎರಡು ಹೆಸರುಗಳಿಂದ ಕರೆಯಲ್ಪಟ್ಟನು: ದೇವವ್ರತ ಮತ್ತು ಗಾಂಗೇಯ.

01093045a ಶಂತನುಶ್ಚಾಪಿ ಶೋಕಾರ್ತೋ ಜಗಾಮ ಸ್ವಪುರಂ ತತಃ।
01093045c ತಸ್ಯಾಹಂ ಕೀರ್ತಯಿಷ್ಯಾಮಿ ಶಂತನೋರಮಿತಾನ್ಗುಣಾನ್।।
01093046a ಮಹಾಭಾಗ್ಯಂ ಚ ನೃಪತೇರ್ಭಾರತಸ್ಯ ಯಶಸ್ವಿನಃ।
01093046c ಯಸ್ಯೇತಿಹಾಸೋ ದ್ಯುತಿಮಾನ್ಮಹಾಭಾರತಮುಚ್ಯತೇ।।

ಶಂತನವು ಶೋಕಾರ್ತನಾಗಿ ತನ್ನ ಪುರಕ್ಕೆ ತೆರಳಿದನು. ಮಹಾಭಾಗ್ಯವಂತನೂ, ಯಶಸ್ವಿಯೂ, ಯಾವ ದ್ಯುತಿವಂತನ ಇತಿಹಾಸವನ್ನು ಮಹಾಭಾರತದಲ್ಲಿ ಹೇಳಲ್ಪಡುತ್ತಿದೆಯೋ ಆ ಭಾರತ ನೃಪ, ಶಂತನುವಿನ ಅಮಿತ ಗುಣಗಳನ್ನು ಸಂಕೀರ್ತಿಸುತ್ತೇನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಆಪವೋಪಾಖ್ಯಾನೇ ತ್ರಿನವತಿತಮೋಽಧ್ಯಾಯಃ।। ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಆಪವೋಪಾಖ್ಯಾನದಲ್ಲಿ ತೊಂಭತ್ತ್ಮೂರನೆಯ ಅಧ್ಯಾಯವು.